ಹೊನ್ನಿನ ತೇರೆಳೆದ ಕ್ರೀಡಾಪಟುಗಳು

ಪ್ರಪ್ರಥಮ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪಿವಿ ಸಿಂಧು ದೇಶಕ್ಕೆ ಚಿನ್ನದ ಪದಕ ಗಳಿಸಿಕೊಟ್ಟ ನಾಲ್ಕೇ ತಿಂಗಳುಗಳಲ್ಲಿ ಮತ್ತೊಂದು ತೆಲುಗು ಮೂಲದ ಮಹಿಳೆ ಕೊನೇರು ಹಂಪಿ ವಿಶ್ವ ರಾಪಿಡ್ ಚದುರಂಗದಾಟದ ಶಿಖರವನ್ನೇರಿದ್ದಾರೆ. ಇವರೆಲ್ಲರ ಸಾಧನೆ ಕೇವಲ ಸಾಂಕೇತಿಕ; ಒಟ್ಟಾರೆ, ಭಾರತದ ಕ್ರೀಡಾಪಟುಗಳ ಪಾಲಿಗೆ 2019 ಚರಿತ್ರಾರ್ಹ ವರ್ಷವಾಗಿ ದಾಖಲೆಗೊಂಡಿದೆ.

ಹೊನ್ನಿನ ತೇರೆಳೆದ ಕ್ರೀಡಾಪಟುಗಳು

ಭಾರತೀಯ ಮಹಿಳೆಯರ ಬಂಗಾರದ ವ್ಯಾಮೋಹ ಯಾರಿಗೆ ತಾನೇ ತಿಳಿದಿಲ್ಲ. ಆ ವ್ಯಾಮೋಹ ಕ್ರೀಡಾಲೋಕದ ಮಹಿಳೆಯರಿಗೂ ತಗುಲಿದಂತಿದೆ. ಬಾಕ್ಸಿಂಗ್ ತಾರೆ ಮೇರಿ ಕೋಂ ಇದೀಗ ಅಂತ್ಯಗೊಂಡ ವರ್ಷದಲ್ಲಿ ಅತ್ಯುನ್ನತ ಮಟ್ಟದಲ್ಲಿ ಎಂಟನೇ ಚಿನ್ನದ ಪದಕವನ್ನು ಗಿಟ್ಟಿಸಿಕೊಂಡು ತಮ್ಮ ಚಿನ್ನದ ದಾಹದ ಪ್ರದರ್ಶನ ಮಾಡಿದರು. ಪ್ರಪ್ರಥಮ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪಿವಿ ಸಿಂಧು ದೇಶಕ್ಕೆ ಚಿನ್ನದ ಪದಕ ಗಳಿಸಿಕೊಟ್ಟ ನಾಲ್ಕೇ ತಿಂಗಳುಗಳಲ್ಲಿ ಮತ್ತೊಂದು ತೆಲುಗು ಮೂಲದ ಮಹಿಳೆ ಕೊನೇರು ಹಂಪಿ ವಿಶ್ವ ರಾಪಿಡ್ ಚದುರಂಗದಾಟದ ಶಿಖರವನ್ನೇರಿದ್ದಾರೆ. ಇವರೆಲ್ಲರ ಸಾಧನೆ ಕೇವಲ ಸಾಂಕೇತಿಕ; ಒಟ್ಟಾರೆ, ಭಾರತದ ಕ್ರೀಡಾಪಟುಗಳ ಪಾಲಿಗೆ 2019 ಚರಿತ್ರಾರ್ಹ ವರ್ಷವಾಗಿ ದಾಖಲೆಗೊಂಡಿದೆ.

