ಹಾರಾಡುವ ತಟ್ಟೆಗಳು ಮತ್ತು ಅಚ್ಚರಿಯ ಸಂಗತಿಗಳು!

ನಾನು ನಿನ್ನೆ ರಾತ್ರಿ ಆಕಾಶದಲ್ಲಿ ಭಯಾನಕ ವೇಗದಿಂದ ಸಾಗುವ ತಟ್ಟೆಗಳನ್ನು ನೋಡಿದೆ. ಕಣ್ಕುಕ್ಕುವಂತಹ ಪ್ರಕಾಶಮಾನವಾದ ಆ ತಟ್ಟೆಗಳು ಕಣ್ಮುಚ್ಚಿ ಬಿಡುವುದರಲ್ಲಿ ಮಾಯವಾದವು’- ಹೀಗೆ, ಜಗತ್ತಿನಲ್ಲಿ ಒಬ್ಬರಲ್ಲಾ ಒಬ್ಬರು ವರದಿ ಮಾಡುತ್ತಲೇ ಇರುತ್ತಾರೆ. ಇಂತಹ ಸುದ್ದಿಗಳಲ್ಲಿ ಕೆಲವೊಂದು ಸಾಮಾನ್ಯ ಲಕ್ಷಣಗಳಿರುತ್ತವೆ. ಈ ವಿಲಕ್ಷಣ ವಸ್ತುವಿನ ಆಕಾರ ತಟ್ಟೆಯಂತೆ ಚಪ್ಪಟೆಯಾಗಿರುತ್ತದೆ. ದುಂಡಗಿದ್ದು, ಅದರ ಮಧ್ಯದಲ್ಲಿ ರಂಧ್ರವಿರುತ್ತದೆ. ಅತ್ಯಂತ ವೇಗವಾಗಿ ಸಾಗುತ್ತವೆ ಹಾಗೂ ಅತ್ಯಂತ ಪ್ರಕಾಶಮಾನವಾಗಿರುತ್ತದೆ.

ಹಾರಾಡುವ ತಟ್ಟೆಗಳು ಮತ್ತು ಅಚ್ಚರಿಯ ಸಂಗತಿಗಳು!

ತನ್ನ ನಿಗೂಢತೆಯಿಂದ ಅನಾದಿ ಕಾಲದಿಂದಲೂ ಮನುಷ್ಯನನ್ನು ವಿಸ್ಮಯಗೊಳಿಸುತ್ತಲೇ ಇರುವ ಹಾಗೂ  ಈ ಸಂದರ್ಭದಲ್ಲಿ ಭಯ ಹುಟ್ಟಿಸಿರುವ ಹಾರಾಡುವ ತಟ್ಟೆಗಳು ಇಡೀ ಜಗತ್ತಿನಾದ್ಯಂತ ಸುದ್ದಿಯಲ್ಲಿರುವ ವಿಷಯ. ನಾವು ವಿಜ್ಞಾನ ಯುಗ ಎಂದುಕೊಂಡು ಬುದ್ಧಿವಂತರೆಂದು ಭಾರೀ ದೊಡ್ಡ ಭ್ರಮೆಯಲ್ಲಿದ್ದೇವೆ. ಈ ಭ್ರಮೆಯನ್ನು ಈ ಹಾರಾಡುವ ತಟ್ಟೆಗಳು ಆಗಾಗ್ಗೆ ಆ ಈ ದೇಶಗಳಲ್ಲಿ ಕಾಣಿಸಿಕೊಂಡು ಒಡೆಯುತ್ತಲೇ ಬಂದಿವೆ. ಫ್ಲೈಯಿಂಗ್‍ಸಾಸರ್ ಅಥವಾ ಹಾರಾಡುವ ತಟ್ಟೆಗಳು ಈ ಜಗತ್ತಿನ ಮೇಲೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಪ್ರತಿವರ್ಷವೂ ಅನಾದಿಕಾಲದಿಂದ ಎಡೆಬಿಡದೆ ಕಾಣಿಸಿಕೊಳ್ಳುತ್ತಲೇ ಬಂದಿರುವ ಈ ಹಾರಾಡುವ ತಟ್ಟೆಗಳು ವಿಜ್ಞಾನಿಗಳಿಗೂ ಒಂದು ದೊಡ್ಡ ಸವಾಲು.

