ಗಾಂಧಿ ಮತ್ತು ಹೆಬ್ಬೆಟ್ಟು

ಹಿಂದೆ ಯಾವುದೊ ಊರಿಗೋ ಅಥವಾ ಸಮಾರಂಭಕ್ಕೊ ಹೋದಾಗ ನಿಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡು ಮಾತಾಡುತ್ತಿತ್ತು ಈ ವ್ಯಕ್ತಿ. ನಿಮಗೆ ಸಂತೋಷ ಅಥವಾ ಕಿರಿಕಿರಿಯಾದರೂ ಅದನ್ನೇನು ಹಚ್ಚಿಕೊಳ್ಳದೇ ನಿಮ್ಮ ಯೋಗಕ್ಷೇಮ ವಿಚಾರಿಸುವುದು ತನ್ನ ಕೆಲಸವೆಂದು ಮಾಡುತ್ತಿದ್ದ ಈ ವ್ಯಕ್ತಿ. ನಿಮಗೆ ಬಸ್ ಸರಿಯಾಗಿ ಸಿಕ್ಕಿತೇ, ಸಿಕ್ಕಿದ್ದರೂ ಸೀಟು ಸಿಕ್ಕಿತೇ? ಇತ್ಯಾದಿ ಕಾಳಜಿ ತೋರುತ್ತಿದ್ದ ಈ ವ್ಯಕ್ತಿ. ಈ ವ್ಯಕ್ತಿ ಗಂಡು ಆಗಿರಬಹುದು, ಹೆಣ್ಣೂ ಆಗಿರಬಹುದು.

ಗಾಂಧಿ ಮತ್ತು ಹೆಬ್ಬೆಟ್ಟು

 ಹಿಂದೆ ಯಾವುದೊ ಊರಿಗೋ ಅಥವಾ ಸಮಾರಂಭಕ್ಕೊ ಹೋದಾಗ ನಿಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡು ಮಾತಾಡುತ್ತಿತ್ತು ವ್ಯಕ್ತಿ. ನಿಮಗೆ ಸಂತೋಷ ಅಥವಾ ಕಿರಿಕಿರಿಯಾದರೂ ಅದನ್ನೇನು ಹಚ್ಚಿಕೊಳ್ಳದೇ ನಿಮ್ಮ ಯೋಗಕ್ಷೇಮ ವಿಚಾರಿಸುವುದು ತನ್ನ ಕೆಲಸವೆಂದು ಮಾಡುತ್ತಿದ್ದ ವ್ಯಕ್ತಿ. ನಿಮಗೆ ಬಸ್ ಸರಿಯಾಗಿ ಸಿಕ್ಕಿತೇ, ಸಿಕ್ಕಿದ್ದರೂ ಸೀಟು ಸಿಕ್ಕಿತೇ? ಇತ್ಯಾದಿ ಕಾಳಜಿ ತೋರುತ್ತಿದ್ದ ವ್ಯಕ್ತಿ. ಈ ವ್ಯಕ್ತಿ ಗಂಡು ಆಗಿರಬಹುದು, ಹೆಣ್ಣೂ ಆಗಿರಬಹುದು. ಸಾವಿನ ಮನೆಯಲ್ಲಿ ಚಟ್ಟ ಕಟ್ಟುವುದರಿಂದ ಹಿಡಿದು ಹೆಣಕ್ಕೆ ಬೆಂಕಿ ಇಡುವ ತನಕ ಇದ್ದೇ ಇರುವ ವ್ಯಕ್ತಿ, ಮದುವೆಗಳಲ್ಲೂ ಅಷ್ಟೇ. ಇವರಿಲ್ಲದೆ ಮದುವೆ ನಡೆಯುವುದಿಲ್ಲವೇನೋ ಎನ್ನುವಂತೆ  ಗಲಗಲ ಓಡಾಡುವ ಇಂತವರು ಹಿಂದೆ ಸಿಕ್ಕೇ ಸಿಗುತ್ತಿದ್ದರು. ಊರುಗಳಲ್ಲಿ ಸಾಧಾರಣವಾಗಿ  ಮನೆಗೊಬ್ಬರು ಇಂತವರು ಇರುತ್ತಿದ್ದರು. ಪೇಟೆಗಳಲ್ಲೂ ಇದ್ದೇ ಇರುತ್ತಿದ್ದರು. ಇದೇ ಇವರ ಪರಮವಾದ ಕೆಲಸವೆಂದೂ, ಬಿಟ್ಟರೆ ಮಾಡಲೇನು ಕೆಲಸವಿಲ್ಲದವರಂತೆ ಕಾಣುತ್ತಿದ್ದವರು. ಉಪದ್ರವಿಗಳಂತೆ ಕಂಡರೂ ಅವರಿಂದ ತೊಂದರೆಯೇನೂ ಆಗಿಲ್ಲವೆಂದು ಖಚಿತವಾಗಿ ಹೇಳಬಲ್ಲೆ. ಆದರೆ ನಡುವೆ ಇವರು ಇಲ್ಲವೋ, ಅಥವಾ ಕಣ್ಣಿಗೆ ಕಾಣುತ್ತಿಲ್ಲವೋ ತಿಳಿಯುತ್ತಿಲ್ಲ.

ಈವತ್ತು ಗಾಂಧೀಜಿಯವರ ಬಗ್ಗೆ ಯೋಚಿಸಿದಾಗೆಲ್ಲ ಮೇಲಿನ ಇಂತಹ ಜನರೇ ಕಣ್ಮುಂದೆ ಬರುತ್ತಾರೆ. ಅದರಲ್ಲೂ ವಿನಾಕಾರಣ ದ್ವೇಷ, ಅಸಹನೆ ಬೆಳೆಸಿಕೊಂಡಿರುವ ಎಳೆಯರನ್ನು ನೋಡಿದಾಗ ಮೇಲಿನದು ಮತ್ತು ಅಂತಹ ಜನರೆಲ್ಲ ನೆನಪಾದರು. ಯಾಕೆ ಎಳೆಯರಿಗೆ ಗಾಂಧಿ ಎಂಬ ಮುದುಕನ ಬಗ್ಗೆ ಕೋಪ? ಇವರೆಂದೂ ಕಾಣದ ಮುದುಕ ಇವರಿಗೆ ಮಾಡಿದ್ದಾದರೂ ಏನು?  ಯಾವ ಪೋಟೊಗಳಲ್ಲಿ ನೋಡಿದರೂ ನಿಷ್ಕಲ್ಮಶ ನಗೆಯೇ ಎದ್ದು ಕಾಣುವ ಮುದುಕ ಯಾಕೆ ಹೀಗೆ ಲೇವಡಿಗೆ ಒಳಗಾಗಿದ್ದಾನೆ.

ಹಿಂದೆ ಬಟ್ಟಲಲ್ಲಿ, ಬಳಪದಲ್ಲಿ ಮಾತ್ರ ವಿಷ ಇಕ್ಕಬಹುದಿತ್ತು. ಈವತ್ತು ವಿಷವನ್ನು ಬಗೆಬಗೆಯಲ್ಲಿ "ಹಾಲು" ಎಂದು ಇಕ್ಕಬಹುದಾದ ಕಾಲದೊಳಗೆ ನಾವಿದ್ದೇವೆ. ಅಬಾಲವೃದ್ದರಾದಿಯಾಗಿ ಎಲ್ಲರ ಕೈಲಿರುವ ಮೊಬೈಲು ಹಾಲಾಹಲದ ಬಟ್ಟಲಾಗಿಹೋಗಿದೆ. ಅದರಲ್ಲೂ ಚಿಗುರಿನಂತೆ ಅರಳಬೇಕಾದ ಎಳೆಯರಲ್ಲಿ ಇಕ್ಕಿರುವ ವಿಷ ಎಷ್ಟು ವಿಷಮವಾಗಿ ಹರಡಿದೆ ಎಂದರೆ ಎಳೆಯರ ಮೈಮನಗಳೆಲ್ಲ ಮುರುಟಿಹೋಗುತ್ತಿದೆ. 
ತನ್ನ ಬದುಕನ್ನು ಪ್ರಯೋಗಕ್ಕೆ ಒಡ್ಡಿಕೊಂಡ ಮುದುಕ ಬರೆದದ್ದು "ಸತ್ಯಾನ್ವೇಷಣೆ" ಎಂಬ ಆತ್ಮಕಥೆ. ಹೀಗೆ ಯಾವ ಪ್ರಯೋಗಗಳಿಗೂ ತಮ್ಮನ್ನು ತಾವು ಒಡ್ಡಿಕೊಳ್ಳದೇ ಎಲ್ಲಿಂದಲೋ, ಯಾರೋ ಕಳಿಸಿದ ವೀಡಿಯೋ/ಪೋಟೋ/ಸಂದೇಶಗಳೇ ಸತ್ಯವೆಂದು ನಂಬುತ್ತಲೇ ಹೋಗುತ್ತಿರುವ ಎಳೆಯರೊಳಗೆ ಇಳಿದಿರುವ ನಂಜನ್ನು ಹೀರಬಲ್ಲ ನಂಜುಂಡ ಯಾರಾದರೂ ಇರಬಹುದೇ? 