ವರ್ಷದ ಆರಂಭದಲ್ಲಿ ಚೆಸ್ ಕ್ರೀಡೆಗೆ ಹಂಪಿ ಮರಳಿದಾಗ ಅವರ ಫಾರ್ಮ್ ಬಗ್ಗೆ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಕ್ರಮೇಣ ತಮ್ಮ ಸಾಧನೆಯ ಮಟ್ಟವನ್ನು ಉತ್ತಮಪಡಿಸಿಕೊಳ್ಳುತ್ತಲೇ ಬಂದು ವರ್ಷದ ಕೊನೆಗೆ ಮಾಸ್ಕೊದಲ್ಲಿ ವಿಶ್ವ ಚಾಂಪಿಯನ್ ಆಗಿ ಮೆರೆದರು. ಆ ಉನ್ನತ ಸ್ಥಾನ ಹಂಪಿಗೆ ಇದೇನು ಮೊದಲಲ್ಲ. 1997 ರಲ್ಲೇ ಹತ್ತು ವರ್ಷದ ಕೆಳಗಿನ ಬಾಲಕಿಯರ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಆಗಿ ಮಿಂಚಿದ್ದ ಆಕೆ, 20 ವರ್ಷದೊಳಗಿನ ವಿಶ್ವ ಜೂನಿಯರ್ ಚಾಂಪಿಯನ್ ಕಿರೀಟವನ್ನೂ ಧರಿಸಿದರು. ಅದಕ್ಕೂ ಮೊದಲು 12 ವರ್ಷದೊಳಗಿನ ಏಶಿಯನ್ ಬಾಲಕರ ಚಾಂಪಿಯನ್ಷಿಪ್ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು.

2600 ಇಲೋ ಪಾಯಿಂಟ್ಸ್ ಗಳಿಸಿದ ವಿಶ್ವದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಯೂ ಹಂಪಿಯದು.  ಮೊನ್ನೆ ಮಾಸ್ಕೊದಲ್ಲಿ ನಡೆದ ವಿಶ್ವ ರಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಅವರು 13 ನೇ ಸೀಡ್ ಆಗಿದ್ದರು, ಆದರೆ ಆಕೆಗಿಂತ ಬಹಳಷ್ಟು ಮುಂದಿದ್ದ ಚೀನಾದ ಲೀ ತಿಂಗ್ಜಿ ಯನ್ನು ಹಿಮ್ಮೆಟ್ಟಿಸಿ ಈ ವಿಭಾಗದಲ್ಲಿ ಬಂಗಾರ ಗೆದ್ದ ಪ್ರಥಮ ಭಾರತೀಯ ಮಹಿಳೆಯಾದರು. ಅತ್ಯುನ್ನತ ಮಟ್ಟದಲ್ಲಿ ಅದ್ವಿತೀಯ  ಪುರುಷ ಚೆಸ್ ಚಾಂಪಿಯನ್ ಆದ ವಿಶ್ವನಾಥನ್ ಆನಂದರ ನಂತರ ಕೇಳಿಬರುವುದು  ಹಂಪಿಯ ಹೆಸರೇ. ನಿಜ, ಆಕೆ ಶಾಸ್ತ್ರೀಯ ಚೆಸ್ ಚಾಂಪಿಯನ್ ಆಗಿಲ್ಲ. ಆದರೆ, ಆಕೆಯ ಪ್ರತಿಭೆಯನ್ನು ಗಣನೆಗೆ ತೆಗೆದುಕೊಂಡು, ಆಕೆಯ ಸದ್ಯದ ರೀತಿ ನೋಡಿದರೆ ಶಾಸ್ತ್ರೀಯ ಚೆಸ್ ನಲ್ಲೂ ಆಕೆ ಗೆಲುವುದರಲ್ಲಿ ಯಾವ ಸಂಶವಿಲ್ಲ ಚಾಂಪಿಯನ್ ಕಿರೀಟ ಹೊತ್ತ ಸಿಂಧುವಿನ ಇತ್ತೀಚಿನ ಫಾರ್ಮ್ ಚಿಂತೆಗೆ ಕಾರಣವಾಗಿದೆ, ಆದರೆ ಸಿಂಧು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ನಿರ್ಲಿಪ್ತರಾಗಿದ್ದಾರೆ.

