ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಔಷಧಿ ಪ್ರತಿರೋಧಕ ಸಮಸ್ಯೆ ಒಡ್ಡುತ್ತಿರುವ ಸವಾಲುಗಳು

ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಔಷಧಿ ಪ್ರತಿರೋಧಕ ಸಮಸ್ಯೆ ಒಡ್ಡುತ್ತಿರುವ ಸವಾಲುಗಳು

ಮನುಷ್ಯ ಜಗತ್ತನ್ನು ಕಾಡುವ ಕುಷ್ಟ ˌ ಕ್ಷಯˌ ಕ್ಯಾನ್ಸರ್ ಮುಂತಾದ ಮಾರಣಾಂತಿಕ ರೋಗಗಳು ಗುಣಪಡಿಸಲು ಬಹುಔಷಧಿಗಳ ದೀರ್ಘಕಾಲಿನ ಚಿಕಿತ್ಸೆಯ ಅಗತ್ಯವಿರುತ್ತದೆ. ಈ ಮೇಲ್ಕಾಣಿಸಿದ ರೋಗಗಳಿಗೆ ವೈದ್ಯರು ಗುರುತಿಸಿ ಶಿಫಾರಸ್ಸು ಮಾಡಿದ ಔಷಧಿಗಳು ನಿಯಮಿತವಾಗಿ ತಪ್ಪದೆ ಸೇವಿಸಬೇಕಾಗುತ್ತದೆ.

ರೋಗಿಗಳು ಅನಿಯಮಿತ ಔಷಧ ಸೇವನೆ ಮಾಡುವುದರಿಂದ ಚಿಕಿತ್ಸೆಯು ಅಪೂರ್ಣಗೊಂಡು ರೋಗ ಉಲ್ಬಣಗೊಳ್ಳುವುದಷ್ಟೆ ಅಲ್ಲದೆ ಸಾಂಕ್ರಮಿಕ ರೋಗದ ಮೂಲವಾಗಿರುವ ಸೂಕ್ಷ್ಮಾಣು ಜೀವಿಗಳು ಔಷಧ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತವೆ. ಇದನ್ನು ಔಷಧ ಪ್ರತಿರೋಧಕ ಶಕ್ತಿ ಎಂದು ಗುರುತಿಸಲಾಗಿದೆ. ಔಷಧ ಪ್ರತಿರೋಧಕತೆಯು ಯಾವುದೇ ಜೀವಿಗಳ ಮೇಲೆ ಹಾಕುವ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟುವ ಮತ್ತು ವಿಕಸನದ ಪರಿಣಾಮಗಳಿಂದ ಉದ್ಭವಿಸುವ ಒಂದು ಬಹುಮುಖ್ಯ ಆರೋಗ್ಯ ಸಮಸ್ಸೆ. ಪ್ರತಿಯೊಂದು ಪ್ರತಿಜೀವಕ ಔಷಧಿಯು ನಿರ್ಧಿಷ್ಟವಾದ ಸೋಂಕುಕಾರಕ ಸೂಕ್ಷ್ಮಾಣು ಜೀವಿಯ ಮೇಲೆ ಪೂರ್ವ ನಿರ್ಧಾರಿತ ಯಾಂತ್ರಿಕ ಮಾರ್ಗದಲ್ಲಿ ದಾಳಿ ಮಾಡಿ ಅದನ್ನು ನಾಶಪಡಿಸುತ್ತದೆ. ಸೂಕ್ಷ್ಮಾಣುಜೀವಿಗಳು ಔಷಧಿಗಳ ಪರಿಣಾಮದಿಂದ ತಪ್ಪಿಸಿಕೊಂಡು ಆ ಔಷಧಿಗಳನ್ನು ನಿಷ್ಪ್ರಯೋಜಕಗೊಳಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದಕ್ಕೆ ಔಷಧ ಪ್ರತಿರೋಧಕ ಗುಣ ಎಂದು ಗುರುತಿಸುತ್ತೇವೆ. ಪ್ರತಿಯೊಂದು ಸೂಕ್ಷ್ಮಾಣು ಜೀವಿಯೂ ರೋಗ ಚಿಕಿತ್ಸೆಗೆ ಉಪಯೋಗಿಸುವ ಔಷಧಿಗಳ ಕ್ರಿಯೆಗೆ ಸಂವೇಧಿಸುವಲ್ಲಿ ಗಣನೀಯ ವ್ಯತ್ಯಾಸ ಹೊಂದಿರುತ್ತದೆ ಹಾಗೂ ಕೆಲವು ಸೂಕ್ಷ್ಮಾಣು ಜೀವಿಗಳು ಹೆಚ್ಚಿನ ಯುಕ್ತತೆ ಹೊಂದಿದ್ದು ಚಿಕಿತ್ಸೆಯಲ್ಲಿ ಉಪಯೋಗಿಸುವ ಔಷಧಿಗಳ ಪರಿಣಾಮ ಎದುರಿಸಿ ಬದುಕುಳಿಯುವ ಸಾಮರ್ಥ್ಯ ಹೊಂದಿರುತ್ತವೆ. 

