‘ಸರ್ಕಾರದ ಆಸ್ತಿ ನಮ್ಮ ಆಸ್ತಿ’ : ಭೂಕಳ್ಳರ ಪಾಲಿಗೆ ಕಾನೂನು ಇಲಾಖೆಯೇ ನಾಸ್ತಿ

‘ಸರ್ಕಾರದ ಆಸ್ತಿ ನಮ್ಮ ಆಸ್ತಿ’ : ಭೂಕಳ್ಳರ ಪಾಲಿಗೆ ಕಾನೂನು ಇಲಾಖೆಯೇ ನಾಸ್ತಿ

ಭೂಕಬಳಿಕೆಗಳನ್ನು ತಡೆಗಟ್ಟಲು ಕಾನೂನನ್ನು ಎಷ್ಟೇ ಬಿಗಿಗೊಳಿಸಿದ್ದರೂ ಸರ್ಕಾರಿ ಜಮೀನುಗಳು ಬಲಾಢ್ಯರ ಕೈಸೇರುತ್ತಲೇ ಇವೆ. ವಿಶೇಷವಾಗಿ ಕಾನೂನು ಇಲಾಖೆ ಸೇರಿದಂತೆ ಸರ್ಕಾರಿ ಜಮೀನುಗಳನ್ನು ಉಳಿಸಿಕೊಳ್ಳಬೇಕಾದ ಎಲ್ಲಾ ಇಲಾಖೆಗಳೂ ಭೂಮಾಫಿಯಾ ಜತೆ ಶಾಮೀಲಾಗುತ್ತಿವೆ. ವಿಶೇಷವಾಗಿ ಬೆಂಗಳೂರು ಉತ್ತರ(ಅಪರ) ತಾಲೂಕಿನ ತರಹುಣಸೆ ಗ್ರಾಮದಲ್ಲಿನ ಸರ್ಕಾರಿ ಗೋಮಾಳ ಪ್ರಕರಣದಲ್ಲಿ ಕಾನೂನು ಇಲಾಖೆ ಖಾಸಗಿ ವ್ಯಕ್ತಿಗಳ ಪರ ನಿಂತಿದೆ. ಈ ಕುರಿತ ವಾಸ್ತವಾಂಶಗಳನ್ನು ಜಿ.ಮಹಂತೇಶ್ ವಿವರಿಸಿದ್ದಾರೆ.  
.
ನೈಜ ದಾಖಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ದಾಖಲೆಗಳನ್ನು ಸೃಷ್ಟಿಸಿ  ಗೋಮಾಳ ಮತ್ತಿತರ ಸ್ವರೂಪದ ಸರ್ಕಾರಿ ಜಮೀನುಗಳನ್ನು ಕಬಳಿಸಿರುವ ಪ್ರಕರಣಗಳಲ್ಲಿ ಸರ್ಕಾರದ ಪರ ನಿಲ್ಲಬೇಕಿದ್ದ ಕಾನೂನು ಇಲಾಖೆ, ಖಾಸಗಿ ವ್ಯಕ್ತಿಗಳ ಪರ ವಕಾಲತ್ತು ವಹಿಸುವ ಮೂಲಕ ಸರ್ಕಾರಿ ಜಮೀನುಗಳಿಗೆ ಕಂಟಕವಾಗಿ ಪರಿಣಿಮಿಸಿದೆ. 


ಸರ್ಕಾರಿ ಜಮೀನನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭೂಮಾಪನ ನಡೆಸಿರುವ ಒಂದಷ್ಟು ಪ್ರಾಮಾಣಿಕ ಅಧಿಕಾರಿಗಳು ಸಾಕಷ್ಟು ದಾಖಲೆ, ಪುರಾವೆಗಳ ಸಮೇತ ಸರ್ಕಾರಕ್ಕೆ ವರದಿಗಳನ್ನು ಸಲ್ಲಿಸಿದ್ದಾರೆ. ಆದರೆ ಈ ವರದಿಗಳನ್ನು ಕಾನೂನು ಇಲಾಖೆ, ನ್ಯಾಯಾಲಯಗಳಲ್ಲಿ ಸಮರ್ಥಿಸಿಕೊಳ್ಳುತ್ತಿಲ್ಲ. ಕಂದಾಯ ಸಚಿವ ಆರ್ ವಿ ದೇಶಪಾಂಡೆ ಸಹ ಇದನ್ನು ಪ್ರಶ್ನಿಸುತ್ತಿಲ್ಲ!


