Flavour of Coffee ( Cup-6) *ಯುವ ಮನಸುಗಳ ತಲ್ಲಣ

Flavour of Coffee ( Cup-6) *ಯುವ ಮನಸುಗಳ ತಲ್ಲಣ

*ಬಿಸಿಯಪ್ಪುಗೆ - ಪಿಸುಮಾತುಗಳ ಭಾವ ಪಯಣ*

ಅವನು ನನ್ನನ್ನು ಆವರಿಸಿಕೊಳ್ಳುತ್ತಾನೇನೋ ಎಂಬ ಆತಂಕ ಶುರುವಾಯಿತು. ಅವನನ್ನು ಮತ್ತೆ ಸಂಪರ್ಕಿಸಬಾರದೆಂದು ಗಟ್ಟಿಯಾಗಿ ನಿರ್ಣಯ ಮಾಡಿದೆ WhatsApp ನಿಂದ ವಿರಮಿಸಿಬಿಟ್ಟೆ. ಅವನೋ ಮಹಾ ಪ್ರಚಂಡ. 

ಒಂದು ವಾರ ಬಿಟ್ಟು ನಾ ಕಾಣಿಸಿಕೊಂಡಾಗ ಅಲ್ಲಿ ಅವತರಿಸಿದ್ದ. ಅವನ ಕಾವ್ಯ ಸುಧೆಗೆ ಬೆಚ್ಚಿ ಬಿದ್ದೆ.‌ ಇವನೊಬ್ಬ ಅಕ್ಷರ ಲೋಕದ ಮಾಂತ್ರಿಕ ಎಂದು ಗೊತ್ತಿತ್ತಾದರೂ ನನ್ನ ಅಪಹರಿಸುವಷ್ಟು ಎಂದು ಊಹಿಸಿರಲಿಲ್ಲ. 

ದೇವರ ಜಗುಲಿ ಮುಂದೆ ಧೇನಿಸಿದೆ ''ನಾ ಕಳೆದು ಹೋಗದಿರಲಿ." ತಣ್ಣನೆಯ ನಡುಕ, ದೇವರು ತಥಾಸ್ತು ಅಂದಂಗಾಯಿತು. 

*ಹಿಂದೆ ಒಮ್ಮೆ ಬದುಕಿನಲ್ಲಿ ಎದ್ದ ಬಿರುಗಾಳಿಗೆ ಬೆದರಿ ಹೋಗಿ ಈ ಸಂಬಂಧಗಳ ಸಂಕೋಲೆಯ ಸಹವಾಸವೇ ಬೇಡವಾಗಿತ್ತು*.

ಮನಸು, ದೇಹ ಮುದುರಿಕೊಂಡು ಭಾವನೆಗಳ ಕೊಂದು ಹಾಕಿ ನಾ ಬತ್ತಿ ಹೋಗಿರುವಾಗ ಇವನೇನು ಮಹಾ…ನೈತಿಕವಾಗಿ ನನ್ನನ್ನು ಯಾರೂ ಅಲುಗಾಡಿಸಿಲ್ಲ ಆ ಮೊದಲ ಪೆಟ್ಟಿನ ನಂತರ. ಮೈಮನಗಳು ಜರ್ಜರಿತವಾದಾಗ ಮತ್ತೇನು, ಮತ್ತೆ ಏನೇನೂ ಬೇಡವಾಗಿತ್ತು."ಬೇಡ-ಬೇಡ-ಬೇಡ-ಬೇಡ-ಬೇಡ-ಬೇಡ-ಬೇಡ-ಬೇಡ-ಬೇಡ" ಸಾವಿರ ಸಲ ಕೂಗಿ,ಕೂಗಿ ಬೇಡಿಕೊಂಡು ಅಂಗಲಾಚಿದೆ. ಅವನು ವಿರಮಿಸಲಿ ಎಂಬ ಭರವಸೆಯಿಂದ.

