ನೇಕಾರರಿಗೆ ಸಾಲ ಮನ್ನಾ ಎಂಬುದೂ ಬೂಸಿ: ಸ್ವಾಭಿಮಾನಿ ಬದುಕು ನೇಯದ ರಾಜ್ಯ ಸರ್ಕಾರದಿಂದ ಇನ್ನಷ್ಟು ಘಾಸಿ

ಸಾಲ ಮನ್ನಾ ಯೋಜನೆಗೆ ನೇಕಾರರನ್ನೂ ಒಳಪಡಿಸಿ ಮತ ಬ್ಯಾಂಕ್ ನ್ನು ಗಟ್ಟಿಗೊಳಿಸೆಲೆತ್ನಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆಯಿಂದಲೇ ಬೀಗಿದ್ದರು. ಆದರೆ ವಾಸ್ತವವೇ ಬೇರೆ ಇದೆ.

ನೇಕಾರರಿಗೆ ಸಾಲ ಮನ್ನಾ ಎಂಬುದೂ ಬೂಸಿ: ಸ್ವಾಭಿಮಾನಿ ಬದುಕು ನೇಯದ ರಾಜ್ಯ ಸರ್ಕಾರದಿಂದ ಇನ್ನಷ್ಟು ಘಾಸಿ

ನೇಕಾರರ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿ 5 ತಿಂಗಳು ಕಳೆದಿದ್ದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಮೈತ್ರಿ ಸರ್ಕಾರವನ್ನು ಪತನಗೊಳಿಸಿದ್ದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ದಿನದಂದೇ ನೇಕಾರರ 1.00 ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡಲು ಘೋಷಿಸಿದ್ದಾರಾದರೂ ಆನೇಕ ನೇಕಾರರಿಗೆ ಇನ್ನೂ ಸಾಲ ಮನ್ನಾ ಭಾಗ್ಯ ದೊರೆತಿಲ್ಲ.

ರಾಜ್ಯದ ಹಾಲಿ ಬಿಜೆಪಿ ಸರ್ಕಾರ ಹಾಗೂ ಹಿಂದಿನ ಸರ್ಕಾರಗಳು ಮಾಡಿರುವ ನೇಕಾರರ ಸಾಲಮನ್ನಾ ಸೌಲಭ್ಯ ಕೇವಲ ಕೆಲವೇ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದು ಕೇಳಿ ಬಂದಿರುವ ಆರೋಪಗಳ ಬೆನ್ನಲ್ಲೇ ಜವಳಿ ಅಭಿವೃದ್ಧಿ ಆಯುಕ್ತರು ಮತ್ತು ಕೈಮಗ್ಗ, ಜವಳಿ ನಿರ್ದೇಶಕರು ವಾಣಿಜ್ಯ ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರ ಮಹತ್ವ ಪಡೆದುಕೊಂಡಿದೆ.

ಜವಳಿ ಅಭಿವೃದ್ಧಿ ಆಯುಕ್ತರು ಮತ್ತು ಕೈಮಗ್ಗ, ಜವಳಿ ನಿರ್ದೇಶಕರು ವಾಣಿಜ್ಯ ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ 2019ರ ಡಿಸೆಂಬರ್‌ 2ರಂದು ಬರೆದಿರುವ ಪತ್ರ, ನೇಕಾರರ ಸಾಲ ಸಂಪೂರ್ಣವಾಗಿ ಮನ್ನಾ ಆಗಿಲ್ಲ ಎಂಬುದನ್ನು ಬಹಿರಂಗಗೊಳಿಸಿದೆ. ಈ ಪತ್ರದ ಪ್ರತಿ 'ಡೆಕ್ಕನ್‌'ನ್ಯೂಸ್‌ಗೆ ಲಭ್ಯವಾಗಿದೆ.

ನೇಕಾರಿಕೆ ಉದ್ದೇಶದಿಂದ ವಿವಿಧ ಸಹಕಾರ ಸಂಘಗಳು ಮತ್ತು ಸಹಕಾರ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ನೇಕಾರರು ಮನ್ನಾ ಮಾಡಿಸಿಕೊಳ್ಳಲು ಸಹಕಾರಿ ಸಂಸ್ಥೆಗಳ ಮೆಟ್ಟಿಲಿಳಿದು ಬಸವಳಿದು ಹೋಗುತ್ತಿದ್ದಾರೆ. ವಿವಿಧ ಕಾರಣಗಳನ್ನು ಮುಂದೊಡ್ಡಿ 2019ರ ಡಿಸೆಂಬರ್‌ 2ರ ಅಂತ್ಯಕ್ಕೆ 549ಕ್ಕೂ ಅಧಿಕ ಸಂಖ್ಯೆಯಲ್ಲಿ ನೇಕಾರರ ಸಾಲ ಮನ್ನಾ ಅರ್ಜಿ ತಿರಸ್ಕೃತಗೊಂಡಿರುವುದು ಪತ್ರದಿಂದ ತಿಳಿದು ಬಂದಿದೆ.

ಯೋಜನೆಯಡಿ ಸಹಕಾರ ಸಂಘಗಳಿಂದ ನೇಕಾರರ ಸಾಲದ ವಿವರಗಳನ್ನು ಇಲಾಖೆಯ ಅಧಿಕೃತ ಜಾಲ ತಾಣದಲ್ಲಿ ಅಳವಡಿಸಲಾಗಿತ್ತು. ಇದರಲ್ಲಿರುವ ಮಾಹಿತಿಯಂತೆ '298 ಸಹಕಾರ ಸಂಘ, 22,877 ಸಂಸ್ಥೆಗಳ ನೇಕಾರರ ಸಾಲ ಮನ್ನಾ ಮೊತ್ತ 101.06 ಕೋಟಿ ರು.ಮೊತ್ತವಿದೆ. ಈ ಪೈಕಿ 549 ನೇಕಾರರ ಸಾಲ ಮನ್ನಾ ಮೊತ್ತ 1.48 ಕೋಟಿ ರು. ತಿರಸ್ಕೃತಗೊಂಡಿದೆ. ಹೀಗಾಗಿ ಒಟ್ಟು 98.29 ಕೋಟಿ ರು.ಅವಶ್ಯಕವಿದೆ,' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅದೇ ರೀತಿ 2019-20ನೇ ಸಾಲಿಗೆ ಸಂಬಂಧಿಸಿದಂತೆ ಇಲಾಖೆಯ ಕ್ರಿಯಾ ಯೋಜನೆಯಂತೆ 11.00 ಕೋಟಿ ರು.ಲಭ್ಯವಿದೆ. ನೇಕಾರಿಕೆ ಉದ್ದೇಶಕ್ಕಾಗಿ ವಿವಿಧ ಸಹಕಾರ ಸಂಘಗಳಿಂದ ಮತ್ತು ಸಹಕಾರ ಬ್ಯಾಂಕ್‌ಗಳಿಂದ ಸಾಲ ಪಡೆದು ಸಾಲಮನ್ನಾ ಸೌಲಭ್ಯವನ್ನು 2019ರ ಆಗಸ್ಟ್‌ 2 ರ ನಂತರಕ್ಕೆ ವಿಸ್ತರಿಸಿದ್ದಲ್ಲಿ 1,534 ನೇಕಾರರ ಫಲಾನುಭವಿಗಳ ಸಾಲ ಮನ್ನಾ ಮೊತ್ತ 3.37 ಕೋಟಿ ರು.ಭರಿಸಬಹುದು  ಎಂದು ಜವಳಿ ಅಭಿವೃದ್ಧಿ ಆಯುಕ್ತರು ಪತ್ರದಲ್ಲಿ ವಿವರಿಸಿದ್ದಾರೆ.

2010ರ ನಂತರ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹಾಗೂ ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೇಕಾರರ ಸಾಲಮನ್ನಾ ಮಾಡಲಾಗಿತ್ತು.  ರೇಷ್ಮೆ, ಕಂಬಳಿ, ಕೈಮಗ್ಗ ಹಾಗೂ ವಿದ್ಯುತ್‌ ಮಗ್ಗದ ನೇಕಾರರು ಇದರ ಫಲಾನುಭವಿಗಳು. ಬಹುತೇಕ ಜಿಲ್ಲೆಗಳಲ್ಲಿನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಮತ್ತು ಸಹಕಾರ ಪತ್ತಿನ ಬ್ಯಾಂಕ್‌ಗಳು ನೇಕಾರರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡಿರಲಿಲ್ಲ. ಹೀಗಾಗಿ ಸಾಲ ಮನ್ನಾ ಯೋಜನೆಯಿಂದ ನೇಕಾರರು ವಂಚಿತರಾಗಿದ್ದರು.

ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ರಾಮನಗರ ಸೇರಿ 15ಕ್ಕೂ ಹೆಚ್ಚು ಡಿಸಿಸಿ ಬ್ಯಾಂಕ್‌ಗಳು ನೇಕಾರರಿಗೆ ಸಾಲ ನೀಡಿರಲಿಲ್ಲ.  ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್‌ಗಳು ನೇಕಾರರಿಗೆ ಸಾಲ ನೀಡಿವೆ ಎನ್ನಲಾಗಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯ ಕೊನೆ ಹಂತದಲ್ಲಿ ನೇಕಾರರ 53 ಕೋಟಿ ರು. ಮೊತ್ತ ಸಾಲ ಮನ್ನಾಕ್ಕೆ ಆದೇಶಿಸಲಾಗಿತ್ತು. ಆದರದು ಅನುಷ್ಠಾನವಾಗಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಂದೇ 53 ಕೋಟಿ ರು.ಗೆ 47 ಕೋಟಿ ರು.ಗಳನ್ನು ಸೇರಿಸಿ ಒಟ್ಟು 100 ಕೋಟಿ ರು. ಸಾಲ ಮನ್ನಾ ಮಾಡಲು ಆದೇಶಿಸಿದ್ದರು.

ರಾಜ್ಯದಲ್ಲಿ ಕೈಮಗ್ಗ, ವಿದ್ಯುತ್‌ ಮಗ್ಗವನ್ನು ಅವಲಂಬಿಸಿರುವ ನೇಕಾರರ ಸಂಖ್ಯೆ 7 ಲಕ್ಷಕ್ಕೂ ಹೆಚ್ಚಿದೆ. ಈ ಪೈಕಿ ಬಹುತೇಕರು ಕ್ರೆಡಿಟ್‌ ಕಾರ್ಡ್, ಮುದ್ರಾ ಯೋಜನೆಯಡಿಯಲ್ಲಿ ಕನಿಷ್ಠ 50 ಸಾವಿರ ಮಂದಿ ಸಾಲ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.