ಪಿತ್ರಾರ್ಜಿತ ಗುಣಗಳಿಗೆ ಅನ್ವಯವಾಗಿ ತದನಂತರದ ಸೂಕ್ಷ್ಮಾಣು ಜೀವಿಗಳ ಪೀಳಿಗೆಯಲ್ಲಿ ಔಷಧ ಪ್ರತಿರೋಧಕ ಗುಣಗಳು ಹೆಚ್ಚಿನ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತವೆ. ಚಿಕಿತ್ಸೆಗೆ ಬಳಸಿದ ಔಷಧಿಯು ರೋಗಕ್ಕೆ ಕಾರಣವಾದ ಸೂಕ್ಷ್ಮಾಣು ಜೀವಿಗಳಲ್ಲಿ ಲೈಂಗಿಕ ಸಂತಾನೋತ್ಪತ್ತಿ, ಕೋಶವಿಭಜನೆˌ ಅಥವಾ ಸಮತಲ ವಂಶವಾಹಿನಿ ವರ್ಗಾವಣೆ ಕ್ರಿಯೆಗೆ ಚಾಲನೆ ನೀಡದೆ ಹೋದರೆ ಔಷಧ ಪ್ರತಿರೋಧಕ ಗುಣವು ಆ ಸೂಕ್ಷ್ಮಾಣು ಜೀವಿಗಳಲ್ಲಿ ಅನಿವಾರ್ಯವಾಗಿ ಅಭಿವ್ರದ್ಧಿಹೊಂದುತ್ತದೆ. ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಕೀಮೋಥೇರಪಿ ಚಿಕಿತ್ಸಾ ಪದ್ದತಿಯಲ್ಲಿ ಕ್ಯಾನ್ಸರ್ ರೋಗ ಹೊಂದಿರುವ ಕೆಲವು ಜೀವಕೋಶಗಳು ಔಷಧ ಪ್ರತಿರೋಧಕ ಗುಣ ಬೆಳೆಸಿಕೊಳ್ಳುವುದು ನಾವು ನೋಡಬಹುದಾಗಿದೆ. ಕ್ಯಾನ್ಸರ್ ಕೀಮೋಥೇರಪಿಯು ಕ್ಯಾನ್ಸರ್ ಗಡ್ಡೆಯ ಹತ್ತಿರದಲ್ಲಿ ಫಿಬ್ರೋಬ್ಲಾಸ್ಟ್ ಎಂಬ ಸಂಯೋಜಕ ಅಂಗಾಂಶಗಳಲ್ಲಿನ ಜೀವಂತ ಕೋಶ ಹುಟ್ಟಿಸುವ ಮೂಲಕ ಬ್ರಹತ್ ಮೊತ್ತದ ಡಬ್ಲ್ಯುಟಿಎನ್ 16ಃ ಎಂಬ ಪ್ರೋಟೀನನ್ನು ಉತ್ಪಾದಿಸುತ್ತದೆ. ಈ ಪ್ರೋಟೀನು ಮತ್ತಷ್ಟು ಕ್ಯಾನ್ಸರ್ ಕೋಶಗಳ ಹುಟ್ಟಿಗೆ ಪ್ರಚೋದಿಸುತ್ತದೆ ಮತ್ತು ಆ ಕ್ಯಾನ್ಸರ್ ಕೋಶಗಳು ಔಷಧ ಪ್ರತಿರೋಧಕ ಗುಣವನ್ನು ಹೊಂದಿರುತ್ತವೆ.