     *ನಿಲ್ಲದ ಕನಸುಗಳು*

    ಮೈತುಂಬ ತುಂಬಿ ತುಳುಕುವ ಕನಸುಗಳು
    ಬರೀ ಬಣ್ಣ ತುಂಬಿ ಅಂದಗೊಳಿಸಿ 
    ನೋಡುತ ನೋಡುತ್ತ ನೋಡುತ್ತಾ 
    ನನಸಾಗಿಸಲು ಹಂಬಲಿಸುತಿದೆ ಜೀವ 
    ಅಹೋರಾತ್ರಿ 

    ಕಳೆದುಕೊಳ್ಳಬಾರದೆಂಬ ಸಾತ್ವಿಕ ಹಟ
    ಅಗೋಚರ ಸುಪ್ತ ಮನಸಿನ 
    ಮಂಗನಾಟಕೆ ಕುಣಿಯುತ 
    ನಲಿಯುತಿದೆ ಜೀವ ಮರೆಯುತ 
    ನೋವ…

' ಮೇಲಿನ ಸಾಲುಗಳ ಮೂಲಕ ನಿನಗಾಗಿ ಹಂಬಲಿಸುವ ಬಗೆ ನಿವೇದಿಸಿಕೊಂಡಿದ್ದೇನೆ. ಒಪ್ಪುವುದು, ಬಿಡುವುದು ನಿನಗೆ ಬಿಟ್ಟದ್ದು ಕಾಯುವುದಷ್ಠೇ ನನ್ನ ಕೆಲಸ.' ಇದು ಕೂಡ ನನ್ನನ್ನು ಅಲುಗಾಡಿಸುವ ಹೊಸ ತಂತ್ರವಿರಬೇಕೆಂದುಕೊಂಡು ಸುಮ್ಮನಾದೆ.

ರಾತ್ರಿ ಮಲಗುವ ಮೊದಲು ಕವಿತೆಯ ಸಾಲುಗಳ ಮೇಲೆ ಮತ್ತೆ ಕಣ್ಣಾಡಿಸಿದೆ. ಮನುಷ್ಯ ಮಾತುಗಳ ಮೂಲಕ ಸುಳ್ಳು ಹೇಳಬಹುದು ಆದರೆ ಕಾವ್ಯ ನಿರಂತರ ಸತ್ಯವನ್ನೇ ಪ್ರತಿಪಾದಿಸುತ್ತದೆ ಅನಿಸಿತು.

ಇವನು ಯಾಕೆ ಹೀಗೆ ಹಟ ಮಾಡಬೇಕು. ನನಗೆ ಸಂಬಂಧಗಳ ಅನುಬಂಧ, ಅವು ತಂದೊಡ್ಡುವ ಮಾನಸಿಕ ಒತ್ತಡಗಳ ಸಹವಾಸವೇ ಬೇಡವಾಗಿತ್ತು.

Facebook  ಗೆ ಹೋಗಿ ಅವನ ಮಾಹಿತಿಗಳ ಮೇಲೆ ಕಣ್ಣಾಡಿಸಿದೆ. ಹಿಂದೆ ಅವನ friend request accept  ಮಾಡುವಾಗ ನೋಡಿದ್ದೆನಾದರೂ ಮತ್ತೊಮ್ಮೆ ನನಗರಿವಿಲ್ಲದಂತೆ ನೋಡಲಾರಂಭಿಸಿದ್ದು ನನಗೆ ನನ್ನ ಬಗ್ಗೆ ಗುಮಾನಿ ಶುರುವಾಯಿತು.ಮನುಷ್ಯ ಕಳೆದು ಹೋಗುವ ರೀತಿ ಇದಾಗಿರಬೇಕೆಂಬ ಅಳುಕು ಕಾಡಲಾರಂಭಿಸಿ ಕಣ್ಣು ಮುಚ್ಚಿಕೊಂಡೆ.

