ದೇವಿಯ ಕರಾಮತ್ತು!! 

ದೇವಿಯ ಕರಾಮತ್ತು!! 

ದೊಡ್ಡಿಗೆ ಮಕ್ಕಳಿರಲಿಲ್ಲ.ಮೈದುನನ ಮಕ್ಕಳನ್ನೇ ತನ್ನ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಮೈದುನನ ನಾಲ್ಕು ಹೆಣ್ಣುಮಕ್ಕಳಲ್ಲಿ ಕೊನೆಯ ಮಗುವನ್ನು ಹುಟ್ಟಿದಾಗಲೇ ಉಡಿಯಲ್ಲಿ ಹಾಕಿಸಿಕೊಂಡು ಪ್ರೀತಿಯಿಂದ ಬೆಳೆಸಿದ್ದಳು. ಸವಣೂರಿನ ಶ್ರೀಮಂತ ಮನೆತನಕ್ಕೆ ಕೊಟ್ಟು ಮದುವೆ ಮಾಡಿದ್ದಳು. ಉಳಿದ ಹೆಣ್ಣುಮಕ್ಕಳ ಮದುವೆಗೂ ಸಹಾಯ ಮಾಡಿದ್ದಳು. ಒಬ್ಬನೇ ಗಂಡು ಮಗನನ್ನು ಓದಿಸಿದ್ದಳು. ಅವನು ಸರ್ಕಾರಿ ನೌಕರಿ ಹಿಡಿದಾಗ ಖುಷಿಪಟ್ಟಿದ್ದಳು. ಆ ಮಕ್ಕಳೂ ಅಷ್ಟೇ, ತಮ್ಮ ದೊಡ್ಡಮ್ಮನನ್ನು ಗೌರವದಿಂದ ಕಾಣುತ್ತಿದ್ದರು. ಅವಳನ್ನು ಪ್ರೀತಿಯಿಂದ ‘ದೊಡ್ಡಿ‘ಎಂದು ಕರೆಯುತ್ತಿದ್ದರು. ದೊಡ್ಡಿ ಮೈದುನನ ಮಕ್ಕಳಿಗೆ ಮಾತ್ರವಲ್ಲ, ತನ್ನ ಬಳಗದವರಿಗೂ, ಓಣಿಯ ಜನಕ್ಕೂ ಪ್ರೀತಿಯ ‘ದೊಡ್ಡಮ್ಮ‘ನಂತಿದ್ದಳು. ಚಿಳ್ಳೆಪಿಳ್ಳೆಗಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಅವಳನ್ನು ಗೌರವದಿಂದ ಕಾಣುತ್ತಿದ್ದರು. ಗಂಡ ತೀರಿಹೋದ ಮೇಲೆ ದೊಡ್ಡಿ ತವರಿಗೆ ಹೋಗದೇ ಬೆಟಗೇರಿಯಲ್ಲೇ ಉಳಿದುಕೊಂಡಿದ್ದಳು. ತವರಿನಲ್ಲಿಯೂ ಯಾರೂ ಇರಲಿಲ್ಲ. ಇದ್ದ ಒಬ್ಬ ಅಣ್ಣ ಬಾವಿಯಲ್ಲಿ ಬಿದ್ದಿದ್ದ ಕೊಡ ತೆಗೆಯಲು ಹೋಗಿ ಅಕಾಲ ಮರಣಕ್ಕೆ ತುತ್ತಾಗಿದ್ದ. ಹೀಗಾಗಿ ದೊಡ್ಡಿ ಗದುಗಿನಲ್ಲಿ ತವರಿನಿಂದ ಬಂದ ಆಸ್ತಿಯಲ್ಲಿ ಏಳೆಂಟು ಮನೆಗಳನ್ನು ಕಟ್ಟಿಸಿ ಬಾಡಿಗೆಗೆ ಕೊಟ್ಟಿದ್ದಳು. ದೊಡ್ಡಿಯದು ಸರಳ ಜೀವನ. ಅವಳೊಬ್ಬಳ ಖರ್ಚಾದರೂ ಎಷ್ಟು? ಮಿಕ್ಕಿದ ದುಡ್ಡನ್ನು ಬಡವರಿಗೆ, ಅನಾಥರಿಗೆ, ಮಠ–ಮಾನ್ಯಗಳಿಗೆ ದಾನಮಾಡಿ ಬಿಡುತ್ತಿದ್ದಳು. ದೊಡ್ಡಿಯ ಉದಾರತೆ, ದೈವಭಕ್ತಿ, ಕಠೋರಶಿಸ್ತು, ನೈತಿಕ ಎಚ್ಚರ, ಅವಳ ಅಜಾನುಬಾಹು ದೇಹ, ಬೀಸುನಡಿಗೆ…ಎಲ್ಲಾ ಒಂದು ಪ್ರಭಾವ ವಲಯವನ್ನು ನಿರ್ಮಿಸಿದ್ದವು. ಕುಟುಂಬದ–ಬಳಗದವರು ಮಾತ್ರವಲ್ಲದೆ ಓಣಿಯ ಜನರೂ ನ್ಯಾಯ ಬಗೆಹರಿಸಿಕೊಳ್ಳಲು ದೊಡ್ಡಿಯ ಬಳಿಯೇ ಬರುತ್ತಿದ್ದರು. ದೊಡ್ಡಿ  ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತಿದ್ದರೆ ಓಣಿಯ ಪಡ್ಡೆ ಹುಡುಗರು ಅವಳೆದುರು ಹಾಯ್ದು ಹೋಗಲು ಅಂಜಿಸುತ್ತು ಬಳಸು ಮಾರ್ಗ ಹಿಡಿಯುತ್ತಿದ್ದರು! ಅಮ್ಮ, ದೊಡ್ಡಮ್ಮಂದಿರು, ಮಾಮ…., ಎಲ್ಲರಿಗೂ ಅವಳು ದೊಡ್ಡಿಯಾದರೆ, ನನಗೆ ಮತ್ತು ನನ್ನ ತಮ್ಮಂದಿರಿಗೆ ಅವಳು ಪ್ರೀತಿಯ ಅಜ್ಜಿಯಾಗಿದ್ದಳು. 

ಆಸ್ತಿ ಭಾಗವಾದ ಮೇಲೆ ಅಪ್ಪ ವ್ಯಾಪಾರದಲ್ಲಿ ಕೈ ಸುಟ್ಟುಕೊಂಡು ಅಡಿಕೆ ತೋಟ ಕಳೆದುಕೊಂಡ. ತೋಟ ಹೋದರೂ ಒಣಬೇಸಾಯದ ಹೊಲಗಳೂ ಸಾಕಷ್ಟಿದ್ದವು. ಪೇಟೆಯ ಹೃದಯಭಾಗದಲ್ಲಿ ಒಂದು ದೊಡ್ಡ ಅಂಗಡಿಯಿತ್ತು. ಮನೆ, ಹೊಲ, ಅಂಗಡಿ.. ಎಲ್ಲ ಇದ್ದರೂ ಅತ್ತ ವ್ಯಾಪಾರವನ್ನು ನಿಭಾಯಿಸುವುದಾಗದೇ, ಇತ್ತ ಹೊಲಗಳನ್ನು ನೋಡಿಕೊಳ್ಳುವುದಾಗದೇ ಅಪ್ಪ ಹೊಲಗಳನ್ನು ಲಾವಣಿಗೆ ಹಾಕಿ, ಅಂಗಡಿ–ಮನೆಗಳನ್ನು ಬಾಡಿಗೆಗೆ ಕೊಟ್ಟು , ಗದುಗಿನ ಕಾಟನ್ಮಿಲ್ಲಿನಲ್ಲಿ ಕೆಲಸವೊಂದನ್ನು ಗಿಟ್ಟಿಸಿಕೊಂಡು ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಸವಣೂರನ್ನು ತೊರೆದು ಗದುಗಿಗೆ ಬಂದ. ಬೆಟಗೇರಿಯಲ್ಲಿಅಜ್ಜಿಯ ಎರಡು ಮನೆಗಳಿದ್ದವು. ಅಜ್ಜಿ ತನ್ನ ಮಗಳನ್ನು ತನ್ನ ಇನ್ನೊಂದು ಮನೆಗೆ ಕರೆ ತಂದಳು. ಓಣಿಯ ಹಿರಿಯರು “ಕೊನೆಗಾಲಕ್ಕ ನಿನ್ಗೂ ಒಂದು ಆಸ್ರಾತು ಬಿಡು“ಎಂದು ಸಂತಸ ಪಟ್ಟರು. ಎಲ್ಲ ಸುಸೂತ್ರವಾಗಿ ನಡೆಯುತ್ತಿರುವಾಗಲೇ ಅಪಶ್ರುತಿಯೊಂದು ಮಿಡಿಯಲಾರಂಭಿಸಿತು.


ದೊಡ್ಡಿ ಪ್ರೀತಿಯಿಂದ ಸಾಕಿ ಬೆಳೆಸಿದ ಮೈದುನನ ಮಗ ಕುಡಿತದ ಚಟಕ್ಕೆ ಬಿದ್ದ! ಮಾಮಾ ಎನ್. ಸಿ. ಸಿ . ಆಫೀಸಿನಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ. ಕೈತುಂಬ ಸಂಬಳ ಬರುತ್ತಿತ್ತು. ಅಲ್ಲಿನ ಕೆಲವು ಜನರ ಸಹವಾಸದಿಂದ ಕುಡಿತದ ವ್ಯಸನ ಹಚ್ಚಿಕೊಂಡ. ಅದು ಎಷ್ಟು ವಿಕೋಪಕ್ಕೆ ಹೋಯಿತೆಂದರೆ ಮಾಮಾ ತನಗೊಂದು ಕುಟುಂಬವಿದೆ ಎಂಬುದನ್ನೂ ಮರೆತು ತನ್ನ ಆದಾಯವನ್ನೆಲ್ಲ ಕುಡಿತಕ್ಕೆ ಸುರಿಯುತ್ತಿದ್ದ! ಮಾಮಾನ ಈ ಅಟಾಟೋಪಕ್ಕೆ ಬೇಸತ್ತ ಮಾಮಿ ತನ್ನ ಮೂವರು ಮಕ್ಕಳನ್ನು ಕಟ್ಟಿಕೊಂಡು ತವರಿಗೆ ಹೋಗಿಬಿಟ್ಟಳು. ಇದ್ದ ಒಂದು ಅಡೆತಡೆಯೂ ನಿವಾರಣೆಯಾಗಿ ಮಾಮಾ ಇನ್ನಷ್ಟು ನಿರಾಳವಾದ!! ಕುಡಿತದ ವ್ಯಸನ ಹೆಚ್ಚಿ ದುಡ್ಡಿಗಾಗಿ ದೊಡ್ಡಿಯನ್ನು ಪೀಡಿಸ ತೊಡಗಿದ. ಅಜ್ಜಿಯ ಬಳಿ ತವರಿನಿಂದ ಬಂದ ಒಂದಿಷ್ಟು ಚಿನ್ನವಿತ್ತು. ಮಾಮಾನಿಗೆ ಅದರ ಮೇಲೆ ಕಣ್ಣುಬಿತ್ತು!! ಅಪ್ಪ, ಅಮ್ಮ, ದೊಡ್ಡಮ್ಮಂದಿರು, ಓಣಿಯ ಹಿರಿಯರು…..,ಎಲ್ಲಾ ಮಾಮಾನಿಗೆ ಬುದ್ಧಿ ಹೇಳಿ ನೋಡಿದರು, ಪ್ರಯೋಜನವಾಗಲಿಲ್ಲ.

ಮಾಮಾ ಮಧ್ಯರಾತ್ರಿ 12.00 ಘಂಟೆಯ ಸಮಯ ಕಂಠಪೂರ್ತಿ ಕುಡಿದು ಮನೆಯ ಬಳಿ ಬಂದು ಜೋರು ಜೋರಾಗಿ ಒದರುವನು. ಅಜ್ಜಿಯ ಮನೆ ಬಾಗಿಲನ್ನು ‘ದಡಾರ್‘ ಅಂತ ಜೋರಾಗಿ ಒದೆಯುವನು! ಆ ಆರ್ಭಟಕ್ಕೆ ಅಜ್ಜಿಯ ಎಡಪಕ್ಕ ಮಲಗಿದ ನನ್ನ ಚಿಕ್ಕ ತಮ್ಮ ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದ!! ಬಲಪಕ್ಕ ಮಲಗಿದ ನಾನು ಭಯದಿಂದ ಅಜ್ಜಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ಮಲಗುತ್ತಿದ್ದೆ! ಮಾಮಾನನ್ನು ಸಂಭಾಳಿಸಿ ಕಳಿಸಲೆಂದು ಅಪ್ಪ ಎದ್ದು ಬಂದರೆ ಅವ್ವ ತಡೆಯುತ್ತಿದ್ದಳು. ಕುಡಿದ ನಿಶೆಯಲ್ಲಿ ಮಾಮಾ ಅಪ್ಪನಿಗೆ ಏನಾದರೂ ಅಪದ್ದು ಮಾತಾಡಿ, ಮನಸ್ತಾಪವಾಗಿ ಅದು ಸವಣೂರಿನ ತನಕ ಹೋಗಿ ಮುಟ್ಟಿದರೆ ಹೇಗೆಂಬ ಚಿಂತೆ ಅವ್ವನದು! ಅವ್ವ ಮೆಲ್ಲಗೆ ಎದ್ದು ಹೋಗಿ ಅಕ್ಕಪಕ್ಕದ ಮನೆಯ ನೇಕಾರರನ್ನು ಎಬ್ಬಿಸಿ ಮಾಮಾನನ್ನು ಸಾಗಹಾಕುವುದರಲ್ಲಿ ಸಾಕು ಸಾಕಾಗುತ್ತಿತ್ತು. ಒಂದು ಬಾರಿಯಂತೂ ಮಾಮಾ ಒಂದು ಡಬ್ಬಿ ತುಂಬಾ ಸೀಮೆಎಣ್ಣೆ ತಂದು ಅಜ್ಜಿಯ ಮನೆಗೆಲ್ಲ ಉಗ್ಗಿಬೆಂಕಿ ಹಚ್ಚುತ್ತೇನೆಂದು ನಿಂತು ಬಿಟ್ಟಿದ್ದ!! ಓಣಿಯ ಮಕ್ಕಳು ಮಾಮಾನನ್ನು ಮುತ್ತಿಕೊಂಡು “ಏನ್ಮಳ್ಳದೀಯೋ ನೀನು? ತಾಯಿಕ್ಕಿಂತ ಹೆಚ್ಗಿ ಪ್ರೀತಿ ತೋರ್ಸಿದ ಜೀವ ಅದು! ಹಿಂಗ ಕಾಡಾಕತ್ತೀಯಲ್ಲ! ಬುದ್ಧಿ ಎಲ್ಲಿಟ್ಟಿ? “ಎಂದು ಬೈದು ಮಾಮಾನ ತಲೆಯ ಮೇಲೆ ಎರಡು ಕೊಡಪಾನ ತಣ್ಣೀರು ಸುರಿದು ಅವನ ನಿಶೆ ಇಳಿಸಿ ಸಾಗಹಾಕಿದ್ದರು!! 

ಮರುದಿನ ಅಜ್ಜಿಯ ಮುಖದ ಮೇಲೆ ಚಿಂತೆಯ ಗೆರೆಗಳು ಮೂಡಿದ್ದವು. ‘ದೊಡ್ಡಿ‘ ಎಂದೂ ಯಾವುದಕ್ಕೂ ಚಿಂತಿಸಿದವಳಲ್ಲ , ಹೆದರಿದವಳಲ್ಲ. ಇಡೀ ಓಣಿಗೇ ತಾಯಿಯಂತಿದ್ದವಳಿಗೆ ಎಂಥ ಗತಿ ಬಂತಲ್ಲಪ್ಪಾ ಎಂದು ಓಣಿಯ ಜನ ಮಿಡುಕಿದರು. ಅದರಲ್ಲಿ ಅಜ್ಜನ ಕಾಲದಿಂದಲೂ ಆಪ್ತವಾಗಿದ್ದನೇ ಕಾರಕುಟುಂಬವೊಂದು ಅಜ್ಜಿಯನ್ನು ಅಂದು ರಾತ್ರಿ ತಮ್ಮ ಮನೆಯಲ್ಲೇ ಮಲಗಿಸಿಕೊಂಡಿತು. ಬಸವನ ಹಿಂದಿನ ಬಾಲದಂತೆ ನಾವೂ ಅಜ್ಜಿಯ ಜೊತೆ ಹೋದೆವು. ಅಜ್ಜಿ ಬೆಳಗಿನಿಂದ ರಾತ್ರಿಯ ತನಕ ತನ್ನ ಮನೆಯಲ್ಲಿರುವುದು, ರಾತ್ರಿ ನಮ್ಮೊಂದಿಗೆನೇ ಕಾರಮನೆಯಲ್ಲಿ ಮಲಗುವುದು…,ಈ ಬಗೆಯ ದಿನಚರಿ ಪ್ರಾರಂಭವಾಯಿತು. ಈ ವ್ಯವಸ್ಥೆಯಿಂದ ಮಾಮಾನ ಪಿತ್ತ ನೆತ್ತಿಗೇರಿತು. ಅವನು ಅಜ್ಜಿಯನ್ನು ಬಿಟ್ಟು ಆ ನೇಕಾರ ಕುಟುಂಬವನ್ನು ಹಿಡಿದುಕೊಂಡ!! “ಲೇ.. ತಿಪ್ಯಾ…, ಬೆನಕ್ಯಾ..,  ಇಲ್ಲಿ ಹೊರಗಬರಾಕ ಹೆದರಿ ಒಳಗಡಕ್ಕೊಂಡಿರೇನ್ಲೆ? ಬಾರಲೇ ಹೊರಗ.. “ಎಂದು ಅವರನ್ನು ಏಕವಚನದಲ್ಲಿ ನಿಂದಿಸ ತೊಡಗಿದ. ಅದಕ್ಕವರು ಕ್ಯಾರೇ ಎನ್ನದಿದ್ದರೂ ದೊಡ್ಡಿಗೆ ಹಿಂಸೆಯಾಗ ತೊಡಗಿತು. “ನಿಶೆದಾಗಿನ ಬುದ್ಧಿ ಕಿಸೆದಾಗ. ಅವನ ಮಾತು ಯಾಕ ತಲಿಗೆ ತೊಗೊಂತಿ ಬಿಡಬೇ ದೊಡ್ಡಿ “ಎಂದು ಅವರು ಅಜ್ಜಿಗೆ ಸಮಾಧಾನ ಹೇಳಿದರೂ ಅಜ್ಜಿ ಒಳಗೊಳಗೇ ನೋಯ ತೊಡಗಿದಳು. ಹೀಗಿರುತ್ತಲೇ ಒಂದು ದಿನರಾತ್ರಿ ಬೆಳಗಾಗುವುದರೊಳಗೆ ಅಜ್ಜಿಯ ಕೂದಲೆಲ್ಲ ಜಡ್ಡುಗಟ್ಟಿ ಬಿಟ್ಟಿತ್ತು! ಅಜ್ಜಿಯನ್ನೂ ಸೇರಿ ಎಲ್ಲರಿಗೂ ಅಚ್ಚರಿಯಾಯಿತು. ಅಜ್ಜಿ ತುಂಬಾ ಕಷ್ಟಪಟ್ಟು ಆ ಜಡ್ಡುಗಟ್ಟಿದ ಕೂದಲ ಸಿಕ್ಕುಬಿಡಿಸಿಕೊಂಡು ಮತ್ತೆ ಮೊದಲಿನಂತೆ ತನ್ನ ಬೆಳ್ಳುಳ್ಳಿ ತುರುಬು ಕಟ್ಟಿಕೊಂಡಳು. 

ಮರುದಿನ ಅದು ಹಠಕ್ಕೆ ಬಿದ್ದಂತೆ ಇನ್ನಷ್ಟು , ಮತ್ತಷ್ಟು, ಸಿಕ್ಕುಬಿಡಿಸಿಕೊಳ್ಳಲು ಸಾಧ್ಯವೇ ಆಗದಷ್ಟು ಜಡ್ಡುಗಟ್ಟಿತ್ತು!! ಅಜ್ಜಿ ಹತಾಶಳಾದಳು. ಓಣಿಯ ಜನವೆಲ್ಲ ಸಖೇದಾಶ್ಚರ್ಯದಿಂದ ಅಜ್ಜಿಯ ಜಡ್ಡುಗಟ್ಟಿದ ತಲೆಯತ್ತ ನೋಡಿತು. ಒಂದಿಷ್ಟು ಜನ ಹೆಂಗಸರು “ದೊಡ್ಡಿಗೆ ಎಲ್ಲಮ್ಮ ಒಲಿದಾಳಾ“ಎಂದು ಮಾತನಾಡಿ ಕೊಳ್ಳತೊಡಗಿದರು.ಇದೆಲ್ಲಕ್ಕಿಂತ ಅಚ್ಚರಿದಾಯಕ ವಿಷಯವೆಂದರೆ ಮಾಮಾನ ವರ್ತನೆಯಲ್ಲಾದ ಬದಲಾವಣೆ!! ಮಾಮಾ ಕುಡಿತ, ಬೈಗುಳ..  ಎಲ್ಲಬಿಟ್ಟು ಪೂರ್ತಿ ಮಂಕಾದ! ಮೌನಿಯಾದ! ಅಜ್ಜಿಯ ಎದುರಿಗೆ ನಿಂತು ಮಾತನಾಡುವ ಧೈರ್ಯವೇ ಅವನಲ್ಲಿ ಉಡುಗಿಹೋಗಿತ್ತೇನೋ…ಅವಳ ಮುಖ ತಪ್ಪಿಸಿ ಓಡಾಡ ತೊಡಗಿದ!! ಅವನ ರಾತ್ರಿಯ ಅಟಾಟೋಪವೆಲ್ಲ ಸಂಪೂರ್ಣ ಬಂದ್ ಆಯಿತು!! ಅಜ್ಜಿ ಮತ್ತೆ ಮೊದಲಿನಂತೆ ತನ್ನ ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡ ತೊಡಗಿದಳು. ಆದರೆ ಅವಳಿಗೆ ಜಡೆಯದೇ ಸಮಸ್ಯೆಯಾಗ ತೊಡಗಿತು.

ಅವಳು ಎಲ್ಲಮ್ಮನ ಭಕ್ತೆಯಾಗಿದ್ದಳು ನಿಜ, ಆದರೆ ಆದೇ ಜಡೆಯ ರೂಪದಲ್ಲಿ ತನ್ನನ್ನು ಈ ಬಗೆಯಾಗಿ ಕಾಪಾಡುತ್ತಾಳೆಂದು ಕನಸುಮನಸಿನಲ್ಲೂ ಎಣಿಸಿರಲಿಲ್ಲ!! ಮತ್ತೀಗ ಈ ಜಡೆಯನ್ನು ಏನುಮಾಡುವುದು?!  ಅವಳಿಗೆ ಚಿಂತೆಯಾವರಿಸಿತು. ಶಿವಾನುಭವ ಗೋಷ್ಠಿ, ವಚನ ಚಿಂತನೆ, ವೈಚಾರಿಕತೆ…, ಅದೂ ಇದೂ ಅಂತ ಓಡಾಡಿ ಕೊಂಡ ಬಳಗದ ಒಂದಿಷ್ಟು ಜನ “ಆ ಜಡೀನ ಕತ್ರಿಸಿ ತಗದ್ಬಿಡು ದೊಡ್ಡಿ….”ಎಂದು ಸಲಹೆಯಿತ್ತರು. ಅದನ್ನು ಕೇಳಿ ಓಣಿಯ ಎಲ್ಲಮ್ಮನ ಭಕ್ತರು ಹೌಹಾರಿದರು!! ಅವರೆಲ್ಲರ ಮಾತುಗಳನ್ನು ಆಲಿಸಿದ ಅಜ್ಜಿ ಒಂದು ನಿರ್ಧಾರಕ್ಕೆ ಬಂದವಳಂತೆ ನುಡಿದಳು“ ಏನ ಆಗ್ಲಿ, ಈ ಜಡಿ ನನ್ನ ಕಷ್ಟದಿಂದ ಕಾಪಾಡೈತಿ. ಪರಸರಾಮನ ಕಾಟದಿಂದ ಪಾರಮಾಡೈತಿ. ನಾ ಇದನ್ನ ತಗಸೂದಿಲ್ಲ! “ಇಲ್ಲಿಗೆ ಒಂದು ಹಂತ ಮುಗಿಯಿತು. ಮುಂದಿನ ಹಂತ ಇನ್ನೂ ಪಿಕಲಾಟಕ್ಕಿಟ್ಟುಕೊಂಡಿತು!!  

ಜಡೆ ಬಂದ ಮೇಲೆ ಜನ ಅಜ್ಜಿಯನ್ನು ನೋಡುವ ರೀತಿಯೇ ಬೇರೆಯಾಗ ತೊಡಗಿತು. ಇಷ್ಟು ದಿನ ಪ್ರೀತಿ, ವಿಶ್ವಾಸ, ಗೌರವ ತೋರುತ್ತಿದ್ದವರು ಈಗ ಭಯ–ಭಕ್ತಿಯಿಂದ ನಡೆದು ಕೊಳ್ಳತೊಡಗಿದರು!! ಅಕಸ್ಮಾತ್ತಾಗಿ ಅಜ್ಜಿಯ ಪಾದರಕ್ಷೆಗೆ ಕಾಲುತಾಗಿದರೆ ಮೆಟ್ಟಿ ಬಿದ್ದು ಅದಕ್ಕೂ ನಮಿಸ ತೊಡಗಿದರು!! ಅಜ್ಜಿಗೆ ಮೈ ಕೈ ಪರಚಿಕೊಳ್ಳುವಂತಾಯ್ತು! ಅವಳು ಕುಟುಂಬದ, ಸಮಾಜದ, ಓಣಿಯ ಜನಗಳಿಗೆಲ್ಲ ತಾಯಿಯಂತಿದ್ದಳು. ಆ ತಾಯ್ತನದ ಸುಖ ಅವಳ ಬದುಕಿನ ಶೂನ್ಯವನ್ನು ತುಂಬಿ ಹಗುರವಾಗಿಸಿತ್ತು, ಅರ್ಥಪೂರ್ಣವಾಗಿಸಿತ್ತು. ಅವಳಿಗೆ ತಾಯಿಯಾಗುವುದು ಬೇಕಿತ್ತೇ ವಿನಃ ದೇವಿಯಾಗುವುದಲ್ಲ!! ಏನು ಮಾಡುವುದು? ಈ ಜನಕ್ಕೆ ಹೇಗೆ ತಿಳಿ ಹೇಳುವುದು? ಅವಳಿಗೆ ಇದೊಂದು ಸಮಸ್ಯೆಯಾಗಿ ಪರಿಣಮಿಸಿತು. 

ಅಂದು ಸೋಮವಾರ. ಅಜ್ಜಿ ಎಂದಿನಂತೆ ತನ್ನ ಜಳಕ–ಪೂಜೆ ಮುಗಿಸಿ, ನಾಷ್ಟಾ ಮಾಡಿ ಹೊರಕಟ್ಟೆಯ ಮೇಲೆ ಚವಳಿಕಾಯಿ ಸೋಸುತ್ತ ಕುಳಿತಿದ್ದಳು. ಯಮುನಕ್ಕ ತನ್ನ ಗಂಡ ದೇವಣ್ಣನೊಂದಿಗೆ ಹಾಜರಾದಳು. ಅಜ್ಜಿಗೆ ತಿಳಿಯಿತು, ಇವರಿಬ್ಬರೂ ಏನೋ ಪಂಚಾಯಿತಿಗೆ ಬಂದಿದ್ದಾರೆಂದು. ಅವಳು ಕಟ್ಟೆಯ ಮೇಲಿದ್ದ ಚವಳೀಕಾಯಿಗಳನ್ನು ಪುಟ್ಟಿಗೆ ತುಂಬಿ “ನಡೀರಿ ಒಳಗ“ ಎನ್ನುತ್ತ ಹುಸಿಗೆ ನಡೆದಳು. ಹುಸಿಯಲ್ಲಿ ಅವ್ವ ಸವಣೂರಿನಿಂದ ಬಂದ ಕಕ್ಕಿಯ ಜೊತೆ ಹರಟುತ್ತ ಅಕ್ಕಿ ಆರಿಸುತ್ತಿದ್ದಳು. ಅವರಿಬ್ಬರೂ ಮಾತನಾಡಲು ಹಿಂದೆ ಮುಂದೆ ನೋಡಲು ಅಜ್ಜಿ ಪುಟ್ಟಿಯನ್ನು ಹುಸಿಯಲ್ಲೇ ಇಟ್ಟುಪಡಸಾಲೆಗೆ ಕರೆದೊಯ್ದಳು. ಅವ್ವ ಸೂಕ್ಷ್ಮವನ್ನು ಅರಿತು, ಅಕ್ಕಿ ಆರಿಸುವುದನ್ನು ಅಲ್ಲಿಗೇ ನಿಲ್ಲಿಸಿ, ಚವಳೀಕಾಯಿ ಪುಟ್ಟಿಯೊಂದಿಗೆ ಅಜ್ಜಿ ಮನೆಯಿಂದ ಹೊರಬಿದ್ದು ಕಕ್ಕಿಯನ್ನು ಕರೆದುಕೊಂಡು ಪಕ್ಕದಲ್ಲಿರುವ ನಮ್ಮ ಮನೆಗೆ ಹೋದಳು. ಯಮುನಕ್ಕ ದಂಪತಿಗಳಿಗೆ ಒಂದಿಷ್ಟು ನಿರಾಳವಾಗಿ ಮಾತನಾಡ ತೊಡಗಿದರು. ಅವರ ಮಾತಿನ ಸಾರಾಂಶ ಇಷ್ಟು,

ಯಮುನಕ್ಕ ಆ ಓಣಿಯ ನೇಕಾರ ಹೆಂಗಸು. ಅವರಿಗೆ ಎರಡು ಮಗ್ಗಗಳಿದ್ದವು. ಯಮುನಕ್ಕನ ಗಂಡ ಒಂದು ಮಗ್ಗದಲ್ಲಿ, ಅವಳ ಮೈದುನ ಒಂದು ಮಗ್ಗದಲ್ಲಿ ನೇಯುತ್ತಿದ್ದರು. ಯಮುನಕ್ಕ ವಯಸ್ಸಾದ ಅತ್ತೆಯೊಂದಿಗೆ ಎರಡು ಚಿಕ್ಕಮಕ್ಕಳನ್ನು ಕಟ್ಟಿಕೊಂಡು ನೂಲುವುದು, ಕಂಡಕಿಸುತ್ತುವುದು, ಹಣಗಿ ಕೆಚ್ಚುವುದು…. ಮೊದಲಾದ ಕೆಲಸಗಳನ್ನು ಮಾಡುತ್ತಿದ್ದಳು. ಎಲ್ಲವನ್ನೂ ಮನೆಯವರೇ ಮಾಡುತ್ತಿದ್ದರಿಂದ ಆರುಮಂದಿಯ ಸಂಸಾರ ಹೊಟ್ಟೆ–ಬಟ್ಟೆಗೆ ತಾಪತ್ರಯವಿಲ್ಲದೇ ಹೇಗೋ ಸಾಗಿತ್ತು. ಆದರೆ ಯಮುನಕ್ಕನ ಗಂಡ ತನ್ನ ಮಗ್ಗದಲ್ಲಿ ಆಳೊಂದನ್ನು ಕೂಡ್ರಿಸಿ ಸೀರೆ ವ್ಯಾಪಾರಕ್ಕೆ ಕೈ ಹಚ್ಚಿದ. ಪ್ರಾರಂಭದಲ್ಲಿ ವ್ಯಾಪಾರ ಚೆನ್ನಾಗಿಯೇ ನಡೆಯಿತು. ತಮ್ಮ ಮಗ್ಗದ ಸೀರೆಗಳಲ್ಲದೇ ಬೇರೆಯವರ ಬಳಿಯೂ ಸೀರೆ ಖರೀದಿಸಿ, ಹುಬ್ಬಳ್ಳಿಯ ಮಾರುಕಟ್ಟೆಗೆ ಪೂರೈಸುತ್ತಿದ್ದ. ಕೈಲೊಂದಿಷ್ಟು ಕಾಸು ಮಾಡಿಕೊಂಡ. ಹೆಂಡತಿಯ ಕೊರಳಲ್ಲಿನ ಬೋರಮಾಳ, ಏಕಾವಳಿಯಂತಹ ಅರಗಿನ ಸರಗಳು ಹೋಗಿ ಗಟ್ಟಿಬಂಗಾರದ ಎರಡೆಳೆ ಅವಲಕ್ಕಿ ಸರ ಬಂತು. ಕಿವಿ ತುಂಬುವ ಓಲೆ, ಚಳ ತುಂಬಿನ ಬುಗುಡಿ ಬಂದವು. ಅಡ್ಡಿಯಿಲ್ಲ, ಯಮುನಕ್ಕನ ಸಂಸಾರ ಉದ್ಧಾರವಾಯಿತು ಎನ್ನುವುದಕ್ಕಿಲ್ಲ ಅವಳ ಗಂಡ ವ್ಯಾಪಾರದಲ್ಲಿ ನಷ್ಟ ಅನುಭವಿಸ ತೊಡಗಿದ. 

ಮೊದಮೊದಲು ವ್ಯಾಪಾರದಲ್ಲಿ ಇವೆಲ್ಲಾ ಇದ್ದದ್ದೇ ಎಂದು ಕೊಂಡರೂ ಬರಬರುತ್ತ ಅದೇ ರಾಗ–ಅದೇ ಹಾಡಾದಾಗ ಯಮುನಕ್ಕನ ಮೈ ಮೇಲಿನ ಚಿನ್ನವೆಲ್ಲಾ ಮಾಯವಾಯ್ತು. ಅವಳ ಮದುವೆಯ ಸಮಯದಲ್ಲಿ ಹಾಕಿದ ಬೋರಮಾಳ ಸರವೂ ಹೋಯಿತು! ಈಗ ಅವಳ ತವರಿನಿಂದ ಬಂದ ಏಕಾವಳಿ ಸರಕ್ಕೂ ಕೈ ಹಚ್ಚಿದ್ದಾನೆ!! ‘ವ್ಯಾಪಾರ ಮಾಡಿದ್ದು ಸಾಕು, ಮಗ್ಗದ ಮೇಲೆ ಕುಂದ್ರು ‘ಎಂದರೂ ಕೇಳುತ್ತಿಲ್ಲ. ಈಗ ಯಮುನಕ್ಕ ಗಂಡನನ್ನು ಕರೆದುಕೊಂಡು ವ್ಯಾಪಾರ ಮುಂದುವರಿಸುವುದೋ ಬೇಡವೋ ಎಂದು ಎಲ್ಲಮ್ಮನನ್ನು ಹೊತ್ತ ಅಜ್ಜಿಯ ಬಳಿ ದೇವರು ಕೇಳಲು ಬಂದಿದ್ದಾಳೆ!! ಅವರಿಬ್ಬರ ಕೊನೆಯ ಮಾತುಗಳನ್ನು ಕೇಳಿ ಅಜ್ಜಿಗೆ ಅಂಗಾಲಿನಿಂದ ನೆತ್ತಿಯವರೆಗೂ ಉರಿಯಿತು. ಅವಳು ಅವರಿಬ್ಬರನ್ನೂ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಳ್ಳ ತೊಡಗಿದಳು. “ನನ್ನ ಮೈಯಾಗ ದೇವಿ ಬರ್ತಾಳಂತ ಯಾರು ಹೇಳಿದ್ದು ನಿಮಗ? ನಿಮ್ಮ ತೆವಲಿಗೆ ಆದುನ್ಯಾಕ ಬಳಸ್ಕೊಂತೀರಿ? “ಎಂದು ಬೈದಳು. “ಏನ್ಮಾಡೂದು ಅಮ್ಮಾ , ವ್ಯಾಪಾರಾ ಕೈ ಕೊಡಾಕತೈತಿ. ನನ್ನ ನಸೀಬನ ಸರಿಯಿಲ್ಲ. ದೇವಿ ಹತ್ರನರ ಪರಿಹಾರ ಕೇಳೂನಂತ ಬಂದ್ವಿ….,”ದೇವಣ್ಣ ನುಡಿದ. 

ಅವನ ಮಾತಿನಿಂದ ಅಜ್ಜಿಗೆ ಇನ್ನೂ ಉರಿದು ಹೋಯಿತು.  “ಒಲಿ ಮುಂದ ಹೇತು ಅಯ್ಯ ನನ್ನ ನಸೀಬ ಅಂದಿದ್ರಂತ!! ಹಂಗಾತು ನಿನ್ನ ಬಾಳೇವು! ನೀ ನೆಟ್ಟಗಿದ್ರ ಹಿಂಗ್ಯಾಕ ಆಕ್ತಿತ್ತು? “ಅಜ್ಜಿ ಸಿಟ್ಟಿನಿಂದ ನುಡಿದಳು.  “ಮಾರಾಟಾ -  ಮರಣಾ ಯಾರ ಕೈಯಾಗ ಐತ ಬೇ? “ಅವನ ಉತ್ತರ. “ಇದು ಮಾರಾಟಾ–ಮರಣದ ಕತಿಯಲ್ಲ, ನಿನ್ನ ತೆವಲಿನ ಕತಿ! ಇಷ್ಟರ ಮ್ಯಾಲೆ ದೇವಿ ಹೆಸ್ರು ಬ್ಯಾರೆ ಹೇಳ್ಕೊಂಡು ಪರಿಹಾರ ಕೇಳಾಕ ಬಂದಿ! ನಾಚ್ಕಿ ಆಗಂಗಿಲ್ಲ ನಿನ್ಗ? ದೇವಿ ಏನ್ಮಾಡ್ತಾಳಾ? ನಿನ್ಗ ಎರಡು ಕೈ ಕೊಟ್ಟಾಳಾ, ಕಾಲ ಕೊಟ್ಟಾಳಾ. ಕಣ್ಣು , ಮೂಗು , ಬಾಯಿ…, ಎಲ್ಲಾನೂ ಕೊಟ್ಟಾಳಾ. ಇವ್ನೆಲ್ಲಾ ಬಳಸ್ಕೊಂಡು ದುಡುದು ತಿನ್ನೋ ಮಂಗ್ಯಾ ಅಂದ್ರ ಕುಡುದು ಸಾಯ್ತಿನಿ ಅಂತೀದಿ!! ನಿನ್ನ ಹುಳುಕು ಮುಚ್ಗೊಳ್ಳಾಕ ದೇವಿ, ಮಾರಾಟಾ, ಮರಣಾ, ನಸೀಬಾ…., ಅಂತ ತಿಪ್ಪಿ ಸಾರಸಾಕ ಬಂದೀ….., ಅರುವು  ಎಲ್ಲಿಟ್ಟಿ?  ಮಂಗ್ಯಾ….. ನಾಡ ಮಂಗ್ಯಾ…., ,”ಅಜ್ಜಿ ತೀಕ್ಷ್ಣವಾಗಿ ನುಡಿದಳು. ಅಜ್ಜಿಯ ಮಾತಿಗೆ ಗಂಡ  - ಹೆಂಡತಿ ಇಬ್ಬರೂ ಬೆಚ್ಚಿ ಬಿದ್ದರು. ದೇವಣ್ಣನಿಗೆ ಅಚ್ಚರಿಯೊಂದಿಗೆ ಆಘಾತವೂ ಆಯಿತು. ಆತ ಸ್ವಭಾವತಃ ತುಂಬಾ ಮೆದುಕಲು. ಮೇಲಾಗಿ ನಾಚಿಕೆ ಸ್ವಭಾವದ, ಮಾನ–ಮರ್ಯಾದೆಗೆ ವಿಪರೀತ ಅಂಜುವ ಮನುಷ್ಯ. ವ್ಯಾಪಾರದ ದೆಸೆಯಿಂದ ಹುಬ್ಬಳ್ಳಿಯ ಒಡನಾಟ ಹೆಚ್ಚಿದ್ದರಿಂದ, ಕೈಯಲ್ಲಿ ನಾಲ್ಕು ಕಾಸೂ ಓಡಾಡುತ್ತಿದ್ದುದರಿಂದ ಅದು ಹೇಗೋ ಈ ಚಟಕ್ಕೆ ಬಿದ್ದಿದ್ದ. ತನ್ನ ಚಟದ ಬಗ್ಗೆ ಯಾರಿಗೂ ಗೊತ್ತಾಗದಂತೆ ಮ್ಯಾನೇಜ್ಮಾಡಿದ್ದ ‘ತನ್ನ ಪಾನಗೋಷ್ಠಿಯನ್ನು‘ಹುಬ್ಬಳ್ಳಿಯಲ್ಲಿಯೇ ಮುಗಿಸಿಕೊಂಡು, ರಾತ್ರಿ ತಡವಾಗಿ ಕಳ್ಳಬೆಕ್ಕಿನಂತೆ ಮನೆಗೆ ಬಂದು ಮಲಗುತ್ತಿದ್ದ!! ಯಮುನಕ್ಕನಿಗೆ ಇದೆಲ್ಲಾ ತಿಳಿದಿತ್ತಾದರೂ ಗಂಡನ ಮರ್ಯಾದೆಗೆ ಅಂಜಿ, ಇದನ್ನೆಲ್ಲಾ ಹೊಟ್ಟೆಯಲ್ಲೇ ಇಟ್ಟುಕೊಂಡಿದ್ದಳು!! ಇದವಳಿಗೆ ಬಿಸಿತುಪ್ಪವಾಗಿತ್ತು. ಇದಕ್ಕೆಲ್ಲ ಆ ದೇವಿಯೇ ಪರಿಹಾರ ತೋರಿಸಬಹುದೆಂಬ ಆಸೆಯಿಂದ ಅವಳು ಗಂಡನನ್ನು ಕರೆತಂದಿದ್ದಳು. “ವ್ಯಾಪಾರ ಸಾಕು, ಮಗ್ಗದ ಮೇಲೆ ಕುಂದ್ರು “ಎಂದು ಆದೇ ಹೇಳಿದರೆ ಸಾಕು, ಎಂದು ಕೊಂಡು ಮನದಲ್ಲೇ ದೇವಿಯನ್ನು ಬೇಡಿಕೊಂಡಿದ್ದ‌ಳು! ಇಲ್ಲಿ ನೋಡಿದರೆ ಕೇಸು ಉಲ್ಟಾ ಹೊಡೆದಿತ್ತು!! 

ದೊಡ್ಡಿಯ ಮಾತಿನಿಂದ ದೇವಣ್ಣ ವಿಪರೀತ ಅಪಮಾನಿತನಾದ. ಲಜ್ಜೆಯಿಂದ ಅವನ ಮುಖವೆಲ್ಲ ಕೆಂಪಗಾಗಿ ಕುಗ್ಗಿಹೋದ!  ‘ದೊಡ್ಡಿಗೆ ನನ್ನ ಕುಡಿತದ ಸುಳಿವು ಹೇಗೆ ಸಿಕ್ಕಿತು?! ‘ಎಂದವನಿಗೆ ಅಚ್ಚರಿಯಾಯಿತು. ಅವನ ನಾಲಿಗೆ ಪಸೆಯೆಲ್ಲ ಆರಿಹೋಯಿತು. ಒಣಗಿದ ನಾಲಿಗೆಯನ್ನು ತುಟಿಗೆ ಸವರಿಕೊಳ್ಳುತ್ತಾ “ನಾ……ನಾ……ಕುಡಿತೆನಂತ ಯಾರ್ ಹೇಳಿದ್ದ ಬೇ ನಿನ್ಗ?! “ತೊದಲಿದ.  “ಯಾರನ ಯಾಕ್ ಹೇಳ್ಬೇಕಾ ? ನಿನ್ನ ಕೆಂಪ್ಗಾದ ಕಣ್ಣು ನೋಡ್ಕೋ , ಕಪ್ಪಡ್ರಿದ ತುಟಿ ನೋಡ್ಕೋ , ಊದಿಕೊಂಡಗಲ್ಲಾ ನೋಡ್ಕೋ...., ಕುಡಿತಾನಂತ ಯಾರನ ಬಾಯಿ ತಗದು ಹೇಳ್ಬೇಕನು? ಕುಡುಕ ಮಗನ ಕೈಯ್ಯಾಗ ವರ್ಷಗಟ್ಲೆ ಹೆಣಗ್ಯಾಡೀನಿ, ಅಷ್ಟೂ ಗೊತ್ತಾಗೂದಿಲ್ಲ ನನ್ಗ? ಅಂವಾ ಕುಡ್ದು ಬಯ್ಲಿಗೆ ಬಿದ್ದಾ, ನೀ ಕಳ್ಳಬೆಕ್ಕಿನಂಗ ಒಳಗ ಹೊಕ್ಕೊಂಡಿ! ಇಷ್ಟ ಫರಕು…,”ದೊಡ್ಡಿ ಖಡಕ್ಕಾಗಿ ನುಡಿದಳು. ದೇವಣ್ಣ ಕುಸಿದು ಕುಳಿತು ತನ್ನ ಎರಡೂ ಮಂಡಿಗಳಲ್ಲಿ ಮುಖ ಹುದುಗಿಸಿದ. ಯಮುನಕ್ಕ ಬಾಯಿಗೆ ಸೆರಗು ಸಿಕ್ಕಿಸಿ ಅಳ ತೊಡಗಿದಳು. ಅವರಿಬ್ಬರ ಅವಸ್ಥೆಯನ್ನು ಕಂಡು ದೊಡ್ಡಿಗೆ ಕೆಡುಕೆನಿಸಿ ಕರುಳು ‘ಚುರ್‘ ಅಂತು. ಅವಳ ಕೋಪವೆಲ್ಲಾ ಜರ್ ಅಂತ ಇಳಿದು ಹೋಯಿತು! ಮೆಲ್ಲನೆ ದೇವಣ್ಣನ ಬಳಿ ಬಂದು ಅವನ ತಲೆ ನೇವರಿಸಿದಳು. ದೇವಣ್ಣ ಒಡನೆಯೇ ದೊಡ್ಡಿಯ ಮಡಿಲಲ್ಲಿ ಮುಖವಿಟ್ಟು ಬಿಕ್ಕಿಬಿಕ್ಕಿ ಅಳತೊಡಗಿದ. ದೊಡ್ಡಿ ಅವನ ತಲೆ, ಬೆನ್ನು ಸವರುತ್ತಾ “ನೋಡು ದೇವೂ, ಈ ಚಟಾ ಚಟ್ಟಾ ಹತ್ತಸೂ ಮಟಾ ಬಿಡಂಗಿಲ್ಲ. ಮನಷ್ಯಾ ಎಂಥಾ ಪರಿಸ್ಥಿತಿಲಿದ್ರೂ ಈ ಚಟದ ಬಲಿಗೆ ಮಾತ್ರ ಬೀಳಬಾರ್ದು ನೋಡು. ನೀ ಒಂದಿಟ ಮನಸ್ಸು ಗಟ್ಟಿ ಮಾಡ್ಕೊಂಡಿದ್ರ ಇದೆಲ್ಲಾ ಆಕ್ತಿದ್ದಿಲ್ಲಾ. ನಾಕ ದುಡ್ಡು ಕೈಯ್ಯಾಗ ಆಡಾಕತ್ತಣಾ ಹಂಗ ಚಟಕ್ಕ ಬಿದ್ದ ಬಿಡೂದನ? ನೀತಿಳದಂವದಿ, ಶಾಣ್ಯಾ ಅದಿ,  ಮಾನಾ–ಮರ್ಯಾದಿಗೆ ಅಂಜಿ ಬದುಕೋ ಮನಷ್ಯಾ ಅದಿ, ನೀನ ಹಿಂಗ ಮಾಡಿದ್ರ ಉಳದೋವ್ರ ಪಾಡೇನು? ನಾಳೆ ನಿನ್ನ ಸಂಸಾರದ ಗತಿಯೇನು? ಮಕ್ಕಳು ಸಣ್ಣವದಾವು, ಇನ್ನೂ ಒಬ್ಬ ತಮ್ಮನ ಮದುವಿ ಜವಾಬ್ದಾರಿನೂ ನಿನ್ನ ಮ್ಯಾಲೈತಿ. ನೋಡು…., ವಿಚಾರಾ ಮಾಡು. ಬುದ್ಧಿಮಾತು ಹೇಳಾವ್ರ ಎಲ್ಲಿ ತನಕಾ ಹೇಳ್ಯಾರು? ನಿನ್ಗ ತಿಳೀಬೇಕು, ಅವ್ರ ಉಳೀಬೇಕು. ಎಲ್ಲಾ ನಿನ್ನ ಕೈಯ್ಯಾಗ ಐತಿ. ಯಾದೇವ್ರೂ ಏನ್ಮಾಡಂಗಿಲ್ಲ, ದಿಂಡ್ರೂ ಏನ್ಮಾಡಂಗಿಲ್ಲ. ನಮ್ಮ ನಮ್ಮ ಕರ್ಮದ ಫಲಾ ನಾವ ಅನುಭವಿಸಬೇಕು……”

ದೊಡ್ಡಿಯ ಮಾತಿಗೆ ದೇವಣ್ಣ ಮೆಲ್ಲನೆ ಅವಳ ಮಡಿಲಿನಿಂದ ತಲೆಯೆತ್ತಿ ಕಣ್ಣೊರೆಸಿಕೊಳ್ಳುತ್ತ ನುಡಿದ “ಏನೋ, ಒಂದ್ಸಲ ಬುದ್ಧಿ ಕಳ್ಕೊಂಡ್ಬಿಟ್ಟೆ. ಇನ್ಮುಂದ ಎಂದೂ ಹಿಂಗ ಮಾಡಂಗಿಲ್ಲ ದೊಡ್ಡಿ. ನನ್ಗ ನನ್ನ ಚಟಕ್ಕಿಂತ ಮಾನಾ–ಮರ್ಯಾದಿ ದೊಡ್ದು. ““ಇದಪ್ಪ ಮಾತಂದ್ರ“ ದೊಡ್ಡಿ ಖುಷಿಯಿಂದ ನುಡಿದಳು. ದೇವಣ್ಣ ಕೊಂಚ ಅಳುಕಿನಿಂದಲೇ ಅಜ್ಜಿಯತ್ತ ನೋಡಿ “ದೊಡ್ಡಿನಾ ಚಟಾ ಮಾಡಿದ್ರೂ ಮರ್ಯಾದಿಗೆ ಅಂಜಿಕೊಂತ ಮಾಡ್ದಾಂವಾ. ಅದಕ್ಕ ಇದನ್ನ ಯಾರಿಗೂ ಪತ್ತೆ ಹತ್ತಗೊಟ್ಟಿದ್ದಿಲ್ಲ. ಇವತ್ತು ನಾ ನನ್ನ ಮಕ್ಕಳ ಮ್ಯಾಲೆ ಆಣಿ ಮಾಡಿ ಹೇಳ್ತೀನಿ, ಇನ್ಮುಂದ ನಾ ಎಂದೂ ಕುಡಿಯಂಗಿಲ್ಲ. ಹಂಗ , ನೀನೂ ನನಗೊಂದು ಮಾತು ಕೊಡ್ಬೇಕು…,”ಎಂದ! ಅಜ್ಜಿ ಅಚ್ಚರಿಯಿಂದ ‘ಏನು‘ ಎನ್ನುವಂತೆ ಅವನೆಡೆ ನೋಡಿದಳು. ಯಮುನಕ್ಕನೂ ಕುತೂಹಲದಿಂದ ಗಂಡನತ್ತ ನೋಡಿದಳು. “ನನ್ನ ಚಟದ ಸುದ್ದಿ, ಅದ್ರ ಬಗ್ಗೆ ಇಲ್ಲಿ ನಡೆದ ಮಾತುಕತಿ……., ಇದ್ಯಾವುದೂ ಯಾರ ಮುಂದೂ ಹೇಳಬಾರ್ದು. ಹಂಗಂತ ನನ್ಗ ಮಾತ ಕೊಡು…,”ದೇವಣ್ಣನ ಮಾತಿಗೆ ಅಜ್ಜಿ “ಅಯ್ಯ ಇಷ್ಟ ಅನು! ನಾ ಏನೋ ಅನ್ಕೊಂಡಿದ್ದೆ!! ನಾ ಯಾಕ ಇದನ್ನ ಯಾರ್ದರ ಮುಂದ ಹೇಳಾಕ ಹೋಗ್ಲಿ? ನೀನೂ  ನನ್ನ ಮಗನ್ ಸಮಾನ. ನೀ ಕುಡಿತದ ಚಟಾ ಬಿಟ್ಟು ನೆಟ್ಟಗಾದ್ರ ಅಷ್ಟ ನನ್ಗ ಸಾಕು. “ಅಜ್ಜಿ ಭರವಸೆಯಿಂದ ನುಡಿದಳು. ಇಬ್ಬರೂ ನಿರಾಳವಾದರು. ಅಜ್ಜಿ ಅವರಿಗೆ ತಿಂಡಿಕೊಟ್ಟು ಕಳುಹಿದಳು .ಮುಂದೆ ದೇವಣ್ಣ ಹಠಕ್ಕೆ ಬಿದ್ದವನಂತೆ ಮನಸ್ಸು ಗಟ್ಟಿಮಾಡಿ ಹಂತಹಂತವಾಗಿ ಈ ಚಟದಿಂದ ಮುಕ್ತಿ ಹೊಂದಿದ. ಆದರೆ ಈ ಪ್ರಸಂಗವೇ ಇನ್ನೊಂದು ಅವಾಂತರಕ್ಕೆ ಎಡೆಮಾಡಿಕೊಟ್ಟೀತೆಂದು ಯಾರು ಕಂಡಿದ್ದರು?