ಮದ್ಯ ‘ಮಾರ್ಗ’ ಮತ್ತು ಮದ್ಯಕೇಳಿ

ಒಂದು ಕಡೆ ಕುಡುಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಗಗಳನ್ನು ಹುಡುಕಿಕೊಂಡಿದ್ದರೆ ತಮಗೆ ಮದ್ಯದ ಸಹವಾಸವೇ ಬೇಡ ಎನ್ನುವವರಿಗೆ ಕುಡಿತಕ್ಕಾಗಿಯೇ ಸಂಬಳ ಕೊಡುತ್ತಿರುವ ಕಂಪನಿಯೊಂದಿದೆ. ಕಚೇರಿ ವೇಳೆಯಲ್ಲಿ ಮದ್ಯಪಾನ ಸಲ್ಲದು ಎನ್ನುವುದು ಸಾಮಾನ್ಯ ನಿಯಮ. ಆದರೆ ಫ್ರಾನ್ಸ್ ನ ಪೆರ್ನಾಡ್ ರಿಕಾರ್ಡ್ ಎಂಬ ಜಗತ್ತಿನ ಎರಡನೇ ಅತಿ ದೊಡ್ಡ ಮದ್ಯ ತಯಾರಿಕಾ ಕಂಪನಿ ತನ್ನ ಸಿಬ್ಬಂದಿಗೆ ಮದ್ಯಕೇಳಿಯಲ್ಲಿ ತೊಡಗುವಂತೆ ಪೀಡಿಸುತ್ತಿದೆ ಎಂಬ ದೂರು ಕೇಳಿ ಬಂದಿದೆ.

ಮದ್ಯ ‘ಮಾರ್ಗ’ ಮತ್ತು ಮದ್ಯಕೇಳಿ

ಇದು ಕುಡುಕರಿಗೆ ಮತ್ತು ಕುಡಿಸುವವರಿಗೆ ಸಂಬಂಧಿಸಿದ ಕತೆ. ಹಾಗಂತ ಬೇರೆ ಇನ್ಯಾರೂ ಓದಬಾರದೆಂದೇನಿಲ್ಲ. ಹಿಂದೊಮ್ಮೆ ತಮ್ಮ ಮಗ ಇಂದ್ರಜಿತ್ ಬಾರೊಂದನ್ನು ಶುರು ಮಾಡಬೇಕೆಂದಿದ್ದ ಚಿಂತನೆಗೆ ಪಿ.ಲಂಕೇಶ್ ತಣ್ಣೀರೆರಚಿದ್ದರು. ಕುಡಿಯೋದು ತಪ್ಪಲ್ಲ, ಕುಡಿಸೋದು ತಪ್ಪು ಎಂದು ಮಗನಿಗೆ ಬುದ್ಧಿ ಮಾತು ಹೇಳಿದ್ದರು. ಆನಂತರ ಈ ಬಾರ್ ಇಂದ್ರಜಿತ್ ಗೆ ಬಾರ ಎನ್ನಲಿಲ್ಲ. ಅವರು ಬಾರ್ ಕಡೆಗೆ ಹೋಗೋದನ್ನು ನಿಲ್ಲಿಸಿದರೋ ಇಲ್ಲವೋ ಗೊತ್ತಿಲ್ಲ, ಬಾರನ್ನಂತೂ ಶುರು ಮಾಡಲಿಲ್ಲ. 

ಈ ಎರಡು ಸಂಗತಿಗಳನ್ನು ನಿಮಗೆ ಹೇಳಿದರೆ ಯಾಕೆ ಈ ಪೀಠಿಕೆ ಎನ್ನುವುದು ಗೊತ್ತಾಗುತ್ತದೆ. ಬಿಹಾರದಲ್ಲಿ ಮದ್ಯಪಾನ ನಿಷೇಧವಾದ ನಂತರ ಮದ್ಯದ ಕಳ್ಳ ಸಾಗಣಿಕೆಗೆ ಕುಡುಕರು ಕಲ್ಲಂಗಡಿ ಹಣ್ಣು, ತರಕಾರಿ, ಸೈಕಲ್ ಟ್ಯೂಬ್ ಮೊದಲಾದದ್ದನ್ನು ಬಳಸುತ್ತಿದ್ದರು. ಅಷ್ಟೇ ಏಕೆ? ಆಂಬ್ಯುಲೆನ್ಸ್ ಕೂಡ ಮದ್ಯ ಕಳ್ಳಸಾಗಣಿಕೆಯ ವಾಹನವಾಗಿತ್ತಂತೆ. 