ಪುರುಷರ ಬ್ಯಾಡ್ಮಿಂಟನ್ ನಲ್ಲಿ ಭಾಮಿಡಿ ಸಾಯಿ ಪ್ರಣೀತ್ ಚಿನ್ನವನ್ನು ಗೆಲ್ಲಲಿಲ್ಲ, ಆದರೆ 36 ವರ್ಷಗಳ ಹಿಂದೆ ನಮ್ಮವರೇ ಆದ ಪ್ರಕಾಶ್ ಪಡುಕೋಣೆ ಸ್ಥಾಪಿಸಿದ್ದ ದಾಖಲೆಯನ್ನು ಸರಿಗಟ್ಟಿದರು. ಸ್ವಿಟ್ಝರ್ಲ್ಯಾಂಡ್ ನ ಬೇಸಲ್ ನಲ್ಲಿ ನಡೆದ ಬಿ ಡಬ್ಲ್ಯೂ ಎಫ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕವನ್ನು ಗಳಿಸಿದ ಅವರು 1983ರಷ್ಟು ಹಿಂದೆ ಪ್ರಕಾಶ್ ಹೆಸರಲ್ಲಿದ್ದ ದಾಖಲೆಯೊಂದಿಗೆ ತಮ್ಮ ಹೆಸರನ್ನೂ ಸೇರಿಸಿದ್ದು ಕಳೆದ ವರ್ಷದ ಭಾರತದ ಕ್ರೀಡಾರಂಗದ ಪ್ರಮುಖ ಮೈಲಿಗಲ್ಲು.

ಅದೇ ತರಹದ ಮತ್ತೊಂದು ದಾಖಲೆ ಫುಟ್ಬಾಲ್ ತಾರೆ ಸುನಿಲ್ ಛೇತ್ರಿ ಅವರದ್ದು. ಸಾಧಾರಣ ಪ್ರದರ್ಶನದ ಕಾರಣ ಭಾರತ ಫುಟ್ಬಾಲ್ ತಂಡ ಕಳೆದ ವರ್ಷ 11 ಕ್ರಮಾಂಕ ಕುಸಿಯಿತು, ಆದರೆ ಅಂತರ ರಾಷ್ಟ್ರೀಯ ಗೋಲ್ ಗಳಿಕೆಯಲ್ಲಿ ಛೇತ್ರಿ ಅಪ್ರತಿಮ ಆಟಗಾರ ಲಿಯೋನೆಲ್ ಮೆಸ್ಸಿಗಿಂತ ಮುಂದಿರುವುದು ಬೆಂಗಳೂರಿಗರ ಎದೆಯನ್ನು ಉಬ್ಬಿಸಬೇಕಾದ ಸಾಧನೆ. ರೊನಾಲ್ಡೊ ಅಷ್ಟೆ ಛೇತ್ರಿಗಿಂತ ಮುಂದಿದ್ದಾರೆ.

ಇಪ್ಪತ್ತೈದನೇ ಬಾರಿಗೆ ವಿಶ್ವ ಚಾಂಪಿಯನ್ ಕಿರೀಟವನ್ನು ತೊಡುವತ್ತ ದಾಪುಗಾಲು ಹಾಕುತ್ತಿರುವ ಬೆಂಗಳೂರಿಗರಾದ ಪಂಕಜ್ ಅಡ್ವಾನಿ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಜಗತ್ತಿನ ಏಕಮೇವಾದ್ವಿತೀಯರೆಂದು ಗುರುತಿಸಿಕೊಂಡಿದ್ದಾರೆ. ವರ್ಷಾಂತ್ಯದಲ್ಲಿ ಮಯನ್ಮರ್ನಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ಪನ್ನು ಅಮೋಘ 22 ನೇ ಬಾರಿಗೆ ಗಳಿಸಿಕೊಂಡ ಅವರು ಬಿಲಿಯರ್ಡ್ಸ್ ನ ಸಚಿನ್ ತೆಂಡುಲ್ಕರ್ ತಾವೆಂದು ಸಾಬೀತು ಪಡಿಸಿದ್ದಾರೆ. ಪ್ರೊಫೆಶನಲ್ ಬಿಲ್ಲಿಯರ್ಡ್ಸ್ನಿಂದ 2013 ರಲ್ಲಿ ಹಿಂತಿರುಗಿದ ಆರು ವರ್ಷಗಳಲ್ಲಿ ಐದು ಬಾರಿ ಟೈಟಲ್ ಗೆದ್ದಿದ್ದಾರೆ. ಅವರು ಎಷ್ಟನೆಯ ಬಾರಿ ಗೆದ್ದರು ಅನ್ನುವಷ್ಟೇ ಮುಖ್ಯ ಅವರು ಗೆದ್ದ ಕೊನೆಯ ಪಂದ್ಯವನ್ನು ಹೇಗೆ ಗೆದ್ದರು ಅನ್ನುವುದೂ ಮುಖ್ಯ. ತಮ್ಮ ಪ್ರತಿಸ್ಪರ್ಧಿ ನೇ ಥ್ವೆ ಊ ಅವರನ್ನು ಫೈನಲ್ ನಲ್ಲಿ ಬಗ್ಗುಬಡಿದ ಅಡ್ವಾನಿ ಅವರಷ್ಟು ಟೈಟಲ್ ಗಳನ್ನು ಬಿಲಿಯರ್ಡ್ಸ್ ಜಗತ್ತಿನಲ್ಲಿ ಯಾರೂ ಗೆದ್ದಿಲ್ಲ. ವಿಜಯದ ಹಸಿವು ನೀಗುವ ಯಾವುದೇ ಸೂಚನೆಗಳೂ ಗೋಚರವಾಗುತ್ತಿಲ್ಲ.

