ಅರಣ್ಯ ನಾಶವಾದರೇನಂತೆ, ವಿಚಾರಣೆಯೇ ಬೇಡ ಅಂತಾರೆ ಬೂಸಿ!  

ಅನರ್ಹ ಶಾಸಕರೊಬ್ಬರ ಒತ್ತಡಕ್ಕೆ ಮಣಿದಂತಿರುವ ಯಡಿಯೂರಪ್ಪ ಅವರು ಅರಣ್ಯ ನಾಶಕ್ಕೆ ಕಾರಣವಾದ ಪ್ರಕರಣವನ್ನು ವಿಚಾರಣೆಯಿಂದಲೇ ಕೈ ಬಿಡಲು ತೀರ್ಮಾನಿಸಿದ್ದಾರೆ!

ಅರಣ್ಯ ನಾಶವಾದರೇನಂತೆ, ವಿಚಾರಣೆಯೇ ಬೇಡ ಅಂತಾರೆ ಬೂಸಿ!  

ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ವಿರುದ್ಧದ ಕ್ರಿಮಿನಲ್ ಸ್ವರೂಪದ ಅರಣ್ಯ ಮೊಕದ್ದಮೆಗಳ ಪ್ರಕರಣಗಳನ್ನು ವಿಚಾರಣೆಯಿಂದಲೇ ಹಿಂದಕ್ಕೆ ಪಡೆಯುವ ಕೆಟ್ಟ ಪರಿಪಾಠ ಈಗಲೂ ಮುಂದುವರೆಯುತ್ತಿದೆ.

ಪ್ರಕರಣಗಳನ್ನು ವಿಚಾರಣೆಯಿಂದ ಹಿಂದಕ್ಕೆ ಪಡೆಯಲು ಸಚಿವ ಸಂಪುಟ ಉಪ ಸಮಿತಿ,  ಪೊಲೀಸ್ ಮಹಾನಿರ್ದೇಶಕರು, ಕಾನೂನು ಇಲಾಖೆ ಮತ್ತು ಅಭಿಯೋಗ, ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಅಸಮ್ಮತಿ ನಡುವೆಯೂ ಬಿಜೆಪಿ ಸರ್ಕಾರ, ಅರಣ್ಯ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾರಂಭಿಸಿದೆ.

ಇದಕ್ಕೆ ಹಿರೇಕೆರೂರು ಅರಣ್ಯ ವಲಯದ ಪ್ರಕರಣವೇ ತಾಜಾ ನಿದರ್ಶನ. ಈ ಪ್ರಕರಣವನ್ನು ವಿಚಾರಣೆಯಿಂದ ಹಿಂದಕ್ಕೆ ಪಡೆಯಲು ಸರ್ಕಾರದ ಮೇಲೆ ಅನರ್ಹ ಶಾಸಕ ಬಿ ಸಿ ಪಾಟೀಲ್ ಅವರ ಒತ್ತಡವೇ ಕಾರಣ ಎಂದು ತಿಳಿದು ಬಂದಿದೆ. ವಿಚಾರಣೆಯನ್ನು ಹಿಂಪಡೆಯುವ ಸಂಬಂಧ ಒಳಾಡಳಿತ ಇಲಾಖೆ ಈಗಾಗಲೇ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ವಿಶ್ವಾಸನೀಯ ಮೂಲಗಳು 'ಡೆಕ್ಕನ್'ನ್ಯೂಸ್ ಗೆ ಖಚಿತಪಡಿಸಿವೆ.

