ದೇವಿಯ ಕರಾಮತ್ತು!!   ಭಾಗ–2

ಅಂದು ಮಂಗಳವಾರ, ದೇವಿಯವಾರ. ಅಂದು ಅಜ್ಜಿ ಎಂದಿನಂತೆ ನಸುಕಿನಲ್ಲೇ ಎದ್ದು ಚುರುಕಾಗಿ ಎಲ್ಲ ಕೆಲಸಗಳನ್ನೂ ಮುಗಿಸಿಕೊಂಡಳು. ಪೂಜೆಮುಗಿಸಿ ಬಂದ ಅಜ್ಜಿಗೆ ಅವ್ವ ನಾಷ್ಟಾ ಸಿದ್ಧಪಡಿಸಿದಳು. ಅಜ್ಜಿ ವಾಡಿಕೆಯಂತೆ ಅಡುಗೆ ಮನೆಗೆಬಾರದೇ ಮತ್ತೆ ದೇವರಮನೆಯನ್ನು ಹೊಕ್ಕಳು. ಅವ್ವ ಸ್ವಲ್ಪ ಹೊತ್ತು ಕಾಯ್ದಳು. ಅಜ್ಜಿಯ ಸುಳಿವಿಲ್ಲ. ದೇವರಮನೆಯಿಂದ ಮೆಲ್ಲಗೆ ಗೆಜ್ಜೆ ಶಬ್ದ ಕೇಳತೊಡಗಿತು. ಅವ್ವ ಕುತೂಹಲದಿಂದ ದೇವರಮನೆಯತ್ತ ನಡೆದಳು. ಅಲ್ಲಿನ ದೃಶ್ಯ ಕಂಡು ಗರ ಬಡಿದವಳಂತೆ ನಿಂತು ಬಿಟ್ಟಳು!

ದೇವಿಯ ಕರಾಮತ್ತು!!   ಭಾಗ–2

ಯಮುನಕ್ಕ ದೇವಣ್ಣ ಅಜ್ಜಿಯ ಮನೆಗೆ ಬಂದು ಹೋದಾಗಿನಿಂದ ಓಣಿಯಲ್ಲಿ ಗುಸುಗುಸು ಶುರುವಾಯಿತು. “ಯಮುನಕ್ಕ- ದೇವಣ್ಣ ದೊಡ್ಡಿ ಹತ್ರ ದೇವ್ರ ಕೇಳಾಕ ಹೋಗಿದ್ರಂತ. ದೇವಿ ಮೈಯಾಗ ಬಂದು ಹೇಳಿಕಿಕೊಟ್ಲಂತ….”. ಹೀಗೆ ಏನೇನೋ ಅಂತೆ ಕಂತೆಗಳು ಹೊರಬೀಳ ತೊಡಗಿದವು. ತನ್ನ ಮನೆಯಲ್ಲಿ ನಡೆದ ಪ್ರಸಂಗವನ್ನು ದೊಡ್ಡಿ ಯಾರಿಗೂ ಹೇಳುವ ಹಾಗಿಲ್ಲ. ಇನ್ನು ದೇವಣ್ಣನಂತೂ ಸರಿಯೇ, ಮರ್ಯಾದಾ ಪುರುಷೋತ್ತಮ!! ಓಣಿಯಲ್ಲಿ ಯಾರು ಏನೇ ಮಾತಾಡಿಕೊಂಡರೂ ಇಬ್ಬರೂ ಮುಗುಮ್ಮಾಗಿದ್ದು ಬಿಟ್ಟರು. ಇದರಿಂದ ಜನರ ಸಂಶಯ ಇನ್ನೂ ಹೆಚ್ಚಾಯಿತು! ಪರಿಣಾಮವೆಂಬಂತೆ ರಿಂದಕ್ಕ ತನ್ನ ಇಪ್ಪತ್ತೆರಡು ವಯಸ್ಸಿನ ವಿಧವೆ ಮಗಳೊಂದಿಗೆ ಅಜ್ಜಿಯ ಎದುರು ಪ್ರತ್ಯಕ್ಷಳಾದಳು! 

ರಿಂದಕ್ಕನೂ ಸಹ ಆ ಓಣಿಯ ನೇಕಾರ ಹೆಂಗಸು. ಅವಳ ನಾಲ್ಕು ಜನ ಮಕ್ಕಳಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿತ್ತು. ಆದರೆ ದೊಡ್ಡಮಗಳ ಗಂಡ ಕಾಮಾಲೆ ಉಲ್ಬಣಿಸಿ ಮದುವೆಯಾದ ವರ್ಷದೊಳಗೇ ಅಸುನೀಗಿದ್ದ. ಇವಳ ಕಾಲ್ಗುಣ ಸರಿಯಿಲ್ಲವೆಂದು ಗಂಡನ ಮನೆಯವರು ತವರಿಗಟ್ಟಿದ್ದರು. ರಿಂದಕ್ಕನ ಗಂಡನೋ ಅಸ್ತಮಾ ರೋಗಿ. ಮೂಳೆ ಚಕ್ಕಳದಂತಿರುವ ಆತ ಯಾವಾಗಲೂ ಗೂರುತ್ತ ಮನೆಯ ಹೊರಕಟ್ಟೆಯ ಮೇಲೆಕೂಡ್ರುವನು. ಅವಳ ಇಬ್ಬರು ಗಂಡುಮಕ್ಕಳು ಮಗ್ಗದ ಮೇಲೆ. ಸ್ವತಃ ರಿಂದಕ್ಕನೂ ಗಂಡನ ಮಗ್ಗದ ಮೇಲೆ ಕೂಡುತ್ತಿದ್ದಳು. ದೊಡ್ಡಮಗನಿಗೆ ಹೆಣ್ಣು ಗೊತ್ತಾಗಿತ್ತು. ಇಬ್ಬರದೂ ಒಟ್ಟಿಗೇ ಮಾಡಿದರಾಯ್ತೆಂದು ಚಿಕ್ಕವನಿಗೂ ಹೆಣ್ಣು ಹುಡುಕುತ್ತಿದ್ದಳು. ಇಂಥ ಸಮಯದಲ್ಲಿ ಮಗಳು ಮನೆ ಸೇರಿದ್ದಳು. ಮನೆಯಲ್ಲಿ ಎಲ್ಲರೂ ದುಃಖವನ್ನು ನುಂಗಿಕೊಂಡು “ಮಾಡಾಕ ದಗದ ಐತಿ, ತಿನ್ನಾಕ ಬಾನ ಐತಿ ಯಾಕ ಚಿಂತಿ ಮಾಡ್ತಿ? “ಎಂದು ಧೈರ್ಯ ಹೇಳಿ ಮಗಳಿಗೆ ನೆಲೆ ಕೊಟ್ಟಿದ್ದರು. ಆದರೆ ರಿಂದಕ್ಕನ ಮಗಳಿಗೆ ಒಂದೊಂದೇ ಸಮಸ್ಯೆಗಳು ಶುರುವಾಗ ತೊಡಗಿದವು. ಅವಳು ನೂಲುವಾಗ, ಕಂಡಕಿ ಸುತ್ತುವಾಗ “ಅನು ಬಾ….” ಎಂದು ಕರೆದಂತಾಗುವುದು. ಅವಳು ಅಡುಗೆ ಮನೆಯಲ್ಲಿ ಕೆಲಸದಲ್ಲಿದ್ದರೆ ಅವಳ ಬದಿಯಿಂದ ಯಾರೋ ಸರಕ್ಕನೆ ಹಾದು ಹೋದಂತಾಗುವುದು. ಹಣಗಿ ಕೆಚ್ಚುವುದರಲ್ಲಿ ಮಗ್ನಳಾಗಿದ್ದರೆ “ಇಲ್ಲೆ ಎಳಿಬಿಟ್ಟಿ ನೋಡು…”ಎಂದು ಹೇಳಿದಂತಾಗುವುದು! ಇದರಿಂದ ಅವಳು ಕಂಗಾಲಾದಳು. ರಿಂದಕ್ಕನಿಗೆ ಚಿಂತೆಯಾಯಿತು. ಇದು ‘ಗಾಳಿಶಕ‘ ಇರಬಹುದು. ಖುದ್ದು ಅವಳ ಗಂಡನೇ ಗಾಳಿಯಾಗಿ ಕಾಡುತ್ತಿರಬಹುದು. ಅರಾಯುಷ್ಯದಲ್ಲಿ ಸತ್ತವ ಬೇರೆ! ಎಂದು ದಿಗಿಲಾಗಿ ಅಜ್ಜಿಯ ಬಳಿ ಹೇಳಿಕೆ ಕೇಳಲು ಬಂದಿದ್ದಳು!!

ರಿಂದಕ್ಕನ ಪ್ರವರವನ್ನು ಕೇಳಿದ ಅಜ್ಜಿಗೆ ಸಿಟ್ಟೇರಿತಾದರೂ ಅದರಿಂದ ಏನೂ ಉಪಯೋಗವಿಲ್ಲವೆಂದರಿತು ಸುಮ್ಮನಾದಳು. ಕ್ಷಣಗಳ ಕಾಲಬಿಟ್ಟು ನುಡಿದಳು.  “ನೋಡರಿಂದವ್ವ, ನನ್ನ ಮೈಯಾಗ ಯಾ ದೇವೀನೂ ಬರಂಗಿಲ್ಲ, ಏನೂ ಇಲ್ಲ. ಇದೆಲ್ಲಾ ಓಣ್ಯಾಗಿನ್ಮಂದಿ ಹಬ್ಸಾಕತ್ತ ಸುಳ್ಳು ಸುದ್ದಿ. ನೀ ಇದನ್ನ ನಂಬಬ್ಯಾಡ. ನಿನ್ನ ಮಗಳಿಗೆ ಏನ್ಸಮಸ್ಯೆ ಆಗೈತಲ್ಲ ಇದ್ಕ ಬೇಕಾರ ನನ್ಗ ತಿಳಿದಿದ್ದು ಪರಿಹಾರ ಹೇಳ್ತೀನಿ. “ಅಜ್ಜಿಯ ಮಾತಿನಿಂದ ರಿಂದಕ್ಕನಿಗೆ ನಿರಾಶೆಯಾದರೂ ದೇವರಿಂದಾದರೂ ಸರಿ, ಮನುಷ್ಯರಿಂದಾದರೂ ಸರಿ ತನ್ನ ಮಗಳ ಸಮಸ್ಯೆಗೆ ಪರಿಹಾರ ಸಿಕ್ಕರೆ ಸಾಕು ಎನಿಸಿ “ಆತು ಹೇಳು ದೊಡ್ಡಿ, ನಿನ್ನ ಮಾತು ಎಂದರ ನಾವು ಉಗುಳು ಹಾಕಿದಾಟಿವ್ಯ? “ಎಂದಳು.  “ನಿನ್ನ ಮಗಳಿಗೆ ಯಾ ಗಾಳಿ ಶಕಾನೂ ಇಲ್ಲಾ ಏನೂ ಇಲ್ಲ. ಇದು ಅಕಿ ಭ್ರಮೆ. ಲಗ್ನಾಗಿ ವರ್ಷ ತುಂಬ ಗೊಡ್ದ ಅಕಿ ಗಂಡಸತ್ತಾನ. ಈ ಆಘಾತ ಅಕಿನ್ನ ಅಲ್ಲಾಡ್ಸೈತಿ. ಗಂಡ ಇಲ್ಲಾ ಅನ್ನೂ ಸಂಗ್ತಿನ್ನ ಒಪ್ಪಾಕ ಅಕಿ ಮನಸ್ಸು ಮಂಡಾಟಾ ಮಾಡಾಕತೈತಿ! ಅದ್ರ ಪರಿಣಾಮನ ಇವೆಲ್ಲಾ . “

ಅಜ್ಜಿಯ ಮಾತು ಕೇಳಿ ರಿಂದಕ್ಕನ ಮಗಳು ಅನು ಅಳುತ್ತಾ ನುಡಿದಳು “ಇದು ನನ್ನ ಭ್ರಮಾ ಅಲ್ಲ ಬೇಯಮ್ಮಾ. ಇದೆಲ್ಲಾ ಖರೇನ. ಬರೇ ಇಷ್ಟ ಆಗಿದ್ರನಾ ಸುಮ್ನಾಕ್ತಿದ್ದೆ. ಆದ್ರ….”ಅನು ಮುಂದೆ ಹೇಳಲಾಗದೇ ಕಂಬನಿ ಮಿಡಿಯುತ್ತ ತಲೆತಗ್ಗಿಸಿ ನಿಂತಳು. “ಆದ್ರೇನು?!  “ರಿಂದಕ್ಕ ಅಚ್ಚರಿಯಿಂದ ಮಗಳನ್ನು ಕೇಳಿದಳು. ಅಜ್ಜಿಯೂ ಕುತೂಹಲಗೊಂಡಳು. ”ಅದು…..ಅದೂ…, “ಎನ್ನುತ್ತ ತಾಯಿಯ ಮುಖವನ್ನೊಮ್ಮೆ ನೋಡಿ ಅನು ಅಳತೋಡಗಿದಳು. ರಿಂದಕ್ಕನಿಗೆ ಅಚ್ಚರಿಯ ಜೊತೆ ಗಾಬರಿಯೂ ಸೇರಿಕೊಂಡು “ನಾ ಬೇಕಾರ ಹೊರಗಿರ್ತೀನಿ. ದೊಡ್ಡಿ ಮುಂದ ಹೇಳು.” ಎಂದು ಹೊರಗೆ ಹೊರಡಲನು ವಾದವಳನ್ನು ತಡೆದು, “ಬ್ಯಾಡವ್ವ ನೀನೂ ಇಲ್ಲೇ ಇರು. “ಎಂದು ತಾಯಿಯನ್ನು ತಡೆದು ಅನು ಹೇಳತೊಡಗಿದಳು. “ರಾತ್ರಿ ಮೊಕ್ಕೊಂಡಾಗ ಒಂದು ಹೊತ್ತಿನ್ಯಾಗ ನನ್ನ ಗಂಡ ಬಂದು ನನ್ನ ಮೈಸವರಿದಂಗ ಆಕ್ತೈತಿ. ಅಷ್ಟ ಅಲ್ಲ ಬೇಯಮ್ಮಾ, ಅಂವ…..ನನ್ನ ಜೋಡಿ ಮೊಕ್ಕೊಂಡಂಗೂ ಆಕ್ತೈತಿ….”ಅನು ತುಂಬಾ ಕಷ್ಟದಿಂದ ಹೇಳಿ ತಲೆತಗ್ಗಿಸಿ ನಿಂತಳು! ಮಗಳ ಮಾತಿನಿಂದ ರಿಂದಕ್ಕ ಹೌಹಾರಿದಳು! “ನೀ ಊರಿಂದ ಬಂದಾಗಿಂದ ನಾ ನಿನ್ನ ಜೋಡಿ ನಮಕ್ಕೊಂತೀನಿ. ಅಂವ ಯಾವಾಗ ಬಂದ ಹೋಕ್ಕಾನ ನಿನ್ನ ಗಂಡ ನನ್ಗ ಗೊತ್ತಾಗ್ದಂಗ! “ರಿಂದಕ್ಕ ಉದ್ವೇಗದಿಂದ ನುಡಿದಳು. “ಇಲ್ಲವ್ವಾ ನಾ ಸುಳ್ಳ ಹೇಳಾಕತ್ತಿಲ್ಲ. ಬೇಕಾರ ನೋಡಿಲ್ಲೆ…”ಎನ್ನುತ್ತ ಸೆರಗು ಸರಿಸಿ ತನ್ನ ಹೊಟ್ಟೆ ತೋರಿಸಿದಳು. ಬಲಗಾಲ ಬದಿಯ ಸೀರೆಯನ್ನೆತ್ತಿ ತೊಡೆ ತೋರಿಸಿದಳು. ಹಾಲ್ಬಿಳುಪಿನ ಹೊಟ್ಟೆ– ತೊಡೆಯ ಮೇಲೆ ರಕ್ತಕರೆ ಗಟ್ಟಿದ ಹಸಿರು ಕಲೆಗಳು!! ರಿಂದಕ್ಕ ದಿಕ್ಕು ಗಾಣದೇ ಅಳುತ್ತಾ ಅಜ್ಜಿಯತ್ತ ನೋಡಿದಳು. ಅಜ್ಜಿಯ ಮುಖದ ಮೇಲೆ ಒಂದು ಮಂದಹಾಸ ತಣ್ಣನೆಯ ಗಾಳಿಯಂತೆ ಸುಳಿದು ಹೋಯಿತು! ಅಜ್ಜಿ ಆತ್ಮವಿಶ್ವಾಸ ತುಂಬಿದ ದನಿಯಲ್ಲಿ ನುಡಿದಳು “ಈಗ ನೀ ಮಗಳ ಕರ್ಕೊಂಡು ಹೋಗು. ನಾಳೆ ನಿನ್ನ ಗಂಡನ್ನ ಕರ್ಕೊಂಡು ಬಾ”.