ರಾತ್ರಿ ತುಂಬಾ ಹೊತ್ತು ಆಲೋಚಿಸಿದೆ, ಬೇಗ ನಿದ್ರೆ ಬರಲಿಲ್ಲ. ಏನೋ disturbance. ತಲೆ ಸುತ್ತಿ ಬಂದಂಗಾಯಿತು.ಇಡೀ ದಿನ ಏನೋ ಯಾತನೆ. ಕಾಲೇಜಿಗೆ ಹೋಗುವ ಮನಸಾಗಲಿಲ್ಲ. 

ಶೇಕ್ಸ್‌ಪಿಯರ್ ನಾಟಕಗಳ ಕುರಿತು ಸೆಮಿನಾರ್ ಬರೆಯಬೇಕಿತ್ತು. ಅದರಲ್ಲೂ ವಿಶೇಷವಾಗಿ ದುರಂತ ನಾಟಕಗಳ tragic flaw ಕುರಿತು ಸರಿಯಾಗಿ ಅರ್ಥ ಮಾಡಿಕೊಳ್ಳಲು ಒದ್ದಾಡಿದೆ. 

ವ್ಯಕ್ತಿಗೆ ತಾನು ಮಾಡುವುದು ತಪ್ಪೆಂದು ಅರ್ಥವಾದರೂ ಅದರಿಂದ ಅವನ್ಯಾಕೆ ಹೊರ ಬರಬಾರದು. ಹಗಲು ಕಂಡ ಬಾವಿಗೆ ರಾತ್ರಿ ಬಿದ್ದು ಇದು tragic flaw ಎಂಬ ವಿಶ್ಲೇಷಣೆ ಯಾಕೋ ತಿಳಿಯಲಿಲ್ಲ.

"ಪ್ರೀತಿ ಮಾಡದವನು ಮನುಷ್ಯನೇ ಅಲ್ಲ ಎಂಬ ಶೇಕ್ಸಪಿಯರ್ ವಾದವನ್ನು ಒಪ್ಪಬಾರದು ಅನಿಸಿತು. ಕೊನೆ ಪಕ್ಷ ನಾನು ಹಾಗಲ್ಲ ಅಂತ ಸಾಬೀತು ಮಾಡಬೇಕು ಎಂಬ ಸಂಕಲ್ಪ ಮಾಡಿದೆ. 

ಅದೇ ಪ್ರೀತಿ-ಪ್ರೇಮ-ಪ್ರಣಯ, ಹುಚ್ಚು ಭಾವನೆಗಳ ಬೆನ್ನು ಹತ್ತಿ ಅಲೆದಾಟ. ಒಂದು ಹಿಡಿದರೆ ಮತ್ತೊಂದು. Warm hug,sweet kiss ಸಿಕ್ಕರೆ ಇಡೀ ಜನ್ಮ ನಿನ್ನ ಒಲವಿನ ಅಡಿಯಾಳಾಗಿರುವೆ ಎಂಬ ಬೊಗಳೆ."

ನನ್ನ ಆಲೋಚನಾ ಕ್ರಮ ಗಟ್ಟಿಗೊಳಿಸುವ ದೃಢ ನಿರ್ಧಾರ ಮಾಡಿ ನನ್ನ ಪಾಡಿಗೆ ನಾನಿದ್ದೆ. ಮಾಡಲು ಬೇಕಾದಷ್ಟು ಕೆಲಸಗಳಿವೆ. ಸಾಧಿಸಲು ನೂರು ಹಾದಿಗಳಿವೆ‌. 

ಪ್ರೀತಿ, ಪ್ರೇಮ ಸಾಧನೆಗೆ ತೊಡಕಾಗುವುದರಲ್ಲಿ ಸಂಶಯವಿಲ್ಲ. ನನ್ನ ಗಟ್ಟಿ ನಿರ್ಧಾರವನ್ನು ಅವನಿಗೆ ರವಾನಿಸಿ ನನ್ನ ಪಾಡಿಗೆ ನಾನಿದ್ದೆ. 

