ಅತ್ತಿಹಣ್ಣು 

ತೆಲುಗು ಮೂಲ: ವೇಂಪಲ್ಲಿ ಶರೀಫ್, ಕನ್ನಡಕ್ಕೆ :ಶುಭಮಂಗಳ

ಅತ್ತಿಹಣ್ಣು 

ತನ್ನ ಮೊಬೈಲಿನ ಟಾರ್ಚ್ ಲೈಟ್ ಹಾಕಿ ನೋಡಿದಳು. ಮಗಳದು ಗುಂಡು ಮುಖ. ತುಂಬಿದ ಕೆನ್ನೆಗಳು. ತನ್ನಂತೆಯೇ. ತಲೆ ಕೆಳಗೆ ಕೈಗಳನ್ನಿಟ್ಟುಕೊಂಡು ಪಕ್ಕಕ್ಕೆ ತಿರುಗಿ ಮಲಗಿದ್ದಾಳೆ. ಎಷ್ಟೇ ನೋವಿನಲ್ಲಿದ್ದರೂ ಮಗಳ ಮುಖ ನೋಡಿದ ಕೂಡಲೇ ಆಕೆಗೆ ಮನಸ್ಸು ಉಲ್ಲಾಸಗೊಳ್ಳುತ್ತದೆ.


ಮೊಬೈಲ್ ಟಾರ್ಚ್ ಲೈಟ್ ಆಫ್ ಮಾಡಿ ಕತ್ತಲಿನಲ್ಲಿಯೇ ಬಾಗಿಲತ್ತ ದೃಷ್ಟಿ ಹರಿಸಿದಳು. ಹೊರಗೆ ಯಾರಾದರೂ ಬರುತ್ತಿರುವ ಸದ್ದಾಗುತ್ತಿದೆಯೇನೋ ಎಂದು ಕಿವಿ ಆಲಿಸಿ ಕೇಳಿದಳು. ತನ್ನ ಹೆಂಚಿನ ಮನೆಯಿರುವ ಸಂದಿಯಲ್ಲಿ ಆ ಸಮಯದಲ್ಲಿ ಯಾರಾದರೂ ಓಡಾಡಿದ ಸದ್ದಾದರೆ ಅದು ಆತನದೇ ಎಂದು ಆಕೆ ಸುಲಭವಾಗಿ ಕಂಡುಹಿಡಿಯುತ್ತಾಳೆ. ಏಕೆಂದರೆ ಸಂದಿಯಲ್ಲಿರುವುದು ಅವಳ ಮನೆ ಒಂದೇ.


ಇದು ಅವಳಿಗೆ ಅಭ್ಯಾಸವೇ ಆಗಿದ್ದರೂ ಈಗೇಕೋ ಅವಳಿಗೆ ಭಯವಾಗಿದೆ. ಮೊನ್ನೆ ಗಣೇಶನ ವೇದಿಕೆಯ ಬಳಿ ನಡೆದ ಗಲಾಟೆಯೇ ಇದಕ್ಕೆ ಕಾರಣ. ಆ ಬೀದಿಯಲ್ಲಿ ಎಷ್ಟು ಮುಸ್ಲಿಮರಿರುವರೋ ಅಷ್ಟು ಹಿಂದೂಗಳಿದ್ದಾರೆ. ಮಾತಿನ ವರಸೆಗೆ ಹಾಗೆ ಮುಸ್ಲಿಮರು, ಹಿಂದೂಗಳು ಎಂದು ಪ್ರತ್ಯೇಕವಾಗಿ ಮಾತನಾಡುತ್ತಾರೆಯೇ ವಿನಃ ಅವರ ನಡುವೆ ಅಂತಹ ಬೇಧ ಭಾವಗಳೇನೂ ಇಲ್ಲ. ಎಲ್ಲರೂ ಅನ್ಯೋನ್ಯವಾಗಿದ್ದಾರೆ.


