ಗೌಡ್ರು, ಸಕ್ಕರಿ ರಾಜಕೀಯದಿಂದ ನಿವೃತ್ತಾದ್ರು... ಅವ್ರು ಬೆಲ್ಲದ ರಾಜಕೀಯ ಬಿಡೋಂಗಿಲ್ಲ

ಗೌಡ್ರು, ಸಕ್ಕರಿ ರಾಜಕೀಯದಿಂದ ನಿವೃತ್ತಾದ್ರು... ಅವ್ರು ಬೆಲ್ಲದ ರಾಜಕೀಯ ಬಿಡೋಂಗಿಲ್ಲ

ಹಲೋ.....ಹಲೋ ಕಾಕಾರ, ನಾನ್ರೀ ಈಕಡಿಂದ ಬಸ್ಯಾ ಮಾತಾಡೋದು, ಎಲ್ಲೆದಿರೀ.? ನಿಮ್ಮ ಮೊಬೈಲ್ಗೆ ಪೋನ್ ಹಚ್ಚಿ.. ಹಚ್ಚಿ ಎಳ್ದೆ, ಹತ್ತಾಕ ವಲ್ದೂ. ಯಾವ್ ಗವ್ಯಾಗ ಕುತ್ಗಂಡಿರೀ?

ಗವ್ಯಾಗ ಕುಂದ್ರಾಕ್ ನಾ ಎನ್ ಸನ್ಯಾಸೆನೂ ಮಗ್ನ್, ಇಲ್ಲೆ ಕ್ಲಬ್‍ನ್ಯಾಗ ಕುತ್ಗಂಡಿದ್ದೆ, ಹೇಳ್ಪಾ ಏನ್ ಸುದ್ದಿ.?ಓ ಇಸ್ಪೇಟ್ ಕ್ಲಬ್ ನ್ಯಾಗ್ ಕುತ್ಗಂಡಿರೀ.....! ಜೋರೈತಿ ಆಟ...? ಎಲ್ಲೆ ಜೋರ ತರ್ತಾನ್ಲೆ ಇವಾ , ಟೈಮ್ ಪಾಸ್ಗೆ ಹಂಗ್ ಆಡಾಕ ಬಂದಿದ್ದೆ, ಆದೇನ್ ವಿಷ್ಯಾ ಹೇಳೋ.!

ಅದರೀ "ವರ್ದಾನದಿ ಒಳ್ಗ ನೀರು ಹರ್ಯಾಕ ಹತ್ತೇತಂತ್", "ನದಿ ತಾಯಿ ಒಡ್ಲ ತುಂಬಿ ಬಾಂದಾರ್ ಮ್ಯಾಲ್ ನೀರು ಹರ್ಯಾಕ ಹತ್ತೇತಿ ಅಂತ್ ಜನ್ರು ನದಿ ನೋಡಾಕ ಹೊಂಟಾರ್ ಅದ್ಕ ನಾವು ಹೋಗೋಣ ಬರ್ರೀ"....

ಅಲ್ಲಲೇ "ಮಳಿ ಇಲ್ಲಾ, ಮಾರಿಲ್ಲಾ,  ಅದೇಂಗ್ ಹೊಳಿಗೆ ನೀರು ಬಂದೈತಲೇ"...! ಮೊನ್ನೆರ ಮುಗದೂರ್ಗೆ ಹೊಳ್ಯಾಗ ಗಾಡಿ ಹೊಡ್ಕಂಡ್ ಹೋಗಿ ಬಂದೈನಿ, "ಹೊಳ್ಯಾಗ ಒಂದ್ ಹನಿ ನೀರು ಇರ್ಲಿಲ್ಲ!. ಇಗ ಅದೇಂಗ್ ನೀರು ಬಂತೋ"..?

