ಹಾಗಿದ್ದ ಮಂಗಳೂರು ಹೀಗಾಗಿದ್ದು ಹೇಗೆ? ಬದಲಾವಣೆಯ ಹಿಂದೆ ಕೋಮುದ್ವೇಷದ ಕರಿನೆರಳು

ಕೋಮು ದ್ವೇಷದಿಂದ ಒಂದು ಊರಿನ ಸಾಂಸ್ಕೃತಿಕ ಬದುಕು ಹೇಗೆ ನಾಶವಾಗುತ್ತದೆ, ಅಭಿವೃದ್ಧಿ ಪಥ ಹೇಗೆ ದಿಕ್ಕು ತಪ್ಪುತ್ತದೆ ಎನ್ನುವುದಕ್ಕೆ ರಾಜ್ಯದ ವಾಣಿಜ್ಯ ರಾಜಧಾನಿಯಾಗಿರುವ ಮಂಗಳೂರು ಅತ್ಯುತ್ತಮ ಉದಾಹರಣೆ. ಆಧುನಿಕ ಬದುಕಿನ ಎಲ್ಲ ಲಕ್ಷಣಗಳೂ ಇದ್ದ ಮಂಗಳೂರು ಶಿಲಾಯುಗದತ್ತ ವಾಪಸಾಗುತ್ತಿದೆಯೇನೋ ಎನ್ನುವ ಅನುಮಾನ ಹುಟ್ಟಿಸುವ ಕಾರಣಗಳ ಕುರಿತು ರಾಕೇಶ್ ಪೂಂಜ ಇಲ್ಲಿ ಚರ್ಚಿಸಿದ್ದಾರೆ.

ಹಾಗಿದ್ದ ಮಂಗಳೂರು ಹೀಗಾಗಿದ್ದು ಹೇಗೆ?  ಬದಲಾವಣೆಯ ಹಿಂದೆ ಕೋಮುದ್ವೇಷದ ಕರಿನೆರಳು

 

ಕೋಮು ದ್ವೇಷದಿಂದ ಒಂದು ಊರಿನ ಸಾಂಸ್ಕೃತಿಕ ಬದುಕು ಹೇಗೆ ನಾಶವಾಗುತ್ತದೆ, ಅಭಿವೃದ್ಧಿ ಪಥ ಹೇಗೆ ದಿಕ್ಕು ತಪ್ಪುತ್ತದೆ ಎನ್ನುವುದಕ್ಕೆ ರಾಜ್ಯದ ವಾಣಿಜ್ಯ ರಾಜಧಾನಿಯಾಗಿರುವ ಮಂಗಳೂರು ಅತ್ಯುತ್ತಮ ಉದಾಹರಣೆ. ಆಧುನಿಕ ಬದುಕಿನ ಎಲ್ಲ ಲಕ್ಷಣಗಳೂ ಇದ್ದ ಮಂಗಳೂರು ಶಿಲಾಯುಗದತ್ತ ವಾಪಸಾಗುತ್ತಿದೆಯೇನೋ ಎನ್ನುವ ಅನುಮಾನ ಹುಟ್ಟಿಸುವ ಕುರಿತು ರಾಕೇಶ್ ಪೂಂಜ ಇಲ್ಲಿ ಚರ್ಚಿಸಿದ್ದಾರೆ.

ಭಾರತಕ್ಕೆ ಮುಂಬೈ ಹೇಗೆ ವಾಣಿಜ್ಯ ರಾಜಧಾನಿಯೋ ಹಾಗೆ ಕರ್ನಾಟಕದ ವಾಣಿಜ್ಯ ರಾಜಧಾನಿ ಮಂಗಳೂರು. ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಸಿರಿವಂತ ನಗರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಹೆಸರು ಮಂಗಳೂರು. ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಪಕ್ಕದ ಮಹಾರಾಷ್ಟ್ರದ ರಾಜಧಾನಿ ಮುಂಬಯಿ ಜತೆಗೆ ಏಕಕಾಲದಲ್ಲಿ ಮತ್ತು ನೇರವಾಗಿ ಸಂಪರ್ಕ ಹೊಂದಿರುವ, ಜತೆಗೆ ಎರಡೂ ರಾಜಧಾನಿಗಳಲ್ಲಿ ಅಧಿಕ ಸಂಖ್ಯೆಯ ಉದ್ಯಮಿಗಳನ್ನೂ ರಾಜಕಾರಣಿಗಳನ್ನೂ ಕೈಗಾರಿಕೋದ್ಯಮಿಗಳನ್ನೂ ಹೊಂದಿರುವ ಪ್ರದೇಶ ಅವಿಭಜಿತ ದಕ್ಷಿಣ ಕನ್ನಡ.

