"ಬಳೆಗಾರ ಸಾಹೇಬ್ರು ಕುರ್ಚೆಕ ಪೇವಿಕಾಲ್ ಹಾಕಿ ಕುಂತಬಿಟ್ಟಾರ...."

ಏನಪಾ ಕಿಡಿ -ಗೇಡಿ ಯಾಕೋ ಅವಸರದಾಗ ಬೆಂಗಳೂರು ಬಸ್ ಇಳಿದ್ಯಲ್ಲ.....! ಯಾಕೋ...? ಏನ ಸಮಾಚಾರ...?

ಅಂತಾದ್ದೇನು ಇಲ್ರೀ... ಕಾಕಾರ... ನಮ್ಮ ಕಸಾಪ ಅಧ್ಯಕ್ಷ ಬಳೆಗಾರ ಮನು ಅಣ್ಣ ಮೊನ್ನೆ ಪೋನ್ ಮಾಡಿ "ಬಸಣ್ಣ ಅರ್ಜಂಟಾಗಿ ನೀನು ಬೆಂಗಳೂರಿಗೆ ಬರಬೇಕು ಅಂತ್ ತಾಕೀತ್ ಮಾಡಿದ್ರು..." ಅದಕ ಬೆಂಗಳೂರಿಗೆ ಹೋಗಿ ಬಳೆಗಾರ ಅಣ್ಣನ್ನ ಭೆಟ್ಟಿ ಆಗಿ ಇದ ಈಗ ಬೆಂಗಳೂರ ಬಸ್ ಇಳ್ಯಾಕ ಹತ್ತಿದ್ದೆ, ಅಷ್ಟರಾಗ ನೀವ್ ಸಿಕ್ಕಬಿಟ್ರೀ....

ಮಗನ.... "ಆರು ರೊಟ್ಟಿ ಕೊಟ್ರ ಅಕ್ಕನ ಕಡಿಗೆ, ಮೂರು ರೊಟ್ಟಿ ಕೊಟ್ರ ತಂಗಿ ಕಡಿಗೆ" ಅನ್ನೋ ಮಾತು ನಿನ್ನಂತವರನ್ನ ನೋಡೆ ಹುಟ್ಟಿರಬೇಕು....? ಅಲ್ಲಲೇ ಅವರ ಇಲೇಕ್ಷನ್ ಒಳಗ ಅವರ ವಿರುದ್ಧ ಕೆಲಸಾ ಮಾಡಿದ ಮಗಾ ನೀನು... "ಇಗ ಒಮ್ಮಿಕ  ಬಳಿಗಾರ ಬಳಗಾ ಸೇರಿ ಬಿಟ್ಟಿ, ಮತ್ತ ಯಾವಾಗ ಬಳಗ ಹರಕಂತೀ...?, ಅಂದಂಗ ಏನ ಅಂದ್ರಪಾ ನಿಮ್ಮ ಬಳೆಗಾರ ಸಾಹೇಬ್ರೂ......"

ನಾನು ಅವರಕಡೆ-ಇವ್ರಕಡೆ ಅಂತ ಹಂಗೇನೂ ಇಲ್ರೀ...ಕಾಕಾ. "ನಾನು ಎತಿಗೊಂಡವರ ಕೂಸು.. ! ಯಾರು ಎತಗೊಳ್ತಾರೋ ಅವರಕಡೆ ಹೊಕ್ಕೇನಿ". ನಮ್ಮ ಬಳೆಗಾರ ಸಾಹೇಬ್ರು ಕ.ಸ. ಇಲಾಖೆ ಸಾಹೇಬ್ರು ಇದ್ದಾಗಿಂದ ಪರಿಚಯಾ..... ಯಾವರ… ಸಣ್ಣ-ಪುಟ್ಟ ಕೆಲಸಾ ತಗೊಂಡು ಹೋದ್ರ... ಬಾ ಬಸಣ್ಣ ನಿ ನಮ್ಮೂರಾವಾ ಅದಿ ಅಂತ ಈ ಕೆಲಸಾ ಮಾಡಿಕೊಟ್ಟೇನಿ ನೋಡು..... ಹಗಲೆಲ್ಲ ನನ್ನ ಹತ್ರ ಬರಬ್ಯಾಡ ಅಂತ ಬೇದು ಕೆಲಸಾ ಮಾಡಿಕೊಡ್ತಿದ್ರು... ಈಗ ಅವರು ಕಷ್ಟದಾಗ ಅದಾರ್ರೀ.... ಅದಕ ಅವರನ್ನ ಭೇಟ್ಟಿಯಾಗಿ ಬಂದೆ.