ಹಿರೇಕೆರೂರು ಅರಣ್ಯ ವಲಯದ ಕಮಲಾಪುರ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದ 12 ಹೆಕ್ಟೇರ್ನಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಶ್ರೀಗಂಧ ಸೇರಿದಂತೆ ಇನ್ನಿತರ ಜಾತಿಯ ಗಿಡಗಳನ್ನು 2017ರ ಜೂನ್ 28ರಂದು ಕಡಿದು ನಾಶಪಡಿಸಲಾಗಿತ್ತು. ಇದರಿಂದ 1,56,03,557 ರು.ನಷ್ಟ ಸಂಭವಿಸಿತ್ತು. ಕರ್ನಾಟಕ ಅರಣ್ಯ ಕಾಯ್ದೆಯ 1963ರ ಕಲಂ 24(ಬಿ)(ಸಿ)(ಜಿ), 86,89,98, ಕರ್ನಾಟಕ ಅರಣ್ಯ ನಿಯಮ 1969ರ ನಿಯಮ 42 ಮತ್ತು ಸಾರ್ವಜನಿಕ ಆಸ್ತಿ ಧಕ್ಕೆ ಕಾಯ್ದೆ 1984ರ ಕಲಂ 3, 4 ರ ಅಡಿಯಲ್ಲಿ ಅಕ್ಷಮ್ಯ ಅಪರಾಧವೆಂದು ಅರಣ್ಯ ಅಪರಾಧ ಮೊಕದ್ದಮೆ( ಎಫ್ಒಸಿ 16/2017-18) ದಾಖಲಾಗಿತ್ತು.

ಇಂತಹ ಗಂಭೀರ ಸ್ವರೂಪದ ಪ್ರಕರಣವನ್ನು ವಿಚಾರಣೆಯಿಂದಲೇ ಹಿಂದಕ್ಕೆ ಪಡೆದು ಅರಣ್ಯ ಸಂಪತ್ತಿನ ನಾಶಕ್ಕೆ ಕಾರಣರಾದ ಆರೋಪಿಗಳನ್ನು ರಕ್ಷಿಸಲು ಹೊರಟಿರುವ ಬಿಜೆಪಿ ಸರ್ಕಾರ, ಇಂತಹ ಅಪರಾಧಗಳ ಸಂಖ್ಯೆ ಇನ್ನಷ್ಟು ಹೆಚ್ಚಲು ಪರೋಕ್ಷವಾಗಿ ಕುಮ್ಮಕ್ಕು ನೀಡಿದಂತಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲುದಾರಿಕೆಯ ಮೈತ್ರಿ ಸರ್ಕಾರದ ಅವಧಿಯಲ್ಲಿಯೂ ಈ ಪ್ರಕರಣವನ್ನು ವಿಚಾರಣೆಯಿಂದ ಹಿಂಪಡೆಯುವ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ವಿಚಾರಣೆಯಿಂದ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಪರಿಶೀಲನೆ ಮಾಡುವ ಸಲುವಾಗಿ ರಚಿಸಿದ್ದ ಸಚಿವ ಸಂಪುಟ ಉಪ ಸಮಿತಿ ಈ ಪ್ರಕರಣವನ್ನು 2019ರ ಫೆ.20ರಂದು ನಡೆದಿದ್ದ ಸಭೆ ತಿರಸ್ಕರಿಸಿತ್ತಲ್ಲದೆ, 'ವಿಚಾರಣೆಯಿಂದ ಹಿಂಪಡೆಯುವುದು ಸೂಕ್ತವಲ್ಲ,' ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ ಈ ಕುರಿತು ನ್ಯಾಯಾಲಯದ ಅಂತಿಮ ತೀರ್ಮಾನಕ್ಕೆ ಬಿಡಲು ತೀರ್ಮಾನಿಸಿತ್ತು.

ಅಲ್ಲದೆ, ಡಿಜಿಪಿ ಹಾಗೂ ಅಭಿಯೋಗ, ಸರ್ಕಾರಿ ವ್ಯಾಜ್ಯಗಳ ಇಲಾಖೆಯೂ ಕೂಡ ಪ್ರಕರಣವನ್ನು ವಿಚಾರಣೆಯಿಂದ ಹಿಂದಕ್ಕೆ ಪಡೆಯಲು ಅರ್ಹವಾದ ಪ್ರಕರಣವಲ್ಲ ಎಂದು ಅಭಿಪ್ರಾಯ ನೀಡಿತ್ತು. ಆದರೂ ಈಗಿನ ಬಿಜೆಪಿ ಸರ್ಕಾರ ಇದೆಲ್ಲವನ್ನೂ ಗಾಳಿಗೆ ತೂರಿ 1 ಕೋಟಿ ರು.ಮೌಲ್ಯದ ಅರಣ್ಯ ಸಂಪತ್ತಿನ ನಷ್ಟಕ್ಕೆ ಕಾರಣವಾದ ಆರೋಪಿಗಳ ವಿರುದ್ಧದ ಪ್ರಕರಣವನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ.