ಅದರೀ "ಪುಣ್ಯದ್ ಊರಾಗ್ ಮಳಿ ಬಂದ್ರ್ ಪಾಪಾದ ಊರಾಗ್ ಹೊಳಿ ಹರದಿತ್ತು" ಅನ್ನೋ ಮಾತಿನಹಂಗ್ "ಗಟ್ಟದಾಗ್ ಭಾರೀ ಮಳಿ ಆಗ್ಯಾಕ ಹತ್ತೇತಿ, ಅದ್ಕ ನಮ್ಮೂರಾಗ ಹೊಳಿ ತುಂಬಿ ಹರ್ಯಾಕ ಹತ್ತೇತಿ". ಅಂದ್ರ "ನಮ್ಮ ಊರು ಪಾಪದ ಊರ ಅಂತಿ ಎನೂ", ಏನ್ ನಿನ್ನ ಮಾತಿನ ಅರ್ಥ..?

ಹಂಗಲ್ರೀ, ಮಳಿಗಾಲ ಆರಂಭಾಗಿ ಎರ್ಡ್ ತಿಂಗ್ಳಾತು, ಮಳಿನ್ ಆಗವಲ್ದು, "ಕುಡ್ಯಾಕ್ ನೀರು ಸಿಗವಲ್ದು, ದನಕರಗಳಿಗೆ ಮೇವಿಲ್ಲ, ನೀರಿಲ್ಲ, ಜನ್ರು ದುಡ್ಮಿ ಇಲ್ದ ಕಾಫೀ ಸೀಮ್ಗೆ ದುಡ್ಯಾಕ ಹೊಂಟಾರ್, ಇಂತಾ ಹೊತ್ತಿನ್ಯಾಗ್ ಹೊಳಿ ಹರ್ಯಾಕ ಹತ್ತೇತಿ ಅಂದ್ರ ನಮ್ಮ ಪುಣ್ಯಾನ್ ಅಲ್ರೀ ಕಾಕಾ", "ನೀರಿಲ್ದ ಹಾವೇರಿ ಅನ್ನೋದು ಹಾಳೂರಾಗಿತ್ತು, ಈಗ ಹೊಳಿಗೆ ನೀರು ಬಂದಿದ್ರಿಂದ್ ಕುಡ್ಯಾಕರ್  ನೀರು ಸಿಗತೈತಲ್ರೀ". "ಹೊಳ್ಯಾಗ ಮ್ಯೆತೊಕ್ಕಂಡು ಮೂರು ತಿಂಗ್ಳಾತೂ, ಬರ್ರೀ ಹೊಳಿಗೆ ಹೋಗಿ ಈಜ್ ಹೊಡ್ದ್ ಗಂಗವ್ವಗ್ ಕೈಮೂಗ್ದು ಬರೋಣ ಬರ್ರೀ"...

ತಡಿಯಲೇ ಹಂಗ್ ನಿಂತ್ ಬೈಟಕ್‍ನ್ಯಾಗ್ ಬಾ ಅಂದ್ರ ಹೆಂಗ್ಯ, ಗಾಡಿ ತಂಬಾ... ನಾನು ಮನಿಗೆ ಹೋಗಿ ಚೊಣ್ಣ, ಬನಿನೂ ತರ್ತನಿ, ಗಾಂಧಿ ಸರ್ಕಲ್ಗೆ ಬಾ ನಾ ಅಲ್ಲೆ ಬರ್ತನೀ.. ಆತ ಬರ್ರೀ, ಗಾಡಿಗೆ ಪೆಟ್ರೋಲ್ ಹಾಕ್ಸಿಗೊಂಡು ನಾ ಗಾಂಧಿ ಸರ್ಕಲ್ಗೆ ಬರ್ತನೀ... ನೀವು ಲಗೂನ ಬರ್ರೀ...  ಹೌದಲ್ಲಲೇ ಬಸ್ಯಾ, ಇದನ್ಲೇ "ನೀರು ಪ್ರವಾಹ ಬಂದಂಗ್  ಬಂದೈತಲ್ಲೋ"!. ಎಷ್ಟ್ ದಿನಾ ಆತೋ ಇಂತಾ ದೃಶ್ಯಾ ನೋಡಿ...!  ಮತ್ತ ಪಂಪಸೆಟ್ ಚಲುವಾಕ್ಕಾವು, ಆಗ್ಲಿ ಬೀಡೂ, "ಎತ್ತಗೆ  ಮೇವರ್ ಸಿಗತೈತಿ'. "ಅಲ್ಲೋ ಸುತ್ತ-ಮುತ್ಲೂ ಎಲ್ಲಿ  ಮಳಿ ಇಲ್ಲಾ! ಅಂತಾದ್ರಾಗ್ ಒಮ್ಮೆಕ ಹೆಂಗ್ಯೋ ಹೊಳಿ ಬಂತೋ"?.

