ಫ್ಯಾಕ್ಟರಿ ಚಳವಳಿಯಲ್ಲಿ ಗ್ರಾಂಸಿ

ಫ್ಯಾಕ್ಟರಿ ಚಳವಳಿಯಲ್ಲಿ ಗ್ರಾಂಸಿ

(ಕಳೆದ ಭಾನುವಾರದಿಂದ...)

 

1913ರಲ್ಲಿ ಮೊದಲನೆಯ ಮಹಾಯುದ್ಧ ಶುರುವಾಯಿತು. ಇಟಲಿಯು ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ಮೈತ್ರಿಕೂಟವನ್ನು ಸೇರಿಕೊಂಡಿತು. ಯುರೋಪಿನ ಎಲ್ಲ ಸಮಾಜವಾದಿ/ಕಮ್ಯುನಿಸ್ಟ್ ಪಕ್ಷಗಳು ಮೊದಲಿಗೆ ಈ ಯುದ್ಧವನ್ನು ಬಂಡವಾಳಶಾಹಿಗಳು ತಮ್ಮ ಲಾಭಕ್ಕಾಗಿ ನಡೆಸುತ್ತಿರುವ ಯುದ್ಧ ಎಂದು ಗುರುತಿಸಿದ್ದವು. ಬಂಡವಾಳಶಾಹಿಯು ನಿರೂಪಿಸುತ್ತಿರುವ ರಾಷ್ಟ್ರಪ್ರೇಮದ ಸೋಗಿಗೆ ಮರುಳಾಗಿ ತಮ್ಮ ರಾಷ್ಟ್ರೀಯ ಪ್ರಭುತ್ವಗಳ ಯುದ್ಧನೀತಿಗೆ ಬೆಂಬಲ ಸೂಚಿಸಕೂಡದು ಎಂಬ ಒಮ್ಮತದ ನಿರ್ಧಾರವನ್ನು ಸಮಾಜವಾದಿ/ ಕಮ್ಯುನಿಸ್ಟ್ ಪಕ್ಷಗಳು ತೆಗೆದುಕೊಂಡಿದ್ದವು. ಆದರೆ ಯುದ್ಧ ಮುಂದುವರಿಯುತ್ತಾ ಹೋದಂತೆ ಬಹುಪಾಲು ಪಕ್ಷಗಳು ತಮ್ಮ ತಮ್ಮ ಪ್ರಭುತ್ವಗಳ ಯುದ್ಧನೀತಿಗೆ ಸಕ್ರಿಯ ಬೆಂಬಲ ಸೂಚಿಸತೊಡಗಿದವು. ಇಟಲಿಯ ಸೋಷಿಯಲಿಸ್ಟ್ ಪಕ್ಷ ಕೂಡ ಇದೇ ಧೋರಣೆಯನ್ನು ಅನುಸರಿಸಿತು. ಸೋಷಿಯಲಿಸ್ಟ್ ಪಕ್ಷದ ಎಡಪಂಥೀಯ ಗುಂಪು ಮಾತ್ರ ತನ್ನ ಪಕ್ಷದ ಯುದ್ಧನೀತಿಯನ್ನು ಬಹಿರಂಗವಾಗಿಯೇ ವಿರೋಧಿಸಿತು.

