ಆಡು ಮಾತು ಮತ್ತು ಸರಳ ನಿರೂಪಣೆಯ “ಆಫ್ ದಿ ರೆಕಾರ್ಡ್…”

ಆಡು ಮಾತು ಮತ್ತು ಸರಳ ನಿರೂಪಣೆಯ “ಆಫ್ ದಿ ರೆಕಾರ್ಡ್…”

ಮುಖ್ಯವಾಹಿನಿ ಪತ್ರಿಕೋದ್ಯಮದಲ್ಲಿ ಕಾರ್ಯನಿರತರಾದವರಲ್ಲಿ ಬಹುತೇಕರು ಪ್ರತಿದಿನದ ಅವರ ಜವಾಬ್ದಾರಿಯನ್ನು ನಿರ್ವಹಿಸುವುದನ್ನು ಬಿಟ್ಟು ಸೃಜನಶೀಲ ಬರವಣಿಗೆಯತ್ತ ಅಷ್ಟಾಗಿ ಗಮನ ಹರಿಸುವುದಿಲ್ಲ. ಅದು ರಾಜಕೀಯ, ಗ್ರಾಮೀಣ, ಚಲನಚಿತ್ರ, ಕ್ರೀಡೆ, ಸಂಸ್ಕೃತಿ, ಮಾರುಕಟ್ಟೆ ಯಾವುದೇ ವಿಭಾಗವಿರಬಹುದು. ಅವರ ಬೀಟ್‌ಗೆ ಸಂಬಂಧಿಸಿದ ವರದಿ ದಾಖಲಿಸಿ ಸುಮ್ಮನಾಗುವವರೇ ಹೆಚ್ಚು. ಸಾಮಾನ್ಯವಾಗಿ ಅದು ಶೀಘ್ರ ಲಿಪಿಕಾರರ ಕೆಲಸಕ್ಕಿಂತ ಭಿನ್ನವಾಗಿರುವುದಿಲ್ಲ. ಆದರೆ ಪತ್ರಿಕೋದ್ಯಮದ ಭಾಷೆಯಲ್ಲಿರುತ್ತದೆ. ಯಾವುದೇ ಸುದ್ದಿಗೋಷ್ಠಿಯಲ್ಲಿ ಆನ್ ದಿ ರೆಕಾರ್ಡ್ ಸುದ್ದಿಗಳಿಗಿಂತ ಮುಖ್ಯವಾದ ಸುದ್ದಿ ಆಫ್ ದಿ ರೆಕಾರ್ಡ್‌ನಲ್ಲೇ ಇರುತ್ತದೆ. ವೃತ್ತಿನಿಷ್ಠ ಪತ್ರಕರ್ತನ ಮನಸ್ಸಿಗೆ ಅದನ್ನು ಗ್ರಹಿಸುವ ಶಕ್ತಿ ಇರಬೇಕು.  ಅಧಿಕೃತ ಸುದ್ದಿಯಲ್ಲದೇ ನಿಜಕ್ಕೂ ಮರೆಮಾಚಿದ್ದನ್ನು ಸಂಗ್ರಹಿಸಿ ಸೂಕ್ತ ಸಂದರ್ಭದಲ್ಲಿ ಬರೆಯಬಹುದು. ವಿಧಾನಸೌಧಕ್ಕೆ ತೆರಳುವ ವರದಿಗಾರರಿಗೆ ಇಂಥ ಅದೆಷ್ಟೋ ಸಂಗತಿಗಳು ಇನ್ನೆಲ್ಲರಿಗಿಂತ ಸುಲಭವಾಗಿ ಸಿಗುತ್ತದೆ. ಅದನ್ನು ಆಲಿಸುವ ಕಿವಿ ಇರಬೇಕು, ಬರೆಯಬೇಕೆಂಬ ಮನಸ್ಸಿರಬೇಕು ಅಷ್ಟೇ. ಇಂಥ ಬರಹಗಳಿಗೆ ಒಂದು ಮಿತಿ ಇರುತ್ತದೆ. ಹೇಗಾದರೂ ಬರೆಯಲೇಬೇಕೆಂಬ ಹಠ ಇರುವ ಪತ್ರಕರ್ತ ಅದನ್ನು ವಿಡಂಬನೆಯ ರೂಪದಲ್ಲಾದರೂ ಬರೆದು ಓದುಗರಿಗೆ ಮುಟ್ಟಿಸಬೇಕಾದ್ದನ್ನು ಮುಟ್ಟಿಸಿ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಇದರಿಂದ ಗೊತ್ತಾದ ಸಂಗತಿಯನ್ನು ಬರೆಯಲಿಲ್ಲ ಎಂಬ ಪಾಪಪ್ರಜ್ಞೆಯಿಂದಲೂ  ಮುಕ್ತವಾಗಬಹುದು. ರಾಜಕೀಯದಲ್ಲಿ ಯಾರೂ ಕಾಯಂ ಶತ್ರುಗಳೂ ಇಲ್ಲ, ಕಾಯಂ ಮಿತ್ರರೂ ಇಲ್ಲ ಎಂಬ ಹಳಸಲು ಮಾತೊಂದಿದೆ ಆಗಿಂದಾಗ್ಗೆ ನಡೆಯುವ ರಾಜಕೀಯ ಸ್ಥಿತ್ಯಂತರಗಳ ನಡುವೆ ಹೊಸದಾಗಿ ಚಿಗುರಿದ ಸ್ನೇಹ, ಮುರಿದ ಸ್ನೇಹಗಳೂ ಕಾಣಸಿಗುತ್ತವೆ. ಆನ್ ದಿ ರೆಕಾರ್ಡ್ ಈ ಪಲ್ಲಟಗಳ ಕಾರಣಗಳನ್ನು ಸಂಬಂಧಪಟ್ಟವರು ಏನೇ ಹೇಳಿದರೂ ತೆರೆಮರೆಯ ಸತ್ಯವನ್ನು ಹೇಳುವುದು ಪತ್ರಕರ್ತನ ಕರ್ತವ್ಯ. 

ಈ ಕೆಲಸವನ್ನು ಪತ್ರಕರ್ತ ಗೆಳೆಯ ಎಸ್.ಲಕ್ಷ್ಮಿನಾರಾಯಣ ಸಮರ್ಥವಾಗಿ ನಿರ್ವಹಿಸಿದ್ದಾರೆ ಎನ್ನುವುದಕ್ಕೆ ಅವರ ಎರಡನೇ ಕೃತಿ ಆಫ್ ದಿ ರೆಕಾರ್ಡ್ ಪಾಲಿಟಿಕ್ಸ್ ಸಾಕ್ಷಿಯಾಗಿದೆ. ಈ ಮೊದಲು ಪ್ರಜಾವಾಣಿಯಲ್ಲಿ  ಟಿ.ಎಸ್.ರಾಮಚಂದ್ರರಾವ್ ಅವರು ಬರೆಯುತ್ತಿದ್ದ ಛೂಬಾಣ, ಲಂಕೇಶ್ ಪತ್ರಿಕೆಯಲ್ಲಿ ಟಿ.ಎನ್.ಸೀತಾರಾಮ್ ಅವರು ಬರೆಯುತ್ತಿದ್ದ ಅಣಕ ಎಂಬ ಅಂಕಣಗಳು ರಾಜಕೀಯ ವಿಡಂಬನೆಯ ಅತ್ಯುತ್ತಮ ಉದಾಹರಣೆಗಳಾಗಿವೆ. ಟಿ.ಎಸ್.ಆರ್. ಕಾರ್ಯನಿರತ ಪತ್ರಕರ್ತರಾಗಿದ್ದರಿಂದ ಅವರ ಬರವಣಿಗೆ ಎರಡು ಸಾಲುಗಳ ಮಧ್ಯೆ ಅವಿತಿದ್ದ ಸತ್ಯವನ್ನು ಹೊರತೆಗೆದು ಛೇಡಿಸುವಲ್ಲಿ ಯಶಸ್ವಿಯಾಗುತ್ತಿತ್ತು. ಆದರೆ ಟಿ.ಎನ್.ಸೀತಾರಾಮ್ ಸ್ವತಃ ಪತ್ರಕರ್ತರಲ್ಲ. ಸಾಹಿತ್ಯ, ರಂಗಭೂಮಿ, ಚಲನಚಿತ್ರ ಕ್ಷೇತ್ರಗಳ ಅನುಭವ, ಸಮಾಜವಾದಿ ಆಂದೋಲನದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರಿಂದ ಅವರ ರಾಜಕೀಯ ಅಣಕ ಬೇರೆಯೇ ಆಯಾಮ ಪಡೆದುಕೊಂಡಿತ್ತು. ಹೆಚ್ಚು ಜನಪ್ರಿಯವಾಗಿತ್ತು.

