ಚೂರಿ ಚಿಕ್ಕಣ್ಣ ಬಂದನೆಂಬೊ ಬೆರಗು!

ಸಮಾಜದಲ್ಲಿ ಒಬ್ಬ ವ್ಯಕ್ತಿ ಅಪರಾಧಿಯಾಗಿದ್ದಾನೆಂದರೆ ಅದಕ್ಕೆ ಕಾರಣ ಅವನೊಬ್ಬನೇ ಅಲ್ಲ. ಅದರಲ್ಲಿ ಆ ಸಮಾಜದ ಪಾಲೂ ಇರುತ್ತದೆ. ಒಂದು ಅಪರಾಧಕ್ಕೆ ವ್ಯಕ್ತಿಯ ಭಾವಾವೇಶ, ಅವಿವೇಕಗಳು ಎಷ್ಟು ಕಾರಣವೋ, ಆ ಸಮಾಜದ ಕೆಲ ವ್ಯಕ್ತಿಗಳ ಸ್ವಾರ್ಥ, ಸಂಕುಚಿತ ಮನೋಭಾವಗಳೂ ಅಷ್ಟೇ ಕಾರಣವಾಗಿರುತ್ತವೆ

ಚೂರಿ ಚಿಕ್ಕಣ್ಣ ಬಂದನೆಂಬೊ ಬೆರಗು!

ನಾವು ಆವಾಗಿನ್ನು ಚಿಕ್ಕವರು. ಬಹುಶಃ ನಾಲ್ಕೋ ಐದನೇ ತರಗತಿಯಲ್ಲಿ ಓದುತಿದ್ದ ದಿನಗಳು. ಆಗ ಊರಲ್ಲಿ ಚಿಕ್ಕಣ್ಣನದೇ ಹವಾ. ಅವನು ಹಾಗೆ, ಅವನು ಹೀಗೆ ಅಂತೆಲ್ಲ ಏನೇನೋ ಭಯಾನಕ ಸುದ್ದಿಗಳು. ಅವನ ಕಥೆಗಳೂ ಹಾಗೇ ರೋಚಕವಾದವುಗಳೇ. ಇಷ್ಟರ ಮೇಲೆ ಅವನ ಹೆಸರಿನ ಮುಂದೆ 'ಚೂರಿ' ಅಂತ ಸೇರಿಸಿ ಮಾತಾಡುತಿದ್ದರಿಂದ ನಮಗೆಲ್ಲ ಆ ಹೆಸರು ಕೇಳುತ್ತಲೇ ಮೈ ನಡುಗುವಂತಾಗುತಿತ್ತು. ಆ ಕಾಲದಲ್ಲೆ ಜನಪ್ರಿಯವಾಗಿದ್ದ ಅಣ್ಣಾವ್ರ ಸಿನೆಮಾ ಚೂರಿ ಚಿಕ್ಕಣ್ಣಗೂ ನಮ್ಮ ಚಿಕ್ಕಣ್ಣನಿಗೂ ಏನೂ ಸಂಬಂಧ ಇರಲಿಲ್ಲ. ಆದರೂ, ಚೂರಿ ಚಿಕ್ಕಣ್ಣ ಎಂಬ ಹೆಸರು ಇವನಿಗೆ ಬರಲು ಊರಲ್ಲಿನ ಇವನ ಉಪದ್ವ್ಯಾಪ ಮತ್ತು ಒರಟುತನಗಳೇ ಕಾರಣವಾಗಿದ್ದವು‌. ಅಲ್ಲದೇ, ಇವನು ತನ್ನ ತಾರುಣ್ಯದ ಮದದಲ್ಲಿ ಮಾಡಿಕೊಂಡ ಯಡವಟ್ಟು ಕೊಲೆ ಪ್ರಯತ್ನದ ಪ್ರಕರಣವಾಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿಬಿಟ್ಟಿತು‌. ನ್ಯಾಯಾಲಯದಲ್ಲೀ ಅವನಿಗೆ ಆರು ತಿಂಗಳು ಕಾರಾಗೃಹವಾಸದ ಶಿಕ್ಷೆ ವಿಧಿಸಲ್ಪಟ್ಟಿತು. ಅನಿರೀಕ್ಷಿತವೆನ್ನುವಂತಿದ್ದ ಈ ಎಲ್ಲ ಘಟನಾವಳಿಗಳ ಹಿಂದೆಯೆ ಚಿಕ್ಕಣ್ಣ ಬಳ್ಳಾರಿ ಜೈಲು ಸೇರಿಬಿಟ್ಟಿದ್ದ. ಒಂದೆರಡು ವರ್ಷಗಳ ನಂತರ ಚಿಕ್ಕಣ್ಣ ಊರಿಗೆ ಮರಳಿದರೂ ಮೊದಲಿನ ಬದುಕು ಮತ್ತು ಆಗವನು ಕಂಡಿದ್ದ ಕನಸುಗಳೆಲ್ಲ ನುಚ್ಚುನೂರಾಗಿ, ಅವನ ಬಗ್ಗೆ ಊರಲ್ಲಿ ಬೇರೆಯದೆ ಆದ ಇಮೇಜ್ ಒಂದು ಮೂಡಿಬಿಟ್ಟಿತ್ತು. ನಾವು ಹುಡುಗರು ಕೂಡ ಅವನನ್ನು ಅದೇ ಇಮೇಜಿನಲ್ಲಿ ನೋಡುತ್ತಿದ್ದೆವು. ನಮ್ಮ ಅನುಮಾನದ ಕಣ್ಣಲ್ಲಿ ಚಿಕ್ಕಣ್ಣ ನಿರ್ಭಿತನೂ, ನಿರಂಕುಶನೂ, ಭಯಂಕರನೂ ಆಗಿಬಿಟ್ಟಿದ್ದ.

