ನೋಡಿ ತಿಳಿ, ಆಡಿ ಕಲಿ

ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟಿಗರಾಗಿ ವರ್ಷಗಟ್ಟಲೆ ಆಡಿದವರಿಗೂ ಹೊಳೆಯದ ಹೊಳಹುಗಳನ್ನು ಹರ್ಷ ನೀಡುತ್ತಲೇ ಹೋಗುತ್ತಾರೆ. ಚರ್ವಿತ ಚರ್ವಣ ಶಬ್ದ, ನುಡಿಗಟ್ಟುಗಳು ಅವರಿಗೆ ವರ್ಜ್ಯ. ಪರಿಣತರುಗಳನ್ನೇ ಬೆಕ್ಕಸಬೆರಗಾಗಿಸುವಂತಹ ವೀಕ್ಷಕ ವಿವರಣೆ ಅವರದು. ಅಂತಹ ಹರ್ಷಾರನ್ನು ಅವರ ಸಹ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೆಕರ್ ವಿನಾ ಕಾರಣ ಟೀಕಿಸಿ ಟ್ವಿಟರಾಟಿಯಿಂದ ಮಂಗಳಾರತಿ ಎತ್ತಿಸಿಕೊಂಡಿದ್ದಾರೆ.

ನೋಡಿ ತಿಳಿ, ಆಡಿ ಕಲಿ

ಹರ್ಷ ಬೋಗ್ಲೆ ಭಾರತದಿಂದ ಹೊರಹೊಮ್ಮಿದ ಅಸಾಧಾರಣ ಕಾಮೆಂಟೇಟರ್ಗಳಲ್ಲಿ ಮೊದಲಿಗರು. ಹೈದರಾಬಾದ್ ನಲ್ಲಿ ಹುಟ್ಟಿ ಒಂದು ಹಂತದವರೆಗೆ ಕ್ರಿಕೆಟ್ ಆಡಿದ ಹರ್ಷಾಗೆ 18-19 ರ ವಯಸ್ಸಿನಲ್ಲೇ ಕ್ರಿಕೆಟ್ ಕಾಮೆಂಟರಿಗೆ  ಆಕಾಶವಾಣಿಯಿಂದ ಬುಲಾವ್ ಬಂದಿತು. ರಾಸಾಯನಿಕ ಶಾಸ್ತ್ರದಲ್ಲಿ ಬಿ ಟೆಕ್ ಪದವಿ ಗಳಿಸಿದ ಅವರಿಗೆ ಆ ವಿಷಯದಲ್ಲೂ ಅಪಾರವಾದ ಜ್ಞಾನ, ಆಸಕ್ತಿ. ಜಾಹಿರಾತು ಜಗತ್ತಿನಲ್ಲೂ ಪರಿಶ್ರಮ. ಆದರೆ ಉದ್ಯೋಗಕ್ಕಾಗಿ ಅರಸಿ, ಬಯಸಿದ್ದು ಕ್ರಿಕೆಟ್ ವೀಕ್ಷಕ ವಿವರಣೆಯನ್ನು. ಕ್ರಿಕೆಟ್ ಕುರಿತಂತೆ ಅವರ ಜ್ಞಾನಕ್ಕೆ ಎಲ್ಲೆಯೇ ಇಲ್ಲ. ಜ್ಞಾನಕ್ಕೆ ತಕ್ಕ ಭಾಷಾ ಪ್ರೌಢಿಮೆ. ಅದನ್ನು ನೋಡಿಯೇ, ಸುಮಾರು 27 ವರ್ಷಗಳ ಹಿಂದೆಯೇ ಆಸ್ಟ್ರೇಲಿಯನ್ ಬ್ರಾಡ್ಕಾಸ್ಟಿಂಗ್ ಕಂಪನಿ ಅವರನ್ನು ಆಸ್ಟ್ರೇಲಿಯಾಗೆ ಕರೆಸಿಕೊಂಡಿತ್ತು. ಆ ನಂತರ ಬಿಬಿಸಿಗೂ ಸೇವೆ ಸಲ್ಲಿಸಿದರು. ಅವರ ಸಾಧನೆಯ ಪಟ್ಟಿಯನ್ನು ಇಲ್ಲಿ ಕೊಡುವ ಉದ್ದೇಶ ನನಗಿಲ್ಲ. ಆದರೆ ಅವರ ಮಾತಿನ ಮೋಡಿಯ ತುಣುಕುಗಳ ಸ್ಯಾಂಪಲ್ ಕೊಟ್ಟು ಈ ಲೇಖನದ ವಿಷಯಕ್ಕೆ ಬರುತ್ತೇನೆ.