ಅವಕಾಶ ಸಿಕ್ಕರೆ ಇಡಿಯಾಗಿ ತಿಂದು ಮುಕ್ಕರಿಸುವ ಹುನ್ನಾರ. ಬಾಯಿ ತುಂಬ ಆದರ್ಶದ ಮಾತುಗಳು. ಮಾನವೀಯ ಅನುಕಂಪದ ಸೋಗಲಾಡಿಗಳು ಈ ಗಂಡಸರು. 

        ಬಾ ಎಂದರೆ ಬರಲಾದೀತೆ ಬೇಡ ಎಂದರೆ 
        ದೂರಾದೀತೆ ದೂರಲಾದೀತೆ ?
        
        ಹುಟ್ಟುತ್ತಿರುವ ಹತ್ತು ಹಲವು ಪ್ರಶ್ನೆಗಳಿಗೆ
        ನಿರುತ್ತರವೇ ಉತ್ತರ

        ಆದರೂ ದಿನಕೊಂದು ಹೊಸ ಕನಸಿನ 
        ಬೆನ್ನೇರಿ ಸಾಗುವುದೇ ಬದುಕಿನ ಬವಣೆ 

        ಉಸಿರು ನಿಲುವವರೆಗೆ ಹಸಿರು ಬಾಡುವ 
        ವರೆಗೆ ಬದುಕ ಒರೆಗೆ ಹಚ್ಚುತ ಕಿಚ್ಚು 
        ಉಳಿಸುತ ಹೊಸ ಕನಸುಗಳ ಕಟ್ಟಿ 
        ಹಾಡುತ ಸಾಗುವುದೇ 
        ಜೀವನ.

ಮತ್ತವನ ಕಾವ್ಯದ ಹೊಸ ಸಂದೇಶ ಓದಿದ ಮನಸು ಕೆರಳಲಿಲ್ಲ. ಅರಳುವ ಅನುಮಾನ ಶುರುವಾಯಿತು. ಅವನು ಹೇಳುವುದರಲಿ ಏನೋ ಸತ್ಯ ಅಡಗಿದೆ ಅನಿಸಿ ಫೋನಾಯಿಸಲು ನಿರ್ಧರಿಸಿದೆ. 

" ನೋಡು ಭಾವನಾತ್ಮಕವಾಗಿ ಆಟ ಆಡಿ ನನ್ನ ಒಲಿಸಿಕೊಳ್ಳುವ ಪ್ರಯತ್ನ ಬೇಡ, ಏನಿದೆ ಈ ಜೀವನದಲ್ಲಿ ಅದೇ ಕಾಮದಾಟ ತಾನೆ. ಕೆಲ ನಿಮಿಷದ ಮುಲುಕಾಟದ ಸಾಸಿವೆ ಕಾಳಿನ ಸುಖಕೆ ಸಾಗರದಷ್ಟು ಕಷ್ಟ ಯಾರಿಗೆ ಬೇಕು. ನನಗೆ ವಾಸ್ತವ ಅಂದರೆ ಏನೆಂದು ಗೊತ್ತು. ಕವಿಗಳನ್ನು ಕೊಂದು, ಗಡಿಪಾರು ಮಾಡಬೇಕು ಎಂದು ಪ್ಲೇಟೊ ಸುಮ್ಮನೇ ಹೇಳಿಲ್ಲ, ಅರ್ಥ ಆಯಿತಾ?"