ಅದರೀ ನಾ ಹೇಳಿದ್ದೂ, "ಪುಣ್ಯದ್ ಊರಾಗ್ ಮಳಿ ಬಂದ್ರ್ ಪಾಪಾದ ಊರಾಗ್ ಹೊಳಿ ಹರದಿತ್ತು" ಅಂತ್. ಹೌದ ಬಿಡ್ಲೇ,  ನಿನ್ನ ಮಾತು ಕರೆ ಐತಿ. ಇದು "ಹುಚ್ಚಹೊಳಿಲೇ ತಮ್ಮಾ!, ಈ ನೀರು ಬಾಳದಿವ್ಸ್ ನಿಂದ್ರಂಗ್ ಕಾಣೋದಿಲ"್ಲ?, ಗಟ್ಟದಾಗ್ ಮಳಿ ಆಗೋದ್ ಹೊಸಾದೇನಲ್ಲ.! ನಮ್ಮ "ಬಯ್ಲ್ ಪ್ರದೇಶದಾಗ್ ಮಳಿ ಆದ್ರ ನಮ್ಮ ಕೆರೆಕಟ್ಟಿ ತುಂಬತಾವು". " ಕೆರಿಕಟ್ಟಾಗ್ ನೀರು ನಿಂತ್ರ ಬೋರವೆಲ್ನ್ಯಾಗ್ ನೀರು ಹೆಚ್ಚಾಗಿ ಜನ್ರೀ, ದನ್ಗಳಿಗೆ ಕುಡ್ಯಾಕ ನೀರು ಸಿಗತೈತಿ".

ಹೌದ್ರೀ ನೀವು ಹೇಳೋ ಮಾತು ಸತ್ಯಾನ್  ಐತಿ, ಆದ್ರ "ಕುಲ್ಡ್ ಗಣ್ಣಿನ್ಯಾಗ್ ಮೆಳ್ಳಗಣ್ಣು ಲೇಸ್" ಅಲ್ರೀ, ಒಟ್ಟಿನ್ಯಾಗ ಒಣಗಿ ಹೋಗಿದ್ದ ನಮ್ಮ ಹೊಳಿ ಮತ್ತ ಮೈದುಂಬಿಕೊಂಡೈತಿ ಅಷ್ಟ ಸಾಕು. 

ಆತ ಬಿಡ್ಪಾ ನಿನ್ನ ಮಾತು ಒಪ್ಪೋದ!, ಅದೇನ್ಲೇ, ನಿಮ್ಮ ಮಂದಿಗೆ ಏನಾಗೇತಿ!, "ರಾಮನ್ ಹೆಸ್ರು ಹೇಳೂ ಅಂತ್  ಮುಸ್ಲೀ ವ್ಯಕ್ತಿನ  ಬಡ್ದ ಕೊಂದಾರಂತಲ್ಲೋ"?. ಇವ್ರಗೇನೂ ದಾಡಿ ಆಗೇತಿ?. ಇವ್ರೇನು "ಹೊಟ್ಟಿಗೆ ಅನ್ನಾ ತಿಂತಾರೋ  ಯುರಿಯಾ ಗೊಬ್ರಾ ತಿಂತಾರೋ"?

ಅಲ್ಲಲೇ ಅವಾ ಯಾವಾನ್ ಮಂತ್ರಿ ಮಗ್ ಅಂತ್ ಅವಾ "ಮುನ್ಸಿಪಾಲ್ಟಿ ಅಧಿಕಾರಿನ್ ಬ್ಯಾಟ್ ತಗೋಡು ಬಾರ್ಸತಾನ್", "ಇನ್ನಾರೋ ಗೋರಕ್ಷಾದ ಹೆಸ್ರನ್ಯಾಗ್ ಕೊಡ್ಲಿ-ಕುಡಗೋಲು ತಗೊಂಡು ಬಡಿತ್ಯಾರ್. ಇದೇನಲೇ, ಎತ್ಲಾಗ್ ಹೊಂಟೈತಿ ನಮ್ಮ ದೇಶಾ....?

ಎತ್ಲಾಗೂ ಹೊಂಟಿಲ್ರೀ. ಅಭಿವೃದ್ಧಿ ಕಡಿಗೆ ಹೊಂಟೈತಿ, ದೊಡ್ಡ ದೇಶ!. ಇಂತಾ ಸಂಗತಿಗಳು ನಡಿಬಾರ್ದು. ಅದ್ಕ ನಮ್ಮ ಮೋದಿ ಸಾಹೇಬ್ರು ಖಡಕ್ಕಾಗಿ ಹೇಳ್ಯಾರ, "ಕಾನೂನು ಕೈಗೆ ತಗೋಳ್ಳಾವ ಯಾರ್ ಮಗಾ ಆದ್ರ ಏನೂ! , ಅವನ್ನ ಪಕ್ಷದಿಂದ ಕಿತ್ತೋಗಿರಿ ಅಂತ ಹೇಳ್ಯಾರ", ಮತ್ತ "ಕಾನೂನ ಕೈಗೆ ತಗೊಳ್ಳರನ್ ಸಹಿಸಿಕೊಳ್ಳೋದಿಲ್ಲ ಅಂತ್ ಎಚ್ಚರಿಕೆ ಕೊಟ್ಟಾರ್". 

"ಎಚ್ಚರಿಕೆ ಕೊಟ್ರ ಸಾಲ್ದೋ ಜನ್ರಲ್ಲಿರೋ ಭಯಾ ಹೋಗಿಸ್‍ಬೇಕು",  "ನಿಮ್ಮ ಜೊತಿಗೆ ನಾವ್ ಅದೇವಿ ಅನ್ನೋ ಧೈರ್ಯ ಹೇಳಬೇಕು".  "ಈದೇಶ ಯಾರಪ್ಪನ್ ಸ್ವತ್ತು ಅಲ್ಲಾ , ಇಲ್ಲೆ ಎಲ್ಲಾರು ಶಾಂತಿ-ಸಹಬಾಳ್ವೆಯಿಂದ ಬದ್ಕು ನಡ್ಸಬೇಕು". "ಎಲ್ಲಾರಿಗೂ ಬದಕೋ ಹಕ್ಕೈತಿ, ಅಂತಾ ಸಂವಿಧಾನ ನಮ್ದು".  "ಕಾಯೋರ ಕೊಲ್ಲಾಕ ನಿಂತ್ರ ಗತಿ ಏನೂ"?. ಅದ್ನ ನಿಮ್ಮ ಮಂದಿಗೆ ಹೇಳೋ. ಎಲ್ಗೆ ಬಂತ್ಪಾ ನಿಮ್ಮ "ಕುಮಾರಣ್ಣನ್ ಕುರ್ಚೆ ಕಂಟಕ್"?. ನಿಮ್ಮ "ಕುಮಾರಣ್ಣ ಅಮೇರಿಕಾದಿಂದ ಬಂದ್ರ ಇಲ್ಲ"?.   ಅಲ್ಲೆ "ದೊಡ್ಡಣ್ಣನ ಭೇಟ್ಟಿ ಆಗಿ ನನ್ಗು ಇಲ್ಲೆ ಒಂದ್ ಕುರ್ಚೆ ಕೊಡ್ರೀ ಅಂತ್ ಅಲ್ಲೆ ಕುಂತ್ರ ಹೆಂಗ್ಯ"?