ಸೂಕ್ಷ್ಮ ರೋಗಾಣುಗಳಲ್ಲಿ ಔಷಧ ಪ್ರತಿರೋಧಕ ಗುಣ ಅಭಿವೃದ್ಧಿ ಹೊಂದುವ ಘಟನೆಗಳು ಜಗತ್ತಿನಲ್ಲಿ ಇತ್ತೀಚಿಗೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಗಮನಿಸಬಹುದಾಗಿದೆ. ವಾಯುವ್ಯ ಏಷಿಯಾ ಮತ್ತು ಆಫ್ರಿಕಾ ಖಂಡದ ಕೆಲವು ಭಾಗಗಳಲ್ಲಿ 2012ರಲ್ಲಿ ಮಲೇರಿಯಾಕಾರಕ ಪ್ರಭೇದವಾದ ಪ್ಲಾಸ್ಮೋಡಿಯಂ ಫಾಲ್ಸಿಫೆರಮ್ ವೈರಾಣು ಜೀವಿಯು ಪುನರುಜ್ಜೀವಿತ ಔಷಧ ಪ್ರತಿರೋಧಕ ಗುಣ ಬೆಳೆಸಿಕೊಳ್ಳುವ ಮೂಲಕ ಬ್ರಹತ್ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಿದೆ. ಹಾಗೆಯೇ ಕುಷ್ಟ ರೋಗಕಾರಕ ಸೂಕ್ಷ್ಮಾಣು ಜೀವಿಗಳು ಡ್ಯಾಪ್ಸೋನ್ ಔಷಧಿಗೆ ಪ್ರತಿಯಾಗಿ ಹೆಚ್ಚಿನ ಮಟ್ಟದ ಔಷಧ ಪ್ರತಿರೋಧಕ ಗುಣ ಬೆಳೆಸಿಕೊಂಡಿರುವುದು ಇತ್ತೀಚಿನ ಸಂಶೋಧನೆಗಳಿಂದ ಧೃಡಪಟ್ಟಿದೆ. ಅದೇ ರೀತಿ ಕ್ಷಯರೋಗಕಾರಕ ಸೂಕ್ಷ್ಮಾಣು ಜೀವಿ ಮೈಕೊಬ್ಯಾಕ್ಟೇರಿಯಮ್ ಟ್ಯುಬರಕುಲೆ ಕೂಡ ಕ್ಷಯ ರೋಗದ ಚಿಕಿತ್ಸೆಗೆ ಬಳಸುವ ಅನೇಕ ಪ್ರತಿಜೀವಕ ಔಷಧಿಗಳ ವಿರುದ್ಧ ಔಷಧ ಪ್ರತಿರೋಧಕ ಗುಣ ಬೆಳಸಿಕೊಳ್ಳುತ್ತಿರುವುದು ಸರ್ವೇಸಾಮಾನ್ಯ ಸಂಗತಿಯಾಗಿದೆ. ಸಾಮಾನ್ಯ ಗೃಹಬಳಕೆಯ ಚಟುವಟಿಕೆಗಳಾದ ಶೌಚಾಲಯ ತೊಳೆಯುವಿಕೆˌ ಹಲ್ಲುಜ್ಜುವಿಕೆˌ ಬಾಯಿ ತೊಳೆಯುವಿಕೆ (ಮೌತ್ ವಾಷಿಂಗ್ ), ಪ್ರತಿಜೀವಕ ಔಷಧಿಗಳ ಸೇವನೆˌ ಸೋಂಕು ನಿವಾರಕˌ ಮಾರ್ಜಕˌ ಶಾಂಪೂˌ ಔಷಧಿಯುಕ್ತ ಸಾಬೂನುಗಳ  ಬಳಕೆˌ ಕೈ ತೊಳೆಯುವಿಕೆ ಇತ್ಯಾದಿ ಕಾರ್ಯಗಳಲ್ಲಿ ಬಳಕೆಯಾಗುವ ರಾಸಾಯನಿಕ ಪದಾರ್ಥಗಳು ಬೇಕಾದ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುವುದಲ್ಲದೆ ಉದ್ದೇಶಪೂರ್ವಕವಾಗಿಯೊ ಅಥವಾ ಪ್ರಮಾದವಶಾತ್ ಅನೇಕ ರೋಗಕಾರಕ ಸೂಕ್ಷ್ಮಾಣು ಜೀವಿಗಳಲ್ಲಿ ಔಷಧ ಪ್ರತಿರೋಧಕ ಶಕ್ತಿ ಬೆಳೆಯುವಲ್ಲಿ ಸಹಕರಿಸಬಲ್ಲವು.