 ಆಯಾ ದೇಶಗಳ ತಂಡದ ಬ್ಯಾಟಿಂಗ್ ಆರ್ಡರ್ನಲ್ಲಿ ಕಟ್ಟ ಕಡೆಯಲ್ಲಿ ಆಡುವ ಎಲ್ಲಾ ಆಟಗಾರರದ್ದೇ ಒಂದು ತಂಡ ಕಟ್ಟಿದರೆ,  ಅಂತಹ ತಂಡದಲ್ಲೂ (ನರೇಂದ್ರ) ಹಿರ್ವಾನಿಗೆ ಬ್ಯಾಟ್ ಮಾಡಲು ಕಳುಹಿಸುವುದು ಕಟ್ಟ ಕಡೆಯಲ್ಲೇ.  (ಹಿರ್ವಾನಿ ಬ್ಯಾಟಿಂಗ್ ಬಗ್ಗೆ ಆಸ್ಟ್ರೇಲಿಯಾ ತಂಡದ ಖ್ಯಾತ ಮಾಜಿ ಕ್ಯಾಪ್ಟನ್ ಮತ್ತು ಕ್ರಿಕೆಟ್ ಕಾಮೆಂಟೇಟರ್ ಇಯನ್ ಚಾಪೆಲ್ ಕೇಳಿದ ಪ್ರಶ್ನೆಗೆ ಉತ್ತರವಾಗಿ.)
ಆತನ (ವಿರೇಂದರ್ ಸೆಹ್ವಾಗ್) ಕಣ್ಣಿಗೆ ಬಟ್ಟೆ ಕಟ್ಟಿ ದಟ್ಟವಾದ ವಾಹನ ಸಂಚಾರವಿರುವ ರಸ್ತೆಯ ನಡುವಿನಲ್ಲಿ ಓಡಾಡಲು ಬಿಟ್ಟರೂ ಆತನಿಗೆ ಯಾವುದೇ ವಾಹನ ಡಿಕ್ಕಿ ಹೊಡೆಯುವ ಸಾಧ್ಯತೆ ಇಲ್ಲ. (ಸೆಹ್ವಾಗ್ ಬ್ಯಾಟಿಂಗ್ ವೈಖರಿಯನ್ನು ವರ್ಣಿಸುತ್ತಾ.) ರಣಭೂಮಿಯಲ್ಲಿ ಎಲ್ಲ ಕಡೆಯಿಂದ ವೈರಿಗಳ ಗುಂಡುಗಳು ತನ್ನ ಸುತ್ತ ಬೀಳುತ್ತಿದ್ದರೂ ಅಪಾಯದಿಂದ ಪಾರಾಗಿ ಬಂದ ಯೋಧ ತನ್ನ ಊರಿನಲ್ಲಿ ಸೈಕಲ್ ಅಪಘಾತದಲ್ಲಿ ಸತ್ತಂತೆ. (ಉತ್ತಮ ಬೌಲರಲನ್ನು ಲೀಲಾಜಾಲವಾಗಿ ಎದುರಿಸಿದ ಸಚಿನ್ ತೆಂಡೂಲ್ಕರ್ ಇಂಗ್ಲೆಂಡ್ ಅರೆಕಾಲಿಕ ಬೌಲರ್ ಮೈಕೆಲ್ ವಾನ್ ಬೌಲಿಂಗಿಗೆ ಔಟಾದಾಗ ಉವಾಚ.)