‘ನಾನು ನಿನ್ನೆ ರಾತ್ರಿ ಆಕಾಶದಲ್ಲಿ ಭಯಾನಕ ವೇಗದಿಂದ ಸಾಗುವ ತಟ್ಟೆಗಳನ್ನು ನೋಡಿದೆ. ಕಣ್ಕುಕ್ಕುವಂತಹ ಪ್ರಕಾಶಮಾನವಾದ ಆ ತಟ್ಟೆಗಳು ಕಣ್ಮುಚ್ಚಿ ಬಿಡುವುದರಲ್ಲಿ ಮಾಯವಾದವು’- ಹೀಗೆ, ಜಗತ್ತಿನಲ್ಲಿ ಒಬ್ಬರಲ್ಲಾ ಒಬ್ಬರು ವರದಿ ಮಾಡುತ್ತಲೇ ಇರುತ್ತಾರೆ. ಇಂತಹ ಸುದ್ದಿಗಳಲ್ಲಿ ಕೆಲವೊಂದು ಸಾಮಾನ್ಯ ಲಕ್ಷಣಗಳಿರುತ್ತವೆ. ಈ ವಿಲಕ್ಷಣ ವಸ್ತುವಿನ ಆಕಾರ ತಟ್ಟೆಯಂತೆ ಚಪ್ಪಟೆಯಾಗಿರುತ್ತದೆ. ದುಂಡಗಿದ್ದು, ಅದರ ಮಧ್ಯದಲ್ಲಿ ರಂಧ್ರವಿರುತ್ತದೆ. ಅತ್ಯಂತ ವೇಗವಾಗಿ ಸಾಗುತ್ತವೆ ಹಾಗೂ ಅತ್ಯಂತ ಪ್ರಕಾಶಮಾನವಾಗಿರುತ್ತದೆ. ಇದರ ಬೆಳಕು ಸಾಮಾನ್ಯವಾಗಿ ಹಸಿರು ಬಣ್ಣಕ್ಕೆ ಹೋಲುತ್ತದೆ. ಹೀಗೆ, ಹಲವೊಂದು ಸಾಮಾನ್ಯ ವಿವರಗಳನ್ನು ಹಾರುವ ತಟ್ಟೆಗಳನ್ನು ನೋಡಿದವರಿಂದ ಸಂಗ್ರಹಿಸಬಹುದು. ಇಡೀ ಜಗತ್ತಿನಲ್ಲಿ ಹಾರುವ ತಟ್ಟೆಗಳೇ ಇಲ್ಲ ಎಂದು ವಾದಿಸುವವರಿದ್ದಾರೆ. ವಾತಾವರಣದ ಏರು- ಪೇರುಗಳಿಂದ ಈ ರೀತಿಯ ದೃಷ್ಟಿದೋಷ ಕಾಣಿಸಿಕೊಳ್ಳುತ್ತದೆ. ಬಿಸಿಲ್ಗುದುರೆಯಂತೆ ದೂರದಲ್ಲೆಲ್ಲೋ ದೀಪಗಳು ಪ್ರತಿಫಲಿತವಾಗಿ ಅತೀ ವೇಗದಿಂದ ಓಡುವಂತೆ ಕಾಣಿಸುವುದೇ ಈ ಹಾರುವ ತಟ್ಟೆಗಳ ವರದಿಗಳಿಗೆ ಮೂಲ ಎಂದು ಹೇಳುವವರುಂಟು.

