ಹೌಡಿ  ಅಂದರೆ ಅಷ್ಟೇ ಸಾಕೇ?  

ಇದು ಕೇವಲ ಟ್ರಂಪ್-ಮೋದಿ ಮಿಲನ ಅಲ್ಲ. ಅಥವಾ ಅಮೆರಿಕದಲ್ಲಿನ ಅನಿವಾಸಿ ಭಾರತೀಯರ ಔತಣ ಕೂಟವೂ ಅಲ್ಲ. ಇಲ್ಲಿ ಬಂಡವಾಳ-ಭರವಸೆ ಮತ್ತು ನವ ಉದಾರವಾದದ ಉಳಿವು ಮುಖ್ಯವಾಗಿದೆ

ಹೌಡಿ  ಅಂದರೆ ಅಷ್ಟೇ ಸಾಕೇ?  

ಹೌಡಿ ಮೋದಿ ಕಾರ್ಯಕ್ರಮ ಭಾರತದ, ಅದರಲ್ಲೂ ಕನ್ನಡದ,  ವಿದ್ಯುನ್ಮಾನ ಮಾಧ್ಯಮಗಳಿಗೆ ಭೂರಿ ಭೋಜನ ನೀಡಿದೆ. ಕೆಲ ಹೊತ್ತಾದರೂ ಕನಕಪುರದ ಬಂಡೆ, ತಿಹಾರದ ಕಂಬಿ, ಜೈಲಾ ಬೇಲಾ ಸುದ್ದಿಯಿಂದ ನಿರೂಪಕರಿಗೂ ಮುಕ್ತಿ ಸಿಕ್ಕಿದ್ದು ಸಂತೋಷ. ಪಾಪ ಡಿಕೆಶಿ ತಿಹಾರ ಜೈಲಿನಲ್ಲಾದರೂ ನೆಮ್ಮದಿಯಾಗಿ ಉಸಿರಾಡುತ್ತಿದ್ದಿರಬಹುದು ಆದರೆ ಮಾಧ್ಯಮಗಳು ಮಾತ್ರ ಅವರ ಕತ್ತು ಹಿಸುಕಿಬಿಟ್ಟಿವೆ. ಇರಲಿ, ಹೌಡಿ ಮೋದಿ ಇನ್ನೂ ಹೆಚ್ಚು ಕೌತುಕ ಮೂಡಿಸಿದ ಪ್ರಹಸನ. ನೆಲಕ್ಕೆ ಬಿದ್ದ ಹೂವನ್ನು ತಾವೇ ಬಗ್ಗಿ ತೆಗೆದ ಸ್ವಚ್ಚ ಭಾರತದ ಹರಿಕಾರ ಪ್ರಧಾನಿಯನ್ನು ಕುರಿತ ವಿಶ್ಲೇಷಣೆ ಬಹುಶಃ ಮುಂದಿನ ಆಸ್ಕರ್ ಗೆ ಅರ್ಹತೆ ಪಡೆಯಬಹುದೇನೋ. ಹೌಡಿ ಏಕೆ ಇಷ್ಟು ಕುತೂಹಲ ಸೃಷ್ಟಿಸಿದೆ ? ಇದು ಕೇವಲ ಟ್ರಂಪ್-ಮೋದಿ ಮಿಲನ ಅಲ್ಲ. ಅಥವಾ ಅಮೆರಿಕದಲ್ಲಿನ ಅನಿವಾಸಿ ಭಾರತೀಯರ ಔತಣ ಕೂಟವೂ ಅಲ್ಲ. ಇಲ್ಲಿ ಬಂಡವಾಳ-ಭರವಸೆ ಮತ್ತು ನವ ಉದಾರವಾದದ ಉಳಿವು ಮುಖ್ಯವಾಗಿದೆ.