ಪ್ರಕರಣದ ವಿವರ; ಹಿರೇಕೆರೂರು ಅರಣ್ಯ ವಲಯದ ಹಳ್ಳೂರ ವ್ಯಾಪ್ತಿಯ ಕಮಲಾಪುರ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೆ ನಂಬರ್ 69 ಮತ್ತು 72ರಲ್ಲಿ ನೆಡುತೋಪಿನ ಗಿಡ ಮತ್ತು ನೈಸರ್ಗಿಕವಾಗಿ ಬೆಳೆದಿದ್ದ ಗಿಡಗಳನ್ನು ಕಡಿದು ಸುಟ್ಟು ನಾಶಪಡಿಸಿದ್ದರು. ಈ ಗಿಡಗಳನ್ನು 2008ನೇ ಸಾಲಿನಲ್ಲಿ ಬೆಳೆಸಲಾಗಿತ್ತು. ಇದರಲ್ಲಿ ನೇರಳೆ, ಶಿಸು, ನೆಲ್ಲಿ, ಶ್ರೀಗಂಧ, ಕಾಜು, ಜಾಲಿ ಮತ್ತು ಮುಳ್ಳು ಕಂಟಿಗಳಿದ್ದವು.

ಘಟನೆ ನಡೆದ ಸ್ಥಳಕ್ಕೆ ತೆರಳಿದ್ದ ತಹಶೀಲ್ದಾರ್, ಅರಣ್ಯ ಮತ್ತು  ಪೊಲೀಸ್ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆದಿತ್ತು. ಹಿರೇಕೆರೂರಿನ ತಹಶೀಲ್ದಾರ್ ಮತ್ತು ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರನ್ನು ಮನವೊಲಿಸಲು ನಡೆಸಿದ್ದ ಯತ್ನಗಳು ಕೈಗೂಡಿರಲಿಲ್ಲ. ಕಡೆಯಲ್ಲಿ ಆರೋಪಿತರು ಭೂದಾಹಕ್ಕಾಗಿ ಇಂತಹ ಅಪರಾಧ ಎಸಗಿದ್ದಾರೆ ಎಂದು ತಹಶೀಲ್ದಾರ್ ವರದಿ ನೀಡಿದ್ದರು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ 27 ಮಂದಿ ಪುರುಷ ಮತ್ತು ಮೂವರು ಮಹಿಳೆಯರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು.

"12 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ, ಕಾಚು, ನೇರಳೆ ಸೇರಿದಂತೆ ಇತರೆ ಜಾತಿಯ 1995ಕ್ಕೂ ಹೆಚ್ಚು ಗಿಡಮರಗಳನ್ನು ಕಡಿದು ನಾಶಪಡಿಸಿದಲ್ಲದೆ, ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಸುಡಲು ಪ್ರಯತ್ನಿಸಿದ್ದರು. ಮನಬಂದಂತೆ ನೇಗಿಲು ಹೊಡೆದು ಪರಿಸರಕ್ಕೆ ಭಾರಿ ಹಾನಿ ಉಂಟು ಮಾಡಿ ಸರ್ಕಾರಕ್ಕೆ 1,56,03,557 ರು.ಗಳಷ್ಟು ನಷ್ಟ ಸಂಭವಿಸಲು ಕಾರಣರಾಗಿದ್ದಾರೆ. ಇದು ಕರ್ನಾಟಕ ಅರಣ್ಯ ಕಾಯ್ದೆ ಮತ್ತು ಅರಣ್ಯ ನಿಯಮಗಳಡಿಯಲ್ಲಿ ಅಕ್ಷಮ್ಯ ಅಪರಾಧವಾಗಿದೆ,' ಎಂದು ವರದಿ ಸಲ್ಲಿಕೆಯಾಗಿತ್ತು.