ಔಷಧ ಪ್ರತಿರೋಧಕತೆಯು ಮಾರಕ ರೋಗಗಳ ಚಿಕಿತ್ಸೆಗೆ ಬಳಸುವ ಔಷಧಿಗಳ ಪರಿಣಾಮಕಾರತ್ವವನ್ನು ತಗ್ಗಿಸುವ ಒಂದು ಬಗೆಯ ಗುಣ. ಇದೊಂದು ಸಂಪಾದಿತ ಅಥವಾ ಆರ್ಜಿತ (ಅಕ್ವೈಯರ್ಡ್) ಗುಣವಾಗಿದ್ದು ಇದು ಔಷಧಿಗಳ ಅಸಮರ್ಪಕ ಬಳಕೆಯಿಂದ ಹುಟ್ಟುಕೊಳ್ಳುತ್ತದೆ. ಒಂದು ಸೋಂಕುಕಾರಕ ಸೂಕ್ಷ್ಮಾಣು ಜೀವಿಯು ಒಂದಕ್ಕಿಂತ ಹೆಚ್ಚು ಔಷಧಿಗಳಿಗೆ ಪ್ರತಿರೋಧಕ ಗುಣ ಪ್ರದರ್ಶಿಸಿದರೆ ಅದನ್ನು ಬಹುಔಷಧಿ ಪ್ರತಿರೋಧಕ ಗುಣವೆಂದು ಕರೆಯುತ್ತಾರೆ. ಒಂದು ಪ್ರತಿಜೀವಕ ಔಷಧಿಯು ಪ್ರತ್ಯೇಕ ಸೋಂಕುಕಾರಕ ಸೂಕ್ಷ್ಮಾಣು ಜೀವಿಯನ್ನು ನಾಶಗೊಳಿಸುವ ನಿರ್ಧಿಷ್ಟ ಯಾಂತ್ರಿಕ ಕ್ರಮ ಹೊಂದಿರುತ್ತದೆ. ಆ ಔಷಧಿಯ ಯಾಂತ್ರಿಕ ಕ್ರಮದಲ್ಲಿ ಏನಾದರೂ ಬದಲಾವಣೆಯಾದರೆ ಆ ಔಷಧಿಗಿರುವ ಸೂಕ್ಷ್ಮಾಣು ಜೀವಿ ವಿಧ್ವಂಸಕ ಗುಣ ಇಲ್ಲದಂತಾಗುತ್ತದೆ. ಸೋಂಕುಕಾರಕ ಬ್ಯಾಕ್ಟೇರಿಯಾಗಳ ಜೀವಕೋಶಗಳಲ್ಲಿನ ಕಿಣ್ವಗಳನ್ನು ಗುರಿಯಾಗಿಸಿ ಸೂಕ್ಷ್ಮಜೀವಿಗಳನ್ನು ನಾಶಗೊಳಿಸುವ ಪ್ರತಿಜೀವಕ ಔಷಧಿಗಳ ತಂತ್ರಕ್ಕೆ ಪ್ರತಿಯಾಗಿ ತಮ್ಮೊಳಗಿರುವ ಕಿಣ್ವಗಳನ್ನು ಮಾರ್ಪಡಿಸುವ ಮೂಲಕ ಎದುರುತ್ತರ ನೀಡುವ ಬ್ಯಾಕ್ಟೇರಿಯಾಗಳು ಆ ಔಷಧಿಗಳು ತಮ್ಮ ಮೇಲೆ ನಾಟದಂತೆ ನಿಷ್ಕ್ರೀಯಗೊಳಿಸಬಲ್ಲವು.

