ಸರ್ಕಾರ ಉರುಳುವ ಮೊದಲೇ ಕಡತ ಯಜ್ಞ : ಬಿಜೆಪಿ ಮೂಗಿಗೆ ಬಡಿದಿದೆ ಭ್ರಷ್ಟತೆಯ ವಾಸನೆ

ಸರ್ಕಾರ ಉರುಳುವ ಮೊದಲೇ ಕಡತ ಯಜ್ಞ : ಬಿಜೆಪಿ ಮೂಗಿಗೆ ಬಡಿದಿದೆ ಭ್ರಷ್ಟತೆಯ ವಾಸನೆ

ಸರ್ಕಾರ ಈಗಲೋ ಆಗಲೋ ಎಂಬ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಕೆಲವು ಸಚಿವರು ಕಡತ ವಿಲೇವಾರಿ ಮತ್ತು ಬಿಲ್ ಪಾವತಿಯಲ್ಲಿ ಕಾರ್ಯಮಗ್ನಾರಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಬಿಜೆಪಿಗೆ ಸಂಶಯ ಇದೆ ಎನ್ನುತ್ತಾರೆ ಜಿ.ಆರ್.ಸತ್ಯಲಿಂಗರಾಜು. 

ಹಾಳೂರಿಗೆ ಉಳಿದವನೇ ಗೌಡ ಎಂಬ ನಾಣ್ನುಡಿ ನೆನಪಿಸುವಂತೆ, ಆಗಲೋ ಈಗಲೋ ಎಂಬಂತಿರುವ ಸರ್ಕಾರದಲ್ಲಿ ಸಚಿವರಾಗಿರುವವರು ಎರ್ರಾಬಿರ್ರಿಯಾಗಿ ಬಿಲ್ ಪಾವತಿ, ವರ್ಗಾವಣೆ ಹಾಗು ಇತರೆ ಕಡತಗಳನ್ನ ವಿಲೇ ಮಾಡುವುದರಲ್ಲಿ ನಿರತರಾಗಿರುವುದು, ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ.

ಏನೇ ಮಾಡಿದರೂ ಜಗ್ಗಲ್ಲ ಎಂಬ ಬಿಗಿಪಟ್ಟಲ್ಲಿರುವ ಅತೃಪ್ತರ ಸಂಖ್ಯೆ ದಿನದಿನಕ್ಕೂ ಏರುತ್ತಿದೆ. ಏನಾದರೂ ಮಾಡಿ ಒಲಿಸಬಹುದಾ ಎಂಬ ತಂತ್ರದ ಭಾಗವಾಗಿ ಆಡಳಿತ ಹಿಡಿದಿರುವ ಎರಡೂ ಪಕ್ಷಗಳು ತಮ್ಮ ತಮ್ಮ ಸಚಿವರ ಸಾಮೂಹಿಕ ರಾಜೀನಾಮೆ ಪತ್ರ ಪಡೆದಿಟ್ಟುಕೊಂಡಿವೆ. ಮುಖ್ಯಮಂತ್ರಿ ಇದನ್ನ ಅಂಗೀಕರಿಸುವಂತೆ ರಾಜ್ಯಪಾಲರಿಗೆ ಕೊಟ್ಟು  ಶಿಫಾರಸು ಮಾಡಿಲ್ಲದಿರುವುದರಿಂದ ರಾಜೀನಾಮೆ ಲೆಕ್ಕಕ್ಕೆ ಜಮೆಯಾಗದ ಪ್ರಹಸನವಷ್ಟೇ.