ಒಂದೆಡೆ ಸರ್ಜನ್ (ತೆಂಡೂಲ್ಕರ್), ಮತ್ತೊಂದೆಡೆ ಕಟುಕ (ಎಂ ಎಸ್ ಧೋನಿ)
(ಅವರಿಬ್ಬರ ವಿಭಿನ್ನ ಶೈಲಿಯನ್ನು ಕುರಿತು.) ತಾನು ಔಟೆಂದು ನಾಳಿನ ದಿನಪತ್ರಿಕೆಗಳಲ್ಲಿ ಓದುವುದಕ್ಕೆ ಕಾಯುತ್ತಿದ್ದನೇನೋ. (ಸ್ಲಿಪ್ ಫೀಲ್ಡರ್ಗೆ ಕ್ಯಾಚ್ ಕೊಟ್ಟು ಔಟಾದರೂ ನಿರ್ಗಮಿಸದ ಆಸ್ಟ್ರೇಲಿಯಾ ಬ್ಯಾಟ್ಸಮನ್ ಮೈಕೆಲ್ ಕ್ಲಾರ್ಕ್ನ ಭಂಡಾಟದ ಬಗ್ಗೆ.)   ಭಾರತ ತಂಡವನ್ನು (ಇಂಗ್ಲೆಂಡ್ ವಿರುದ್ಧ) ರಕ್ಷಿಸಬಲ್ಲ ಒಬ್ಬನೇ ಒಬ್ಬ ಬ್ಯಾಟ್ಸಮನ್ (ನನ್ನ) ಪಕ್ಕದಲ್ಲಿ (ವೀಕ್ಷಕ ವಿವರಣೆಗಾರನಾಗಿ) ಕುಳಿತಿದ್ದಾರೆ.
(ಸೋಲುತ್ತಿದ್ದ ತಂಡಕ್ಕೆ ರಾಹುಲ್ ದ್ರಾವಿಡ್ ಅವಶ್ಯಕತೆ ಕುರಿತು.) ಹರ್ಷ ಬಾಯಿಂದ ಇಂತಹ ಜಾಣ್ಣುಡಿಗಳು ಕಾಸಿಗೊಂಡು, ಕೊಸರಿಗೆರಡು. ಲೆಕ್ಕವೇ ಇಲ್ಲ. ಟೋನಿ ಗ್ರೆಗ್, ಇಯನ್ ಚಾಪೆಲ್, ಗ್ರೆಗ್ ಚಾಪೆಲ್, ಜೆಫ್ರೆ ಬಾಯ್ಕಾಟ್, ಸುನಿಲ್ ಗವಾಸ್ಕರ್  ಮುಂತಾದ ಕ್ರಿಕೆಟ್ ಪಂಡಿತರ ನಡುವೆ ಆತ್ಮವಿಶ್ವಾಸ ತರುವ ಗಾಂಭೀರ್ಯದಲ್ಲಿ ಕುಳಿತು ಅರಳು ಹುರಿದಂತೆ ಮಾತನಾಡುವಾಗ ಜತೆಯಲ್ಲಿರುವವರು ಸಪ್ಪೆ ಅನ್ನಿಸುವುದು ಸಹಜ.  

ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟಿಗರಾಗಿ ವರ್ಷಗಟ್ಟಲೆ ಆಡಿದವರಿಗೂ ಹೊಳೆಯದ ಹೊಳಹುಗಳನ್ನು ಹರ್ಷ ನೀಡುತ್ತಲೇ ಹೋಗುತ್ತಾರೆ. ಚರ್ವಿತ ಚರ್ವಣ ಶಬ್ದ, ನುಡಿಗಟ್ಟುಗಳು ಅವರಿಗೆ ವರ್ಜ್ಯ. ಪರಿಣತರುಗಳನ್ನೇ ಬೆಕ್ಕಸಬೆರಗಾಗಿಸುವಂತಹ ವೀಕ್ಷಕ ವಿವರಣೆ ಅವರದು. ಅಂತಹ ಹರ್ಷಾರನ್ನು ಅವರ ಸಹ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೆಕರ್ ವಿನಾ ಕಾರಣ ಟೀಕಿಸಿ ಟ್ವಿಟರಾಟಿಯಿಂದ ಮಂಗಳಾರತಿ ಎತ್ತಿಸಿಕೊಂಡಿದ್ದಾರೆ. 