ಮರುದಿನ ರಿಂದಕ್ಕ ಬೆಳಿಗ್ಗೆ ಬೆಳಿಗ್ಗೆಯೇ ಗಂಡನೊಂದಿಗೆ ಹಾಜರಾದಳು. ಅವಳು ರಾತ್ರಿಯೆಲ್ಲಾ ನಿದ್ದೆ ಮಾಡಿಲ್ಲವೆಂದು ಊದಿಕೊಂಡು ಕೆಂಪಾದ ಅವಳ ಕಂಗಳೇ ಹೇಳುತ್ತಿದ್ದವು! ರಿಂದಕ್ಕ ಒಂದೇ ದಿನದಲ್ಲಿ ಬಳಲಿ ಬೆಂಡಾಗಿದ್ದಳು! ಅಜ್ಜಿ ಅವರಿಬ್ಬರನ್ನೂ ಪಡಸಾಲೆಗೆ ಕರೆತಂದು ಹೇಳಿದಳು “ನಿಮ್ಮ ಮಗಳಿಗೆ ದೆವ್ವ–ಭೂತ ಯಾವುದೂ ಇಲ್ಲಾ. ಅಕಿ ಗಿರೂದು ಬರೀ ಭ್ರಮೆ! ಅಕಿ ತನ್ನ ಗತಕಾಲ ಮರ್ಯಾಕ ತಯಾರಿಲ್ಲ. ಮರೀದಿದ್ರ ಬ್ಯಾಡಾ ಹೋಗ್ಲಿ, ಅದನ್ನ ಅರಗಿಸಿ ಕೊಳ್ಳಾಕೂ ತಯಾರಿಲ್ಲ. ಅರಗೀಸಿಕೊಂಡಾಳನ ಹ್ಯಾಂಗ ಪಾಪ. ಇನ್ನೂ ಸಣ್ಣ ವಯಸ್ಸು. ಲಗ್ನಾಗಿ ಒಂದು ವರ್ಷಾನೂ ತುಂಬಿದ್ದಿಲ್ಲಾ. ಮತ್ತ ಅಕಿಗೆ ಇದೆಲ್ಲಾ ಸಾಜೀಕ. ನೀವು ಅಕಿಗೆ ಇನ್ನೊಂದು ಮದುವಿ ಮಾಡಿದ್ರ ಸರಿಹೊಕ್ಕಾಳ ನೋಡು…..”ಇನ್ನೊಂದು ಮದುವೆ ಎಂಬ ಶಬ್ದ ಕೇಳಿ ಇಬ್ಬರೂ ಹಾವು ಕಂಡವರಂತೆ ಮೆಟ್ಟಿ ಬಿದ್ದರು! ರಿಂದಕ್ಕನ ಗಂಡ ಅಂಥ ಗೂರಲಿನಲ್ಲಿಯೂ ಮೈ ಮೇಲೆ ಗಣ ಬಂದವರಂತೆ ಹಾರಾಡತೊಡಗಿದ. ಪರಿಣಾಮ ಉಬ್ಬಸ ಇನ್ನೂ ಹೆಚ್ಚಾಗಿ “ಸೊಂಯೀ….ಸೊಂಯೀ….,” ಮಾಡುತ್ತ ಕುಳಿತ! ರಿಂದಕ್ಕ ಗಂಡನ ಬೆನ್ನು ನೀವುತ್ತ “ಇದೆಲ್ಲಾ ಹ್ಯಾಂಗ ಆಕ್ತೈತಿ ಬೇ ದೊಡ್ಡಿ?  ಇದಕ್ಕ ನಮ್ಮ ಸಂಪ್ರದಾಯ ಒಪ್ಪಂಗಿಲ್ಲ. ಸಮಾಜ ಒಪ್ಪಂಗಿಲ್ಲ. ಸಮಾಜಕ್ಕೂ ಒಂದು ರೀತಿ–ರಿವಾಜು ಅಂತ ಒಂದಿರುತ್ತಲ್ಲ? “ರಿಂದಕ್ಕ ಹತಾಶೆಯಿಂದ ನುಡಿದಳು.  “ಸಮಾಜ–ರೀತಿ–ರಿವಾಜು ಇವೆಲ್ಲಾ ಯಾರ ಸಲುವಾಗಿ ಆಗಿದ್ದಂತಿನೀ? ಎಲ್ಲಾ ಮನಷ್ಯಾರ ಬಾಳೇ ಚಂದಂಗ ಇರ್ಬೇಕು ಅಂತನ. ನಿನ್ನ ಮಗಳ ಬಾಳೇಕ ಅವು ಕುತ್ತಾದಾಗ ಅವುನ್ನ ತೊಗೊಂಡು ಏನ್ಮಾಡ್ತೀರಿ? “ಇನ್ನೂ ಎರಡ ಗಂಡು ಹುಡ್ರದಾವಲ್ಲ , ಅವ್ರಗತಿ? “ರಿಂದಕ್ಕನ ಪ್ರಶ್ನೆ. “ಒಂದು ಕೆಲ್ಸಮಾಡ್ರಿ. ಇಬ್ರೂ ಮಕ್ಕಳ್ದು ಲಗ್ನಾ ಮಾಡಿ ಮುಗುಸ್ರಿ. ಆಮ್ಯಾಕ ಇಕಿದು ಮಾಡ್ರಿ. ಎಲ್ಲಾ ಮಕ್ಕಳ್ದೂ ಲಗ್ನಾನ ಮುಗಿತೈತಿ. ಇನ್ನ ಮಂದಿನ್ನ ತೊಗೊಂಡು ಏನ್ಮಾಡ್ತಿ ನೀ? “ಅಜ್ಜಿಯ ಸಮಜಾಯಿಷಿ. “ಮುಂದ ಮೊಮ್ಮಕ್ಕಳ ಕಾಲಕ್ಕರ ಇದು ಕಗ್ಗಂಟಾಗಿ ಕಾಡೂದ ಅಲ್ಲ? “ರಿಂದಕ್ಕನ ಸಂಶಯ. “ಮೊಮ್ಮಕ್ಕಳ ಕಾಲ ತನಕಾ ಇರೋರ್ಯಾರ, ಸಾಯೋರ್ಯಾರ. ಇವತ್ತಿದ್ದಿದ್ದು ನಾಳಿಗಿ ರಂಗಿಲ್ಲ. ಇನ್ನ ಮುಂದಿನ ಚಿಂತಿ ಈಗ್ಯಾಕ? ಮುಂದಿನ ದಿನಮಾನಾದಾಗ ಇನ್ನೂ ಏನೇನ ಬದಲಾವಣೆಯಾಗೂದೈತೋ ಏನೋ ಯಾರ ಕಂಡಾರು? ಸಧ್ಯಕ್ಕ ಬೀಸೋ ದೊಣ್ಣೆಯಿಂದ ತಪ್ಪಿಸಿ ಕೊಳ್ಳರಿ ಸಾಕು“ ಅಜ್ಜಿಯ ಹಿತನುಡಿ! 

