ಮಹಾ ಪರಿವರ್ತನೆ ಘಟಿಸಲೇಬೇಕು

ಮಹಾ ಪರಿವರ್ತನೆ ಘಟಿಸಲೇಬೇಕು

ಸ್ವಾತಂತ್ರ್ಯಾ ನಂತರದ ಸರ್ಕಾರಗಳು ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೂ ಸಮಾನತೆ, ಸಹಬಾಳ್ವೆ, ಜಾತ್ಯಾತೀತತೆ ಒಳಗೊಂಡ ನೆಮ್ಮದಿಯ ಭಾರತ ನೋಡಲು ಇನ್ನೆಷ್ಟು ವರ್ಷ ಕಾಯಬೇಕು ಎಂದು ಮಲ್ಲಿಕಾರ್ಜುನ ಗೌಡ ತೂಲಹಳ್ಳಿ ಪ್ರಶ್ನಿಸುತ್ತಾರೆ.

 

ಚುನಾವಣೆಗಳು ಬದಲಾವಣೆಯ ದಿಕ್ಸೂಚಿಗಳೆಂಬುದು ಈಗ ಅಪನಂಬಿಕೆಯ ಮಾತಾಗಿದೆ.ಹಾಗಂತ ಸ್ವಾತಂತ್ರ್ಯಾ ನಂತರದ ಹಲವು ಸರ್ಕಾರಗಳು ಈ ದೇಶವನ್ನು ಪ್ರಗತಿಯತ್ತ ಕೊಂಡೊಯ್ದಿಲ್ಲವೆಂದಲ್ಲ. ಆಣೆಕಟ್ಟು, ಹಸಿರು ಕ್ರಾಂತಿ, ರಸ್ತೆಗಳು, ಸೇತುವೆಗಳು, ಕಟ್ಟಡಗಳು, ವಿಜ್ಞಾನ ತಂತ್ರಜ್ಞಾನ ಪ್ರಣೀತ ಕೈಗಾರಿಕೆಗಳು, ಭೌತಿಕ ಸವಲತ್ತುಗಳನ್ನು ವೃದ್ಧಿಸಿದ ಸಂಶೋಧನೆಗಳು,ಆರೋಗ್ಯ ವಿಜ್ಞಾನದ ಸಾಧನೆಗಳು , ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳು ಹೀಗೆ ಪಟ್ಟಿ ದೊಡ್ಡದಾಗುತ್ತದೆ.

ಆದರೆ ಇಷ್ಟೆಲ್ಲವೂ ಈ ದೇಶದ ಮಹಾರೋಗವಾದ ಜಾತಿವಾದವನ್ನಾಗಲೀ, ಸಾಮಾಜಿಕ ಆರ್ಥಿಕ ಅಸಮಾನತೆಯನ್ನಾಗಲೀ, ಕಾಲದ ಅಗತ್ಯಕ್ಕನುಗುಣವಾಗಿ ನಿರುದ್ಯೋಗ ನಿವಾರಣೆಯನ್ನಾಗಲೀ ಮಾಡಲಿಲ್ಲ. ಅಂದಿನಿಂದ ಇಂದಿನವರೆಗೆ ಈ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ಇವುಗಳ ನಿವಾರಣೆಯ ಭರವಸೆಗಳ ಮಹಾಪೂರವೇ ಹರಿದಿದ್ದರೂ ಸಮಸ್ಯೆಗಳೇಕೆ ಹಾಗೇ ಕಗ್ಗಂಟಾಗಿವೆ?

     ಇಲ್ಲಿ ಆಳುವವರಲ್ಲಿರಬೇಕಾದ ನೈತಿಕತೆ,ಆತ್ಮನಿರೀಕ್ಷಣೆ ಮೊದಮೊದಲ ಸರ್ಕಾರಗಳ ಒಂದೆರಡು ಅವಧಿಯಲ್ಲಿ ಕೊಂಚವಿದ್ದಿತಾದರೂ ಆನಂತರ ಅಧಿಕಾರವೆಂಬುದು ಪ್ರಜೆಗಳ ವಂಚಿಸುವ ಅವಕಾಶವಾದದ್ದೇ ಹೆಚ್ಚು.

   ಲೋಹಿಯಾ, ಜಯಪ್ರಕಾಶ ನಾರಾಯಣರಂತಹ ಕೆಲ ಮುತ್ಸದ್ದಿಗಳ ಕಾಲ ಹೊರತುಪಡಿಸಿದರೆ ಭಾರತದಲ್ಲಿ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳ ಗುರಿ ಒಂದೇ ಅಧಿಕಾರ ಹಿಡಿಯುವುದು. ಅಧಿಕಾರದಲ್ಲಿದ್ದ ಸರ್ಕಾರದ ಗಂಭೀರ ವಿಮರ್ಶೆಯಾಗಲೀ, ಟೀಕೆಗಳಾಗಲೀ ಜನಮುಖಿಯಾಗದೆ ಪ್ರಜಾಪ್ರಭುತ್ವಕ್ಕೆ ಅವಲಕ್ಷಣವೆನ್ನಿಸುವಷ್ಟು ಕ್ಷುಲ್ಲಕ ಮಟ್ಟಕ್ಕಿಳಿದು, ಅಂಥವುಗಳ ವಿಮರ್ಶೆಗಿಂತ ವೈಭವೀಕರಣವೇ ಮಾಧ್ಯಮಗಳ ಒಳ ಒಪ್ಪಂದದ ಜವಾಬ್ದಾರಿಯಾಗಿ ಜನರ ಆಲೋಚನೆಗಳನ್ನು ಮತ್ತಷ್ಟೂ ಪ್ರಪಾತಕ್ಕೊಯ್ದವು.

     ಹೀಗೆ ಪ್ರಾಚೀನ ಕಾಲದಿಂದಲೂ ಜಾತಿ ವ್ಯವಸ್ಥೆ, ಜಮೀನ್ದಾರಿಕೆಗಳ ದಬ್ಬಾಳಿಕೆಯಲ್ಲಿ ನಲುಗಿ ಹಿಡಿ ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿದ್ದ ಜನರಿಗೆ ತಾತ್ಕಾಲಿಕ ಉಪಶಮನದ  ಬಿಸ್ಕತ್ತಿನಂತಹ ಕೆಲ ಯೋಜನೆಗಳನ್ನು ರೂಪಿಸಿ, ಅವುಗಳನ್ನೇ ತಮ್ಮ ಜನಪರ ಕಾಳಜಿಗಳೆಂದು ತುತ್ತೂರಿ ಊದಿಕೊಳ್ಳುತ್ತ ನೊಂದವರ ಆತ್ಮದಲ್ಲಿ ಹೊಸದೊಂದು ರಾಜಕೀಯ ಆಲೋಚನಾ ಶಕ್ತಿ ಶಾಶ್ವತವಾಗಿ ಪ್ರಜ್ವಲಿಸದಂತೆ ಜಾತಿ ಧ್ರುವೀಕರಣ ಮಾಡಿ ಅವರನ್ನು ಕತ್ತಲಲ್ಲಿಟ್ಟರು. ಧರ್ಮಗಳಿಗೆ ಅಫೀಮು ತಿನ್ನಿಸಿ ಹುಂಬರ ಕೈಗೆ ಶಸ್ತ್ರಾಸ್ತ್ರ ಕೊಟ್ಟರು. ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ಕಳೆದರೂ ಈ ದೇಶ ಪ್ರಕಾಶಿಸುತ್ತಿರುವುದು ಹಿಂಸೆಯಿಂದ.

     ಅಲ್ಲಿಂದ ಇಲ್ಲಿಯತನಕ ಚುನಾವಣೆಗಳು ಬಂದಾಗಲೆಲ್ಲಾ 'ಸದ್ಯದ ಪರಿಸ್ಥಿತಿ, ಸದ್ಯದ ಪರಿಸ್ಥಿತಿ' ಎಂಬ ಅವಸರ ತುಂಬಿ ತಕ್ಷಣ ಪ್ರಾಣ ತೆಗೆಯುವವರಿಗಿಂತ ನಿಧಾನವಾಗಿ ಕೊಲ್ಲಬಲ್ಲವರೇ ಉತ್ತಮರೆಂಬ  ಹುಸಿ ಅನಿವಾರ್ಯತೆಗಳನ್ನು ಮುಂದಿಟ್ಟು ಪ್ರಗತಿಪರ ಚಿಂತನೆಗಳ ಪ್ರಖರತೆಗೆ ಪ್ರಗತಿಪರರೆಂದು ಮುಂಚೂಣಿಯಲ್ಲಿರುವವರೇ ಮಂಕು ಬಳಿದರು.

     ಅಂದರೆ ಒಂದು ರಾಷ್ಟ್ರದ ಜನಗಳ ಆತ್ಮದಲ್ಲಿ ತನಗೆ ಯೋಗ್ಯವಾದ ರಾಜಕೀಯ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾದ ಅಂತಸ್ಸತ್ವವನ್ನೇ ಜಾತಿ,ಮತ,ಹಣ,ಹಿಂಸೆಗಳನ್ನು ತುಂಬಿ ಹೊಲಸುಗೆಡಿಸಿದ ಮೇಲೆ ಬರೀ ಭೌತಿಕ ಅಭಿವೃದ್ಧಿಗಳ ಗೊಂಡಾರಣ್ಯದ ರಾಷ್ಟ್ರ ಕಾಣಬಹುದೇ ಹೊರತು, ಸಂವಿಧಾನದ ಆಶಯಗಳಾದ ಸಮಾನತೆ,ಸಹಬಾಳ್ವೆ,ಜಾತ್ಯತೀತತೆಗಳಿರುವ ನೆಮ್ಮದಿಯ ಭಾರತ ಕಾಣಲು ಇನ್ನೂ ಎಷ್ಟು ಶತಮಾನ ಕಾಯಬೇಕು?

     ಈ ಪ್ರಶ್ನೆ ಎದುರಾದ ತಕ್ಷಣ ನಮ್ಮ ಆಲೋಚನೆಯ ದಿಕ್ಕು ತಿರುಗಿ ನಿಲ್ಲುವುದು ಜನಸಾಮಾನ್ಯರ ಕಡೆಗೆ. ಜಾತಿ ಹೋಳುಗಳಾದ ಬಲಿಷ್ಠ ಭಾರತದ ಈ ಇವರು ಅಧಿಕಾರ ಲಾಲಸೆಯುಳ್ಳ ಶ್ರೀಮಂತ ಸೋಗಲಾಡಿ ಅಭ್ಯರ್ಥಿಗಳ ತಕ್ಷಣದ ಪ್ರಲೋಭನೆಗಳಿಗೆ ಬಲಿಯಾಗಿ ದೇಶವನ್ನು ಪ್ರತೀ ಐದು ವರ್ಷಗಳಿಗೊಮ್ಮೆ ಬಲಿಪೀಠಕ್ಕೇರಿಸುತ್ತಿರುವವರು. ಇವರ ನಿರ್ಧಾರಗಳನ್ನು ಸರಿದಿಕ್ಕಿಗೆ ತಿರುಗಿಸಬಲ್ಲ ಮಹಾ ಪರಿವರ್ತನೆ ಘಟಿಸಲೇಬೇಕು. ಅದನ್ನು ಯಾರ ಹೆಗಲಿಗೆ ಹೊರಿಸುವುದು?

    ಗೋಪಾಲಕೃಷ್ಣ ಅಡಿಗರ 'ಭೂತ' ಕವಿತೆಯ ಸಾಲು ಹೀಗಿದೆ: "ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು, ಗುದ್ದಲಿಯೆತ್ತಿ ಕುಕ್ಕಿದರೆ ಕಂಡೀತು ಗೆರೆಮಿರಿವ ಚಿನ್ನದದಿರು". ಭಾರತದ ಎಪ್ಪತ್ತು ವರ್ಷಗಳ ರಾಜಕೀಯ ಪರಂಪರೆಯನ್ನು ಎಷ್ಟೇ ಗುದ್ದಲಿಯೆತ್ತಿ ಅಗೆದರೂ ಕಾಣುತ್ತಿರುವುದು ಬರೀ ಮಣ್ಣೇ.