ಕಠಿಣ ನಿರ್ಧಾರಗಳಿಗೆ ಸಕಾಲ    

ಕಠಿಣ ನಿರ್ಧಾರಗಳಿಗೆ ಸಕಾಲ    

ಗೆದ್ದದ್ದಕ್ಕೆ ಕಾರಣಗಳು ಬೇಕಿಲ್ಲ, ಸೋತಿದ್ದಕ್ಕೆ ನೀಡುವ ಸಮಜಾಯಿಷಿ ಪೇಲವವಾಗಿ ಕೇಳಿಸುತ್ತದೆ. ನೆನ್ನೆ ಇಂಗ್ಲೆಂಡ್ ಕೈಯಲ್ಲಿ ಚಚ್ಚಿಸಿಕೊಂಡ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಹು ಮುಖ್ಯವಾದ ಅಂಶದ ಬಗ್ಗೆ ಆಕ್ಷೇಪಿಸಿದ್ದಾರೆ. ಐಸಿಸಿ ಮಾರ್ಗಸೂಚಿಯ ಅನುಸಾರ ಮೈದಾನದ ಯಾವುದೇ ಭಾಗದ ಬೌಂಡರಿ 59.43 ಮೀಟರ್ ಗಿಂತ ಕಡಿಮೆ ಇರುವಂತಿಲ್ಲ. ಆದರೆ, ಎಡ್ಜ್ಬಾಸ್ಟನ್ನಿನ ಒಂದು ಭಾಗದ ಬೌಂಡರಿಯ ದೂರ ಕೇವಲ 59 ಮೀಟರ್ ಇತ್ತು. ಹೌದು, ಭಾರತ ಬ್ಯಾಟ್ ಮಾಡುವಾಗ ಬೌಂಡರಿಯನ್ನು ಅಗಲಿಸಲಿಲ್ಲ, ನಿಜ. ವಾಸ್ತವ ಏನೆಂದರೆ, ಆ ಹೊತ್ತಿಗೆ ಪಿಚ್ ನ ಗತಿ ಕಡಿಮೆಯಾಗಿ, ಬ್ಯಾಟ್ ಮಾಡುವುದು ಇಂಗ್ಲೆಂಡ್ ಇನಿಂಗ್ಸ್ ನಲ್ಲಿದ್ದಷ್ಟು ಸರಾಗವಾಗಿರಲಿಲ್ಲ. ಆ ಕಾರಣಕ್ಕಾಗಿ, ಟಾಸ್ ಗೆಲ್ಲುವುದು ಮುಖ್ಯವಾಗಿತ್ತು. ಟಾಸ್ ಲಕ್ಷ್ಮಿ ಇಂಗ್ಲೆಂಡ್ ಗೆ ಒಲಿದಳು. ಹಾಗಂತ ಇಂಗ್ಲೆಂಡ್ ಸಾಧನೆಯನ್ನು ತಳ್ಳಿಹಾಕುವ ಪ್ರಶ್ನೆಯೇ ಇಲ್ಲ. 

ಜಾನಿ ಬೇರ್ಸ್ಟೊ, ತಂಡಕ್ಕೆ ವಾಪಸ್ಸಾದ ಸಹ-ಆರಂಭಿಕ ಬ್ಯಾಟ್ಸ್ಮನ್ ಜೇಸನ್ ರಾಯ್ ಸಾರಥಿಯಲ್ಲಿ, ತಾವು ಬಂದಿರುವುದೇ ಬಾಗಿಲು ಒಡೆದು ದರೋಡೆ ಮಾಡುವುದಕ್ಕೆ ಎಂಬುದನ್ನು ಆರಂಭದಲ್ಲೇ ತಿಳಿಸಿದರು. ತಮ್ಮ ತಂಡ ಸೆಮಿಫೈನಲ್ ಪ್ರವೇಶಿಸುವುದಕ್ಕೆ ಪ್ರಬಲ ಭಾರತ ಅಡ್ಡಗಾಲು ಹಾಕಬಾರದೆಂಬ ಅರಿವಲ್ಲಿ ಭಾರತ ತಂಡದ ಬೌಲರ್ ಗಳನ್ನು ಥಳಿಸಿದರು. ಜಗತ್ತಿನ ಅಗ್ರಗಣ್ಯ ಬೌಲರ್ ಆಗಿ ಮಿಂಚುತ್ತಿರುವ ಜಸ್ಪ್ರೀತ್ ಬುಮ್ರಾ ಮಾತ್ರ ಆ ಜಂಟೀ ದಾಳಿಗೆ ಪ್ರತಿರೋಧ ನೀಡಿದರು (4-1-8-0). ಜಾನಿ ಶತಕ ಗಳಿಸಿದರು, ನಿಜ, ಆದರೆ ಅವರ ಬ್ಯಾಟಿಂಗ್ ದೋಷ ಮುಕ್ತವಾಗಿರಲಿಲ್ಲ. ಇರಲಿ. 

ಪ್ರಸಕ್ತ ಪಂದ್ಯದಲ್ಲಿ ಭಾರತ ಸ್ಪಿನ್ ಬೌಲಿಂಗ್ ನ್ನು ಶೀಘ್ರದಲ್ಲೇ ಪರಿಚಯಿಸಿತು. ಆರನೇ ಓವರಿಗೇ ಚಹಲ್ ಬಂದಾಗಿತ್ತು. ನಿತ್ಯದಂತೆ, ನಮ್ಮ ಸ್ಪಿನ್ನರ್ ಗಳು ಬೌಲ್ ಮಾಡುವ ಹೊತ್ತಿಗೆ ಒಂದೋ ಎರಡಾದರೂ ವಿಕೆಟ್ ಬಿದ್ದಿರುತ್ತಿತ್ತು, ಅಥವಾ ರನ್ ಗಳು ನಿಯಂತ್ರಣದಲ್ಲಿರುತ್ತಿತ್ತು. ಚಹಲ್ ಮತ್ತು ಕುಲದೀಪ್ ಯಾದವ್ ಗೆ ಆ ಸುಖ ಇರಲಿಲ್ಲ. ಕೊಲೆಗಡುಕನಂತೆ ಉದ್ವಿಗ್ನರಾಗಿದ್ದ ಬ್ಯಾಟ್ಸ್ಮನ್. ಗ್ರಹಚಾರಕ್ಕೆ ಬೌಂಡರಿ ಬೇರೆ ಮಾಮೂಲಿಗಿಂತ  ಹತ್ತಿರ. ಹೊಡೆಸಿಕೊಳ್ಳುವುದು ಬಿಟ್ಟರೆ ಅನ್ಯಮಾರ್ಗವಿರಲಿಲ್ಲ. ಜೇಸನ್ ರಾಯ್ ಔಟಾದದ್ದು 23 ನೇ ಓವರ್ ನ ಮೊದಲ ಎಸೆತದಲ್ಲಿ. ಆದರೆ ಆ ವಿಕೆಟ್ ಉಡಾಯಿಸಿದ ಕೀರ್ತಿ ಸಲ್ಲಬೇಕಾದದ್ದು ಕುಲದೀಪನಿಗಲ್ಲ, ಬೌಂಡರಿ ಅಂಚಿನಲ್ಲಿ ಫೀಲ್ಡ್ ಮಾಡುವಾಗ ಆಯತಪ್ಪಿ ಬಿದ್ದು ಪೆಟ್ಟುತಿಂದ ಲೋಕೇಶ್ ರಾಹುಲ್ ಬದಲಾಗಿ ಅಂಗಣದಲ್ಲಿದ್ದ ಜಿಂಕೆಯ ವೇಗದ ಫೀಲ್ಡರ್ ರವೀಂದ್ರ ಜಡೇಜಾಗೆ. ಆದರೂ ಮೆಚ್ಚಬಹುದಾದ ಅಂಶವೆಂದರೆ ಕುಲದೀಪ್ ಆ ಓವರ್ ನಲ್ಲಿ ಕೇವಲ ಮೂರು ರನ್ ನೀಡಿದ್ದು. ಆ ಓವರ್ ನಾಯಕ ಕೊಹ್ಲಿಯ ಆತಂಕವನ್ನು 10 ಮಿಲಿಗ್ರಾಮ್ ಕಡಿಮೆ ಮಾಡುವಲ್ಲಿ ಸಫಲವಾಯಿತು.  

ಜೋ ರೂಟ್ ಭರ್ಜರಿ ಹೊಡೆತಗಳಿಗೆ ಹೆಸರಾದ ಆಟಗಾರನಲ್ಲ. ನಮ್ಮ ರಾಹುಲ್ ದ್ರಾವಿಡರಂತೆ. ಆಕರ್ಷಕ, ಆದರೆ ನಿಧಾನ. ಮೊದಲ ವಿಕೆಟ್ ಪತನವಾದಾಗ ಅವರ ಬದಲು ನಾಯಕ ಇಅನ್ ಮೊರ್ಗನ್ ಅಥವಾ ನಂತರದಲ್ಲಿ ಬಿರುಸಿನ ಅರ್ಧ ಶತಕ ಗಳಿಸಿದ ಬೆನ್ ಸ್ಟೋಕ್ಸ್ ಬ್ಯಾಟ್ ಮಾಡಬಂದಿದ್ದರೆ ಇಂಗ್ಲೆಂಡ್ ನಾನೂರು ರನ್ ಗಳಿಸುತ್ತಿತ್ತೇನೋ. (ತದ ನಂತರದಲ್ಲಿ ಬಂದ ಮೊರ್ಗನ್ ಕೇವಲ ಒಂದು ರನ್ ಗಳಿಸಿ ಔಟಾದರು, ಆ ಮಾತು ಬೇರೆ). 30 ನೇ ಓವರ್ ನಲ್ಲಿ ಇಂಗ್ಲೆಂಡ್ 200 ರನ್ ಗಡಿ ಮುಟ್ಟಿತು. ಮತ್ತೆ ರನ್ ಲೂಟಿ ನಿಯಂತ್ರಣಕ್ಕೆ ಬಂದದ್ದು ಚಹಲ್ ಮಾಡಿದ 31 ಓವರ್ ನಲ್ಲಿ. ಕೀರ್ತಿ ಚಹಲ್ ಗೆ ಸಲ್ಲಬೇಕೋ, ಅಥವಾ ಬ್ಯಾಟ್ ಬೀಸಿ, ಬೀಸಿ ಜಾನಿಗೇ ಸುಸ್ತಾಗಿತ್ತೋ ಕಾಣೆ. ಮರು ಓವರ್ ನಲ್ಲೇ ಬೌಲ್ ಮಾಡಲು ವಾಪಸ್ ಬಂದ ಶಮಿ ಜಾನಿಯ ವಿಕೆಟ್ ಪಡೆದರು. 

ಭಾರತದ ಬೌಲಿಂಗ್ ನ ಒಂದು ಮೆಚ್ಚುಗೆಯ ಅಂಶವೆಂದರೆ ಆ ಅವಧಿಯಲ್ಲಿನ ಒಟ್ಟು ಒಂಭತ್ತು ಓವರ್ ಗಳಲ್ಲಿ ಕೇವಲ 28 ರನ್ ನೀಡಿದ್ದು. ಆದರೆ, ಏಕದಿವಸೀಯ ಪಂದ್ಯಗಳಲ್ಲಿ ತಮ್ಮ ಜೀವನದ ಅತೀ ಹೆಚ್ಚು ದುಬಾರಿ ಬೌಲಿಂಗ್ (ಹತ್ತು ಓವರ್ ಗಳಲ್ಲಿ 88 ರನ್) ಪ್ರದರ್ಶನ ನೀಡಿದ ಘಾಸಿಯನ್ನು ಚಹಲ್ ತಮ್ಮದಾಗಿಸಿಕೊಂಡರು. ಸಾಧಾರಣ ಬೌಲಿಂಗ್ ಪ್ರದರ್ಶನ ನೀಡಿದ ಶಮಿಗೆ ಐದು ವಿಕೆಟ್ ಸಿಕ್ಕಿತು, ತಮ್ಮ ಎಂದಿನ ಪ್ರತಿಭೆ, ಚಾಕಚಕ್ಯತೆಯನ್ನು ಮೆರೆದ ಬುಮ್ರಾ ಕೇವಲ ಒಂದೇ ವಿಕೆಟ್ ಪಡೆದರೂ ಮಿತವ್ಯಯೀ ಬೌಲರೆಂಬ ಖ್ಯಾತಿಯನ್ನ ಉಳಿಸಿಕೊಂಡರು. 

ಪೆಟ್ಟುತಿಂದ ರಾಹುಲ್ ಮತ್ತೊಂದು ಪೆಟ್ಟು ತಿಂದದ್ದು ಒಂಭತ್ತು ಎಸ್ಟಗಳನ್ನು ಎದುರಿಸಿ ರನ್ ಗಳಿಸದೇ ಔಟಾದಾಗ. ತಂಡದ ಹಿತಾಸಕ್ತಿಗೋಸ್ಕರ ತಮ್ಮ ಆಕ್ರಮಣ ಪ್ರವೃತ್ತಿಯನ್ನು ಬಲಿಕೊಡುತ್ತಿದ್ದಾರೆಯೇ ಎಂಬ ಸಂಶಯ ತಲೆದೋರಿದೆ. ಆಕ್ರಮಣಶೀಲತೆಯ ಮತ್ತೊಬ್ಬ ಬ್ಯಾಟ್ಸ್ಮನ್ ರಿಷಭ್ ಪಂತ್ ರಾಹುಲ್ ಬದಲು ಬ್ಯಾಟಿಂಗ್ ಆರಂಭಿಸಿದರೆ ಹೇಗೆ ಎಂಬ ಕುತೂಹಲವೂ ಹುಟ್ಟಿದೆ. ವಯಸ್ಸಿನ ಕಾರಣದಿಂದಲೋ, ಮನೋಭಾವದ ಏರುಪೇರಿನಿಂದಲೋ ಎಂಎಸ್ ಧೋನಿ ತಮ್ಮ ಬ್ಯಾಟಿಂಗ್ ಬಿರುಸನ್ನು ಕಳೆದುಕೊಂಡಿದ್ದಾರೆ. ಭಾರತದ ಒಟ್ಟಾರೆ ಯಶಸ್ಸಿಗೆ ಅವರ ಕೊಡುಗೆ ಅಪಾರ. ಹಾಗಾಗಿ ಅವರು ನಮ್ಮೆಲ್ಲರ ಗೌರವಾದರಗಳಿಗೆ ಭಾಜನರು. ಆದರೆ ಆ ಕಾರಣದಿಂದ, ಅವರ ನಿಧಾನಗತಿಯನ್ನು ಕಡೆಗಣಿಸಿ, ಈವರೆವಿಗೂ ಅವಕಾಶವಂಚಿತರಾದ ದಿನೇಶ್ ಕಾರ್ತೀಕನ್ನು ಮೂಲೆಗುಂಪು ಮಾಡುವುದು ಸರಿಬಾರದು. ದಿನೇಶ್ ಗೆ ಅವಕಾಶ ಒದಗಿಸಿಕೊಡುವ ಏಕೈಕ ಕಾರಣದಿಂದಲ್ಲ, ಟೀಮಿನ ಹಿತಾಸಕ್ತಿಯ ದೃಷ್ಟಿಯಿಂದ ಕಾರ್ತೀಕನ್ನು ಆಡಿಸಲು ಇದು ಸುಸಮಯ. ಎಂಎಸ್ ರ ಮಂದಗತಿ ತಂಡಕ್ಕೆ ಮಾರಕವಾಗುತ್ತಿದೆ. ಭಾರತೀಯ ಇನ್ನಿಂಗ್ಸ್ ನ ಏಕೈಕ ಸಿಕ್ಸರನ್ನು ಎಂಎಸ್ ಬಾರಿಸಿದರು ಎಂಬುದು ಅಣಕ. ಡೆತ್ ಓವರ್ ಗಳಲ್ಲಿ ಖಡ್ಗದಂತೆ ಬ್ಯಾಟ್ ಝಳಪಿಸಬೇಕಿದ್ದ ಎಂಎಸ್ ಮತ್ತು ಕೇದಾರ್ ಜಾಧವ್ ಟೆಸ್ಟ್ ಪಂದ್ಯದ ಮೊದಲ ಓವರ್ ಗಳನ್ನೆದುರಿಸುವಂತೆ ಬ್ಯಾಟ್ ಮಾಡಿದರು. ಇಂಗ್ಲೆಂಡ್ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದರು, ನಿಜ, ಆದರೆ ಸ್ಲಾಗ್ ಓವರ್ ಗಳಲ್ಲಿ ಕೂಡ ಎಂಎಸ್, ಕೇದಾರ್ ತಣ್ಣಗಾಗಿದ್ದೇಕೆಂದು ಅರಿಯಲಾರೆ. ಶಾಸ್ತ್ರಕ್ಕೆ ಇರಲಿ, ಅಂತ ಕಟ್ಟಕಡೆಯ ಓವರ್ ನಲ್ಲಿ ಎಂಎಸ್ ಸಿಕ್ಸರ್ ಬಾರಿಸಿದರು. ಅಂದರೆ,  ಸಾಮರ್ಥ್ಯಕ್ಕೇನೂ ಬರವಿಲ್ಲ, ಮನೋಭೂಮಿಕೆಯ ಅಭಾವ. 

ಕೆಲವು ದಿನಗಳ ಹಿಂದೆ ಸಚಿನ್ ತೆಂಡುಲ್ಕರ್ ಎಂಎಸ್ ರ ಮಂದಗತಿಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಎಂಎಸ್ ಆರಾಧಕರಿಂದ ಟ್ರೋಲ್ ದಾಳಿಗೆ ಒಳಗಾದರು. ನೆನ್ನೆಯ ಪಂದ್ಯದ ತರುವಾಯ ಮಾಜಿ ನಾಯಕ ಸೌರವ್ ಗಂಗೂಲಿ ಅದೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಯಾವುದೇ ಶ್ರೇಷ್ಠ ಆಟಗಾರ ಕೂಡ ಪ್ರಶ್ನಾತೀತನಲ್ಲ. ಅವನ ವೈಖರಿಯ ಕುರಿತು ಋಣಾತ್ಮಕ ಅಭಿಪ್ರಾಯ ಮೂಡಿಬಂದರೆ, ಅದಕ್ಕೆ ಯಾರೂ ವ್ಯಗ್ರರಾಗಬೇಕಿಲ್ಲ. ಸಮಷ್ಠಿಯ ಒಳಿತಿಗೆ ಒಬ್ಬಿಬ್ಬರ ಹಿತಾಸಕ್ತಿಯನ್ನು ಕಡೆಗಣಿಸಬಹುದು. ತಂಡದ ಗೆಲುವು ಮುಖ್ಯ, ಬೇರೆಲ್ಲವೂ ಗೌಣ. 

ಪವರ್ ಪ್ಲೇ ಅವಧಿಯಲ್ಲಿ ಕೇವಲ 28 ರನ್ ಗಳಿಸಿದ ಭಾರತ, ಇಂಗ್ಲೆಂಡ್ ವಿಧಿಸಿದ ಗುರಿಯನ್ನು ಮುಟ್ಟದಾಯಿತು, ಆದರೆ ವಿಶ್ವ ಕಪ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಪ್ರಥಮ ಬಾರಿಗೆ 300 ರನ್ ದಾಟಿದ ದಾಖಲೆ ನಿರ್ಮಿಸಿದ್ದು ಪಂದ್ಯದ ಮತ್ತೊಂದು ಪಂದ್ಯ. ಕಳೆದ ವಾರ, ಯಾವ ರೀತಿ ಐಪಿಲ್, ರಾಷ್ಟ್ರೀಯತೆಯ ಗೋಡೆಗಳನ್ನು ಶಿಥಿಲಗೊಳಿಸಿದೆ ಎಂದು ಪ್ರಸ್ತಾಪಿಸಿದ್ದೆ.  ಮತ್ತೊಮ್ಮೆ ಶತಕ ಗಳಿಸಿದ ರೋಹಿತ್ ಶರ್ಮಾರ ಬ್ಯಾಟಿಂಗ್ ಪ್ರದರ್ಶನ ಏನೇನೂ ಇಲ್ಲ ಎನ್ನುವಂತೆ ಮಿಂಚಿದ ಜಾನಿ ಬೇರ್ಸ್ಟೌ ಪಂದ್ಯದ ನಂತರ ಹೇಳಿದ್ದು: ಸನ್ ರೈಸರ್ಸ್ ತಂಡದ ಥಿಂಕ್-ಟ್ಯಾಂಕ್ ನ ಮುಖ್ಯ ಸದಸ್ಯ ವಿವಿಎಸ್ ಲಕ್ಷ್ಮಣ್ರಿಂದ ಸ್ಪಿನ್ ಬೌಲಿಂಗನ್ನು ಎದುರಿಸಲು ಬೇಕಾದ ಕೌಶಲ್ಯ ಕಲಿತೆ, ಅದು ಇಂದು ನನಗೆ ಸಹಾಯ ಮಾಡಿತು." 

ಅದೇ ರೀತಿ, ರಾಷ್ಟ್ರೀಯತೆಯನ್ನು ಮೀರಿ, ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಹೆಸರುವಾಸಿಯಾದ ಶೊಯೆಬ್ ಅಕ್ತರ್ "ಭಾರತ ಆಸ್ಟ್ರೇಲಿಯಾವನ್ನು ಬಗ್ಗು ಬಡಿಯಲಿದೆ" ಎಂದು ಭವಿಷ್ಯ ನುಡಿದಿದ್ದರು (ಅದು ನಿಜವಾಯಿತು ಕೂಡ).

ದುರದೃಷ್ಟವಶಾತ್ ಬಸಿತ್ ಅಲಿ ಎಂಬ ಪಾಕಿಸ್ತಾನ ತಂಡದ ಮಾಜಿ ಕೋಡಂಗಿ ನಾಯಕ, ಪಾಕಿಸ್ತಾನದ ಸೆಮಿಫೈನಲ್ ಪ್ರವೇಶವನ್ನು ಹಾಳುಗೆಡವಲು ಭಾರತ ಉದ್ದೇಶಪೂರ್ವಕವಾಗಿ ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧ ಸೋಲುತ್ತದೆ ಎಂದು ಕುಚೇಷ್ಟೆ ಮಾಡಿದ್ದಾನೆ. ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಇನ್ನೂ ಇದೆ. ತಡವಾಗಿಯಾದರೂ ಆ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಭಾರತ ಸೆಮಿಫೈನಲ್ ಪ್ರವೇಶಿಸದಿರುವ ಸಾಧ್ಯತೆ ಕಡಿಮೆ. ಪ್ರಸಕ್ತ ಪಂದ್ಯಾವಳಿಯಲ್ಲಿ ಭಾರತ ಕಪ್ ಗೆಲ್ಲಬೇಕಾದಲ್ಲಿ ಇನ್ನೂ ಮೂರು ಪಂದ್ಯಗಳನ್ನಾದರೂ ಗೆಲ್ಲಲೇಬೇಕು. ಅದರ ನೆನ್ನೆಯ ಸಾಧನೆ ಆಶಾದಾಯಕವಾಗಿಲ್ಲ, ಆದರೆ ಭಾರತದ ಸಾಮರ್ಥ್ಯದ ಬಗ್ಗೆ ದೂಸ್ರಾ ಮಾತಿಲ್ಲ. ಗೆಲುವಿನ ಹಾದಿ ಸುಗಮವಂತೂ ಅಲ್ಲ. ಕಾದು ನೋಡೋಣ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ತಂಡದ ನಾಯಕತ್ವ ಮುಲಾಜು ನೋಡಬಾರದು, ಅಷ್ಟೆ