ಸರ್ಕಾರಿ ಜಮೀನು ಎಂಬುದಕ್ಕೆ ಸೂಕ್ತ ದಾಖಲೆಗಳಿದ್ದರೂ ಸರ್ಕಾರದಲ್ಲಿ ಉಳಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕಾನೂನು ಇಲಾಖೆ, ಕಂದಾಯ ಇಲಾಖೆಗೆ ಅಭಿಪ್ರಾಯ ನೀಡುತ್ತಿದೆ. ಇಂತಹ ಅಭಿಪ್ರಾಯಗಳಿಂದಾಗಿಯೇ ಸರ್ಕಾರಿ ಜಮೀನುಗಳು ಖಾಸಗಿ ಬಲಾಢ್ಯ ವ್ಯಕ್ತಿಗಳ ಪಾಲಾಗುತ್ತಿವೆ. ಇಂತಹದೊಂದು ತಾಜಾ ಪ್ರಕರಣವನ್ನು 'ಡೆಕ್ಕನ್'ನ್ಯೂಸ್' ಇದೀಗ ಹೊರಗೆಡವುತ್ತಿದೆ.


ಬೆಂಗಳೂರು ಉತ್ತರ(ಅಪರ)ತಾಲೂಕಿನ ಜಾಲಾ ಹೋಬಳಿಯ ತರಹುಣಸೆ ಗ್ರಾಮದಲ್ಲಿನ (ಸರ್ವೆ ನಂಬರ್ 87/ P4) 13 ಎಕರೆ 20 ಗುಂಟೆ ವಿಸ್ತೀರ್ಣ ಹೊಂದಿರುವ ಸರ್ಕಾರಿ ಗೋಮಾಳದ ಮೇಲೆ ಹಕ್ಕು ಸಾಧಿಸುವುದರಲ್ಲಿ  ಖಾಸಗಿ ವ್ಯಕ್ತಿಗಳಿಬ್ಬರು ಮೇಲುಗೈ ಸಾಧಿಸಿದ್ದಾರೆ. ಇದರ ಹಿಂದೆ ಕಾನೂನು ಇಲಾಖೆ ವಹಿಸಿರುವ ಪರಿಶ್ರಮವನ್ನು ತಳ್ಳಿ ಹಾಕಲಾಗದು.


ಸರ್ಕಾರಿ ಮಾರ್ಗಸೂಚಿ ದರದ ಪ್ರಕಾರ ಜಾಲ ಹೋಬಳಿಯ ತರಹುಣಸೆಯಲ್ಲಿ ಕೃಷಿ ಭೂಮಿ ಎಕರೆಗೆ 65 ಲಕ್ಷ ರು.ದರವಿದೆ. ಮಾರುಕಟ್ಟೆ ದರದ ಪ್ರಕಾರ ಎಕರೆಗೆ 2.5 ಕೋಟಿ ರು.ಇದೆ. ಒಂದೊಮ್ಮೆ ಕೃಷಿಭೂಮಿ ಪರಿವರ್ತನೆಗೊಂಡಿದ್ದಲ್ಲಿ ಎಕರೆಗೆ ಮಾರುಕಟ್ಟೆ ದರದಲ್ಲಿ ಅಂದಾಜು 5 ಕೋಟಿ ರು.ಇದೆ. 13 ಎಕರೆ 20 ಗುಂಟೆ ವಿಸ್ತೀರ್ಣದ ಜಮೀನಿಗೆ ಮಾರುಕಟ್ಟೆಯಲ್ಲಿ ಏನಿಲ್ಲವೆಂದರೂ  65 ಕೋಟಿ ರು.ಬೆಲೆ ಇದೆ. ಕೋಟ್ಯಂತರ ರುಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಉಳಿಸಿಕೊಳ್ಳಬೇಕಿದ್ದ ಕಾನೂನು ಇಲಾಖೆ, ನೇರವಾಗಿ ಖಾಸಗಿ ವ್ಯಕ್ತಿಗಳ ಪರ ನಿಂತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. 