ಅಜ್ಜಿಯ ಸಲಹೆಯನ್ನು ಕೇಳಿ ಇಬ್ಬರೂ ಮೌನಕ್ಕೆ ಜಾರಿದರು. ಹಾಗೇಯೇ ಸುಮಾರು ಹೊತ್ತು ಕುಳಿತಿದ್ದು, ಅಜ್ಜಿ ಕಾಯಿಸಿ ಕೊಟ್ಟ ಕಷಾಯ ಕುಡಿದು ಸೋತ ಕಾಲುಗಳನ್ನೆಳೆಯುತ್ತ ಮನೆ ದಾರಿ ಹಿಡಿದರು. ಮುಂದಿನ ಆರು ತಿಂಗಳ ಅವಧಿಯಲ್ಲೇ ಅವರ ಇಬ್ಬರೂ ಗಂಡು ಮಕ್ಕಳ ಮದುವೆಯಾಗಿ ಚೆಂದದ ಸೊಸೆಯಂದಿರು ಮನೆ ತುಂಬಿದರು. ಅದಾಗಿ ನಾಲ್ಕೈದು ತಿಂಗಳುಗಳಲ್ಲಿ ಮಗಳ ಮದುವೆಯೂ ಆಯಿತು, ಬರೀ ಕುಟುಂಬದವರ ಸಮ್ಮುಖದಲ್ಲಿ! ಗಂಡನ ಮನೆಗೆ ಹೋಗಿ ಬಂದ ರಿಂದಕ್ಕನ ಮಗಳು ಕಳೆಕಳೆಯಾಗಿದ್ದಳು. ವರ್ಷೊಪ್ಪತ್ತಿನಲ್ಲಿ ಮುದ್ದಾದ ಹೆಣ್ಣುಮಗುವಿನ ತಾಯಿಯೂ ಆದಳು! ಮಗುವಿನೊಂದಿಗೆ ಅಜ್ಜಿಯ ಬಳಿ ಬಂದು ಆಶೀರ್ವಾದ ಪಡೆದೂ ಹೋದಳು! ಅಜ್ಜಿ ಮಗುವಿನ ಕೈಯಲ್ಲಿ ಇಪ್ಪತ್ತು ರೂಪಾಯಿಯ ನೋಟನ್ನಿಟ್ಟು ಕಳುಹಿಸಿದಳು.

ದಿನಗಳು ನಿಲ್ಲದೇ ಸಾಗುತ್ತಿದ್ದವು. ರಿಂದಕ್ಕನ ಕೇಸೂ ದೇವಣ್ಣನ ಕೇಸಿನಂತೆ ‘ಒಳಮುಚುಗ‘ ಆಗಿಹೋಯಿತು! ಯಾರ ಮುಂದೂ ಆಡಲೂಬಾರದು ಅನುಭವಿಸಲೂ ಬಾರದು! ಅಜ್ಜಿಯ ಮೇಲೆ ಜನರ ನಿರೀಕ್ಷೆ ಹೆಚ್ಚುತ್ತ ಹೋಯಿತು. ಒಂದಿಬ್ಬರು–ಎಲ್ಲಮ್ಮನ ಕಟ್ಟಾಭಕ್ತರು “ದೇವಿ ಒಲತಾಳ ಅಂದಮ್ಯಾಲೆ ಅಕಿ ಸೇವಾ ಮಾಡಬೇಕವಾ. ದೇವಿಬೇಕು, ಅಕಿ ಸೇವಾ ಬ್ಯಾಡಂದ್ರ ಹ್ಯಾಂಗ? “ಎಂದು ಕಟುವಾಗಿ ನುಡಿದರು. ಅಜ್ಜಿಗೆ ರೇಗಿಹೋಯಿತು. ಅವಳು ಕೆಲದಿನ ಮೌನವಾಗಿ ಚಿಂತಿಸಿದಳು. ಅಂದು ಸೋಮವಾರ ಸಂಜೆಯ ಸಮಯ. ಹಿಂಜಿದ ಅರಳೆಯನ್ನು ಮುಂದಿಟ್ಟುಕೊಂಡು ಬತ್ತಿಹೊಸೆಯುತ್ತಿದ್ದವಳು ದಿಡಗ್ಗನೆ ಎದ್ದು ದೇವರ ಮನೆಗೆ ಹೋದಳು. ಜಗುಲಿಯ ಮೇಲಿನ ಎಲ್ಲಮ್ಮನ ಪಡ್ಡಲಿಗೆ ತೆಗೆದುಕೊಂಡು ಮೆಲ್ಲನೆ ಸವರಿದಳು. ತುಸು ಹೊತ್ತು ಅದನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದು ನಂತರ ಏನೋ ನಿರ್ಣಯಕ್ಕೆ ಬಂದವಳಂತೆ ಯಥಾಪ್ರಕಾರ ಅದನ್ನು ಜಗುಲಿಯ ಮೇಲಿಟ್ಟು ಪಡಸಾಲೆಗೆ ಬಂದು ಮತ್ತೆ ಬತ್ತಿಹೊಸೆಯುವ ಕಾಯಕದಲ್ಲಿ ಮಗ್ನಳಾದಳು. ಯಾಕೋ ಅಜ್ಜಿಯ ಮುಖ ಎಂದಿಗಿಂತ ಹೆಚ್ಚಿನ ಆತ್ಮವಿಶ್ವಾಸದಿಂದ ಬೆಳಗುತ್ತಿತ್ತು! ಆದರೆ ಅದು ಅಜ್ಜಿಯ ಮರುದಿನದ ಹೊಸ ಅವತಾರದ ಪೀಠಿಕೆ ಅಂತ ಯಾರು ಕಂಡಿದ್ದರು? 