ಭಾರತದ ಆರ್ಥಿಕತೆ ಕುಸಿಯುತ್ತಲೇ ಇದೆ. ಖಾಸಗಿ ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿದೆ. ಸಾರ್ವಜನಿಕ ಬಂಡವಾಳ ಹೂಡಿಕೆ ಶೂನ್ಯ ಮಟ್ಟ ತಲುಪಿ ಎಷ್ಟೋ ವರ್ಷಗಳಾಗಿವೆ. ಜಾಗತಿಕ ಬಂಡವಾಳ ಹೂಡಿಕೆದಾರರಿಗೆ ಭಾರತದಲ್ಲಿ ಬಂಡವಾಳ ಹೂಡಲು ಹಿಂಜರಿಕೆ ಇದೆ. ಏಕೆಂದರೆ ಇಲ್ಲಿ ಬೇಡಿಕೆ ಹೆಚ್ಚಾಗುತ್ತಿಲ್ಲ. ಜನಸಾಮಾನ್ಯರ ಜೇಬುಗಳಲ್ಲಿ ಕಾಸು ಇಲ್ಲವಾಗಿದೆ. ಅತಿ ಹೆಚ್ಚಿನ ನಿರುದ್ಯೋಗ, ಮುಚ್ಚುತ್ತಿರುವ ಉದ್ಯಮಗಳು, ಬ್ಯಾಂಕಿಂಗ್ ಕ್ಷೇತ್ರದ ಹಿನ್ನಡೆ ಇವೆಲ್ಲವೂ ಬಂಡವಾಳ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತವೆ. ದೇಶದ ಆರ್ಥಿಕತೆ ತೀವ್ರ ಬಿಕ್ಕಟ್ಟು ಎದುರಿಸಿದಾಗ ಬಳಸುವ ಸಲುವಾಗಿಯೇ ಇಡುಗಂಟಿನಂತೆ ನಿರ್ವಹಿಸಲಾಗುವ ರಿಸರ್ವ್ ಬ್ಯಾಂಕಿನ ದೊಡ್ಡ ಮೊತ್ತದ ಇಡುಗಂಟನ್ನು ಸರ್ಕಾರ ಈಗಾಗಲೇ ಕಬಳಿಸಿ ಆಗಿದೆ. ಈಗೇನಾದರೂ 1991ರಲ್ಲಿ ಆದಂತೆ ಹೆಚ್ಚು ಕಡಿಮೆ ಆದರೆ ಭಾರತದ ಗತಿ ಗೋವಿಂದ. ಎಲ್ಲಿಂದಲೂ ಹಣ ಹೊಂದಿಸಲಾಗುವುದಿಲ್ಲ.

ಇರಲಿ, ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಾರ್ಪೋರೇಟ್ ತೆರಿಗೆಯನ್ನು ಕಡಿಮೆ ಮಾಡಿದ್ದಾರೆ. ಕಾರ್ಪೋರೇಟ್ ಉದ್ದಿಮೆಗಳು ತಮ್ಮ ಲಾಭಾಂಶದ ಮೇಲೆ ಗಳಿಸುವ ಆದಾಯದ ಮೇಲೆ ಶೇ 35ರಷ್ಟು ತೆರಿಗೆ ಪಾವತಿಸುತ್ತಿದ್ದರು , ಇನ್ನು ಮುಂದೆ ಶೇ 25ರಷ್ಟು ತೆರಿಗೆ ಪಾವತಿಸುತ್ತಾರೆ. 2019ರ ನಂತರ ಸ್ಥಾಪಿಸಲಾಗುವ ಹೊಸ ಉದ್ದಿಮೆಗಳು ಸಲ್ಲಿಸುತ್ತಿದ್ದ ತೆರಿಗೆ ದರ ಶೇ 18 ರಿಂದ ಶೇ 15ಕ್ಕೆ ಇಳಿದಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಭಾರತ ಸರ್ಕಾರ ಕಾರ್ಪೋರೇಟ್ ವಲಯದಿಂದ ಪಡೆಯುತ್ತಿದ್ದ ತೆರಿಗೆ ಅಥವಾ ಆಯ ಕರದ ಅರ್ಧಕ್ಕೂ ಹೆಚ್ಚು ಮೊತ್ತವನ್ನು ಕೇವಲ 300 ಬೃಹತ್ ಉದ್ದಿಮೆಗಳು ಪಾವತಿಸುತ್ತಿವೆ. ಈ 300 ಬೃಹತ್ ಉದ್ದಿಮೆಗಳು ಈಗ ಪಾವತಿಸುತ್ತಿದ್ದುದು ಶೇ 26ರಷ್ಟು ತೆರಿಗೆ. ಈಗ ಅವರಿಗೆ ಶೇ 1ರಷ್ಟು ರಿಯಾಯಿತಿ ದೊರೆತಿದೆ. ಅಂದರೆ ಸರ್ಕಾರದ ಇತ್ತೀಚಿನ ಸುಧಾರಣಾ ಕ್ರಮ ತೋರಿಕೆಗಾಗಿ ಮಾಡಿದ ಪ್ರಯತ್ನ ಎನ್ನುವುದು ಸ್ಪಷ್ಟ.

ಏಕೆ ಈ ತೋರಿಕೆ ? ಏಕೆಂದರೆ ಭಾರತದಂತಹ ಬೃಹತ್ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿ, ಹಣಕಾಸು ಬಂಡವಾಳದ ಹರಿವು ಕುಸಿದರೆ ಅಮೆರಿಕದಂತಹ ದೇಶಕ್ಕೆ ಹಿನ್ನಡೆ ಉಂಟಾಗುತ್ತದೆ. ಅಲ್ಲಿನ ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ವಿಮೆ, ಚಿಕಿತ್ಸೆ ಇವೆಲ್ಲಾ ಸೌಲಭ್ಯಗಳನ್ನು ನೀಡಲು ಟ್ರಂಪ್ ಮತ್ತು ಸೋದರರಿಗೆ ಭಾರತದಂತಹ ಮಾರುಕಟ್ಟೆಯಿಂದ ಲಾಭಾಂಶ ಹರಿದುಬರಬೇಕು. ಈ ಪವಿತ್ರ ಗಂಗಾ ಇಲ್ಲವಾದರೆ ಅಲ್ಲಿನ ಸರ್ಕಾರಗಳು ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಈಗಾಗಲೇ ಟ್ರಂಪ್  ಜನರ ಆಕ್ರೋಶಕ್ಕೆ ಬಲಿಯಾಗುತ್ತಿದ್ದಾರೆ. ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಪ್ರಚಾರಕರನ್ನು ಅರಸುತ್ತಿದ್ದ ಟ್ರಂಪ್ ಗೆ ಕಂಡಿದ್ದು ಭಾರತ ಮತ್ತು ಭಾರತದ ಮಾರುಕಟ್ಟೆ. ಇಂತಹ ಟ್ರಂಪ್ ತಮ್ಮ ಕಾರ್ಯಸಾಧನೆಗೆ ಬಳಸಿಕೊಂಡಿದ್ದು ಅನಿವಾಸಿ ಭಾರತೀಯರು. ತಮ್ಮ ವಿರುದ್ಧ ದನಿ ಎತ್ತುತ್ತಿದ್ದ ಅನಿವಾಸಿ ಭಾರತೀಯರನ್ನು ಬರಸೆಳೆದು ಅಪ್ಪಿಕೊಳ್ಳಲು ಟ್ರಂಪ್ ಭಾರತದ ಪ್ರಧಾನಿಯ ಭೇಟಿಯನ್ನು ಬಳಸಿಕೊಂಡಿದ್ದು ಮುಂಬರುವ ಅಧ್ಯಕ್ಷೀಯ ಚುನಾವಣೆಗಳಲ್ಲಿ “ಭಾರತೀಯರ ” ಮತ ಗಳಿಸುವುದರಲ್ಲಿ ಯಶಸ್ವಿಯಾಗುತ್ತಾರೆ.