ಇಲ್ಲಿ ಅತಿ ಹೆಚ್ಚು ಶಿಕ್ಷಿತರಿದ್ದಾರೆ, ವಿದ್ಯಾವಂತರಿದ್ದಾರೆ. ಅತ್ಯುತ್ತಮ ಎನ್ನಿಸುವ ಪಟ್ಟಿಯಲ್ಲಿ ಬರುವಂತಹ ಅನೇಕ ದೊಡ್ಡ ಶಿಕ್ಷಣ ಸಂಸ್ಥೆಗಳಿವೆ. ವಿದ್ಯೆಗೆ ಕೊರತೆ ಇಲ್ಲ. ವಿದ್ಯೆಯ ಜತೆಗೆ ಬುದ್ಧಿಗೂ ಕೊರತೆಯಿಲ್ಲ. ಏಕೆಂದರೆ ದಕ್ಷಿಣ ಜಿಲ್ಲೆಗೆ ಬುದ್ಧಿವಂತರ ಜಿಲ್ಲೆ ಎಂಬ ಅನಧಿಕೃತ ಟ್ಯಾಗ್‍ಲೈನ್ ಬೇರೆ ಇದೆ.

ಅಷ್ಟಾದರೂ ಕರುನಾಡಲ್ಲೇ ಭಾರಿ ಪ್ರಮಾಣದಲ್ಲಿ ಕೋಮುಗಲಭೆ ದಕ್ಷಿಣ ಕನ್ನಡದಲ್ಲೇ ಏಕೆ ನಡೆಯುತ್ತದೆ?

ಒಂದೊಮ್ಮೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ದಕ್ಷಿಣ ಕನ್ನಡದಲ್ಲಿ ಈಗ ಅಷ್ಟೊಂದು ಬಡತನವಿಲ್ಲ. ಇಲ್ಲಿನ ಶ್ರಮಜೀವಿ ಮಂದಿ ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದಾರೆ. ಪ್ರಬಲವಾಗಿರುವ ಜಾತಿ ವ್ಯವಸ್ಥೆಯ ನಡುವೆಯೂ ಅದನ್ನು ಮೀರಿ ಇಲ್ಲಿನ ದೈವಾರಾಧನೆ, ನಾಗಾರಾಧನೆಯಂಥ ಪ್ರಾಕೃತಿಕ ಆರಾಧನೆಯನ್ನು ಒಳಗೊಂಡ ತುಳುನಾಡಿನ ಸಂಸ್ಕøತಿ, ಸಾಂಪ್ರದಾಯಿಕ ಕಟ್ಟುಪಾಡುಗಳು ಇಲ್ಲಿನ ಮಂದಿಯನ್ನು ಬೆಸೆದಿವೆ.

ದೊಡ್ಡ ಉದ್ಯಮವಾಗಿರುವ ಮತ್ಸ್ಯೋದ್ಯಮದಲ್ಲಿ ಮೀನು ಹಿಡಿಯುವವರು ಮೊಗವೀರರು. ಅವರು ಹಿಡಿದು ತಂದ ಮೀನು ಮಾರಾಟ ಮಾಡುವವರು ಮುಸ್ಲಿಮರು. ಇನ್ನೊಂದು ದೊಡ್ಡ ಉದ್ಯಮವಾದ ಬೀಡಿ ತಯಾರಿಯಲ್ಲಿ ಬೀಡಿ ಕಟ್ಟುವವರು ಹಿಂದೂ ಸಮುದಾಯದ ಮಹಿಳೆಯರು. ಇದರ ಗುತ್ತಿಗೆದಾರರು ಬಹುತೇಕ ಮುಸ್ಲಿಮರು. ತುಳುನಾಡಿನ ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರಿಗಳು ಮುಸ್ಲಿಮರೇ ಆಗಿದ್ದರೆ, ಗ್ರಾಹಕರು ಹಿಂದೂ, ಮುಸ್ಲಿಂ, ಕ್ರೈಸ್ತರು, ಜೈನರು ಮತ್ತಿತತರು.

