ಅಪ್ಪ ಅಂದ್ರೆ ವಿಶ್ವಾಸ...

ಅಪ್ಪ ಅಂದ್ರೆ ವಿಶ್ವಾಸ...

ಮಾರುತೇಶ ಕೆ. ಚಿಕ್ಕತೇಕಲವಟ್ಟಿ.

ಇಂದು ಅಪ್ಪಂದಿರ ದಿನ. ನಾನು ನಮ್ಮಪ್ಪನ ಬಗ್ಗೆ ಏನಾದ್ರು ಹೇಳ್ಬೇಕು ಅನ್ನಿಸ್ತು. ಇಂದು ಮಾತ್ರ ಹೇಳುವ ಮಾತುಗಳಲ್ಲ ಅವು. ಅಪ್ಪನೊಲವಿನ ಮನದ ಭಾವಕ್ಕೆ ಮಾತು ಕೊಡಲು ಇಂದು ನೆಪವಷ್ಟೆ. ಅದಕ್ಕಾಗಿ ನಾನು ಬರೀತಿದೀನಿ.

ಅಪ್ಪನ ಬಗ್ಗೆ ಹೇಳುತ್ತಾ ಹೋದ್ರೆ  ಎಷ್ಟನ್ನೋ ಹೇಳುತ್ತಾ ಹೋಗಬಹುದು. ನೂರುಸಾವಿರ ಕಷ್ಟಗಳನ್ನು ಎದೆಯಲ್ಲಿ ಹೊತ್ತು ನಗುವ, ನಗಿಸುವ ನಾಯಕನವನು. ಜೀವನದುದ್ದಕ್ಕೂ ದುಡಿದು, ದಣಿದು, ಬೆವರಿಳಿಸಿ ಸಾಕುವವನು ಅಪ್ಪ.

ನಾವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿನ ನಟ, ನಟಿಯರೆ ನಮ್ಮ ಹೀರೋ, ಹೀರೋಯಿನ್‌ಗಳೆಂದು ಭ್ರಮಿಸುತ್ತೇವೆ. ಆದ್ರೆ ಒಂದು ದಿನ ಗೊತ್ತಾಗುತ್ತೆ ನಮ್ಮಪ್ಪನೆ ನಮಗೆ ಹೀರೋ ಅಂತ. ನಿಜದ ಹೀರೋ ಆತನಲ್ಲದೆ ಮತ್ಯಾರು ಅಲ್ಲ.

ಅಪ್ಪ ರೈತ. ಇಡೀ ದಿನ, ವರ್ಷ ಪೂರ್ತಿ  ಹೊಲದಲ್ಲಿ ಉತ್ತು, ಬಿತ್ತಿ, ಬಿಸಿಲ ಬೇಗೆಯಲ್ಲಿ ನೆತ್ತಿಯಿಂದ ಕಾಲಿನವರೆಗೂ ಬೆವರನ್ನು ಸುರಿಸಿ, ಬೆಳೆ ಬೆಳೆಯುವ ಕಾಯಕ ಯೋಗಿ. ಸಂಸಾರ ಹಾಗೂ ಇಡೀ ದೇಶಕ್ಕೆ ಬೆನ್ನೆಲುಬಾಗಿ ನಿಂತವ.

ಅಪ್ಪನೇ ಹಾಗೆ. ದೈಹಿಕ, ಮಾನಸಿಕ ಯಾತನೆಗಳನೆಲ್ಲ ತನ್ನೊಳಗೇ ಬಚ್ಚಿಟ್ಟುಕೊಂಡು ತೊಳಲುವ ಆತ ಕೇವಲ ಗುಳಿಗೆಯೊಂದರಲ್ಲೇ ಉಷಾರು ಮಾಡಿಕೊಳ್ಳುತ್ತಾನೆ. ಆದರೆ ಕುಟುಂಬ, ಹೆಂಡತಿ ಮಕ್ಕಳ ಆರೋಗ್ಯ ಹದಗೆಟ್ಟರೆ ಸಾಲ ಮಾಡಿಯಾದರೂ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾನೆ. ತೆರೆಯ ಮೇಲೆ ಮಿಂಚುವ ವ್ಯಕ್ತಿಗಿಂತ ತಲೆಯ ಮೇಲೆ ಹೊತ್ತು ಮೆರೆಸುವ ತಂದೆಯಲ್ಲವೇ ನಿಜದ ಹೀರೋ.

ಅಪ್ಪನೆಂದರೆ ಕೇವಲ ದುಡಿಮೆಯಲ್ಲ, ಗಳಿಕೆಯಲ್ಲ.‌ ಜೀವನಪಾಠ ಕಲಿಸುವ ಗುರು ಆತ. ಕಷ್ಟ, ನೋವುಗಳಿಗೆ ಬದುಕು ಒಗೆದು ನಡೆಯದೆ ಏನೇ ಎದುರಾದರೂ ಎದುರಿಸಿ ನಡೆಯುವ ತಾಕತ್ತನ್ನು ತನ್ನ ನಡತೆಯಿಂದಲೇ ತಿಳಿಸುವ ಅಪ್ಪನದು ಅದ್ಭುತ ವ್ಯಕ್ತಿತ್ವ. ಹಬ್ಬ, ಹರಿದಿನಗಳಲ್ಲಿ ಹೆಗಲಿಗೊಂದು ಚೌಕವನ್ನೂ ಕೊಳ್ಳದ ಆತ ನಮಗೆ ಹೊಸದೇ ಬಟ್ಟೆ ಕೊಂಡುತಂದದ್ದನ್ನು ಪದಗಳಲ್ಲಿ ಅಡಗಿಸುವುದು ಸಾಧ್ಯವೇ!? ಅದರಲ್ಲೇ ನೆಮ್ಮದಿ ಕಾಣುವ‌ ಆತನ ಜೀವನ ಪ್ರೀತಿ ನನ್ನ ಪಾಲಿಗೆ ಅತಿದೊಡ್ಡ ಕಾಣ್ಕೆ.

ಅಪ್ಪನದ್ದು ಕಲ್ಲುಮುಳ್ಳಿನ ಹಾದಿ. ಕೂಲಿ, ವ್ಯವಸಾಯ, ಗೇಯ್ಮೆ ಇತ್ಯಾದಿಗಳೆಲ್ಲದರಲ್ಲಿ ಎಷ್ಟು ಸಂತೃಪ್ತಿ ಕಂಡಿರುವನೋ ಅಷ್ಟೇ ನೋವುಂಡಿರುವನು. ಅಂತೆಯೇ ತನ್ನ ಕಷ್ಟಗಳೆಲ್ಲ ಮಕ್ಕಳವರೆಗೆ ಬೇಡ ಎಂದೆಣಿಸುವ ಆತನದು ಒಂದೇ ಆಸೆ. ಮಕ್ಕಳನ್ನು ಓದಿಸಿ, ಗುರಿ ಮುಟ್ಟಿಸುವುದು. ಗೆದ್ದ ಗೆಲುವು, ಸೋತ ಸೋಲು, ಬಿದ್ದ ಘಳಿಗೆ, ಎಡವಿದ ಕ್ಷಣ ಎಲ್ಲಕ್ಕೂ ಹೆಗಲಾಗುವವನು ಅಪ್ಪ. ಕಾಲನ ವೇಗವನ್ನೂ ಮೀರಿ ದುಡಿವ ಆತನ ಅಷ್ಟೂ ಪಡಿಪಾಟಲು ಮಕ್ಕಳ ಏಳ್ಗೆಗೇ ಆಗಿರುತ್ತದೆ. ಆತನಿಗಿಂತ ಅತ್ಯುತ್ತಮ‌ ಮಿತ್ರ ಮತ್ತೊಬ್ಬನಿಲ್ಲ ಎಂದರೆ ಅದು ಬೆಳಕಿನಷ್ಟೇ ಸತ್ಯ‌.

ಸಮಸ್ಯೆಗಳಿಗೆ ಯಾವತ್ತೂ ಬೆನ್ನು ತೋರಿಸದೆ ಎಲ್ಲವಕ್ಕೂ ಎದೆಯೊಡ್ಡಿ ನಿಲ್ಲುವುದನ್ನು ಕಲಿತದ್ದು ಅಪ್ಪನಿಂದಲೇ. ಸೋತಾಗ ಬಾಗದೆ, ಗೆದ್ದಾಗ ಬೀಗದೆ ಸುಖ ದುಃಖಗಳೆರಡನ್ನು ಸಮನಾಗಿ ಸ್ವೀಕರಿಸುವ ಗುಣ, ಪರೋಪಕಾರಗಳನ್ನು ಕಲಿತದ್ದು ತಂದೆಯಿಂದಲೇ. ಆತ ಸಂಸಾರ ರಥದ ದಿವ್ಯ, ಧೀಮಂತ ಸಾರಥಿ.

ಯಾವೊಂದು ಚಟದ ದಾಸನಾಗದೆ ಕೇವಲ ದುಡಿಮೆಯೊಂದನ್ನೆ ನಂಬಿದ ಅಪ್ಪನ ವ್ಯಕ್ತಿತ್ವ ಎಣಿಸಲಸದಳ. ಅನುಕ್ಷಣದ ಸ್ಫೂರ್ತಿ, ಶಕ್ತಿ ಆತ. ಆತನ ನೆನೆವೊಡೆ ಬೇರೊಂದೇ ಭಾವ, ಬಂಧ ಮನದೊಳಗೆ ಚಿಗಿತು, ಹಸುರಾಡುತ್ತದೆ. ಅಪ್ಪನೆಂದರೆ ವಿಶ್ವಾಸ ಅಥವಾ ಅದಕ್ಕೂ ಮಿಗಿಲು.

ಇಷ್ಟನ್ನೆಲ್ಲ ನೆನೆಯುವಾಗ ಇದೂ ನೆನಪಾಗುತ್ತದೆ. ತಂದೆಯೇ ಇಲ್ಲದವರ, ಇದ್ದೂ ಇಲ್ಲದವರ ಪಾಡು. ನನ್ನ ಮಟ್ಟಿಗೆ ತಂದೆಯೆಂದರೆ ಕೇವಲ ಜನ್ಮಬಿಂದುವಿಗೆ ಕಾರಣನಾದವನಲ್ಲ. ಅಥವಾ ಕೇವಲ ಗಂಡಸ್ಥನದ ಪಟ್ಟಿ ಹೊತ್ತವನಲ್ಲ. ಅಮ್ಮನೊಳಗನ್ನು ಅರಿತು, ಎಷ್ಟೋ ಸಲ ಅಮ್ಮನೇ ತಾನಾಗಿ ಪೊರೆದಾತ. ಅಪ್ಪನೆಂದರೆ ಅಪ್ಪನಲ್ಲ, ಯಾವ ಅಕ್ಕ, ಅಮ್ಮ, ಅತ್ತೆ, ಅಜ್ಜಿಯರು ಅಪ್ಪನೇ ತಾನಾಗಿ ದುಡಿದಿದ್ದಾರೋ, ದಣಿದಿದ್ದಾರೋ, ಬೆಳೆಸಿದ್ದಾರೋ ಅವರೆಲ್ಲರೂ ಅಪ್ಪಗಳೆ. ಯಾವ ಹೆಂಡತಿ, ಪ್ರೇಯಸಿ, ಗೆಳತಿ, ಸಖಿ ನನ್ನಳುವಿಗೆ ಮಡಿಲಾಗಿದ್ದಾರೋ ಅವರೂ ಅಪ್ಪಂದಿರಂತೆಯೇ. ಈ ಎಲ್ಲರಿಗೂ ಅಪ್ಪಂದಿರ ದಿನದ ಶುಭಾಷಯಗಳು.