"ಅಮೇರಿಕಾದಾಗ ಕುಮಾರಣ್ಣ ಯಾಕ್ ಇರ್ತಾರ್ರೀ. ಅವ್ರಿಗೇನು ಇಲ್ಲೆ ಮನಿ-ಮಠಾ ಇಲ್ಲಾಂತ್ ತಿಳ್ಕಂಡಿರೇನೂ"?. ಹೊಳ್ಳಿ ಅವ್ರು ವಾಪಾಸ್ ಕರ್ನಾಟಕಕ್ಕ ಬರ್ತಾರ್!." ಕುಮಾರಣ್ಣ ಅಮೇರಿಕಾದಾಗ ಕಾಲ ಭೈರವೇಶ್ವರನ್ ಗುಡಿಕಟ್ಟಾಕ್ ಗುದ್ಲಿ ಪೂಜಾ ಮಾಡಾಕ ಹೋಗ್ಯಾರ್ , ಹಂಗ್ ನಾಲ್ಕ ದಿವ್ಸ್ ಅಮೇರಿಕಾ ಸುತ್ತಾಡಿ ಆರಾಮ ತಗೋಂಡು ಬರ್ತಾರ"....

ಬರ್ಲೀ ಬಿಡೂ, ಅಲ್ಲೋ, ಇಲ್ಲೆ "ಅವ್ರ ಕುರ್ಚೆಕ್ ಬೆಂಕಿ ಬಿದ್ದೈತಿ, ಆನಂದ್ ಸಿಂಗ್, ಜಾರ್ಕಿಹೊಳಿ ರಾಜೀನಾಮೆ ಕೊಟ್ಟಾರ್".  ಬಿಂಕಿ ಬಿದ್ದ್ರ ಬೀಳ್ಲಿ ಬಿಡ್ರೀ, ಆ "ಬೆಂಕಿನ ಹೆಂಗ್ ಆರ್ಸ್ ಬೇಕು ಅನ್ನೋದು ಕುಮಾರಣ್ಣಗ ಗೊತ್ತೈತಿ". ಅವ್ರು "ಅಮೇರಿಕಾದಿಂದಾನ್ ಕರ್ನಾಟಕದಾಗ ಬಿದ್ದಿರೋ ಬಿಂಕಿನ್ ಪುಸಕ್ಕಂತ್ ಆರ್ಸತಾರ್".  ಹೌದ ಬಿಡೂ, ದೊಡ್ಡಗೌಡ್ರು ಇಲ್ಲೆ ಅದಾರ," ಅವ್ರು ಬೆಂಕಿ ಹತ್ತೋದನ್ನ ಆರ್ಸಾಕ ರೆಡಿ ಅಗಿ ಕುಂತಾರ"!. ಅಂದಂಗ್ "ಗೌಡ್ರು ಮುಂದ್ ಇಲೇಕ್ಷನ್ಗೆ ನಿಲ್ಲೋದಿಲ್ಲ ಅಂತ್ ಘೋಷ್ಣಾ ಮಾಡ್ಯಾರ್"!. ಅಂದ್ರ "ಅವ್ರು ಸಕ್ರೀಯ ಚುನಾವಣಾ ರಾಜಕೀಯದಿಂದಾ ನಿವೃತಿ ಆಕ್ಕಾರ ಅಂತ್ ಅರ್ಥ ಹೌದಲ್ಲ....?

ನೋಡ್ರೀ ಗೌಡ್ರು, "ಸಕ್ರೀಯ ರಾಜಕೀಯದಿಂದ ನಿವೃತ್ತಾದ್ರು ಅವ್ರು ಬೆಲ್ಲದ ರಾಜಕೀಯ ಬಿಡೋಂಗಿಲ್ಲ ನೋಡ್ರೀ"...!ಹಂಗಂದ್ರ ಏನೋ ಎಡಬಿಡಂಗಿ... ಬಿಡ್ಸಿ ಹೇಳೋಲೇ....

ಇದ್ರಾಗ ಬಿಡ್ಸಿಹೋಳೋದೇನೈತ್ರೀ, "ಗೌಡ್ರಿಗೆ ಹೆಂಗೂ ವಯಸ್ಸಾಗೇತಿ,! ಅವ್ರ ಮಗ ಎರ್ಡ್‍ನೆ ಸಲ ಸಿಎಂ, ಇನ್ನೋಬ್ಬ ಮಗಾ ರೇವಣ್ಣ ಮಂತ್ರಿ, ಸೊಸಿ ಎಂಎಲ್‍ಎ, ಇನ್ನೊಬ್ಬ ಸೊಸಿ ಜಡ್ಪಿ ಮೇಂಬರ್, ಅವ್ರ ಮೊಮ್ಮಗ ಈಗ ಎಂ.ಪಿ. ಒಟ್ಟಿನ್ಯಾಗ್ ಗೌಡ್ರು ಎತ್ಲಾಗ್ ತಿರುಗಿದ್ರು ಅವ್ರ ಸುತ್ತ-ಮುತ್ತಾ ರಾಜಕಾರ್ಣ ಗಿರಿಕಿ ಹೊಡಿತೈತಿ ಮತ್ತೇನ ಬೇಕು ಅವ್ರಿಗೆ"?. 

ಹಂಗಂತಿರೀ.... ಮತ್ತ ಅವ್ರು "ಪಾದಯಾತ್ರೆ ಮಾಡಿ ಪಕ್ಷಾನ್ ಸಂಘಟನೆ ಮಾಡ್ತನಿ ಅಂತ್ ಪಂಚಿನ ಎತ್ತೆಕಟೆಗಂಡ್ ರಡಿ ಆಗಿ ನಿಂತಾರಂತ್"!.
ನೋಡ್ಪಾಪಾ ಗೌಡ್ರು ಕಾರ್ಣ ಇಲ್ದ ಯಾವ ಕೆಲ್ಸಕ್ಕೂ ಕೈಹಾಕೋದಿಲ್ಲ. "ಅವ್ರು ಪಾದಯಾತ್ರೆ ಹೊಂಟಾರ ಅಂದ್ರ ರಾಜ್ಯಕ್ಕ ಮಧ್ಯಂತರ್ ಚುನಾವಣೆ ಬರ್ತತೀ ಅಂತ್ ಅರ್ಥ". ಅದ್ರ ಮೂನ್ಸೂಚನೆನ್ ಈಪಾದಯಾತ್ರೆ ಇರಬಹ್ದು ನೋಡು"?. 

"ಗೌಡ್ರು ಪಾದಯಾತ್ರಿನರ್ ಮಾಡ್ಲಿ ದಂಡ ಯಾತ್ರಿನರ ಮಾಡ್ಲಿ",  "ಅವ್ರ ನಡೆ ಮಾತ್ರ ನಿಗೂಡ ಇರ್ತತೈತಿ".  ಇರ್ಲಿ ಬೀಡೂ. "ಏನಂತೈಪಾ ನಿಮ್ಮ ನಿರ್ಮಲಮ್ಮನ ಬಜೆಟ್ಟು...! ರಾಜ್ಯಕ್ಕ ಈಎಮ್ಮ ತಾಯಿ ಆದ್ಲೋ ಮಲತಾಯಿ ಆದ್ಲೋ"...

