ಮಂಗನ ಕೈಯ್ಯಲ್ಲಿ ಮದ್ಯದ ಬಾಟಲಿ ಕೊಟ್ಟಂಗಾಯ್ತು ಅಂತಿದ್ದಾರೆ ಬಿಜೆಪಿ ಮೂಲನಿವಾಸಿಗಳು!

ಅಬಕಾರಿ ಸಚಿವ ನಾಗೇಶ್ ಮನೆ ಬಾಗಿಲಿಗೇ ಮದ್ಯ ಸರಬರಾಜು ಮಾಡುವ ಚಿಂತನೆ ಹರಿಬಿಟ್ಟಿದ್ದೇ ಬಿಜೆಪಿ ಮೂಲನಿವಾಸಿಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿ ಆಗಿರುವ ಬೆಳವಣಿಗೆಗಳೆಲ್ಲ ಸ್ವಾರಸ್ಯಕರವಾಗಿದೆ.   

ಮಂಗನ ಕೈಯ್ಯಲ್ಲಿ ಮದ್ಯದ ಬಾಟಲಿ ಕೊಟ್ಟಂಗಾಯ್ತು ಅಂತಿದ್ದಾರೆ ಬಿಜೆಪಿ ಮೂಲನಿವಾಸಿಗಳು!

ಮನೆ ಮುಂದೆಯೇ ಮದ್ಯ ಸರಬರಾಜು ಮಾಡುವ ಯೋಜನೆ ಪ್ರಸ್ತಾಪಿಸಿದ ಅಬಕಾರಿ ಸಚಿವ ಎಚ್.ನಾಗೇಶ್‍ಗೆ ಮುಖ್ಯಮಂತ್ರಿ ಯಡಿಯೂರಪ್ಪ ತಾರಾಮಾರ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಅಂಥ ಯೋಜನೆಯಿಲ್ಲ ಮಾಧ್ಯಮಗಳೊಡನೆ ಮಾತಾಡುವ ಮುನ್ನ ಪೂರ್ವ ತಯಾರಿ ಮಾಡಿಕೊಂಡು ಬರುತ್ತೇನೆಂಬ ಸ್ಪಷ್ಟನೆ ಅದೇ ಸಚಿವ ಹೇಳಿಕೊಂಡಿದ್ದೇನೋ ಆಗಿದೆ, ಆದರೆ ಇದರ ಪರಿಣಾಮ ತೀವ್ರತೆ ತೆಗೆದುಕೊಂಡು ಹೊಸಾ ನಿಯಂತ್ರಣ ಮಾರ್ಗ ತುಳಿಯಲು ನೆಪ ಕೊಟ್ಟಂತಾಗಿದೆ. 

