ಖಿನ್ನತೆಯಿಂದ ಹೊರಬರುವುದು ಹೇಗೆ?

ಖಿನ್ನತೆಯಿಂದ ಹೊರಬರುವುದು ಹೇಗೆ?

 ಮಾನಸಿಕ ಖಿನ್ನತೆಯೆಂದರೆ ಏನು? ನಮ್ಮ ಕೆಲವೊಂದಿಷ್ಟು ಆಲೋಚನೆಗಳು ಮತ್ತು ಭಾವನೆಗಳನ್ನು ತೀವ್ರವಾಗಿ ಆಳದಲ್ಲಿ ಅನುಭವಿಸುತ್ತಿದ್ದರೆ ಆ ಆಲೋಚನೆ ಮತ್ತು ಭಾವನೆಗಳು ನಕಾರತ್ಮಕವಾದವು. ಅವುಗಳನ್ನು ನಮ್ಮ ವಿರುದ್ಧವೇ ತಿರುಗಿಸಿಕೊಂಡಾಗ ಮಾನಸಿಕ ಖಿನ್ನತೆಯುಂಟಾಗುತ್ತದೆ. ಸ್ವಾಸ್ಥ್ಯ ಮತ್ತು ಅಸ್ವಾಸ್ಥ್ಯ ನಡುವಿನ ಪರದೆ ಅತಿ ತಿಳಿಯಾದದ್ದು. ಹಾಗೇ ಬುದ್ದಿವಂತಿಕೆ ಮತ್ತು ಹುಚ್ಚತನದ ನಡುವಿನ ಪರದೆಯು ತಿಳಿಯಾದದ್ದು. ಮನಸ್ಸು ಬುದ್ದಿವಂತಿಕೆ ಮತ್ತು ಹುಚ್ಚುತನ ಎರಡು ಅತಿಗಳಲ್ಲಿ ಗಡಿಯಾರದ ಪೆಂಡ್ಯೂಲಂನಂತೆ ಪಯಣಿಸುತ್ತಲೆ ಇರುತ್ತದೆ. ಕೆಲವೊಮ್ಮೆ ಹುಚ್ಚುತನದ ಕಡೆಗೆ ಹೋದ ಮನಸ್ಸು ಬುದ್ದಿವಂತಿಕೆ ಕಡೆಗೆ ಮರಳಿ ಬರದೇ ಇರಬಹುದು... 

  ಖಿನ್ನತೆಯುಳ್ಳ ಮನುಷ್ಯ ಬಾಹ್ಯವಾಗಿ ಸಾಮಾನ್ಯನಂತೆ ಇರುತ್ತಾನೆ. ದೈಹಿಕವಾಗಿ ಯಾವ ಲಕ್ಪಣಗಳೂ ಗೋಚರಿಸುವುದಿಲ್ಲ. ಇದು ಬಹುತೇಕ ಮುಂದುವರೆದ ಮತ್ತು ಮುಂದುವರೆಯುತ್ತಿರುವ ದೇಶಗಳ ಜನರ ಸಾಮಾನ್ಯ ಕಾಯಿಲೆ. ಇದಕ್ಕೆ ಮುಖ್ಯ ಕಾರಣ ಸ್ಪರ್ಧಾತ್ಮಕವಾದ ಬದುಕು. ಅಧುನಿಕ ಸಮಾಜˌ ಬದಲಾಗುತ್ತಿರುವ ಮೌಲ್ಯಗಳುˌ ಸಾಮಾಜಿಕ ಸಂಬಂಧಗಳುˌ ವೇಗವಾದ ಜೀವನ ಶೈಲಿˌ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ವ್ಯಯ ಮಾಡುವುದುˌ ವೈಯಕ್ತಿಕ ಬದುಕಿನ ಪಲ್ಲಟಗಳುˌ ತಲ್ಲಣಗಳು.. ಇವೆಲ್ಲ ಖಿನ್ನತೆಗೆ ಪ್ರಮುಖ ಕಾರಣಗಳಾಗುತ್ತಿವೆ.

