ಪರಿಪೂರ್ಣ ಕಲಾವಿದೆ ರೇಖಾದಾಸ್‌ಗೆ ಗೌರವ ಡಾಕ್ಟರೇಟ್

ಪರಿಪೂರ್ಣ ಕಲಾವಿದೆ ರೇಖಾದಾಸ್‌ಗೆ ಗೌರವ ಡಾಕ್ಟರೇಟ್

ರೇಖಾ ದಾಸ್, ಕನ್ನಡ ಸಿನಿಪ್ರೇಕ್ಷಕರ ಮನದಲ್ಲಿ ಎಂದಿಗೂ ಅಚ್ಚಳಿಯದೇ ಉಳಿಯೋ ಹಾಸ್ಯ ಕಲಾವಿದೆ. ಬಾಲಕಲಾವಿದೆಯಾಗಿ ಸಿನಿಜರ್ನಿ ಆರಂಭಿಸಿದ ರೇಖಾ ದಾಸ್, ಇಂದಿಗೂ ಕಲೆಗಾಗಿಯೇ ತಮ್ಮ ಬದುಕನ್ನು ಮೀಸಲಿಟ್ಟಿದ್ದಾರೆ.

14ರ ಹರೆಯದರಲ್ಲೇ ನಾಟಕಗಳಲ್ಲಿ ತೊಡಗಿಸಿಕೊಂಡ ರೇಖಾ ಇದುವರೆಗೂ 5000ಕ್ಕೂ ಹೆಚ್ಚು ನಾಟಕ, 600ಕ್ಕೂ ಅಧಿಕ ಸಿನಿಮಾ, ಹಾಗೂ 400 ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಬಣ್ಣದ ಜಗತ್ತನ್ನು ಬದುಕಾಗಿ ಆಯ್ಕೆ ಮಾಡಿಕೊಳ್ಳೋ ಪ್ರತಿಯೊಬ್ಬ ಕಲಾವಿದನಿಗೂ ಕಷ್ಟ- ನೋವುಗಳು ಉಡುಗೊರೆಯಾಗಿ ಬರುತ್ತವೆ. ಎಲ್ಲೋ ಬೆರಳೆಣಿಕೆ ಕಲಾವಿದರನ್ನು ಹೊರತು ಪಡಿಸಿದ್ರೆ, ಸಾಕಷ್ಟು ಕಲಾವಿದರ ಹಿಂದೆ ಕಷ್ಟದ ದಿನಗಳು ಇದ್ದೇ ಇರುತ್ತವೆ. ಅಂಥ ಮುಳ್ಳಿನ ಹಾದಿಯಲ್ಲೇ ಸಾಗಿಬಂದ ಕಲಾವಿದೆ ರೇಖಾದಾಸ್ ಗೆ  ವರ್ಲ್ಡ್ ತಮಿಳು ಕ್ಲಾಸಿಕಲ್‌ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಕಲಾವಿದರಾಗಿ ಮಿಂಚೋಕೆ ಕಲೆಯೆಷ್ಟು ಮುಖ್ಯವೋ ಈಗಿನ ದಿನಮಾನದಲ್ಲಿ ಸೌಂದರ್ಯವೂ ಅಷ್ಟೇ ಮುಖ್ಯ. ರೇಖಾದಾಸ್ ಕೂಡ ಸ್ಪುರದ್ರೂಪಿ. ಯಾವುದೇ ಪಾತ್ರವನ್ನು ನಿಭಾಯಿಸಬಲ್ಲ ಕಲೆ, ನಟನಾ ಕೌಶಲ್ಯ, ಆತ್ಮವಿಶ್ವಾಸ ರೇಖಾದಾಸ್ ರನ್ನು ಇವತ್ತು ಈ ಸ್ಥಾನಕ್ಕೆ ತಂದು  ನಿಲ್ಲಿಸಿದೆ. ಮೂಲತಃ ಕರ್ನಾಟಕದವರಲ್ಲದೇ ಹೋದ್ರು ಸುಲಲಿತವಾಗಿ ಕನ್ನಡ ಮಾತನಾಡೋ ನಟಿ ಈಕೆ. ಕಲೆಗೆ ಮೇಲುಕೀಳು ಅನ್ನೋ ಬೇಧಭಾವವಿರೋದಿಲ್ಲ. ಅಂತೆಯೇ ರೇಖಾದಾಸ್ ಕೂಡ ತಮಗೆ ಯಾವುದೇ ನಾಟಕ, ಸಿನಿಮಾ, ಧಾರಾವಾಹಿಗಳು ಒಲಿದು ಬಂದ್ರು ನಟಿಸಿ ಸೈ ಎಸಿನಿಕೊಂಡಿದ್ದಾರೆ. ನಾಟಕಗಳಿಂದ ಬಣ್ಣ ಹಚ್ಚಲಾರಂಭಿಸಿದ ರೇಖಾದಾಸ್ ಮೊದಲ ಚಿತ್ರ ಕಂಪನ. ಟೈಗರ್ ಪ್ರಭಾಕರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ನಾಯಕಿಯ ಸ್ನೇಹಿತೆಯಾಗಿ ರೇಖಾ ಕಾಣಿಸಿಕೊಂಡಿದ್ರು. ನೇಪಾಳ ಮೂಲದವರಾದ ರೇಖಾ, ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಕನ್ನಡ ಕಲಿಯೋಕೆ ಹರಸಾಹಸ ಪಟ್ಟಿದ್ರಂತೆ. ರೇಖಾರ ಅರ್ಧಂಬರ್ಧ ಕನ್ನಡ ಕೇಳಿ ನಕ್ಕು, ಅವಮಾನಿಸಿದ್ದೂ ಇದೆಯಂತೆ. ಶ್ರದ್ಧೆಯಿಂದ ಕಲಿಯುವವರಿಗೆ ಯಾವುದು ಅಸಾಧ್ಯವಲ್ಲ ಅನ್ನೋ ಹಾಗೆ ಕ್ರಮೇಣ ನಟಿ ರೇಖಾ ದಾಸ್ ಕನ್ನಡ ಕಲಿತು ಯಾವುದೇ ಪಾತ್ರ ಕೊಟ್ರು ಲೀಲಾಜಾಲವಾಗಿ ನಟಿಸೋ ಚಾಕಚಕ್ಯತೆ ಹೊಂದಿದ್ರು.