1959ರಲ್ಲಿ ಬ್ರಿಟೀಷ್ ಹವಾಮಾನ ವಿಜ್ಞಾನಿಗಳು ಹಾರಾಡುವ ತಟ್ಟೆಗಳ ಬಗ್ಗೆ ಒಂದು ಸುದ್ದಿಯನ್ನು ಪ್ರಕಟಿಸಿದರು. ಇದು ಹಾರಾಡುವ ತಟ್ಟೆಗಳಿವೆ ಎಂದು ನಂಬಿಕೊಂಡಿದ್ದವರಿಗೆ ನಿರಾಶೆಯನ್ನುಂಟು ಮಾಡುವಂತಿತ್ತು. 1947ರಿಂದ ಈಚೆಗೆ ನಾವು ಹವಾಮಾನ ಸಂಶೋಧನೆಗಾಗಿ ಸಾವಿರಾರು ಬಲೂನುಗಳನ್ನು ಆಕಾಶದಲ್ಲಿ ಹಾರಿಸಿದ್ದೆವು. ಆಕಾಶದಲ್ಲಿ ಗಾಳಿಯ ಪ್ರವಾಹ ಇರುವವರೆಗೆ ಸಾಗುತ್ತಿದ್ದ ಈ ಬಲೂನುಗಳನ್ನೇ ಜನರು ಹಾರಾಡುವ ತಟ್ಟೆಗಳೆಂದು ಭ್ರಮಿಸಿದ್ದಾರೆ ಎಂಬುದೇ ಆ ಸುದ್ದಿಯಾಗಿತ್ತು. ಕೆಲ ಕಾಲದವರೆಗೆ ಈ ಹೇಳಿಕೆ ಹಾರಾಡುವ ತಟ್ಟೆಗಳ ಸಮಸ್ಯೆಗೆ ಉತ್ತರ ನೀಡುವಂತಿತ್ತು. ಆದರೆ, ಹಾರಾಡುವ ತಟ್ಟೆಗಳ ವರದಿಗಳು ಶತ-ಶತಮಾನಗಳ ಹಿಂದಿನಿಂದ ಕೇಳಿಬರುತ್ತಿರುವ ವಿಷಯವೇ ಆಗಿರುವುದರಿಂದ ಫ್ಲೈಯಿಂಗ್‍ಸಾಸರ್ ಅಥವಾ ಹಾರಾಡುವ ತಟ್ಟೆಗಳ ಕುತೂಹಲ ಮತ್ತಷ್ಟು ಹೆಚ್ಚಾಗುವಂತಾಯಿತು.

ಬೈಬಲ್‍ನ ಹಳೆಯ ಮತ್ತು ಹೊಸ ಒಡಂಬಡಿಕೆಗಳೆರಡರಲ್ಲೂ ಹಾರಾಡುವ ತಟ್ಟೆಗಳ ಉಲ್ಲೇಖವಿದೆ. ಹಿಂದೂ ಪುರಾಣಗಳಲ್ಲಿಯೂ ಸಹ ವಿಷ್ಣು ಚಕ್ರ ಎಂದು ಕರೆಯಲಾಗುವ ಕಲ್ಪನೆಯನ್ನು ಹಾರಾಡುವ ತಟ್ಟೆಗಳಿಗೆ ಹೋಲಿಸಿಕೊಳ್ಳಬಹುದು. ಹಾರಾಡುವ ತಟ್ಟೆಗಳ ಅತೀ  ಭಯಾನಕ ಸುದ್ದಿಗಳು ಜಗತ್ತಿನಲ್ಲಿ ವರದಿಯಾಗತೊಡಗಿದ್ದು 19ನೇ ಶತಮಾನದಲ್ಲಿ. 1882ರ ನವೆಂಬರ್ 17ರ ರಾತ್ರಿ ಇಂಗ್ಲೆಂಡಿನಲ್ಲಿ ಸಾವಿರಾರು ಜನ ನಿಂತು ಬೇರೆ ಗ್ರಹಗಳಿಂದ ಬಂದಿರಬಹುದಾದ ಲೋಕಾಂತರದ ಆಗಂತುಕನನ್ನು ಖಗೋಳ ವಿಜ್ಞಾನಿ ವಾಲ್ಟರ್ ಮಾಂಡರ್ ವರದಿ ಮಾಡಿದ್ದಾರೆ. ಗ್ರೀನ್‍ವಿಚ್ ವೇದ ಶಾಲೆಯ ದೂರದರ್ಶಕದಲ್ಲಿ ವಾಲ್ಟರ್ ಉತ್ತರ ದಿಕ್ಕನ್ನು ಪರಿಶೀಲಿಸುತ್ತಿದ್ದಾಗ, ಈಶಾನ್ಯಕ್ಕೂ ಪೂರ್ವಕ್ಕೂ ನಡುವೆ ಹಸಿರು ಪ್ರಕಾಶದ ಮಹಾ ವೃತ್ತಾಕಾರದ ತಟ್ಟೆಯೊಂದು ಕಾಣಿಸಿ ಕೊಂಡಿತು. ಅದು ಸರಾಗವಾಗಿ ದಿಗಂತದಿಂದ ದಿಗಂತಕ್ಕೆ ಕೇವಲ ಎರಡೇ ನಿಮಿಷಗಳಲ್ಲಿ ಸಾಗಿತು. ಅದು ಭೂಮಿಯಿಂದ ಸುಮಾರು 133 ಮೈಲು ಎತ್ತರದಲ್ಲಿತ್ತೆಂದೂ ಸೆಕೆಂಡಿಗೆ 10 ಮೈಲು ವೇಗದಿಂದ ಸಾಗುತ್ತಿತ್ತೆಂದೂ ಲಿಖಿತವಾಗಿ ಪ್ರಕಟಿಸಿದರು.

1983ರಲ್ಲಿ ಬಸ್ರಾದಿಂದ ಮುಂಬೈಗೆ ಹೊರಟಿದ್ದ ಎಸ್.ಎಸ್.ಪಾಟ್ನಾ ಎಂಬ ಹಡಗಿನ ಕ್ಯಾಪ್ಟನ್ ಪರ್ಶಿಯನ್ ಆಖಾತದಲ್ಲಿ ಭಾರೀ ಪ್ರಕಾಶಮಾನದ ಚಕ್ರವೊಂದು ಸಮುದ್ರದ ನೀರೊಳಗೆ ತಿರುಗುತ್ತಿದ್ದುದನ್ನು ಗುರುತು ಹಾಕಿಟ್ಟಿದ್ದಾನೆ. ಬಹುಶಃ ಅಲ್ಲಿ ಯಾವುದೋ ಹಾರಾಡುವ ತಟ್ಟೆಗೆ ಅಪಘಾತ ಸಂಭವಿಸಿರಬೇಕು! 1932ರಲ್ಲಿ ತೀರಿಕೊಂಡ ಅಮೇರಿಕಾ ಮೂಲದ ಚಾಲ್ರ್ಸ್ ಪೋರ್ಟ್, ಜೀವಮಾನವೆಲ್ಲಾ ಇಂಥ ಸುದ್ದಿಗಳನ್ನೇ ಸಂಗ್ರಹಿಸಿ, ಪರಿಶೀಲಿಸುತ್ತಿದ್ದ. ಬೇರೆ ಯಾವುದೋ ಲೋಕದಿಂದ ಅತಿಮಾನುಷ ಜೀವಿಗಳು ಅನೇಕ ಶತಮಾನಗಳಿಂದ ನಮ್ಮ ಭೂಮಿಗೆ ಬಂದುಹೋಗುತ್ತಿವೆ ಎಂಬ ತೀರ್ಮಾನಕ್ಕೆ ಅವನು ಬಂದಿದ್ದ.

ಜಗತ್ತಿನ ಕುತೂಹಲವನ್ನು ಪದೇ ಪದೇ ಕೆರಳಿಸುತ್ತಲೇ ಬಂದಿರುವ ಈ ಅಲೌಕಿಕ ಜಗತ್ತಿನ ಹಾರಾಡುವ ತಟ್ಟೆಗಳು 2ನೇ ಮಹಾಯುದ್ಧದ ನಂತರದಲ್ಲಿ ವಿಜ್ಞಾನಿಗಳನ್ನು ಮತ್ತು ಆಯಾ ದೇಶಗಳ ಸರ್ಕಾರಗಳನ್ನು ಕಾಡದೆ ಬಿಡಲಿಲ್ಲ. 1947ರಲ್ಲಿ ಹಾರಾಡುವ ತಟ್ಟೆಗಳ ಅಸಂಖ್ಯಾ ಸುದ್ದಿಗಳು ಪ್ರಕಟವಾಗಿ, ಈ ಹಾರಾಡುವ ತಟ್ಟೆಗಳ ಎರಡು ಭಾವಚಿತ್ರಗಳೂ ಬೆಳಕು ಕಂಡ ಬಳಿಕ ಅಮೇರಿಕನ್ ಸರ್ಕಾರ ಈ ಬಗ್ಗೆ ಗಂಭೀರ ಅಧ್ಯಯನಕ್ಕೆ ಮುಂದಾಯಿತು. ಆಕಾಶ ವಿಜ್ಞಾನಿಗಳನ್ನು, ಖಗೋಳ ಭೌತ ವಿಜ್ಞಾನಿಗಳನ್ನೊಳಗೊಂಡ ಅತೀ ಬುದ್ಧಿವಂತ ತಜ್ಞರ ಒಂದು ಸಮಿತಿಯನ್ನು ರಚಿಸಿ, ಆಕಾಶ ತಟ್ಟೆಗಳ ಅಧ್ಯಯನಕ್ಕೆಂದು ನೇಮಿಸಿತು. ಈ ಸಮಿತಿ 2000ಕ್ಕೂ ಹೆಚ್ಚಿನ ಸುದ್ದಿಗಳನ್ನು ಸಂಗ್ರಹಿಸಿ, ಪರಿಶೀಲಿಸಿ 1950ರಲ್ಲಿ ಸರ್ಕಾರಕ್ಕೆ ವರದಿಯೊಂದನ್ನು ಒಪ್ಪಿಸಿತು. 100 ರಿಂದ 250 ಅಡಿ ವ್ಯಾಸದ, ವೃತ್ತಾಕಾರದ ಹಾಗೂ ಪ್ರಕಾಶಮಾನವಾದ ಅಜ್ಞಾತ ಹಾರಾಡುವ ತಟ್ಟೆಗಳನ್ನು ಅನೇಕರು ಕಂಡಿದ್ದು ನಿಜವಾಗಿತ್ತು.

ಈ ಹಾರಾಡುವ ತಟ್ಟೆಗಳ ಕುತೂಹಲವನ್ನು ಭೇದಿಸಲೆಂದು ಹೊರಟ ಹಲವರು ತಮ್ಮ ಪ್ರಾಣ ಸಮರ್ಪಿಸಿದ್ದೂ ಇದೆ. 1948ರ ಜನವರಿಯಲ್ಲಿ ಅಮೇರಿಕಾದ ಕೆಂಟಕಿಯ ಮಡಿಸನ್‍ವಿಲೇ ನಗರದ ಮೇಲ್ಭಾಗದಲ್ಲಿ ಕಾಣಿಸಿಕೊಂಡ ಒಂದು ಹಾರಾಡುವ ತಟ್ಟೆಯನ್ನು ಬೆನ್ನಟ್ಟಲು ಮೂವರು ವಿಮಾನಾಧಿಕಾರಿಗಳಿಗೆ ಆದೇಶ ನೀಡಲಾಗಿತ್ತು. ಅತೀ ವೇಗದಿಂದ ಸಾಗುತ್ತಿದ್ದ ಹಾರಾಡುವ ತಟ್ಟೆಗಳನ್ನು ಸುಮಾರು 25 ನಿಮಿಷಗಳ ಕಾಲ ಈ ಮೂವರು ಬೆನ್ನು ಹತ್ತಿದರೂ ಆ ತಟ್ಟೆಯಿಂದ ಸುಮಾರು ಮೂರೂವರೆ ಮೈಲು ದೂರದಲ್ಲೇ ಇವರು ಉಳಿಯುವಂತಾಯಿತು. ನಿರಾಶಾದಾಯಕ ಸ್ಥಿತಿಯಲ್ಲಿ ತಮ್ಮ ಸ್ಥಳಕ್ಕೆ ಮರಳಿದರು. ಈ ಮೂವರಲ್ಲಿ ಓರ್ವ ಮಾತ್ರ ಸಾಹಸ ಮೆರೆಯಲು ನಿರ್ಧರಿಸಿದ್ದ. ಈ ಹಾರಾಡುವ ತಟ್ಟೆಯ ಹಿಂದೆಯೇ ಹೊರಟ ಓರ್ವ ವಿಮಾನಾಧಿಕಾರಿ ಅದೆಲ್ಲಿ ಕಾಣೆಯಾದನೋ ಆ ಸಂದರ್ಭದಲ್ಲಿ ಗೊತ್ತೇ ಆಗಲಿಲ್ಲ. ಬಹಳ ದಿನಗಳ ನಂತರದಲ್ಲಿ ಆತನ ವಿಮಾನದ ಒಂದಿಷ್ಟು ಭಗ್ನಾವಶೇಷಗಳು ಹಾಗೂ ಆತನ ಶರೀರದ ಕೆಲ ಭಾಗಗಳು ದೊರೆತವು.

ಹಾರಾಡುವ ತಟ್ಟೆಗಳ ಬಗ್ಗೆ ಮಾತ್ರ ಜನರು ಕೇವಲ ಕುತೂಹಲವನ್ನು ಮಾತ್ರ  ಉಳಿಸಿಕೊಂಡಿಲ್ಲ; ಈ ಹಾರಾಡುವ ತಟ್ಟೆಗಳಲ್ಲಿ ಭಯ ಹುಟ್ಟಿಸುವಂತಹ ಕೆಲವೊಂದು ಸಂಗತಿಗಳಿವೆ. ಬೇರೊಂದು ಲೋಕದಿಂದ ವಿಚಿತ್ರ ಜನರು ಈ ಹಾರಾಡುವ ತಟ್ಟೆಗಳ ಮೂಲಕ ನಮ್ಮ ಭೂಮಿಗೆ ಇಳಿದು ಬರುವುದನ್ನು ಕಂಡವರಿದ್ದಾರೆ. ಕ್ಯಾಲಿಫೋರ್ನಿಯಾದ ವೇದಶಾಲೆಗಳ ದೂರದರ್ಶಕಗಳನ್ನು ಮರಳುಗಾಡಿನ ಮೇಲೆ ಅದೊಂದು ಸಂದರ್ಭದಲ್ಲಿಟ್ಟು ಅಧ್ಯಯನ ನಡೆಸಿದಾಗ, ವೃತ್ತಾಕಾರದ ವಸ್ತುಗಳನ್ನು ಕುಳ್ಳರಂತೆ ಕಾಣಿಸುವ ಜನರು ಏರಿದ ಹಾಗೆಯೂ ಆನಂತರ ಅವು ಮಹಾವೇಗದಿಂದ ಹಾರಿಹೋದ ಹಾಗೆಯೂ ತೋರಿದ್ದಿದೆ. ಈ ನಂತರದಲ್ಲಿ ಇದೇ ಸಾಕ್ಷಿಗಳನ್ನು ಮುಂದಿಟ್ಟುಕೊಂಡು ಕೆಲವರು, ಬೇರಾವುದೋ ಗ್ರಹಗಳಿಂದ ಭೂಮಿಯನ್ನು ಪರೀಕ್ಷಿಸಲು ವಿಚಿತ್ರ ಜೀವಿಗಳು ಬರುತ್ತಿರಬಹುದೆಂದು ದಾಖಲೆಗಳನ್ನು ಕ್ರೋಢೀಕರಿಸಿದವರಿದ್ದಾರೆ.

ಇಡೀ ಆಕಾಶ ಲೋಕದಲ್ಲಿ ಭೂಮಿಯ ಮೇಲೆ ಮಾತ್ರ ಜೀವಕೋಟಿ ಇದೆ ಎಂಬ ಭಾವನೆಯನ್ನು ನಾವೆಲ್ಲಾ ಈ ಹಿಂದೆ ಹೊಂದಿದ್ದೆವು. ಆದರೆ, ಈಗೀಗ ನಕ್ಷತ್ರ ಮತ್ತು ಗ್ರಹಗಳ ಹಾಗೂ ಜೀವ ಜಗತ್ತಿನ ಹುಟ್ಟಿನ ಬಗ್ಗೆ ನಡೆದ ಸಂಶೋಧನೆಗಳು ಭೂಮಿಯ ಮೇಲೆ ಮಾತ್ರ ಜೀವಕೋಟಿ ಇದೆ ಎಂಬ ಮಾತನ್ನು ನಿರಾಕರಿಸುತ್ತಿವೆ. ಒಂದು ಗ್ರಹದ ಮೇಲೆ ಮಾತ್ರ ಜೀವಿಗಳ ಉದಯವಾಗಿಲ್ಲ ಅಥವಾ ಒಮ್ಮೆ ಮಾತ್ರ ಇಂತಹ ಆಕಸ್ಮಿಕ ಘಟಿಸಿಲ್ಲ ಎಂಬುದನ್ನು ಈ ಸಂಶೋಧನೆಗಳು ತೋರಿಸಿಕೊಟ್ಟಿವೆ. ಆಕಾಶಗಂಗೆಯ ನಕ್ಷತ್ರ ಪುಂಜವೊಂದರಲ್ಲಿಯೇ ಲಕ್ಷಾಂತರ ನಕ್ಷತ್ರಗಳಿವೆ. ಈ ಲಕ್ಷಾಂತರ ನಕ್ಷತ್ರಗಳಿಗೆ ನಮ್ಮ ಸೂರ್ಯನಿಗಿರುವಂತೆಯೇ ಗ್ರಹಗಳೂ ಇರಬಹುದೆಂದು, ಇವುಗಳಲ್ಲಿ ನಮ್ಮ ಭೂಮಿಯಂತೆಯೇ ಜೀವ ವಿಕಾಸಕ್ಕೆ ಹಿತವಾಗಿರುವ ಗ್ರಹಗಳು ಸಾವಿರಾರು ಸಂಖ್ಯೆಯಲ್ಲಿ ಇರಬಹುದೆಂದೂ ವಿಜ್ಞಾನಿಗಳು ಒಪ್ಪುತ್ತಾರೆ. ಈ ಗ್ರಹಗಳಲ್ಲಿ ಭೂಮಿಗಿಂತ ಹಳೆಯ ಗ್ರಹಗಳೂ ಇರಬಹುದು. ಅವುಗಳಲ್ಲಿ ಮನುಷ್ಯನಿಗಿಂತ ತೀರಾ ಅಭಿವೃದ್ಧಿಗೊಂಡ ಜೀವವಿಕಾಸ ಆಗಿರಬಹುದು. ಅವರು ಮನುಷ್ಯನಿಗಿಂತ ಭಯಾನಕ ಬುದ್ಧಿಶಾಲಿಗಳೂ ಇರಬಹುದು. ಹೀಗೆ, ಸಾಗುತ್ತದೆ ವಿಜ್ಞಾನಿಗಳ ಕಲ್ಪನಾಲೋಕ.