ಇದಕ್ಕೆ ಪ್ರತಿಯಾಗಿ ಟ್ರಂಪ್ ಈಗಾಗಲೇ ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧರಾಗಿರುವುದಾಗಿ ಘೋಷಿಸಿದ್ದಾರೆ. “ ವಿಶ್ವ ಶಾಂತಿ”ಗಾಗಿ ಅಮೆರಿಕ ಕಳೆದ ನೂರು ವರ್ಷಗಳಲ್ಲಿ ಎಷ್ಟೆಲ್ಲಾ ಶ್ರಮ ವಹಿಸಿದೆ ಎಂದು ಹೇಳಬೇಕಿಲ್ಲ, ಪೆಂಟಗನ್ ಇತಿಹಾಸವೇ ಎಲ್ಲವನ್ನೂ ಹೇಳುತ್ತದೆ. ಈಗ ಭರತಖಂಡವನ್ನು ಪ್ರವೇಶಿಸುತ್ತಿದೆ. ನೋಡೋಣ. ಇನ್ನು ಅನಿವಾಸಿ ಭಾರತೀಯರು. ಇವರಿಗೆ ಅಮೆರಿಕದ ಎಲ್ಲ ಸವಲತ್ತುಗಳೂ ಬೇಕು. ಡಾಲರ್ ಪ್ರೇಮ, ಐಷಾರಾಮಿ ಭೋಗ ಜೀವನ ಪ್ರೇಮ ಅಲ್ಲಿನ ಸಂಪಾದನೆಯನ್ನು ಡಾಲರ್ ರೂಪದಲ್ಲೇ ಭಾರತದ ಬ್ಯಾಂಕುಗಳಲ್ಲಿ ಠೇವಣಿ ಹೂಡಿ ಹೆಚ್ಚಿನ ಬಡ್ಡಿ ಗಳಿಸುವಷ್ಟು ಪ್ರೀತಿ. ಇಲ್ಲಿ ಬ್ಯಾಂಕುಗಳಿಗೆ ನೆಗಡಿ ಕೆಮ್ಮು ಬಂದರೆ ಎಲ್ಲ ಅನಿವಾಸಿ ಠೇವಣಿಗಳೂ ನಿಮಿಷಾರ್ಧದಲ್ಲಿ ಖಾಲಿಯಾಗಿರುತ್ತದೆ. ಬ್ಯಾಂಕುಗಳಲ್ಲಿ ದಿನನಿತ್ಯ ಗಮನಿಸುವ ಪ್ರಮುಖ ಅಂಶಗಳಲ್ಲಿ ಅನಿವಾಸಿ ಠೇವಣಿಗಳೂ ಒಂದು. ಈ ದೇಸೀ ವಿದೇಶೀಯರು ಹೌಡಿ ಮೋದಿಯಿಂದ ಪುಳಕಿತರಾಗಿದ್ದಾರೆ. 2 ಲಕ್ಷ ಕೋಟಿ ರೂ ದೇಣಿಗೆ ಸಂಗ್ರಹಿಸಿ ಒಂದು ಅದ್ಭುತ ಮನರಂಜನಾ ಕಾರ್ಯಕ್ರಮ ಏರ್ಪಡಿಸಿ ಪುನೀತರಾಗಿದ್ದಾರೆ. ಇತ್ತ ಭಾರತದ ರಿಸರ್ವ್ ಬ್ಯಾಂಕ್ ನಲ್ಲಿ ತುರ್ತು ಸ್ಥಿತಿಗಾಗಿ ಮೀಸಲಾಗಿಡಬೇಕಿದ್ದ 1 ಲಕ್ಷ 76 ಸಾವಿರ ಕೋಟಿ ರೂಗಳನ್ನು ಹರಿದು ಹಂಚಲಾಗಿದೆ. ಸುಮ್ಮನೆ ತಾಳೆ ಮಾಡಿದರೆ ಸಾಕು ಅರ್ಥಶಾಸ್ತ್ರದ ಮಹಾ ಪಾಂಡಿತ್ಯವೇನೂ ಬೇಕಿಲ್ಲ.