ಹೀಗಿ ಸದಾ ಸಾಮಾಜಿಕ ಸಾಮರಸ್ಯಕ್ಕೆ ಉದಾಹರಣೆಯಂತಿರುವ ಈ ಪ್ರದೇಶ ಆಗಾಗ ಕೋಮು ಗಲಭೆಯ ಕಾರಣಕ್ಕೆ ನಾಡಿನ ಗಮನ ಸೆಳೆಯುತ್ತಿರುವುದು ಅತಿ ದೊಡ್ಡ ವೈರುಧ್ಯ. ಕರ್ನಾಟಕದ ದುಬೈ ಎಂಬ ಅಡ್ಡನಾಮವನ್ನು ಹೊಂದಿರುವ ಮಂಗಳೂರು ಆಗಾಗ ಕದಡಿದ ಕೋಮು ಸಾಮರಸ್ಯಗಳ ಕಾರಣದಿಂದ ಮಾಧ್ಯಮಗಳಿಗೆ ಆಗಾಗ ಆಹಾರ ಆಗುತ್ತಿರುವುದು ಕೇವಲ ಕುಖ್ಯಾತಿಗೆ ಕಾರಣವಾಗಿರುವುದಲ್ಲ, ವ್ಯಾಪಾರ, ವಹಿವಾಟಿನ ಮೇಲೂ ದೊಡ್ಡ ದುಷ್ಪರಿಣಾಮ ಬೀರಿರುವುದು ಮೇಲ್ನೋಟಕ್ಕೇ ಕಂಡು ಬರುವ ದುರಂತಮಯ ಬೆಳವಣಿಗೆ.

ಒಂದು ವೇಳೆ ಇಲ್ಲಿ ಕೋಮು ಗಲಭೆ ಎನ್ನುವ ಗುಮ್ಮ ಇಲ್ಲದೇ ಇದ್ದಿದ್ದರೆ, ವ್ಯಾಪಾರ ಹಾಗೂ ವಹಿವಾಟುಗಳು ಇನ್ನೊಂದು ಸ್ತರಕ್ಕೆ ಅಭಿವೃದ್ಧಿಯಾಗಲು ಸಾಧ್ಯವಿತ್ತೇನೋ. ಮುಂಬೈ ಹಾಗೂ ದುಬೈಗೆ ಹೋಲಿಸಲಾಗುವ ಮಂಗಳೂರು ನಗರ ಅಥವಾ ದಕ್ಷಿಣ ಕನ್ನಡದ ಪಟ್ಟಣಗಳು ಸಂಜೆ ಏರುತ್ತಿದಂತೆ ನೀರವತೆಗೆ ಸಾಗುತ್ತದೆ. ಏಳು, ಎಂಟು ಆಗುವಷ್ಟರಲ್ಲಿ ಬಹುತೇಕ ಅಂಗಡಿಗಳು ಬಾಗಿಲು ಎಳೆದುಕೊಳ್ಳುತ್ತವೆ.

ಕಾರಣ, ಕೋಮು ಗಲಭೆಗಳು!

