ಕೊನೆಗೂ ಹಠ ಸಾಧಿಸಿದ ಮುಖ್ಯಮಂತ್ರಿ; ನೇಮಕಾತಿ ಸಕ್ರಮ ಸುಗ್ರೀವಾಜ್ಞೆಗೆ ಸಮ್ಮತಿ, ಸ್ಪೀಕರ್ ಮಾತಿಗೂ ಮನ್ನಣೆ ನೀಡದ ಸಚಿವ ಸಂಪುಟ 

ಕೊನೆಗೂ ಹಠ ಸಾಧಿಸಿದ ಮುಖ್ಯಮಂತ್ರಿ; ನೇಮಕಾತಿ ಸಕ್ರಮ ಸುಗ್ರೀವಾಜ್ಞೆಗೆ ಸಮ್ಮತಿ, ಸ್ಪೀಕರ್ ಮಾತಿಗೂ ಮನ್ನಣೆ ನೀಡದ ಸಚಿವ ಸಂಪುಟ 


ಅಕ್ರಮ ಫಲಾನುಭವಿಗಳಿಗೆ ಸುಗ್ರೀವಾಜ್ಞೆ ಮೂಲಕ ರಕ್ಷಣೆ ನೀಡಲು ಗಾಳಿವೇಗದಲ್ಲಿ ಮುನ್ನುಗ್ಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಓಟವನ್ನು ಹಿಡಿದು ನಿಲ್ಲಿಸುವಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಏದುಸಿರು ಬಿಟ್ಟಿದ್ದಾರಲ್ಲದೆ, ಕಡೆಯಲ್ಲಿ ವಿಫಲರೂ ಆಗಿದ್ದಾರೆ. ಸುಗ್ರೀವಾಜ್ಞೆಗೆ ವಿರೋಧ ವ್ಯಕ್ತಪಡಿಸಿದ ಸ್ಪೀಕರ್ ಮಾತನ್ನು ಸಂಪುಟ ದರ್ಜೆ ಸಚಿವರು ಉಪೇಕ್ಷಿಸಿದ್ದಾರಲ್ಲದೆ, ಒಂದಿನಿತೂ ಬೆಲೆ ನೀಡದೇ ನಿರ್ದಿಷ್ಟ ಸಮುದಾಯದ ಅಕ್ರಮ ಫಲಾನುಭವಿಗಳ ಪರ ವಹಿಸಿದ್ದ ವಕಾಲತ್ತಿಗೆ ಮನ್ನಣೆ ಗಿಟ್ಟಿಸಿಕೊಂಡಿದ್ದಾರೆ. ‘ಡೆಕ್ಕನ್ ನ್ಯೂಸ್’ ಮೊದಲು ವರದಿ ಮಾಡಿದ್ದ ಸರ್ಕಾರದ ಈ ನಿರ್ಧಾರದ ಬೆಳವಣಿಗೆ ಕುರಿತು ಜಿ.ಮಹಂತೇಶ್ ವರದಿ.

ಅಕ್ರಮಗಳ ಮೂಲಕ ನೇಮಕವಾಗಿದ್ದಾರೆ ಎನ್ನಲಾಗಿರುವ (1998,1999,2004) ಆರೋಪಿತ ಕೆಎಎಸ್ ಅಧಿಕಾರಿಗಳನ್ನು  ರಕ್ಷಿಸುವ ಉದ್ದೇಶ ಹೊಂದಿರುವ ಸುಗ್ರೀವಾಜ್ಞೆಯನ್ನು ಹೊರಡಿಸುವ ನಿರ್ಧಾರದಿಂದ ಹಿಂದೆ ಸರಿಯದ ಮೈತ್ರಿ ಸರ್ಕಾರ, ಇದಕ್ಕೆ ಸಚಿವ ಸಂಪುಟದಿಂದಲೂ ಸ್ಥಿರೀಕರಿಸಿಕೊಂಡಿದೆ. 


ವಿಶೇಷ ಎಂದರೆ ಈ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿದ್ದ ಸ್ಪೀಕರ್ ಅವರ ಮಾತನ್ನು ಮುಖ್ಯಮಂತ್ರಿಯಾದಿಯಾಗಿ ಇಡೀ ಸಚಿವ ಸಂಪುಟವೇ ಉಪೇಕ್ಷಿಸಿದೆಯಲ್ಲದೆ, ಸುಗ್ರೀವಾಜ್ಞೆಯನ್ನು ಹೊರಡಿಸುವ ಸಂಬಂಧ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರು ವಿರೋಧಿಸಿ ಬರೆದಿದ್ದ ಪತ್ರಗಳೆಲ್ಲವನ್ನೂ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಸಂಪುಟ ದರ್ಜೆ ಸಚಿವರು ಅನಾಮತ್ತಾಗಿ ತಿಪ್ಪೆಗೆ ಎಸೆದಂತಾಗಿದೆ. 


ಸಚಿವ ಸಂಪುಟ ಸಭೆ ಸೇರುವ ಎರಡು ದಿನ ಮೊದಲೇ ಸ್ಪೀಕರ್ ರಮೇಶ್ ಕುಮಾರ್ ಅವರು ಸುಗ್ರೀವಾಜ್ಞೆಯಿಂದ ಆಗುವ ಬಾಧಕಗಳು ಮತ್ತು ತಪ್ಪೆಸಗದ ಅಧಿಕಾರಿಗಳಿಗೆ ಆಗಲಿರುವ ಅನ್ಯಾಯದ ಕುರಿತು ಪತ್ರದಲ್ಲಿ ಮನವರಿಕೆ ಮಾಡಿದ್ದರು. ಸ್ಪೀಕರ್ ಅಭಿಪ್ರಾಯವನ್ನು ರಾಜ್ಯದ ಹಲವು ಶಾಸಕರು ಕೂಡ ಬೆಂಬಲಿಸಿದ್ದರಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ಪತ್ರ ಬರೆದಿದ್ದರು. 


ಈ ಪತ್ರಗಳ ಬಗ್ಗೆ ಚರ್ಚಿಸಬೇಕಿದ್ದ ಸಂಪುಟ ದರ್ಜೆ ಸಚಿವರು ಮೌನಕ್ಕೆ ಜಾರುವ ಮೂಲಕ ಅಕ್ರಮ ಫಲಾನುಭವಿಗಳು ಅದರಲ್ಲೂ ನಿರ್ದಿಷ್ಟ ಸಮುದಾಯಕ್ಕೆ ಸೇರಿರುವ ಅಧಿಕಾರಿಗಳ ಪರ ವಕಾಲತ್ತು ವಹಿಸಿದ್ದಾರೆ.

ಸ್ಪೀಕರ್ ಪತ್ರದಲ್ಲೇನಿದೆ?

"2019ರ ಮೇ 27ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸಿವಿಲ್ ಸೇವೆಗಳ(ಆಯ್ಕೆ ಪ್ರಾಧಿಕಾರ ಮೂಲಕ ಪ್ರಕಟಿಸಲಾದ ಅಂತಿಮ ಆಯ್ಕೆಪಟ್ಟಿಯ ಅನುಸರಣೆಯಲ್ಲಿ ನೇಮಕವಾದ ವ್ಯಕ್ತಿಗಳ ಸೇವಾ ರಕ್ಷಣೆ) ಅಧ್ಯಾದೇಶ 2019 ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಕೈಗೊಂಡಿರುವ ನಿರ್ಣಯಕ್ಕೆ ಸಂಬಂಧಿಸಿದಂತೆ ನಮ್ಮ ರಾಜ್ಯದ ಹಲವು ಶಾಸಕರುಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಶಾಸಕರುಗಳ ಭಾವನೆಗಳು ಏಕ ರೀತಿಯದ್ದಾಗಿರುತ್ತದೆ. ಯಾವುದೇ ಸರ್ಕಾರಿ ನೌಕರರ ಸೇವಾ ಭದ್ರತೆಯನ್ನು ಒದಗಿಸುವ ಸರ್ಕಾರಿ ನಿರ್ಣಯಕ್ಕೆ ನಮ್ಮ ಯಾರ ಆಕ್ಷೇಪವೂ ಇರಕೂಡದು. ಆದರೆ ಸೇವಾ ಜೇಷ್ಠತೆಯನ್ನ ಪರಿಗಣಿಸುವಾಗ ಅತ್ಯಂತ ಜಾಗರೂಕತೆಯಿಂದ ನಾವು ಹೆಜ್ಜೆಯನ್ನು ಇಡಬೇಕಾಗುತ್ತದೆ. ಯಾವುದೇ ಒಂದು ಸದುದ್ದೇಶದಿಂದ ಮಾಡುವ ಕೆಲಸ ನಮ್ಮ ಅರಿವಿಲ್ಲದೆ ನಿರಪರಾಧಿಗಳಾದ ಇತರರಿಗೆ ವಿನಾ ಕಾರಣ ಅನ್ಯಾಯ ಆಗದಂತೆ ನಾವು ಜಾಗ್ರತೆ ವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಸಕರ ಪತ್ರವನ್ನು ಅವಲೋಕಿಸಿ ಅಗತ್ಯ  ಜರುಗಿಸಬೇಕು ಎಂದು ಬಯಸುತ್ತೇನೆ," ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಎಚ್ಚರಿಸಿದ್ದರು.


ಇದಕ್ಕೆ ಪೂರಕವಾಗಿ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಅವರು ಸಹ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. "ಸುಗ್ರೀವಾಜ್ಞೆಯಿಂದ ಹಲವು ಕೆಎಎಸ್ ವೃಂದದ ಅಧಿಕಾರಿಗಳ ಸೇವಾ ಹಿರಿತನಕ್ಕೆ ಧಕ್ಕೆ ಆಗುವುದಷ್ಟೇ ಅಲ್ಲದೆ ಅವರಿಗೆ ನ್ಯಾಯಯುತವಾಗಿ ಲಭಿಸಬೇಕಾದ ಬಡ್ತಿಗಳು ವರ್ಷಾನುಗಟ್ಟಲೇ ಮುಂದೂಡಲ್ಪಡುತ್ತದೆ. ಕೆಲವೇ ಅಧಿಕಾರಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸೇವಾ ಭದ್ರತೆ ಮತ್ತು ಸೇವಾ ಹಿರಿತನ ನೀಡಿ ಯಾವ ತಪ್ಪೂ ಮಾಡದ ಇತರೆ ಅಧಿಕಾರಿಗಳನ್ನು ಶಿಕ್ಷಿಸುವುದು ಸರಿಯಾದ ಕ್ರಮವಲ್ಲ.  ಹೀಗಾಗಿ ಈ ವಿಷಯದ ಸಾಧಕ ಬಾಧಕಗಳನ್ನು ಮತ್ತೊಮ್ಮೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಾಧಿತ ಅಧಿಕಾರಿಗಳಿಗೆ ನ್ಯಾಯ ದೊರಕಿಸಬೇಕು " ಎಂದು ಪತ್ರದಲ್ಲಿ ಮನವರಿಕೆ ಮಾಡಿದ್ದರು.


ಅಕ್ರಮ ಫಲಾನುಭವಿಗಳು ಎಂದು ಸಿಐಡಿ ಮತ್ತು ಹೈಕೋರ್ಟ್ ರಚಿಸಿದ್ದ  ಸತ್ಯಶೋಧನಾ ಸಮಿತಿ ವರದಿಯಲ್ಲಿ ಗುರುತಿಸಲಾಗಿರುವ  ಅಧಿಕಾರಿಗಳ ರಕ್ಷಣೆಗೆ ವಿಶೇಷ ಅಧಿನಿಯಮ ರಚಿಸುವುದು ಅಗತ್ಯ ಎಂದು ಮೈತ್ರಿ ಸರ್ಕಾರ ಮಾಡಿದ್ದ  ಪ್ರತಿಪಾದನೆಯನ್ನು ಸಚಿವ ಸಂಪುಟ ಮುಂದುವರೆಸಿದೆ. 


ಆಗಿರುವ ತಪ್ಪುಗಳಿಗೆ  ಅಧಿಕಾರಿಗಳು ಹೊಣೆಯಲ್ಲ; ಅವರದಲ್ಲದ ತಪ್ಪಿಗಾಗಿ ಈ ಅಂತರದ ಅವಧಿಯಲ್ಲಿ ಅವರುಗಳನ್ನು ಸ್ಥಳಾಂತರಿಸುವುದು, ಸೇವೆಯಿಂದ ತೆಗೆದು ಹಾಕುವುದು ಅಥವಾ ಬೇರೊಂದು ಸೇವೆಗೆ ವರ್ಗಾಯಿಸುವುದು ಸಮರ್ಥನೀಯವಲ್ಲ ಎಂದು ಸರ್ಕಾರ ಮಂಡಿಸಿದ್ದ ವಿತಂಡವಾದಕ್ಕೆ ಸಂಪುಟ ಸಚಿವರೂ ತಾಳ ಹಾಕಿದ್ದಾರೆ.


ಅದೇ ರೀತಿ ನೇಮಕಾತಿ ಪ್ರಾಧಿಕಾರವು (1)ನೇ ಉಪ ಪ್ರಕರಣದಲ್ಲಿ ನಿರ್ದಿಷ್ಟ ಪಡಿಸಿದ  ಮಿತಿ ಅವಧಿಯು ಮುಕ್ತಾಯವಾದ  ನಂತರ  ಅಂತಹ ಅಂತಿಮ ಆಯ್ಕೆಪಟ್ಟಿಯನ್ನು ಪರಿಷ್ಕರಿಸುವುದರಿಂದ  ಉಂಟಾದ ಅನರ್ಹತೆಯ ಆಧಾರದ ಮೇಲೆ ಅಂತಿಮ ಪಟ್ಟಿ ಅಥವಾ ಪರಿಷ್ಕರಿಸಿದ  ಪಟ್ಟಿಯ ಅನುಸರಣೆಯಲ್ಲಿ ಹಾಗೆ ನೇಮಕಗೊಂಡ ಅಥವಾ ಆಯ್ಕೆಯಾದ ಅಭ್ಯರ್ಥಿಗಳನ್ನು  ಸೇವೆಯಿಂದ ತೆಗೆದು ಹಾಕತಕ್ಕದ್ದಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.


ಸುಗ್ರೀವಾಜ್ಞೆ ಪ್ರಕಾರ ಯಾವೊಬ್ಬ ಸರ್ಕಾರಿ ನೌಕರನನ್ನು ಒಂದು ಸೇವೆಯಿಂದ ಮತ್ತೊಂದು ಸೇವೆಗೆ ಆತನ ಅಭಿಮತಕ್ಕೆ  ವಿರುದ್ಧವಾಗಿ ನಡೆದುಕೊಳ್ಳುವಂತಿಲ್ಲ, ಅಥವಾ  ಪೂರ್ವಸ್ಥಿತಿಗೆ(ಖಇಗಿಇಖಖಿ)ದೂಡುವಂತಿಲ್ಲ. ಹಾಗೆಯೇ ಈ ಸುಗ್ರೀವಾಜ್ಞೆ ಪ್ರಕಟಣೆಗೆ ಮೊದಲು ಹೊರಡಿಸಿದ ಯಾವುದಾದರೂ ಪುನರಾವಲೋಕಿತ ಆಯ್ಕೆ ಪಟ್ಟಿ ಇದ್ದಲ್ಲಿ ಅದರ ಅನುಸಾರವಾಗಿ ನೇಮಕಗೊಳ್ಳಲು ಅಥವಾ ಉನ್ನತೀಕರಣಗೊಳ್ಳಲು, ವರ್ಗಾವಣೆಗೊಳ್ಳಲು ಇಚ್ಛಿಸಿದ  ಅಭ್ಯರ್ಥಿಯ ನೇಮಕಾತಿ , ಉನ್ನತೀಕರಣ ಅಥವಾ ವರ್ಗಾವಣೆಯನ್ನು ನಿರಾಕರಿಸುವಂತಿಲ್ಲ ಎಂದೂ ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ.