ಅಂದು ಮಂಗಳವಾರ, ದೇವಿಯವಾರ. ಅಂದು ಅಜ್ಜಿ ಎಂದಿನಂತೆ ನಸುಕಿನಲ್ಲೇ ಎದ್ದು ಚುರುಕಾಗಿ ಎಲ್ಲ ಕೆಲಸಗಳನ್ನೂ ಮುಗಿಸಿಕೊಂಡಳು. ಪೂಜೆಮುಗಿಸಿ ಬಂದ ಅಜ್ಜಿಗೆ ಅವ್ವ ನಾಷ್ಟಾ ಸಿದ್ಧಪಡಿಸಿದಳು. ಅಜ್ಜಿ ವಾಡಿಕೆಯಂತೆ ಅಡುಗೆ ಮನೆಗೆಬಾರದೇ ಮತ್ತೆ ದೇವರಮನೆಯನ್ನು ಹೊಕ್ಕಳು. ಅವ್ವ ಸ್ವಲ್ಪ ಹೊತ್ತು ಕಾಯ್ದಳು. ಅಜ್ಜಿಯ ಸುಳಿವಿಲ್ಲ. ದೇವರಮನೆಯಿಂದ ಮೆಲ್ಲಗೆ ಗೆಜ್ಜೆ ಶಬ್ದ ಕೇಳತೊಡಗಿತು. ಅವ್ವ ಕುತೂಹಲದಿಂದ ದೇವರಮನೆಯತ್ತ ನಡೆದಳು. ಅಲ್ಲಿನ ದೃಶ್ಯ ಕಂಡು ಗರ ಬಡಿದವಳಂತೆ ನಿಂತು ಬಿಟ್ಟಳು!! ಅಜ್ಜಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಹಣೆಗೆ ಭಂಡಾರ ಬಳಿದುಕೊಂಡು ಕೈಯಲ್ಲಿ ಎಲ್ಲಮ್ಮನ ಪಡ್ಡಲಿಗೆ ಹಿಡಿದು ಹೊರಡಲನುವಾಗಿ ನಿಂತಿದ್ದಳು!! ಅವ್ವ ಸಾವರಿಸಿಕೊಂಡು “ಇದೇನ್ ದೊಡ್ಡಿ ಎಲ್ಲಿ ಹೊಂಟಿ?! “ಎಂದು ಕೇಳಿದಳು. ಅವ್ವನ ಮಾತಿಗೆ ಅಜ್ಜಿ ನಿರುದ್ವಿಗ್ನತೆಯಿಂದ “ನಾನು ಒಂದೈದು ಮನಿ ಜೋಗಾಡಿ ಬರ್ತೀನಿ. ಇವತ್ತ ದೇವಿವಾರಲ್ಲ? “ಎನ್ನುತ್ತ ‘ಘಲ್…..ಘಲ್…..ಘಲ್…..’ ಎಂದು ಶಬ್ದ ಮಾಡುತ್ತ ಅವ್ವನ ಉತ್ತರಕ್ಕೂ ಕಾಯದೇ ಹೊರಟು ಬಿಟ್ಟಳು!! ಅವ್ವ ದಿಗ್ಭ್ರಮೆಯಿಂದ ಅಜ್ಜಿ ಹೋಗುವುದನ್ನೇ ನೋಡುತ್ತ ನಿಂತು ಬಿಟ್ಟಳು! 

