ಮತ್ತಿಬ್ಬರಿಗೆ ಉಪಮುಖ್ಯಮಂತ್ರಿ ಪಟ್ಟ?

ಮತ್ತಿಬ್ಬರಿಗೆ ಉಪಮುಖ್ಯಮಂತ್ರಿ ಪಟ್ಟ?

ಎಲ್ಲವೂ ಬೂಸಿ ಯಡಿಯೂರಪ್ಪನವರ ಲೆಕ್ಕಾಚಾರದಂತೆ ನಡೆದರೆ ರಮೇಶ್ ಜಾರಕಿಹೊಳಿ ಮತ್ತು ಎಚ್.ವಿಶ್ವನಾಥ್ ಉಪಮುಖ್ಯಮಂತ್ರಿಗಳಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಬಿಜೆಪಿ ಹೇಗೇಗೋ ಮಾಡಿ ಅಧಿಕಾರ ಹಿಡಿಯುತ್ತಿದೆ ಹೊರತು, ಸರ್ಕಾರ ರಚನೆಗೆ ಅಗತ್ಯವಾದ ಮ್ಯಾಜಿಕ್ ಸಂಖ್ಯೆ 113 ನ್ನು ಗೆದ್ದುಕೊಂಡೇ ಇಲ್ಲ. ಇದು 2008 ರಲ್ಲಿ ಸರ್ಕಾರ ರಚಿಸುವಾಗಲೂ ಪಕ್ಷ ಗೆದ್ದಿದ್ದು 110 ಸ್ಥಾನ, 2018 ರಲ್ಲೂ 104 ಸ್ಥಾನಗಳನ್ನಷ್ಟೇ ಗಳಿಸಿತ್ತೆ ಹೊರತು ಮ್ಯಾಜಿಕ್ ಸಂಖ್ಯೆಯಾಗುವಷ್ಟು ಅಲ್ಲ. ಆದರೂ ಅಧಿಕಾರ ಎರಡೂ ಸಲವೂ ತನ್ನದಾಗಿಸಿಕೊಂಡಿರುವುದು ಗುಟ್ಟೇನಲ್ಲ.

ಬಿಎಸ್ ಯಡಿಯೂರಪ್ಪ ಲಿಂಗಾಯತ ಮತ ಕೊಡುವ ಯಂತ್ರ., ಮೋದಿ ಅಮಿತ್ ಶಾ ಮೋಡಿಯ ಮಂತ್ರ  ಇವೆರಡೂ ವರ್ಕ್‍ಔಟ್ ಆಗಿಲ್ಲ, ತನ್ನವರಿಂದಲೇ ಕೂಡಿದ ಸರ್ಕಾರ ರಚಿಸಿಕೊಳ್ಳಲೂ ಇಲ್ಲ.   ಇಂತಿಂಥ ಘಟಾನುಘಟಿಗಳಿರುವಾಗಲೇ ಸ್ವಂತ ಬಲದಿಂದ ಸರ್ಕಾರ ರಚಿಸಿಕೊಳ್ಳದಿದ್ದ ಬಿಜೆಪಿಗೆ, ಭವಿಷ್ಯದಲ್ಲಿ ಮೋಶಾ ಮೋಡಿಯೂ ಮಂಕಾಗುತ್ತೆ, ಬಿಎಸ್‍ವೈ ನೇಪಥ್ಯಕ್ಕೋಗುವುದು ಆಗುತ್ತೆ. ಆಗ ಪಕ್ಷದ ಕತೆ ಏನು?
ಲಿಂಗಾಯತ ಎಂಬ ಟ್ರಂಪ್ ಕಾರ್ಡ್ ಫಸಲು ಕೊಟ್ಟಿದೆಯಾದರೂ, ಒಕ್ಕಲಿಗ ಹಿಂದುಳಿದ ಮತಗಳು ಇಲ್ಲದಿರುವುದರಿಂದ ಕಣಜ ತುಂಬುವಷ್ಟು ಫಸಲು ಬರುತ್ತಿಲ್ಲ. ಹೀಗಾಗಿಯೇ ಸಮೃದ್ದ ಫಸಲು ತೆಗೆಯಬೇಕಾದ ಅನಿವಾರ್ಯತೆ ಇರುವುದರಿಂದಲೇ ಪ್ರಮುಖ ಜಾತಿಗೊಂದೊಂದು ಉಪಮುಖ್ಯಮಂತ್ರಿ ಹುದ್ದೆ ಕೊಡಲು ಚಿಂತನೆ ನಡೆದಿದೆ.

ಈಗಾಗಲೇ ದಲಿತ ಎಡಗೈಯಿಂದ ಗೋವಿಂದ ಕಾರಜೋಳ, ಒಕ್ಕಲಿಗರಿಂದ ಅಶ್ವತ್ಥ ನಾರಾಯಣ, ಗಾಣಿಗ ಲಿಂಗಾಯತರಿಂದ ಲಕ್ಷ್ಮಣ ಸವದಿ ಮೂರೂ ಮಂದಿ ಉಪಮುಖ್ಯಮಂತ್ರಿಗಳಾಗಿದ್ದಾರೆ. ಇದರ ಒಳ ಜಟಾಪಟಿಯೂ ಸಾಂಗವಾಗಿ ನಡೆಯುತ್ತಲೂ ಇವೆ. ಆದರೂ ಭವಿಷ್ಯದಲ್ಲಿ ಪಕ್ಷವನ್ನ ಸ್ವಂತ ಕಾಲ ಮೇಲೆ ನಿಲ್ಲುವಂತಾಗಿಸುವುದಕ್ಕಾಗಿ ಇನ್ನೆರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗುವುದು ನಿಕ್ಕಿಯಾಗುತ್ತಿದೆ.

ತೀರ್ಪು ಸಕಾರಾತ್ಮಕವಾಗಿ ಬಂದರೆ, ಸಂಪುಟಕ್ಕೆ ಸೇರಿಸಿಕೊಂಡು ಎಸ್‍ಟಿ(ನಾಯಕ)ಸಮುದಾಯದ ರಮೇಶ್ ಜಾರಕಿಹೊಳಿ ಮತ್ತು ಕುರುಬ ಜನಾಂಗದ ಎಚ್. ವಿಶ್ವನಾಥ್‍ಗೆ ಉಪಮುಖ್ಯಮಂತ್ರಿ ಎಂದಾಗಿಸುವುದು ಸದ್ಯದ ಲೆಕ್ಕಾಚಾರ. ಒಂದು ವೇಳೆ ಇವರಿಗೆ ತೀರ್ಪು ವ್ಯತಿರಿಕ್ತವಾದರೆ ನಾಯಕ ಶ್ರೀರಾಮುಲು, ಕುರುಬ ಈಶ್ವರಪ್ಪಗೆ ಈ ಪದನಾಮ ಕೊಡುವುದು ಎಂಬುದನ್ನ ತಾಳೆ ನೋಡಲಾಗುತ್ತಿದೆ.

ಲಿಂಗಾಯತ, ಒಕ್ಕಲಿಗ, ಕುರುಬ, ನಾಯಕ, ದಲಿತ ಈ ಐದೂ ಸಮುದಾಯದ ಜನಸಂಖ್ಯೆ ಶೇ.70 ರಷ್ಟಾಗುತ್ತೆ. ಇವರೆಲ್ಲರ ಮತ ಗಟ್ಟಿಮಾಡಿಕೊಂಡರೆ ಬಿಜೆಪಿಗೆ ಒಂದೇ ಜನಾಂಗ ನಂಬಿಕೊಂಡಿರಬೇಕಾಗಲ್ಲ. ಬೇರೆ ಬೇರೆ ಹಿಂದುಳಿದ ಜನಾಂಗವು ಜತೆಗಿರುವಂತಾಗಲಿ ಎಂಬ ಸೂತ್ರ ಇಲ್ಲಿದೆ. ಪಕ್ಷಾಂತರಗೊಂಡು ಬಂದವರಿಗೆ ಡಿಸಿಎಂ ಕೊಟ್ಟರೆ ಮೂಲ ನಿವಾಸಿಗಳಿಗೆ ಇನ್ನಷ್ಟು ಅಸಮಾಧಾನ ಹೆಚ್ಚಲಿರುವುದರ ಪರಿಣಾಮವನ್ನೂ ಚಿಂತನೆಗೊಳಪಡಿಸಲಾಗಿದೆ.