ಧೂಮಪಾನ, ಮದ್ಯಪಾನ ಸಾವು ತರುತ್ತದೆ ಎನ್ನುವ ಜಾಹೀರಾತು ನೀವೆಲ್ಲ ನೋಡಿರುತ್ತೀರಿ. ಕುಡಿದು ಸಾಯಬೇಕು ಎಂದು ಮದ್ಯೋತ್ತಮರನ್ನೂ ನೀವು ನೋಡಿರುತ್ತೀರಿ. ಲಂಕೇಶರಿಗೇ ವೈದ್ಯರೊಬ್ಬರು, “ಯಾಕ್ ಮೇಷ್ಟ್ರೇ, ಕುಡಿತ, ಧೂಮಪಾನ ಬಿಟ್ಟುಬಿಡಿ. ಆರೋಗ್ಯಕ್ಕೆ ಒಳ್ಳೆಯದಲ್ಲ” ಎಂದು ಸಲಹೆ ನೀಡಿದ್ದಕ್ಕೆ, ,” ಇಂಥ ಅಭಿರುಚಿಗಳಿಲ್ಲದೇ ಅದ್ಯಾವ ಕರ್ಮಕ್ಕೆ ಬದುಕಬೇಕು ಹೇಳಿ” ಎಂದು ಲಂಕೇಶ್ ಪ್ರತಿಕ್ರಿಯಿಸಿದ್ದರು. ಹಾಗೆ ಸಲಹೆ ನೀಡಿದ ವೈದ್ಯರು ಲಂಕೇಶರಿಗಿಂತ ಕಿರಿಯರು. ಕುಡಿತ, ಸಿಗರೇಟು ಯಾವುದೇ ಅಭ್ಯಾಸಗಳಿರಲಿಲ್ಲ. ಜೀವನದ ಇಂಥ ಸಂತೋಷದ ಗಳಿಗೆಗಳನ್ನು ಅನುಭವಿಸಲಿಲ್ಲ. ಎಲ್ಲ ರೀತಿಯಲ್ಲಿ ಶಿಸ್ತುಬದ್ಧ ಜೀವನ ನಡೆಸಿದ ಅವರು ಲಂಕೇಶರಿಗಿಂತ ಮೊದಲೇ ಇಹಲೋಕ ತ್ಯಜಿಸಿದರು. ಕೆಲವು ವರ್ಷಗಳ ನಂತರವಷ್ಟೇ ಲಂಕೇಶರು ಹಿಂಬಾಲಿಸಿದರು. 

ಬಿಹಾರದಲ್ಲಿ ಇತ್ತೀಚೆಗೆ ಮದ್ಯ ಕಳ್ಳ ಸಾಗಾಣಿಕೆಗೆ ಕಂಡುಕೊಂಡಿರುವ ಮಾರ್ಗ ಯಾವುದು ಗೊತ್ತೇ? ಹೆಣದ ಪೆಟ್ಟಿಗೆಗಳು. ಇತ್ತೀಚೆಗೆ ಸರಾನ್  ನಲ್ಲಿ ಟ್ರಕ್ಕೊಂದನ್ನು ಶೋಧಿಸಿದ ಪೊಲೀಸರಿಗೆ ಕಪ್ಪು ಬಟ್ಟೆಯ ಹೊದಿಕೆ ಇದ್ದ 6 ಹೆಣದ ಪೆಟ್ಟಿಗೆಗಳಲ್ಲಿದ್ದ 502 ಕಾರ್ಟನ್ ಗಳಲ್ಲಿ 4 ಸಾವಿರ ಲೀಟರ್ ಮದ್ಯ ಪತ್ತೆಯಾಯಿತು. “ಸಾವು” ತರುವ ಮದ್ಯವನ್ನು ಅದು ಗುರಿ ಸಾಧಿಸುವ ಮುನ್ನವೇ ಹೆಣದ ಪೆಟ್ಟಿಗೆಗಳಲ್ಲಿ ತರಲಾಗಿತ್ತು. ಎಂಥ ಸಾವು ಅನ್ತೀರಾ?