80, 90ರ ದಶಕಗಳವರೆಗೆ ಕೋಮು ಸಾಮರಸ್ಯಕ್ಕೆ ಬಲು ದೊಡ್ಡ ಉದಾಹರಣೆಯಾಗಿದ್ದ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಆಗ ಮುಂಬಯಿಯ ನೆರಳು ಎಷ್ಟು ಗಾಢವಿತ್ತೆಂದರೆ, ಇಲ್ಲಿನ ಮಂದಿ ರಾತ್ರಿ ಹತ್ತು, ಹನ್ನೊಂದಾದರೂ ನಿರ್ಭೀತಿಯಿಂದ ಓಡಾಡುತ್ತಿದ್ದರು. ಜನ ಸಂಚಾರವಿದ್ದುದರಿಂದ ವ್ಯಾಪಾರಿಗಳೂ ಅಂಗಡಿಗಳನ್ನು ತೆರೆದಿರುತ್ತಿದ್ದರು. ವ್ಯಾಪಾರ, ವಹಿವಾಟೂ ಚೆನ್ನಾಗಿರುತ್ತಿತ್ತು. ನಿಮಗೆ ಅಚ್ಚರಿಯಾಗಬಹುದು. ಪುಟ್ಟ ಮಂಗಳೂರು ಪಟ್ಟಣವೊಂದರಲ್ಲೇ ನಾಲ್ಕು ಕ್ಯಾಬರೆ ನೃತ್ಯ ಕೇಂದ್ರಗಳು ತಡರಾತ್ರಿವರೆಗೆ ನಡೆಯುತ್ತಿತ್ತು!

ಕ್ಯಾಬರೆ ಕೇಂದ್ರಗಳು ಮುಚ್ಚಿದ್ದು ಒಳ್ಳೆಯ ಬೆಳವಣಿಗೆಯೇ ಆದರೂ ಉಳಿದ ಅಂಗಡಿಗಳೂ ಕತ್ತಲೆಯಾಗುತ್ತಿರುವಂತೆ ನಿತ್ಯ ಬಾಗಿಲೆಳೆದುಕೊಳ್ಳುವ ಪರಿಸ್ಥಿತಿ ವ್ಯಾಪಾರದ ದೃಷ್ಟಿಯಿಂದ ಪಾಸಿಟಿವ್ ವಿಚಾರವಲ್ಲ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು. ಬಿರು ಬಿಸಿಲಿನ ಪ್ರದೇಶದಲ್ಲಿ ಮಂದಿ ಪಾರ್ಕ್, ಸಿನಿಮಾ, ಶಾಪಿಂಗ್, ಹೋಟೆಲ್ ಅಂತ ಮನೆಯಿಂದ ಹೊರಬೀಳುವುದೇ ಸಂಜೆ ಸೂರ್ಯ ಮುಳುಗಿದ ಮೇಲೆ. ಇದಕ್ಕೆ ಮುಂಬಯಿ, ಸೂರತ್‍ನಂಥ ಪ್ರದೇಶಗಳ ವ್ಯಾಪಾರದ ಗ್ರಾಫೇ ನಿದರ್ಶನ.

ಆದರೆ ಮಂಗಳೂರಿನಲ್ಲಿ ಕತ್ತಲಾಗುತ್ತಿದ್ದಂತೆ ಜನ ದೆವ್ವ ಕಂಡಂತೆ ಹೌಹಾರಿ ಮನೆಯ ಕಡೆಗೆ ದಾಪುಗಾಲಿಡುತ್ತಾರೆ. ಸಂಜೆ ಏಳೆಂಟು ಗಂಟೆ ಆಗುತ್ತಲೇ ಜನರ ಹಿಂಡು ಸೂರ್ಯರಶ್ಮಿ ಬಿದ್ದಾಗ ಕರಗುವ ಮಂಜಿನ ಹನಿಗಳಂತೆ ಕರಗಲು ಆರಂಭಿಸುತ್ತದೆ. ಹೋಟೆಲ್, ಬಾರುಗಳು, ಚಾಟ್ ಸೆಂಟರ್‍ಗಳಂಥ ಒಂದಿಷ್ಟು ಅಂಗಡಿಗಳನ್ನು ಹೊರತುಪಡಿಸಿ, ಇಲ್ಲವೇ ಬೆರಳೆಣಿಕೆಯ ಮಾಲ್‍ಗಳನ್ನು ಬಿಟ್ಟರೆ, ಉಳಿದವರು ಗ್ರಾಹಕರಿಗಾಗಿ ಕಾಯುವ ಸನ್ನಿವೇಶ ನಿರ್ಮಾಣವಾಗುವುದರಿಂದ ಸಹಜವಾಗಿಯೇ ಬಾಗಿಲೆಳೆಯಲು ಪ್ರಾರಂಭಿಸುತ್ತಾರೆ. ಹಗಲಲ್ಲಿ ಸದಾ ಜಿಗಿಜಿಗಿ ಎನ್ನುವ ಮಂಗಳೂರಿನ ಹೃದಯಭಾಗದಲ್ಲಿರುವ ಸ್ಟೇಟ್‍ಬ್ಯಾಂಕ್, ಹಂಪನಕಟ್ಟೆ ಪ್ರದೇಶವಾಗಲಿ, ಉರ್ವಾ, ಬಲ್ಲಾಳ್‍ಬಾಗ್, ಮಾರ್ಗನ್‍ಗೇಟ್‍ನಂಥ ಸ್ಥಳಗಳಾಗಲಿ ರಾತ್ರಿ ಎಂಟರ ನಂತರ ಭಣಗುಡಲು ಆರಂಭಿಸುತ್ತದೆ. 

