ಆಮ್ ಆದ್ಮಿ ಪಕ್ಷವು ಐತಿಹಾಸಿಕ ಗೆಲುವು ದಾಖಲಿಸಲು ಕಾರಣವಾದ 5 ಅಂಶಗಳು

ಆಮ್ ಆದ್ಮಿ ಪಕ್ಷವು ಐತಿಹಾಸಿಕ ಗೆಲುವು ದಾಖಲಿಸಲು ಕಾರಣವಾದ 5 ಅಂಶಗಳು

ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಲಾಗಿದ್ದು, 70 ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 62 ಸ್ಥಾನಗಳನ್ನು ಗೆದ್ದಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) 8 ಕ್ಷೇತ್ರಗಳನ್ನು ಪಡೆದರೆ, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ.

ಆಮ್ ಆದ್ಮಿ ಪಕ್ಷವು ಐತಿಹಾಸಿಕ ಗೆಲುವು ದಾಖಲಿಸಲು 5 ಕಾರಣಗಳು ಇಲ್ಲಿವೆ:

ಕೇಜ್ರಿವಾಲ್ ಅವರ ವರ್ಚಸ್ಸು

ಅರವಿಂದ್ ಕೇಜ್ರಿವಾಲ್ ಅವರು 2012ರಲ್ಲಿ ಅಣ್ಣಾ ಹಜಾರೆ ಚಳವಳಿಯ ನಂತರ ರಾಜಕೀಯ ಚೊಚ್ಚಲ ಪ್ರವೇಶ ಮಾಡಿದರು. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ಪ್ರಚಾರಗಳನ್ನು ತಮ್ಮ ಮೇಲೆ ಕೇಂದ್ರೀಕರಿಸಿದರು. ಸರಳ ಹಾಗೂ ಸ್ವಚ್ಛ ಆಡಳಿತದ ಭರವಸೆಯನ್ನು ನೀಡಿ ದೆಹಲಿ ಜನರ ಮನಗೆದ್ದು ಮೊದಲ ಬಾರಿಯ ಆಡಳಿತದಲ್ಲಿ ನಡೆಸಿ ಮತದಾರರಲ್ಲಿ ನೆಲೆ ಕಂಡುಕೊಂಡರು. ಯಾರೂ ನಿರೀಕ್ಷೆ ಮಾಡಲು ಮಟ್ಟಿನಲ್ಲಿ ದೆಹಲಿಯ ಗದ್ದುಗೆಯನ್ನು 2015 ರಲ್ಲಿ ಕೇಜ್ರಿವಾಲ್‌ ಹಿಡಿದರು. ಅವರು ಸಾರ್ವಜನಿಕ ಸಭೆಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಮತದಾರರೊಂದಿಗೆ ವೈಯಕ್ತಿಕ ಸಂಪರ್ಕವನ್ನು ಬೆಳೆಸಿಕೊಂಡರು. ಸಾಮಾಜಿಕ ಜಾಲತಾಣಗಳನ್ನು ಬಳಸಿ ದೆಹಲಿ ಜನರನ್ನು ತಲುಪುವ ಕೆಲಸವನ್ನು ಪಕ್ಷ ಮಾಡಿದೆ. ಅದರಲ್ಲಿ ಯಶಸ್ಸನ್ನು ಕಂಡಿದೆ. ಸರ್ಕಾರದ ಯೋಜನೆಗಳು ಹಾಗೂ ಕೆಲಸ ಕಾರ್ಯಗಳನ್ನು ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ವ್ಯವಸ್ಥಿತವಾಗಿ ತಲುಪಿಸಲಾಗಿತ್ತು. ಎಎಪಿಯ ಚುನಾವಣಾ ಘೋಷಣೆ 'ಅಚೆ ಬೀಟೆ ಪಾಂಚ್ ಸಾಲ್ - ಲಗೆ ರಾಹೋ ಕೇಜ್ರಿವಾಲ್' ಎಂಬ ಬ್ರಾಂಡ್ ಕೇಜ್ರಿವಾಲ್ ಅವರನ್ನು ವೈಭವೀಕರಿಸಿತು.

ಉಚಿತ… ಉಚಿತ…

ಕೇಜ್ರಿವಾಲ್ ಅವರು ಚುನಾವಣೆಗೆ ತಿಂಗಳುಗಳ ಮುಂಚೆಯೇ ಪ್ರಕಟಣೆ ನಡೆಸಿದರು, ಇದು ಪ್ರತಿಸ್ಪರ್ಧಿಗಳನ್ನು ಕಂಗೆಡಿಸಿತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 200 ಯೂನಿಟ್‌ಗಳವರೆಗೆ ವಿದ್ಯುತ್ ಉಚಿತ, ನೀರು ಪೂರೈಕೆ, ವೈ-ಫೈ ಉಚಿತ, ಹಿರಿಯ ನಾಗರಿಕರಿಗೆ ಉಚಿತ ತೀರ್ಥಯಾತ್ರೆಗಳು ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು.  2020 ವಿಧಾನಸಭಾ ಚುನಾವಣೆಯಾ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪ್ರಯಾಣ, ಮಹಿಳೆಯರ ಭದ್ರತೆಗಾಗಿ 'ಮೊಹಲ್ಲಾ ಮಾರ್ಷಲ್'ಗಳ ನೇಮಕ ಸೇರಿದಂತೆ ಹತ್ತು ಪ್ರಮುಖ ಭರವಸೆಯನ್ನು ನೀಡಿತ್ತು. ಅಲ್ಲದೇ, ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ 300,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ಸರ್ಕಾರ ಘೋಷಿಸಿತು.