ಆರೆಸ್ಸೆಸ್ ಪ್ರಣೀತದ ಮೂಲ ಬಿಜಿಪಿಗರು, ಹೊರಗಿನಿಂದ ಬಂದವರಿಗೆಲ್ಲ ಮಂತ್ರಿಗಿರಿ ಕೊಡುತ್ತಿರುವ ಬಗ್ಗೆ ಒಳಗೊಳಗೇ ಕಿಡಿಕಾರುತ್ತಿದ್ದಾರೆ. ಸಿದ್ದಾಂತವೇ ಗೊತ್ತಿಲ್ಲದವರಿಗೆಲ್ಲ ಮಣೆ ಹಾಕಿದರೆ ನಾವೆಲ್ಲ ಯಾಕಿರಬೇಕು ಎಂಬುದು ದೊಡ್ಡ ತಿರುವು ತೆಗೆದುಕೊಳ್ಳುವುದಕ್ಕೆ ಸಂಪುಟ ವಿಸ್ತರಣೆವರೆಗೆ ಮಾತ್ರ ಕಾಯ್ದಿದ್ದಾರೆ. ಬೇಕಾದ ಖಾತೆ ಸಿಗದವರು, ಉಪಮುಖ್ಯಮಂತ್ರಿ ಎನ್ನಿಸಿಕೊಳ್ಳಲಾಗದವರು, ಸಿಎಂ ಈಗ ನಮ್ಮೆನ್ನೆಲ್ಲ ಬದಿಗಿರಿಸಿ ಅಶ್ವತ್ಥನಾರಾಯಣರನ್ನ ಬಗಲಲ್ಲಿಟ್ಟುಕೊಂಡೇ ಓಡಾಡುತ್ತಿರುವುದರಿಂದ ಅಸಮಾಧಾನಿತರಾಗಿರುವ ಸಿಟಿ ರವಿ, ಆರ್. ಅಶೋಕ್ ಮೊದಲಾದವರೂ ಕೈಜೋಡಿಸಿಬಿಟ್ಟರೆ , ಸರ್ಕಾರದ ಆಸುಪಾಸಿನಲ್ಲೇ ಓಡಾಡುತ್ತಿರುವ ಗಂಡಾಂತರ ಯಾವುದೇ ಕ್ಷಣದಲ್ಲೂ ಅಡರಿಕೊಳ್ಳುತ್ತೆ. ಇಂಥ ಇಕ್ಕಟ್ಟಿನ ಸ್ಥಿತಿಯಿರುವಾಗಲೇ, ಅವಕಾಶಕ್ಕಾಗಿ ಅಲ್ಲಿಂದಿಲ್ಲಿಗೆ ಓಡಾಡುತ್ತಿರುವ ಪಕ್ಷೇತರ ಶಾಸಕ ನಾಗೇಶ್‍ಗೆ ಮಂತ್ರಿಗಿರಿ ಸಿಕ್ಕಿದ ಭರದಲ್ಲೇ ಮನೆಮನೆಗೆ ಮದ್ಯ ಮಾರುವ ಸಂಚಾರೀ ವ್ಯವಸ್ಥೆಯಂಥ ಕಲ್ಯಾಣ ಕಾರ್ಯಕ್ರಮದ ಮಹಾನ್ ಕನಸು ಬಿಚ್ಚಿಟ್ಟರು.

ನೋಡಿದ್ರಾ, ಎಂಥೆಂತವರನ್ನೋ ಮಂತ್ರಿ ಮಾಡಿಕೊಂಡರೆ ಮರ್ಯಾದೆ ಹೋಗುವುದೇ ಪಕ್ಷದ್ದು ಎಂದು ಅಸಮಾಧಾನಿತರ ಗುಂಪು ಟೀಕೆಗಿಳಿದು, ಸಂಘ ಪರಿವಾರದ ಗಮನಕ್ಕೂ ತರುವಲ್ಲಿ ಯಶಸ್ವಿಯಾಯಿತು. ಇಂಥ ಅಪಹಾಸ್ಯವನ್ನೆಲ್ಲ ನಿಯಂತ್ರಿಸಿ ಎಂದು ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿದ್ದಲ್ಲದೆ, ಮುಂದೆ ಮಂತ್ರಿಗಳಿಂದ ಇಂಥದ್ದು ಆಗಬಾರದು ಅದಕ್ಕೆ ಹೀಗೆ ಮಾಡಿ ಎಂಬ ದಾರಿಯೊಂದನ್ನ ತೋರಿಸಿಕೊಟ್ಟಿದೆ.

ಆ ದಾರಿ ಅನುಸಾರ ಎಲ್ಲಾ ಮಂತ್ರಿಗಳಿಗೂ ಮಾಧ್ಯಮ ಸಂಸ್ಥೆಯ ಒಬ್ಬೊಬ್ಬರನ್ನ ಪ್ರತಿಷ್ಠಾಪಿಸುವುದು, ಇದರಿಂದಾಗಿ ಬಹುತೇಕ ಸುದ್ದಿ ಸಂಸ್ಥೆಗಳವರನ್ನ ಓಲೈಸಿದಂತೆಯೂ ಆಯಿತು, ಬಲಪಂಥೀಯ ವಿಚಾರಧಾರೆ ಹಿನ್ನೆಲೆಯಲ್ಲಿ ಇವರು ಸಚಿವರಿಗೆ ಸಲಹೆ ಕೊಡುವಂಥದ್ದೂ ಆಯಿತು. ಇದೆಲ್ಲದರ ಒಟ್ಟು ಪರಿಣಾಮವಾಗಿ ಮಾಧ್ಯಮಗಳು ಸರ್ಕಾರವನ್ನ ಹಾಡುಹೊಗಳುವಂಥದ್ದಾಗುತ್ತೆ. ಇಂಥ ಅಮೋಘ ಸಲಹೆಯನ್ನ ಮಾನ್ಯ ಮಾಡಲು ಸರ್ಕಾರ ಹೊರಟು, ಸುದ್ದಿ ಸಂಸ್ಥೆಗಳಲ್ಲಿ ಇರುವವರ ಪಟ್ಟಿ ಮಾಡುತ್ತಿದೆ. ಇಲ್ಲೀಗಾಗಲೇ ವಟುಗಳು ಬರೀ ಲಿಂಗಾಯತರನ್ನೆ ತುಂಬಿಕೊಳ್ಳುತ್ತಿದ್ದೀರಿ ಎಂಬ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೆ, ಅನ್ಯ ಜಾತಿಯವರಿಗೂ ನೆಲೆ ಕೊಡಿರೆಂದು ಇತರ ಜನಾಂಗದವರೂ ಅಕ್ಷರೇತರ ರೂಪದ ಅರ್ಜಿ ಗುಜರಾಯಿಸುತ್ತಿದ್ದಾರೆ.

ಮತ್ತೊಂದೆಡೆ ಸಚಿವ ನಾಗೇಶ್‍ಗೆ ಚಳಿ ಬಿಡಿಸಿರುವ ಯಡಿಯೂರಪ್ಪ ಯಾವುದೇ ಮಂತ್ರಿಯೂ ಎಡವಟ್ಟಿನ ಹೇಳಿಕೆ ಕೊಡಬೇಡಿ ಎಂದು ಹೇಳಿರುವ ಜತೆಗೆ, ಏನಾದರೂ ಗೊಂದಲದ ಹೇಳಿಕೆ ಕೊಡಬಹುದಾದ ಸಚಿವರು ಯಾರು ಎಂಬುದರ ಪಟ್ಟಿ ಮಾಡುತ್ತಿದ್ದಾರೆ. ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು ಮೊದಲಾದವರ ಹೇಳಿಕೆ ಬಗ್ಗೆ ವಿಶೇಷ ನಿಗಾ ಇಡುವಂಥದ್ದನ್ನ ಮಾಡಲಾಗಿದೆ.

ಇದೂ ಸಾಲದೆಂಬಂತೆ, ಅತಂತ್ರ ಶಾಸಕರಿಗೆ ಅನುಕೂಲಕರ ತೀರ್ಪು ಬಂದು, ಇನ್ನಷ್ಟು ಪಕ್ಷಾಂತರಿಗಳು ಕಮಲಕ್ಕೆ ವಿಲೀನವಾಗುವಂಥದ್ದು ಸಫಲವಾದ ನಂತರ, ಮುಲಾಜಿಲ್ಲದೆ ಸಂಪುಟದಿಂದ ಗೇಟ್ ಪಾಸ್ ಯಾರಿಗೆ ಕೊಡಬೇಕು ಎಂಬ ಪಟ್ಟಿ ತಯಾರಿಸಿಕೊಳ್ಳಲಾಗುತ್ತಿದೆ, ಈ ಹಿಟ್ ಲಿಸ್ಟ್ನಲ್ಲಿ ಎಚ್.ನಾಗೇಶ್ ಅಗ್ರಸ್ಥಾನದಲ್ಲಿದ್ದಾರೆ.