ಎರಡು ವರ್ಷದ ಹಿಂದೆ ಸೋಲಿನ ಸರಣಿ ಉಂಡು ಅಧೀರರಾಗಿದ್ದ ಭಾರತೀಯ ಹಾಕಿ ಪಟುಗಳು ಕಳೆದ ವರ್ಷ ತಮ್ಮ ಸಾಧನೆಯ ಮಟ್ಟವನ್ನು ಸುಧಾರಿಸಿಕೊಂಡು ಐದನೇ ಶ್ರೇಯಾಂಕವನ್ನು ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ  ಗ್ರಹಾಂ ರೀಡ್ ತರಬೇತುದಾರನಾಗಿ ನೇಮಕಗೊಂಡ ನಂತರ ತಂಡದ ಮನೋಸ್ಥೈರ್ಯ ಸುಧಾರಿಸಿದೆ. ಒಲಿಂಪಿಕ್ ಕ್ರೀಡಾವರ್ಷವಾದ ಪ್ರಸಕ್ತ ವರ್ಷ ಅದು ಸಮಾಧಾನ ತರುವ ವಿಷಯವಾಗಿದೆ. ಇದುವರೆವಿಗೂ ಎಂಟು ಬಾರಿ ಒಲಂಪಿಕ್ ಗೆದ್ದಿರುವ ಭಾರತ ತಂಡ ಫೈನಲ್ ತಲುಪಿದರೂ ಆಶ್ಚರ್ಯವಿಲ್ಲ ಎಂಬ ಇಂಗಿತವನ್ನು ನಾಯಕ ಮನ್ಪ್ರೀತ್ ವ್ಯಕ್ತಪಡಿಸಿದ್ದಾರೆ.  ಪ್ರಮುಖ ತಂಡಗಳ ವಿರುದ್ಧ ಆಡುವ ಅವಕಾಶಗಳು ಕಳೆದ ವರ್ಷ ಹೆಚ್ಚು ಸಿಗಲಿಲ್ಲವೆಂಬ ಕೊರಗು ಅವರದ್ದಾದರೂ, ಈ ತಿಂಗಳು ಆರಂಭವಾಗಲಿರುವ ಪ್ರೊ-ಲೀಗ್ ಆ ಕೊರತೆಯನ್ನು ನೀಗಿಸಲಿದೆ. ಆ ಪಂದ್ಯಾವಳಿಯಲ್ಲಿ ಎಲ್ಲಾ ಪ್ರಬಲ ರಾಷ್ಟ್ರಗಳನ್ನು ಭಾರತ ಎದುರಿಸಲಿದೆ. ರಿಯೋನಲ್ಲಿ ಕಳೆದ ಒಲಂಪಿಕ್ ಸ್ಪರ್ಧೆಯಲ್ಲಿ ಹೀನಾಯವಾಗಿ ಸೋತಿದ್ದ ಭಾರತದ ತಂಡ ಈಗಾಗಲೇ ಟೋಕಿಯೋ ಒಲಂಪಿಕ್ಸ್ ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿದೆ.  ಅದೇ ಅರ್ಹತೆಯನ್ನು ಭಾರತದ ಮಹಿಳಾ ತಂಡವೂ ಪಡೆದುಕೊಂಡಿದ್ದು ಉಭಯ ತಂಡಗಳೂ ಹುಮ್ಮಸ್ಸಿನಲ್ಲಿವೆ. 

ಮತ್ತೊಂದು ಸಮೂಹ ಕ್ರೀಡೆಯಾದ ಕ್ರಿಕೆಟ್ ನಲ್ಲಿ ಭಾರತ ತಂಡದ, ಕಳೆದ ವರ್ಷವೂ ಸೇರಿದಂತೆ, ಇತ್ತೀಚಿನ ಸಾಧನೆಯನ್ನು ಈ ಅಂಕಣದ ಮುಂಚಿನ ಕೆಲವು ಲೇಖನಗಳಲ್ಲಿ ವಿವರಿಸಿಯಾಗಿದೆ. ವಿಶ್ವ ಕಪ್ ಗೆಲ್ಲದಿದ್ದ ಒಂದು ಕೊರತೆ ಬಿಟ್ಟರೆ ಸರಣಿಯ ನಂತರ ಮತ್ತೊಂದು ಸರಣಿಯಂತೆ ವಿಜಯಮಾಲೆಯಿಂದ ಕಂಗೊಳಿಸುತ್ತಿದೆ. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ  ಟಿ-20 ವಿಶ್ವ ಕಪ್ ಪಂದ್ಯಾವಳಿಗೆ ಸಜ್ಜಾಗುವ ದಿನಗಳು ಹತ್ತಿರ ಬರುತ್ತಿವೆ. ರವಿ ಶಾಸ್ತ್ರಿ ನಾಲ್ಕನೇ ಕ್ರಮಾಂಕದಲ್ಲಿ ಉತ್ತಮ ಪಾತ್ರ ನಿಭಾಯಿಸಿರುವ ಶ್ರೇಯಸ್ ಅಯ್ಯರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಆತ ಮುಂಬಯಿ ಆಟಗಾರ ಅನ್ನುವ ಏಕೈಕ ಕಾರಣಕ್ಕೇನಲ್ಲ.

ಭಾರತೀಯ ಪುರುಷರ ತಂಡವನ್ನನುಕರಿಸುವಂತೆ ಮಹಿಳಾ ಆಟಗಾರ್ತಿಯರೂ ಗೆಲ್ಲುತ್ತಲೇ ಹೋದ ವರ್ಷ 2019.

ಟಿ-20 ಆವೃತ್ತಿಯಿಂದ ನಿವೃತ್ತಿ ಘೋಷಿಸಿದ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಏಕದಿವಸೀಯ ಪಂದ್ಯಗಳಲ್ಲಿ ಅತ್ಯಧಿಕ ರನ್ (6888) ಗಳಿಸಿದ ಕೀರ್ತಿಗೆ ಭಾಜನರಾದರು. ಅವರ ವಯಸ್ಸಿನವರೇ ಆದ ಭಾರತದ ಅಗ್ರಶ್ರೇಣಿಯ ಬೌಲರ್ ಝುಲನ್ ಗೋಸ್ವಾಮಿ ಏಕದಿವಸೀಯ ಪಂದ್ಯಗಳಲ್ಲಿ 180 ವಿಕೆಟ್ ಗಳಿಸಿ ಮುಂಚೂಣಿಯಲ್ಲಿದ್ದ ಆಸ್ಟ್ರೇಲಿಯಾದ ಕ್ಯಾಥರೀನ್ ಫ್ರಿಜ್ಪ್ಯಾಟ್ರಿಕ್ರನ್ನು ದಾಟಿ ಮುಂದೆ ಸಾಗಿದ್ದಾರೆ.

ಉಳಿದಂತೆ, ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ-20 ಪಂದ್ಯವೊಂದರಲ್ಲಿ ಕೇವಲ 40 ಎಸೆತಗಳಲ್ಲಿ73 ರನ್ ಸಿಡಿಸಿದ 15 ವರ್ಷದ ಶೆಫಾಲಿ ವರ್ಮಾ ಅಂತರ ರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ ಅತಿ ಕಿರಿಯ ಆಟಗಾರನೆಂದು ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.  