ಹೀಗಿರುತ್ತಲಾಗಿ ಅಪ್ಪ ಒಂದು ದಿನ ಇಂಥ ಚಿಕ್ಕಣ್ಣನನ್ನು ಮನೆಗೇ ಕರೆದುಕೊಂಡು ಬಂದ. ಮತ್ತು `ಇನ್ನು ಮುಂದೆ ಚಿಕ್ಕ, ನಮ್ಮನೆಯಲ್ಲೇ ಇರ್ತಾನೆ' ಎಂದು ಬಿಟ್ಟ. ಇದು ನನಗಷ್ಟೇ ಅಲ್ಲ, ನೆರೆಹೊರೆಯವರಿಗೂ ಊರಿನ ಜನರಿಗೂ ನಂಬಲಸಾಧ್ಯ ಸಂಗತಿಯಾಗಿತ್ತು. ಎಲ್ಲರೂ ಚಿಕ್ಕಣ್ಣನ ಪೂರ್ವಾಶ್ರಮದ ಸಂಗತಿಗಳನ್ನು ನೆನೆದು, ಘಟನೆಗಳನ್ನು ಮೆಲುಕು ಹಾಕಿ `ಅಂಥವನು ಎಂದಾದರೂ ಸುಧಾರಿಸಲು ಸಾಧ್ಯವೇ? ನಿನಗೆ ಬುದ್ಧಿ ಇಲ್ಲ. ನಾಳೆ ಏನಕೇನರ ಆದ್ರ ಅದಕ ಹೊಣೆ ಯಾರು?' ಎಂದೆಲ್ಲ ಅಪ್ಪನನ್ನು ಪ್ರಶ್ನಿಸುವರೆ. ಅಪ್ಪ ಚಿಕ್ಕಣ್ಣನಂಥವನನ್ನು ಕರೆದುಕೊಂಡು ಬಂದು ಘನಘೋರ ತಪ್ಪು ಮಾಡಿದ್ದು, ಅದಕ್ಕೆ ತಕ್ಕ ಪಶ್ಚತ್ತಾಪ ಕಟ್ಟಿಟ್ಟ ಬುತ್ತಿ ಎಂಬುದೇ ಅವರ ಮಾತಿನ ತಾತ್ಪರ್ಯ‌ವಾಗಿತ್ತು. ಇಂಥ ಮಾತುಗಳಿಂದ ನಾನು, ಕಾಕ ಹಾಗೂ ನಮ್ಮ ಹಿತೈಷಿಗಳೆಲ್ಲ ಆತಂಕಕ್ಕೆ ಒಳಗಾಗಿದ್ದೆವು. ಅವನ ಸಂಬಂಧಿಕರೇ ಮೊದಲಾಗಿ, ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಅನ್ನೋತರ ಇವನನ್ನು ಕಾಣುತಿದ್ದರು.

ಆದರೆ, ಅಪ್ಪ ಮಾತ್ರ ಚಿಕ್ಕಣ್ಣನ ವಿಷಯದಲ್ಲಿ ನಿಶ್ಚಲಮನಸ್ಕನಾಗಿದ್ದ. ಅವನಲ್ಲಿ ಯಾವ ಅನುಮಾನ, ಭಯಗಳೂ ಇರಲಿಲ್ಲ. ಇಡೀ ಸಮಾಜವೇ ಶಂಕಿತ ದೃಷ್ಟಿಯಿಂದ ನೋಡುತಿದ್ದ ಅಪರಾಧ ಹಿನ್ನೆಲೆಯ ಒಬ್ಬ ವ್ಯಕ್ತಿಯನ್ನು ಅಪ್ಪ ಭರವಸೆಯಿಂದ, ವಾತ್ಸಲ್ಯಭಾವದಿಂದ ಆದರಿಸಿದ್ದನ್ನು ಕಂಡು ನಾನು ಮೂಕವಿಸ್ಮಿತನಾಗಿದ್ದೆ! 