ಪ್ರತಿ ವರ್ಷದಂತೆ ಈ ಬಾರಿಯೂ ಬೀದಿಯಲ್ಲಿ ಗಣೇಶನನ್ನು ಕೂರಿಸಲು ಅದ್ಧೂರಿ ವೇದಿಕೆ ಹಾಗೂ ಮಂಟಪ ಸಿದ್ಧಗೊಳಿಸಿದ್ದಾರೆ. ಇದಕ್ಕೆ ಮೊದಲು ಬೀದಿಯಲ್ಲಿ ಮಸೀದಿ ಇರಲಿಲ್ಲ. ಎಂಎಲ್‍ಎ ವೀರಪ್ಪನೊಂದಿಗೆ ಬಹಳ ಸಲುಗೆಯಿದ್ದ ಮೌಲಾಲಿಗೆ ಅದ್ಯಾವ ಚೇಳು ಕಡಿಯಿತೋ ಬೀದಿಯ ಕೊನೆಗಿದ್ದ ತನ್ನ ನಾಲ್ಕೂವರೆ ಸೈಟ್ ಭೂಮಿಯನ್ನು ಮಸೀದಿ ಕಟ್ಟಲು ಬರೆದುಕೊಡುತ್ತಿದ್ದೇನೆಂದು ಪ್ರಕಟಿಸಿದ್ದೇ ಅಲ್ಲದೆ, ತಾನೇ ಮುಂದಾಳತ್ವ ವಹಿಸಿ ಮಸೀದಿ ಕಟ್ಟಿಸಿ ಬೀದಿಯ ಒಂದು ವರ್ಗಕ್ಕೆ ಆರಾಧ್ಯನಾಗಿಬಿಟ್ಟ. ನಂತರ ತಿಳಿದುಬಂದ ವಿಚಾರವೇನೆಂದರೆ ಮುಂಬರುವ ಕಾರ್ಪೊರೇಷನ್ ಎಲೆಕ್ಷನ್ ನಲ್ಲಿ ಆ ವಾರ್ಡ್ ಕಾರ್ಪೊರೇಟರ್ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂಬುದು ಆತನ ಆಲೋಚನೆಯಂತೆ! ಚುನಾವಣೆಗೆ ಸ್ಪರ್ಧಿಸಬೇಕೆಂದರೆ ಎಲ್ಲರಿಗೂ ಉಪಯೋಗಕ್ಕೆ ಬರುವ ಕೆಲಸ ಮಾಡಬೇಕೇ ಹೊರತು ಮಸೀದಿ ಕಟ್ಟುವುದೇಕೆ? ಎಂದು ಆತನನ್ನು ಯಾರೂ ಕೇಳಲಿಲ್ಲ. ಆತನೆಂದರೆ ಭಯವೋ, ದೇವರೆಂದರೆ ಭಯವೋ ಗೊತ್ತಿಲ್ಲ. 


ಬೀದಿಯಲ್ಲಿ ಮಸೀದಿ ಇದ್ದರೆ ಅಲ್ಲಿ ಅಜಾ ಇರುತ್ತದೆ. ಐದು ಹೊತ್ತು ನಮಾಜ್ ಇರುತ್ತದೆ. ಆ ವರ್ಷ ಆ ಬೀದಿಯಲ್ಲಿ ಆದ ಇತ್ತೀಚಿನ ಅಭಿವೃದ್ಧಿ ಅದೇ ಅಲ್ಲವಾ. ಅಷ್ಟರಲ್ಲಿಯೇ ಗಣೇಶ ಚತುರ್ಥಿ ಬಂದೇಬಿಟ್ಟಿತು. ರೂಢಿಯಂತೆ ಗಣೇಶನನ್ನು ಕೂರಿಸಿದ ಹುಡುಗರು ದೊಡ್ಡ ಮೈಕ್‍ಸೆಟ್ ಗಳನ್ನು ಬಿಗಿದರು. ಮಸೀದಿಯಲ್ಲಿ ನಮಾಜಿಗೆ ತೊಂದರೆಯಾಗುತ್ತಿದೆಯೆಂದು ಕೆಲವು ಹುಡುಗರು ಹೋಗಿ ಕಷ್ಟ ತೋಡಿಕೊಂಡರು. ಅಲ್ಲಿದ್ದ ಬಹುತೇಕರು ಇವರ ಮಾತು ಕೇಳಿದರಾದರೂ ಕೆಲವರು ಮಾತ್ರ ‘ಮಸೀದಿ ಮೊದಲಾ? ಗಣೇಶನ ಮಂಟಪ ಮೊದಲಾ?’ ಎಂದು ಪ್ರಶ್ನೆಯೆತ್ತಿದರು.