ಆದರೆ ಲಕ್ಷ್ಮಿ ನಾರಾಯಣ ಕಾರ್ಯನಿರತ ಪತ್ರಕರ್ತರು. ಈ ಮೊದಲು ಇತರೆ ಕೆಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ನಂತರ ಸದ್ಯ ಉದಯವಾಣಿಯಲ್ಲಿದ್ದಾರೆ. ರಾಜಕೀಯ ವರದಿಗಾರಿಕೆಯಲ್ಲಿ ಅವರಿಗೆ ಸಾಕಷ್ಟು ಅನುಭವ ಇದೆ. ಅತ್ಯಂತ ಸರಳ, ಸಭ್ಯ, ಮಗು ಮನಸ್ಸಿನ ಲಕ್ಷ್ಮಿನಾರಾಯಣ ಸ್ವತಃ ಮಾತನಾಡುವುದಕ್ಕಿಂತ ಆಲಿಸುವುದಕ್ಕೇ ತಮ್ಮ ಕಿವಿಗಳನ್ನು ಸದಾ ತೆರೆದಿಡುತ್ತಾರೆ. ಪತ್ರಕರ್ತನಿಗೆ ಇತರರ ಮಾತನ್ನು ಆಲಿಸುವ ಸಹನೆ ಇದ್ದರೆ ಹೆಚ್ಚಿನ ರಾಜಕೀಯ ತೆರೆಮರೆಯ ಆಟಗಳನ್ನು ತಿಳಿಯುವುದು ಸಾಧ್ಯವಾಗುತ್ತದೆ. ಪತ್ರಕರ್ತನೇ ಸುದ್ದಿಗಾಗಿ ತೆರಳಿದಾಗ ಸ್ವತಃ ಅನಗತ್ಯ ಪಾಂಡಿತ್ಯ ಪ್ರದರ್ಶನಕ್ಕಿಳಿದರೆ ಮಾಹಿತಿ ಸಂಗ್ರಹಿಸುವಲ್ಲಿ ವಿಫಲನಾಗುತ್ತಾನೆ. ಒಣ ಪ್ರದರ್ಶನಗಳಿಲ್ಲದ ಲಕ್ಷ್ಮಿನಾರಾಯಣ ಅನೇಕ ಗುಟ್ಟುಗಳನ್ನು ಹೊರತೆಗೆಯುವಲ್ಲಿ ಅವರ ಮನಸ್ಸು ಮತ್ತು ಕಿವಿ ತೆರೆದಿರುವುದೇ ಮುಖ್ಯ ಕಾರಣವಾಗಿದೆ.  ಏನ್ಲಾ ಅಮಾಸೆ ಅಂಕಣದಲ್ಲಿ ಅವರು ಬರೆಯುತ್ತಿರುವ ರಾಜಕೀಯ ವಿಡಂಬನೆ ಅಪಾರ ಜನಪ್ರೀತಿಗೆ ಕಾರಣವಾಗಿರುವುದು ಅಲ್ಲಿನ ಆಡುಭಾಷೆ ಮತ್ತು ಸರಳ ನಿರೂಪಣೆ. ಈ ಅಂಕಣದಲ್ಲಿ ರಾಜ್ಯ ರಾಜಕೀಯದ ಪ್ರಮುಖ ನಾಯಕರೆಲ್ಲರೂ ಅವರಿಂದ ಛೇಡಿಸಿಕೊಂಡಿದ್ದಾರೆ. ಕೆಲವರು ಬೇಸರಗೊಂಡಿದ್ದರೆ, ಕೆಲವರು ತಮಾಷೆಯಾಗಿ ತೆಗೆದುಕೊಂಡು ಪ್ರೀತಿಯಿಂದ ಪ್ರತಿಕ್ರಿಯಿಸಿರುವುದನ್ನೂ ಲಕ್ಷ್ಮಿನಾರಾಯಣ ಹೇಳಿಕೊಂಡಿದ್ದಾರೆ. ಈ ರಾಜಕೀಯ ವಿಡಂಬನೆ ವರ್ತಮಾನದ ಕನ್ನಡ ಪತ್ರಿಕೋದ್ಯಮದಲ್ಲಿ ಬಹುಶಃ ಏಕೈಕ ಜನಪ್ರಿಯ ಮಾದರಿಯದ್ದಾಗಿದೆ.