ಜಮೀನನ್ನು ಸರ್ಕಾದಲ್ಲಿ ಉಳಿಸಿಕೊಳ್ಳುವ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಅಭಿಪ್ರಾಯಿಸಿರುವ ಪ್ರತಿ

ತಹಶೀಲ್ದಾರ್ ವರದಿಯನ್ನು ತಳ್ಳಿ ಹಾಕಿದ್ದೇಕೆ?


ಸರ್ವೆ ನಂಬರ್ 87/ P4ರಲ್ಲಿನ 13 ಎಕರೆ 20 ಗುಂಟೆ ವಿಸ್ತೀರ್ಣದ ಜಮೀನು ಮೂಲತಃ ಸರ್ಕಾರಿ ಗೋಮಾಳ. ಆದರೆ ಈ ಜಮೀನನ್ನು ಟಿ ಸಿ ರಾಜಣ್ಣ ಮತ್ತು ಟಿ ಸಿ ಜಯಣ್ಣ ಎನ್ನುವವರ ಹೆಸರಿಗೆ ತಲಾ 6 ಎಕರೆ 30 ಗುಂಟೆಯಂತೆ ವರ್ಗಾವಣೆ ಆಗಿತ್ತು.  ಆದರೆ ಈ ಜಮೀನು ಮಂಜೂರು ಮಾಡಲಾಗಿದೆ ಎನ್ನುವ ಬಗ್ಗೆ ತಹಶೀಲ್ದಾರ್ ಕಚೇರಿಯಲ್ಲಿ ಯಾವುದೇ ದಾಖಲೆಗಳು ಇರಲಿಲ್ಲ. ಈ ಕಾರಣಗಳಿಗಾಗಿಯೇ ಟಿ ಸಿ ಜಯಣ್ಣ ಮತ್ತು ಟಿ ಸಿ ರಾಜಣ್ಣ ಎನ್ನುವವರ ಹೆಸರಿಗೆ ವರ್ಗಾವಣೆ ಮಾಡಿ ಹೊರಡಿಸಿದ ಆದೇಶವೇ ಕಾನೂನುಬಾಹಿರ. ಈ ಕಾರಣಗಳಿಗಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 136(3)ರ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸುವುದು ಅಗತ್ಯ ಎಂದು ತಹಸೀಲ್ದಾರ್ ವರದಿ ಸಲ್ಲಿಸಿದ್ದರು. 


ತಹಸೀಲ್ದಾರ್ ನೀಡಿದ್ದ ವರದಿಯನ್ನು ಭೂದಾಖಲೆಗಳ ಜಂಟಿ ನಿರ್ದೇಶಕರೂ ಎತ್ತಿ ಹಿಡಿದಿದ್ದರಲ್ಲದೆ, ಈ ಪ್ರಕರಣದಲ್ಲಿ ಅಧಿಕಾರಿ, ನೌಕರರ ಕರ್ತವ್ಯಲೋಪದಿಂದಾಗಿಯೇ ಸರ್ಕಾರಕ್ಕೆ ಸೇರಿದ 13 ಎಕರೆ 20 ಗುಂಟೆ ವಿಸ್ತೀರ್ಣದ ಬೆಲೆ ಬಾಳುವ ಜಮೀನು ಖಾಸಗಿ ವ್ಯಕ್ತಿಗಳ ಪಾಲಾಗಿದೆ. ಕರ್ತವ್ಯಲೋಪ ಎಸಗಿರುವ ಅಧಿಕಾರಿ, ನೌಕರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಲ್ಲದೆ, ಈ ಜಮೀನನ್ನು ಸರ್ಕಾರದಲ್ಲಿ ಉಳಿಸಿಕೊಳ್ಳಲು ಅಗತ್ಯ ಇರುವ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸ್ಸು ಮಾಡಿದ್ದರು. ಆದರೆ ಕಾನೂನು ಇಲಾಖೆ ಈ ಶಿಫಾರಸ್ಸಿನತ್ತ ಕಣ್ಣೆತ್ತಿಯೂ ನೋಡಿಲ್ಲ.


ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಆರೋಪಿತ "ಅಧಿಕಾರಿ, ನೌಕರರು ನೀಡಿರುವ ಸಮಜಾಯಿಷಿ ಮತ್ತು ವಿವರಣೆಗಳನ್ನು ಪರಿಶೀಲಿಸಿ ಶಿಸ್ತು ಪ್ರಾಧಿಕಾರ ಸೂಕ್ತ ನಿರ್ಣಯ ಕೈಗೊಂಡು ಶಿಸ್ತು ಕ್ರಮ ಕೈಬಿಡಬಹುದು," ಎಂದೂ ಕಾನೂನು ಇಲಾಖೆ ಅಭಿಪ್ರಾಯ ನೀಡುವ ಮೂಲಕ ಪ್ರಾಮಾಣಿಕ ಅಧಿಕಾರಿ, ನೌಕರರಲ್ಲಿ ವಿಶ್ವಾಸವನ್ನು ಕುಗ್ಗಿಸಿದೆ. 


ಜಿಲ್ಲಾಧಿಕಾರಿ ಸ್ವಯಂ ಪ್ರೇರಣೆಗೊಳಾಗಿದ್ದೇಕೆ?


ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಈ ಪ್ರಕರಣದಲ್ಲಿ ಸ್ವಯಂ ಪ್ರೇರಣೆಗೊಳಗಾಗಿದ್ದು. ತಹಸೀಲ್ದಾರ್ ಕೊಟ್ಟಿದ್ದ ವರದಿಯ ಮೇಲೆ ಕ್ರಮ ಕೈಗೊಳ್ಳಬೇಕಿದ್ದ ಜಿಲ್ಲಾಧಿಕಾರಿ ಸ್ವಯಂ ಪ್ರೇರಣೆಯಿಂದ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 136(3)ಅಡಿಯಲ್ಲಿ ವಿಚಾರಣೆ ನಡೆಸಿದ್ದರಲ್ಲದೆ, ಈ ಬಗ್ಗೆ ಅಂತಿಮ ಆದೇಶವನ್ನೂ ಹೊರಡಿಸಿದ್ದಾರೆ. ಈ ಆದೇಶ ಸಹಜವಾಗಿಯೇ ಖಾಸಗಿ ವ್ಯಕ್ತಿಗಳ ಪರವಿತ್ತು. 

ದಾಖಲೆ ಸೃಷ್ಟಿಸಲಾಯಿತೇ? 

ಈ ಪ್ರಕರಣದಲ್ಲಿ ದಾಖಲೆಗಳನ್ನು ಸೃಷ್ಟಿಸಲಾಗಿದಯೇ ಎಂಬ ಅನುಮಾನಗಳೂ ವ್ಯಕ್ತವಾಗಿವೆ. ಆಗಿನ ಮೈಸೂರು ರಾಜ್ಯದ ಕಂದಾಯ ಆಯುಕ್ತರು 1956ರ ಫೆ.13ರಂದು ತರಹುಣಸೆ ಗ್ರಾಮದ ಜಮೀನಿನಲ್ಲಿ ಸರ್ವೆ ನಂಬರ್ 87ರಲ್ಲಿನ ಒಟ್ಟು 13 ಎಕರೆ 20 ಗುಂಟೆ ಜಮೀನನ್ನು ಮುಕುಂದರಾವ್ ಎನ್ನುವವರಿಗೆ ಮಂಜೂರು ಮಾಡಿದ್ದರು. ಮಂಜೂರು ಷರತ್ತಿನ ಪ್ರಕಾರ 1956ರ ಮೇ 23ರಂದು ಜಮೀನಿನ ಸಾಗುವಳಿ ಚೀಟಿ ಪಡೆದುಕೊಂಡಿದ್ದಾರೆ ಎಂಬ ಸಂಗತಿ ಕಾನೂನು ಇಲಾಖೆ ಟಿಪ್ಪಣಿಯಿಂದ ತಿಳಿದು ಬಂದಿದೆ. 