'ಆಯ್ತು ನನಗೆ ಪ್ಲೇಟೊ ಗೊತ್ತು ಅವರಪ್ಪನೂ ಗೊತ್ತು. ಮನುಷ್ಯ ಎಷ್ಟೇ ವಾಸ್ತವ ಜೀವಿಯಾದರೂ ಕಂಪನಿ ಇಲ್ಲದೇ ಬದುಕಲಾರ. ಅವನೇನು ಯಂತ್ರವಲ್ಲ. ನೀನು ಸಾಸಿವೆ ಸುಖದ ಕಾಮದಿಂದ ಬದುಕನ್ನು ನೋಡಬೇಡ. ಕೆಲ ನಿಮಿಷದ ಕಾಮಕ್ಕಾಗಿ ಗಂಡು ಹೆಣ್ಣು ಒಂದಾಗುತ್ತಾರೆ ಎಂಬುದು ಮುಠ್ಠಾಳ ಆಲೋಚನೆ. ಅದರಾಚೆಯ ಬಿಸುಪು, ಪಿಸುಮಾತು, ಸಾಮಿಪ್ಯದ ಆನಂದದ ಪರಮಸುಖ ಅರ್ಥ ಮಾಡಿಕೋ. ಬರೀ ಕಾಮಕ್ಕಾಗಿ ಕೂಡುವದಾದರೆ ಪ್ರಾಣಿಗಳಿಗೆ ಹಾಗೂ ನಮಗೆ ಯಾವ ವ್ಯತ್ಯಾಸ ಇರುತ್ತಿರಲಿಲ್ಲ.'

'ನಿನ್ನ ದೇಹ ಸೌಂದರ್ಯಕ್ಕೆ ಮನಸೋತು ಬಂದಿರುವೆ ಎಂಬ ಅಹಂಕಾರ ಬದಿಗಿರಿಸಿ ತಾಕತ್ತಿದ್ದರೆ ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ನಾನು ಏನಿದ್ದೇನೆ ಎಂಬ ಸತ್ಯ ಗೊತ್ತಾಗುತ್ತದೆ. ಎಲ್ಲರನ್ನು ಕಾಮದ ತಕ್ಕಡಿಯಲ್ಲಿ ತೂಗಬೇಡ. ಕಾಮವಿಲ್ಲದೆ ಬದುಕಿದ ಸಾವಿರ ಪ್ರೇಮಿಗಳು ಮಣ್ಣಾಗಿ ಇತಿಹಾಸ ಸೇರಿದ್ದಾರೆ.'

'ಮಾತುಕತೆ, ಸಾಮಿಪ್ಯ, ಪರಸ್ಪರ ಕೈ ಹಿಡಿದು ಓಡಾಟ,ಒಂದೇ ತುತ್ತಿನ ಊಟ, ತುಟಿಗಳ ಬಂಧನದ ನಿರಂತರ ಗುಟುಕು ಕೆಲ ನಿಮಿಷಗಳ ತೀಟೆ ಅಲ್ಲ. ಕಾಮದಾಚೆಗಿನ ಅನುಸಂಧಾನ. ಕಾಮ ಕೆಲ ನಿಮಿಷಗಳ ತೀಟೆಯಾದರೆ,ಪ್ರೇಮಿಗಳ ಭಾವ ಪಯಣಕೆ ಯುಗ ಯುಗಗಳೇ ಸಾಲುವುದಿಲ್ಲ. ಕಾಮ ಬತ್ತಿ ಹೋಗುತ್ತೇ ಆದರೆ ಪ್ರೇಮ ಎಂದೂ ಬತ್ತದ ಚಿಲುಮೆ, ಮಾಯವಾಗದ, ಮರೆಯಲಾಗದ,ಮರೆಯಾಗದ ಜೀವ ಚೈತನ್ಯ.'

