Flavour of coffee (cup-5) ಯುವ ಮನಸುಗಳ ಅಂತರಾಳದ ಮಾತುಗಳು

Flavour of coffee (cup-5) ಯುವ ಮನಸುಗಳ ಅಂತರಾಳದ  ಮಾತುಗಳು

*ಪ್ರೀತಿಯ ಪಯಣಕೆ ವಿಮಾನದ ವಿಹಾರ*


ಸ್ಟ್ರಾಂಗ್ ಅಂದರೆ ‘ನಾನು’ ಅಂದುಕೊಂಡಿದ್ದೆ. ಆದರೆ ನಿನ್ನ ಪ್ರೀತೀಲಿ ಸೋಲೋದಿದೆ ನೋಡು, ಅದ್ಭುತ! ಸೋತು ಸೋತು ನಿನ್ನೆದೆಯಾಳಕ್ಕೆ ಇಳಿದು ಹರಿಯುತ್ತ ಸಾಗಿದೆ. ಆ ಆಳಕ್ಕೆ ಇಳಿದು ದಂಗಾಗಿ ಹೋದೆ. ಅಂತರಾಳವು ಅಂಕೆ ಸಂಖ್ಯೆಗೆ ಸಿಗುವುದಲ್ಲ. ಪ್ರೀತಿಯ ಸರೋವರವದು. ಪ್ರೇಮದ ಮಾನಸ ಸರೋವರವಾಗಿಸಿದ್ದು ಆ ನಿನ್ನ ಮನಸು. ಅದನ್ನು ಏನೂಂತ ಬಣ್ಣಿಸಲಿ? ಅದರೊಳಗಿನ ಆರ್ದ್ರತೆ, ಆಪ್ತತೆ ಬಣ್ಣಿಸಲಾರೆ. ಅದರ ಪರಿಯೇ ಬೇರೆ. ಅನಂತ ಅನನ್ಯ ಕಣೊ.


ನಿನ್ನ ಪ್ರೀತಿಯ ಪುಳಕಕ್ಕೆ ಸದಾ ಹಸಿರಾಗಿ ನಳನಳಿಸುತ ನಲಿಯುವುದೊಂದೇ ನನ್ನ ಬದುಕಿನಲ್ಲಿ ಉಳಿದಿರುವುದು.


ಈಗ ಅದೆಷ್ಟು ಬದಲಾಗಿದ್ದೇನೆ ಗೊತ್ತಾ? ಥೇಟ್ ನಿನ್ನದೇ ಪ್ರತಿರೂಪ. ಅದೇ ರೀತಿ. ಅದೇ ನೀತಿ. ಅದೇ ವೈಖರಿ. ನೀ ನಾ ಆಗಿ ನಾ ನೀ ಆಗೋದು ಅಷ್ಟು ಸುಲಭವಲ್ಲ. ಆದರೂ ನಿನ್ನೊಳಗಿನ ಬೇಕೇ ಬೇಕೆನ್ನುವ ಸಾತ್ವಿಕ ಹಟದ ಮುಂದೆ ಏನೂ ನಡೆಯಲ್ಲ ಅನ್ನೋದು ಗೊತ್ತಾಗಿ ನಿನ್ನ ಹಾಡನ್ನೇ ಹಾಡುತ್ತ ಸಾಗಿದೆ. ಎಷ್ಟು ಖುಷಿ ಅನ್ನೋದು ಶಬ್ದಗಳಲ್ಲಿ ವರ್ಣಿಸಲಾರೆ. ಥ್ರಿಲ್ ಅಂದರೆ ಥ್ರಿಲ್ ಮಾರಾಯ. ಅನುಭವಿಸಿಯೇ ಬಿಡೋಣ ಅನಿಸುವುದು.