ಹಾಗೇ ಕಂಡದ್ದು ಕಾಣದ್ದು, ರಾಜನೀತಿ ಅಂಕಣಗಳಲ್ಲಿ ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ಸ್ನೇಹ, ಮುನಿಸು, ಮರುಮೈತ್ರಿ, ಕುಮಾರಸ್ವಾಮಿ ಮತ್ತು ಜಮೀರ್ ಅಹ್ಮದ್ ಸಂಬಂಧ, ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್ ವಹಿಸಿರುವ ಪಾತ್ರ, ಅವರ ಕಚೇರಿ-ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಿಂದ ಆದ ಪರಿಣಾಮ ಇವೆಲ್ಲವುಗಳ ಬಗ್ಗೆ ಸಾಕಷ್ಟು ಚರ್ಚಿಸಿದ್ದಾರೆ. ರಾಜಕೀಯದ ಬಗ್ಗೆ ಬರೆಯುವ ಲಕ್ಷ್ಮಿನಾರಾಯಣ ಕೇವಲ ಕರ್ನಾಟಕಕ್ಕೆ ಸೀಮಿತಗೊಳ್ಳದೇ, ತಮಿಳುನಾಡು, ಆಂಧ್ರಪ್ರದೇಶ,ತೆಲಂಗಾಣ ರಾಜ್ಯಗಳ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ವಸ್ತುನಿಷ್ಠವಾಗಿ ಚರ್ಚಿಸಿದ್ದಾರೆ.  ರಜನೀಕಾಂತ್ ಮತ್ತು ಕಮಲಹಾಸನ್ ರಾಜಕೀಯ ಪ್ರವೇಶದಿಂದ ಆಗಿರುವ ಬದಲಾವಣೆಗಳೇನು ಎಂಬ ಬಗ್ಗೆಯೂ ಅವರು ಉತ್ತರಿಸಲು ಯತ್ನಿಸಿದ್ದಾರೆ.

ಕಾರ್ಯನಿರತ ಪತ್ರಕರ್ತರು ಹೆಚ್ಚು ಹೆಚ್ಚು ಬರೆದರೆ, ಬರಹಗಳು ಪ್ರಾಮಾಣಿಕವಾಗಿದ್ದರೆ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿದಂತಾಗುತ್ತದೆ. ಪತ್ರಕರ್ತರು ಪಾಂಡಿತ್ಯ ಪ್ರದರ್ಶನ ಮಾಡದೇ ಸರಳವಾಗಿ ಬರೆದರೆ ಜನರನ್ನು ಮುಟ್ಟಬಹುದು ಎನ್ನುವುದಕ್ಕೆ ಲಕ್ಷ್ಮಿನಾರಾಯಣ ಅವರ ಅಂಕಣ ಬರಹಗಳು ಸಾಕ್ಷಿಯಾಗಿವೆ. ಅವರಿಂದ ಇಂಥ ಕೃತಿಗಳು ಇನ್ನಷ್ಟು ಹೊರಬರಲಿ ಎಂದು ಆಶಿಸುತ್ತೇನೆ. ಈ ಪುಸ್ತಕವೂ ಎಲ್ಲರ ಮನೆಮನಗಳನ್ನು ತಲುಪಿ ಜನಪ್ರಿಯಗೊಳ್ಳಲಿ ಎಂದು ಹಾರೈಸುತ್ತೇನೆ. ಅವರಿಗೆ ಎಲ್ಲ ರೀತಿಯಲ್ಲಿ ಯಶಸ್ಸು ಸಿಗಲಿ ಎನ್ನುತ್ತಾ ಅಭಿನಂದಿಸುತ್ತೇನೆ. (ಪುಸ್ತಕಕ್ಕೆ ಬರೆದ ಮುನ್ನುಡಿಯಿಂದ)