1917ರ ಸುಮಾರಿಗೆ ಮೊದಲನೆಯ ಮಹಾಯುದ್ಧವು ಕೊನೆಗೊಳ್ಳುತ್ತಿತ್ತು. ಯುದ್ಧದಿಂದ ಕೈಗಾರಿಕಾ ಉತ್ಪನ್ನಗಳ ಮೇಲೆ ಯಾವ ದುಷ್ಪರಿಣಾಮವೂ ಉಂಟಾಗಿರಲಿಲ್ಲ. ಆದರೆ ಹಣದುಬ್ಬರದಿಂದಾಗಿ ಉಳಿದ ವಸ್ತುಗಳ ಬೆಲೆಗೆ ಹೋಲಿಸಿದರೆ ಹಣದ ಬೆಲೆ ಕಡಿಮೆಯಾಗಿ, ವಸ್ತುಗಳನ್ನು ಖರೀದಿಸಲು ಹಿಂದಿಗಿಂತಲೂ ಜಾಸ್ತಿ ಹಣ ವ್ಯಯ ಮಾಡಬೇಕಾದಂತಹ ಪರಿಸ್ಥಿತಿ ವಿಪರೀತ ಹೆಚ್ಚಾಗಿತ್ತು. ಉತ್ಪಾದನೆಯಾದ ಆಹಾರದ ಮುಕ್ಕಾಲುಪಾಲು ಯುದ್ಧಭೂಮಿಗೆ ಸಾಗಿಸಲ್ಪಡುತ್ತಿದ್ದರಿಂದ ಸಾಮಾನ್ಯ ಜನರು ಆಹಾರದ ಅಭಾವವನ್ನು ಅನುಭವಿಸಬೇಕಾಯಿತು. ಇಟಲಿಯ ಸಾಮಾನ್ಯ ಜನರ ನಿತ್ಯದ ಆಹಾರವಾದ ಬ್ರೆಡ್ ವಾರಗಟ್ಟಲೆ ಸರಬರಾಜಾಗುತ್ತಿರಲಿಲ್ಲ. ಈ ಪರಿಸ್ಥಿತಿಯ ಪರಿಣಾಮವಾಗಿ 1917ರ ಆಗಸ್ಟ್ ತಿಂಗಳಲ್ಲಿ, ಉತ್ತರ ಇಟಲಿಯ ನಗರಗಳ ಕಾರ್ಮಿಕರು ತಮ್ಮ ಸಂಬಳ ಹೆಚ್ಚಳಕ್ಕಾಗಿ ಆರಂಭಿಸಿದ ಮುಷ್ಕರ, ಜನರ ಬ್ರೆಡ್ ಹಾಹಾಕಾರದ ಜೊತೆಗೂಡಿ ದೊಡ್ಡಮಟ್ಟದ ಸಾರ್ವಜನಿಕ ಪ್ರತಿಭಟನೆಯ ರೂಪ ತಾಳಿತು. ನಿತ್ಯದ ಬವಣೆ ಅಸಹನೀಯವಾದಾಗ, ಯಾವ ನಾಯಕತ್ವದ ಪ್ರೇರಣೆಯೂ ಇಲ್ಲದೆ, ತತ್‍ಕ್ಷಣ ಜನರೇ ಪ್ರಾರಂಭಿಸಿದ ಪ್ರತಿಭಟನೆ ಇದಾಗಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲಿ ಸಂಘಟಿತ ಫ್ಯಾಕ್ಟರಿ ಕಾರ್ಮಿಕರದ್ದು ಸಂಖ್ಯೆ ಸಣ್ಣ ಪ್ರಮಾಣದಲ್ಲಿದ್ದರೆ ಬಹುತೇಕರು ನಗರಪ್ರದೇಶದ ಅಸಂಘಟಿತ ಬಡವರೇ ಆಗಿದ್ದರು. ಇವರಲ್ಲಿ ಮಹಿಳೆಯರ ಸಂಖ್ಯೆಯೇ 40,000ದಷ್ಟಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ 2 ಲಕ್ಷ ಜನ ಉತ್ತರ ಇಟಲಿಯ ನಗರಗಳ ಕಾರ್ಖಾನೆ ಹಾಗೂ ಬೀದಿಗಳನ್ನು