ಔಷಧ ಪ್ರತಿರೋಧಕ ಗುಣ ಬೆಳೆಯುವ ಯಾಂತ್ರಿಕ ಮಾರ್ಗಗಳು :

ಸೋಂಕುಕಾರಕ ಸುಕ್ಷ್ಮಾಣು ಜೀವಿಗಳು ಔಷಧ ಪ್ರತಿರೋಧಕ ಶಕ್ತಿಯನ್ನು ನೈಸರ್ಗಿಕ ಪರಿವರ್ತನೆ ಅಥವಾ ಡಿ ಎನ್ ಎ ಎಂಬ ವಂಶವಾಹಿನಿಯ ವರ್ಗಾವಣೆಯ ಮೂಲಕ ಬೆಳೆಸಿಕೊಂಡು ಪ್ರತಿಜೀವಕ ಔಷಧಿಗಳ ಪರಿಣಾಮವನ್ನು ನಿಷ್ಪ್ರ್ಯೋಜಕಗೊಳಿಸುತ್ತವೆ.ಸೋಂಕುಕಾರಕ ಸೂಕ್ಷ್ಮಾಣುಜೀವಿಗಳು ಈ ಕೆಳಗಿನ ನಾಲ್ಕು ಯಾಂತ್ರಿಕ ಬಗೆಯಲ್ಲಿ ಔಷಧ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. 

1. ಔಷಧಿಯ ನಿಷ್ಕ್ರಿಯಕರಣ ಅಥವಾ ಗುಣ ಪರಿವರ್ತನ: ಸೂಕ್ಷ್ಮಾಣುಜೀವಿಗಳು ತಮ್ಮ ಜೀವಕೋಶಗಳ ತೆಳುವಾದ ಪರದೆಯಲ್ಲಿರುವ ಕಿಣ್ವಗಳ ಸಹಾಯದಿಂದ ಪ್ರತಿಜೀವಕ ಔಷಧಿಯನ್ನು ನಿಷ್ಕ್ರಿಯಗೊಳಿಸುತ್ತವೆ ಅಥವಾ ಅದರ ಪ್ರತಿಜೀವಕ ಗುಣವನ್ನು ಬದಲಾಯಿಸುತ್ತವೆ. 

2. ಪ್ರತಿಜೀವಕ ಔಷಧಿಯನ್ನು ಅದು ಗುರಿಯಿಟ್ಟ ನಿರ್ಧಿಷ್ಟ ಜೀವಕೋಶದಿಂದ ಬದಲಾಯಿಸುವುದು: ಪ್ರತಿಜೀವಕ ಔಷಧಿಗಳು ಸೋಂಕುಕಾರಕ ಸೂಕ್ಷ್ಮಾಣುಜೀವಿಗಳ ದೇಹದಲ್ಲಿನ ನಿರ್ಧಿಷ್ಟ ಜೀವಕೋಶಗಳ ಮೇಲೆ ಗುರಿಯಿಟ್ಟು ದಾಳಿ ಮಾಡಿ ಅವುಗಳನ್ನು ಕೊಲ್ಲುತ್ತವೆ. ಆದರೆ ಸೂಕ್ಷ್ಮಾಣು ಜೀವಿಗಳು ಆ ನಿರ್ದಿಷ್ಟ ಗುರಿ ತಪ್ಪಿಸುವ ಮೂಲಕ ಔಷಧಿಗಳನ್ನು ನಿಷ್ಪಲಗೊಳಿಸುತ್ತವೆ.

3. ಸಮತಲ ವಂಶವಾಹಿನಿ ಪರಿವರ್ತನೆಯನ್ನು ಹೆಚ್ಚಿಸುವುದು : ಸೂಕ್ಷ್ಮಾಣು ಜೀವಿಗಳು ತಮ್ಮ ದೇಹದಲ್ಲಿನ ವಂಶವಾಹಿನಿ ಪರಿವರ್ತನೆ ಪ್ರಕ್ರಿಯೆ ಹೆಚ್ಚಿಸಿಕೊಂಡು ತಮ್ಮ ಮೇಲೆ ಪ್ರತಿಜೀವಕ ಔಷಧಿಗಳ ಪರಿಣಾಮಗಳನ್ನು ನಿಷ್ಪ್ರಯೋಜಕಗೊಳಿಸಿಕೊಳ್ಳುತ್ತವೆ. ಅದಲ್ಲದೆ ಸೂಕ್ಷ್ಮಾಣು ಜೀವಿಗಳು ತಮ್ಮ ದೇಹದೊಳಗಿನ ಚಯಾಪಚಯ ಪ್ರತಿಕ್ರಿಯಾ  (metabolic pathway) ವನ್ನು ಪರಿವರ್ತಿಸುವ ಮೂಲಕವೂ ಔಷಧಿಗಳ ಪರಿಣಾಮವನ್ನು ಇಲ್ಲವಾಗಿಸುತ್ತವೆ.