ನಿಜ, ಕಾರ್ಪೋರೇಟ್ ತೆರಿಗೆ ಇಳಿಕೆಯಿಂದ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಮುಂದುವರೆದಿದೆ. ಷೇರು ಮಾರುಕಟ್ಟೆಯ ಏರಿಳಿತಕ್ಕೆ ಬಂಡವಾಳದ ಒಳಹರಿವು ಮತ್ತು ಹೊರ ಹರಿವು ಕಾರಣವಾಗಿರುತ್ತದೆ. ದೇಶದ ಜನಸಾಮಾನ್ಯರ ನಿತ್ಯ ಜೀವನವನ್ನು ಕಾಡುವ ಬಡತನ, ಅನಾರೋಗ್ಯ, ಅಪೌಷ್ಟಿಕತೆ, ನಿರುದ್ಯೋಗ, ಬೆಲೆ ಏರಿಕೆ ಇವೆಲ್ಲವೂ ಅಲ್ಲಿ ನಗಣ್ಯ. ಇದು ಚಂದ್ರನನ್ನು ತೋರಿಸಿ ಮಗುವಿಗೆ ಊಟ ಮಾಡಿಸಿದಂತೆ. ಪಾಪ ತನಗೆ ಎಂದೂ ಎಟುಕದ ಚಂದ್ರನನ್ನು ನೋಡುತ್ತಲೇ ಮಗು ತಿನ್ನಿಸಿದ್ದೆಲ್ಲವನ್ನೂ ತಿನ್ನುವಂತೆ, ಷೇರು ಮಾರುಕಟ್ಟೆಯ ಮೇರು ಶಿಖರವನ್ನು ತೋರಿಸುತ್ತಲೇ ಆಳುವವರು ಜನಸಾಮಾನ್ಯರಿಗೆ ಸಮಸ್ಯೆಗಳ ಭೂರಿ ಭೋಜನವನ್ನೇ ಉಣ್ಣಿಸುತ್ತಾರೆ.  ಹೌಡಿ ಮೋದಿ ಕಾರ್ಯಕ್ರಮ ಈ ನಿಟ್ಟಿನಲ್ಲಿ ಒಂದು ಪ್ರಯತ್ನ. “ ಇಲ್ಲಿ ನಿರುದ್ಯೋಗ ಏರುತ್ತಿದ್ದರೆ ನಿಮಗೇನು ಕಷ್ಟ, ಚಿನ್ನದ ಬೆಲೆ ಏರಿದರೆ ಏಕೆ ತಲೆಬೇನೆ, ಈರುಳ್ಳಿ ಕಿಲೋಗೆ 60 ರೂ ಆದರೆ ಏಕೆ ಉದರಶೂಲೆ, ಅಲ್ಲಿ ನೋಡಿ ಜಗತ್ತೇ ವಿಸ್ಮಯಕ್ಕೊಳಗಾಗುವಂತೆ ನಮ್ಮ ನಾಯಕರನ್ನು ವಿಶ್ವದ ಜನತೆ ಕೊಂಡಾಡುತ್ತಿದ್ದಾರೆ ” ಎಂದು ಮನರಂಜನೆ ನೀಡುವ ಪ್ರಯತ್ನವಷ್ಟೇ.