ಆಕ್ರಮಿಸಿಕೊಂಡರು. ‘ಬ್ರೆಡ್ ದಂಗೆ’ಎಂದೇ ಖ್ಯಾತವಾಗಿರುವ ಈ ಪ್ರತಿಭಟನೆಯನ್ನು ಹದ್ದುಬಸ್ತಿಗೆ ತರುವುದಕ್ಕೆ ಪೊಲೀಸರಿಂದ ಸಾಧ್ಯವಾಗಲಿಲ್ಲ. ಸರ್ಕಾರ ಶಸ್ತ್ರಸಜ್ಜಿತ ಸೈನಿಕರ ತುಕಡಿಗಳನ್ನು ಕಳಿಸಿತು. ಸೈನ್ಯ 2000 ಜನರನ್ನು ಕೊಂದು ಪ್ರತಿಭಟನೆಯನ್ನು ಹತ್ತಿಕ್ಕಿತು. ಈ ಪ್ರತಿಭಟನೆಯಲ್ಲಿ ಸೋಷಿಯಲಿಸ್ಟ್ ಪಕ್ಷದ ಕಾರ್ಮಿಕ ಸಂಘಟನೆಗಳು ನೇರವಾಗಿ ಪಾಲ್ಗೊಳ್ಳಲಿಲ್ಲ. ಈ ಪಕ್ಷಗಳು ಕೂಡ ಈ ಘಟನೆಯ ಬಗ್ಗೆ ಮುಗುಮ್ಮಾಗಿದ್ದವು. ಪ್ರತಿಭಟನೆಯಲ್ಲಿ ಅನಾರ್ಕಿಸ್ಟರು (ಎಲ್ಲ ಬಗೆಯ ಪ್ರಭುತ್ವಗಳೂ ಜನರನ್ನು ತಮ್ಮ ಮೂಗಿನ ನೇರಕ್ಕೆ ಜೀವಿಸಬೇಕು ಎಂದು ಒತ್ತಾಯಿಸಿ ದಬ್ಬಾಳಿಕೆ ಮಾಡುತ್ತವೆ; ಹೀಗಾಗಿ ಎಲ್ಲ ನಮೂನೆಯ ಪ್ರಭುತ್ವಗಳ ಅಸ್ತಿತ್ವವನ್ನು ನಿರಾಕರಿಸುವುದರಿಂದ ಮಾತ್ರ ಮನುಷ್ಯರ ನಿಜವಾದ ವಿಮೋಚನೆ ಸಾಧ್ಯ ಎಂಬ ನಿಲುವು ಉಳ್ಳವರು ಅನಾರ್ಕಿಸ್ಟರು) ಮಾತ್ರ ಸಕ್ರಿಯವಾಗಿ ಭಾಗವಹಿಸಿದ್ದರು. ಊಟಕ್ಕಾಗಿ ಬೀದಿಗಿಳಿದ ಲಕ್ಷಾಂತರ ಜನರ ಈ ಪ್ರತಿಭಟನೆ ಕೂಡ ಚರಿತ್ರೆಯಲ್ಲಿ ದಾಖಲಾಗಲಿಲ್ಲ. ಈ ಹೋರಾಟವು ಸಕ್ರಿಯ ಕಾರ್ಮಿಕ ಸಂಘಟನೆಗಳಿಗೆ ಯಾವ ರೀತಿಯಲ್ಲಿ ಅನಿರೀಕ್ಷಿತವಾಗಿತ್ತೋ ಅದೇ ರೀತಿಯಲ್ಲಿ ಅಧಿಕಾರದಲ್ಲಿದ್ದ ಬಂಡವಾಳಶಾಹಿಗಳಿಗೆ ಕೂಡ ಅನಿರೀಕ್ಷಿತವಾಗಿತ್ತು. ಜನರ ಮಾರಣಹೋಮ ಮುಂದಿನ ಬೆಳವಣಿಗೆಗಳಿಗೆ ನೇರವಾದ ಕಾರಣವಾಗಿರದಿದ್ದರೂ ಜನರ ಭಾವನೆಗಳು ಸುಪ್ತವಾಗಿ ಮುಂದಿನ ರಾಜಕಾರಣದ ಹೆಜ್ಜೆಗಾಗಿ ತಡಕಾಡಿದವು. ಇದೇ ಸಂದರ್ಭದಲ್ಲಿ ಉತ್ತರ ಇಟಲಿಯ ಟ್ಯೂರಿನ್ ನಗರದ ಫ್ಯಾಕ್ಟರಿಗಳಲ್ಲಿ ‘ಫ್ಯಾಕ್ಟರಿ ಕೌನ್ಸಿಲ್’ಚಳವಳಿ ಸಣ್ಣದಾಗಿ ಶುರುವಾಯಿತು.