4. ತಮ್ಮ ಜೀವಕೋಶಗಳಲ್ಲಿ ಔಷಧಿಯ ಸಂಗ್ರಹವನ್ನು ತಗ್ಗಿಸುವುದು: ಸೂಕ್ಷ್ಮಾಣು ಜೀವಿಗಳು ತಮ್ಮ ದೇಹದ ಸೂಕ್ಷ್ಮ ಜೀವಕೋಶಗಳ ಮೇಲಿನ ಪರದೆಗಿರುವ ಹೊರವಸ್ತುಗಳ ಒಳ ಭೇದ್ಯತಾ ಕ್ಷಮತೆ ಅಥವಾ ಪ್ರವೇಶ ಪ್ರಕ್ರಿಯೆ ಸಾಧ್ಯತೆಯನ್ನು ಕ್ಷೀಣಗೊಳಿಸುವ ಮೂಲಕ ಔಷಧಿಯು ಈ ಜೀವಕೋಶಗಳ ಮೇಲಿನ ತೆಳು ಪರದೆಯನ್ನು ಭೇದಿಸಿ ಜೀವಕೋಶಗಳ ಒಳಗೆ ಪ್ರವೇಶಿಸದಂತೆ ನಿರ್ಬಂಧಿಸುತ್ತವೆ.

ಔಷಧ ಪ್ರತಿರೋಧಕ ಗುಣ ಹೊರಹೊಮ್ಮುವಿಕೆ ತಡೆಯುವ ಕ್ರಮಗಳು : ಮಾರಕ ಸಾಂಕ್ರಮಿಕ ರೋಗಗಳ ಚಿಕಿತ್ಸೆಯು ಫಲಕಾರಿಯಾಗಿಸಲು ಸೋಂಕುಕಾರಕ ಸೂಕ್ಷ್ಮಾಣು ಜೀವಿಗಳು ಬೆಳೆಸಿಕೊಳ್ಳುತ್ತಿರುವ ಔಷಧ ಪ್ರತಿರೋಧಕ ಗುಣವನ್ನು ತಡೆಯಲು ಅಥವಾ ನಿಯಂತ್ರಿಸಲು ಅನೇಕ ತಂತ್ರಗಳು ಅಳವಡಿಸಿಕೊಳ್ಳಬಹುದಾಗಿದೆ. ಈ ಕೆಳಗಿನ ಕೆಲವು ಕಾರ್ಯತಂತ್ರಗಳಿಂದ ಔಷಧ ಪ್ರತಿರೋಧಕ ಸಮಸ್ಸೆ ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದಾಗಿದೆ :

1. ನಿರ್ಧಿಷ್ಟ ಸೋಂಕಿಗೆ ಸೂಕ್ತವಾದ ಪ್ರತಿಜೀವಕ  ಔಷಧಿಗಳನ್ನು ಮಾತ್ರ ಸೇವಿಸುವಂತೆ ರೋಗಿಗಳಿಗೆ ಶಿಫಾರಸ್ಸು ಮಾಡುವುದು. ಉದಾಹರಣೆಗೆ ವೈರಾಣು ಸೋಂಕು ರೋಗಕ್ಕೆ ಪ್ರತಿಜೀವಕ ಔಷಧಿಗಳ ಬಳಕೆ ನಿಷೇಧಿಸುವುದು. 

