ಗ್ರಾಂಸಿಯ ರಾಜಕೀಯ ಹಿನ್ನಡೆ ಮತ್ತು ಬಂಧನ

ಗ್ರಾಂಸಿಯ ರಾಜಕೀಯ ಹಿನ್ನಡೆ ಮತ್ತು ಬಂಧನ

(ಕಳೆದ ಭಾನುವಾರದಿಂದ.....)
1920ರಲ್ಲಿ ಸೋಷಿಯಲಿಸ್ಟ್ ಪಕ್ಷದ ಎಡಪಂಥೀಯರು ಪಕ್ಷವನ್ನು ತೊರೆದು ಇಟಲಿಯ ಕಮ್ಯುನಿಸ್ಟ್ ಪಕ್ಷವನ್ನು(ಪಿ.ಸಿ.ಇ.) ಕಟ್ಟಿದರು. ಗ್ರಾಂಸಿ, ಬೋರ್ಡಿಗ, ತೊಗ್ಲಿಯಾಟ್ಟಿ, ಬಂಬೊರ್ಟೊ ಟೆರಸಿನ್ನಿ ಹಾಗೂ ಎಂಜೆಲೊ ಟಸ್ಕ ಪಕ್ಷದ ಪ್ರಮುಖ ನಾಯಕರಾಗಿದ್ದರು. ಬೋರ್ಡಿಗ ಪಕ್ಷದ ಮೊದಲ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ.

ಬೋರ್ಡಿಗ ಸೋಷಿಯಲಿಸ್ಟ್ ಪಕ್ಷದ ದಿನಗಳಿಂದಲೂ ಪ್ರಭಾವಿ ನಾಯಕನಾಗಿದ್ದ. ಗ್ರಾಂಸಿ ಬೋರ್ಡಿಗನಷ್ಟು ಪ್ರಭಾವಿಯಲ್ಲದಿದ್ದರೂ ಪಕ್ಷದಲ್ಲಿ ಅವನಿಗೆ ಸಾಕಷ್ಟು ಗೌರವವಿತ್ತು. ಎಡಪಕ್ಷಗಳ ಅನೇಕ ಬಿನ್ನಾಭಿಪ್ರಾಯಗಳು ‘ಮೂರನೆಯ ಇಂಟರ್ ನ್ಯಾಷನಲ್’ನ ಸಮಾವೇಶದ ವೇದಿಕೆಯನ್ನೂ ಏರಿತು. ತಾತ್ಕಾಲಿಕ ಪರಿಹಾರವಾಗಿ ಗ್ರಾಂಸಿಯನ್ನು ಇಂಟರ್‍ನ್ಯಾಷನಲ್‍ನ ಕೇಂದ್ರಕಛೇರಿಯಲ್ಲಿ ಇಟಲಿಯ ಪಕ್ಷದ ಪ್ರತಿನಿಧಿಯಾಗಿ ಆಯ್ಕೆ ಮಾಡಿ, ಎರಡು ವರ್ಷಗಳ ಅವಧಿಗೆ(1920-22) ಮಾಸ್ಕೊಗೆ ಕಳುಹಿಸಿತು.

1922ರಲ್ಲಿ ಇಟಲಿಗೆ ಹಿಂತಿರುಗಿದ ನಂತರ ಗ್ರಾಂಸಿ ತನ್ನ ನಿಲುವನ್ನು ಪಕ್ಷದ ಸದಸ್ಯರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮುಂದುವರಿಸಿದ. 1924ರ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯನಾಗಿ ಪಾರ್ಲಿಮೆಂಟಿಗೆ ಆಯ್ಕೆಯಾದ. 1924ರಲ್ಲಿ ಲಿಯೊನೆಲ್ ನಗರದಲ್ಲಿ ನಡೆದ ಪಕ್ಷದ ಅಧಿವೇಶನದಲ್ಲಿ ಪಕ್ಷವು ಹಿಡಿಯಬೇಕಾದ ಹಾದಿಯ ಬಗ್ಗೆ ಚರ್ಚೆ ನಡೆಯಿತು. ಇದು ಹಲವಾರು ಬಿನ್ನಭಿಪ್ರಾಯಗಳಿಂದ ಕೂಡಿದ ಸುದೀರ್ಘ ಚರ್ಚೆಯಾಯಿತು.

ಆ ಅಧಿವೇಶನದಲ್ಲಿ ಗ್ರಾಂಸಿಯ ನಿಲುವನ್ನು ಬಹುಪಾಲು ಸದಸ್ಯರು ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಗ್ರಾಂಸಿಯನ್ನು ಪಕ್ಷದ ಪ್ರಧಾನ ಕಾಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಈ ನಡುವೆ ಸೋಷಿಯಲಿಸ್ಟ್ ಪಕ್ಷದ ನಾಯಕ ಮಟ್ಟಿಯೊಟ್ಟಿಯ ಹತ್ಯೆಯಾಯಿತು. ಮಟ್ಟಿಯೊಟ್ಟಿಯ ಕೊಲೆ ನಡೆದ ತಕ್ಷಣವೇ ಎಲ್ಲ ಫಾಸಿಸ್ಟ್‍ವಿರೋದಿ ಸಂಘಟನೆಗಳು ಒಗ್ಗೂಡಿ ಸಾರ್ವತ್ರಿಕ ಮುಷ್ಕರ ನಡೆಸಬೇಕು ಎಂದು ಗ್ರಾಂಸಿ ಕರೆ ನೀಡಿದ.

ತಮ್ಮ ಪಕ್ಷದ ನಾಯಕನ ಕೊಲೆಯಾಗಿದ್ದರೂ ಸೋಷಿಯಲಿಸ್ಟ್ ಪಕ್ಷದವರು ಮುಷ್ಕರದಲ್ಲಿ ಭಾಗವಹಿಸಲು ನಿರಾಕರಿಸಿದರು. ಮುಸಲೋನಿ ಇಟಲಿಯ ಜನರಿಗೆ ಉದ್ದುದ್ದ ಭರವಸೆಗಳನ್ನು ನೀಡಿದ್ದರೂ ಉಳ್ಳವರ ಪರವಾದ ಹಾಗೂ ವಿದೇಶಿ ಬಂಡವಾಳದಾರರನ್ನು ಓಲೈಸುತ್ತಿದ್ದ.

 ಇದರಿಂದ ಸಾಮಾನ್ಯ ಜನರಲ್ಲಿ ಅಸಮಾಧಾನ ಉಂಟಾಗುತ್ತಿರುವುದನ್ನು ಗ್ರಾಂಸಿ ಗ್ರಹಿಸಿದ. ಈ ಸನ್ನಿವೇಶದಲ್ಲಿ ಒಂದು ಕಡೆ ದಕ್ಷಿಣದ ಫಾಸಿಸ್ಟ್‍ವಿರೋದಿ ರೈತ ಸಂಘಟನೆಗಳ ಜೊತೆಗೆ ಮೈತ್ರಿ ಸಾಧಿಸುವುದು, ಮತ್ತೊಂದು ಕಡೆ ಫಾಸಿಸ್ಟ್ ಸರ್ಕಾರದ ಉಳ್ಳವರ ಪರವಾದ ನೀತಿಗಳಿಗೆ ಬಹಿರಂಗವಾಗಿಯೇ ವಿರೋಧ ತೋರಿಸುತ್ತಿದ್ದ ‘ತಳಮಟ್ಟದ ಫಾಸಿಸ್ಟ್ ಬೆಂಬಲಿಗರ’ ನಡುವೆ ಕಮ್ಯುನಿಸ್ಟ್ ಪಕ್ಷದ ಧೋರಣೆಗಳನ್ನು ಜನಪ್ರಿಯಗೊಳಿಸುವುದು, ಪಕ್ಷದ ಕಾರ್ಯಕರ್ತರಿಗೆ ಈ ರೀತಿ ಎರಡು ನಮೂನೆಯ ಕಾರ್ಯಕ್ರಮಗಳನ್ನು ಗ್ರಾಂಸಿ ರೂಪಿಸಿದ.

 ಫಾಸಿಸ್ಟ್ ಪ್ರಭುತ್ವ ಹೆಚ್ಚೆಚ್ಚು ಕ್ರೂರವಾಗಿ ವಿರೋಧಿಗಳನ್ನು ದಮನ ಮಾಡಲು ಶುರು ಮಾಡಿದ ಹೊತ್ತಿನಲ್ಲಿ ಈ ಕಾರ್ಯಕ್ರಮಗಳು ಸುಲಲಿತವಾಗಿ ನಡೆದುಕೊಂಡು ಹೋಗುತ್ತವೆ ಎನ್ನುವ ಭ್ರಮೆ ಗ್ರಾಂಸಿಗೆ ಒಂದಿಷ್ಟೂ ಇರಲಿಲ್ಲ. “ಹಿಂದಿನ ರೀತಿಯಲ್ಲಿಯೇ ನಮ್ಮ ಕಾರ್ಯಕ್ರಮಗಳನ್ನು ಇಂದು ಕೂಡ ನಡೆಸಿಕೊಂಡು ಹೋಗುತ್ತೇವೆ ಎನ್ನುವುದು ಹುಂಬತನ; ನಮ್ಮ ವಿಚಾರಗಳ ಪ್ರಸಾರಕ್ಕೆ ಪರಿಸ್ಥಿತಿ ಪ್ರತಿಕೂಲವಾಗಿದೆ ಎನ್ನುವುದನ್ನು ಮೊದಲು ನಾವು ಒಪ್ಪಿಕೊಳ್ಳಬೇಕು. ಹಾಗೆಂದು ಅನುಕೂಲಕರ ವಾತಾವರಣಕ್ಕೆ ಕಾಯೋಣ ಎಂದು ಕೈಚೆಲ್ಲಿ ಕೂಡಬಾರದು; ಈ ಪ್ರತಿಕೂಲ ಸನ್ನಿವೇಶದಲ್ಲೂ ನಮ್ಮ ವಿಚಾರಗಳನ್ನು ಜನರಿಗೆ ತಲುಪಿಸುವ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕು. ಇದೇ ವಾಸ್ತವಿಕವಾಗಿ ರಾಜಕೀಯದ ಅರ್ಥ” ಎಂದು ಗ್ರಾಂಸಿ ಪಕ್ಷದ ಸದಸ್ಯರಿಗೆ ವಿವರಿಸಿದ.

 1926ರಲ್ಲಿ ಯುವಕನೊಬ್ಬ ಮುಸಲೋನಿಯ ಹತ್ಯೆಗೆ ಯತ್ನಿಸಿದ. ಇದನ್ನೇ ನೆಪ ಮಾಡಿಕೊಂಡು ಫಾಸಿಸ್ಟ್ ಸರ್ಕಾರ ತನ್ನ ವಿರೋಧಿಗಳನ್ನೆಲ್ಲ ‘ದೇಶದ್ರೋಹ’ದ ಆರೋಪ ಹೊರಿಸಿ ಬಂಧಿಸುವ ಆಜ್ಞೆ ಹೊರಡಿಸಿತು. ಪಕ್ಷದ ಸಂಗಾತಿಗಳು ಗ್ರಾಂಸಿಯು ಇಟಲಿಯಲ್ಲಿ ಇರುವುದು ಸುರಕ್ಷಿತವಲ್ಲ ಎಂದು ಗ್ರಹಿಸಿ ಅವನನ್ನು ಸ್ವಿಟ್ಜರ್‍ಲ್ಯಾಂಡಿಗೆ ಕಳಿಸುವ ನಿರ್ಧಾರ ಮಾಡಿದರು.

 ಆಗ ಇಟಲಿಯಲ್ಲಿ ಸಂಸತ್ ಸದಸ್ಯರನ್ನು ರಾಜಕೀಯ ಕಾರಣಗಳಿಗೆ ಬಂಧಿಸಕೂಡದು ಎನ್ನುವ ನಿಯಮವಿದ್ದುದರಿಂದ ತನ್ನನ್ನು ಸರ್ಕಾರವು ಬಂಧಿಸಲಿಕ್ಕಿಲ್ಲ ಎಂದು ಗ್ರಾಂಸಿ ದೇಶಾಂತರ ಹೋಗಲು ನಿರಾಕರಿಸಿದ. ಆದರೆ ಅವನ ನಿರೀಕ್ಷೆಗೂ ಮೀರಿ ಸಂಸತ್ ಸದಸ್ಯರನ್ನು ಕೂಡ ಸರ್ಕಾರ ಬಂಧಿಸತೊಡಗಿತು. ಆಗಲೂ ಗ್ರಾಂಸಿಯು ಹಡಗಿನ ಪ್ರಯಾಣಿಕರೆಲ್ಲ ಸುರಕ್ಷಿತವಾಗಿ ದಡ ತಲುಪಿದ್ದಾರೆ ಎಂದು ಖಾತ್ರಿಯಾಗದ ಹೊರತು ನಾವಿಕ ತನ್ನ ಸುರಕ್ಷೆಯ ಬಗ್ಗೆ ಚಿಂತಿಸಕೂಡದು. ಪಕ್ಷದ ತಳಮಟ್ಟದ ಕಾರ್ಯಕರ್ತರು ನಾಯಕರಿಲ್ಲದೆ ತಾವು ಹೋರಾಟ ನಡೆಸಬಲ್ಲೆವು ಎಂಬ ವಿಶ್ವಾಸ ವ್ಯಕ್ತಪಡಿಸದ ಹೊರತು ನಾವು ದೇಶ ಬಿಡಕೂಡದು ಎಂದು ಧೃಢವಾಗಿ ಹೇಳಿ ಇಟಲಿಯಲ್ಲಿಯೇ ಉಳಿದ.

ಎಣಿಸಿದಂತೆಯೇ 1926ರಲ್ಲಿ ಗ್ರಾಂಸಿಯು ಸೇರಿದಂತೆ ಕಮ್ಯುನಿಸ್ಟ್ ಪಕ್ಷದ ಉನ್ನತ ನಾಯಕರನ್ನು “ರಾಷ್ಟ್ರವಿರೋಧಿ ಕೃತ್ಯಗಳಿಗಾಗಿ”ಬಂಧಿಸಲಾಯಿತು.  

(ಮುಂದುವರೆಯುವುದು)

ಹಿಂದಿನ ಸಂಚಿಕೆ-ಗ್ರಾಂಸಿ ಕಂಡ ಫಾಸಿಸಂ