ಇಂತಹ ಪ್ರಶ್ನೆಗಳು ಗಲಭೆಗಳಿಗೆ ಕಾರಣವಾಗುತ್ತದೆಯೆಂದು ಪ್ರಶ್ನಿಸಿದ ಹುಡುಗರಿಗೂ ತಿಳಿದಿರಲಿಕ್ಕಿಲ್ಲ. ನಂತರ ಯಾರೇನೆಂದರೋ ಯಾವ ಮಾತು ಎಲ್ಲಿವರೆಗೂ ಹೋಯಿತೋ ತಿಳಿಯಲಿಲ್ಲ, ಆ ಬೀದಿಯ ಚಂಟಿಯೆಂಬ ಹುಡುಗ ಮಾತ್ರ ಪಟ್ಟನೆ ಎದುರು ಯುವಕರ ಗುಂಪಿನ ಹುಡುಗನೊಬ್ಬನನ್ನು ಉದ್ದೇಶಿಸಿ “ಮೊದಲು ನಿಮ್ಮ ಮನೆಗಳಲ್ಲಿ ಹೆಂಗಸರನ್ನು ಸರಿಯಾಗಿ ನೋಡಿಕೊಳ್ಳಿ ಸಾಕು, ಧರ್ಮದ ಕುರಿತು ಆಮೇಲೆ ಮಾತನಾಡುವಿರಂತೆ,” ಎಂದುಬಿಟ್ಟನು.


ಅಷ್ಟೇ! ಎದುರು ಗುಂಪಿನ ಹುಡುಗರಿಗೆ ಉರಿದುಹೋಯಿತು. ಅವರಿಗೆ ಉರಿದರೆ ಅವರ ಹಿರಿಯರಿಗೂ ಉರಿದಂತೆಯೇ ಅಲ್ಲವಾ. ಇಷ್ಟಕ್ಕೆ ಗಲಾಟೆ ಎಲ್ಲಿ ಶುರುವಾಗಿದ್ದು, ಮಂಟಪದ ಬಳಿ. ಆದರೆ ಅವರು ಮಾತನಾಡಿದ್ದು ಹೆಂಗಸರ ಕುರಿತು. ನಮ್ಮ ಹೆಂಗಸರು ಅಷ್ಟು ಹೀನರಾಗಿಬಿಟ್ಟರಾ? ಇಷ್ಟಕ್ಕೂ ಏಕೆ ಕೀಳಾದರು? ಅವರು ಯಾರನ್ನುದ್ದೇಶಿಸಿ ಮಾತನಾಡಿರುತ್ತಾರೆ. ಹೀಗೆ ಯೋಚಿಸಿದಾಗ ‘ಪ್ಯಾರಿ’ಯ ಮಾತು ನಡುವೆ ನುಸುಳಿತು.


‘ಇವರು ತಪ್ಪು ಕೆಲಸ ಮಾಡಿದ್ದರಿಂದಲೇ ಬೀದಿಯಲ್ಲಿ ನಮ್ಮೆಲ್ಲರಿಗೂ ತಲೆಬಗ್ಗಿಸುವಂತಾಗಿದೆ,’ ಎಂದು ಚಿಕ್ಕವರು, ದೊಡ್ಡವರು, ಹೆಂಗಸರು, ಗಂಡಸರೆಲ್ಲರೂ ಒಂದಾಗಿ ಆಕೆಯ ಮೇಲೆ ಒಂದೇ ಸಮನೆ ಬೈದಾಡತೊಡಗಿದ್ದಾರೆ. ಮನೆಗೂ ಬಂದು, ಪಾತ್ರೆ, ಪಗಾರಗಳನ್ನು ಹೊರಗೆಸೆಯ ತೊಡಗಿದ್ದಾರೆ. ಹೊಡೆಯಲು ಮುಂದಾದರು. ಹೆದರಲಿಲ್ಲ. ಅಷ್ಟೇ ಆವೇಶದಿಂದ ತಿರುಗಿಬಿದ್ದಳು.


“ಹೋಗಿ ಹೋಗಿ ಕಾಫಿರ್ ನೊಂದಿಗೆ ಮಲಗಿಕೊಳ್ಳುತ್ತೀಯಾ?” ಎಂದನು ಅಲ್ಲಿ ಇದ್ದ ಒಬ್ಬ ದೊಡ್ಡ ಮನುಷ್ಯ. 


‘ನಿನ್ನ ನಾಲಿಗೆ ಬಿದ್ದೋಗಾ’ ಎನ್ನುತ್ತ ಪ್ಯಾರಿ ಸರ್ರನೆ ಎದ್ದಳು.