ಕಾನೂನು ಇಲಾಖೆಯ ಟಿಪ್ಪಣಿ ಪ್ರತಿ


ಇದಾದ ನಂತರ ಈ ಜಮೀನಿನ ಪರಭಾರೆ ನಿಷೇಧ ಅವಧಿ ಮುಕ್ತಾಯಗೊಂಡ ನಂತರ ಮುಕುಂದರಾವ್ ಅವರು ಇಡೀ ಜಮೀನನ್ನು ವಿಜಯಾ ಎನ್ನುವರಿಗೆ ಮಾರಾಟ ಮಾಡಿದ್ದಾರೆ. ವಿಜಯಾ ಎನ್ನುವವರು 1992 ಮಾರ್ಚ್ 3ರಂದು ಟಿ ಸಿ ಜಯಣ್ಣ ಮತ್ತು ಟಿ ಸಿ ರಾಜಣ್ಣ ಎಂಬುವರಿಗೆ ತಲಾ 6 ಎಕರೆ 30 ಗುಂಟೆಯಂತೆ ಮಾರಾಟ ಮಾಡಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಸೂಕ್ತ ದಾಖಲೆ ಇರುವುದನ್ನು ಖಚಿತಪಡಿಸಿಕೊಂಡು ಜಿಲ್ಲಾಧಿಕಾರಿಗಳು ಅಂತಿಮ ಆದೇಶ ಹೊರಡಿಸಿದ್ದಾರೆ ಎಂಬ ಅಂಶವನ್ನು ಕಾನೂನು ಇಲಾಖೆ ತನ್ನ ಟಿಪ್ಪಣಿಯಲ್ಲಿ ನಮೂದಿಸಿದೆ. 


ಜಿಲ್ಲಾಧಿಕಾರಿಗಳು ಪ್ರಸ್ತಾಪಿಸಿರುವ ಪ್ರಕ್ರಿಯೆಗಳು ಮತ್ತು ಇದನ್ನು ಸಾಬೀತುಪಡಿಸಲು ಒದಗಿಸಿರುವ ಮಂಜೂರಾತಿಯ ದಾಖಲೆಗಳ ನೈಜತೆ ಬಗ್ಗೆಯೇ ಹಲವು ಸಂಶಯಗಳಿವೆ. 


ವಿಶೇಷವೆಂದರೆ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಅಂತಿಮ ಆದೇಶವನ್ನು ಪ್ರಶ್ನಿಸಿ ಖುದ್ದು ಕರ್ನಾಟಕ ಸರ್ಕಾರವೇ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ(ಸಂಖ್ಯೆ;31776/2011, 31780/2011) ದಾಖಲಿಸಿ ಅಚ್ಚರಿ ಮೂಡಿಸಿತ್ತು. ಈ ಎರಡೂ ರಿಟ್ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ಎರಡೂ ಕಡೆಯ ವಾದಗಳನ್ನು ಆಲಿಸಿ ಜಿಲ್ಲಾಧಿಕಾರಿಗಳ ಆದೇಶ ಎತ್ತಿಹಿಡಿದಿತ್ತಲ್ಲದೆ ಅದು ಕಾನೂನುಬದ್ಧವಾಗಿದೆ. ಟಿ ಸಿ ಜಯಣ್ಣ ಮತ್ತು ಟಿ ಸಿ ರಾಜಣ್ಣ ಅವರ ಹೆಸರಿಗೆ ವರ್ಗಾವಣೆಗೊಂಡ ಕಂದಾಯ ದಾಖಲೆಗಳ ನೈಜತೆ ಸಂಶಯಾತ್ಮಕವಾಗಿದೆ ಎಂದು ಹೇಳಿದ್ದ ತಹಸೀಲ್ದಾರ್ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅಭಿಪ್ರಾಯಿಸಿ ಸರ್ಕಾರ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ್ದು ಕೂಡ ಸೋಜಿಗಕ್ಕೆ ಕಾರಣವಾಗಿತ್ತು. 