ನಿಶ್ಕಲ್ಮಶ, ನಿರಪೇಕ್ಷಿತ ಹುಡುಗ ನೀನಾದ್ದರಿಂದ ಒಂದು ಹೆಣ್ಣಿನ ಮನಸನ್ನು ಆವರಿಸಿಬಿಟ್ಟೆ. ನಿನಗಿರುವುದು ಕೇವಲ ನಿರೀಕ್ಷೆ. ಅದು ಯಾರದು ಗೊತ್ತ? ನನ್ನ ನಿರೀಕ್ಷೆ! ನನ್ನ ಮಾತು ಕೇಳುವ ನಿರೀಕ್ಷೆ! ನನ್ನ ಮೊಂಡಾಟವ ಅನುಭವಿಸುವ ನಿರೀಕ್ಷೆ! ನನ್ನ ಹೀಗಲ್ಲ ಹಾಗೆ ಎಂದು ತಿದ್ದುವ ನಿರೀಕ್ಷೆ! ನಾನು ಹೇಗೆ ಇದ್ದರೆ ಚಂದ ಎನ್ನುವ ನಿರೀಕ್ಷೆ! ಬರೀ ನನ್ನದೇ ಕನಸು ಕಾಣೋ ನೀನು ನನ್ನೊಳಗೆ ಕಳೆದು ಹೋಗಿರುವೆ. ನಾನೂ ಎಲ್ಲೊ ಕಳೆದು ಹೋಗಿರುವೆ ಎನಿಸಿ ಹುಡುಕಿದರೆ ಸಿಗಲು ಸಾಧ್ಯವೆ? ನಿನ್ನೊಳಗೆ ಕಳೆದು ಹೊರಗೆ ಹೇಗೆ ಸಿಕ್ಕೇನು?


ಹೆಣ್ಣು ಬಯಸೋದು ಇದಿಷ್ಟನ್ನೇ. ನಿನ್ನ ತೀರಾ ಖಾಸಗಿಯಾದಂತಹ ಸಮಯದಲ್ಲಿ ನನ್ನ ಬಿಟ್ಟರೆ ಬೇರೆ ಯಾರೂ ಇಲ್ಲ ಅಂತ ತಿಳಿದಾಗ, ಆಗೋ ಸಂತೋಷ ಇದೆ ನೋಡು, ಸಾವಿರ ಕೋಗಿಲೆಗಳು ಒಮ್ಮೆಲೆ ಕುಹೂ ಕುಹೂ ಎಂದಂತೆ. ನಿನ್ನ ಮೈ ಮನಸೆಲ್ಲಾ ಅವರಿಸಿದ ಪರಿಗೆ ಕರಗಿ ಕರಗಿ ಹೋಗಿರುವೆ. ಆಣೆ ಮಾಡಿಯಾದರೂ ಹೇಳುವೆ. ‘ನಿನ್ನ ಬಿಟ್ಟು ಬದುಕಲು ಸಾಧ್ಯವೇ ಇಲ್ಲ.’


ಎಲ್ಲಾ ಗೊತ್ತಿದ್ದರೂ ನೀ ಹೇಳಿದಂತೆ ಕೇಳಲು ಈ ಮೊಂಡು ಮನಸು ಒಪ್ಪ ಬೇಕಲ್ಲ. ಹೌದು ಕಣೊ ನಾನೊಂದು ರೀತಿ ಲೂಜ್. ಅಂದರೆ ಕ್ಯಾರೆಕ್ಟರ್ ನಿಂದ ಅಂತ ತಪ್ಪು ತಿಳಿಬೇಡ. ಬುದ್ಧು ತರಹ ಆಲೋಚನೆ ಮಾಡುವ ನನ್ನ ಹುಚ್ಚು ತಲೆ ಲೂಜ್. ನೀನು ಹೇಳಿದ ಹಾಗೆ ಕೇಳಿದರೆ ಸರಿಯಲ್ಲ ಅನಿಸುತ್ತೆ. ನಿನ್ನ ಕಾಡಿದಷ್ಟೂ ಖುಷಿಯಾಗುವುದು. ನೀನು ಹೀಗೆ ರಮಿಸಿದಷ್ಟೂ ಸಂಭ್ರಮ ದ್ವಿಗುಣ. ತ್ರಿಗುಣ. ಹೆಚ್ಚಾಗುತ್ತಲೇ ಹೋಗುತ್ತೆ. ಅದಕ್ಕಾದರೂ ನನ್ನ ಸಹಿಸಿಕೊ ಮಾರಾಯ. ಪ್ರೀತಿಸಿದ ತಪ್ಪಿಗಾದರೂ ಹಾಗೆ ಮಾಡು.