ಚಿಕ್ಕಣ್ಣ ನಮ್ಮ ಮನೆಗೆ ಬಂದು ಕಮ್ತಕ್ಕೆ ನಿಂತ. ಆರೇಳು ತಿಂಗಳುಗಳ ಕಾಲ ಜನ ಅವನೊಂದಿಗೆ ಮಾತನಾಡಲಿಕ್ಕೇ ಹೆದರುತಿದ್ದ‌ರು. ಇವನು ಕಂಡರೆ `ಚೂರಿ ಚಿಕ್ಕ ಬಂದ' ಅಂತ ಅಲ್ಲಿಂದ ಕಾಲಿಗೆ ಬುದ್ಧಿ ಹೇಳುತಿದ್ದರು. ಅವನನ್ನು ತಡವಿದರೆ ನಮಗೆ ಏನಾದರೂ ಮಾಡಿಯಾನು ಎಂಬ ಭಯ ಎಲ್ಲರಲ್ಲೂ ಮನೆ ಮಾಡಿತ್ತು. ಹೀಗಾಗಿ ಅವನ ಸಹವಾಸವೇ ಬೇಡ ಎಂದು ಯಾರೂ ಅವನ ತಂಟೆಗೆ ಹೋಗುತ್ತಿರಲಿಲ್ಲ. ಚಿಕ್ಕಣ್ಣನ ಕುರಿತು ಏನೆಲ್ಲ ಕೇಳಿದ್ದ ನನ್ನಲ್ಲೂ ಅವನ ಬಗ್ಗೆ ಇದೇ ಅಭಿಪ್ರಾಯ ಮೂಡಿ , ಬೆಳೆದು ನಿಂತಿತ್ತು!

ಚಿಕ್ಕಣ್ಣನ ನಿಜಸ್ವರೂಪ ಅರಿಯಲು ನನಗು ಅನೇಕ ದಿನಗಳೆ ಬೇಕಾದವು. ಹತ್ತಿರದಿಂದ ಅವನೊಂದಿಗೆ ಒಡನಾಡಿದಂತೆ ಅವನ ಕುರಿತಂತೆ ಬೆಳೆದಿದ್ದ ಇಮೇಜು ಸುಳ್ಳಾಗಿ ಬೇರೆಯದೆ ಒಂದು ಇಮೇಜು ರೂಪಗೊಳ್ಳತೊಡಗಿತು. ಸಮಾಜದಲ್ಲಿ ಒಬ್ಬ ವ್ಯಕ್ತಿ ಅಪರಾಧಿಯಾಗಿದ್ದಾನೆಂದರೆ ಅದಕ್ಕೆ ಕಾರಣ ಅವನೊಬ್ಬನೇ ಅಲ್ಲ. ಅದರಲ್ಲಿ ಆ ಸಮಾಜದ ಪಾಲೂ ಇರುತ್ತದೆ. ಒಂದು ಅಪರಾಧಕ್ಕೆ ವ್ಯಕ್ತಿಯ ಭಾವಾವೇಶ, ಅವಿವೇಕಗಳು ಎಷ್ಟು ಕಾರಣವೋ, ಆ ಸಮಾಜದ ಕೆಲ ವ್ಯಕ್ತಿಗಳ ಸ್ವಾರ್ಥ, ಸಂಕುಚಿತ ಮನೋಭಾವಗಳೂ ಅಷ್ಟೇ ಕಾರಣವಾಗಿರುತ್ತವೆ ಎಂಬುದು ಚಿಕ್ಕಣ್ಣನ ವಿಷಯದಲ್ಲಿ ನಿಜವಾಗಿತ್ತು. 

ನಮ್ಮ ಮನೆಯಲ್ಲಿ ಹೈನು ಇಲ್ಲದ ಸಂದರ್ಭದಲ್ಲಿ ನಾವು ಚಿಕ್ಕಣ್ಣ ರ ಮನೆಯಿಂದಲೆ ಹಾಲು ಮೊಸರು ತರುತಿದ್ದೆವು. ಹಾಲು ತರಲೆಂದು ಬೆಳ್ಳಂಬೆಳಿಗ್ಗೆ ನನ್ನನ್ನೆ ಅವರ ಮನೆಗೆ ಓಡಿಸುತಿದ್ದರು. ಏಳು, ಏಳುವರೆಗೆ ಅವರ ಮನೆಗೆ ಹೋದರೆ ಚಿಕ್ಕಣ್ಣ ಆಗಲೇ ಹೊರೆ ಹುಲ್ಲು ತಂದು ಎಮ್ಮೆಗಳಿಗೆ ಹಾಕಿರುತಿದ್ದ. ಹುಲ್ಲು ಮೇಯ್ದ ಮೇಲೆಯೆ ಹಾಲು ಹಿಂಡುತಿದ್ದರು. ಚಿಕ್ಕಣ್ಣನ ಈ ಕೆಲಸ ಒಂದು ದಿನವೂ ವ್ಯಾಳೇ ತಪ್ಪುತ್ತಿರಲಿಲ್ಲ. ಇವತ್ತಿನ್ನೂ ಹಾಲು ಕರೆದಿಲ್ಲ ಎಂಬ ಮಾತೇ ಇರುತ್ತಿರಲಿಲ್ಲ. ನಾನು ಹೋಗುವ ಹೊತ್ತಿಗೆ ಆಗಲೇ ನಾಗಮ್ಮ ಅಂದರೆ ಚಿಕ್ಕಣ್ಣನ ಅವ್ವ ಹಾಲು ಕರೆದಿರುತಿದ್ದಳು. ನಾನು ಹೋಗುತ್ತಲೇ `ಹ್ಞಾಂ ಅದ ನಂ ಯಜಮಾನ ಬಂದ ಬಿಟ್ಟ' ಎಂದು ಸಲಿಗೆಯ ಮಾತನಾಡುತಿದ್ದಳು. ಆಗಲೇ ತಿಂಡಿಯೂ ಸಿದ್ಧವಾಗಿದ್ದರೆ, ನಾನು ತಿಂಡಿ ತಿಂದು, ಚಹಾ ಕುಡಿದ ನಂತರವೇ ಹಾಲು ಸಿಗುತಿದ್ದವು. ಚಿಕ್ಕಣ್ಣನಿಗೆ ಆರು ಜನ ಸೋದರರು, ಓರ್ವ ಸೋದರಿ ಇದ್ದರು. ಚಕಾ ಚಕ್, ಫಟಾಫಟ್ ಅಂತ ಕೆಲಸ ಮಾಡುತಿದ್ದ ಚಿಕ್ಕಣ್ಣನನ್ನು ಕಂಡರೆ ಉಳಿದೆಲ್ಲರೂ ಭಯಪಡುತಿದ್ದರು ಏಕೆಂದರೆ, ಮಹಾ ಕೆಲಸಗಾರನೂ ಹಠಮಾರಿಯೂ ಆಗಿದ್ದ ಚಿಕ್ಕಣ್ಣ ಅಷ್ಟೆ ಶಕ್ತಿಶಾಲಿಯೂ ಆಗಿದ್ದ. ಕೋಪಿಷ್ಟನೂ ಆಗಿದ್ದ. ಸಿಟ್ಟು ಬಂದರೆ ಇವನು ಏನು ಮಾಡಲೂ ಹೇಸುವವನಲ್ಲ ಎಂಬುದೇ ಅವರ ಭಯಕ್ಕೆ ಕಾರಣವಾಗಿತ್ತು.

ಕ್ರಿಯಾಶೀಲ, ಕಾರ್ಯದಕ್ಷ ಆಗಿದ್ದ ಇಂಥ ಚಿಕ್ಕಣ್ಣ ಜೈಲಿಗೆ ಹೋಗಿದ್ದು, ಅವನ ಬಗ್ಗೆ ಊರಲ್ಲಿ ಊಹಾಪೋಹಗಳೆ ಹರಿದಾಡಿ ಅವನ ವೈಯಕ್ತಿಕ ಹಾಗೂ ಸಾಮಾಜಿಕ ಬದುಕನ್ನೇ ಪಲ್ಲಟಗೊಳಿಸಿದ್ದೊಂದು ವಿಚಿತ್ರ ಕಥೆ! ಹೇಗೆಲ್ಲ ಇದ್ದ ಚಿಕ್ಕಣ್ಣ ನಾಲ್ಕೈದು ವರ್ಷಗಳಲ್ಲಿ ಏನೆಲ್ಲ ಅನುಭವಿಸಿಬಿಟ್ಟ....ಇದು ಅವನ ಬದುಕಿನ ದಾರಿಯನ್ನೇ ಬದಲಿಸಿಬಿಟ್ಟಿತ್ತು. ಈ ಎಲ್ಲದರ ಮಧ್ಯೆಯೂ ಬದುಕು ಬಂದಂತೆಯೆ ಬದುಕಿದ, ಬದುಕುತ್ತಿರುವ ಚಿಕ್ಕಣ್ಣ ಈಗಲೂ ಜಗಜಟ್ಟಿಯೆ ಸೈ.