 ದಶಕದ ಹಿಂದಿನ ಸಿನಿಮಾಗಳಲ್ಲಂತೂ ಕಾಮಿಡಿ ಪಾತ್ರಗಳಲ್ಲಿ ರೇಖಾದಾಸ್ ಬಹುತೇಕ ಕಾಣಿಸಿಕೊಳ್ತಿದ್ರು. ತಂದೆ ಮಗಳ ಬಾಂಧವ್ಯದ ಕಥೆಯಾದ್ರೆ ಅಲ್ಲೊಂದು ಹಾಸ್ಯದ ಎಳೆ, ಗಂಡ ಹೆಂಡತಿ ಹಾಸ್ಯ ಸನ್ನಿವೇಶದಲ್ಲಿ ಅಲ್ಲೊಂದು ರೀತಿಯ ಹಾಸ್ಯದ ಕಂಪು ಬೀರ್ತಿದ್ರು. ಕಾಮಿಡಿ ಪಾತ್ರಗಳ ಬೆಸ್ಟ್ ಪೇರ್ ಅಂಥ ಬಂದ್ರೆ ಟೆನ್ನಿಸ್ ಕೃಷ್ಣ ಹಾಗೂ ರೇಖಾದಾಸ್ ಕಣ್ಮುಂದೆ ಬರ್ತಾರೆ. ಸಿಂಹದ ಮರಿ ಇನ್ನಿತರ ಸಿನಿಮಾಗಳ ಹಾಸ್ಯ ಸನ್ನಿವೇಶಗಳಲ್ಲಿ ಇವ್ರದ್ದೇ ಕಾರುಬಾರು. ಸದ್ಯ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗಿರೋದ್ರಿಂದ ನಟಿ ರೇಖಾದಾಸ್ ಮತ್ತೆ ರಂಗಭೂಮಿಯತ್ತ ಮುಖ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ನಾಟಕ ಕಂಪೆನಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇಷ್ಟು ದಿನ ಬರೀ ನಟಿ ಹಾಗೂ ಹಾಸ್ಯಕಲಾವಿದೆಯಾಗಿದ್ದ ರೇಖಾದಾಸ್ ಇನ್ಮುಂದೆ ಡಾಕ್ಟರ್ ರೇಖಾದಾಸ್.