ಸದಾ ಒಂಟಿಯಾಗಿರಬೇಕೆನ್ನುವುದು, ಯಾವುದೇ ಕೆಲಸದಲ್ಲಿ ಚೈತನ್ಯˌ ಉತ್ಸಾಹ ಇಲ್ಲದಿರುವುದುˌ ಮೇಲಿಂದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವುದುˌ ಅತಿಯಾಗಿ ಬೇಸರವಾಗುವುದುˌ ಕೀಳರಿಮೆ ಮೂಡಿಸಿಕೊಳ್ಳುವುದುˌ ಪ್ರತಿ ಚಿಕ್ಕ ಚಿಕ್ಕ ವಿಷಯಕ್ಕೂ ರೇಗಾಡುವುದುˌ ಯಾವಾಗಲೂ ಒಂದೇ ವಿಚಾರದಲ್ಲಿ ಮುಳುಗಿರುವುದುˌ ಖಿನ್ನವಾಗಿ ಕುಳಿತಲ್ಲಿಯೇ ಗಂಟೆಗಟ್ಟಲೆ ಸುಮ್ಮನೆ ಕೂರುವುದುˌ ಯಾರ ಜೊತೆಗೂ ಆಸಕ್ತಿಯುತವಾಗಿ ಮಾತನಾಡಲು ಹಿಂಜರಿಯುವುದುˌ ಸಂತೋಷ ಸಮಯದಲ್ಲಿಯೂ ಸಂತೋಷವಾಗಿ ಇರದಿರುವದು. ಅಲ್ಲದೇˌ ಅಪರಾಧಿ ಮನೋಭಾವˌ ವಿಷಾಧˌ ಪರಾಭವದ ಭಯ ಇವೆಲ್ಲ ಖಿನ್ನತೆಯ ಲಕ್ಪಣಗಳು. ಈ ಲಕ್ಪಣಗಳು ಯಾರಲ್ಲಾದರೂ ಕಂಡುಬಂದರೆˌ ಅವನು ಖಿನ್ನತೆಯ ಮೊದಲನೆಯ ಹಂತದಲ್ಲಿ ಇದ್ದಾನೆ ಎಂದರ್ಥ. ಇದನ್ನು ಡಾಕ್ಟರುˌ ಜೌಷಧಿಗಳ ಮೂಲಕ ಬಗೆಹರಿಸಿಕೊಳ್ಳಬಹುದು. ಈ ಖಿನ್ನತೆ ಹೆಚ್ಚಾದರೆ ಹುಚ್ಚುತನಕ್ಕೆ ತಿರುಗಬಹುದು. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇ. 70 ರಷ್ಟು ಜನ ಮಾನಸಿಕ ಖಿನ್ನತೆಗೆ ಒಳಗಾದವರು. ಈ ಖಾಯಿಲೆಯುಳ್ಳವರನ್ನು ಅವರ ನಿಕಟವರ್ತಿಗಳು ಪ್ರೀತಿˌ ವಿಶ್ವಾಸದಿಂದ ಉಪಚರಿಸಬೇಕುˌ ಮನೋಬಲ ತುಂಬುತ್ತಿರಬೇಕು. ಆಗ ಬೇಗ  ಖಿನ್ನತೆಯಿಂದ ಹೊರಬರಬಲ್ಲರು.

ಮೊದಲ ಹಂತದಲ್ಲಿ ಇದೊಂದು ರೋಗ ಅಥವ ಭಯಂಕರ ಖಾಯಿಲೆಯಾಗಿರುವುದಿಲ್ಲ. 