ನೀವು ಬರೋಬ್ಬರಿ ಹೇಳಿದ್ರೀ ನಿರ್ಮಲಮ್ಮ ನಮ್ಮ ರಾಜ್ಯದಿಂದಾ ರಾಜ್ಯಸಭಾಕ್ಕ ಆಯ್ಕೆ ಆಗ್ಯಾಳ, ರಾಜ್ಯದ ಋಣ ಈಕಿಮ್ಯಾಲ ಐತಿ ,ರಾಜ್ಯಕ್ಕ ಏನಾದ್ರು ಕಾಣ್ಕಿ ಕೊಡ್ತಾಳ ಅಂತ ನಾನು ತಿಳ್ಕೋಂಡಿದ್ದೆ. ಆದ್ರ ಬಜೆಟ್ ನೋಡಿದಮ್ಯಾಕ್ ನಿರ್ಮಲಮ್ಮ ರಾಜ್ಯಕ್ಕೆ ಹಳೆ ಹುಣ್ಸಿ ಹಣ್ಣು ಕೊಟ್ಟಿಲ್ಲ!.  

"ದಿಕ್ಕು ದಿಸೆಯಿಲ್ಲದ ಬಜೆಟ್.ಅಂತ್ ವಿರೋಧ ಪಕ್ಷದವ್ರು ಹೊಕ್ಕಳ್ಳದ್ರಾಗ ತಪ್ಪೇನಿಲ್ಲ ಬಿಡ್ರೀ".  "ರೈತರ ಬಗ್ಗೆ ಈ ಎಮ್ಮ ಒಂದ್ಮಾತು ಆಡಿಲ"!್ಲ. "ಬರದಿಂದ ರೈತರು ಸಂಕ್ಟದಾಗ ಅದಾರ, ಕನಿಷ್ಠ ಬೆಂಬಲ ಬೆಲೆ  ಮಾತ್ ಇಲ್ಲ.   ಪೆಟ್ರೋಲ್- ಡೀಸೆಲ್ ಬೆಲೆನ ಏರಸ್ಯಾರ.  ನಿರ್ಮಲಮ್ಮ ಬರಿ ರಾಜ್ಯಕ್ಕ ಅಷ್ಟ ಅಲ್ರೀ ದೇಶಕ್ಕ ಮಲತಾಯಿ ಆಗ್ಯಾರಂತ್ ನಮ್ಮ ತಿಪ್ಪೇಶ ಹೇಳ್ಯಾನ ನೋಡ್ರೀ".

ಏ ಹೋಗ್ಲಿ ಬಿಡೋ ಹೆಂಗಿದ್ದರು ಜನ್ರು ಅವ್ರಿಗೆ ಬಹುಮತ ಕೊಟ್ಟಾರ, "ಇನ್ನು ನಾಲ್ಕ ವರ್ಷ ಇವ್ರ ಅಧಿಕಾರ ಐತಿ" "ಮುಂದ ಮತ್ತ ರೈತರ ಖಾತೆ ರೊಕ್ಕಾ ಹಾಕತಾರ!", "ಜನ್‍ಧನ್ ಖಾತೆದವ್ರಿಗೂ ಲಕ್ಷಗಂಟನೆ ರೊಕ್ಕಾ ಹಾಕಿದ್ರು ಹಾಕಬಹು"್ದ !ನಡಿಪಾ ಹೊತ್ತಾತು. ಮನ್ಯಾಗ ಜ್ವಾಳ ಇಲ್ಲಾ ಅಂತ್ ನಮ್ಮ ಮನಿಯಾಕಿ ಜ್ವಾಳಾ ತರಾಕ ಹೇಳಿದ್ಲು ನಡೆ ಊರಕಡಿಗೆ ಹೋಗೋಣ ಎನ್ನುತ್ತಾ ಇಬ್ಬರು ಗಾಡಿ ಏರಿದರು.