2. ಸಾಧ್ಯವಾದಷ್ಟು ಸೋಂಕಿಗೆ ಕಾರಣವಾದ ಸೂಕ್ಷ್ಮಾಣು ಜೀವಿಯನ್ನು ಪರೀಕ್ಷೆಯ ಮೂಲಕ ಪತ್ತೆಹಚ್ಚುವುದು ಮತ್ತು ಆ ಸೂಕ್ಷ್ಮಾಣು ಜೀವಿಯನ್ನು ನಾಶಗೊಳಿಸಬಲ್ಲ ನಿರ್ದಿಷ್ಟ ಪ್ರತಿಜೀವಕ ಔಷಧಿಗಳು ಮಾತ್ರ ಸೇವಿಸಲು ರೋಗಿಗೆ ಶಿಫಾರಸ್ಸು ಮಾಡುವುದು.

3. ರೋಗಿಯು ತನ್ನ ಸೋಂಕಿಗೆ ವೈದ್ಯರು ಬರೆದುಕೊಟ್ಟ ಔಷಧಿಯನ್ನು ಗೊತ್ತುಪಡಿಸಿದ ನಿರ್ದಿಷ್ಟ ಅವಧಿ ಮುಗಿಯುವವರೆಗೆ ತಪ್ಪದೆ ಸೇವಿಸುವಂತೆ ಎಚ್ಚರಿಕೆ ವಹಿಸುವುದು. ಶಿಫಾರಸ್ಸಿಗಿಂತ ಹೆಚ್ಚು ಅಥವಾ ಕಡಿಮೆ ಅವಧಿಗೆ ಔಷಧಿ ಸೇವನೆ ಸೂಕ್ಷ್ಮಾಣುಜೀವಿಗಳಲ್ಲಿ ಔಷಧ ಪ್ರತಿರೋಧಕ ಶಕ್ತಿ ವೃದ್ಧಿಸಬಲ್ಲದು. 

3. ವೈದ್ಯರು ನಿಗದಿಪಡಿಸಿದ ನಿರ್ದಿಷ್ಟ ಪ್ರಮಾಣದ (Dose)  ಔಷಧಿಯನ್ನು ಮಾತ್ರ ಸೇವಿಸುವುದು. ನಿಗದಿಗೊಳಿಸಿದ ಪ್ರಮಾಣಕ್ಕಿಂತ ಕಡಿಮೆ ಔಷಧಿ ಸೇವನೆಯು ಸೂಕ್ಷ್ಮಾಣು ಜೀವಿಗಳಲ್ಲಿ ಔಷಧ ಪ್ರತಿರೋಧಕ ಶಕ್ತಿ ಹೆಚ್ಚಿಸಬಲ್ಲದು ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದ ಔಷಧಿ ಸೇವನೆಯು ಅನಾವಶ್ಯಕ ಅಡ್ಡಪರಿಣಾಮಗಳಿಗೆ ಆಸ್ಪದ ನೀಡುವುದಲ್ಲದೆ ತಪ್ಪಿದರೆ ಮಾರಣಾಂತಿಕ ಪರಿಣಾಮಗಳನ್ನೂ ನಿರೀಕ್ಷಿಸಬಹುದು.

4. ಮಾದಕ ಔಷಧಿಗಳ ಉತ್ಪಾದನೆˌ ಮಾರಾಟ ಮತ್ತು ಸೇವನೆಗೆ ಇರುವಂತೆ ಬಿಗಿ ಕಾನೂನುಗಳು ಪ್ರತಿಜೀವಕ ಔಷಧಿಗಳ ಉತ್ಪಾದನೆˌ ಮಾರಾಟ ಮತ್ತು ಸೇವನೆಗೆ ಇಲ್ಲದಿರುವುದರಿಂದ ಈ ಔಷಧಿಗಳ ಅಸಮರ್ಪಕ ಬಳಕೆಯು ಔಷಧ ಪ್ರತಿರೋಧಕ ಸಮಸ್ಸೆ ಇಷ್ಟು ಬೃಹದಾಕಾರವಾಗಿ ಬೆಳೆಯಲು ಕಾರಣವಾಗಿದೆ. ಈ ದಿಶೆಯಲ್ಲಿ ವೈದ್ಯರು ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಬಂಧಪಟ್ಟ ಎಲ್ಲರೂ ಸಾರ್ವಜನಿಕರಲ್ಲಿ ಪ್ರತಿಜೀವಕ ಔಷಧಿಗಳ ಸಮರ್ಪಕ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಶೈಕ್ಷಣಿಕ ಕ್ರಮಗಳನ್ನು ಜರುಗಿಸುವುದು ಇಂದಿನ ಅತ್ಯಂತ ತುರ್ತು ಅಗತ್ಯವಾಗಿದೆ.