ಕ್ರಮೇಣ ಆರೆಸ್ಸೆಸ್ ಹಾಗೂ ಅದರ ಅಂಗಸಂಸ್ಥೆಗಳ ಪ್ರಯೋಗಶಾಲೆಯಾಗಿ ಬದಲಾಗಿದ್ದೇ ಇಲ್ಲಿನ ಪ್ರಗತಿಗೆ ಮಾರಕವಾಗಿ, ಭೀತಿಯ ವಾತಾವರಣ ಇರುವ ಪರಿಸ್ಥಿತಿ ನಿರ್ಮಾಣವಾಗಲು ಕಾರಣ. ಅಲ್ಲದೆ ಸಂಘ ಪರಿವಾರದ ಹಿರಿಯ ತಲೆ ಡಾ.ಕಲ್ಲಡ್ಕ ಪ್ರಭಾಕರ ಭಟ್ ಆರಂಭದಿಂದಲೂ ಕೋಮು ದಳ್ಳುರಿಗೆ ಸುರಿಯುತ್ತಿರುವ ತುಪ್ಪವೇ ಈಗಲೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರಲು ಕಾರಣ ಎನ್ನುವುದನ್ನು ಇಲ್ಲಿನ ಪ್ರಗತಿಪರರು ಉಲ್ಲೇಖಿಸುತ್ತಾರೆ.

ಪರಸ್ಪರ ಭಿನ್ನ ಕೋಮುಗಳ ಹುಡುಗ, ಹುಡುಗಿ ಮಾತನಾಡುವುದಿರಲಿ, ಅಕ್ಕಪಕ್ಕ ನಿಂತಿರುವುದನ್ನು ಕಂಡರೂ ಇಲ್ಲಿನ ಕೋಮು ಮನಸ್ಸುಗಳಲ್ಲಿ ತಳಮಳ ಶುರುವಾಗುತ್ತದೆ. ಹುಡುಗಿಯ ಕೋಮಿಗೆ ಸೇರಿದ ಮೂಲಭೂತವಾದಿಗಳು ಅಲ್ಲಿ ಪ್ರತ್ಯಕ್ಷವಾಗಿ ಮೈಮೇಲೆ ಪ್ರೇತ ಬಂದಂತೆ ವರ್ತಿಸಲಾರಂಭಿಸುತ್ತಾರೆ. ಎಷ್ಟೋ ಸಲ ಅಣ್ಣ, ತಂಗಿಯನ್ನೂ ಭಿನ್ನ ಕೋಮಿನವವರೆಂದು ಭಾವಿಸಿ ಥಳಿಸಿದ ಬಳಿಕ ಸತ್ಯ ಗೊತ್ತಾಗಿ ಕ್ಷಮೆಯನ್ನೂ ಕೋರದೆ ದುಷ್ಕರ್ಮಿಗಳು ಹಿಂತಿರುಗಿದ ಉದಾಹರಣೆಗಳಿವೆ.