ಮನೆಯಿಂದ ಹೊರಬಿದ್ದವಳೇ ಅಜ್ಜಿ ಮೊದಲು ತನ್ನನ್ನು ದೇವಿಯ ಸೇವೆಗಾಗಿ ಪೀಡಿಸುವ ಕಟ್ಟಾಭಕ್ತರ ಮನೆ ಮುಂದೆ ನಿಂತು “ಯಕ್ಕಯ್ಯ ಜೋಗ .. ಉಧೋ.. ಉಧೋ.. ”ಎಂದು ಜೋಗು ಹಾಕಿದಳು!! ಎಂದಿನಂತೆ ಜೋಗಮ್ಮನಿಗೆ ನೀಡಲು ಬೊಗಸೆ ತುಂಬ ಕಾಳು ತಂದ ಆ ಭಕ್ತೆ ಅಜ್ಜಿಯನ್ನು ಕಂಡು ಹೌಹಾರಿ ಕ್ಷಣ ಕಾಲ ಗರ ಬಡಿದವಳಂತೆ ನಿಂತಳು. ನಂತರ ಸಾವರಿಸಿಕೊಂಡು “ದೊಡ್ಡಿ.. ಏನಬೇ ಇದು..? “ಎಂದು ತೊದಲಿದಳು. “ಏನ್ಹಿಂಗ ಕೇಳ್ತಿ? ನೀವ ಹೇಳಿದ್ರಲ್ಲ ದೇವಿ ಸೇವಾ ಮಾಡಂತ. ಅದ ಇದು. ಹಂಗ್ಯಾಕ ಕಂಬ ನಿಂತಂಗ ನಿಂತಿ ನೀಡು. ನಾ ಮುಂದಿನ ಮನೀಗೆ ಹೋಗ್ಬೇಕು ಹೊತ್ತಾಕೈತಿ “ಎಂದಳು ಅಜ್ಜಿ! ಅವಳು ಯಂತ್ರದಂತೆ ಮುಂದೆ ಬಂದು ಪಡ್ಡಲಿಗೆಯಲ್ಲಿ ಕಾಳು ಹಾಕಿದಳು. ಅಜ್ಜಿ ಅವಳ ಹಣೆಗೆ ಭಂಡಾರವನ್ನು ಹಚ್ಚಿ ಮುನ್ನಡೆದಳು…

ಅಜ್ಜಿ ಐದು ಮನೆ ಜೋಗಾಡಿ ಬಂದು ಪಡ್ಡಲಿಗೆ ಜಗುಲಿಯ ಮೇಲಿಟ್ಟು, ಗೆಜ್ಜೆ ಕಳಚಿ, ನಾಷ್ಟಾ ಮಾಡಿದಳು–ಯಾವುದೇ ಉದ್ವೇಗವಿಲ್ಲದೇ ಶಾಂತವಾಗಿ! ಪಡ್ಡಲಿಗೆಯಲ್ಲಿನ ಅಕ್ಕಿಯನ್ನು ತೆಗೆದು, ಎರಡು ಹಿಡಿಯಷ್ಟು ಒಂದು ಸಣ್ಣ ಡಬರಿಯಲ್ಲಿ ಹಾಕಿ ತೊಳೆದಿಟ್ಟಳು. ಉಳಿದ ಅಕ್ಕಿಯನ್ನು ಒಂದು ಕೈಚೀಲದಲ್ಲಿ ಹಾಕಿ “ಗುಡ್ಡಕ್ಕ ಹೋದಾಗ ಜೋಗಮ್ಮ ಗುಳ್ಗೆ ಪಡ್ಲಿಗಿ ತುಂಬ್ಸು ಮುಂದ ಕೊಟ್ಬಂದ್ರಾತು. “ಎನ್ನುತ್ತ ಗಂಟು ಕಟ್ಟಿಟ್ಟಳು. ತೊಳೆದಿಟ್ಟ ಅಕ್ಕಿಯಿಂದ ಮಧ್ಯಾಹ್ನ ಅನ್ನ ಮಾಡಿ “ದೇವಿ ಪ್ರಸಾದ ಉಣ್ಣನ ಬರ್ಯಲಾ“ ಎನ್ನುತ್ತ ಮೊಮ್ಮಕ್ಕಳನ್ನು ಕರೆದುಕೊಂಡು ಉಂಡಳು!! 

ಅಜ್ಜಿಯ ಹೊಸ ಅವತಾರದಿಂದ ಓಣಿಯಲ್ಲಿ ಎಲ್ಲರ ಬಾಯಿಗಳೂ ಬಂದ್ ಆದವು! ದೇವಿಯ ಸೇವೆಗಾಗಿ ಅವಳನ್ನು ಪೀಡಿಸುವವರು ಇಲ್ಲವೆನ್ನುವಷ್ಟು ಕಡಿಮೆಯಾದರು! ಅಜ್ಜಿ ಈಗ ಯಾವುದೇ ಕಿರಿಕಿರಿಯಿಲ್ಲದೇ ನಿರಾಳವಾಗಿ ಇರತೊಡಗಿದಳು. ಆದರೆ ಅಜ್ಜಿಯ ಎಲ್ಲಾ ಕಿರಿಕಿರಿ,  ದುಗುಡ–ದುಮ್ಮಾನಗಳು ಅವ್ವನಿಗೆ ಬಂದು ಸುತ್ತಿಕೊಂಡು ಅವಳ ಮನಸ್ಸಿನ ಶಾಂತಿಯನ್ನು ಕದಡಿದವು! ತನ್ನನ್ನು ತಾಯಿಯಂತೆ ಪ್ರೀತಿಸುವ ದೊಡ್ಡಮ್ಮ , ಎಂಟು–ಹತ್ತು ಮನೆಗಳ ಒಡತಿ ತನ್ನ ಪ್ರೀತಿಯ ದೊಡ್ಡಮ್ಮ , ಬಡವರಿಗೆ, ಅನಾಥರಿಗೆ, ಮಠ–ಮಾನ್ಯಗಳಿಗೆ ಕೊಡುಗೈ ದಾನಿಯಾದ ದೊಡ್ಡಮ್ಮ ಇಂದು ಹಡಲಿಗೆ ಹಿಡಿದು ಮನೆ ಮನೆಗೆ ಭಿಕ್ಷೆಗೆ ಹೋಗುತ್ತಿದ್ದಾಳೆ! ಅದನ್ನೇ ದೇವಿಯ ಪ್ರಸಾದವೆಂದು ಉಣ್ಣುತ್ತಿದ್ದಾಳೆ! ಜೊತೆಗೆ ಮೊಮ್ಮಕ್ಕಳನ್ನೂ ಕರೆದುಕೊಂಡು!! ಅವ್ವನಿಗೆ ಹೊಟ್ಟೆಯಲ್ಲಿ ಕಲಕಿದಂತಾಯಿತು. ‘ಮಂಗಳವಾರ ದಿನ ಅಜ್ಜಿಯ ಜೊತೆ ಉಣ್ಣಬೇಡಿ‘ ಎಂದು ಮಕ್ಕಳಿಗೆ ಹೇಳಲೂ ಅವಳ ಬಾಯಿ ಏಳದು! ತನ್ನನ್ನು ಹೊಟ್ಟೆಯಲ್ಲಿ ಹುಟ್ಟಿದ ಮಗಳಂತೆ ನೋಡಿಕೊಂಡ ದೊಡ್ಡಮ್ಮನ ಪ್ರೀತಿ–ವಾತ್ಸಲ್ಯಗಳು ಅವಳ ಎದೆ ತುಂಬಿ ಬಾಯಿ ಕಟ್ಟುತ್ತದೆ!! ಏನು ಮಾಡುವುದು? ಅವ್ವ ಕಣ್ಣೀರು ಗರೆಯುತ್ತ ಕುಳಿತಳು. ಅವ್ವನ ದುಃಖ ನೋಡಲಾಗದೆ ಅಪ್ಪ ನುಡಿದ“ ನಿಮ್ಮ ದೊಡ್ಡವ್ವ ಮಾಡಿದ್ರಾಗ ತಪ್ಪೇನೈತಿ? ಊರಮಂದಿ ಎಲ್ಲಾ ಹೇಳಿಕಿ ಹೇಳಂತ ತಲಿ ತಿಂದ್ರ ಏನ್ಮಾಡ್ಬೇಕು ಅವ್ರು ಪಾಪ. ಪುಣ್ಯಾಕ ಹಡ್ಲಿಗಿ ಹಿಡಿದುಕೊಂಡು ಊರಾಗ ಹೊಂಟ್ರು! ನಾ ಎಲ್ಲಿ ಹೇಳಿಕಿ ಹೇಳ್ಕೋಂತ ಕುಂತ ಬಿಡ್ತಾರೋ ಅಂತ ಹೆದ್ರಿ ಬಿಟ್ಟಿದ್ದೆ!! ಅಡ್ಡಿಯಿಲ್ಲ, ನಿಮ್ಮ ದೊಡ್ಡಿದೂ ತಲಿ ಓಡತೈತಿ! “ಅಪ್ಪನ ಸುನಕ್ಕ.  “ಅಲ್ಲೇ ನಮ್ಮ ದೊಡ್ಡವ್ವ ಮನಿ ಮನಿ ಭಿಕ್ಷೆ ಬೇಡಾಕತ್ತಾಳಾ. ಇಲ್ಲೇ ನಿಮ್ಗ ನಗಚಾಟ್ಗಿ ಆಗೈತಲ್ಲ? “ಅವ್ವ ಕನಲಿದಳು.  “ಭಿಕ್ಷೆ ಅಂದ್ರ ಅಷ್ಟ ಸಸಾರಂತ ಯಾಕ ತಿಳೀತಿ? ಅಂಥಾ ಬುದ್ಧನಂಥಾ ಗುರುನ ಭಿಕ್ಷೆ ಬೇಡಿಲ್ಲನ? “ಅಪ್ಪನ ಸಮಾಧಾನ. ಅಪ್ಪ ಹೇಳುವ ಬುದ್ಧಗುರು ಯಾರೆಂದು ಅವ್ವನಿಗೆ ತಿಳಿಯಲಿಲ್ಲ. ಅವಳು ಪೂಜಿಸುವ ದೇವರ ಲಿಸ್ಟಿನಲ್ಲಿ ಬುದ್ಧ ಇರಲಿಲ್ಲ. ಅವ್ವ ಮಿಕಮಿಕನೇ ಅಪ್ಪನ ಮುಖ ನೋಡತೊಡಗಿದಳು. “ಹೋಗ್ಲಿ , ನಿನ್ನ ದೇವ್ರ ಶಿವಾ ಅದಾನಲ್ಲ–ಅವ್ನೂ ಭಿಕ್ಷೆ ಬೇಡಿಲ್ಲನ? ನೀನ ಹಾಡ್ತಿರ್ತಿಯಲ್ಲ , ‘ಶಿವನು ಭಿಕ್ಷಕ್ಕೆ ಬಂದ ನೋಡುಬಾರೆ, ಹರನು ಭಿಕ್ಷಕ್ಕೆ ಬಂದ ನೀಡುಬಾರೆ…,’ಅಂತ “ಅಪ್ಪ ಕೈಯಲ್ಲಿ ತಾಳ ಹಾಕುತ್ತಾ ಅವ್ವನಿಗೆ ಕಿಟಲೆ ಮಾಡಿದ. ಇಂತಹ ಗಂಡನ ಜೊತೆ ವಾದ ಮಾಡಿ ಪ್ರಯೋಜನವಿಲ್ಲವೆಂದು ಅವ್ವ ಧುಮು ಧುಮು ಎನ್ನುತ್ತ ಎದ್ದು ಅಡುಗೆ ಮನೆಗೆ ನಡೆದಳು. “ಹ್ಹಾ…..ಹ್ಹಾ……ಹ್ಹಾ…...”ಬೆಳದಿಂಗಳಂಥಾ ಹಲ್ಲುಗಳನ್ನು ತೆಗೆದು, ಕೆನ್ನೆಗಳ ಮೇಲೆ ಗುಳಿ ಬೀಳಿಸುತ್ತ ಅಪ್ಪ ಮುಕ್ತವಾಗಿ ನಕ್ಕ! ಈ ಕಿರಿಪಿರಿಗಳಿಗೆಲ್ಲ ಕಲಶವಿಟ್ಟಂತೆ ಮುಂದಿನ ದಿನಗಳಲ್ಲಿಇನ್ನೊಂದು ಸ್ವಾರಸ್ಯಕರವಾದ ಘಟನೆ ಜರುಗಿತು!!

                                                                                                      ( ಮುಂದುವರೆಯುವುದು…..)