ಕಾವೇರಿ ಜಲಾನಯನ ಪ್ರದೇಶದಲ್ಲೇ ಹೆಚ್ಚು ಆತಂಕ : ಗಾಯದ ಮೇಲೆ ಬರೆ ಎಳೆದ ಅಧ್ಯಯನ ವರದಿ

ಕಾವೇರಿ ಜಲಾನಯನ ಪ್ರದೇಶದಲ್ಲೇ  ಹೆಚ್ಚು ಆತಂಕ : ಗಾಯದ ಮೇಲೆ ಬರೆ ಎಳೆದ ಅಧ್ಯಯನ ವರದಿ

ಉಕ್ಕಿ ಹರಿದ ಮಳೆಯಿಂದಾಗಿ ಅರ್ಧಕ್ಕರ್ಧ ರಾಜ್ಯ ಬಿಕ್ಕಳಿಸುತ್ತಿದ್ದರೆ, ಮುಂದೆಯೂ ಇಂಥದ್ದೇ ಗಂಡಾಂತರಗಳಿವೆ ಎಂದು ವೈಜ್ಞಾನಿಕ ಅಧ್ಯಯನಗಳು ಎಚ್ಚರಿಸಿವೆ.

ರಾಷ್ಟ್ರದ ಒಟ್ಟು 18 ಜಲಾನಯನ ಪ್ರದೇಶಗಳಲ್ಲಿ ದಕ್ಷಿಣ ಭಾರತದ ಕಾವೇರಿ ನದಿ ಅತಿ ಹೆಚ್ಚು ಪ್ರವಾಹ ಭೀತಿಗೆ ಸಿಲುಕುತ್ತೆ ಎಂದು ಗಾಂಧಿನಗರದ ಐಐಟಿ ಅಧ್ಯಯನ ಹೇಳಿದೆ. ಪರಿಸರ ಹಸಿರು ಮನೆ ಪರಿಣಾಮ ಇತ್ಯಾದಿಯಂಥವುಗಳಿಂದಾಗಿ ಪ್ರಕೃತಿ ವೈಪರೀತ್ಯವಾಗುತ್ತೆ. ಕಾವೇರಿಯಲ್ಲಿ 2020 ರಿಂದ 2059 ರ ಅವಧಿಯಲ್ಲಿ 18 ಸಲ; 2060 ರಿಂದ 2099 ರ ಅವಧಿಯಲ್ಲಿ 28 ಸಲ ಪ್ರವಾಹ ಆಗುತ್ತೆ ಎಂದಿದೆ.

ಉಳಿದ ಜಲಾನಯನ ಪ್ರದೇಶಗಳಿಗೆ ಹೋಲಿಸಿಕೊಂಡರೆ ಅತಿ ಹೆಚ್ಚು ಪ್ರವಾಹದ ಗಂಡಾಂತರ ಭವಿಷ್ಯದಲ್ಲೂ ಕಾದಿರುವುದು ಕಾವೇರಿ ನದಿಗೆ.ಹೋದ ವರ್ಷದ ಜಲಧಾರೆಗೆ ನಡುಗಿದ್ದ ಕೊಡಗು ಜಿಲ್ಲೆಯ ಬಹುತೇಕ ಭಾಗ ಇನ್ನೂ ಚೇತರಿಸಿಕೊಂಡಿರಲಿಲ್ಲ. ಅದರ ಬೆನ್ನಿಗಂಟಿಕೊಂಡೇ ಈ ಸಲವೂ ಬಂದ ಮಳೆಯಬ್ಬರಕ್ಕೆ ಮತ್ತೆ ಮುದುಡಿಕೊಂಡಿದೆ. ವೀರಾಜಪೇಟೆ ತಾಲೂಕಿನ ಬಾಳೆಲೆ ಪ್ರದೇಶದಲ್ಲಿ ವಾರ್ಷಿಕ ವಾಡಿಕೆ ಮಳೆಯೇ ಕಡಿಮೆ, ಪರಿಣಾಮವಾಗಿ ಕಾಫಿ, ಏಲಕ್ಕಿ, ಕಿತ್ತಳೆ, ಮೆಣಸು ಹದವಾಗಿ ಬೆಳೆಯುತ್ತೆ. ಆದರೆ ಈ ಸಲ ಇಲ್ಲಿಯೂ ಮಳೆ ಭಾರೀ ಅನಾಹುತವನ್ನೆಬ್ಬಿಸಿದೆ

ಲಕ್ಷ್ಮಣ ತೀರ್ಥ ಭರ್ತಿಯಾಗಿ ಹುಣಸೂರನ್ನೇ ದ್ವೀಪವನ್ನಾಗಿಸಿದರೆ, ಕಪಿಲೆಯಿಂದಾಗಿ ನಂಜನಗೂಡು ಆಧ್ರಗೊಂಡಿದೆ. ಹೇಮಾವತಿ, ಹಾರಂಗಿ ಭರ್ತಿಯಾಗಿ ಉಂಟಾಗಿರುವ ಪ್ರಮಾದಗಳು ಅನೇಕಾನೇಕ. ಇವೆಲ್ಲದರ ಒಟ್ಟು ಭರ್ತಿಯಾಗಿ ಕೆ.ಆರ್.ಎಸ್ ತುಂಬಿ ಕಾವೇರಿ ಕೊಳ್ಳ ಬೃಹತ್‍ ಗಾತ್ರದಲ್ಲಿ ಹರಿದು ಸಾಕಷ್ಟು ಹಾನಿಯಾಗಿದೆ. ತಮಿಳುನಾಡಿನ ಮೆಟ್ಟೂರು ಅಣೆಕಟ್ಟೆಯ ಬಾಗಿಲು ತೆರೆದು ನೀರನ್ನ ಸಮುದ್ರದ ಪಾಲು ಮಾಡಲಾಗಿದೆ.

ಅಂತರರಾಜ್ಯ ನೀರಿನ ವಿವಾದವಾಗಿರುವ ಕಾವೇರಿ ಇನ್ನೂ ಬಗೆಹರಿಯದ ಸಮಸ್ಯೆಯೇ ಆಗಿರುವಾಗ, ಮುಂದಿನ ದಿನಗಳಲ್ಲೂ ಪ್ರವಾಹದ ಭೀತಿ ರಾಷ್ಟ್ರದ ಇತರೆ ಜಲಾನಯನಳಿಗಿಂತಲೂ ಹೆಚ್ಚು ಎಂಬ ಆತಂಕಕಾರಿ ವಿಚಾರವೂ ಬಯಲಾಗಿ, ಗಾಯದ ಮೇಲೆ ಬರೆ ಎಳೆದಿದೆ.