ಬದಲಾದ ಕಾಲಮಾನಕ್ಕೆ ತಕ್ಕಂತೆ ಸಾರ್ವಜನಿಕ ಆರೋಗ್ಯ ಕ್ಷೇತ್ರವೂ ಕೂಡ ವಾಣಿಜ್ಯೀಕರಣಗೊಂಡಿರುವುದು ಮತ್ತು ವ್ಯಾಪಾರಿ ಮನೋಭಾವ ತಲೆ ಎತ್ತಿ ನಿಂತಿರುವ ಕಾರಣಗಳಿಂದ ಪ್ರತಿಜೀವಕ ಔಷಧಿಗಳ ಅಸಮರ್ಪಕ ಬಳಕೆಯು ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ಹುಟ್ಟಿಸುತ್ತಿರುವುದಲ್ಲದೆ ಸಾರ್ವಜನಿಕ ಆರೋಗ್ಯ ರಕ್ಷಣೆಯ ಕೆಲಸಕ್ಕೆ ಬಹುದೊಡ್ಡ ಸವಾಲಾಗಿ ನಿಂತಿದೆ. ಒಂದು ಹೊಸ ಔಷಧಿಯ ಅವಿಷ್ಕಾರಕ್ಕೆ ಕನಿಷ್ಟ ಹತ್ತು ವರ್ಷಗಳ ಅವಧಿ ಬೇಕಾಗುವುದಲ್ಲದೆ ಅದಕ್ಕೆ ತಗಲುವ ವೆಚ್ಚ ಕನಿಷ್ಟ ಹತ್ತು ಬಿಲಿಯನ್ ಡಾಲರ್. ಸ್ವತಂತ್ರ ಭಾರತವು ಇದುವರೆಗೆ ಹೊಸ ಔಷಧಿಗಳ ಅವಿಷ್ಕಾರ ಕಾರ್ಯದಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಔಷಧ ಪ್ರತಿರೋಧಕ ಶಕ್ತಿಯ ಬೆಳವಣಿಗೆ ತಡೆಯುವಲ್ಲಿ ಆರೋಗ್ಯ ಇಲಾಖೆ ಮತ್ತು ಔಷಧಿ ಉತ್ಪಾದನಾ ಕಂಪನಿಗಳ ಧೃಡ ನಿಲುವಿನಲ್ಲಿನ ಕೊರತೆಯ ಜೊತೆಗೆ ಔಷಧ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತಿರುವ ಸೂಕ್ಷ್ಮಾಣು ಜೀವಿಗಳ ಸಹಜ ಸಾಮರ್ಥ್ಯದ ಗತಿಯು ಹೊಸ ಔಷಧಿಯ ಸಂಶೋಧನಾ ವೇಗಕ್ಕಿಂತ ತೀರ್ವವಾಗಿರುವುದು ಪ್ರಸ್ತುತ ಪ್ರತಿಜೀವಕ ಔಷಧಿಗಳ ಮೂಲಕ ಕೈಗೊಳ್ಳುತ್ತಿರುವ ಚಿಕಿತ್ಸೆಯ ಕಾರ್ಯಯೋಜನೆಯನ್ನು ವಿಫಲಗೊಳಿಸಿ ಅವನತಿಯತ್ತ ಕೊಂಡೊಯ್ಯುತ್ತಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರ ಮತ್ತು ಸರಕಾರಗಳು ಈ ಸಮಸ್ಸೆ ನೀಗಲು ಸೂಕ್ತ ಪರ್ಯಾಯ ಕಾರ್ಯಯೋಜನೆಗಳು ಅನುಷ್ಟಾನಗೊಳಿಸದಿದ್ದರೆ ಔಷಧ ಪ್ರತಿರೋಧಕ ಸಮಸ್ಯೆಯು ಈ ಶತಮಾನದ ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿ ಮನುಷ್ಯಕುಲವನ್ನು ಧೃತಿಗೆಡಿಸುವುದರಲ್ಲಿ ಅನುಮಾನವಿಲ್ಲ