ಒಂದು ಕಡೆ ಕುಡುಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಗಗಳನ್ನು ಹುಡುಕಿಕೊಂಡಿದ್ದರೆ ತಮಗೆ ಮದ್ಯದ ಸಹವಾಸವೇ ಬೇಡ ಎನ್ನುವವರಿಗೆ ಕುಡಿತಕ್ಕಾಗಿಯೇ ಸಂಬಳ ಕೊಡುತ್ತಿರುವ ಕಂಪನಿಯೊಂದಿದೆ. ಕಚೇರಿ ವೇಳೆಯಲ್ಲಿ ಮದ್ಯಪಾನ ಸಲ್ಲದು ಎನ್ನುವುದು ಸಾಮಾನ್ಯ ನಿಯಮ. ಆದರೆ ಫ್ರಾನ್ಸ್ ನ ಪೆರ್ನಾಡ್ ರಿಕಾರ್ಡ್ ಎಂಬ ಜಗತ್ತಿನ ಎರಡನೇ ಅತಿ ದೊಡ್ಡ ಮದ್ಯ ತಯಾರಿಕಾ ಕಂಪನಿ ತನ್ನ ಸಿಬ್ಬಂದಿಗೆ ಮದ್ಯಕೇಳಿಯಲ್ಲಿ ತೊಡಗುವಂತೆ ಪೀಡಿಸುತ್ತಿದೆ ಎಂಬ ದೂರು ಕೇಳಿ ಬಂದಿದೆ. ದಿನಕ್ಕೆ 12 ಗ್ಲಾಸುಗಳಷ್ಟಾದರೂ ಮದ್ಯ ಸೇವನೆ ಮಾಡುವಂತೆಯೂ ಸತತ ಮೂರು ದಿನಗಳ ಕಾಲ ಮದ್ಯಕೇಳಿಯಲ್ಲಿ ತೊಡಗಿರುವಂತೆಯೂ ಮಾರಾಟ ಸಿಬ್ಬಂದಿಗೆ ಕಂಪನಿಯ ಮುಖ್ಯಸ್ಥರು ಒತ್ತಡ ಹೇರುತ್ತಿರುವುದರಿಂದ ಸಾಕಷ್ಟು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರಂತೆ. ಕೆಲವು ಕಾಣದ ವಸ್ತುವನ್ನು ಕಂಡಂತೆ ಮಿಥ್ಯಾದರ್ಶನವಾಗುತ್ತಿದೆ ಎಂದೂ, ಮದ್ಯಪಾನ ಮಾಡಿ ವಾಹನೆ ಚಾಲನೆ ಮಾಡುವಂಥ ಅನಿವಾರ್ಯ ಪರಿಸ್ಥಿತಿ ಆಗಿಂದಾಗ್ಗೆ ಎದುರಾಗುತ್ತಿದೆ ಎಂದೂ ಈ ಸಿಬ್ಬಂದಿ “ಲೆ ಪ್ಯಾರೀಸಿಯನ್” ಪತ್ರಿಕೆ ಜತೆ ಗೋಳು ತೋಡಿಕೊಂಡಿದ್ದಾರೆ. ಕಂಪನಿಯ ಉತ್ಪನ್ನಗಳ ಮಾರಾಟ ಉತ್ತೇಜಿಸಲು ನೈಟ್ ಕ್ಲಬ್ ಗಳು, ಬಾರ್ ಗಳಿಗೆ ಸತತವಾಗಿ ಹೋಗುತ್ತಿರುವುದರಿಂದ ಮದ್ಯವ್ಯಸನಿಗಳಾಗುತ್ತಿದ್ದೇವೆನ್ನುವುದೂ ಅವರ ದೂರುಗಳಲ್ಲೊಂದು.

ಇದೇ ಕಂಪನಿಯ ಹಸಿವು ಹೆಚ್ಚಿಸುವ ಪ್ಯಾಸ್ಟಿಸ್ ಎಂಬ  ಮದ್ಯವಂತೂ ಫ್ರಾನ್ಸ್ ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.  ಒಂದು ಕಾಲದಲ್ಲಿ ವಿನ್ಸೆಂಟ್ ವ್ಯಾನ್ ಗಾಗ್(ವ್ಯಾನ್ ಗೋ), ಆಸ್ಕರ್ ವೈಲ್ಡ್, ಎಡ್ಗರ್ ಆಲನ್ ಪೋ, ಲಾರ್ಡ್ ಬೈರನ್ ರಂಥ ಮಹಾಮಹಿಮರಿಗೆ ಪ್ರಿಯವಾಗಿದ್ದ ಗರಿಷ್ಠ ಪ್ರಮಾಣದ ಆಲ್ಕೋಹಾಲ್ ಅಂಶ ಒಳಗೊಂಡಿದ್ದ ಅಬ್ಸಾನ್ಸ್ ಎಂಬ ಹಸಿರು ಬಣ್ಣದ ಮದ್ಯ ನಿಷೇಧಕ್ಕೆ ಒಳಗಾದ ನಂತರ ಈ ಕಂಪನಿ ಪ್ಯಾಸ್ಟಿಸ್ ಎಂಬ ಅದೇ ಹಳೇ ರುಚಿಯ ಹೊಸ ಮದ್ಯವನ್ನು ಉತ್ಪಾದಿಸಿ ಫ್ರಾನ್ಸ್ ನಾದ್ಯಂತ ಹುಚ್ಚೆಬ್ಬಿಸಿದೆ. ಇದು ಹೊಸತೊಂದು ಕುಡಿಯುವ ಸಂಸ್ಕೃತಿಯನ್ನೇ ಹುಟ್ಟು ಹಾಕಿದೆ. ಈ ಮದ್ಯವನ್ನು ಮಧ್ಯಾಹ್ನದ ಭೋಜನ ವೇಳೆ, ಸಂಜೆ ಮತ್ತು ಕಂಪನಿಯ ಸಭೆಯ ನಂತರವೂ ತಾವು ಕುಡಿಯಲೇ ಬೇಕಾಗಿತ್ತು ಎಂದು ಮಾಜಿ ಉದ್ಯೋಗಿಯೊಬ್ಬ   ಹೇಳಿಕೊಂಡಿದ್ದಾನೆ. ಈ ಕಾಟ ತಾಳಲಾರದ ಮಹಿಳಾ ಉದ್ಯೋಗಿಯೊಬ್ಬರು ಅವರು ಪಾರ್ಟಿ ಮಾಡಬೇಕಾದ ಸ್ಥಳಗಳಲ್ಲಿರುವ ಹೂಕುಂಡಗಳಿಗೆ ಚೆಲ್ಲುತ್ತಿರುವುದಾಗಿಯೂ ಹೇಳುತ್ತಾರೆ. “ನಿಮಗೆ ಪಾರ್ಟಿಗಳಲ್ಲಿ ಕುಡಿಯುವುದಕ್ಕಾಗಿಯೇ ವೇತನ ನೀಡುತ್ತಿರುವುದು. ಕುಡಿಯುವುದು ನಿಮ್ಮ ಕರ್ತವ್ಯ” ಎನ್ನುವುದು ಕಂಪನಿಯ ಸಮರ್ಥನೆ.