ಸಂವಿಧಾನಾತ್ಮಕವಾಗಿ ಅವರಿನ್ನೂ ಮಂತ್ರಿಗಳಾಗಿಯೇ ಇರುವುದರಿಂದ ತರಾತುರಿಯಾಗಿ ಬಿಲ್‍ಗಳಿಗೆಲ್ಲ ಮುಕ್ತಿ ತೋರಿಸುತ್ತಿದ್ದಾರೆ. ಸರ್ಕಾರದ ಇವತ್ತಿನ ದುಸ್ಥಿತಿಗೆ ಕಾರಣ ಎನಿಸಿಕೊಂಡಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೈಯಲ್ಲಿ ನಿಂಬೆಹಣ್ಣು, ಬರಿಗಾಲಲ್ಲಿ ಓಡಾಡುತ್ತಾ, ತಿರುಪತಿ ದರ್ಶನಕ್ಕೆ ಹೋಗುವಂಥದ್ದನ್ನೆಲ್ಲ ಬಹಿರಂಗವಾಗಿ ಮಾಡುತ್ತಿದ್ದರೂ, ಒಳಗೊಳಗೆಯೇ ತಮ್ಮ ಇಲಾಖೆಗೆ ಸಂಬಂಧಿಸಿದ 1500 ಕೋಟಿ ರು.ಗಳ ಬಿಲ್‍ಗಳನ್ನ ಮಂಜೂರು ಮಾಡಿಬಿಟ್ಟಿದ್ದಾರೆ. ಇವೆಲ್ಲ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದನಂತರ ಕೈಗೊಂಡಿದ್ದ ರಸ್ತೆ, ಸೇತುವೆ ಕಾಮಗಾರಿಗೆ ಸಂಬಂಧಿಸಿದ್ದು.

ಇಡೀ ಕಾಂಗ್ರೆಸ್ ನಲ್ಲಿ ಏಕ ವ್ಯಕ್ತಿ ಪ್ರದರ್ಶನವನ್ನಾಗಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿರುವ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಕೂಡ ಕೃಷ್ಣ ಭಾಗ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮಗಳಲ್ಲಿ ಕಾಮಗಾರಿಗೆ ಒಪ್ಪಿಗೆ ನೀಡಲಾಗಿದ್ದು, ಇದರ ಮೌಲ್ಯ 5 ಸಾವಿರ ಕೋಟಿಗಿಂತಲೂ ಅಧಿಕ.

ವಿಧಾನಸೌಧ, ಮುಂಬೈಯಲ್ಲಿ ಏನಾಗುತ್ತಿದ್ದರೂ ನನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯೇ ತಮ್ಮ ಕಚೇರಿಯಲ್ಲಿ ಕೂತು ಕಡತ ಯಜ್ಞ ಕ್ಯೆಗೊಂಡಿರುವುದರಿಂದಾಗಿ, ನಾನಾ ಇಲಾಖೆಗಳಲ್ಲಿ ವರ್ಗಾವಣೆಯ ಪರ್ವ ಡಿಢೀರನೆ ಶುರುವಾಗಿದೆ.

ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಡುವೆಯೇ ಸದ್ದಿಲ್ಲದೆ ಕಡತಗಳ ವಿಲೇವಾರಿಯಾಗುತ್ತಿರುವುದರತ್ತ ಕಣ್ಣಿಟ್ಟಿರುವ ಬಿಜೆಪಿ ತನ್ನದೇ ಆಡಳಿತ ಬಂದಾಗ, ಇವಕ್ಕೆಲ್ಲ ತಡೆನೀಡುವುದಾಗಿಯೂ ಹೇಳಿಕೊಳ್ಳುತ್ತಿರುವುದರಿಂದ, ಹೊಸಾ ಸರ್ಕಾರದ ನಂತರ ಬಹುತೇಕ ಗುತ್ತಿಗೆದಾರರು, ವರ್ಗಾವಣೆಗೊಂಡಿರುವವರು ಸಂಕಷ್ಟಕ್ಕೊಳಗಾಗುವ ಅಪಾಯದಲ್ಲಿದ್ದಾರೆ. ಇದರಿಂದ ಪಾರಾಗಬೇಕಿದ್ದರೆ ಹೆಚ್ಚುವರಿಯಾಗಿ ಇನ್ನಷ್ಟು ತಿಜೋರಿ ಬಾಗಿಲು ತೆರೆಯಬೇಕಾದ ಸ್ಥಿತಿ ಅನಿವಾರ್ಯವಾಗಿಹೋಗಿದೆ.