 

ಫ್ಯಾಕ್ಟರಿ ಚಳವಳಿ

1919ರಲ್ಲಿ ಟ್ಯೂರಿನ್‍ನ ಪ್ರಸಿದ್ಧ ಪಿಯಟ್ ಕಂಪೆನಿಯಲ್ಲಿ ಈ ಚಳವಳಿ ಪ್ರಾರಂಭವಾಯಿತು. ಕಾರ್ಮಿಕರೇ ಫ್ಯಾಕ್ಟರಿಯ ಉತ್ಪಾದನೆ ಮತ್ತು ಆಡಳಿತ ನಿರ್ವಹಣೆಯನ್ನು ವಹಿಸಿಕೊಳ್ಳುವುದು ಈ ಚಳವಳಿಯ ಗುರಿಯಾಗಿತ್ತು. 1918ರಿಂದಲೇ ಇಟಲಿಯ ಕಾರ್ಖಾನೆಗಳಲ್ಲಿ ಕಾರ್ಮಿಕರು ಪ್ರತಿಯೊಂದು ಉತ್ಪಾದನಾ ವಿಭಾಗಕ್ಕೂ ಒಂದೊಂದು ‘ಷಾಪ್ ಕಮಿಟಿ’ಗಳನ್ನು ರಚಿಸಿಕೊಂಡಿದ್ದರು. ಉತ್ಪಾದನಾ ವ್ಯವಸ್ಥೆ ಹಾಗೂ ಆಡಳಿತವನ್ನು ಕಾರ್ಮಿಕರು ನಿರ್ವಹಿಸಬೇಕು ಎನ್ನುವ ಉದ್ದೇಶದಿಂದಲೇ ಈ ಕಮಿಟಿಗಳನ್ನು ರಚಿಸಿಕೊಳ್ಳಲಾಗಿತ್ತು. ಇಂಗ್ಲೆಂಡಿನ ಲೋಹದ ಕಾರ್ಖಾನೆಗಳ ಕಾರ್ಮಿಕರು ರಚಿಸಿಕೊಂಡಿದ್ದ ಷಾಪ್ ಕಮಿಟಿಗಳು ಹಾಗೂ ರಷ್ಯಾದ ದುಡಿಯುವ ಜನರು ಕಟ್ಟಿಕೊಂಡಿದ್ದ ಸೋವಿಯತ್‍ಗಳು ಇಟಲಿಯ ಕಾರ್ಮಿಕರಿಗೆ ಮಾದರಿಯಾಗಿದ್ದವು. ಪಿsಯಟ್ ಕಂಪೆನಿಯ 2000 ಕಾರ್ಮಿಕರು ಚುನಾವಣೆಯ ಮೂಲಕ 11 ಜನ ‘ಕಮಿಸರ್’ಗಳನ್ನು ಆಯ್ಕೆ ಮಾಡಿ, ಅವರ ನೇತೃತ್ವದಲ್ಲಿ ಉತ್ಪಾದನೆಯ ಪ್ರತಿಯೊಂದು ಅಂಗವನ್ನೂ ನಿಯಂತ್ರಿಸುವ ‘ಫ್ಯಾಕ್ಟರಿ ಕೌನ್ಸಿಲ್’ ರಚಿಸಿದರು. ಕೌನ್ಸಿಲ್ ಆಗಲೇ ಅಸ್ತಿತ್ವದಲ್ಲಿ ಇದ್ದ ಷಾಪ್ ಕಮಿಟಿಗಳನ್ನು ಮರುಸಂಘಟಿಸಿ ಫ್ಯಾಕ್ಟರಿಯ ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ತಾನು ವಹಿಸಿಕೊಂಡಿರುವುದಾಗಿ ಘೋಷಿಸಿತು. ಈ ಒಂದು ಫ್ಯಾಕ್ಟರಿಯಲ್ಲಿ ಶುರುವಾದ ಕಾರ್ಯಕ್ರಮ ಉತ್ತರ ಇಟಲಿಯ ಕಾರ್ಮಿಕ ವರ್ಗದಲ್ಲಿ ಎಷ್ಟು ಉತ್ಸಾಹ ಮೂಡಿಸಿತ್ತೆಂದರೆ 1920ರ ಹೊತ್ತಿಗೆ ಉತ್ತರ ಇಟಲಿಯ ಬಹುಪಾಲು ಕಾರ್ಖಾನೆಗಳಲ್ಲಿ ಫ್ಯಾಕ್ಟರಿ ಕೌನ್ಸಿಲ್ ರಚನೆಯಾಯಿತು. ಆ ಮೂಲಕ ಫ್ಯಾಕ್ಟರಿಯ ಆಡಳಿತಾಧಿಕಾರವನ್ನು ಫ್ಯಾಕ್ಟರಿ ಕೌನ್ಸಿಲ್‍ಗಳು ತಮ್ಮ ಸುರ್ಪದಿಗೆ ತೆಗೆದುಕೊಂಡಿರಲಿಲ್ಲವಾದರೂ ಪ್ರತಿಯೊಂದು ಕಾರ್ಖಾನೆಯಲ್ಲೂ ಕೌನ್ಸಿಲ್ ಪರ್ಯಾಯ ವ್ಯವಸ್ಥಾಪಕ ಮಂಡಳಿಯಾಗಿ ಕಾರ್ಯ ನಿರ್ವಹಿಸತೊಡಗಿತ್ತು. ಪ್ರತಿಯೊಬ್ಬ ಕಾರ್ಮಿಕನೂ ಕೌನ್ಸಿಲ್‍ಗೆ ಬದ್ಧನಾಗಿದ್ದುದ್ದರಿಂದ ಮಾಲಿಕರಿಂದ ನಿಯುಕ್ತಿಗೊಂಡ ವ್ಯವಸ್ಥಾಪಕ ಮಂಡಳಿ ತನ್ನ ಎಲ್ಲ ಅಧಿಕಾರವನ್ನು ಕಳೆದುಕೊಂಡುಬಿಟ್ಟಿತ್ತು. ಮೊದಲಿಗೆ ಕೌನ್ಸಿಲ್‍ಗೆ ಸದಸ್ಯರನ್ನು ಆಯಾ ಫ್ಯಾಕ್ಟರಿಗಳ ಕಾರ್ಮಿಕರು ತಾಂತ್ರಿಕ ಕೆಲಸಗಳಲ್ಲಿ ತೊಡಗಿದವರ ಜೊತೆ, ತಾಂತ್ರಿಕವಲ್ಲದ ಕೆಲಸಗಳನ್ನು ನಿರ್ವಹಿಸುವ ಕಸ ಗುಡಿಸುವವರು, ಕ್ಯಾಂಟಿನ್‍ನ ಅಡುಗೆಯವರು, ಪರಿಚಾರಕರು ಮುಂತಾದವರನ್ನು ಕೂಡ ಈ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಮುಂದೆ ಉತ್ಪಾದನೆಗೆ ಪರೋಕ್ಷವಾಗಿ ಸಂಬಂಧಿಸಿದ ಫ್ಯಾಕ್ಟರಿ ಬಡಾವಣೆಯ ಎಲ್ಲ ಆಸ್ತಿಹೀನರನ್ನೂ ಮತದಾರರ ಯಾದಿಯಲ್ಲಿ ಸೇರಿಸಿ ವಿಸ್ತೃತ ಪ್ರತಿನಿಧಿತ್ವ ಹೊಂದಿದ ಕೌನ್ಸಿಲನ್ನು ರಚಿಸುವ ನೀಲಿನಕ್ಷೆಯನ್ನು ಕಾರ್ಮಿಕರು ತಯಾರಿಸಿದ್ದರು. ಬಂಡವಾಳಶಾಹಿ ಪದಕೋಶದಲ್ಲಿ ಯಾವುದನ್ನು ವ್ಯವಸ್ಥಾಪಕ, ತಾಂತ್ರಿಕ ವ್ಯವಸ್ಥಾಪಕ ಅಧಿಕಾರಗಳು (ಮ್ಯಾನೇಜೇರಿಯಲ್ ಹಾಗೂ ಟೆಕ್ನೋ ಮ್ಯಾನೇಜೆರಿಯಲ್) ಎಂದು ಕರೆಯುತ್ತಾರೊ, ಅಂತಹ ಅಧಿಕಾರವನ್ನು ಕೌನ್ಸಿಲ್ ವಶಪಡಿಸಿಕೊಂಡಿತ್ತು. ಬಂಡವಾಳದ ಹೂಡಿಕೆ ಹಾಗೂ ವಿಸ್ತರಣೆಯ ಸ್ವರೂಪವನ್ನು ನಿರ್ಧರಿಸಿ, ಬಂಡವಾಳಕ್ಕೆ ಚಲನಶೀಲತೆಯನ್ನು ತರುವುದು ಈ ಅಧಿಕಾರವೇ ಆಗಿರುತ್ತದೆ; ಈ ಕಾರ್ಯವನ್ನು ತನ್ನ ಪರವಾಗಿ ಸಮರ್ಥವಾಗಿ ನಿರ್ವಹಿಸಲು, ಬಂಡವಾಳಶಾಹಿ ಮಾಲೀಕರು ಸುಶಿಕ್ಷಿತ ತಾಂತ್ರಿಕ ವ್ಯವಸ್ಥಾಪಕ ವರ್ಗವನ್ನು ಕಟ್ಟಿದ್ದರು. ಫ್ಯಾಕ್ಟರಿ ಚಳವಳಿ ಈ ವರ್ಗವನ್ನು ಸಹಜವಾಗಿಯೇ ಬಲಹೀನಗೊಳಿಸಿತು. ಗ್ರಾಂಸಿಯ ರೂಪಕವನ್ನೇ ಬಳಸಿ ಹೇಳುವುದಾದರೆ ಸುಶಿಕ್ಷಿತ ತಾಂತ್ರಿಕ ವ್ಯವಸ್ಥಾಪಕ ವರ್ಗ ಬಂಡವಾಳಶಾಹಿ ವರ್ಗದ ಸೇನಾ ದಂಡನಾಯಕರು; ಕಾರ್ಮಿಕರು ಇವರ ಅವುಗಳನ್ನು ಎದುರಾಡದೆ ಪಾಲಿಸುವ ಕಾಲಾಳು ಸೈನಿಕರು ಮಾತ್ರವಾಗಿದ್ದರು. ಸಮಾಜದ ಪ್ರತಿ ಸಂಪನ್ಮೂಲವನ್ನು ಬಂಡವಾಳಶಾಹಿಯ ವಶಕ್ಕೆ ಗೆದ್ದುಕೊಡುವ ನಿರ್ಣಾಯಕ ಕಾರ್ಯವನ್ನು ಇವರು ನಿರ್ವಹಿಸಿದ್ದರು. ಕಾರ್ಮಿಕರ ಕೌನ್ಸಿಲ್ ಫ್ಯಾಕ್ಟರಿಯ ಉತ್ಪಾದನಾ ವ್ಯವಸ್ಥೆಯ ನಿಯಂತ್ರಣ ವಹಿಸಿಕೊಂಡಿದ್ದರ ಪರಿಣಾಮವಾಗಿ, ತನ್ನ ಸೈನ್ಯದ ಮಹಾದಂಡ ನಾಯಕತ್ವವೂ ಸೇರಿದಂತೆ ಎಲ್ಲ ಅಧಿಕಾರಸ್ಥ ಹುದ್ದೆಗಳಲ್ಲೂ ಶತ್ರುಗಳು ತುಂಬಿಕೊಂಡರೆ ಅರಸನೊಬ್ಬನ ಸ್ಥಿತಿ ಹೇಗೆ ಇರುತ್ತದೋ ಅಂಥ ಸ್ಥಿತಿ ಬಂಡವಾಳಶಾಹಿ ಮಾಲೀಕರಿಗೆ ಬಂತು. ಉತ್ತರ ಇಟಲಿಯ ಕೈಗಾರಿಕೆಯಲ್ಲಿ ಎರಡು ಪರಸ್ಪರ ವಿರೋಧಿಯಾದ ಅಧಿಕಾರ ಕೇಂದ್ರಗಳು ನಿರ್ಮಾಣವಾದವು. ಈ ಬೆಳವಣಿಗೆಯ ಪರಿಣಾಮವನ್ನು ಬಂಡವಾಳಶಾಹಿಗಳು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು. 1921ರ ಮಾರ್ಚ್ ತಿಂಗಳಲ್ಲಿ ಬಂಡವಾಳಶಾಹಿ ಮಾಲಿಕರು ತಮ್ಮ ಎಲ್ಲ ಕಾರ್ಖಾನೆಗಳನ್ನು ಮುಚ್ಚಿಬಿಡುವೆವು ಎಂದು ಘೋಷಿಸಿದರು. ಮಾಲಿಕರ ಈ ನಿಲುವನ್ನು ವಿರೋಧಿಸಿ ಕಾರ್ಮಿಕರು ಸಾರ್ವತ್ರಿಕ ಮುಷ್ಕರವನ್ನು ಪ್ರಾರಂಭಿಸಿದರು. ಆ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಉತ್ತರ ಇಟಲಿಯ ಇಂಜಿನಿಯರಿಂಗ್ ಕಾರ್ಖಾನೆಗಳಲ್ಲಿ ವೇತನ ಪರಿಷ್ಕರಣೆಯ ಮಾತುಕತೆಗಳು ಮುರಿದುಬಿದ್ದದ್ದೇ, ಕಾರ್ಮಿಕರು ಎಲ್ಲ ಕಾರ್ಖಾನೆಗಳನ್ನು ಆಕ್ರಮಿಸಿಕೊಂಡರು. ಪೊಲೀಸರು ಮತ್ತು ಸೈನ್ಯಶಕ್ತಿಯನ್ನು ಉಪಯೋಗಿಸಿ ಕಾರ್ಖಾನೆಗಳನ್ನು ತೆರವು ಮಾಡಿಸಬೇಕೆಂದು ಪ್ರಧಾನಮಂತ್ರಿಯಾಗಿದ್ದ ಗಿಯಲೊಟ್ಟಿಯ ಮೇಲೆ ಮಾಲೀಕರು ಒತ್ತಡ ಹೇರತೊಡಗಿದರು. ತುಂಬ ಜನಪ್ರಿಯವಾಗಿರುವ ಈ ಚಳವಳಿಯನ್ನು ಬಲಪ್ರಯೋಗದಿಂದ ಎದುರಿಸಲು ಹೋದರೆ ಕ್ರಾಂತಿಗೆ ಮಣೆ ಹಾಕಿದಂತೆ ಎನ್ನುವುದನ್ನು ಮನಗಂಡ ಗಿಯಲೊಟ್ಟಿ ಜಾಣತನದಿಂದ ರಾಜಿಸೂತ್ರಗಳನ್ನು ರೂಪಿಸಿದ.