ಇನ್ನು ಷೂಟಿಂಗ್ ಗೆ ಬರೋಣ. ಲೇಖನದ ಕೊನೆಯಲ್ಲಿ ಪ್ರಸ್ತಾಪಿಸಬೇಕಾದ ವಿಚಾರ ಇದಲ್ಲವೇ ಅಲ್ಲ.  ಷೂಟಿಂಗ್ ಸ್ಪರ್ಧೆಗಳಲ್ಲಿ ಭಾರತೀಯರು ವಿಸ್ಮಯಕಾರೀ ಪ್ರದರ್ಶನ ನೀಡಿದ ಅಪರೂಪದ ವರ್ಷ 2019. ಎಳವೆನಿಲ್ ವಳರಿವನ್, ಸೌರಭ್ ಚೌಧರಿ, ಮತ್ತು ದಿವ್ಯಾಅಂಶ್ ಸಿಂಗ್ ಪನ್ವರ್ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಸೌರಭ್ ಮತ್ತು ಪನ್ವರ್ 10 ಮೀಟರ್ ವಿಭಾಗದಲ್ಲಿ ಭಾಗವಹಿಸಿದ ನಾಲ್ಕೂ ವಿಶ್ವ ಕಪ್ ಸ್ಪರ್ಧೆಗಳಲ್ಲಿ ನಾಲ್ಕು ಚಿನ್ನದ ಪದಕ ಗಳಿಸಿ ಷೂಟಿಂಗ್ ಜಗತ್ತನ್ನು ಚಕಿತಗೊಳಿಸಿದ್ದಾರೆ.

ಈ ಮೂವರು ಯುವಪ್ರತಿಭೆಗಳೂ ಸೇರಿದಂತೆ ಭಾರತದ ಇತರೆ ಷೂಟರ್ಗಳಾದ ಅಂಜುಮ್ ಮೌದ್ಗೀಲ್, ಅಪೂರ್ವಿ ಚಂಡೇಲಾ, ರಾಹಿ ಸರ್ನೋಬತ್, ಮನು ಭಾಕರ್, ಸಂಜೀವ್ ರಜಪೂತ್, ಯಶಸ್ವಿನಿ ಸಿಂಗ್ ದೆಸ್ವಾಲ್, ದೀಪಕ್ ಕುಮಾರ್, ಚಿಂಕಿ ಯಾದವ್, ತೇಜಸ್ವಿನಿ ಸಾವಂತ್, ಐಶ್ವರಿ ತೋಮರ್, ಅಂಗದ್ ಬೈಜ್ವ, ಮೈರಜ್ ಅಹ್ಮದ್ ಖಾನ್ ಗಳೆಲ್ಲರೂ ಸೇರಿ ಕಲೆಹಾಕಿದ ಬಂಗಾರದ ಪದಕಗಳ ಸಂಖ್ಯೆ 22, ಅದರಲ್ಲಿ 16 ಚಿನ್ನದ ಪದಕ.

ಈಗಾಗಲೇ 16 ಒಲಂಪಿಕ್ ಕೋಟ ಸ್ಥಾನಗಳನ್ನು ಗಳಿಸಿರುವ ಷೂಟಿಂಗ್ ತಂಡದತ್ತ ಜನರೆಲ್ಲರ ಚಿತ್ತ ಹರಿದಿದೆ. ಕಳೆದ ವರ್ಷದ ಸಾಧನೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಿದ್ಧತೆ ನಡೆಸುತ್ತಿದೆ.

ಭಾರತದ ಕುಸ್ತಿ ಪಟುಗಳು ಮತ್ತು ಬಾಕ್ಸಿಂಗ್ ಪಟುಗಳೂ ಅತ್ಯುತ್ತಮ ಸಾಧನೆ ನೀಡಿದ್ದು ಪ್ರಸಕ್ತ ವರ್ಷದ ಟೋಕಿಯೋ ಒಲಂಪಿಕ್ಸ್ ನಲ್ಲಿ ದೇಶದ ಒಟ್ಟಾರೆ ಸಾಧನೆ ಆಶಾದಾಯಕವಾಗಿ ಪರಿಣಮಿಸುವ ಸೂಚನೆಗಳಿವೆ.