ಮೊನ್ನೆ ಕೊಲ್ಕೊತಾದಲ್ಲಿ ಮುಕ್ತಾಯಗೊಂಡ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ನ ಫಲಿತಾಂಶದ ನಂತರ ಪಿಂಕ್ ಬಾಲ್ನ ಗುಣಾವಾಗುಣಗಳ ಬಗ್ಗೆ ಮಾತನಾಡುತ್ತಿದ್ದ ಸಂಜಯ್ ಚೆಂಡು ಬ್ಯಾಟ್ಸ್ಮನ್ಗಳ ಕಣ್ಣಿಗೆ ಗೋಚರವಾಗುವುದರಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಿದರು.  (ಈ ಹಿಂದೆ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಪಿಂಕ್ ಬಾಲ್ ಬಳಸಿದ ಸಂದರ್ಭದಲ್ಲಿ ಹಲವು ಬ್ಯಾಟ್ಸ್ಮನ್ಗಳು ಚೆಂಡು ಸರಿಯಾಗಿ ಕಾಣುತ್ತಿರಲಿಲ್ಲವೆಂದು ದೂರಿದ್ದಾರೆ ಬಗ್ಗೆ ಕಳೆದ ವಾರದ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ.) ಅದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಹರ್ಷ ಪಂದ್ಯದ ಪೋಸ್ಟ್ ಮಾರ್ಟಮ್ ನಡೆಸಿದ್ದೇ ಆದಲ್ಲಿ, ಆ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಟ್ಸ್ಮನ್ಗಳ ಅಭಿಪ್ರಾಯ ಪಡೆಯುವುದು ಸೂಕ್ತ ಎಂದರು.   

ವಿಷಯವನ್ನು ಅಷ್ಟಕ್ಕೇ ಬಿಡದ ಸಂಜಯ್  "ಅಲ್ಲೇನಾಗುತ್ತಿದೆ ಎನ್ನುವುದು ಅಲ್ಲಿ ಆಡಿರುವ ನಮಗೆ ತಿಳಿಯುತ್ತದೆ.  ಹತ್ತು-ಹದಿನೈದು ವರ್ಷ್ ಅಂತರ ರಾಷ್ಟ್ರೀಯ ಕ್ರಿಕೆಟ್ ಆಡಿರುವ ನಾನು ಈ ಬಗ್ಗೆ ತಕ್ಕಮಟ್ಟಿನ ಅಧಿಕಾರಯುತವಾಗಿ ಹೇಳಬಲ್ಲೆ" ಎಂದು ಹರ್ಷರನ್ನು ಕೆಣಕಿದರು. ಕೊಚ್ಚಿಕೊಂಡಿದ್ದನ್ನು ಬಿಟ್ಟರೆ ಸಂಜಯ್ ಮಂಜ್ರೆಕರ್ ಹೇಳಿದ್ದರಲ್ಲಿ ತಪ್ಪೇನು ಇರಲಿಲ್ಲ. ಹರ್ಷ ಹೇಳಿದ್ದು ಸರಿ ಇಲ್ಲವೆಂತಲೂ ಇಲ್ಲ. 111 ಅಂತರ ರಾಷ್ಟ್ರೀಯ ಪಂದ್ಯಗಳನ್ನಾಡಿದ ಸಂಜೈಗೆ ಪಿಂಕ್ ಬಾಲ್ ಆಡಿ ರೂಢಿ ಇಲ್ಲ ಅನ್ನುವುದೂ ಗಮನಿಸಬೇಕಾದ ಅಂಶ. ಆದರೆ ಮುಂಬೈನ ಬಹುಪಾಲು ಕ್ರಿಕೆಟರಿಗಿರುವ ತಿಮಿರು ಆತನಲ್ಲಿಯೂ ಮನೆ ಮಾಡಿದೆ.