ಅಯ್ತು ನೀ ಹೇಳಿದ ಹಾಗೇ ಕೇಳ್ತೀನಿ. ಸ್ವಲ್ಪ ಮೊಂಡಾಟ ಮಾಡಲು ಬಿಡು. ನೀನಲ್ಲದೆ ಇಷ್ಟು ಸಲಿಗೆಯಿಂದ ಮತ್ತೆ ಯಾರ ಬಳಿ ಇರಲಿ. ಇಷ್ಟೊಂದು ಪ್ರೀತಿ ಕೊಟ್ಟ ಮೇಲೆ ಇದಿಷ್ಟು ಸಹಿಸಿಕೊ. ನನಗಾಗಿ ಅಷ್ಟೆ. ಗೊತ್ತು ಗೊತ್ತು ಬಿಡು ಹಳೆಯದನ್ನು ನೆನೆದರೆ ಎಷ್ಟೆಲ್ಲ ಸಹಿಸಿಕೊಂಡಿರುವೆ.


ಪ್ರತಿಯೊಂದು ಹೆಣ್ಣಿನೊಳಗೆ ಸನಾತನ ಪರಂಪರೆಯನ್ನು ಗರ್ಭಾವಸ್ಥೆಯಲ್ಲಿದ್ದಾಗಲೇ ತುರುಕಿ, ಅಳಿಸಲಾಗದಂತೆ ಅಚ್ಚೊತ್ತಿ, ಕಳಿಸಿರುವುದರಲ್ಲೇನೂ ಆಶ್ಚರ್ಯವಿಲ್ಲ. ಎಷ್ಟೊಂದು ತಿಳಿದುಕೊಂಡ ನಿನಗೆ ಹೇಳುವುದೇನಿದೆ. ಎಲ್ಲಾ ನನ್ನ ಕೈಯಲ್ಲಿದ್ದರೆ, ನೀನಾಡಿಸಿದ ಬೊಂಬೆಯಂತೆ ಕುಣಿದು ಕುಪ್ಪಳಿಸುತ್ತಿದ್ದೆ.


ಆದರೂ ನಿನ್ನ ಒತ್ತಾಯಕ್ಕೆ ಮಣಿದು ಕ್ಯಾಂಡಲ್ ಲೈಟ್ ಡಿನ್ನರ್ ವರೆಗೂ ಬಂದೆನಲ್ಲ, ಅದರಲ್ಲೇ ಒಂದಿಷ್ಟು ಖುಷಿಪಟ್ಟು ಸುಮ್ಮನಿರಬಾರದೆ? ಈಗ ಮತ್ತೆ ಹೊಸದಾದ ಪ್ಲಾನ್ ಮಾಡಿದೆ. ನನಗೆ ಇಷ್ಟ ಇಲ್ಲ ಅಂತ ಮಾತ್ರ ತಪ್ಪು ತಿಳಿಯಬೇಡ. ನಿನಗೇನು ಬೇಕೊ ಅದಕ್ಕಿಂತ ಹತ್ತು ಪಟ್ಟು ಜಾಸ್ತಿ ನನಗೆ ಬೇಕು. ನೀನಿರಬಹುದು, ನಿನ್ನ ಮಾತಿರಬಹುದು, ನಿನ್ನೊಂದಿಗೆ ಕಳೆಯುವ ಸಮಯವಿರಬಹುದು, ಎಲ್ಲದರಲ್ಲೂ ಭೀಮ ಪಾಲುಬೇಕು ಎನಿಸುವುದು.