ಮಾಲಿಕರು ‘ಫ್ಯಾಕ್ಟರಿ ಕೌನ್ಸಿಲ್’ ಚಳವಳಿಯಲ್ಲಿ ಸಕ್ರಿಯರಾಗಿದ್ದ ಕಾರ್ಮಿಕರನ್ನು ಗುರುತಿಸಿ ಅವರ ಮೇಲೆ ಸೇಡಿನ ಕ್ರಮಗಳನ್ನು ಜರುಗಿಸಲು ಪ್ರಾರಂಭಿಸಿದರು. ಒಂದು ವರ್ಷ ಕಳೆಯುವುದರೊಳಗೇ ‘ಫ್ಯಾಕ್ಟರಿ ಕೌನ್ಸಿಲ್’ಗಳನ್ನು ಸೂತ್ರಬದ್ಧವಾಗಿ ನಿರ್ನಾಮ ಮಾಡಿ, ನಾಮಕಾವಸ್ಥೆಗೆ ರೂಪಿಸಿದ್ದ ಕಾರ್ಮಿಕರ ಸಹಭಾಗಿತ್ವ ಎನ್ನುವ ರಾಜಿಸೂತ್ರದ ನಿಯಮಗಳನ್ನು ಒರೆಸಿ ಹಾಕಿದರು.

1919-20ರಲ್ಲಿ ನಡೆದ ಈ ವಿದ್ಯಮಾನಗಳು ಇಟಲಿಯ ಚರಿತ್ರೆಯಲ್ಲಿ ‘ಎರಡು ಕೆಂಪು ವರ್ಷಗಳು’ ಎಂದು ಖ್ಯಾತಿ ಪಡೆದಿವೆ. ಈ ಅವಧಿಯಲ್ಲಿ ಗ್ರಾಂಸಿಯು, ಸೋಷಿಯಲಿಸ್ಟ್ ಪಕ್ಷದ ಎಡಪಂಥದಲ್ಲಿ ಇದ್ದ ಪಾಲಿಮರೊ ತೊಗ್ಲಿಯಾಟ್ಟಿ, ಎಂಜಲೊ ಟಸ್ಕ ಮತ್ತು ಉಂಬರ್ಟೊ ಟೆರಸ್ಸಿನ್ನಿ ಇವರ ಜೊತೆ ಸೇರಿ ‘ಲಾ ಆರ್ಡಿನೊ ನೊವೊ’(ಹೊಸ ವ್ಯವಸ್ಥೆ) ಎನ್ನುವ ವಾರಪತ್ರಿಕೆಯನ್ನು ಪ್ರಾರಂಭಿಸಿದ. ಸಮಾಜವಾದಿ ಸಿದ್ಧಾಂತಗಳ ಚರ್ಚೆಗೆ ಈ ಪತ್ರಿಕೆ ವೇದಿಕೆಯಾಗಬೇಕು ಎನ್ನುವುದು ಈ ಗೆಳೆಯರ ಇಂಗಿತವಾಗಿತ್ತು. ಈ ಪತ್ರಿಕೆಯನ್ನು ‘ಫ್ಯಾಕ್ಟರಿ ಕೌನ್ಸಿಲ್’ ಚಳವಳಿಯ ವೈಚಾರಿಕ ಬೆನ್ನೆಲುಬಾಗಿಸುವುದು ಗ್ರಾಂಸಿಯ ಉದ್ದೇಶವಾಗಿತ್ತು. ತನ್ನ ಎರಡನೆಯ ಸಂಚಿಕೆಯಿಂದಲೇ ಪತ್ರಿಕೆಯು ‘ಫ್ಯಾಕ್ಟರಿ ಕೌನ್ಸಿಲ್’ ಚಳವಳಿಯ ಮುಖ್ಯ ಧ್ವನಿಯಾಯಿತು. ಕೌನ್ಸಿಲ್ ಸದಸ್ಯರು ಗ್ರಾಂಸಿಯನ್ನು ತಮ್ಮ ಸಭೆಗಳಿಗೆ ಆಹ್ವಾನಿಸಿ ಚಳವಳಿಯ ದಿಕ್ಕು ಹಾಗೂ ತಂತ್ರೋಪಾಯಗಳನ್ನು ಚರ್ಚಿಸತೊಡಗಿದರು. ಚಳವಳಿಯು ಮುನ್ನಡೆದಂತೆ ಗ್ರಾಂಸಿ ಅದರಲ್ಲಿ ಸಂಪೂರ್ಣವಾಗಿ ತೊಡಗಿಕೊಂಡ. ಪತ್ರಿಕೆಯ ಬಳಗದಲ್ಲಿ ಎಂಜೆಲೊ ಟಸ್ಕನನ್ನು ಹೊರತುಪಡಿಸಿ ಉಳಿದ ಎಲ್ಲರೂ ಪತ್ರಿಕೆಯು ಚಳವಳಿಗೆ ಸೈದ್ಧಾಂತಿಕ ಮಾರ್ಗದರ್ಶಿಯಾಗಿರಬೇಕು ಎಂಬ ಗ್ರಾಂಸಿಯ ನಿಲುವನ್ನು ಬೆಂಬಲಿಸಿದರು. ಆದರೆ ಸೋಷಿಯಲಿಸ್ಟ್ ಪಕ್ಷದ ಎಡಪಂಥೀಯರಲ್ಲಿ ಬಹಳಷ್ಟು ಮಂದಿಗೆ ಈ ಚಳವಳಿಯನ್ನು ಬೆಂಬಲಿಸುವ ಉತ್ಸಾಹವಿರಲಿಲ್ಲ. ಎಡಪಂಥೀಯ ಗುಂಪಿನ ಪ್ರಭಾವಶಾಲಿ ನಾಯಕನಾಗಿದ್ದ ಅಮಿಯೊ ಬೋರ್ಡಿಗನು ಈ ಚಳವಳಿಯು ಪಕ್ಷದ ಕಾರ್ಯಕ್ರಮ, ಶಿಸ್ತುಗಳಿಗೆ ಕಾರ್ಮಿಕರು ಬದ್ಧರಾಗಿಲ್ಲ ಎಂದು ವಾದಿಸಿದನು. ಈ ಸಂದರ್ಭದ ತತ್‍ಕ್ಷಣದ ಒತ್ತಡದಲ್ಲಿ, ವ್ಯವಸ್ಥೆಯ ಸಂಪೂರ್ಣ ಅರಿವು ಹಾಗೂ ನಿರ್ದಿಷ್ಟ ಕ್ರಾಂತಿಕಾರಿ ಕಾರ್ಯಕ್ರಮಗಳಿಲ್ಲದೆ, ಮನಸೇಚ್ಫೆ ನಡೆಸುತ್ತಿರುವ ಚಳವಳಿಯಾಗಿದೆ ಎಂದು ವಾದಿಸಿ, ‘ಲಾ ಆರ್ಡಿನೊ ನೊವೊ’ ಗುಂಪು ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವುದನ್ನು ಟೀಕಿಸಿದ. ಬಂಡವಾಳಶಾಹಿಯು ತನ್ನ ಆಂತರಿಕ ಬಿಕ್ಕಟ್ಟಿನಿಂದ ಕುಸಿದು ಸಮಾಜವಾದಿ ವ್ಯವಸ್ಥೆಯ ಸ್ಥಾಪನೆಗೆ ದಾರಿಮಾಡಿಕೊಡುತ್ತದೆ ಎನ್ನುವ ಯಾಂತ್ರಿಕವಾದ ಸುಧಾರಣಾವಾದಿ ನಿಲುವನ್ನು ಖಂಡಿತವಾಗಿ ವಿರೋಧಿಸಿ, ಬಂಡವಾಳಶಾಹಿ ವ್ಯವಸ್ಥೆಯನ್ನು ಪಲ್ಲಟಗೊಳಿಸಲು ಲಭ್ಯವಿರುವ ಎಲ್ಲ ಚಾರಿತ್ರಿಕ ಅವಕಾಶಗಳನ್ನೂ ಉಪಯೋಗಿಸಿಕೊಳ್ಳಬೇಕು ಎಂದು ವಾದಿಸಿ, ಈ ವಾದಕ್ಕೆ ಪಕ್ಷದ ಸದಸ್ಯರ ಬೆಂಬಲ ಕ್ರೋಡೀಕರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದವನೇ ಬೋರ್ಡಿಗ.

 

 (ಮುಂದಿನ ಭಾನುವಾರಕ್ಕೆ...)