ಒಕ್ಕಲಿಗ ಓಲೈಕೆ ರಾಜಕಾರಣಕ್ಕೆ ಮುಂದಾಗಿರುವ ಬೆನ್ನಲ್ಲೇ, ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂಬ ಹೆಸರಿಡಲು ನಿರ್ಧರಿಸಲಾಗಿದೆ..

ಬೀದರ್ ರಾಯಚೂರು ಬಳ್ಳಾರಿ ಕಲಬುರಗಿ ಯಾದಗಿರ್ ಮತ್ತು ಕೊಪ್ಪಳ ಜಿಲ್ಲೆಗಳನ್ನೊಳಗೊಂಡ ಹೈದರಾಬಾದ್ ಕರ್ನಾಟಕಕ್ಕೆ ಇನ್ನು ಮುಂದೆ ಕಲ್ಯಾಣ ಕರ್ನಾಟಕ ಎಂಬ ನಾಮಕರಣ ಮಾಡಲು ಸಂಪುಟ ಅಸ್ತು ಎಂದಿದೆ. ಭಾರತ ಸ್ವಾತಂತ್ರ್ಯಗೊಂಡರೂ ನಿಜಾಮನ ಆಡಳಿತವಿದ್ದ ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಟ ನಡೆದು, ಸೆಪ್ಟೆಂಬರ್ 17, 1948 ರಂದು ಈ ಪ್ರಾಂತ್ಯಕ್ಕೆ ಸ್ವಾತಂತ್ರ್ಯ ಸಿಕ್ಕಿತು. ತೀರಾ ಹಿಂದುಳಿದ ಈ ಭಾಗಕ್ಕೆ ಯುಪಿಎ ಸರ್ಕಾರವಿದ್ದಾಗ 2013 ರ ನವೆಂಬರ್ 6 ರಂದು ಸಂವಿಧಾನದ ಅನುಚ್ಚೇದ 371 ರಡಿಯಲ್ಲಿ ವಿಶೇಷ ಸ್ಥಾನಮಾನ ಕೊಡಲಾಗಿದೆ. ಹೈದರಾಬಾದ್ ಕರ್ನಾಟಕ ಅಭಿವೃದ್ದಿ ಪ್ರಾಧಿಕಾರವನ್ನೂ ರಚಿಸಲಾಗಿದೆ. 41 ಶಾಸಕರಿರುವ ಈ ಪ್ರಾಂತ್ಯ ಇನ್ನು ಮುಂದೆ ಕಲ್ಯಾಣ ಕರ್ನಾಟಕ ಎಂದೇ ಕರೆಯಲ್ಪಡುತ್ತೆ.

ಇಂಥವೆಲ್ಲ ಮತಗಳಿಕೆಯ ಆಲೋಚನೆಗಳಿಗೆ ಬೆಚ್ಚನೆ ಕಾವು ಕೊಡುತ್ತಿರುವಂಥದ್ದು ಆಗುತ್ತಿದ್ದರೆ, ಇಡೀ ರಾಜ್ಯ ನೆರೆಯಿಂದ ತತ್ತರಿಸಿದ್ದರೂ ಪ್ರಧಾನಿಗೆ ಮನವರಿಕೆ ಮಾಡಲೂ ಹೆದರುವ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಅಂಟಿಸಿಕೊಂಡು ವರ್ಚಸ್ಸು ಕುಗ್ಗಿಸಿಕೊಳ್ಳುವಂಥದ್ದೂ ಆಗುತ್ತಿರುವುದು ವಿರೋಧಾಬಾಸವಲ್ಲದೆ ಮತ್ತೇನಲ್ಲ.