ನಾವಿಬ್ಬರು ಹೀಗೆ ಜೊತೆಜೊತೆಯಾಗಿ ಹೋಗುವುದಾದರೆ, ಚಂದ್ರಲೋಕಕ್ಕೂ ಬರುವೆ. ಇಂದ್ರಲೋಕಕ್ಕೂ ಬರುವೆ. ಇನ್ನೊಂದು ಸೀರಿಯಸ್ ವಿಷಯ ಹೇಳುವೆ ಬೈಯ ಬೇಡ ಪ್ಲೀಸ್‌. ಯಮಲೋಕ ಸೇರೋದಾದರೂ, ಒಂದಾಗಿ ಒಟ್ಟೊಟ್ಟಿಗೆ ಹೋಗಿ ಬಿಡೋಣ. ಆ ಸಾವು ಕೂಡ ನಮ್ಮನ್ನ ಅಗಲಿಸಲಿಕ್ಕಾಗಬಾರದು. ಇದಕ್ಕೆಲ್ಲಾ ನಿನ್ನ ಪ್ರೀತಿನೆ ಕಾರಣ ಅಂತ ಎಷ್ಟು ಸಾವಿರ ಸಲ ಹೇಳಿದರೂ ಈ ಹುಚ್ಚುತನಕ್ಕೆ ಸಮಾಧಾನವಿಲ್ಲ. ಕೂಗಿ ಕೂಗಿ ಹೇಳ ಬೇಕೆನಿಸುವುದು. ಜನ ಹುಚ್ಚಿ ಎಂದಾರು. ಅಂದರೆ ಅನ್ನಲಿ ಬಿಡು ಎನ್ನುವ ದಾರ್ಷ್ಟ್ಯ ಬಂದು ಬಿಟ್ಟಿದೆ. ಯಾವುದಕ್ಕೂ ಕೇರೆ ಮಾಡಲ್ಲ ನೋಡು. ಹೇಗೆ ತಯಾರಿಸಿದೆ? ನಂಬಲಸಾಧ್ಯ!


ಈಗಿನ ನಿನ್ನ ಹಟ ಹೇಗೆ ನಿಭಾಯಿಸಲಿ? ನನ್ನೊಂದಿಗೆ ಪಯಣ ಅಂದರೆ ನಿನಗೆ ಅದೇನು ಖುಷಿ ಅಂತೀನಿ. ಮಕ್ಕಳ ತರ ಹಟ ಮಾಡಿದರೆ ಏನು ಉತ್ತರ ಕೊಡೋದು? ಯಾವಾಗಲೂ ನೀನು ಹೀಗೆ dilemma ದಲ್ಲಿ ಸಿಕ್ಕಿ ಹಾಕಿಸೋದು. ನನ್ನ ಪಾಡೇನು ಅಂತ ಯೋಚನೆ ಮಾಡಬೇಕೊ ಬೇಡ್ವೊ?


‘ನಿನಗೆ ಸಾಕಾದರೆ ಹೇಳು. ಒಂದು ಕ್ಷಣ ನಿಲ್ಲಲ್ಲ. ದೂರ ಹೊರಟು ಹೋಗುವೆ.’ ಹೀಗೆಲ್ಲ ಬಾಯಿ ಮಾತಿನಲ್ಲಿ ಹೇಳಿದಷ್ಟು ಸುಲಭ ಅಲ್ಲ ಮಾರಾಯ. ಈಗ ನೋಡು ನಾನೂ ಎಷ್ಟು ಒದ್ದಾಡುತ್ತ ಇದಿನಿ ಅಂತ. ನಿಜ ಮನಸಿನ ಮಾತು ಹೇಳ್ಲಾ?


ನಿನ್ನೊಂದಿಗೆ ಇಡೀ ಪ್ರಪಂಚನೇ ಸುತ್ತೊ ಆಸೆ ಕಣೊ. ಸಾಧ್ಯವಿಲ್ಲದ ಆಸೆಗಳನ್ನು ನಿನ್ನ ಮೇಲೆ ಹೇರಿ ಕಷ್ಟ ಕೊಡಲಾರೆ ಅಂತ ಇಷ್ಟು ದಿನ ಸುಮ್ಮನಿದ್ದೆ‌. ಈಗ ನೋಡಿದರೆ, ಹೇಳದೆ ಕೇಳದೆ ನಿನಗೇ ವಿಮಾನದಲ್ಲಿ ಕರೆದುಕೊಂಡು ಹೋಗುವ ಜೋಶ್ ಬಂದಿದೆ. ನನ್ನ ಕರ್ಮ. ಮೂರ್ನಾಲ್ಕು ದಿನ ಮನೆ ಬಿಟ್ಟು ಬರುವುದು, ನೀನು ತಿಳಿದಷ್ಟು ಸುಲಭ ಅಲ್ಲ.


ಸಾಕು ಸುಮ್ಮನಿರು. ಅಲ್ಲ ಅಂದದ್ದೆಲ್ಲಾ ಹೌದು ಅಂತ ಮಾಡುವವರೆಗೆ, ನೀನು ನೀರೂ ಕುಡಿಯಲ್ಲ. ನಿದ್ದೆನೂ ಮಾಡಲ್ಲ. ನಿಜ ಹೇಳ್ತೀನಿ. ಒಮ್ಮೊಮ್ಮೆ ಕೆಟ್ಟ ಧರ್ಮ ಸಂಕಟದಲ್ಲಿ ಸಿಕ್ಕಿಸಿ ಬಿಡುವೆ.


ಈಗ ನಿಂದೇನು ಹಟ? ನಿನ್ನೊಂದಿಗೆ ಪಯಣಿಸ ಬೇಕು ತಾನೆ? ಆಯ್ತು. ಡನ್ನ್. ಬರ್ತೀನಿ. ಜೀವನದಲ್ಲಿ ಎಂದೂ ಸುಳ್ಳು ಹೇಳಿಲ್ಲ. ನಿನಗೋಸ್ಕರ ಕೇವಲ ನಿನಗೋಸ್ಕರ ಸುಳ್ಳು ಹೇಳಿ ಬರುವೆ. ಮುಂದೆ ಏನೂ ಬೇಡಿಕೆ ಇಡುವಂತಿಲ್ಲ. ನಿಷ್ಟುರವಾಗಿ ಹೇಳುತ್ತಿರುವೆ. ಮನ ಕರಗುವ ಹಾಗೆ ಮತ್ತೆ ಏನಾದರು ಹೊಸತು ಹೂಡಿದೆ ಅಂದರೆ ಗುದ್ದುತೀನಿ ಅಷ್ಟೆ.


ಈಗ ಮನಸನ್ನು ಹದವಾಗಿ ತಯಾರಿಸಿರುವೆ. ಬಂದೇ ಬಿಡುವೆ ನಿನ್ನೊಂದಿಗೆ. ನೀ ಹೇಳಿದ ಹಾಗೆ ತೀರಾ ಖಾಸಗಿಯಾಗಿ ಬದುಕೋದು ಯಾವಾಗ? ನಿನ್ನಂಥ ಪ್ರೀತಿಸೊ ಹುಡುಗ ಸಿಕ್ಕಾಗಲೇ ತಾನೆ? ಸರಿ ಬಿಡು ನೀನಂದದ್ದೇ ಸೈ. ಹೊರಟೇ ಬಿಡೋಣ.


ವಿಮಾನದಲ್ಲಿ ನಿನ್ನೊಂದಿಗೆ ಕುಳಿತ ಕನಸು ರಾತ್ರಿ ಇಡೀ ಮಲಗಲು ಬಿಡಲಿಲ್ಲ ಮಾರಾಯ. ಏನು ಮಾಡಲಿ? ಕಣ್ಣುಗಳೆಲ್ಲ ಕೆಂಪಾಗಿ ಊದಿಕೊಂಡು ಟಿಬೇಟಿಯನ್ ತರಹ ಕಾಣುತ್ತಿರುವೆ. ಇನ್ನು ಮನೆಯಲ್ಲಿ ಅಪ್ಪ ಅಮ್ಮನಿಗೆ ಸುಳ್ಳು ಬೇರೆ ಹೇಳಿ ಹೊರಡ ಬೇಕು. ಒಂದಿಷ್ಟು ಆಚೆ ಈಚೆ ಆದರೆ ನಮ್ಮ ಪ್ರೀತಿಗೇ ಸಂಚಕಾರ. ಬೇಡ ಬೇಡ ಹಾಗಾಗುವುದು ಬೇಡ. ನಮ್ಮ ಕನಸು ನನಸಾಗಲೇ ಬೇಕು. ನೀನು ಹೇಳಿದ ಹಾಗೆ ಇನ್ನರ್ ಕಾನ್ಶಿಯಸ್ ಗೆ ಮೆಸೇಜ್ ಕಳಿಸಿರುವೆ. ಖಂಡಿತಾ ಆಕಾಶದಲ್ಲಿ ಹಾರುವುದು ಸತ್ಯ.  


ಮನಸಿನಾಳದಲ್ಲಿ ಅಳುಕು. ಎಲ್ಲೊ ಒಂದು ಕಡೆ ಮೂಲೆಯಲ್ಲಿ ಕೊರಿತಾ ಇದೆ. ಮೋಸ ಹೋಗಿಬಿಟ್ಟರೆ. ಹಾಗೇನಾದರು ಮೋಸ ಹೋದೆ ಅಂತ ಇಟ್ಕೊ. ನನ್ನ ಮಾತ್ರ ಜೀವಂತ ನೀನಲ್ಲ ಯಾರೂ ನೋಡೊಕಾಗಲ್ಲ. ವಿಶ್ವಾಸ ಇದೆ. ನೀ ಮೋಸಗಾರನಲ್ಲ. ನನ್ನ ನಂಬಿದ ನಿನ್ನ ಮೇಲೆ ನನಗೂ ನಂಬಿಕೆ ಇದೆ. ಇರಲೇ ಬೇಕು.


ಬದುಕಿನಲ್ಲಿ ಗಟ್ಟಿಯಾಗಿ ನೆಲೆಯೂರಲು ಬೇಕಾಗಿರುವುದು ಈ ನಂಬಿಕೆ, ವಿಶ್ವಾಸ, ಭರವಸೆ ತಾನೆ? ಯಾಕೊ ಗೊತ್ತಿಲ್ಲ. ಎಂದೂ ಇಲ್ಲದ ಅವಿಶ್ವಾಸ ಇಂದು ಕಾಡುತ್ತಿದೆ. ಹಾಗಂತ ಬೇಸರ ಪಡಬೇಡ್ವೊ.


ನಿನಗೆ ಗೊತ್ತಿಲ್ಲ ಎಲ್ಲಾ ಹೆಣ್ಣುಗಳೂ ಹೀಗೆ. ಒಮ್ಮೆ ತಾನು ನಿಂತ ನೆಲ ಬಿಟ್ಟು ಹೊರಟರೆ ಸಾಕು. ಅವಳಿಗೆ ಗಟ್ಟಿಯಾದ ನೆಲೆ ಬೇಕು. ಇಲ್ಲ ಅಂದರೆ ಅವಳಿಗೆ ನೆಲೆ ಇಲ್ಲದೆ ಬೀದಿ ಪಾಲಾಗಿ ಒದ್ದಾಡಬೇಕು. ಗಟ್ಟಿಯಾಗಿ ನಿಂತು ತೋರಿಸುವ ಶಕ್ತಿ ಅವಳಿಗಿದೆ. ಆದರೆ ಮೋಸ ಹೋದಾಗ ಸಹಿಸಿಕೊಂಡು ಮತ್ತೆ ಮೇಲೇಳುವುದಿದೆಯಲ್ಲ, ಆ ಪಾಡು ಯಾವ ಹೆಣ್ಣಿಗೂ ಬೇಡ.


ನಿನ್ನೊಂದಿಗೆ ಸಾವು ಬಂದರೂ ಸರಿ ಅನ್ನೊ ಹಂತ ತಲುಪಿದ ಮೇಲೆ ಯಾವುದಕ್ಕೂ ಮೀನ ಮೇಷ ಎಣಿಸಲಾರೆ.


ಮನೆಯಿಂದ ಕೀಳಲಾಗದ ಕಾಲುಗಳನ್ನು ಕಿತ್ತುಕೊಂಡು ಹೊರಟೆ ನೋಡು. ಅಬ್ಬಾ ಈ ಫಿಲೀಂಗೇ ಫೀಲಿಂಗು! ಅದ್ಭುತ! ನಿನ್ನ ಮಾತನ್ನು ಹೂಂ ಅಂತ ಕೇಳಿದ್ದಕ್ಕೆ ಇದರ ಅನುಭವ ಆಯ್ತು. ನೀ ಹೇಳೋದರಲ್ಲಿ ಸತ್ಯ ಇದೆ ಅಂತ ಈಗ ಅನಿಸುತ್ತಿದೆ. ದಿಟ್ಟ ಹೆಜ್ಜೆ ಅಂದರೆ ಏನೆಂದು ಈಗ ತಿಳಿಯಿತು.


ನನ್ನ ಬದುಕು. ನನ್ನ ಜೀವನ. ನನ್ನ ನಿರ್ಧಾರ. ನನ್ನ ಹುಡುಗ. ನನ್ನ ಪಯಣ. ನನ್ನ ಗಮ್ಯ. ಆಹಾ! ಈ ಸಂತೋಷ ನಿನ್ನಿಂದ. ಈಗ ನಿನಗಾಗಿ ನಾನು. ನಡೆದಿರಲಿ ನಮ್ಮ ಪಯಣ ಕೊನೆ ತನಕ.


ವಿಮಾನದಲ್ಲಿ ಕುಳಿತಾಗ ಅಬ್ಬಾ ಎಂದು ಉಸಿರು ಬಿಟ್ಟೆ. ಈಗ ನಾನು ನೀನು ಇಬ್ಬರೆ. ನಮ್ಮದೆ ಪ್ರಪಂಚ. ಎಷ್ಟು ಸಮಾಧಾನ, ಸಂತೋಷ, ಸಂಭ್ರಮ ಅನಿಸುತ್ತಿದೆ. ಇಂಥ ಸಮಯದಲ್ಲಿ ಅದೆಕೋ ನೀನು ವಿಚಿತ್ರವಾಗಿ ಗುರಾಯಿಸಿದೆ. ಒಂದು ಕ್ಷಣ ಗಲಿಬಿಲಿಗೊಂಡೆ.


ಒಳಗೊಳಗೇ ಈ ಗಂಡಸರು ಹೀಗೆನೆ ಅನಿಸಿತು. ನನ್ನ ಹುಡುಗ ಎಂದುಕೊಂಡು ನಂಬಿ ಬಂದವಳಿಗೆ ಏನಾಗುವುದೊ ಎಂಬ ದುಗುಡ, ತಲ್ಲಣಕ್ಕೀಡು ಮಾಡಿತು. ಇವನ್ಯಾಕೊ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾನೆ ಅನಿಸಿದರೆ, ಅದು ಅಕ್ಷರಶಃ ಸತ್ಯ. ಹೆಣ್ಣಿಗೆ ಅದು ಗೊತ್ತಾಗಿ ಬಿಡುತ್ತದೆ. ನೀನೂ ಹೀಗಾ? ನನ್ನೆದೆ ಒಡೆಯಿತು. ನೀ ಬೀರಿದ್ದು ಅದೇ ದೃಷ್ಟಿ. ಇಷ್ಟು ಮುಂದೆ ಬಂದಾಗಿದೆ. ಆಕಾಶದಲ್ಲಿ ಹಾರುತಿದ್ದೇವೆ. ನೆಲವಿಲ್ಲ. ಆಕಾಶ ಸಿಗುವುದಿಲ್ಲ. ಹೀಗೆ ಮಾಡ ಬೇಡ್ವೊ. ಈ ಗೊಂದಲಕ್ಕೆ ಅಂತಿಮ ಹೇಳು. ತುಂಬಾ ಕಷ್ಟ ಅಗ್ತಿದೆ ಕಣೊ. ಅಳು ಬರ್ತಾಯಿದೆ. ಬಂತು. ಬಿತ್ತು ಕಣ್ಣೀರ ಹನಿ.


ಇನ್ನೇನು ಕೆಳಗುದುರುವ ಹನಿಯನ್ನು ಬೆರಳ ತುದಿಯಿಂದ ಹಿಡಿದು, ‘ಹುಚ್ಚಿ!!!’ ಅಂದೆಯಲ್ಲಾ, ಎಲ್ಲಾ ದ್ವಂದ್ವ ದೂರಾಗಿ ನೀ ಹತ್ತಿರವಾದ ಗಳಿಗೆ, ಆ ಸಮಯವನ್ನು ಹಾಗೇ ಅಂಗೈ ಮುಷ್ಟಿ ಮಾಡಿ ಹಿಡಿದಿಡಬೇಕೆನಿಸಿತು. ಅಯ್ಯೊ ಹೇಗೆ ಹಿಡಿದಿಡಲಿ? ಒದ್ದಾಡಿ ಬಿಟ್ಟೆ.


‘ಇರಲಿ ಬಿಡು. ಆರಾಮಾಗಿ ಕೂತು ಜೂಸ್ ಕುಡಿ. ಮೂರು ಗಂಟೆ ಮಾತಾಡುತ್ತ ಹೋಗೋಣ. ಒಂದು ಕ್ಷಣನೂ ಹಾಳು ಮಾಡುವುದು ಬೇಡ.’


ಆ ನಿನ್ನ ಮಾತುಗಳು ಗಡಿಯಲ್ಲಿರುವ ಕೋಟಿ ಸೈನಿಕರ ಶಕ್ತಿ ಕೊಟ್ಟಿತು. ನನಗೆ ನೀನು ಹೀಗೆ ಬೇಕು, ಶಕ್ತಿಯಾಗಿ, ಶೌರ್ಯದ ಪ್ರತೀಕವಾಗಿ, ಕೆಚ್ಚೆದೆಯ ಪ್ರೇಮಿಯಾಗಿ. ಇನ್ನೂ ಏನೆನೊ?


ನಮ್ಮಿಬ್ಬರ ಮಾತನಾಡುವ ರೀತಿ, ನೋಟ, ನಗು, ತಮಾಷೆಗೆ ಏರ್ ಹೋಸ್ಟೆಸ್ ಗಳೆಲ್ಲಾ ಮುಸಿಮುಸಿ ನಗುತ್ತ, ನನ್ನ ಕಣ್ಣು ತಪ್ಪಿಸಿ ನಿನಗೆ ಥಂಬ್ಸ್ ಅಪ್ ಮಾಡಿ ತೋರಿಸಿದ್ದು, ಕದ್ದು ನೋಡಿ, ಒಳಗೊಳಗೆ ಸಂಭ್ರಮಿಸಿದೆ. ಕಳ್ಳ ನೋಟ ಬೀರಿದರೆ, ಅಲ್ಲಿ ನೀನೂ ಕಳ್ಳನೇ. ಅಯ್ಯೋ ಇದೆಂಥ ಕಚಗುಳಿ! ಕೇಳ ಬೇಡ ಕತೆ! ಮನಸು ನಕ್ಕು ನಲಿದು, ಕುಣಿದು ಕುಪ್ಪಳಿಸಿತು.


ಈ ಬದುಕಿನ ಪಯಣ ಹೀಗೆ ಸಾಗಿರಲಿ ಮಾರಾಯ. ಇದರ ಗಮ್ಯ ಬರುವುದೇ ಬೇಡ. ನಾನು ಹೇಳುವೆ. ನೀನು ಕೇಳುವೆ. ನೀನು ಹೇಳುವೆ. ನಾನು ಕೇಳುವೆ. ಬರೀ ಮಾತು ಮಾತು ಮಾತು. ಮುತ್ತಿನಂತೆ ಉದುರಿದ್ದೇ ಉದುರಿದ್ದು.


ನೀ ನನ್ನ ನೋಡುವುದೇ ಸಂಭ್ರಮ. ನಾ ಕದ್ದು ಕದ್ದು ಕಣ್ಣು ತಪ್ಪಿಸಿ ಒಮ್ಮೆ ನೋಡುತ್ತ. ಇನ್ನೊಮ್ಮೆ ನೋಡಲಾಗದೆ, ನೋಟ ಸರಿಸುತ್ತ, ಎಲ್ಲಾ ಬಲ್ಲ ನಿನಗೆ ಇದೊಂದು ಆಟ. ಆ ಆಟದ ಖುಶಿ ನಿನಗೆಷ್ಟು ಇತ್ತೋ ಅದರ ಸಾವಿರ ಸಾವಿರ ಪಟ್ಟು ನನಗೆ.


ನಮ್ಮ ಪ್ರೀತಿಯ ಪಯಣಕೆ ವಿಮಾನದ ವಿಹಾರವೊಂದು ನೆಪ ಅಷ್ಟೆ. ಸಾಗೋಣ ಹೀಗೆ ಸಾಗರದ ಆಚೆ ಈಚೆ. ನೀನಿದ್ದರೆ ಸಾಕು ಅದೇ ನಮ್ಮ ಪ್ರಪಂಚ. ಅದೇ ಪ್ರೀತಿಯ ಸಾಗರ.


*ಸಿಕಾ*