  ಇದೊಂದು ಮಾನಸಿಕ ಅವಸ್ಥೆ. ಇದಕ್ಕೆ ಪ್ರಮುಖ ಕಾರಣˌ ಮನಸ್ಸಿನ ಮೇಲೆ ಧಿಡೀರನೆ ಸಂಭವಿಸುವ ಅನಿರೀಕ್ಷಿತ ಆಘಾತಗಳು. ಯಾವತ್ತು ಮನಸ್ಸು ಅನೀರಿಕ್ಷಿತ ಆಘಾತಗಳನ್ನು ಎದುರಿಸುವ ಕ್ಷಮತೆ ಹೊಂದಿರುವುದಿಲ್ಲ ಅಥವಾ ತಯಾರಾಗಿರುವುದಿಲ್ಲ. ಯಾವಾಗ ದಿಢೀರನೆ ಆಘಾತಗಳು ಎದುರಾದಾಗ ಅವುಗಳನ್ನು ಯಾವ ರೀತಿ ನಿಭಾಯಿಸಬೇಕುˌ ಹೇಗೆ ಪ್ರತಿಕ್ರಯಿಸಬೇಕುˌ ಆ ಪರಿಸ್ಥಿತಿಯನ್ನು ಹೇಗೆ ಸಂಭಾಳಿಸಬೇಕು ಎಂಬ ಮನೊಗೊಂದಲದಲ್ಲಿ ಸಿಕ್ಕಿಕೊಂಡು ಹೊರಳಾಡುವ ಅವಸ್ಥೆ. ಆಗ ಭಾವನಾತ್ಮಕ ತೊಳಲಾಟ ಪ್ರಾರಂಭವಾಗುತ್ತದೆ. ವಿಚಾರಗಳಲ್ಲಿ ಸ್ಪಷ್ಟತೆಯಿಲ್ಲದೆ  ಮನದಲ್ಲಿ ವಿಚಾರಗಳ ದ್ವಂದ್ವ ಯುದ್ದ ಪ್ರಾರಂಭವಾಗುತ್ತದೆ. ಇದರಿಂದಾಗಿ ವಿಚಾರಗಳ  ಒತ್ತಡ ಹೆಚ್ಚಾಗಿˌ ದೇಹದಲ್ಲಿ ರಕ್ತ ಸಂಚಾರದಲ್ಲಿ ಏರು ಪೇರಾಗುತ್ತದೆ. ಹೀಗೆ ವಿಚಾರಗಳ ಒತ್ತಡದಿಂದ ಖಿನ್ನತೆ ಪ್ರಾರಂಭವಾಗುತ್ತದೆ.

ಉದಾ; ಧಿಡೀರನೆ ನಮ್ಮ ಪ್ರೀತಿ ಪಾತ್ರರು ರಸ್ತೆ ಅಪಘಾತದಲ್ಲಿ ತೀರಿಕೊಂಡಾಗˌ ಸಂಬಂಧಗಳಲ್ಲಿ ಬಿರುಕು ಉಂಟಾದಾಗˌ ವ್ಯಾಪಾರದಲ್ಲಿ ನಷ್ಟ ಉಂಟಾದಾಗˌ ನೌಕರಿಯಿಂದ ತೆಗೆದು ಹಾಕಿದಾಗ...ಈ ಸಮಯದಲ್ಲಿ ಮನಸ್ಸು ಆಘಾತಕ್ಕೊಳಗಾಗಿ ಖಿನ್ನತೆ ಅನುಭವಿಸುತ್ತಾನೆ. ಈ ಖಿನ್ನತೆಗೆ ಯಾವ ಸಂಕೋಚವೂ ಇಲ್ಲದೆ ಹೋಗಿ ಮನೋವೈದ್ಯರಲ್ಲಿ ಚಿಕಿತ್ಸೆ ಪಡೆದರೆ ಒಳಿತು. ಖಿನ್ನತೆ ಹೆಚ್ಚಾಗಿ ಹುಚ್ಚರಾಗಬಹುದು.

