ಮರೆತೇ ಹೋಯ್ತು ರಾಹುಲ್ ಗಾಂಧಿ ಮುತ್ತಜ್ಜಿ ಮನೆ

ಮರೆತೇ ಹೋಯ್ತು ರಾಹುಲ್ ಗಾಂಧಿ ಮುತ್ತಜ್ಜಿ ಮನೆ

ಭಾರತದ ಮೊಟ್ಟ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಪತ್ನಿ ಹುಟ್ಟಿ ಬೆಳೆದ ನಿವಾಸ ಎಲ್ಲಿದೆ, ಏನಾಗಿದೆ? 

ನೆಹರೂ ಲಂಡನ್‍ನ ಹ್ಯಾರೋನಲ್ಲಿದ್ದಾಗಲೇ, ಇವರಿಗೆ ಮದುವೆ ಮಾಡುವುದಕ್ಕಾಗಿ ತಂದೆ ಮೋತಿಲಾಲ ನೆಹರು ವಧುವಿಗಾಗಿ ಹುಡುಕಾಡುತ್ತಿದ್ದರು. ಆಗ ದೆಹಲಿಗೆ ವಲಸೆ ಬಂದು ವಾಸಿಸುತ್ತಿದ್ದ  ಕಾಶ್ಮೀರಿ ಪಂಡಿತರ ಕುಟುಂಬ, ಸೀತಾರಾಂ ಬಜಾರ್ ನಲ್ಲಿನ ಹಕ್ಸರ್ ಹವೇಲಿಯಲ್ಲಿತ್ತು. ಈ ಕುಟುಂಬದ 13 ವರ್ಷದ ಕಮಲರನ್ನ ಮೋತಿಲಾಲ್ ನೆಹರೂ ಸೂಕ್ತ ಸೊಸೆ ಎಂದು ನಿರ್ಧರಿಸಿದ್ದರು. ವಧುವಿಗೆ 17 ವರ್ಷ ತುಂಬಲಿ ಎಂದು ಕಾಯ್ದು ಫೆ.8, 1916 ರಂದು ಜವಹರಲಾಲ್ ನೆಹರು ಜತೆ ಕಮಲಾ ನೆಹರೂ ಮದುವೆ ಮಾಡಿದ್ದರು. ಹಕ್ಸರ್ ಹವೇಲಿಯಲ್ಲೇ ಮದುವೆ ಸಂಭ್ರಮವೆಲ್ಲ ಜರುಗಿತ್ತು. ಮದುವೆಯ ನಂತರದಲ್ಲಿ, ಪ್ರಧಾನಿಯಾದ ಬಳಿಕ ಈ ಮಹಲ್‍ಗೆ ನೆಹರು ಬಂದಿದ್ದರೇ ಎಂಬುದರ ಪುರಾವೆಗಳಿಲ್ಲ. ಇಂದಿರಾ ಗಾಂಧಿ ಕೂಡ ತನ್ನ ತಾಯಿಯ ತವರು ಮನೆ ನೋಡಿರಲಿಲ್ಲ ಎಂಬ ಮಾತುಗಳಿವೆ.

ಹಕ್ಸರ್ ಹವೇಲಿಯನ್ನು ತದನಂತರದಲ್ಲಿ ಬೇರೆಯವರಿಗೆ ಮಾರಲಾಯಿತಾದರೂ, ಕೆಲವಾರು ವ್ಯಾಜ್ಯಗಳಿಗೂ ಅದು ತುತ್ತಾಗಿತ್ತು. ದೆಹಲಿಯ ಅಜ್ಮೇರಿ ಗೇಟ್ ಮತ್ತು ಸೀತಾರಾಂ ಬಜಾರ್ ನಡುವೆ ಇರುವ ಈ ಹವೇಲಿ ಈಗ ತನ್ನ ಮೂಲ ಸ್ವರೂಪ ಕಳೆದುಕೊಂಡು, ಚಿಕ್ಕಪುಟ್ಟ ಗೂಡಂಗಡಿಗಳೂ ಇಲ್ಲಿವೆ. ಸ್ಥಳೀಯರು ಇದನ್ನ ಮಹತ್ವದ ಸ್ಥಳ ಎಂದು ಗುರುತಿಸಿ, ಜೀರ್ಣೋದ್ದಾರ ಮಾಡಿ ಗ್ರಂಥಾಲಯವನ್ನಾಗಿ ಮಾರ್ಪಡಿಸಿ ಎಂಬ ಅಹವಾಲು ಹೇಳಿಕೊಳ್ಳುತ್ತಲೇ ಇದ್ದಾರೆ. ಸರ್ಕಾರವಿರಲಿ ನೆಹರು ಕುಟುಂಬದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾಧ್ರಾ ಕೂಡ ಇದರತ್ತ ನೋಡಿಯೇ ಇಲ್ಲದಿರುವುದು ಅಚ್ಚರಿ ಹುಟ್ಟಿಸುತ್ತದೆ.