ಅಂತಾದ್ದೇನಿತ್ತಪಾ ಕೆಲಸಾ.....?

ಅದರಿ.... ನಮ್ಮ ಬಳೆಗಾರ ಮನು ಅಣ್ಣ "ಕಸಾಪ ಅಧ್ಯಕ್ಷ ಸ್ಥಾನಕ್ಕ ಐದ್ ವರ್ಷದ ಮಟಾ ನಾನ ಮುಂದುವರೆವಾ ಅಂತ ಕಸಾಪ ಬಾಯಲಾಕ್ಕ ತಿದ್ದಪಡಿ ತಂದು ಐದ ವರ್ಷ ಕಸಾಪ ಕುರ್ಚೆದಮ್ಯಾಗ ಕುಂದ್ರಾಕ ಸಜ್ಜಾಗಿದ್ರು".  "ಆದ್ರ ಬಳಾ ಮಂದಿ ಇದು ತಪ್ಪು ಅಂತ ಕೋರ್ಟಿಗೆ ಹೋಗ್ಯಾರ..... ತೀರ್ಪು ಬರೋದು ಇನ್ನು ಬಾಕಿ ಐತಿ.... ಅದಕ ಬಳೆಗಾರ ಸಾಹೇಬ್ರು ಇದ ವಿಷಯಾ ಚರ್ಚೆ ಮಾಡಲಿಕ್ಕೆ ಕರೆದಿದ್ರು..... ಅದಕ ಹೋಗಿದ್ದೆ......

ಅಲ್ಲಲೇ "ಐಐಯ್ಯೋಎಸ್... ಐಎಎಸ್ ... ಅಧಿಕಾರಿ ಆಗಿ ಕುರ್ಚಿ ತಳ ಹತ್ತ ಮಟ ಅಧಿಕಾರ ನಡಿಸಿದ ಮಾರಾಯಗ... ಇನ್ನು ಕುರ್ಚಿ ಮ್ಯಾಲಿನ ವ್ಯಾಮೋಹ ಹೋಗಿಲ್ಲಲ್ಲೋ..." ? "ರಾಜಕಾರಣಿಗಳಿಗಿಂತಾ ಈ ಮಾಜಿ ಸರ್ಕಾರಿ ಅಧಿಕಾರಿಗೆ ಕುರ್ಚಿ ಮ್ಯಾಲ ಆಸೆ ಹೆಚ್ಚಾಗೇತಲ್ಲೋ...."  ಅಲ್ಲೋ ತಮ್ಮ ನೀ ಹೇಳಬೇಕಿತ್ತು. " ಸಾಹೇಬ್ರ ನೀವು ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಿಂತ ಹೊತ್ತಿನ್ಯಾಗ ಕಸಾಪ ಅಧ್ಯಕ್ಷರ ಅವಧಿ ಮೂರು ವರ್ಷ ಮಾತ್ರ ಇತ್ತು.. ನೀವು ಆಯ್ಕೆ ಆಗಿದ್ದು ಮೂರು ವರ್ಷಕ್ಕ ಮಾತ್ರ.... ಈಗ ಐದು ವರ್ಷ ನಾನು ಕಸಾಪ ಅಧ್ಯಕ್ಷನ ಕುರ್ಚೆ ಮ್ಯಾಲ ಕುಂಡ್ರತನಿ ಅಂದ್ರ ಅದನ್ನ ಜನ ಒಪ್ಪೋದಿಲ್ಲ. ಮರ್ಯಾದಿಯಿಂದ ನಿಮ್ಮ ಅಧಿಕಾರ ಮುಗದ ತಕ್ಷಣ ಮನಿಗೆ ಬರ್ರೀ ಅಂತ ತಿಳಿಸಿ ಹೇಳಬೇಕಿಲ್ಲ..." ?

ಅಲ್ರೀ ಪಾಟೀಲ ಕಾಕಾ "ಬಳೆಗಾರ ಸಾಹೇಬ್ರು.... ನನ್ನ ಕಡಿಂದ ಹೇಳಸಿಕೊಳ್ಳುವಷ್ಟ ಸಣ್ಣರೇನ್ರೀ....ಅವ್ರು ಈ ರಾಜ್ಯದ ಕಸ ಇಲಾಖೆ ಮುಖ್ಯಸ್ಥರಾಗಿ ಕೆಲಸಾ ಮಾಡ್ಯಾರ..... ಮೇಲಾಗ ಅವರಣ್ಣನವರು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದವರ್ರು. ಅವ್ರಿಗೆ ಹೆಂಗ್ಯರಿ.... ಹೇಳೋದು..." ?

ಹೌದು ..... ಈ ಕಸ ಇಲಾಖೆ ಅನ್ನಾಕ ಹತ್ತಿಯಲ್ಲೋ ಏನಿದರ ಅರ್ಥ?

ಇಷ್ಟ ಸಣ್ಣ ವಿಷಯಾನೂ ನಿಮಗ ಗೊತ್ತಿಲ್ಲಾಂದ್ರ ಹೆಂಗ್ಯ..? "ಕಸ ಇಲಾಖೆ ಅಂದ್ರ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಅಂತ ಅರ್ಥ.... "

ಹೌದಾ....ಭಾರೀ ಆತಲ್ಲೋ ..." ಅಂದಂಗ್ ನಿಮ್ಮ ಬಳೆಗಾರ ಸಾಹೇಬ್ರು ಐದ್ ವರ್ಷದ ಮಟ ಕಸಾಪ ಕುರ್ಚಿನ ಬಿಡಂಗ್ ಕಾಣೋದಿಲ್ಲ.. ಕುರ್ಚೆಕ ಪೇವಿಕಾಲ್ ಹಾಕಿ ಕುಂತ ಬಿಟ್ಟಾರ ಅನ್ನಂಗಾತು.....!".

ಅಲ್ರೀ ಕಾಕಾ "ಕಾನೂನು ಮುಂದ ಯಾರು ಸಣ್ಣೋರು ಅಲ್ಲ ..ದೊಡ್ಡೋರು ಅಲ್ಲ..ಕಾನುನೂ ಹೇಳಿದಂಗ್ ನಾವು ತಲಿ ಬಾಗಾಗ ಬೇಕು. ಕೋರ್ಟ ಎನ್ ಹೇಳ್ತತೈತೋ ಹಂಗ್ ನಮ್ಮ ಸಾಹೇಬ್ರು ಕೇಳ್ತಾರ.... ಕೇಳಾಕ ಬೇಕು...."

ಅಲ್ಲೋ ತಮ್ಮ "ಮೂರು ವರ್ಷ ಅಧಿಕಾರ ನಡೆಸಿದ ಮನುಷ್ಯಾಗ ಇಷ್ಟು ಅಧಿಕಾರದ ಹುಚ್ಚ ಇರಬಾರದು ......ನೀ ಏನಂತಿ..." ?

ನಾನು ಅದನ್ ಹೇಳಿನ್ರೀ ...ಆದ್ರ "ಅವ್ರು ಯಾರ ಮಾತ ಕೇಳದಂತ ಸ್ಥಿತಿ ಒಳಗ ಅದಾರ..... ಹೆಂಗ್ಯು ಮ್ಯಾಟರ್ ಕೋರ್ಟ ಕಟಕಟೆ ಹತ್ತೇತಿ. ತೀರ್ಪು ಬರವರ್ಗೂ ಕಾಯನಬಿಡ್ರೀ..."

ಆತು ಬಿಡೂ ತೀರ್ಪು ಬರಮಟಾ ಕಾಯೋಣು, ಅಂದಂಗ್ "ನಿಮ್ಮ ಸಾಹೇಬ್ರು ಕಸಾಪ ಕಾರಿನ್ಯಾಗ ಓಡಾಡ್ತಾರೋ ಸ್ವಂತ್ ಕಾರಿನ್ಯಾಗ ಓಡಾಡ್ತಾರೋ..." ?

ಅದು ಗೊತ್ತಿಲ್ರೀ.... ಆದ್ರ  ನಾನು ಬಾಳಾ ದಿವಸದ ಹಿಂದ ನೋಡಿದ ಹೊತ್ತಿನ್ಯಾಗ "ಕಸಾಪ ಕಾರು ಬಾಳಾ ಹಳೆದಾದಂಗ ಕಂಡಿತ್ತು..... ಅದಕ ಹೊಸ ಕಾರು ತಗೊಳ್ಳ್ರಿ ಅಂತ ಸಾಹೇಬ್ರಿಗೆ ಹೇಳಿದ್ದೇ....."

"ಹೊಸ ಕಾರು ಬ್ಯಾಡೋ ಬುಲ್ಡೋಜರ್ ತಗೊಂಡ್ರ ಚಲೋ ಆಕೈತಿ ಹೌದಿಲ್ಲ..."  ಹೆಂಗಿದ್ರೂ ಕಸಾಪದ ಕೆಲವು ಕಟ್ಟಡಗಳು ಹಳೇವು ಆಗ್ಯಾವು, ಬಲ್ಡೋಜರ ಇತ್ತು ಅಂದ್ರ ಹಳೆ ಬಿಲ್ದಿಂಗ್ ಕೆಡವಾಕೂ ಬರತೈತಿ.... ಒಡಾಡಾಕು ಬರತೈತಿ... ನಿಮ್ಮ ಸಾಹೇಬ್ರಿಗೆ ಹೇಳಿ ನೋಡು..."!

"ಅಂದ್ರ ಏನ್ ನಿಮ್ಮ ಮಾತಿನ ಅರ್ಥ!. ಅವರು ನನ್ನ ಹೊಡೆದು ಓಡಸಬೇಕಂತಿರೇನು.....? ಅಲ್ರೀ ಬಲ್ಡೋಜರ್ ಯಾಕ... ಬೇಕಂದ್ರ ಅವರು ಹೊಸಾ ಜೇಸಿಬಿನ ಖರೀದಿ ಮಾಡ್ತಾರ ಬಿಡ್ರೀ...." !

" ಅತ ಬಿಡ್ಪಾ ಬಲ್ಡೋಜರ-ಜಿಸಿಬಿ ಏನರ ಖರೀದಿ ಮಾಡ್ಲಿ ಬಿಡೂ... ಅಂದಂಗ ಇಲೇಕ್ಷನ್ ಹೆಂಗ್ಯ ಆದವಪಾ.." ..

" ಕೊಟ್ಟಾವ ಕೋಡಂಗಿ ಇಸಗಂಡಾವ ವೀರಭದ್ರ ಅನ್ನೋಹಂಗ್ ಇಲೇಕ್ಷನ್ ಆಗೇತಿ ನೋಡ್ರೀ.. ಮುನ್ನುಗ್ಗಿ ಯಾವಾ ರೊಕ್ಕಾ ಹೊಡದಾನ ಅವಾ ರೊಕ್ಕಾ ಮಾಡಿಕೊಂಡಾನ ಸುಮ್ಕ ಇದ್ದಾವ ಕೈಯಿಂದ ರೊಕ್ಕ ಖರ್ಚ ಮಾಡಿಕೊಂಡಾನ..."

 "ಅಂದ್ರ ಎರಡು ಪಕ್ಷದವ್ರು ರೊಕ್ಕಾ ಖರ್ಚು ಮಾಡಿಲ್ಲ ಅಚಿತಿ ಏನು" ?

"ಖರ್ಚು ಮ್ಯಾಡಾರೀ.... ಆದ್ರ ತಮ್ಮ ಕಟ್ಟಾ ಬೆಂಬಲಿಗ, ತಮ್ಮ ಜಾತಿಯವಾ ಅನ್ನೋದ ಪಕ್ಕಾ ಮಾಡಿಕೊಂಡು ರೊಕ್ಕಾ ಕೊಟ್ಟಾರ...."  " ಇನ್ನು ನಾವು ದೋಣಿ ಅಲೆ ಒಳಗ ತೇಲಿ ಬರ್ತಿವಿ.. ನಿಮಗ್ಯಾಕ ಕೊಡಬೇಕು ರೊಕ್ಕ... ಹಾದಿ ಒಳಗ ಹೊಂಟಿರೋ ನಾಯಿ ಸತಗಿ ದೋಣಿ ಹೆಸರು ಕೇಳಿದ್ರ ಬಂದ್ ಓಟ ಹಾಕೈತಿ ಅಂತಾ ವಾತಾವರಣ ಐತಿ.. ನಿಮಗ ರೊಕ್ಕಾ ಕೊಡಂಗಿಲ್ಲ.. ಬೇಕಂದ್ರ ಓಟ ಹಾಕ್ರೀ ಇಲ್ಲಾಂದ್ರ ಬಿಡ್ರೀ ಅಂತ ಕಪಾಳಕ ಹೊಡದಂಗ ದೋಣಿ ಪಾರ್ಟಿ ಕ್ಯಾಂಡಿಡೇಟು ಹೇಳ್ಯಾನ " " ಹಿಂಗಾಗಿ ರೊಕ್ಕ ಬರೋಬ್ಬರಿ ಸಿಕ್ಕಿಲ್ಲ ಅಂತ ಬಾಳ ಮಂದಿ ಸೆಟಗೊಂಡಿದ್ರು.... ಆಮ್ಯಾಕ ಕ್ಯಾಂಡಿಡೇಟ ಅಪ್ಪ ಬಂದು ರೊಕ್ಕ ಇಲ್ರೋ. ಕಡಿಮೆ ಅದಾವು ಅಷ್ಟಿಲ್ಲ ಇಷ್ಟ ಹಿಡ್ರೀ ಅಂತ ಕಡಿಮಿ ರೊಕ್ಕಾ ಕೊಟ್ಟ ಕಾರ್ಯಕರ್ತರನ್ನು ಸಮಾದಾನ ಮಾಡಿದ್ರಂತ.."

ಹೌದಾ ... "ಮತ್ತ ಈ ರಾಗಾ ಪಾರ್ಟಿಯವ್ರು ಹೆಚ್ಚಿಗೆ ರೊಕ್ಕಾ ಕೊಟ್ಟಾರಂತ ಹೌದ..."  "ಹೌದ್ರೀ...ದೋಣಿ ಪಾರ್ಟಿನ ನೋಡಿದ್ರ ರಾಗಾ ಪಾರ್ಟಿಯವರು ಹೆಚ್ಚಿಗೆ ರೊಕ್ಕ ಕೊಟ್ಟ ಜನರನ್ ಹಿಡ್ಕಳ್ಳಾಕ ಮುಂದಾಗಿದ್ರು.." " ಆದ್ರ ಎರಡು ಪಾರ್ಟಿಯವರ ರೊಕ್ಕ ಜನರನ್ ಮುಟ್ಟಿಲ್ಲ. ಏಜೆಂಟರ್ ಬಕ್ಕಣಾ ಸೇರ್ಯಾವು ನೋಡ್ರೀ...

 ಸರಿ ಬಿಡಪಾ ಇನ್ನು ಒಂದ ತಿಂಗಳ ಎರಡು ಪಾರ್ಟಿಯವರ ಹಣೆ ಬರಹ ಹೊರಗ ಬರಾಕ ಕಾಯಬೇಕು... ಮಳಿಮಾಡಾ ಆಗೇತಿ ನಡೆ ಹುಂಟುಂಟಲೇ ಮನಿ ಸೇರಿಕೊಳ್ಳಣೂ ನಡಿ ಎನ್ನುತ್ತಾ ಇಬ್ಬರು ಮನಯಕಡೆ ನಡೆದರು".