15 ದಿನಗಳಲ್ಲಿ 4ನೇ ಸ್ವರ್ಣ ಗೆದ್ದ ಹಿಮಾದಾಸ್

15 ದಿನಗಳಲ್ಲಿ 4ನೇ ಸ್ವರ್ಣ ಗೆದ್ದ ಹಿಮಾದಾಸ್

ನವದೆಹಲಿ: ಯೂರೋಪಿನಲ್ಲಿ ಈವರೆಗೆ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್ ನಲ್ಲಿ 2 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಲ್ಲದೇ, ಬುಧವಾರ ನಡೆದ ಮತ್ತೊಂದು ಪಂದ್ಯದಲ್ಲಿ ಚಿನ್ನ ಗೆಲ್ಲುವ ಮೂಲಕ ಕೇವಲ 15 ದಿನದ ಅಂತರದಲ್ಲಿ ಭಾರತದ ಹಿಮಾದಾಸ್ ಒಟ್ಟು 4 ಚಿನ್ನದ ಪದಕ ಗೆದ್ದು, ಭಾರತದ ಕ್ರೀಡಾಭಿಮಾನಿಗಳಲ್ಲಿ ಅಭಿಮಾನ ಹೆಚ್ಚಿಸಿಕೊಂಡಿದ್ದಾರೆ.

ಜೆಕ್ ಗಣರಾಜ್ಯದಲ್ಲಿ ನಡೆಯುತ್ತಿರುವ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್ನಲ್ಲಿ  200ಮೀ. ಓಟವನ್ನು ಅವರು 23.25 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ಮತ್ತೊಬ್ಬ ಓಟಗಾರ್ತಿ ವಿಸ್ಮಯ ಅವರು 200 ಮೀ ಅಂತರವನ್ನು 23.43 ಸೆಕೆಂಡ್ ಗಳಲ್ಲಿ ಕ್ರಮಿಸುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.

ಜು. 2 ರಿಂದ ಈವರೆಗೂ ಹಿಮಾದಾಸ್ ಒಟ್ಟು 4 ಚಿನ್ನದ ಪದಕ ಗೆದ್ದಿದ್ದಾರೆ. ಜು .2 ರಂದು ಪೊಲೆಂಡ್ ನಲ್ಲಿ  ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು, 23.65 ಸೆಕೆಂಡ್ ಗಳಲ್ಲಿ  ಓಟವನ್ನು ಮುಗಿಸಿ ಮೊದಲ ಚಿನ್ನ ಗೆದ್ದಿದ್ದರು. ನಂತರ, ಜು. 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್ ನಲ್ಲಿ  ಅಸ್ಸಾಂ ಓಟಗಾರ್ತಿ 23.97 ಸೆಕೆಂಡ್ ಗಳಲ್ಲಿ ಕ್ರಮಿಸಿ 2ನೇ  ಚಿನ್ನ ಗೆದ್ದಿದ್ದರು.

ಜತೆಗೆ, ಕೇರಳ ಓಟಗಾರ್ತಿ ವಿಸ್ಮಯ ಅವರು 24.06 ಸೆಕೆಂಡ್ ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು.

ಜು.13 ರಂದು ಝೆಕ್ ಗಣರಾಜ್ಯದ ಕ್ಲಾಡ್ನೊ ಅಥ್ಲೆಟಿಕ್ಸ್ ನಲ್ಲಿ  200 ಮೀ ಸ್ಪರ್ಧೆಯಲ್ಲಿ 23.43 ಸೆಕೆಂಡ್‌ ಗಳಲ್ಲಿ  ಪೂರ್ಣಗೊಳಿಸುವ ಮೂಲಕ 3 ನೇ ಚಿನ್ನದ ಪದಕ ಗೆದ್ದಿದ್ದರು.