 
ಆಯ್ಕೆಗೊಂಡ ಅಭ್ಯರ್ಥಿಗಳ ನೇಮಕಾತಿ ಅಥವಾ ಉನ್ನತೀಕರಣ ಅಥವಾ ವರ್ಗಾವಣೆಗೆ  ಅಗತ್ಯವಿರುವ, ಅಷ್ಟು ಸಂಖ್ಯೆಯ ಸಂಖ್ಯಾತಿರಿಕ್ತ ಹುದ್ದೆಗಳನ್ನು ಆರ್ಥಿಕ ಇಲಾಖೆಯ ಸಹಮತಿಯನ್ನು ಪೂರ್ವಭಾವಿಸಿಕೊಂಡು ರಾಜ್ಯ ಸರ್ಕಾರವೇ ಸೃಜಿಸಲು ಸುಗ್ರೀವಾಜ್ಞೆ ಅವಕಾಶ ಮಾಡಿಕೊಡಲಿದೆ. 


ಈ ಸುಗ್ರೀವಾಜ್ಞೆಯ ಉಪಬಂಧಗಳಿಗೆ ವಿರುದ್ಧವಾಗಿ ಯಾವುದೇ ಅಂತಹ ಆಯ್ಕೆಪಟ್ಟಿ, ನೇಮಕಾತಿ, ನಿಮ್ನೀಕರಣ, ಪೂರ್ವಸ್ಥಿತಿಗೆ ತರುವುದು , ತೆಗೆದುಹಾಕುವುದು ಅಥವಾ ವರ್ಗಾವಣೆಯ ಪುನರಾವಲೋಕನಕ್ಕಾಗಿ ಯಾವುದೇ ನ್ಯಾಯಾಲಯ, ಯಾವುದೇ ನ್ಯಾಯಾಧೀಕರಣ ಅಥವಾ ಯಾವುದೇ ಪ್ರಾಧಿಕಾರದ ಮುಂದೆ ಯಾವುದೇ ದಾವೆ ಅಥವಾ ನಡವಳಿಗಳನ್ನು ನಿರ್ವಹಿಸಲು ಇರುವ ಅವಕಾಶಗಳನ್ನು ಸುಗ್ರೀವಾಜ್ಞೆ ಕಸಿದುಕೊಳ್ಳಲಿದೆ. 


ಇದಲ್ಲದೆ, ಈ ಉಪಬಂಧಗಳಿಗೆ ವಿರುದ್ಧವಾಗಿ ಯಾವುದೇ ಅಂತಹ ಪ್ರಕರಣಗಳನ್ನು ಪರಿಷ್ಕರಿಸುವಂತೆ ನಿರ್ದೇಶನ ನೀಡಲು  ಯಾವುದೇ ನ್ಯಾಯಾಲಯವು ಯಾವುದೇ ಡಿಕ್ರಿ, ಆದೇಶವನ್ನು ಹೊರಡಿಸಲಾಗದು ಎಂಬ ಅಂಶವೂ ಸುಗ್ರೀವಾಜ್ಞೆಯಲ್ಲಿ ಸೇರ್ಪಡೆಗೊಂಡಿರುವುದು ನ್ಯಾಯಾಲಯಗಳ ಉಪಸ್ಥಿತಿಯನ್ನೂ ಕಡೆಗಣಿಸಿದಂತಾಗಿದೆ.


ರಾಜ್ಯಪಾಲರ ಅಂಕಿತಕ್ಕಾಗಿ ಮೈತ್ರಿ ಸರ್ಕಾರ  ಕಳಿಸಿರುವ ಕರ್ನಾಟಕ  ಸಿವಿಲ್ ಸೇವೆಗಳ(ಆಯ್ಕೆ ಪ್ರಾಧಿಕಾರ ಮೂಲಕ ಪ್ರಕಟಿಸಲಾದ ಅಂತಿಮ ಆಯ್ಕೆಪಟ್ಟಿಯ ಅನುಸರಣೆಯಲ್ಲಿ ನೇಮಕವಾದ ವ್ಯಕ್ತಿಗಳ ಸೇವಾ  ರಕ್ಷಣೆ)  ಸುಗ್ರೀವಾಜ್ಞೆಯಲ್ಲಿ ಅಡಕವಾಗಿರುವ ಹಲವು ಅಂಶಗಳನ್ನು 'ಡೆಕ್ಕನ್'ನ್ಯೂಸ್'  ಬಹಿರಂಗಗೊಳಿಸಿದ್ದನ್ನು ಸ್ಮರಿಸಬಹುದು.