ಏಕೆಂದರೆ ಅಕ್ಷರಸ್ತರ ಮೂಲಕ ಬಿತ್ತುತ್ತಿರುವ ವಿಷ ಗಾಂಧಿಯೆಂಬ ಮುದುಕನ ಜೊತೆಯಲ್ಲಿ ಸಾಬರನ್ನು ಸೇರಿಸಿಕೊಂಡಿದೆ, ಮುಂದುವರೆದು ಕಮುನಿಷ್ಟರು, ಪ್ರಗತಿಪರರ ಬಗ್ಗೆಯೂ ಇದೆ, ಇಷ್ಟೆಲ್ಲಾ ಇರುವ ವಿಷ ಹಿಂದುಳಿದವರ ಬಗ್ಗೆ ಇದ್ದೇ ಇದೆ. ಇಷ್ಟಾದ ಮೇಲೆ ಹೆಂಗಸರನ್ನು ಬಿಡಲಾದೀತೆ? ಹೀಗೆ ಯಾರೋ ಒಬ್ಬ ಮುದುಕನ ಮೇಲೆ ಕಾರಿದಂತೆ ಕಾಣುವ ನಂಜಿನ ಗುರಿ ಭಾರತದ ಬಹುತೇಕ ಜನವರ್ಗದ ಕಡೆಗೂ ಇದೆ. ಹೀಗೆ ಹರಡಿರುವ ನಂಜಿನಿಂದಾಗಿ ಮಾತುಕತೆಯೇ ಅಸಾಧ್ಯವಾಗಿದೆ.ಯಾರನ್ನಾದರೂ, ಯಾವುದನ್ನಾದರೂ ಓದದೆ, ತಿಳಿಯದೇ, ನಮ್ಮೊಳಗೆ ದಕ್ಕಿಸಿಕೊಳ್ಳಲು ಯತ್ನಿಸದೇ ಏನು ಬೇಕಾದರೂ ಆಡಬಹುದು ಎಂಬಂತಾಗಿದೆ. ಇದಕ್ಕೆ ಸಂಕೇತಗಳಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಅಲ್ಲಿನ ನಿರೂಪಕರಿದ್ದಾರೆ. ಇವು ಪ್ರಭಾವಿಸುತ್ತಿರುವ ಅಥವಾ ಹರಡುತ್ತಿರುವ ರೋಗ ಸಾಂಕ್ರಾಮಿಕವಾಗುತ್ತಿದೆ.

ಇಂತಹ ಮುದುಕ ಪ್ರಶ್ನಾತೀತನೇನೂ ಅಲ್ಲ. ಇವತ್ತು ನಮಗೆ ಮುಖ್ಯ ಅನ್ನಿಸುವ ಪ್ರಶ್ನೆಗಳ ಬಗ್ಗೆ ಗಾಂಧಿ ತಾಳಿದ ನಿಲುವುಗಳ ಬಗ್ಗೆ ಅಸಮ್ಮತಿ, ಭಿನ್ನಮತ ಇದ್ದೇ ಇದೆ, ಮುಂದೆ ಅದು ಇನ್ನೂ ಬೇರೆ ರೂಪಗಳನ್ನು ತಾಳಬಹುದು. ಗಾಂಧಿಗೇಕೆ ಇವು ಅರ್ಥ ಆಗಲಿಲ್ಲ?  ಬಹುಶಃ ತಾನು ಮನೆ ಹಿರಿಯ ನನಗೆ ಅರ್ಥ ಆಗದ್ದು ಏನೂ ಇಲ್ಲ ಎಂಬ ಭಾವ ಅಥವಾ ಅಹಂ ಅವರಿಗೆ ಮುಳುವಾಯಿತೇ? ಅಥವಾ ಔದಾರ್ಯದ ಮೂಲಕ ನೋಡಲೆತ್ನಿಸಿದ ಅವರಿಗೆ ಔದಾರ್ಯಕ್ಕೂ ಮಿತಿಯಾದ ನೋಟಗಳಿರುತ್ತವೆ. ಅದು  ಸಂಪೂರ್ಣವಾಗಿ ಗ್ರಹಿಸಲಾರದು ಎಂಬುದು ಹೊಳೆಯದೇ ಹೊಯಿತೆ? ಮಾರ್ಕ್ ಬರ್ಕವೈಟ್ ಎಂಬ ಇಂಗ್ಲೀಷ್ ಪತ್ರಕರ್ತೆಯ ಕಠಿಣ ಪ್ರಶ್ನೆಗಳನ್ನು ಗಾಂಧಿ ಜೋಕ್ ಮಾಡಲು ಹೋಗಿ ಪೊಳ್ಳಾದ ಘಟನೆ ಇತಿಹಾಸ ಸಾರಿದೆ.
ದಲಿತರನ್ನು ಹರಿಜನ ಎಂದು ಕರೆಯುವ ಮೂಲಕ ದೈವೀಕರಿಸಬಲ್ಲ, ಅವರ ಸಂಕಟಗಳನ್ನು ಅರ್ಥೈಸಬಲ್ಲ ಗಾಂಧಿಗೆ ಅವರ ಹಕ್ಕುಗಳ ಸಂಬಂಧಿತ ಪ್ರಶ್ನೆಗಳು ಅರ್ಥವಾಗದೇ ಉಳಿದದ್ದು ಯಾಕೆ? ಗಾಂಧಿಯ ಧಾರ್ಮಿಕ ಪರಿಭಾಷೆಯೇ ಅವರ ಚಿಂತನೆಯ ಮಿತಿಯಾಯಿತೇ? " ಬಹುಸಂಖ್ಯಾತರ ಅನಕ್ಷರತೆ ಭಾರತದ ಶಾಪ" ಎಂದು ಬಣ್ಣಿಸುವಾಗ ಇದು ಎದ್ದು ಕಾಣುತ್ತದೆ. ಏಕೆಂದರೆ ನಾವಿಂದು ಸಾಧಿಸಿರುವ ಸಾಕ್ಷರತೆ ಭಾರತದ ಬದುಕಿಗೆ ನೀಡಿದ್ದೇನು ಎಂಬ ಪ್ರಶ್ನೆಗೆ ಹೆಮ್ಮೆಯ ಉತ್ತರಗಳಿಲ್ಲ. ಸಾಕ್ಷರನಾದವನು ಒಳ್ಳೆಯ ನಾಗರಿಕ ಆಗಬಲ್ಲ ಎಂಬುದಕ್ಕೆ ಯಾವ ಪುರಾವೆಗಳು ಇಲ್ಲ. ಹಾಗೆಂದು ಸಾಕ್ಷರತೆಯನ್ನಾಗಲೀ, ಮೀಸಲಾತಿಯನ್ನಾಗಲೀ ನಿರಾಕರಿಸುವ ಪ್ರಶ್ನೆಯೇ ಇಲ್ಲ.
ಮೊದಲು ಸಾಕ್ಷರರಾದವರೇ ಕಲಿಸಿದ ವಂಚನೆ ಇಂದು ಇತರ ವರ್ಗಗಳಿಗೂ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ ಅಷ್ಟೇ. ಇದನ್ನೇ ಅವರು ಬೇರೆ ಬಗೆಯಲ್ಲಿ ನೋಡಿದ್ದರೆ "ಹಳ್ಳಿಗಳು ಭಾರತದ ಜಾತಿಯ ಬಿಲಗಳು" ಎಂದು ಸಿಟ್ಟಾದ ಅಂಬೇಡ್ಕರ್ ಇನ್ನೂ ದಕ್ಕುತ್ತಿದ್ದರೇನೋ ಎಂದೂ ಅನಿಸುತ್ತದೆ. 