" ಅಂದರೆ ಪುರುಷ ಕಾಮವಿಲ್ಲದೆ, possessiveness ಇರಬಲ್ಲನಾ? Impossible, ನಾ ಇಂತಹ ಬಣ್ಣದ ಮಾತಿಗೆ ಮರುಳಾಗಲಾರೆ. ಹಟಮಾರಿತನ ಆಕ್ರಮಣಶಾಲಿ ಗಂಡಿಗೆ ಹೆಣ್ಣು ಭೋಗದ ವಸ್ತು, ಕೆಲಸ ಮಾಡುವ ಯಂತ್ರ,ಗಂಡಸಿನ ಅನುಮಾನದ ಬೇಗುದಿಯಲಿ ಬೆಂದು ಸತ್ತು ಹೋಗುವ ವರ್ತಮಾನವೂ ನಮ್ಮ ಎದುರಿರುವಾಗ ಗಂಡಸಿನ ಸಹವಾಸ ನನಗೇ ಬೇಡವೇ ಬೇಡ."

ಒಂದು ವಾರ ಸೆಮಿನಾರ್ ಓಡಾಟದಲ್ಲಿ ಸುಸ್ತಾಗಿ ಹೋದೆ. ಕಣ್ಣು ಕತ್ತಲು ಕವಿದಂತಾಗಿ ಬಿದ್ದು ಬಿಟ್ಟೆ. ಎಚ್ಚರಾದಾಗ ಇಡೀ ಮೈ ಭಾರವಾಗಿತ್ತು. 

ಯಾತ್ರಿಕ ಚಿಕಿತ್ಸೆ, ಎದುರಿಗೆ ನೇತಾಡುತ್ತಿದ್ದ ಸಲಾಯನ್ ಬಾಟಲ್, ಸುತ್ತಲೂ ಓಡಾಡುವ ನರ್ಸಗಳು, ಆಗಾಗ ಬಂದು ಹೋಗುವ ಡಾಕ್ಟರುಗಳು ಎಲ್ಲರೂ ನಿರ್ಜೀವ ಬೊಂಬೆಗಳು. 

ಮನಸು ಸಂತೈಸುವ ಕೈಗಳಿಗಾಗಿ ಚಡಪಡಿಸಿದಂತೆ ಭಾಸವಾಯಿತು. ಏನೋ ನೆನಪಾದಾಗ ಬರೀ ಅವನ ಮಾತುಗಳ ರಿಂಗಣ ಅಪ್ಯಾಯಮಾನ.

ಅವನ ಕಾವ್ಯದ ಸಾಲುಗಳ ಮತ್ತೆ,ಮತ್ತೆ ಓದಿದೆ. ಹೌದಲ್ಲ. ಪಿಸುಮಾತು,ಬಿಸಿಯಪ್ಪುಗೆ ಇದ್ದರೆ ಎಷ್ಟೊಂದು ಛಂದ ಅನಿಸಿತು. ಆದರೆ ಇದನ್ನು ಅವನಿಗೆ ಹೇಳಿಬಿಟ್ಟರೆ ನಾ ಸೋತ ಹಾಗೆ ಆಗುತ್ತೆ. ನಾನು ಸೋತರೂ ಚಿಂತೆಯಿಲ್ಲ. ಅವನನ್ನು ಸೋತು ಗೆಲ್ಲಬೇಕು, ಮನಸೋತು ಗೆಲ್ಲಬೇಕು. ಗೆಲ್ಲಲೇಬೇಕೆಂದು ನಿರ್ಧರಿಸಿದೆ. 

ಮೊಬೈಲ್ ಕೈಗೆ ಸಿಕ್ಕ ಕೂಡಲೇ ಕಣ್ಣಿಗೆ ಬಿದ್ದ ಅವನ ನಗು ಮೊಗದ ಆP, ಅವನು ಬರೆದ ಸಾಲುಗಳು ಲಾಸ್ಯವಾಡಿದವು...

      *ಹುಟ್ಟುತ್ತಿರುವ ಹತ್ತು ಹಲವು 
      ಪ್ರಶ್ನೆಗಳಿಗೆ
      ನಿರುತ್ತರವೇ ಉತ್ತರ.‌‌‌..*