ಈ ವರ್ಷದ ವರ್ಲ್ಡ್ ಕಪ್ ಪಂದ್ಯಾವಳಿಯ ಸಂದರ್ಭದಲ್ಲಿ ಕಡೆಗಣಿಸಲಾಗದ ಪ್ರತಿಭೆಯಿರುವ ರವೀಂದ್ರ ಜಡೇಜಾರನ್ನು ಅಲ್ಪ ಸ್ವಲ್ಪ ಆಟಗಾರನೆಂದು ಸಂಜಯ್ ವರ್ಣಿಸಿ ಮೂತಿಗಿಕ್ಕಿಸಿಕೊಂಡರು. ಟೀಕೆಗೆ ಪ್ರತಿಕ್ರಿಯೆಯನ್ನು ಟ್ವೀಟ್ ಮೂಲಕ ನೀಡಿದ ಜಡೇಜಾ "ಹಾಗಿದ್ದರೂ ನಿನಗಿಂತ ಎರಡುಪಟ್ಟು ಹೆಚ್ಚಿಗೆ ಪಂದ್ಯಗಳನ್ನು ನಾನು ಆಡಿದ್ದೇನೆ, ಇನ್ನೂ ಆಡುತ್ತಲಿದ್ದೇನೆ. ಸಾಧಕರನ್ನು ಗೌರವಿಸುವ ಗುಣ ಬೆಳೆಸಿಕೊ. ನಿನ್ನ ಬಾಯಿಭೇದಿಯನ್ನು ನಾನು ಸಾಕಷ್ಟು  ನೋಡಿದ್ದೇನೆ," ಎಂದು ಪ್ರತಿದಾಳಿ ನಡೆಸಿದರು. 

ನಾಲ್ಕು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 3-0 ಜಯ ಸಾಧಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಹಾ "ದೇಶವನ್ನು ಪ್ರತಿನಿಧಿಸದ ಯಾರಿಗೂ ಅಂತರ ರಾಷ್ಟ್ರೀಯ ಕ್ರಿಕೆಟಿಗನ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕಿಲ್ಲ. ಅಲ್ಲಿ ನಿಂತು ಆಡಿದ ಅನುಭವವಿಲ್ಲದೇ, ಆಟಗಾರನ ಮನೋಭೂಮಿಕೆಯ ಪರಿಚಯವಿಲ್ಲದವರು (ನಮ್ಮ ಬಗ್ಗೆ) ಮಾತನಾಡಬಾರದು" ಎಂದು ನುಡಿದಿದ್ದರು.
ಕ್ರಿಕೆಟಿಗರ ಇರಿಸುಮುರಿಸಿಗೆ ಆಗಾಗ್ಗೆ ಕಾರಣವಾಗಿರುವ ಹರ್ಷ ಈ ಬಗ್ಗೆ ದಶಕಕ್ಕೂ ಹಿಂದೆಯೇ ಮಾತನಾಡುತ್ತಾ "ಕ್ರಿಕೆಟಿಗನೆನ್ನುವ ಪಟ್ಟ ಕಲಿಯುವುದಕ್ಕೆ ಅಡ್ಡಿಯಾಗಬಾರದು" ಎಂದು ಮಾರ್ಮಿಕವಾಗಿ ಹೇಳಿದ್ದರು. (ಭಾರತದ) ಕ್ರಿಕೆಟಿಗರು ತಮ್ಮ ಮನೋಭಾವನೆಯನ್ನು ಬದಲಾಯಿಸಿಕೊಂಡರೆ ಭಾರತದ ಕ್ರಿಕೆಟ್ಗೆ ಒಳ್ಳೆಯದು ಎಂಬ ಮಾತನ್ನೂ ಅವರು ಮತ್ತೊಂದು ಸಂದರ್ಭದಲ್ಲಿ ಆಡಿದ್ದರು.