ಮನುಷ್ಯನಿಗೆ ತಿಳುವಳಿಕೆ ಅಥವಾ ಸಾಕ್ಷಾತ್ಕಾರ ಓದಿನಿಂದ, ಅನುಭವದಿಂದ, ತಿರುಗಾಟದಿಂದ ಹೀಗೆ ಯಾವ ಬಗೆಯಿಂದ ಉಂಟಾಗಬಲ್ಲುದು ಎಂಬುದನ್ನು ಯಾರೂ ಊಹಿಸಲಾರರೇನೋ. ರವೀಂದ್ರ ನಾಥ ಟಾಗೋರರಿಗೆ ಬರೆದ ಪತ್ರವೊಂದರಲ್ಲಿ "ಪ್ರಾಯಶಃ ಹಿಂದೂಧರ್ಮದ ಬಗ್ಗೆ ನನಗಿರುವಷ್ಟು ತಿಳುವಳಿಕೆ ತಮಗಿರಲಾರದು" ಎಂದು ತಿವಿಯಲೆತ್ನಿಸುವ ಗಾಂಧಿ ತಮ್ಮ ಹಿರಿತನದ ಛಾಪನ್ನು ಬಳಸುತ್ತಾರೆ ಎಂಬುದು ವೇದ್ಯವಾಗುತ್ತದೆ. ಗಾಂಧಿಯ ಚಿಂತನೆಯಲ್ಲಿ ಧಾರ್ಮಿಕ ಪರಿಭಾಷೆ ಹೆಚ್ಚಾಗಿ ಕಾವ್ಯದ ಪರಿಭಾಷೆ ಮಸುಕಾಗಿರಬಹುದು.

ಎಲ್ಲಾ ಜಗಳಗಳ ಜೊತೆಯಲ್ಲಿಯೇ ಗಾಂಧಿಯನ್ನು ನಾವು ನೆನೆಯಲೇಬೇಕು. ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸಲು ಅಹಿಂಸೆಯನ್ನು ಪ್ರಬಲ ಅಸ್ತ್ರವಾಗಿ ಬಳಸಿದ್ದಕ್ಕೆ. ಅಸ್ಪೃಶ್ಯತೆಯನ್ನು ಮುಖ್ಯವಾಹಿನಿಯ ಚರ್ಚೆಗೆ ತಂದಿದ್ದಕ್ಕೆ. ಪ್ರಾಕೃತಿಕ ಸಂಪನ್ಮೂಲಗಳ ಮಿತಬಳಕೆ ಬಗ್ಗೆ ಎಚ್ಚರಿಸಿದ್ದಕ್ಕೆ ಹೀಗೆ ಪಟ್ಟಿಬೆಳೆಸಬಹುದು.

"ಭೂಮಿ ನಮ್ಮ ಆಸೆಗಳನ್ನು ಪೂರೈಸಬಲ್ಲುದೇ ಹೊರತು ದುರಾಸೆಗಳನ್ನಲ್ಲ" ಎಂಬ ಗಾಂಧಿಯ ಹಳೆಯ ಮಾತನ್ನು  ಬಿರುಬೇಸಿಗೆಯಲ್ಲಿ ಹೊಸ ಕಿವಿಯಿಂದ ಆಲಿಸಿಕೊಳ್ಳಬೇಕಿದೆ. ಮತ್ತು ನುಡಿಯನ್ನು ನಡೆಯಾಗಿಸಿಕೊಳ್ಳುವ ಹಾದಿ ಮತ್ತೆ ಕಂಡುಕೊಳ್ಳಬೇಕಾಗಿದೆ. ಹಾಗೆಯೇ "ಪ್ರೀತಿ ಮತ್ತು ಸಹನೆ ನನ್ನ ಧರ್ಮ" ಎಂಬ ನುಡಿ ಕೂಡ. ಅಚ್ಚರಿಯೆಂದರೆ ಇಂದಿಗೂ ಪ್ರತಿಭಟನೆ ನಡೆದಾಗ ಬಳಸುವ ಪೋಟೋ ಗಾಂಧಿಯದೇ. ಡಾ. ರಾಮಮನೋಹರ ಲೋಹಿಯಾ ಗುರುತಿಸುವಂತೆ " ಎಲ್ಲರಲ್ಲೂ ಹೋರಾಡುವ ಶಕ್ತಿ ಇದೆಯೆಂದು ತೋರಿಸಿಕೊಟ್ಟವರು" ಗಾಂಧಿ.

ಹೀಗೆ ನೆನೆಯಬೇಕಾದ ಹಿರಿಯನೊಬ್ಬನನ್ನು ಗುಂಡಿಕ್ಕಿ ಕೊಲ್ಲುವ ಅಣಕು ಪ್ರದರ್ಶನ ಕೂಡ ದೇಶದಲ್ಲಿ ಜರುಗಿತು. ಗಾಂಧಿ ಕೊಲೆಯ ಅಣಕು ಪ್ರದರ್ಶನದ ಬಗ್ಗೆ ಹಳೆಯ ತಲೆಮಾರು ವ್ಯಾಪಕವಾಗಿ ಪ್ರತಿಕ್ರಿಯಿಸದೆ ಮೌನ, ಸಿನಿಕತೆ ತೋರಿತು. ಯುವತಲೆಮಾರು ಕನಿಷ್ಠ ಇದರ ಪರ ವಿರುದ್ಧದ ಅಭಿಪ್ರಾಯ ದಾಖಲಿಸಿತು. ಈ ದೃಷ್ಟಿಯಿಂದ ಎಳೆಯರು ಸಿನಿಕರಾಗದಿದ್ದರೂ  "ಅಣಕು ಕೊಲೆ" ಸಮರ್ಥಿಸಿಕೊಳ್ಳುವ ಗುಂಪಾಗಿ ಹಿಗ್ಗುತ್ತಿರುವುದು  ಆತಂಕಕಾರಿ. ಕಳೆದ ಕೆಲ ವರ್ಷಗಳಲ್ಲಿ  ಅಲ್ಪಸಂಖ್ಯಾತರ, ಹಿಂದುಳಿದ, ಮಹಿಳೆಯರ ಮೇಲಾಗುತ್ತಿರುವ ಹಲ್ಲೆಗಳ ಮುಂದುವರಿಕೆಯಾಗಿ ಕೂಡ ಸಾಂಕೇತಿಕ ಕೊಲೆಯನ್ನು ಗ್ರಹಿಸಬೇಕಾಗಿದೆ. 


ಇಂತಹ ನಮ್ಮ   ಎಳೆಯರಿಗೆ ಇಲ್ಲದ ಮುದುಕನ ಚೈತನ್ಯವನ್ನು ದಾಟಿಸುವ ಸವಾಲು ನಮ್ಮೆದುರು ಬಹು ದೊಡ್ಡದಾಗಿ ಬೆಳೆಯುತ್ತಲೇ ಇದೆ. ಈ ಪ್ರಶ್ನೆಯನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಬೇಕಾದ  ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯಗಳು ಏನು ಮಾಡುತ್ತಿವೆಯೋ? ಕನಿಷ್ಠ ಗಾಂಧಿಯ ಚೈತನ್ಯವನ್ನು ವಿಷಮಕಾಲದಲ್ಲಿ ಗ್ರಹಿಸುವುದು ಹೇಗೆ ಎಂಬುದರ ಬಗ್ಗೆ ಬೆಳಕಕಿಂಡಿ ತೋರದೆ, ಹರಡುತ್ತಿರುವ ಗಾಂಧಿ ದ್ವೇಷಕ್ಕೂ ತಮಗೂ ಸಂಬಂಧವೆ ಇಲ್ಲವೆಂಬಂತೆ ಅವು ನಿರ್ಲಿಪ್ತವಾಗಿರುವಂತಿದೆ. ಇನ್ನು ರಾಜಕಾರಣಿಗಳು ಪ್ರತಿಮೆ ನಿಲ್ಲಿಸುವುದರಲ್ಲಿ ಇರುವ ಆಸಕ್ತಿ ಬಿಟ್ಟರೆ ಬೇರೇನೂ ಹೊಳೆಯದ ಸ್ಥಿತಿ ತಲುಪಿಕೊಂಡಿದ್ದಾರೆ. ಕಣ್ಣಿಗೆ ಕಾಣುವ ಕೆಲಸಗಳೇ ರಾಜಕಾರಣದ ಆದ್ಯತೆಗಳು ಎಂದು ರಾಜಕಾರಣಿಗಳು ತಾವು ನಂಬಿ, ಜನರಿಗೂ ಅದೇ ಟೋಪಿ ಹಾಕಲು ಯತ್ನಿಸುತ್ತಲೇ ಇದ್ದಾರೆ. ಇದಕ್ಕೆ ಪೂರಕವಾಗಿ ಇಂದಿನ 'ನೋಡುಮಾಧ್ಯಮಗಳು' ಇವೆ.