ಸ್ಥಳೀಯ ಸಮಸ್ಯೆಗಳ ಮೇಲೆ ಹೆಚ್ಚಿನ ಒತ್ತು

ಎಎಪಿಯ ಭರ್ಜರಿ ಗೆಲುವು ಅಭಿವೃದ್ಧಿಯ ಆಡಳಿತದಿಂದ ಪಕ್ಷವು ದೆಹಲಿಯ ಜನರ ಹೃದಯವನ್ನು ಗೆದ್ದಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಖಾಸಗಿ ಶಾಲೆಗಳು ತಮ್ಮ ಶುಲ್ಕವನ್ನು ಅನಿಯಂತ್ರಿತವಾಗಿ ಹೆಚ್ಚಿಸಲು ಕೇಜ್ರಿವಾಲ್ ಅನುಮತಿಸಲಿಲ್ಲ. ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಲಾಯಿತು. ದೆಹಲಿಯ ಸರ್ಕಾರಿ ಶಾಲೆಗಳ ಅಭಿವೃದ್ದಿ, ಕಟ್ಟಡ ನಿರ್ಮಾಣ, ಶಾಲೆಗಳಿಗೆ ಶಿಕ್ಷಕರ ನೇಮಕ ಹಾಗೂ ಗುಣಮಟ್ಟದ ಶಿಕ್ಷಣದತ್ತ ಗಮನಹರಿಸಿತು. ರೋಗಿಗಳು ಹೆಚ್ಚು ನಿಯಮಿತವಾಗಿ ಔಷಧಿಗಳನ್ನು ಪಡೆಯುವುದರೊಂದಿಗೆ ದೆಹಲಿ ಸರ್ಕಾರಿ ಆಸ್ಪತ್ರೆಗಳ ಆಡಳಿತವು ಸುಧಾರಿಸಿತು.

ಸಕಾರಾತ್ಮಕ ಕ್ಯಾಂಪೇನ್

ಎಎಪಿ ಕಳೆದ ಐದು ವರ್ಷಗಳಲ್ಲಿ ಸರ್ಕಾರದ ಸಾಧನೆಗಳನ್ನು ಸಭೆಗಳ ನಡೆಸುವುದರ ಮೂಲಕ ಹೈಲೈಟ್ ಮಾಡಲು ಗಮನಹರಿಸಲು ನಿರ್ಧರಿಸಿತು. ಶಹೀನ್ ಬಾಗ್ ಮತ್ತು ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಸಿಎಎ ವಿರೋಧಿ ಪ್ರಚೋದನೆಯ ಸುತ್ತ ಸುತ್ತುತ್ತಿದ್ದ ದ್ವೇಷದ ರಾಜಕೀಯದಿಂದ ಪಕ್ಷವು ದೂರವಿತ್ತು. ಅರವಿಂದ್‌ ಕೇಜ್ರಿವಾಲ್‌ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧವಾದ ನಿಲುವನ್ನು ಹೊಂದಿದ್ದರೂ ಬಹಿರಂಗವಾಗಿ ಎಲ್ಲಿಯೂ ಬೆಂಬಲವನ್ನು ಸೂಚಿಸಿಲ್ಲ.

ಎಕೆ-ಪಿಕೆ ಜೋಡಿ

ರಾಜಕೀಯ ಚಾಣಕ್ಯ ಪ್ರಶಾಂತ್ ಕಿಶೋರ್ ಹಾಗೂ ಕೇಜ್ರಿವಾಲ್ ಅವರ ರಾಜಕೀಯ ತಂತ್ರಗಾರಿಕೆ ಚೆನ್ನಾಗಿ ಕೆಲಸ ಮಾಡಿದೆ. ಪ್ರಧಾನಿ ಮೋದಿಯವರ 2014 ರ ಚುನಾವಣೆಯ ಯಶಸ್ಸು ಮತ್ತು 2015 ರಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಗೆಲುವಿನ ಹೆಗ್ಗಳಿಕೆಗೆ ಕಿಶೋರ್ ಪಾತ್ರರಾಗಿದ್ದಾರೆ. ಸಿಎಂ ಅರವಿಂದ್​​ ಕೇಜ್ರಿವಾಲ್​​​ ಕೂಡ ಪ್ರಶಾಂತ್​​​ ಕಿಶೋರ್​​​ ಅವರ ಐ-ಪ್ಯಾಕ್ ಶಕ್ತಿ ಪಡೆಯುವಲ್ಲಿ ಸಫಲರಾಗಿದ್ದಾರೆ. ಜೊತೆಗೆ ದೆಹಲಿಯ ಮೇಲೆ ಪರಿಣಾಮ ಬೀರುವ, ಸಾಮಾನ್ಯ ಅಥವಾ ವಿವಾದಾಸ್ಪದ ಸಮಸ್ಯೆಗಳನ್ನು ಎದುರಿಸುವ ತಂತ್ರವನ್ನು ರೂಪಿಸಿದರು.