ಹೈಕೋರ್ಟ್‌ ಮೆಟ್ಟಿಲೇರಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನೇಮಕಾತಿ ಪ್ರಕರಣ

ಹೈಕೋರ್ಟ್‌ ಮೆಟ್ಟಿಲೇರಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನೇಮಕಾತಿ ಪ್ರಕರಣ

ಬೆಂಗಳೂರು:ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಡಾ.ಸುಧೀಂದ್ರರಾವ್ ಅವರನ್ನು ನೇಮಿಸಿರುವುದನ್ನು  ನೇಮಕ ಪ್ರಶ್ನಿಸಿ ವಕೀಲರೊಬ್ಬರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಸಲ್ಲಿಸಿದ್ದಾರೆ.

ವಕೀಲ ಉಮಾಪತಿ ಎಂಬುವವರು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದು, ಸರ್ಕಾರದ  ನಿಯಮಗಳನ್ನು ರಚಿಸದೇ ನಿಗದಿತ ಅರ್ಹತೆ ಇಲ್ಲದವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶದಂತೆ  ಅಧ್ಯಕ್ಷ ನೇಮಕಾತಿಗೆ ನಿಯಮಗಳನ್ನು ರಚಿಸಬೇಕು, ಹೀಗಾಗಿ ಸುಧೀಂದ್ರರಾವ್ ಅವರ ನೇಮಕಾತಿ ಆದೇಶವನ್ನು ರದ್ದುಗೊಳಿಸುವಂತೆ ಉಮಾಪತಿ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಈ ಮುಂದೆ ‘ದಿ ಡೆಕ್ಕನ್ ನ್ಯೂಸ್‌ ವರದಿ ಮಾಡಿತ್ತು.

ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ರೂಪಿತವಾಗಿರುವ ನಿಯಮಾವಳಿಗಳ ಕರಡು ಪ್ರತಿ ಸರ್ಕಾರದ ಹಂತದಲ್ಲಿದೆ. ಇದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ವಿಚಾರ ಬಾಕಿ ಇರುವಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತರಾತುರಿಯಲ್ಲಿ ಸುಧೀಂದ್ರರಾವ್ ಅವರನ್ನು ನೇಮಿಸಲು ಪರಿಸರ ಇಲಾಖೆಗೆ ಟಿಪ್ಪಣಿ ಕಳಿಸಿದ್ದರು.

ಲಾಬಿಗೆ ಮಣೆ ಹಾಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಡಾ ಸುಧೀಂದ್ರರಾವ್ ಅವರ ನೇಮಕಾತಿಗೆ ಅನುಮೋದಿಸಿದ್ದರು.

ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳ ಹುದ್ದೆಯನ್ನು ಭರ್ತಿ ಮಾಡುವಾಗ ಜಾಹೀರಾತು ನೀಡಿ ಆ ಮೂಲಕ ಅತ್ಯುತ್ತಮ ಪ್ರತಿಭಾವಂತ ಅಭ್ಯರ್ಥಿಗಳನ್ನು ನೇಮಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನೀಡಿದ್ದ ಆದೇಶವನ್ನು ಉಲ್ಲಂಘಿಸುವ ಮೂಲಕ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವೂ ನ್ಯಾಯಾಂಗ ನಿಂದನೆ ಗುರಿಯಾಗುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಡೆಕ್ಕನ್‌ ನ್ಯೂಸ್‌ ವರದಿಯಲ್ಲಿ ಉಲ್ಲೇಖಿಸಿತ್ತು.

ಅದೇ ರೀತಿ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳ ಹುದ್ದೆಯನ್ನು ಭರ್ತಿ ಮಾಡುವಾಗ ಜಾಹೀರಾತು ನೀಡಬೇಕಲ್ಲದೆ ಈ ಹುದ್ದೆಗಳಿಗೆ ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸರ್ಕಾರಿ, ಖಾಸಗಿ ಅಥವಾ ಶಿಕ್ಷಣ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳಿಗೂ ಸಹ ಅವಕಾಶ ಕಲ್ಪಿಸಬೇಕು ಎಂದೂ ಆದೇಶಿಸಿದೆ. ಆದರೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮಂಡಳಿ ಅಧ್ಯಕ್ಷ ಹುದ್ದೆಗೆ ಭರ್ತಿ ಮಾಡಲು ಇನ್ನೂ ಜಾಹೀರಾತು ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಜೇಂದ್ರಸಿಂಗ್ ಭಂಡಾರಿ ಮತ್ತು ಉತ್ತರಾಖಂಡ ರಾಜ್ಯ ಸರ್ಕಾರದ ಮಧ್ಯೆ ನಡೆಯುತ್ತಿರುವ  ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸ್ವತಂತ್ರಕುಮಾರ್ ಅಧ್ಯಕ್ಷತೆಯ ರಾಷ್ಟ್ರೀಯ ಹಸಿರು ಪೀಠ  ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯ್ದೆ 1974ರ ಸೆಕ್ಷನ್ 4(2)(ಎ) ಅನ್ವಯ ಅರ್ಹತೆಯನ್ನು ಹೊಂದಿರದ ವ್ಯಕ್ತಿಗಳನ್ನು ನೇಮಿಸುತ್ತಿರುವುದಕ್ಕೆ ಆಕ್ಷೇಪ ಎತ್ತಿತ್ತು.

ಅಲ್ಲದೆ ಈ ಸಂಬಂಧ ಹೊರಡಿಸಿದ್ದ ಆದೇಶದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಜಲ(ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್ 4(2)(ಎ) ಅನ್ವಯ ಹೊಂದಿರಬೇಕಾದ ವಿದ್ಯಾರ್ಹತೆ, ವಿಶೇಷ ಜ್ಞಾನ ಹಾಗೂ ಪ್ರಾಯೋಗಿಕ ಅನುಭವಗಳ ವಿವರಣೆ ನೀಡಬೇಕಲ್ಲದೆ ಈ ಆದೇಶ ಹೊರಡಿಸಿದ 3 ತಿಂಗಳೊಳಗಾಗಿ ಜಲ ಮತ್ತು ವಾಯು ಕಾಯ್ದೆಗಳಡಿಯಲ್ಲಿ ನಿಯಮಾವಳಿಗಳನ್ನು ರೂಪಿಸಲು ಆದೇಶಿಸಿತ್ತು.

ಮೈತ್ರಿ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಡಾ ಸುಧಾಕರ್ ಅವರನ್ನು ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆ ನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ಡಾ ಸುಧಾಕರ್ ಅವರು ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ಕಳೆದ ಒಂದು ವರ್ಷದಿಂದ ಈ ಹುದ್ದೆ ಭರ್ತಿಯಾಗಿರಲಿಲ್ಲ.