ಐವತ್ತು ವರ್ಷದ ಕೆಳಗೆ ನಗರದಿಂದ ಕಲಿತು ಹಳ್ಳಿಗೆ ಹೋದ ಹಿರಿಯ ಲೇಖಕ ಪೂರ್ಣ ಚಂದ್ರತೇಜಸ್ವಿಯವರು ಆಗಿನ ಗ್ರಾಮಭಾರತದಲ್ಲಿ ಹೆಬ್ಬೆಟ್ಟೊತ್ತುವ ಪಶುಸದೃಶ ಸಮುದಾಯ ಕಂಡು ದಿಗ್ಭ್ರಮೆ ವ್ಯಕ್ತಪಡಿಸಿದ್ದರು. ಈಗಲೂ ಹೆಬ್ಬೆಟ್ಟೊತ್ತುವ ಪಶುಸದೃಶ್ಯ ಸಮುದಾಯ ಮುಂದುವರಿದಿದೆಯೆಂದು ಚಿಂತಕ ನಟರಾಜ್ ಹುಳಿಯಾರ್ ತಮ್ಮ ಈಚಿನ ಲೇಖನವೊಂದರಲ್ಲಿ ಗುರುತಿಸುತ್ತಾರೆ. ಒಂದೇ ವ್ಯತ್ಯಾಸ. ಅದು ಅನಕ್ಷರಸ್ತರ ಕಾಲ, ಇದು ಅಕ್ಷರಸ್ತರ ಕಾಲ.

ಕೊನೆಯದಾಗಿ, ಈವತ್ತು ನಾವು ಯಾರಿಗಾದರೂ ಫೋನ್ ಮಾಡಿದರೆ ' ಏನು ವಿಷಯ' ಎಂಬುದೇ ಎದುರಿನವರಿಗೆ ಮುಖ್ಯ ಆಗಿದೆ. ವಿನಾಕಾರಣ ಫೋನ್ ಕೂಡ ಜನ ಮಾಡಲಾರರು ಎಂಬುದು ವ್ಯಾಪಕವಾಗಿ ಬೆಳೆದಿರುವ ಸಂಶಯ ಪಿಶಾಚಿಯಾಗಿದೆ. ಈ ಪಿಶಾಚಿ ಓಡಿಸುವ ಮಾರ್ಗವನ್ನು ನಾವು ಹುಡುಕಿಕೊಳ್ಳಬೇಕಿದೆ.
ಕಾರಣವಿಲ್ಲದೆಯೂ  ಮನುಷ್ಯರ ನಡುವೆ ಪ್ರೀತಿ, ವಿಶ್ವಾಸ ಇರಬಲ್ಲವು, ಬೆಳೆಯಬಲ್ಲವು ಎಂಬ ನಂಬಿಕೆಯನ್ನು ಹುಟ್ಟಿಸುತ್ತಿದ್ದವರು ಬರಹದ ಪ್ರಾರಂಭದಲ್ಲಿ ಕಾಣಿಸಿರುವ ಜನರು. ಇಂತಹ ಜನರ ಬಗ್ಗೆ ಎಳೆಯರಲ್ಲಿ ನಿರ್ವಾಜ್ಯವಾದ ಪ್ರೀತಿ, ವಿಶ್ವಾಸ ಹುಟ್ಟಿಸಲಾಗದಿದ್ದರೆ ಗಾಂಧಿಯನ್ನು ಬೆಳೆಸಲಾರೆವು, ಉಳಿಸಲಾರೆವು.

ಅನ್ನ ತಿನ್ನುವ ನಾಡಲ್ಲಿ ಅಣಬೆ ತಿನ್ನಬಾರದು!