ರಿಟ್ ಅರ್ಜಿ ವಜಾಗೊಳ್ಳುತ್ತಿದ್ದಂತೆ ಜಮೀನಿನ ಮಾಲೀಕರು ಎಂದು ಹೇಳಿಕೊಂಡಿದ್ದ ಖಾಸಗಿ ವ್ಯಕ್ತಿಗಳು, ಜಮೀನನ್ನು ಅಳತೆ ಮಾಡಿ ಪೋಡಿ ಮಾಡಿಕೊಡಲು ಸಲ್ಲಿಸಿದ್ದ ಮನವಿ ಅರ್ಜಿಯನ್ನು  ಭೂ ದಾಖಲೆಗಳ ಉಪ ನಿರ್ದೇಶಕರು ತಿರಸ್ಕರಿಸಿದ್ದರು. 


"ಸರ್ವೆ ನಂಬರ್ 87ರ ಮೂಲ ದಾಖಲೆಗಳು ಲಭ್ಯ ಇಲ್ಲದೇ ಇರುವುದರಿಂದ ಜಮೀನಿಗೆ ಪೋಡಿ ಮಾಡಲು ನಿಯಮಾನುಸಾರ ಸಾಧ್ಯವಿಲ್ಲ," ಎಂದು ಹಿಂಬರಹ ನೀಡುವ ಮೂಲಕ ಮನವಿಯನ್ನು ತಳ್ಳಿ ಹಾಕಿದ್ದರು ಎಂಬ ಮಾಹಿತಿ ಕಾನೂನು ಇಲಾಖೆಯ ಟಿಪ್ಪಣಿಯಿಂದ ಗೊತ್ತಾಗಿದೆ.


ಆದರೂ ಪಟ್ಟು ಬಿಡದ ಖಾಸಗಿ ವ್ಯಕ್ತಿಗಳು ಪುನಃ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತಲ್ಲದೆ, ಆದೇಶ ಹೊರಡಿಸಿದ ದಿನಾಂಕದಿಂದ 3 ತಿಂಗಳ ಒಳಗಾಗಿ ಜಮೀನಿನ ಅಳತೆ ಮತ್ತು ಪೋಡಿಯನ್ನು ನಿಯಮಾನುಸಾರ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. 


ಈ ನಿರ್ದೇಶನದಂತೆ ಆದೇಶ ಪಾಲನೆ ಮಾಡಲು ಸಂಬಂಧಪಟ್ಟ ತಹಸೀಲ್ದಾರ್ಗೆ 2014ರ ಜೂನ್ 18ರಂದು ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಸೂಚಿಸಿದ್ದರು. ಈ ಆದೇಶದಂತೆ ಎಸ್ ರಾಜಾನಾಯ್ಕ್, ಕೆಂಪರಾಜು, ಎಂ ಎಸ್ ಅಭಿನಂದನ್ಕುಮಾರ್, ಸಿ ಎಲ್ ನಿಂಗರಾಜು, ಪಿ ಸಿ ತಾಂಡವಮೂರ್ತಿ ಕರ್ತವ್ಯ ನಿರ್ವಹಿಸಿದ್ದರು. ಅಸಲಿಗೆ ಇಲ್ಲಿ ಹೆಸರಿಸಿರುವ ನೌಕರರ ಕರ್ತವ್ಯಲೋಪವೇ ಸರ್ಕಾರಿ ಜಮೀನು ಕೈ ತಪ್ಪಲು ಕಾರಣ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ  ಎಂದು ಭೂ ದಾಖಲೆಗಳ ಜಂಟಿ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದರು.