ದೇವಿಯ ಕರಾಮತ್ತು – ಭಾಗ – 3

“ ಏನ್ ಜಿಡ್ಡಿನ ಹೆಣಮಗ್ಳದಿ ನೀ ಮಾರಾಳ! ಎಷ್ಟ ಹೇಳೀದ್ರೂ ತಿಳ್ಕೊಳ್ಳಾಕ ತಯಾರಿಲ್ಲಲ್ಲ. ಇಲ್ಲದ್ದೆಲ್ಲಾ ತಲಿಗೆ ಹಚ್ಕೊಂಡು ಗೋಳಾಡ್ತಿ. ನಂದೂ ತಲಿತಿಂತಿ. ಈ ಕಸಾನೆಲ್ಲ ನಿನ್ನ ತಲಿಗೆ ತುಂಬ್ದೋರು ಯಾರು? ಮೊದ್ಲು ತಗದುಹಾಕು ಅದನ್ನೆಲ್ಲ ತಲ್ಯಾಗಿಂದ. ಈ ಮಾಟಾ – ಮಂತ್ರ ಎಲ್ಲಾ ನಿಮ್ಮಂಥಾ ಬಕರಾಗಳ್ನ ಹೆದ್ರಸಾಕಂತ ಹುಟ್ಕೊಂಡಿದ್ದು. ಇದನ್ನ ಚೆಂದಂಗ ಮಂದಟ್ಟು ಮಾಡ್ಕೋ ಮೊದ್ಲ. ಮಾಟಗಾರು, ಮೋಡಿಗಾರು ಹೇಳಿದ್ದೆಲ್ಲ ನಡೆಂಗಿದ್ರ ಅದರ ಕತೀನ ಬ್ಯಾರೆ ಇರ್ತಿತ್ತು!

ದೇವಿಯ ಕರಾಮತ್ತು – ಭಾಗ – 3

ಕಾರ ಹುಣ್ಣಿಮೆಯೆಂದರೆ ಬರೀ ಎತ್ತುಗಳ ಕರಿ ಹರಿಯುವುದು ಮಾತ್ರವಲ್ಲ ನಮ್ಮ ಊರಿನಲ್ಲಿ ಪಟಗಳದ್ದೂ ಹಬ್ಬ! ಕಾರ ಹುಣ್ಣಿಮೆ ಬಂತೆಂದರೆ ಸಾಕು ನಮ್ಮ ಓಣಿಯ ಹುಡುಗರು ಹುಚ್ಚೆದ್ದು ಕುಣಿಯುತ್ತಿದ್ದರು. ಇನ್ನೂ ಹುಣ್ಣಿಮೆ ವಾರವಿರುವಾಗಲೇ ಪಟ ಏರಿಸುವ ದಾರಕ್ಕೆ  ‘ ಮಿಂಶರಿ ‘ ಹಾಕುವ ಕೆಲಸದಲ್ಲಿ ಮುಳುಗುತ್ತಿದ್ದರು. ಸೋಡಾ ಸೀಸೆಯ ಗಾಜಿನ ಹುಡಿಗೆ ಬಣ್ಣ – ಅಂಟು – ನೀರು ಸೇರಿಸಿ ಆ ಮಿಶ್ರಣವನ್ನು ಚೆನ್ನಾಗಿ ಕುದಿಸಿ ಆ ದ್ರಾವಣದಲ್ಲಿ ದಾರದ ಉಂಡೆಯನ್ನು ಹಾಕಿ, ಒಬ್ಬರು ಒಂದು ಚಿಕ್ಕ ಬಟ್ಟೆ ತುಂಡಿನಿಂದ ದಾರಕ್ಕೆ  ಮಿಂಶರಿ ಹಚ್ಚುತ್ತಿದ್ದರೆ ಇನ್ನೊಬ್ಬರು ತುಸು ದೂರದಲ್ಲಿ ನಿಂತು ಪಿರಿಕಿಯಲ್ಲಿ ಆ ಮಿಂಶರಿಯ ದಾರವನ್ನು ಸುತ್ತುವರು. ಹದವಾಗಿ ಮಿಂಶರಿ ಹತ್ತಿದ ದಾರ ಮೇಲೇರಿದ ಪಟಗಳ ಸೂತ್ರಗಳ ಸೊಂಕಿ ಒಂಚೂರು ಸವರಿದರೂ ಸಾಕು, ಪಟಗಳು ರೆಕ್ಕೆ ಕಿತ್ತ ಹಕ್ಕಿಗಳಂತೆ ಪಟಪಟನೆ ಉದುರಿ ಬೀಳುತ್ತಿದ್ದವು! ಮೇಲೇರಿದ ಪಟದ ದಾರಕ್ಕೆ ಮೇಲೆ ದಾರ ತಂದು ಕತ್ರಿ ಹಾಕಿ ಪಟವನ್ನು ಕೆಳಕ್ಕೆ ಕೆಡವುವುದೂ ಒಂದು ಕಲೆ! ಯಾರು ಹೆಚ್ಚು ಪಟಗಳನ್ನು ಕೆಳಕ್ಕೆ ಕೆಡವುವರೋ ಅವರಿಗೆ ಎರಡು ಕೋಡು!! ಆಷಾಢ ಅದೇ ತಾನೇ ಪಾದ ಊರುವ ಸಮಯ. ಹದವಾದ ಗಾಳಿ. ಪಟಗಳು ಹೆಡೆಯಾಡುತ್ತ, ಲಾಗ ಹಾಕುತ್ತ ಬಾನು ಮುಚ್ಚುತ್ತಿದ್ದವು. ಓಣಿಯ ನೀಲಗಾರರ ಮನೆಯಲ್ಲಿ ಹುಣ್ಣಿಮೆಗೂ ಮೊದಲೇ ಬಣ್ಣಬಣ್ಣದ ರಾಶಿ ಪಟಗಳು ಸಿದ್ಧವಾಗುತ್ತಿದ್ದವು. ಆಗಸವೆಲ್ಲ ಬಣ್ಣಬಣ್ಣದ ಚಿಟ್ಟೆಗಳ ಹಾಗೆ ನಾನಾ ನಮೂನಿಯ ಪಟಗಳಿಂದ ತುಂಬಿ ಹೋಗುತ್ತಿತ್ತು.  ಮೇರವಾಡೆ ಚಾಲಿನ  ಪಟ್ಟೇಗಾರರು  ದೊಡ್ಡದಾದ ‘ ಬುರುಬುರಿ ‘ ಪಟವನ್ನು ಹಾರಿಸುತ್ತಿದ್ದರು. ಆ ಪಟವಂತೂ ‘ ಬುರ್….’  ಅಂತ ಸಪ್ಪಳ ಮಾಡುತ್ತಾ ಪಟಗಳಿಗೆಲ್ಲ ರಾಜನಂತೆ ಗಂಭೀರವಾಗಿ ಹಾರಾಡುತ್ತಿತ್ತು! ಆ ಪಟದ ಸೂತ್ರಕ್ಕೆ ಮಾತ್ರ ಯಾವ ಪಟದ ದಾರವೂ ಕತ್ರಿ ಹಾಕುವ ಸಾಹಸಕ್ಕೆ ಕೈಹಾಕುತ್ತಿರಲಿಲ್ಲ! 

ಅವ್ವನೂ ಕಾರ ಹುಣ್ಣಿಮೆಗೆ ಸಿದ್ಧತೆ ಮಾಡಿಕೊಳ್ಳತೊಡಗಿದಳು. ಹಿಂದಿನ ದಿನವೇ ನೀರು ಚಿಮುಕಿಸಿ ಹದಗೊಳಿಸಿದ ಜವೆಗೋಧಿಯನ್ನು ಬೀಸುಕಲ್ಲಿನಲ್ಲಿ ಬೀಸಿ ಬಟ್ಟೆಯಲ್ಲಿ ಹಿಟ್ಟು ಸೋಸಿ ಹೋಳಿಗೆ ಹಿಟ್ಟು ಸಿದ್ಧಪಡಿಸಿಟ್ಟುಕೊಂಡಳು. ಬೆಲ್ಲ – ಏಲಕ್ಕಿ ಕುಟ್ಟಿಟ್ಟು ಕಡಲೆಬೇಳೆ ಹಸನುಮಾಡಿಕೊಂಡಳು. ಮರುದಿನ ಹುಣ್ಣಿಮೆ. ಅಂಗಳಕ್ಕೆ ಸಗಣಿ ನೀರು ಹಾಕಬೇಕಿರುವುದರಿಂದ ಕೊಂಚ ಬೇಗನೇ ಎದ್ದಳು. ಅವ್ವ ಪ್ರತಿದಿನ ಮೊದಲು ನಮ್ಮ ಅಂಗಳ ಗೂಡಿಸಿ ನಂತರ ಪಕ್ಕದ ಅಜ್ಜಿ ಮನೆಯ ಅಂಗಳ ಗೂಡಿಸುವುದು ರೂಢಿ. ಅಡಿಕೆ ಗರಿಯ ಪೊರಕೆಯಿಂದ ಸರಸರನೇ ಅಂಗಳ ಗೂಡಿಸುತ್ತ ಅಜ್ಜಿಯ ಅಂಗಳದತ್ತ ಬಂದಳು. ಅಜ್ಜಿಯ ಮನೆಯ ಮುಂದೆ ಏನೋ ಕಂಡಂತಾಯಿತು. ಇನ್ನೂ ನಸುಗತ್ತಲು, ಅಸ್ಪಷ್ಟವಾಗಿ ಕಾಣುತ್ತಿದೆ. ಏನೆಂದು ತಿಳಿಯುತ್ತಿಲ್ಲ. ಅವ್ವ ಅದರ ಸಮೀಪಕ್ಕೆ ಹೋಗಿ ಬಗ್ಗಿ ನೋಡಿದಳು. ಅವಳೆದೆ ಧಸ್ಸೆಂದು ಕೈಕಾಲುಗಳಲ್ಲಿ ನಡುಕ ಹುಟ್ಟಿತು. ಒಡನೆಯೇ “ ದೊಡ್ಡೀ…………ದೊಡ್ಡೀ……..” ಎಂದು ಜೋರಾಗಿ ಕೂಗುತ್ತ ದಬದಬ ಬಾಗಿಲು ಬಡಿಯತೊಡಗಿದಳು. ದೊಡ್ಡಿ ಅದೇ ತಾನೆ ಎದ್ದು ಸಕ್ಕರೆ ನಿದ್ದೆಯಲ್ಲಿದ್ದ ನಮ್ಮನ್ನು ಎಬ್ಬಿಸುತ್ತ ಹಾಸಿಗೆ ಮಡಚುತ್ತಿದ್ದಳು. ಅವ್ವನ ಕೂಗಿಗೆ ಬೆಚ್ಚಿ ಲಗುಬಗೆಯಿಂದ ಬಾಗಿಲತ್ತ ಓಡಿದಳು. ಅವ್ವನ ಕೂಗು ನನ್ನನ್ನು ಬಡಿದೆಚ್ಚರಿಸಿತು! ಧಿಗ್ಗನೆದ್ದು ಕುಳಿತವಳ ತಲೆಯಲ್ಲಿ ಮೊದಲು ಮೂಡಿದ ಪ್ರಶ್ನೆ ‘ ಮತ್ತೆ ಮಾಮಾ ಬಂದನೆ?! ‘ 

ಅಡಬರಿಸಿ ಬಂದು ಬಾಗಿಲು ತೆಗೆದ ಅಜ್ಜಿಯ ಕಣ್ಣಿಗೆ ಮೊದಲು ಕಂಡದ್ದು  ಗಡಗಡನೇ ನಡುಗುತ್ತ ನಿಂತ ಅವ್ವ! “ ದೊಡ್ಡೀ….ಅಲ್ನೋಡು ಹೊಸ್ಲಿ ಹತ್ರ ಯಾರ ನಮ್ಮನೀಗೆ ಮಾಟಾ ಮಾಡ್ಸಿಟ್ಟಾರಾ…,” ಅವ್ವ ಭೀತಿಯಿಂದ ನುಡಿದಳು. ಅಜ್ಜಿ ಮನೆಯಿಂದ ಹೊರ ಬಂದು ಹೊಸ್ತಿಲ ಬಳಿ ನಿಂತು ನೋಡಿದಳು. ಕುಂಕುಮ ಹಚ್ಚಿದ ಎರಡು ತೆಂಗಿನಕಾಯಿ ಬಟ್ಟಲು, ಐದು ಬಾಳೆಹಣ್ಣು , ಎರಡು ನಿಂಬೆಹಣ್ಣು , ಹೂವು, ಎಲೆ – ಅಡಿಕೆ, ಮತ್ತೆ ಎರಡು ಚಿಕ್ಕ ಪೊಟ್ಟಣಗಳು! ಅಜ್ಜಿ ತೆಂಗಿನ ಬಟ್ಟಲಿಗೆ ಕೈ ಹಚ್ಚಿದ್ದೇ ತಡ ಅವ್ವ ಬೆಚ್ಚಿ “ ದೊಡ್ಡಿ.. ಮುಟ್ಟಬ್ಯಾಡ ಅದನ್ನ! ಪೂಜಾರಿ ಕಾಳಯ್ಯನ್ನ ಕರಸಿ ಹಾಳಬಾವಿಗೆ ಹಾಕ್ಸಿಬಿಡು….” ಎಂದಳು.  “ ಏ ಪುಕ್ಲಿ ಸುಮ್ನಿರ “ ಎನ್ನುತ್ತ ಅಜ್ಜಿ ತೆಂಗಿನ ಬಟ್ಟಲನ್ನು ಕೈಯಲ್ಲಿ ಹಿಡಿದು ಪರಿಶೀಲಿಸಿದಳು. ಮತ್ತೆ ಅದನ್ನು ಅದರ ಜಾಗದಲ್ಲೇ ಇಟ್ಟು ಎರಡು ಪೊಟ್ಟಣಗಳನ್ನು ಬಿಚ್ಚಿ ನೋಡಿದಳು. ಒಂದರಲ್ಲಿ ಅರಿಶಿಣ, ಇನ್ನೊಂದರಲ್ಲಿ ಕುಂಕುಮವಿತ್ತು! ಅಜ್ಜಿ ಪೊಟ್ಟಣಗಳನ್ನು ಮಡಚಿ ಇಡುತ್ತ “ ಇದು ಯಾ ಮಾಟದ್ದಲ್ಲ, ಮಂತ್ರದ್ದಲ್ಲ. ಪರಸರಾಮ ತಂದಿಟ್ಟ ಹೋದ ಗುಡ್ಡದವ್ವನ ಪ್ರಸಾದ. ತೊಗೊಂಡು ಒಳಗ ನಡಿ “ ಎಂದಳು!! ಅವ್ವ ಭೀತಿಯಿಂದ “ ಬ್ಯಾಡ ದೊಡ್ಡಿ ಅದನ್ನ ಒಳಗ ಒಯ್ಯೂದು ಬ್ಯಾಡಾ. ಯಾವ ಮಾಟಾಮಾಡ್ಸಿ ತಂದಿಟ್ಟಾವು. ಹಾಳ ಬಾವಿಗೆ ಹಾಕ್ಸಿಬಿಡು “ ಅವ್ವ ತನ್ನ ವಾದಕ್ಕೆ ಜೋತುಬಿದ್ದಳು! ಅವಳ ಕೈಕಾಲುಗಳಲ್ಲಿನ ನಡುಕ ಇನ್ನೂ ನಿಂತಿರಲಿಲ್ಲ. ಈ ಗಲಾಟೆ ಕೇಳಿ ಅಪ್ಪ ಎದ್ದು ಬಂದ. ಅಕ್ಕಪಕ್ಕದ ಮನೆಯವರೂ ಒಬ್ಬೊಬ್ಬರಾಗಿ ಎದ್ದು ಬರತೊಡಗಿದರು. “ ನಾ ಹಾಳ ಮಕಕ್ಕ ನೀರ ಹಾಕಿಲ್ಲ, ತೊಗೊಂಡು ಒಳಗಿಡಂದ್ರ ಏನ್ ತಕರಾರವ್ವ ನಿಂದು?! “ ಎನ್ನುತ್ತ ಅಜ್ಜಿ ಒಳಗೆ ಹೋಗಿ ಮುಖ ತೊಳೆದುಕೊಂಡು ಬಂದು ಅಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ಉಡಿಯಲ್ಲಿ ಹಾಕಿಕೊಂಡು ಒಳನಡೆದಳು.

ಅವ್ವನಿಗೆ ಅಂದಿನ ಹುಣ್ಣಿಮೆ ಕಹಿ ಎನಿಸಿತು. ಅವಳು ದಿಗಿಲಿನಿಂದಲೇ ಅಂದಿನ ಕೆಲಸಗಳನ್ನು ಪೂರೈಸಿದಳು. ಅಜ್ಜಿ ಆ ತೆಂಗಿನ ಹೋಳುಗಳಿಂದ ಚಟ್ನಿ ಮಾಡಿಕೊಂಡು ತಿಂದಳು. ಮಧ್ಯಾಹ್ನ ಊಟವಾದ ಮೇಲೆ ಬಾಳೆಹಣ್ಣು ತಿಂದು,  ಎಲೆ – ಅಡಿಕೆ ಮೆದ್ದಳು. ಸಂಜೆ  ನಿಂಬೆ ಹಣ್ಣಿನಿಂದ ಶರಬತ್ತು ಮಾಡಿಕೊಂಡು ಕುಡಿದಳು! ಅವ್ವ ಆ ಸಾಮಗ್ರಿಗಳನ್ನು ಸುತಾರಾಂ ಮುಟ್ಟಲಿಲ್ಲ. ಮಕ್ಕಳಿಗೂ ಮುಟ್ಟಗೊಡಲಿಲ್ಲ. ಅಪ್ಪ ಅಜ್ಜಿಯ ಜೊತೆ ಎಲ್ಲವನ್ನೂ ತಿಂದ. ದಿನಗಳೆದಂತೆ ಅವ್ವನಿಗೆ ದಿಗಿಲು ಹೆಚ್ಚುತ್ತಲೇ ಹೋಯಿತು. ಊಟ ಸೇರದಾಯಿತು. ನಿದ್ದೆ ಬಾರದಾಯಿತು. ಅಂದು ರವಿವಾರ. ಅಪ್ಪ ಬಟ್ಟೆಗಳಿಗೆ ಇಸ್ತ್ರಿ ತಿಕ್ಕುತ್ತಿದ್ದ. ಅವ್ವ ಅಪ್ಪನ ಮುಂದೆ ತನ್ನ ಗೋಳು ತೋಡಿಕೊಳ್ಳತೊಡಗಿದಳು. “ ನೀವಿಬ್ರೂ ಬ್ಯಾರೆ ಆ ಮಾಟಾಮಾಡ್ಸಿದ್ದನ್ನೆಲ್ಲಾ ತಿಂದ ಕುಂತೀರಿ, ಕೂಳು ಕಾಣದವ್ರ ಗತೆ. ಮುಂದ ಏನೇನ್ ಕಾದೈತೋ ಏನೋ! ಮನ್ಯಾಗ ಸಣ್ಣಸಣ್ಣ ಮಳ್ಕುಬ್ಯಾರೆ ಅದಾವು!  ನೆನಿಸಿಕೊಂಡ್ರ ನನ್ಗ ಹೊಟ್ಯಾಗೆಲ್ಲಾ ತಣ್ಣೀರ ಹಾಕದಂಗ ಆಕೈತಿ”. ಅವ್ವನ ಆತಂಕ ಕಂಡು ಅಪ್ಪನಿಗೆ ನಗು ಬಂತು. ನಕ್ಕರೆ ಬೇಸರಪಟ್ಟುಕೊಳ್ಳುತ್ತಾಳೆಂದು ಕಷ್ಟಪಟ್ಟು ತಡೆದು, ಇಸ್ತ್ರಿ ಪೆಟ್ಟಿಗೆಯನ್ನು ನಿಲ್ಲಿಸಿಟ್ಟು , ಒಂದು ಕೈ ಕಟ್ಟೆಯ ಮೇಲೂರಿ, ಇನ್ನೊಂದು ಕೈ ಟೊಂಕದ ಮೇಲಿಟ್ಟು   “ ಈಗ ಏನಾಗೈತಂತ ನೀ ಇಷ್ಟ ದಿಗಲ ಬಿದ್ದಿ? ಈ ಮಾಟಾ – ಮಂತ್ರ ಎಲ್ಲಾ ಸುಳ್ಳು. ಇವೆಲ್ಲಾ ನಂಬ್ಯಾಡಾ.” ಎಂದು ಮತ್ತೆ ಇಸ್ತ್ರೀ ಪೆಟ್ಟಿಗೆಯನ್ನು ಬಟ್ಟೆಯ ಮೇಲೆ ಸರಸರನೆ  ಆಡಿಸತೊಡಗಿದ. “ನಿಮಗ ನನ್ನ ಮಾತಂದ್ರ ಯಾವಾಗ್ಲೂ ಸಸಾರ. ಇವೆಲ್ಲಾ ಸುಳ್ಳಂತ ಹ್ಯಾಂಗ ಹೇಳ್ತೀರಿ? ಹುಬ್ಬಳ್ಳಿ ದುರ್ಗದ ಬೈಲ್ನಾಗ ಆ ಬಸರೀ ಶಂಕ್ರಜ್ಜನ ಹೆಸ್ರಿಲೆ ಗಿಡಾ ಕಿತ್ಸಿದ್ರು. ಮೂರು ತಿಂಗ್ಳೊಳ್ಗ ಸತ್ತೊದಾ! ದೊಡ್ಮನಿ ನಾಗಣ್ಣನ ಮನ್ಯಾಗ, ಗೊಂಬಿ ಮಾಡಿ ಅದರ ಕೈಕಾಲು ತಿರುವಿ ಹುಗುದಿದ್ರು. ತಿಂಗ್ಳೊಪ್ಪತ್ನಾಗ ಲಕ್ವಾ ಹೊಡದು ಮೊಕ್ಕೊಂಡಾಂವ ಇನ್ನೂ ಬ್ಯಾನೀ ಸೋಸಾಕತ್ತಾನಾ..” ಅವ್ವ ಮಾಟಮದ್ದಿಗೆ ಒಳಗಾದವರ ವರದಿ ಒಪ್ಪಿಸತೊಡಗಿದಳು. “ ಗಿಡಾ ಕಿತ್ಸಿದ್ದು, ಗೊಂಬಿ ಹುಗುದಿದ್ದು ನೀನೇನರ ನೋಡಿಯನ? “ ಅವ್ವ ‘ ಇಲ್ಲ ‘ ವೆಂಬಂತೆ ಅಡ್ಡಡ್ಡ ಗೋಣು ಅಲ್ಲಾಡಿಸಿದಳು. “ ಮತ್ತ ನೋಡಿ ಬಂದವ್ರ ತಲಿಮ್ಯಾಗ ಹೊಡದವ್ರಂಗ ಮಾತಾಡ್ತಿಯಲ್ಲ. “ ಅಪ್ಪ ಅಸಹನೆಯಿಂದ ನುಡಿದ. “ ಇಂಥಾವೆಲ್ಲ ಊರಮಂದಿನ್ನೆಲ್ಲಾ ಮುಂದಿಟ್ಕೊಂಡು ಮಾಡ್ತಾರನ? ಇವೆಲ್ಲಾ ಒಳಗೊಳಗ ಗುಟ್ಟಾಗಿ ನಡಿಯೂ ಕೆಲ್ಸಗೂಳು. ಇವೆಲ್ಲಾ ನಾವು ನೋಡಬೇಕಂತೇನಿಲ್ಲಾ. ಬೆಂಕಿಯಿಲ್ದ ಹೊಗಿಯಾಡಂಗಿಲ್ಲ ತಿಳ್ಕೋರಿ” ಅವ್ವನ ದೃಢವಾದ ಉತ್ತರ! ಅವ್ವನ ಮಾತುಗಳಿಂದ ಅಪ್ಪನಿಗೆ ಮೈಕೈ ಪರಚಿಕೊಳ್ಳುವಂತಾಯ್ತು. “ ಏನ್ ಜಿಡ್ಡಿನ ಹೆಣಮಗ್ಳದಿ ನೀ ಮಾರಾಳ! ಎಷ್ಟ ಹೇಳೀದ್ರೂ ತಿಳ್ಕೊಳ್ಳಾಕ ತಯಾರಿಲ್ಲಲ್ಲ. ಇಲ್ಲದ್ದೆಲ್ಲಾ ತಲಿಗೆ ಹಚ್ಕೊಂಡು ಗೋಳಾಡ್ತಿ. ನಂದೂ ತಲಿತಿಂತಿ. ಈ ಕಸಾನೆಲ್ಲ ನಿನ್ನ ತಲಿಗೆ ತುಂಬ್ದೋರು ಯಾರು? ಮೊದ್ಲು ತಗದುಹಾಕು ಅದನ್ನೆಲ್ಲ ತಲ್ಯಾಗಿಂದ. ಈ ಮಾಟಾ – ಮಂತ್ರ ಎಲ್ಲಾ ನಿಮ್ಮಂಥಾ ಬಕರಾಗಳ್ನ ಹೆದ್ರಸಾಕಂತ ಹುಟ್ಕೊಂಡಿದ್ದು. ಇದನ್ನ ಚೆಂದಂಗ ಮಂದಟ್ಟು ಮಾಡ್ಕೋ ಮೊದ್ಲ. ಮಾಟಗಾರು, ಮೋಡಿಗಾರು ಹೇಳಿದ್ದೆಲ್ಲ ನಡೆಂಗಿದ್ರ ಅದರ ಕತೀನ ಬ್ಯಾರೆ ಇರ್ತಿತ್ತು! ತಿಳ್ಕೋ. ಈ ತೌಡುಕುಟ್ಟೋ ಕೆಲ್ಸಬಿಟ್ಟು ಬ್ಯಾರೆ ಏನಾದ್ರೂ ಹುರುಡಿದ್ದ ವಿಚಾರಾ ಮಾಡು. ಬರೇ ಅವ್ರು ಇವ್ರು ಹೇಳಿದ್ದನ್ನ ಪ್ಯಾಲಿಯಂಗ ನಂಬೋದು ಸಾಕಮಾಡು. ಒಂಚೂರು ಸ್ವಂತ ಬುದ್ಧಿ ಉಪಯೋಗ ಮಾಡಿ ವಿಚಾರಾ ಮಾಡೋದು ಕಲಿ!” ಅಪ್ಪ ಸಿಟ್ಟಿನಿಂದ ನುಡಿದು, ಇಸ್ತ್ರಿ ಪೆಟ್ಟಿಗೆಯನ್ನು ಎತ್ತಿಟ್ಟು , ಬಟ್ಟೆಗಳನ್ನೆಲ್ಲಾ ಕಪಾಟಿನಲ್ಲಿಟ್ಟ. ಲೈಬ್ರರಿಗೆ ಹೋಗುವ ಸಮಯವಾಗಿತ್ತು ಬೇರೆ! ಮೊದಲೇ ಆತ ಯಾವುದೇ ಕಾರಣಕ್ಕೂ ತನ್ನ ಲೈಬ್ರರಿ ಸಮಯವನ್ನು ಒಂಚೂರೂ ಪೋಲಾಗಲು ಬಿಡದ ಮನುಷ್ಯ. ಇನ್ನು ಈ ಹಾಳು ಜಪಾಳಿಗೆ ನಿಲ್ಲುವನೆ?! ಲಗುಬಗೆಯಿಂದ ಅಂಗಿಯನ್ನೇರಿಸಿಕೊಳ್ಳುತ್ತ ಚಪ್ಪಲಿ ಮೆಟ್ಟಿ ಅಂಗಳಕ್ಕಿಳಿದ. ಅಪ್ಪ ಪ್ರತಿದಿನ ಲೈಬ್ರರಿಗೆ ಹೋಗುವಾಗಲೂ “ಬಾ ಪುಟ್ಟಾ” ಎಂದು ನನ್ನನ್ನೂ ಜೊತೆಗೇ ಕರೆದೊಯ್ಯುವನು. ಇಂದು ಈ ಹರಾಕಿರಿಯಲ್ಲಿ ಮರೆತು ಒಬ್ಬನೇ ಹೋಗಿಬಿಟ್ಟ! ನನಗೆ ಪಿಕಲಾಟಕ್ಕಿಟ್ಟುಕೊಂಡಿತು. ಅಪ್ಪನ ಹಿಂದೆ ಓಡಲು ಕಾಲುಗಳೋ ಎದ್ದೆದ್ದು ಕುಣಿಯುತ್ತಿವೆ! ಎದುರಿಗೆ ನೋಡಿದರೆ ಧುಮುಗುಟ್ಟುತ್ತ ಅವ್ವ ನಿಂತಿದ್ದಾಳೆ! ಗಂಡನ ಮಾತು – ವರ್ತನೆಯಿಂದ ಸಿಟ್ಟು , ಅಸಹಾಯಕತೆ, ಅವಮಾನ, ಆಕ್ರೋಶ, ಹತಾಶೆ…ಎಲ್ಲವನ್ನೂ ತುಂಬಿಕೊಂಡು ಕಂಗಳಲ್ಲಿ ಬೆಂಕಿಯುಗುಳುತ್ತ! ಆದರೂ ಭಂಡಧೈರ್ಯ ಮಾಡಿ ಕಾಲೆತ್ತಿಡಬೇಕೆಂಬಷ್ಟರಲ್ಲಿ “ ಹೂಂ..ನೀ ಎಲ್ಲೆ ಹೊಂಟ್ಯವಾ?” ಅವ್ವ ತೀಕ್ಷ್ಣವಾದ ಬಾಣ ಬಿಟ್ಟಳು. ನನಗೆ ನಾಲಿಗೆ ಪಸೆಯೆಲ್ಲ ಆರಿಹೋದಂತಾಗಿ ಬಾಯಿ ಒಣಗಿತು. “ಅ...ಪ್ಪ…” ಅಂತ ತೊದಲಿದೆ. “ ನಿಮ್ಮಪ್ಪ ಲೈಬ್ರಿಗೆ ಹೋಗಿ ನಮ್ಮನ್ನೆಲ್ಲ ಉದ್ಧಾರಾ ಮಾಡಿದ್ದು ಸಾಕು. ಇನ್ನ ನೀನು ಹೋಗಿ ಉದ್ಧಾರಾ ಮಾಡೂದೇನ್ ಬೇಕಾಗಿಲ್ಲ. ನಡಿ ಒಳಗ” ಅವ್ವ ಕಠೋರವಾಗಿ ಆಜ್ಞಾಪಿಸಿದಳು. ಅಪ್ಪನ ಜೊತೆಗೆ ಲೈಬ್ರರಿಗೆ ಹೋಗುವುದು ತಪ್ಪಿದ್ದಕ್ಕಾಗಿ ನನಗೆ ಅಳು ಒತ್ತಿಕೊಂಡು ಬಂದರೂ ಅದರಿಂದ ಅವ್ವನ ಸಿಟ್ಟು ಇನ್ನಷ್ಟು ಹೆಚ್ಚುವುದೆಂದು ಖಾತ್ರಿಯಾಗಿ ಕಷ್ಟಪಟ್ಟು ಅಳು ತಡೆದೆ. ಅವ್ವ ಇನ್ನೇನೋ ಹೇಳುವುದಕ್ಕೆ ಬಾಯಿತೆರೆಯುವಷ್ಟರಲ್ಲಿ “ಯವ್ವರಿಗೆ……..ಯಪ್ಪರಿಗೆ.....” ಅಡುಗೆ ಮನೆಯಿಂದ ನನ್ನ ಚಿಕ್ಕ ತಮ್ಮನ ಚೀರಾಟ ಕೇಳಿಬಂತು. ಅಡುಗೆ ಮನೆಯ ಕಟ್ಟಿಗೆ ಶೆಲ್ಫಿನಲ್ಲಿಟ್ಟ ತಿಂಡಿಯನ್ನು ತೆಗೆದುಕೊಳ್ಳಲು ಹೋಗಿ, ಕೈತಪ್ಪಿ ಅಕ್ಕಿಹಿಟ್ಟಿನ ಡಬ್ಬವನ್ನು ಅನಾಮತ್ತಾಗಿ ತಲೆಯ ಮೇಲೆ ಬೋರಲು ಬೀಳಿಸಿಕೊಂಡಿದ್ದ! ತಲೆಯಿಂದ ಪಾದದವರೆಗೂ ಹಿಟ್ಟುಮಯವಾಗಿ ಭೂತದ ವೇಷ ಧರಿಸಿ ಅಳುತ್ತಾ ನಿಂತಿದ್ದ!! ಅಡುಗೆ ಮನೆಯ ಡಬ್ಬಗಳಲ್ಲಿ ಹಿಟ್ಟಿನ ಡಬ್ಬ ಹೋಗಲಿ, ಸಾಸಿವೆ – ಜೀರಿಗೆಯಂಥ ಚಿಕ್ಕ ಡಬ್ಬಗಳ ಸ್ಥಾನಪಲ್ಲಟವನ್ನೂ ಅವ್ವ ಸಹಿಸುವವಳಲ್ಲ.  ಅವಳು ಇಡೀ ಮನೆಯನ್ನು ತುಂಬಾ ಶಿಸ್ತುಬದ್ಧವಾಗಿ – ಸ್ವಚ್ಛವಾಗಿ ಇಟ್ಟಿದ್ದಳು. ಇನ್ನು ಅಡುಗೆ ಮನೆಯ ವಿಷಯವನ್ನಂತೂ ಕೇಳುವುದೇ  ಬೇಡ. ಅಡುಗೆ ಮನೆಯ ಪ್ರತಿ ಚಿಕ್ಕ – ದೊಡ್ಡ ವಸ್ತುವೂ ಅದರ ಗೊತ್ತಾದ ಜಾಗದಲ್ಲೇ ಇರಬೇಕು! ಒಂಚೂರು ಹೇರಾಪೇರಿಯಾದರೂ ಅವ್ವ ಸಹಿಸುತ್ತಿರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಇಡೀ ಹಿಟ್ಟಿನ ಡಬ್ಬದೊಂದಿಗೆ ಶೆಲ್ಫಿನಲ್ಲಿನ ಇನ್ನಿತರ ಸಾಮಾನುಗಳೂ ‘ ಠಳ್…ಟಕ್..’ ಅಂತ ಬಿದ್ದಾಗ ಅವಳಿಗೆ ಹೇಗಾಗಬೇಡ?! “ ನಿಂದೇನ್ ರೊಳ್ಯೋ ಮಾರಾಯಾ.. ಎಲ್ಲಾರೂ ಚೊಲೋ ಜೋಡಾಗೀರಿ ನನ್ನ ಜಲ್ಮಕ್ಕ” ಎಂದು ನನ್ನ ತಮ್ಮನನ್ನು ಬೈಯ್ಯುತ್ತಾ ಅಡುಗೆ ಮನೆಯತ್ತ ದೌಡಾಯಿಸಿದಳು. ನಾನು ‘ ಬದುಕಿದೆಯಾ ಬಡ ಜೀವವೇ ‘ ಎಂದುಕೊಂಡು ಒಂದೇ ನೆಗೆತಕ್ಕೆ ಅಂಗಳಕ್ಕೆ ಹಾರಿ ಅಪ್ಪನತ್ತ ಓಡಿದೆ!

ದಿನಗಳು ಉರುಳುತ್ತಿದ್ದವು. ಅವ್ವನಿಗೆ ತನ್ನ ಅಭಿಪ್ರಾಯಗಳನ್ನು, ಮನದಿಂಗಿತವನ್ನು ಯಾರೂ ಅರಿತುಕೊಳ್ಳುತ್ತಿಲ್ಲವೆಂಬ ಹತಾಶೆ ಕಾಡತೊಡಗಿತು. ಅದಕ್ಕಿಂತ ಹೆಚ್ಚಾಗಿ ಯಾವುದೋ ಅವ್ಯಕ್ತ  ಭಯ ಅವಳ ಹೊಟ್ಟೆಯನ್ನು ಹೊಕ್ಕು ಹುಡದಿಯಾಡತೊಡಗಿತು. ಕೊನೆಗವಳು ಒಂದು ಉಪಾಯ ಮಾಡಿ ಮಾಮಾನ ‘ ಪಾನಗೋಷ್ಠಿಯ ‘ ಸ್ನೇಹಿತರಿಂದ ಪತ್ತೆದಾರಿಕೆ ನಡೆಸಿದಳು! ಆ ಸಾಮಾನುಗಳೆಲ್ಲವನ್ನು ಮಾಮಾ ತಂದಿಟ್ಟದ್ದು ಎಂಬುದು ಆ ಸ್ನೇಹಿತರಿಂದ ಖಾತ್ರಿಯಾದ ಮೇಲೆಯೇ ಅವ್ವ ಪುಟ್ಟಾಪೂರಾ ನಿರಾಳವಾದದ್ದು!! ಅಜ್ಜಿಯ ಕಲಾಪಗಳಿಂದ ಹೆದರಿದ ಮಾಮಾ ತಾನು ಮಾಡಿದ ಪಾಪಕ್ಕೆ  ಪ್ರಾಯಶ್ಚಿತ್ತವೆಂಬಂತೆ ಎಲ್ಲಮ್ಮನ ಗುಡ್ಡಕ್ಕೆ ಹೋಗಿ ದೇವಿಗೆ ಹಣ್ಣುಕಾಯಿ ಮಾಡಿಸಿಕೊಂಡು ಬಂದಿದ್ದ! ಅಜ್ಜಿಯ ಎದುರಿಗೆ ಬರಲು ಮುಖವಿಲ್ಲದೇ ರಾತ್ರಿ ಎಲ್ಲರೂ ಮಲಗಿದಾಗ ಹೊಸ್ತಿಲ ಬಳಿ ಇಟ್ಟು ಹೋಗಿದ್ದ!!

ಪ್ರತಿವರ್ಷ ಸೀಗೆ ಹುಣ್ಣಿಮೆಯಿಂದ ಭಾರತ ಹುಣ್ಣಿಮೆಯವರೆಗೆ ಐದು ತಿಂಗಳು ಅಜ್ಜಿ ಗುಡ್ಡಕ್ಕೆ ಹೋಗುವುದನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬರುತ್ತಿದ್ದಳು. ಇತ್ತೀಚೆಗೆ ಅವಳೊಂದಿಗೆ ಗುಡ್ಡಕ್ಕೆ ಬರುತ್ತಿದ್ದ ಅವಳ ಜೊತೆಗಾರ್ತಿಯರು ಒಬ್ಬೊಬ್ಬರಾಗಿ ಅಸುನೀಗಿದ್ದರು. ಅಜ್ಜಿಯನ್ನು ಒಂಟಿಯಾಗಿ ಕಳಿಸಲಾಗದೇ ಅವ್ವನೇ ಅವಳ ಜೊತೆ ಹೋಗುತ್ತಿದ್ದಳು. ಅಂದು ಸೀಗೆ ಹುಣ್ಣಿಮೆ. ಅವ್ವ ಹೊರಗಾಗಿದ್ದಳು. ಅಜ್ಜಿಯ ಜೊತೆ ಗುಡ್ಡಕ್ಕೆ ಹೋಗಲು ಅವ್ವ ಹಿಂಜರಿದಳು. ವಾಸ್ತವವಾಗಿ ನಮ್ಮ ಮನೆಯಲ್ಲಿ ಲಗ್ನದ ಸಮಯದಲ್ಲಿ ನಡೆಸುವ ಗುಗ್ಗಳ ಕಾರ್ಯದ ಸಂದರ್ಭವೊಂದನ್ನು ಬಿಟ್ಟರೆ ಮಿಕ್ಕಂತೆ ಯಾವ ಸಮಯದಲ್ಲೂ ಮುಟ್ಟನ್ನು ಮೈಲಿಗೆಯೆಂದು ನಡೆಸುತ್ತಿರಲಿಲ್ಲ. ಅದನ್ನೂ ಸಹಜವಾಗಿಯೇ ತೆಗೆದುಕೊಂಡುಬಿಡುತ್ತಿದ್ದರು. ಆದರೆ ಓಣಿಯಲ್ಲಿ ನೇಕಾರ ಹೆಂಗಸರು ಮುಟ್ಟಾದಾಗ ಪಾಲಿಸುವ ಕಟ್ಟುನಿಟ್ಟಿನ ಕ್ರಮಗಳಿಂದ ಪ್ರಭಾವಿತಳಾಗಿಯೋ ಏನೋ ಅವ್ವ ಮುಟ್ಟಿನ ದಿನಗಳಲ್ಲಿ ಯಾವುದೇ ದೇವಳಕ್ಕೆ ಹೋಗಲು ಹಿಂಜರಿಯುತ್ತಿದ್ದಳು. “ ನಾವು ಶಿವಾಚಾರದೋವ್ರು. ನಮ್ಗ ಯಾವ್ದಕ್ಕೂ ಸೂತಕ ಅನ್ನೋದು ಇಲ್ಲಾ. ಬಾ ಹೋಗೂನು. “ ಎಂದು ಅಜ್ಜಿ ಎಷ್ಟು ಹೇಳಿದರೂ ಅವ್ವ ಒಪ್ಪಲಿಲ್ಲ. “ಇವತ್ತರ ಆಗೀನಿ. ಮೂರು ದಿನಾನರ ಆಗಿದ್ರ ತಲಿಮ್ಯಾಲ ನೀರ ಹಾಕ್ಕೊಂಡು ಬರ್ತಿದ್ದೆ “ ಎಂದು ಅವ್ವ ನಿರಾಕರಿಸಿದಳು. ವಿಧಿಯಿಲ್ಲದೆ ಅಜ್ಜಿ ನನ್ನನ್ನು ಜೊತೆ ಮಾಡಿಕೊಂಡು ಹೊಂಟಳು. ಅವ್ವನಿಗೆ ಅದೂ ಒಪ್ಪಿಗೆಯಿಲ್ಲ. “ ಅಕಿ ಸಣ್ಣ ಹುಡಿಗಿ ಅದಾಳಾ. ಬಸ್ಸು ನೋಡಿದ್ರ ಆಪರಿ ಗದ್ಲಿರ್ತಾವು! ಹ್ಯಾಂಗ ಹೊಕ್ತೀರಿ? “ ಎಂದು ತಕರಾರು ತೆಗೆದಳು. ಅಜ್ಜಿಗೆ ರೇಗಿಹೋಯಿತು. “ ನಾ ಒಬ್ಬಾಕೆರ ಗುಡ್ಡಕ್ಕ ಹೋಗಿ ಬರ್ತೀನಿ ಹೊರ್ತು ವ್ರತ ಕೆಡಂಗಿಲ್ಲ “ ಅಜ್ಜಿ ನೋವಿನಿಂದ ನುಡಿದು ಧಡಾಬಡಾ ತಯಾರಾಗತೊಡಗಿದಳು. ಈ ಎಲ್ಲಾ ಕಲಾಪಗಳನ್ನು ಗಮನಿಸುತ್ತಿದ್ದ ಅಪ್ಪ ಅಜ್ಜಿಯ ಕೈಯಲ್ಲಿನ ಚೀಲ ತೆಗೆದುಕೊಳ್ಳುತ್ತ “ ನಾ ಬರ್ತೀನಿ ನಡೀರಿ “ ಎಂದ! ಅಜ್ಜಿಗೆ ಸೋಜಿಗವಾಯಿತು. ಅವಳು ನನ್ನನ್ನೂ ಕರೆದುಕೊಂಡು ಸಂಭ್ರಮದಿಂದ ಅಪ್ಪನ ಹಿಂದೆ ನಡೆದಳು. ಅವ್ವ ಊರಗಲ ಮುಖ ಅರಳಿಸಿಕೊಂಡು “ ಜ್ವಾಕಿಂದ  ಹೋಗ್ರಿ….”  ಎನ್ನುತ್ತ ಸಂತಸದಿಂದ ಕಳಿಸಿಕೊಟ್ಟಳು.

ನಾವು ಗುಡ್ಡ ತಲುಪಿದಾಗ ಸೂರ್ಯ ನೆತ್ತಿಯ ಮೇಲಿದ್ದ. ಅಪ್ಪ ನಮ್ಮನ್ನು ಗುಡಿಯ ಬಳಿ ಬಿಟ್ಟು “ ನೀವು ಗುಡಿಗೆ ಹೋಗಿ ನಿಮ್ದೆಲ್ಲಾ ಮುಗುಸ್ರಿ. ನಾ ಹಿಂಗ ಸುತ್ತಾಡಿಕೊಂಡು ಬರ್ತೀನಿ “ ಎಂದು ಹೊರಟ. ಅಜ್ಜಿಗೆ ಅಳಿಯ ದೇವಿಯ ದರ್ಶನಕ್ಕೆ ಬರಲಿಲ್ಲವೆಂದು ಬೇಸರವಾದರೂ ‘ ಗುಡ್ಡದವರೆಗಾದರೂ ಬಂದನಲ್ಲ ‘ ಎಂದು ಸಮಾಧಾನಪಟ್ಟುಕೊಂಡಳು. ಪೌಳಿಯ ಆಚೆಗಿರುವ ಅಂಗಡಿಯಲ್ಲಿ ಕರ್ಪೂರವನ್ನು ಕೊಂಡು ‘ ಧೂಳಗಾಲಿಲೆ ಧೂಪಾಕೊಟ್ಟು ‘ ಜೋಗುಳ ಬಾವಿಗೆ ನಡೆದಳು. ಅಲ್ಲಿ ಕೈಕಾಲು ಮುಖ ತೊಳೆದುಕೊಂಡು “ ಜೋಗುಳ ಬಾವಿ ಸತ್ಯವ್ವ ನಿನ್ನಾಲ್ಕುಧೋ ಉಧೋ ಉಧೋ..’ ಎಂದು ಉಧೋ ಹಾಕಿ ನಮಿಸಿ ಮಾತಂಗಿ ಗುಡಿಯ ಬಳಿ ಬಂದು “ ಮಾತಂಗಿ ನಿನ್ನಾಲ್ಕುಧೋ ಉಧೋ ಉಧೋ..” ಎಂದು ನಮಿಸಿದಳು. ಬಳಿಕ ಎಲ್ಲಮ್ಮನ ಗುಡಿಗೆ ಬಂದು ಹಣ್ಣುಕಾಯಿ ಕೊಟ್ಟು “ ಮಂಗ್ಳಾರ ಮಾಯಕಾರ್ತಿ ನಿನ್ನಾಲ್ಕುಧೋ ಉಧೋ..ಉಧೋ.. , ಗುಡ್ಡದ ತಾಯಿ ನಿನ್ನಾಲ್ಕುಧೋ ಉಧೋ.. ಉಧೋ..” ಎಂದು ಭಕ್ತಿಯಿಂದ ನಮಿಸಿದಳು. ಸ್ವಲ್ಪ ಹೊತ್ತು ಬಿಟ್ಟು ಎಣಿಗೊಂಡಕ್ಕೆ ಬಂದು ಅಲ್ಲಿನ ತೀರ್ಥ ಸೇವಿಸಿ ನನಗೂ ಕೊಟ್ಟಳು. ಬಾಟಲಿಯೊಂದರಲ್ಲಿ ತೀರ್ಥ ತುಂಬಿಕೊಂಡು ಚೀಲದಲ್ಲಿಟ್ಟುಕೊಂಡು ಪರಶುರಾಮನ ಗುಡಿಗೆ ಬಂದಳು. ಪರಶುರಾಮನಿಗೆ ಕರ್ಪೂರ ಹಚ್ಚಿ ನಮಿಸುತ್ತ “ ನಿಮ್ಮವ್ವನ್ನ ಕಾಡಿದಂಗ ನಮ್ಮನ್ನ ಕಾಡಬ್ಯಾಡಪ್ಪಾ” ಎಂದು ಬೇಡಿಕೊಂಡು ಮತ್ತೆ ಗುಡಿದಾರಿ ಹಿಡಿದಳು. ಪರಶುರಾಮನಿಗೆ ಅಜ್ಜಿ ಹಾಗೇಕೆ ಬೇಡಿಕೊಂಡಳು?! ಎಂದು ನನಗೆ ಅಚ್ಚರಿಯಾಯಿತು. “ ಅಜ್ಜಿ ಪರಶುರಾಮ ಯಾರಜ್ಜಿ? “ ಎಂದು ಕೇಳಿದೆ. “ ಪರಶುರಾಮ ತಾಯಿ ಎಲ್ಲಮ್ಮನ ಮಗಾ “ ಅಜ್ಜಿ ಉತ್ತರಿಸಿದಳು. “ ಅಂವ ಅವ್ರ ಅವ್ವನ್ನ ಯಾಕ ಕಾಡಿದಾ? “ ನನ್ನ ಮರುಪ್ರಶ್ನೆ. “ ಅಯ್ಯ ನಮ್ಮವ್ವಾ! ಬರೇ ಕಾಡೂದೇನ್ ಬಂತು, ತಾಯಿ ರುಂಡಾನ ಕಡದ ಹಾಕಿದಾ! “ ಅಜ್ಜಿಯ ಉತ್ತರದಿಂದ ನನ್ನೆದೆ ‘ ಧಸ್ ‘ ಅಂತು! ಎಲ್ಲಮ್ಮ ತುಂಬಾ ಶಕ್ತಿಶಾಲಿ ದೇವಿ. ಮಾಮಾನಂಥ ಮಾಮಾನ ಉಪಟಳವನ್ನೇ ನಿವಾರಿಸಿದವಳು! ಅಂಥವಳ ತಲೆಯನ್ನು ಮಗ ಕಡಿಯುವುದೆಂದರೆ?! ಅಚ್ಚರಿಯೊಂದಿಗೆ ಭೀತಿಯೂ ಹುಟ್ಟಿ ಕೇಳಿದೆ “ ಎಲ್ಲಮ್ಮ ದೇವ್ರದಾಳ, ಅಕಿರುಂಡಾ ಮಗ ಕಡಿಯೂದಂದ್ರೇನಜ್ಜಿ?! “ “ ಅಯ್ಯ ಅದೊಂದು ದೊಡ್ಡ ಕತಿ ಐತಿ. ಇವತ್ತ ರಾತ್ರಿ ಹೇಳ್ತೀನಿ ನಡಿ .” ಅಜ್ಜಿಯ ಉತ್ತರದಿಂದ ನನಗೆ ನಿರಾಶೆಯಾದರೂ ಪ್ರತಿದಿನ ರಾತ್ರಿ ಅಜ್ಜಿ ಹೇಳುವ ಕತೆಗಳಲ್ಲಿ ಇನ್ನೊಂದು ಹೊಸಕತೆ ಸೇರ್ಪಡೆಯಾಯಿತೆಂದು ಖುಷಿಯಿಂದ ಅಜ್ಜಿಯ ಜೊತೆ ಹೆಜ್ಜೆ ಹಾಕಿದೆ. ದಾರಿಯ ಬದಿಯಲ್ಲಿ ದೊಡ್ಡ ಕಣ್ಣಿನ ಸೀತಾಫಲ ಹಣ್ಣುಗಳನ್ನು ಪುಟ್ಟಿತುಂಬಾ ಇಟ್ಟುಕೊಂಡು ಮಾರುತ್ತಿದ್ದರು. “ ನಿಮ್ಮವ್ವ ಈ ಹಣ್ಣಿನ ಮ್ಯಾಲೆ ಬಾಳ ಜೀವ “ ಎನ್ನುತ್ತ ಅಜ್ಜಿ ಒಂದಿಷ್ಟು ಸೀತಾಫಲ ಹಣ್ಣುಗಳನ್ನು ಕೊಂಡುಕೊಂಡು ಚೀಲದಲ್ಲಿ ಹಾಕಿಕೊಂಡಳು. ಮುಂದಿನ ಅಂಗಡಿಯಲ್ಲಿ ಮಂಡಕ್ಕಿ – ಖಾರಾ, ಬೆಂಡು – ಬೆತ್ತಾಸು, ಭಂಡಾರ – ಕುಂಕುಮ ಖರೀದಿಸಿ ಗುಡಿಯ ಬಳಿ ಬರುವಷ್ಟರಲ್ಲಿ ಊಟದ ಸಮಯವಾಗಿತ್ತು. ಅಜ್ಜಿ ಸುತ್ತಮುತ್ತಲೂ ಕಣ್ಣು ಹಾಯಿಸಿದಳು. ಅಪ್ಪ ಇನ್ನೂ ಬಂದಿರಲಿಲ್ಲ. ಮತ್ತೊಮ್ಮೆ ದೇವಿ ದರ್ಶನ ಮಾಡಿಕೊಂಡು ಬರುವಷ್ಟರಲ್ಲಿ ಅಪ್ಪ ಬಂದು ಕಾಯುತ್ತಿದ್ದ. ಮೂವರೂ ಬಸ್ ನಿಲ್ದಾಣದ ಬಳಿ ನಡೆದೆವು. ಗದುಗಿನ ಬಸ್ಸು ಬರಲು ಇನ್ನೂ ಸಮಯವಿತ್ತು. ಅಲ್ಲೇ ಬುತ್ತಿಬಿಚ್ಚಿ ಊಟ ಮುಗಿಸಿ ನೀರು ಕುಡಿದು ಕುಳಿತೆವು. ಸ್ವಲ್ಪ ಹೊತ್ತಿಗೆಲ್ಲಾ ಬಸ್ಸು ಬಂದಿತು. ಅಪ್ಪ ಅಜ್ಜಿಯ ಕೈಹಿಡಿದು ಬಸ್ಸು ಏರಿಸಿದ. ಅಜ್ಜಿ ಕಿಟಕಿಯ ಬಳಿಯ ಸೀಟಿನಲ್ಲಿ ಕುಳಿತು ಗುಡಿಯ ಗೋಪುರವನ್ನೇ ನೋಡುತ್ತ ‘ ಉಧೋ..’ ಹಾಕುತ್ತಿದ್ದಳು. ಬಸ್ಸು ಹೊರಟಿತು. ಅಜ್ಜಿ ಗುಡಿಯ ಕಲಶ ಮರೆಯಾಗುವವರೆಗೂ ‘ ಉಧೋ ‘ ಹಾಕುತ್ತಲೇ ಇದ್ದಳು. ನಂತರ ಮೌನಕ್ಕೆ ಜಾರಿದಳು. ಅದೇ ತಾನೇ ತಾಯಿಯ ಮಡಿಲಿನಿಂದ ಎದ್ದು ಬಂದ ಮಗುವಿನ ಮುಖದಂತೆ ಅಜ್ಜಿಯ ಮುಖ ಪ್ರಫುಲ್ಲವಾಗಿತ್ತು. ಶಾಂತವಾಗಿತ್ತು…..

ಮನೆ ತಲುಪಿದಾಗ ಅದಾಗಲೇ ಕತ್ತಲಾವರಿಸತೊಡಗಿತ್ತು. ಅವ್ವ ಸಂಭ್ರಮದಿಂದ ಎದುರುಗೊಂಡಳು. ಅಜ್ಜಿಯ ಮನೆಯಲ್ಲಿ ಕೈಚೀಲಗಳನ್ನಿಟ್ಟು ಬಂದ ನನ್ನನ್ನು ಪಕ್ಕಕ್ಕೆ ಕೂಡ್ರಿಸಿಕೊಂಡು “ ಹೋಗಿಬಂದ್ರಾ? ಮೂರೂ ಮಂದಿಗೆ ದೇವಿ ದರ್ಶನಾ ಆತಾ? “ ಎಂದು ಕೇಳಿದಳು ಆತುರದಿಂದ. “ ನಾನು, ಅಜ್ಜಿ ಇಬ್ರ ದೇವಿ ದರ್ಶನಾ ಮಾಡ್ಕೊಂಡು ಬಂದ್ವೆವ್ವಾ. ಅಪ್ಪ ಗುಡಿಯೊಳಗ ಬರಲಿಲ್ಲ. ನಮ್ಮನ್ನ ಗುಡಿಹತ್ರ ಬಿಟ್ಟು ಇಲ್ಲೇ ಅಡ್ಯಾಡಕೊಂಡ ಬರ್ತೀನಂತ ಹೋದಾ. ನಾವು ದರ್ಶನಾ ಮಾಡ್ಕೊಂಡು ಗುಡಿ ಹೊರಗ ಕಾಯ್ಕೊಂತ ನಿಂತಿದ್ವಿ. ಅಲ್ಲೇ ಬಂದು ನಮ್ಮನ್ನ ಕರಕೊಂಡು ಬಂದಾ.” ನನ್ನ ಉತ್ತರದಿಂದ ಅವ್ವನ ಮುಖ ಮುದುಡಿಹೋಯಿತು. ಕೊಂಚ ಹೊತ್ತು ಮೌನವಾದಳು. ನಂತರ ದೀರ್ಘವಾದ ನಿಟ್ಟುಸಿರೊಂದನ್ನು ಹೊರಹಾಕಿ “ ಹೂಂ, ಏಳ್ರಿ ಕೈಕಾಲು ತೊಳಕೊಂಡು  ಊಟಕ್ಕ ನಡೀರಿ. ಅಡಿಗಿ ಆಗೈತಿ, ಊಟಕ್ಕ ನೀಡ್ತಿನಿ “ ಎನ್ನುತ್ತಾ ಎದ್ದು ಅಡುಗೆ ಮನೆಗೆ ನಡೆದಳು. ನನಗೆ ಯಾಕೋ ಅವ್ವನನ್ನು ಕಂಡು ಪಿಚ್ಚೆನಿಸಿತು…..
                                                                                                                                     .