ಈಗ ಭಾರತದ ಮಾರುಕಟ್ಟೆಯಲ್ಲಿ ಜಾಗತಿಕ ಬಂಡವಾಳದ ಮಹಾಪೂರ ಹರಿಯುತ್ತದೆ. ಅನಿವಾಸಿ ಭಾರತೀಯ ಉದ್ಯಮಿಗಳೂ ಭಕ್ತಿಯಿಂದ ಇಲ್ಲಿ ಬಂಡವಾಳ ಹೂಡಿ, ಹೆಚ್ಚಿನ ಲಾಭ ಗಳಿಸಿ, ಕಡಿಮೆ ತೆರಿಗೆ ಪಾವತಿಸಿ ತಮ್ಮ ಲಾಭಾಂಶವನ್ನು ಏನ್ಮಾಡ್ತಾರೆ ? ಇಲ್ಲೇನೂ ಪ್ರಾಥಮಿಕ ಶಾಲೆ, ಆರೋಗ್ಯ ಕೇಂದ್ರ ತೆರೆಯುವುದಿಲ್ಲ. ಬೇರೆ ದೇಶಗಳಲ್ಲಿ ಬಂಡವಾಳ ಹೂಡಲು ಕೊಂಡೊಯ್ಯುತ್ತಾರೆ. ಇದನ್ನು ಅರ್ಥಶಾಸ್ತ್ರದ ಪರಿಭಾಷೆಯಲ್ಲಿ  “ ಬಂಡವಾಳದ ಹಾರಿಕೆ ” (Flight of Capital) ಎನ್ನಲಾಗುತ್ತದೆ. ಇಲ್ಲಿ ಕೂಳು ತಿನ್ನುವ ಮಗು ಮೋಡದ ಮರೆಯಲ್ಲಿ ಕಾಣದಂತಾದರೂ ಚಂದ್ರ ಕಾಣಿಸುತ್ತಿದ್ದಾನೆ ಎಂದೇ ಭಾವಿಸಿ ಕೇಕೆ ಹಾಕುತ್ತಾ ತಿನ್ನಿಸಿದ್ದೆಲ್ಲವನ್ನೂ ನುಂಗುತ್ತಾ ಇರುತ್ತದೆ. ಇದು ನವ ಉದಾರವಾದದ ಮೂಲ ಲಕ್ಷಣ. ಯಾವ ಪಕ್ಷ ಇದ್ದರೂ ಇಷ್ಟೇ. ಅದಕ್ಕೇ ರಾಹುಲ್, ಸೋನಿಯಾ, ಮೋದಿಯವರನ್ನು ವ್ಯಕ್ತಿಗತವಾಗಿ ಟೀಕಿಸುತ್ತಾರೆ. ಹೌಡಿಯ ಹಿಂದೆ ಅಡಗಿರುವ ಹಣಕಾಸು ಬಂಡವಾಳ ಎನ್ನಲಾಗುವ ರೌಡಿಯ ಬಗ್ಗೆ ಉಸಿರೆತ್ತುವುದಿಲ್ಲ.

ಅಮೆರಿಕದಲ್ಲಿ ಟ್ರಂಪ್ ಗೆದ್ದರೂ ಇಷ್ಟೇ ಮತ್ತೊಬ್ಬರು ಗೆದ್ದರೂ ಅಷ್ಟೇ. ಭಾರತಕ್ಕೆ ಸಿಗುವುದು ಭೂತಯ್ಯನ ಮಗ ಅಯ್ಯು ಚಿತ್ರದ ಉಪ್ಪಿನಕಾಯಿ ಮಾತ್ರ. ಏಕೆಂದರೆ ಅಂಕಲ್ ಲೋಕನಾಥ್ ಅವರಂತೆ ನಮಗೆ ಅಷ್ಟೇ ಸಾಕು. ಉಳಿದುದೆಲ್ಲವನ್ನೂ ಬೇಕಾದವರು ದೋಚಿಕೊಂಡು ಹೋಗಲಿ.   ಉದಾರವಾದವನ್ನು ಒಪ್ಪಿಕೊಂಡ ಮೇಲೆ ಇಷ್ಟಾದರೂ ಔದಾರ್ಯ ಬೇಡವೇ ?