ಲೋಕಾಂತರದಿಂದ ಮನುಷ್ಯನಿಗಿಂತ ಬುದ್ಧಿಶಾಲಿ ಮನುಷ್ಯರು ನಮ್ಮ ಭೂಮಿಗೆ ಬರುತ್ತಿರುವುದೇ ನಿಜವಾದರೆ, ಅವರೆಲ್ಲಿಂದ ಬರುತ್ತಿರಬಹುದು? ಅವರು ಭೂಮಿಗೆ ಬರುತ್ತಿರುವ ಉದ್ದೇಶವಾದರೂ ಏನು? ಮನುಷ್ಯನ ನಂತರದಲ್ಲಿ ಈ ಲೋಕಾಂತರದ ಅತೀ ಬುದ್ಧಿಶಾಲಿ ಜನ ಭೂಮಿಯನ್ನೇ ತಮ್ಮ ವಾಸಸ್ಥಾನ ಮಾಡಿಕೊಳ್ಳಲಿದ್ದಾರೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಯಾವುದೇ ರೀತಿಯ ಉತ್ತರಗಳು ಇಲ್ಲಿಯವರೆಗೆ ದೊರೆತಿಲ್ಲ. ಈ ನಡುವೆ ವಿಜ್ಞಾನಿಗಳು ನಮ್ಮ ಭೂಮಿಯ ಸುತ್ತ ಸುತ್ತುತ್ತಿರುವ ಎರಡು ಆಕಾಶಕಾಯಗಳನ್ನು ಕಂಡುಹಿಡಿದಿದ್ದಾರೆ. ಅವುಗಳ ಲಕ್ಷಣಗಳ ಆಧಾರದ ಮೇಲೆ ಅವು ದಾರಿತಪ್ಪಿದ ಉಲ್ಕೆಗಳಲ್ಲ ಅಥವಾ ಯಾವುದೋ ನೈಸರ್ಗಿಕ ವಸ್ತುಗಳಲ್ಲವೆಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ನಿಗೂಢ ಉಪಗ್ರಹಗಳನ್ನು ಲೋಕಾಂತರದಿಂದ ಬಂದ ಜನ ನಿರ್ಮಿಸಿದ್ದಾರೆಯೇ? ಈ ಉಪಗ್ರಹಗಳ ಮೇಲೆ ನಿಂತು ಅವರು ನಮ್ಮ ಭೂಮಿಯನ್ನು ಅವಲೋಕಿಸುತ್ತಿದ್ದಾರೆಯೇ? ಈ ಭೂಮಿ ಅವರ ಮುಂದಿನ ವಾಸ ಪ್ರದೇಶವೇ? ಈ ಉಪಗ್ರಹಗಳ ಮೂಲಕವೇ ಅವರು ಹಾರಾಡುವ ತಟ್ಟೆಗಳನ್ನು ಕಳುಹಿಸುತ್ತಿದ್ದಾರೆಯೇ? ಪ್ರಶ್ನೆಗಳನ್ನು ಸ್ವತಃ ವಿಜ್ಞಾನಿಗಳೇ ಕೇಳತೊಡಗಿದ್ದಾರೆ.

ಮತ್ತೊಂದು ಸುದ್ದಿಯೂ ಹಬ್ಬಿತ್ತು; ಯುವತಿಯೋರ್ವಳನ್ನು ಫ್ಲೈಯಿಂಗ್‍ಸಾಸರ್‍ವೊಂದು ಅಪಹರಿಸಿದ ಘಟನೆಯೂ ವರದಿಯಾಗಿದೆ. ಇಂತಹ ಹಲವಾರು ಘಟನೆಗಳು ಜಗತ್ತಿನಾದ್ಯಂತ ನಡೆಯುತ್ತಲೇ ಇವೆ. ನಮ್ಮ ಭೂಮಿಯ ಜನರನ್ನು ಅಪಹರಿಸುವ ಫ್ಲೈಯಿಂಗ್ ಸಾಸರ್‍ಗಳು ಅವರನ್ನು ಅದೆಲ್ಲಿ ಕರೆದೊಯ್ಯುತ್ತಿವೆ? ಇದೊಂದು ನಾನ್ಸೆನ್ಸ್ ಪ್ರಶ್ನೆ!!