ಇಂತಹದ್ದೇ ಒಂದು ಸಂದರ್ಭವನ್ನು ಇಲ್ಲಿ ದಾಖಲಿಸಬೇಕು. ಸುಮಾರು ಮೂರು ದಶಕಗಳ ಹಿಂದೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಪ್ಪತ್ತು ಇರಾನಿ ಟ್ರೋಫಿ ಮ್ಯಾಚ್ ನೋಡಿ, ನಾನೂ, ನನ್ನ ಸ್ನೇಹಿತ ಚರ್ಚ್ ಸ್ಟ್ರೀಟ್ನಲ್ಲಿಯ ನೈಟ್ ವಾಚ್ಮನ್ ಪಬ್ಗೆ ಹೋದೆವು. ಜತೆಗೆ ನಮ್ಮ ಜತೆಗಿದ್ದವರು ಆಗಷ್ಟೇ ಭಾರತ ಕ್ರಿಕೆಟ್ನಲ್ಲಿ ತನ್ನ ಅಗಾಧ ಪ್ರತಿಭೆಯಿಂದ ಹೆಸರು ಮಾಡಿ, ತಂಡದಿಂದ ಹೊರಬಿದ್ದಿದ್ದ ಸದಾನಂದ್ ವಿಶ್ವನಾಥ್. ನಮ್ಮ ಹರಟೆ ಅಪೂರ್ಣವಾಗಿದ್ದು ಅದನ್ನು ಮುಂದುವರಿಸಲು ಪ್ರೆಸ್ ಕ್ಲಬ್ಗೆ ಹೋದೆವು.  ಅಲ್ಲಿ ಮತ್ತೊಬ್ಬ ಸ್ನೇಹಿತರು ನಮ್ಮನ್ನು ಸೇರಿಕೊಂಡರು. ಅವರು ಕ್ರೀಡಾ ವರದಿಗಾರರು, ಅದಕ್ಕೂ ಮುಂಚೆ  ವಿಶ್ವನಾಥ್ ಜತೆ ಕಾಲೇಜ್ ಟೀಮಿನಲ್ಲಿ  ಕ್ರಿಕೆಟ್ ಆಡಿದವರು. ಅವರಿಬ್ಬರ ನಡುವೆ ವಾಗ್ವಾದವಾಗಿ ಕೆರಳಿದ ವಿಶ್ವನಾಥ್ "ನಾವಿಬ್ಬರೂ ಜಾಗ ಅದಲುಬದಲು ಮಾಡಿಕೊಳ್ಳೋಣ. ನಿನಗಿಂತ ಚೆನ್ನಾಗಿ ನಾನು ಬರೆಯಬಲ್ಲೆ, ನನ್ನಷ್ಟು ಚೆನ್ನಾಗಿ ನೀನಾಡಲಾರೆ," ಅಂದರು.

ಸದರಿ ವರದಿಗಾರರು ಕ್ರಿಕೆಟ್ ಆಟವನ್ನು ಅರೆದು ಕುಡಿದಿದ್ದ ಹಿರಿಯ ಪತ್ರಕರ್ತ ರಾಜನ್ ಬಾಲಾರ ಗರಡಿಯಲ್ಲಿ ಪಳಗಿದವರು. ಅವರು ವಿಶ್ವನಾಥ್ ಸವಾಲಿಗೆ ಉತ್ತರಿಸಲಿಲ್ಲ.
ಕಪಿಲ್ ದೇವ್ ನಾಯಕತ್ವದ ವಿಶ್ವ ಕಪ್ ವಿಜೇತ ತಂಡ ಭಾರತಕ್ಕೆ ಹಿಂತಿರುಗಿದ ನಂತರ, ಗೆಲುವಿನಲ್ಲಿ  ಪ್ರಮುಖ ಪಾತ್ರ ವಹಿಸಿದ ಸ್ವಿಂಗ್ ಬೌಲರ್ ಬಲವಿಂದರ್ ಸಿಂಗ್ ಸಂಧು ಅವರನ್ನು 60 ಓವರ್ಗಳ ಸ್ಥಳೀಯ ಪಂದ್ಯವೊಂದರಲ್ಲಿ ಬಾಲಾ ಯಶಸ್ವಿಯಾಗಿ ಎದುರಿಸಿದ್ದರು. ಕೊನೆಗೂ ಬಾಲಾರ ವಿಕೆಟ್ ಪಡೆಯುವಲ್ಲಿ ಸಂಧುವನ್ನೂ ಸೇರಿದಂತೆ ಎದುರಾಳಿ ಬೌಲರ್ ಗಳೆಲ್ಲರೂ ವಿಫಲರಾಗಿದ್ದರು. ಅದು ದಿವಂಗತ ಬಾಲಾರ ಪ್ರತಿಭೆಗೆ ಸಾಕ್ಷಿ .

ಕ್ರೀಡಾ ವರದಿಗಾರನಿಗೆ ಬರವಣಿಗೆ ಬರದಿದ್ದರೆ ಪರವಾಗಿಲ್ಲ, ಅದನ್ನು ಕಲಿಸಬಹುದು, ಆದರೆ ಅವನು ಯಾವ ಆಟದ ಬಗ್ಗೆ ಬರೆಯುತ್ತಾನೆ, ಆ ಆಟವನ್ನು ಆಡಿ ತಿಳಿದಿರಬೇಕು.  ಅದು ಬಾಲಾರ ನಂಬಿಕೆಯಾಗಿತ್ತು.