  ಮೊದಲೆಲ್ಲˌ ನಲ್ವತ್ತರ ವಯೋಮಾನದಲ್ಲಿ ಕಾಣುತ್ತಿದ್ದ ಖಿನ್ನತೆˌ ಈಗ ಹದಿಹರೆಯದವರಲ್ಲಿಯೂ ಹೆಚ್ಚಾಗಿ ಕಾಣುತ್ತಿರುವದು ಆತಂಕಕಾರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ 56 ಮಿಲಿಯನ್‌ ಜನ ಖಿನ್ನತೆಯ ಪ್ರಭಾವದಲ್ಲಿ ಇದ್ದಾರೆ. 38 ಮಿಲಿಯನ್ ಜನರು ಹಲವಾರು ಮಾನಸಿಕ ಖಾಯಿಲೆಯಿಂದ ನರಳುತ್ತಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆ 2016 ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಪ್ರತಿ ಇಪ್ಪತ್ತು ಜನರಲ್ಲಿ ಒಬ್ಬರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಜಾಗತಿಕವಾಗಿ 350 ಮಿಲಿಯನ್ ಜನರಿಗೆ ಖಿನ್ನತೆ ಸಮಸ್ಯೆಯಿದೆ. ಇದರಲ್ಲಿ ಅರ್ಧದಷ್ಟು ಏಷಿಯಾ ವಾಸಿಗಳೇ. ಅಮೆರಿಕದಲ್ಲಿ 5 ಕೋಟಿ ಜನ ಖಿನ್ನತೆಯಿಂದ ನರಳುತ್ತಿದ್ದಾರೆ. 

ಖಿನ್ನತೆ ಇಂಥವರಿಗೆ ಬರಬೇಕೆಂದು ಏನಿಲ್ಲ. ಯಾರಿಗಾದ್ರೂ ಬರಬಹುದು. ಇದು ಬುದ್ದಿವಂತರು ಮತ್ತು ಸಿರಿವಂತರಿಗೆ ಹೆಚ್ಚು ಬರುತ್ತದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆˌ ಮನೀಷಾ ಕೊಯಿರಲಾˌ ಶಾರುಖ್‌ ಖಾನ್‌ˌ ಅನುಷ್ಕ ಶರ್ಮˌ ಟೈಗರ್ ಶ್ರಾಫ್ ˌ ನಿರ್ದೇಶಕ ಕರಣ್‌ ಜೋಹರ್ ˌಬ್ರಿಟನ್ ನಟ ಕರೊಲೈಸ್ ಅಮೆˌ ಅಮೆರಿಕದ ಖ್ಯಾತ ಬರಹಗಾರ ಜೆನ್ನ್ ಪ್ಯೂಟ್.... ಹಲವಾರು ಜನ ಖಿನ್ನತೆಯೊಂದಿಗೆ ವರ್ಷಾನುಗಟ್ಟಲೆ ಹೋರಾಡಿ ಹೊರಬಂದವರು. ಕಳೆದ ವರ್ಷವಷ್ಟೇ ನಟಿ ದೀಪಿಕಾ ಪಡುಕೋಣೆ ತಾವು ಖಿನ್ನತೆಗೆ ಒಳಗಾಗಿ ಅದರಿಂದ ಆದ ನೋವಿನಿಂದ ಹೊರಬಂದ ಹೋರಾಟದ ಕಥನವನ್ನು ಟಿವಿ ವಾಹಿನಿಯೊಂದರ ಮುಂದೆ ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದರು. ಕರಣ್‌ ಜೋಹರ್ ತಂದೆ ತೀರಿಕೊಂಡಾಗ ಖಿನ್ನತೆಗೆ ಒಳಗಾಗಿದ್ದರು. 

ಖಿನ್ನತೆ ಮೊದಲ ಹಂತದಲ್ಲಿ ಪತ್ತೆ ಹಚ್ಚಿ ಯಾವುದೇ ಸಂಕೋಚˌ ಮುಜುಗುರವಿಲ್ಲದೆ ಮನೋವೈದ್ಯರನ್ನು ಸಂಪರ್ಕಿಸಿ. ದಿನನಿತ್ಯ ವಾಕಿಂಗ್ ˌ ವ್ಯಾಯಾಮˌ ಯೋಗˌ ಪ್ರಾಣಯಾಮˌ ಧ್ಯಾನˌ ಸಂಗೀತˌ ಓದು...ಮುಂತಾದ ಸಕಾರತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಿ.