ಗುಂಡಿಸೆಲಿ ರೋಗಾ ಬಂದಿರೋದೂ ಎಂಎಲ್‍ಎಗಳಿಗೆ, ದನಗಳಿಗೆ ಅಲ್ಲಾ....!

ಗುಂಡಿಸೆಲಿ ರೋಗಾ ಬಂದಿರೋದೂ ಎಂಎಲ್‍ಎಗಳಿಗೆ, ದನಗಳಿಗೆ ಅಲ್ಲಾ....!

ಇದು ಯಾರು ಬರೆದ ಕತೆಯೋ
ರಾಜ್ಯದ ಜನರಿಗೆ ಬಂದ ವ್ಯಥೆಯೋ
ಕೊನೆ ಹೇಗೋ ಅರಿಯಲಾರೆ...
ಕಮಲದಾ ಕೈಯೋಂದು ಸೂತ್ರ ಹಿಡಿದಿದೆ
ದೋಸ್ತಿ ಸರ್ಕಾರವನ್ನು ಅಲಾಗಾಡಿಸಿದೆ
ಇದು ಯಾರು ಬರೆದ ಕಥೆಯೋ.....

ಏನ್ಪಾ ಬಸಣ್ಣಾ, ಬಳಾ ಬ್ಯಾಸರದ್ಯಾಗ ಇದ್ದಂಗ್ ಅದಿಯಲ್ಲ!. ಯಾಕ ಏನಾತು?. "ಇನ್ನು ಮುಗಿವಲ್ದನು ನಿಮ್ಮ ಸಮ್ರಿಶ್ರ ಸರ್ಕಾರದ ಕತೀ"....?.
ಹೌದ್ರಿ ಇನ್ನು ಮುಗಿವಲ್ದು,  "ಟಿವಿಯೋಳ್ಗ ದಿನಾ ಕೋರೆಯೋ ಧಾರಾವಾಹಿ ಹಂಗ್ ಸಮ್ರಿಶ್ರ ಸರ್ಕಾರ ಗೋಳು ಮುಗೆ ವಲ್ದು..?.

ಲೇ... ಎಪ್ಪಾ "ಇದು ಸಣ್ಣ-ಪುಟ್ಟ ಧಾರಾವಾಹಿ ಅಲ್ಲಲೇ!, ಇದು ಮೇಘಾ ಧಾರಾವಾಹಿ ಇದ್ದಂಗ್.... ಎಷ್ಟ ಏಳದ್ರೂ ಬೆಳಕಂತ್ ಹೊಕೈತಿ ಇದು, ಇದ್ಕ ಕೊನೆ ಅನ್ನೋದು ಸದ್ಯಕ್ಕ ಇಲ್ಲ ನೋಡು".

ಅಲ್ರೀ... ಕಾಕಾರ ಮೊನ್ನೆ ಇದ್ದಕ್ಕಿದ್ದಂಗ್ "ರೇಸಾರ್ಟ್ನಗಿಂದ ಎಂಎಲ್‍ಎ ಶ್ರೀಮಂತ ಪಾಟೀಲ್ರು ಮಾಯಾಗಿ ಬಾಂಬೆದಾಗಿನ ದಾವಾಖಾನ್ಯಾಗ ಎಲ್ಲೆ ಬೇಕಲ್ಲೆ ವಾಯರ ಚುಚ್ಚಿಸಿಗೆಂಡಿದ್ದ ಪೋಟೋನ್ ಸ್ಪೀಕರ್ ಸಾಹೇಬ್ರೀಗೆ ಕಳ್ಸಿ ನಾ ದಾವಾಖಾನ್ಯಾಗ ಅದನೀ ನನ್ನ ಹುಡ್ಕಬ್ಯಾಡ್ರೀ, ನನ್ಗ ಅಧಿವೇಶನ್ದ ಒಳ್ಗ ಹಾಜರಾಗಾಗ ಆಗಂಗಿಲ್ಲ  ಅಂತ ಪತ್ರ ಬರದೈತಿ". "ಅಂತಾದ್ದೇನ ಆಗೇತ್ರಿ ಇದ್ಕ. ವಾಯರ್ ಚುಚ್ಚಿಸಿಕೊಳ್ಳುವಂತ ಬ್ಯಾನಿ"..?

ಲೇ ... ಲೇ... ತಮ್ಮ ಎಂಎಲ್‍ಎಗಳ್ಗೆ ಬಂದಿರೋ ಬ್ಯಾನಿ ಬಗ್ಗೆ  ಹಂಗ್ ಹಗರಾಗಿ ಮಾತಾಡಬ್ಯಾಡೋ?. "ಎಂಎಲ್‍ಎಗಳಿಗೆ ಬಂದಿರೋ ಬ್ಯಾನಿ ಎಂತಾದ್ದು..? ಅನ್ನೋದು ನಮ್ಮ ರಾಜ್ಯದ ಜನ್ರೀಗೆ ಅಷ್ಟ ಅಲ್ಲಾ! ಇಡಿ ಜಗತ್ತಿನ ಜನ್ರಿಗೆ, ಅದು ಹೊಟ್ಟಿಗೆ ಅನ್ನೋ ತಿನ್ನೋರಿಗೆಲ್ಲಾ ಗೊತ್ತಾಗೇತಿ"!. ಇನ್ನ ನಿನ್ಗ ಗೊತ್ತಿಲ್ಲಾ ಅಂದ್ರ ಹೆಂಗ್ಯ!.

ಅಂದ್ರ ನಿಮ್ಮ ಮಾತಿನ ಅರ್ಥ ಏನೂ ಅಂತ್, ನಾ ಹೊಟ್ಟಿಗೆ ಅನ್ನಾ ತಿನ್ದ್ ಬ್ಯಾರೇ ಎನರ್ ತಿನ್ನಾಕ ಆಕೈತೇನ್ರೀ....! ಏನ್ ಮಾತಾಡ್ತೀರಿ ನೀವು !.

ಅಲ್ಲೋ ಸಿಟ್ಟಿಗೆ ಬರಬ್ಯಾಡೋ.... ಎಲ್ಲಾರು ಹೊಟ್ಟಿಗೆ ಅನ್ನಾನ ತಿನ್ನೋದು, ಆದ್ರ "ನಿಮ್ಮಂತವ್ರೂ ಅನ್ನದ ಬದ್ಲು ಏನೇನರ ತಿಂತಿರಲ್ಲ...!. "ಕೆಲವ್ರೂ ರೊಕ್ಕದ ಕಂತಿ ತಿಂತಾರ್".! ಇನ್ನ "ಕೆಲವ್ರೂ ಗೋಲ್ಡನ್ ಕಲರ್ ಬ್ರೆಡ್, ಬಿಸ್ಕಿಟು,ಪಿಜ್ಜಾ-ಬರ್ಗರ್ ಅಂತ್ ಅದು-ಇದು ಏನೇನರ್ ತಿಂತಾರ"!. "ಅನ್ನಾ ತಿನ್ನೋರಿಗ್ಗೆ ನಮ್ಮ ಎಂಎಲ್‍ಎಗಳ್ಗೆ ಬಂದಿರೋ ಬ್ಯಾನಿ ಯಾವ್ದು? ಅನ್ನೋದು ಲಗೂನ ಗೊತ್ತಾಗತೈತಿ,! ಅದ್ಕ ನಾನು ಹಂಗ್ ಅಂದ್ನೆಪಾ"!. 

ಅಲ್ರೀ,  "ರಾತ್ರಿ ಹತ್ತುಮುಕ್ಕಾಲಮಟಾ ಶ್ರೀಮಂತ ಪಾಟೀಲ್ರು ಅರಾಮ ಇದ್ರೂ", ಒಮ್ಮಿದೊಮ್ಮಿಲೇ ಇವ್ರೂ ಅಲ್ಲಿಂದಾ ಕಣ್ಮರೆ ಆಗಿ ಬಾಂಬೆ ಆಸ್ಪತ್ಯ್ರಾಗ ಹೋಗಿ ಆಡ್ಮಿಟ್ ಆಕ್ಕಾರ ಅಂದ್ರ ಹೆಂಗ್ಯ".! "ರಾತ್ರೋ ರಾತ್ರೀ ಇವ್ರನ್ ಅಲ್ಲಿಗೆ ಕರ್ಕೊಂಡು ಹೋದವ್ರು ಯಾರು"?. ಅಲ್ಲೆ "ಎಲ್ಲೆ ಬೇಕಲ್ಲೇ ವಾಯರ್ ಚುಚ್ಚಿಸಿಕೊಳ್ಳುವಂತಾದ್ದು ಏನ ಆಗಿತ್ತು ಇವ್ರಗೆ"..?.

ಅಲ್ಲೋ "ಜಗತ್ಗೆ ಗೊತ್ತೈತಿ ನಿನ್ಗ ಗೊತ್ತಿಲ್ಲ ಅಂದ್ರ ಹೆಂಗ್ಯ"!. "ಶ್ರೀಮಂತ್ ಪಾಟೀಲ್ರಿಗೆ ಗುಂಡಿಸೆಲಿ ಬಂದಿತ್ತಂತ್"?. ಅದ್ಕ ಪಾಪಾ, "ಅವ್ರು ರೇಸಾರ್ಟಿನಿಂದ ಚಿನೈಗೆ ಹೋಗಿ ಅಲ್ಲಿಂದ್ ಗುಂಡಿಸೆಲಿ ಬಂದು ಅದ್ಕ ಚಿಕಿತ್ಸೆಪಡ್ಯಾಕ ಅವ್ರು ಬಾಂಬೈ ಆಸ್ಪತ್ರೆಗೆ ಹೋಗಿ ಅಲ್ಲೆ ಬಿದ್ಕೋಂಡಾರ್". ಶ್ರೀಮಂತರಿಗೆ ಗುಂಡಿಸೆಲೆ ರೊಗ ಬಂದಾಗ ª ನಿಮ್ಮ ಸಿದ್ದ್ರಾಮಣ್ಣ, ಕುಮಾರಣ್ಣ, ಡಿಕಿಶಿ ಏನಮಾಡ್ತಿದ್ರು....? 

ಅವ್ರೇನ್  ಮಾಡಬೇಕರೀ, ಇವ್ರನ್ ಕಾಯಾಕ ಆಗಂಗಿಲ್ಲ!. "ರೇಸಾರ್ಟ್ ನಂತಾ ದೊಡ್ಡಿಒಳ್ಗ ಎಂಎಲ್‍ಎ ಗಳ್ನ ಕೂಡಿಹಾಕಿ ಎಲ್ಗಿ ಹೋಗಬ್ಯಾಡ್ರಿ, ಇಲ್ಲೆ ಇರ್ರೋ ಅಂತ್ ಕೈಯಾಗ ಕಡ್ಡಿಕೊಟ್ಟು ಹೇಳಿದ್ರು", "ಗುಳ್ಗಿ ತರ್ತನಿ, ಗೊಟ್ಟಾತರ್ತನಿ ಅಂತ್ ಗುಳಗಿ ಕೊಟ್ಟು  ಪುರ್ ಅಂತ್ ವಿಮಾನ ಹತ್ತಿ ಬಾಂಬೈಕ್, ಗೋವಾಕ್ ಹಾರಿಹೋಗಿ ನನ್ಗ ಗುಂಡಿಸೆಲಿ ಬಂದೈತಿ ಅಂತ ದಾವಾಖಾನ್ಯಾಗ ಬಿದ್ಕಂಡ್ರ  ಸಿದ್ದ್ರಾಮಣ್ಣ ಏನ್ ಮಾಡಬೇಕು".? ಅಲ್ರೀ ಕಾಕಾ "ಗುಂಡಿಸೆಲಿ ರೋಗ ಬರೋದು ದನಗಳ್ಗೆ"?, ಇವ್ರ ದನಗಳಿಗೆ ಗುಂಡಿಸೆಲಿ ರೋಗ ಬಂದಿದ್ರ ಅವ್ನ  ಇಲ್ಲೇ ದನದವಾಖಾನಿಗೆ ತೋರ್ಸದ್ ಬಿಟ್ಟು ಅವ್ರು ಅಲ್ಗೆಗ್ಯಾಕ ಹೋದ್ರು ?. ಅದು ಅವ್ರು ಬೆಡ್ ಮ್ಯಾಕ್ ಬಿದ್ಕಂಡಾರ್...

ಲೇ ಎಪ್ಪಾ "ಗುಂಡಿಸೆಲೆ ಬ್ಯಾನಿ ಬಂದಿರೋದೂ ಎಂಎಲ್‍ಎ ಅವ್ರ ಎತ್ತಿಗೆಅಲ್ಲೋ"! , ಎಂಎಲ್‍ಗೆ ಅವ್ರೀಗೆ . ಅದ್ಕ "ಅವ್ರು ಅಲ್ಲೆ ಹೋಗಿ ಎಲ್ಲೆಬೇಕಲ್ಲೆ ವಾಯರ್ ಹಚಿಗೊಂಡು ಚಿಕಿತ್ಸೆ ಪಡ್ಕಕೊಳ್ಳಾಕ ಹತ್ಯಾರ್."!

ಹಂಗಾದ್ರ ಪಾಪಾ "ಗುಂಡಿಸೆಲಿ ಬಂದಿರೋ ಎತ್ತಗೂಳ ಕತಿ ಏನ್ರೀ"...?

"ಎತ್ತಿಗೆ ಗುಂಡಿಸೆಲೆ ಬಂದ್ರ ಅವುನ್ನ ಲಗೂನ ದನದ್ ದವಾಖಾನ್ಗೆ ತೋರ್ಸಿದ್ರ ಅವು ಬದ್ಕಿದ್ರೂ ಬದ್ಕಬಹುದು"!, ಆದ್ರ ಯಾವ್ದ ರೋಗ ಇಲ್ಲದಂಗ್ "ರೋಕ್ಕಾ-ಅಧಿಕಾರದ ಬೆನ್ನಹತ್ತಿ ಹೋಟಲ್ಗೆ, ದಾವಾಖಾನಿಗೆ ಹೋಗಿ ತಿಂಗಾಳನಗಟ್ಲೆ ಬಕಬಾರ್ಲೆ ಬಿದ್ಕಂಡಾರಲ್ಲ ಇವರ್ಗೆ ಮನುಷ್ಯಾರ  ಸೂಜಿ ನಾಟೋದಿಲ್ಲ..., ಇವ್ರಿಗೆ "ದಬ್ಬಣಾ ತಗೊಂಡು ಹೆಟ್ಟಿದ್ದ್ರ ಇವ್ಗೆ ನಾಟೋದು", "ಅಲ್ಲಿಮಟ ಇವ್ರೇನು ಮನಿ-ಮಠ ಸೇರೋಹಂಗ್ ಕಾಣೋದಿಲ್ಲ, ನನ್ಗಂತೂ ಗೊತ್ತಿಲ್ಲ....!. 

ನೀವೂ ಏನ ಹೇಳ್ರೀ ಕಾಕಾ  "ಕರ್ನಾಟಕದ ಜನ್ರಿಗೆ ನಮ್ಮ ಜನಪ್ರತಿನಿಧಿಗಳ ಆಟ ನೋಡಿ... ನೋಡಿ ಗುಂಡಿಸೆಲಿ ಬರ್ದಿದ್ರ ಸಾಕ ನೋಡ್ರೀ. ಅದ ನಮ್ಮ ಪುಣ್ಯಾ"...?. 

ಅಲ್ಲೋ ಬರೋಬ್ಬರಿ "ಹದಿನಾಲ್ಕ ತಿಂಗ್ಳಾತು ಇವ್ರ ಮಂಗ್ಯಾನಾಟ ಶುರುಮಾಡಿ", "ಮೂರು ಪಕ್ಷದವ್ರು ಅಧಿಕಾರದ ಹಪಾ ಹಪಿ ನೋಡಿ ಜನ್ರೀಗೆ ಸಾಕ ಸಕಾಗೇತಿ".? "ಇವ್ರಿಗೆ ರಾಜ್ಯದ ಅಭಿವೃದ್ಧಿ, ಜನ್ರ ಅಭಿವೃದ್ಧಿ ಬ್ಯಾಡಾಗೇತಿ"!. "ಇವ್ರರ್ಗೆ ಬೇಕಾಗಿದ್ದು ಇವ್ರ ಅಭಿವೃದ್ಧಿ...! ಇವ್ರ ಕುಟುಂಬದವ್ರ ಅಭಿವೃದ್ಧಿ". "ಚುನಾವಣೆ ಮುಂಚೆ ಇವ್ರ ಆಸ್ತಿ-ಪಾಸ್ತಿ ಎಷ್ಟಿತ್ತು?, ಈಗ ಎಷ್ಟ ಅಭಿವೃದ್ಧಿ ಹೊಂದೈತಿ ಅನ್ನೋದು ಗೊತ್ತಾಕೈತಿ"!. "ಆಟ ಹಚ್ಚಾರನು ಇವ್ರು ಆಟಾ"? "ಊರಾಗ ಓಡ್ಯಾಡಾಕ ಒಂದು ರಸ್ತೆ ಸರಿಯಿಲ್ಲ..., "ಮಳೆ ಇಲ್ದ ರೈತ್ರು ಒದ್ದಾಡಾಕ ಹತ್ಯಾರ ಮುಂದ ಹೆಂಗ್ಪಾ ಶಿವ್ನ ಜೀವ್ನಾ ಅಂತ್" "ಆದ್ರ ಜನ್ರು ಅಧಿಕಾರ ಕೊಟ್ಟಾರ.. ಐದ ವರ್ಷ ನಮ್ಮನ್ನ ಏನು ಮಾಡಾಕ ಆಗೋದಿಲ್ಲ ಅಂತ್ ಇವ್ರು ತಿಳ್ಕಂಡ್ರ ಅದು ತಪ್ಪು". ಮುಂದ್ ಇವ್ರು ಜನ್ರ ಹತ್ರಾ ಬರಾಕಬೇಕಲ್ಲ. ಬರ್ದ ಎಲ್ಲೆ ಹೊಕ್ಕಾರ ಇವ್ರು. "ಕಾಮಿ ಕಣ್ಣಮುಚಿಗೊಂಡು ಹಾಲ ಕುಡ್ದ್ರ ಯಾರಿಗೂ ಗೊತ್ತಾಗೋದಿಲ್ಲ ಅಂತ್ ತಿಳ್ಕಂಡಾರೇನು ಇವ್ರು". ಯಾವುದಕ್ಕೂ ಮೀತಿ ಇರತೈತಿ, "ಮೀತಿ ಮೀರಿದ್ರ ಜನ್ರು ಮತ ಅನ್ನೋ ಬಡ್ಗಿ ಹಿಡ್ಕೋಂಡು ಇವ್ರ್ನ ಬೆನ್ನ ಹತ್ತಿ ಹೊಡಿತ್ಯಾರ"?.

"ಇದ್ರಾಗ್ ಜನ್ರದ್ದೂ ತಪ್ಪತೈತಿ ಬಿಡ್ರೀ"..?. "ಜನ್ರೂ ಇಲೆಕ್ಷನ್ ಸಂದರ್ಭದಾಗ ರೊಕ್ಕಾ ತಗೊಂಡ ಮತಹಾಕಿದ್ದಕ್ ನಮ್ಮ ಜನಪ್ರತಿನಿಧಿಗಳು ರೊಕ್ಕದ ಹಿಂದ್ ಬಿದ್ದಾರ್"?. "ಜನ್ರ ಇಲೇಕ್ಷನ್ ಸಂದರ್ಭದಾಗ ರೊಕ್ಕಾ ಕೊಡುಹೊತ್ತಿನ್ಯಾಗ" "ರೊಕ್ಕಾನ್  ಅವ್ರ ಮುಖದಮ್ಯಾಗ ಬೀಸಿಒಗ್ದ"... "ತಗೊಂಡು ಹೋಗ್ರಿ ನಿಮ್ಮ ರೊಕ್ಕಾ, ನೀವು ಆರ್ಸಿ ಬಂದಮ್ಯಾಕ್ ನಮ್ಗ ರಸ್ತೆ, ನೀರು ,ಸೂರು, ಬೀದಿದೀಪಾ, ಚರಂಡಿ ಸ್ವಚ್ಛಮಾಡ್ಸಿರಿ ಅಂತ್ ಉಗದಿದ್ರ ನಮ್ಮ ಜನಪ್ರತಿನಿಧಿಗಳು ರೊಕ್ಕದ ಬೆನ್ನಹತ್ತದ್ ಜನ್ರ ಬೆನ್ನಹತ್ತತಿದ್ರೂ"?. "ಚಲೋರ್ನ ಆರ್ಸಿದ್ದರ ಇಂತಾ ಪರಿಸ್ಥಿತಿ ಬರ್ತೀರಲಿಲ್ಲ". ಈಗ ನೋಡಿದ್ರ "ನಮ್ಮ ಎಂಎಲ್‍ಎ ಸಾಹೇಬ್ರು ಕಳಕೊಂಡಾರ ಅವ್ರ್ನ ಹುಡ್ಕಿಕೊಡ್ರಿ ಅಂತ್ ಕಂಪ್ಲೇಟ್ ಕೊಡ ಪರಿಸ್ಥೀತಿ ಬರ್ತೀಲಿಲ್ಲ... ಹೋಗ್ಲಿ ಬೀಡ್ಪಾ ಮಾಡಿದಂತಾ ಕಡ್ಬು, ಮಾಡಿದವ್ರು ತಿನ್ನಾಕ ಬೇಕು. ಎಲ್ಲಿಗೆ ಬಂತ್ಪಾ ಅಧಿವೇಶ್ನಾ!. 

ಇನ್ನೇಲ್ಲಿ ಅಧಿವೇಶ್ನಾ ತರ್ತೀರಿ ಮೈತ್ರಿ ಸರ್ಕಾರ ಬಹುಮತಾ ಕಳ್ಕಂಡು ನೆಗದು ಬಿದ್ದ್ಯೆತಿ. ಕುಮಾರಣ್ಣ ಸಿ.ಎಂ.ಸ್ಥಾನಕ್ಕ ರಾಜೀನಾಮೆ ಕೊಟ್ಟು ಮನಿಗೆ ಹೋಗ್ಯಾನ. ಇನ್ನೇನಿದ್ರು ನಮ್ಮ ರಾಜಾಹುಲಿದ ದರ್ಬಾರು.

ರಾಜಾಹುಲಿ ಅಂದ್ರ ನಿಮ್ಮ ಯಡೆಯೂರಪ್ಪ ಹೌದಿಲ್ಲ. !

ಹೌದ್ರಿ ಅವ್ರನ್ ಬಿಟ್ರ ಮತ್ಯಾರ ಅದ್ಯಾರಿ ಬಿಜೆಪ್ಯಾಗ ರಾಜಾಹುಲಿ!. ಒನ್ ಆಂಡ್ ಓನ್ಲಿ ರಾಜಾಹುಲಿ ನಮ್ಮ ಯಡೆಯೂರಪ್ಪ. 

ಆತು ಬಿಡ್ಪಾ ನಿಮ್ಮ ರಾಜಾಹುಲಿ ಯಾವಾಗ ಗದ್ದಗಿ ಏರತೈತಂತ್ ?. 

ತಡ್ರೀ... ಈಗರ ಸಮ್ಮಶ್ರ ಸರ್ಕಾರ ತೊಲಗೇತಿ,  ಯಡೆಯೂರಪ್ಪನವರು ಹೊಲಿಸಿಕೊಂಡಿರೋ ಹೊಸಾ-ಅಂಗಿ ಚೊಣ್ಣ ಹಾಕ್ಕೊಂಡು ಹಣಿಮಾಗ ಕುಂಕಮಾ ಹಚಿಗೊಂಡು ಹೆಗಲಮ್ಯಾಲ ಹಸ್ರ ಟವಲ್ ಹಾಕ್ಕೋಂಡು ಯಡೆಯೂರಪ್ಪ ಎಂಬ ಹೆಸರಿನ ನಾನು ಅಂತ್ ಪ್ರಮಾಣ ವಚ್ನಾ ಸ್ವೀಕಾರ ಮಾಡತ್ಯತಿ ನೋಡವಂತ್ರಿ ತಡ್ರೀ.   "ಒಟ್ಟಿನ್ಯಾಗ ಈ ಕುರ್ಚೆ ಪುರಾಣ ಸದ್ಯಕಂತು ಮುಗದೈತಿ". ತಲಿ ಕೆಟ್ಟು ಮಸರ್ ಗಡ್ಗಿ ಆಗೇತಿ,ಮಳೆ ಬ್ಯಾರೆ ಹಿಡದೈತಿ, ತಂಡಿನು ಹೆಚ್ಗಿ ಐತಿ, ಬರ್ರೀ, ರಾಮಣ್ಣನ್ ಚಾ ಅಂಗ್ಡಿಗೆ ಹೋಗಿ ಚಾ..ಕುಡ್ದು ಮನಿಗೆ ಹೋಗೋಣು ನಡ್ರಿ ಎನ್ನುತ್ತ ಇಬ್ರು  ನಡೆದರು.