ಒಂದು ಕಾಲದಲ್ಲಿ ಬೆಂಗಳೂರಿನ ಮೌಂಟ್ ಕಾರ್ಮೆಲ್‍ಗಿಂತಲೂ ಮಾಡರ್ನ್ ಡ್ರೆಸ್ ಧರಿಸಿ ಕಾಲೇಜಿಗೆ ಬರುತ್ತಿದ್ದ ಸುಂದರ ಕನ್ಯೆಯರನ್ನು ಹೊಂದಿದ್ದ ಸೈಂಟ್ ಆಗ್ನೆಸ್‍ನಂಥ ಕಾಲೇಜಿಗೆ ಈಗ ಹೋದರೆ ನಿಮಗೆ ಅಚ್ಚರಿಯಾಗಬಹುದು. ಅಲ್ಲೀಗ ಬಣ್ಣದ ಧಿರಿಸು ಕಾಣಿಸುವುದಿಲ್ಲ. ಆ ಜಾಗಕ್ಕೆ ಯೂನಿಫಾರ್ಮ್ ಬಂದಿದೆ. ಆಗ್ನೆಸ್ ಮಾತ್ರವಲ್ಲ, ಅಲೋಶಿಯಸ್, ಮಿಲಾಗ್ರಿಸ್, ರೋಶನಿ ನಿಲಯ, ಕೆನರಾ, ಮಹೇಶ್, ಆಳ್ವಾಸ್, ಎಕ್ಸ್‍ಪರ್ಟ್ ಹೀಗೆ ಮಂಗಳೂರಿನ ಎಲ್ಲ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಬಹುತೇಕ ಕಾಲೇಜುಗಳಲ್ಲಿ ಯೂನಿಫಾರ್ಮ್ ಪದ್ಧತಿ ಬಂದಿದೆ. ಇದೆಲ್ಲ ಬದಲಾವಣೆಗಳ ಹಿಂದೆ ಕೋಮು ಗಲಾಟೆಗಳ ಕರಿನೆರಳು ಇರುವುದನ್ನು ಇಲ್ಲಿನ ಯಾರೂ ಅಲ್ಲಗಳೆಯಲಾಗದು.

ಇನ್ನೊಬ್ಬರ ಸಾವಿನಲ್ಲಿ ರಾಜಕಾರಣ ಮಾಡುವ ಪರಿಸ್ಥಿತಿ ಇರುವವರೆಗೂ ಮಂಗಳೂರಿನ ಅಭಿವೃದ್ಧಿ ಮಾತ್ರ ಗಗನ ಕುಸುಮವಾಗಲಿದೆ ಎನ್ನುವುದಕ್ಕೆ ಮಂಗಳೂರಿನ ರಸ್ತೆಗಳಲ್ಲಿ ಪಂಪ್‍ವೆಲ್ ಮತ್ತು ತೊಕ್ಕೊಟ್ಟು ಮೇಲು ಸೇತುವೆಗಳ ಕಾಮಗಾರಿಗಳೇ ಸಾಕ್ಷಿ. ಇಲ್ಲಿನ ರಾಜಕಾರಣಿಗಳಿಗೆ ಅಭಿವೃದ್ಧಿಗೆ ಕೋಮು ಸಾಮರಸ್ಯ ಕದಡುವುದರಲ್ಲೇ ಒಂದು ಹಿಡಿ ಪ್ರೀತಿ ಜಾಸ್ತಿ. ಇಲ್ಲದಿದ್ದರೆ ಕಳೆದ ಎಂಟು ವರ್ಷಗಳಲ್ಲಿ ಎರಡು ಮೇಲು ಸೇತುವೆಗಳ ಅರ್ಧದಷ್ಟಾದರೂ ಕಾಮಗಾರಿ ಪೂರ್ತಿಯಾಗಿರುತ್ತಿತ್ತು.

ಕೋಮು ಕದನಗಳಿಗೆ ಬಳಸುವ ಸಮಯ, ಶ್ರಮವನ್ನು ಅಭಿವೃದ್ಧಿಗೆ ಬಳಸಿದರೆ ಬಹುಶಃ ಈಗಿರುವುದಕ್ಕಿಂತ ಮಂಗಳೂರು ಬಹಳ ಭಿನ್ನವಾಗಿರುತ್ತಿತ್ತು. ಮತ್ತು ನಿಜವಾದ ಅರ್ಥದಲ್ಲಿ ಅಭಿವೃದ್ಧಿಯಾಗಿರುತ್ತಿತ್ತು.