“ಅಂದರೆ ಏನಪ್ಪಾ ನೀನು ಮಾತನಾಡುವುದು. ಮುಸ್ಲಿಂ ಹುಡುಗನೊಂದಿಗೆ ಮಲಗಿದರೆ ನಿನಗೆ ಪರವಾಗಿಲ್ಲವಾ? ಯಾವ ಸೀಮೆ ದೊಡ್ಡ ಮನುಷ್ಯನಪ್ಪಾ  ನೀನು? ಥೂ.. ನಾಚಿಕೆಯಿಲ್ಲದ ಜನ್ಮ” ಎಂದು ಮುಖಕ್ಕೆ ಉಗಿದಳು.


ಆ ದೊಡ್ಡಮನುಷ್ಯನಿಗೆ ತಲೆ ಗಿರ್ರೆಂದಿತು.


“ಅವೆಲ್ಲ ನಮಗೆ ಗೊತ್ತಿಲ್ಲ. ನೀನು ಮಾತು ಕಲಿತವಳು. ನಿನ್ನನ್ನು ಮಾತನಾಡಿ ನಾವು ಗೆಲ್ಲಲಾರೆವು. ಎರಡು ದಿನ ಟೈಮ್ ಕೊಡ್ತೀವಿ. ಅಷ್ಟರಲ್ಲಿ ನೀನು ಗಂಟು ಮೂಟೆ ಕಟ್ಟಿ ಮನೆ ಖಾಲಿ ಮಾಡಿಕೊಂಡು ಹೋಗಬೇಕು. ಇಲ್ಲದಿದ್ದರೆ ಬೀದಿಯ ಹುಡುಗರು ಏನು ಮಾಡಿದರೂ ನಾವು ಜವಾಬ್ದಾರಿಯಲ್ಲ” ಎಂದು ಎಚ್ಚರಿಕೆ ನೀಡಿ ಗುಂಪಿನವರನ್ನು ಹೊರಡಿಸಿಕೊಂಡು ಹೊರಟನು.


ಈ ಘಟನೆಯಿಂದ ಪ್ಯಾರಿಗೆ ಇದೇನಪ್ಪ ದೇವರೆ ಹೀಗಾಯಿತು ಎಂದು ಸ್ವಲ್ಪ ಆತಂಕ ಶುರುವಾಯಿತು. ಈ ಜನರ ದ್ವಂದ್ವ ನಡವಳಿಕೆಯ ಕುರಿತು ಎಷ್ಟು ಯೋಚಿಸಿದರೂ ಅರ್ಥವಾಗುತ್ತಿಲ್ಲ. 


ಪ್ಯಾರಿ ಪಿಯುಸಿ ವರೆಗೆ ಓದಿದ್ದಾಳೆ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದಾಳೆ. ತಾಯಿ ಆ ಬೀದಿಯಲ್ಲಿರುವ ಮನೆಗಳಲ್ಲಿ ಕೆಲಸ ಮಾಡಿ ತನ್ನನ್ನು ಓದಿಸಿದಳು. ಪಿಯುಸಿ ಮುಗಿಯುತ್ತಿದ್ದಂತೆ ಕುವೈತ್ ನಲ್ಲಿರುವನೆಂಬ ಕಾರಣಕ್ಕೆ ಎರಡನೇ ಸಂಬಂಧಕ್ಕೆ ಕೊಟ್ಟು ಮದುವೆ ಮಾಡಿದರು. ಅವನು ಮೂರು ತಿಂಗಳು ಸಂಸಾರ ಮಾಡಿ ಮತ್ತೆ ಸಂಪಾದಿಸಿಕೊಂಡು ಬರುತ್ತೇನೆಂದು ಕೊಟ್ಟಿದ್ದ ಅಷ್ಟಿಷ್ಟು ವರದಕ್ಷಿಣೆಯ ಹಣದೊಂದಿಗೆ ಕುವೈತ್ ಸೇರಿಕೊಂಡನು. 


ಆತ ಮತ್ತೆ ಬರುತ್ತಾನೆಂದು ಎದುರು ನೋಡುತ್ತಿದ್ದಳು ಪ್ಯಾರಿ. ಮಗಳಿಗೆ ಎರಡು ವರ್ಷ ತುಂಬುತ್ತಾ ಬಂದಿದೆ. ಅಮ್ಮ ಕಾಯಿಲೆಯಿಂದ ಸತ್ತಾಗಿನಿಂದ ಯಾವ ಆಸರೆಯೂ ಇಲ್ಲದೆ ಒಂಟಿಯಾಗಿದ್ದಾಳೆ. ಅಮ್ಮ ಮಾಡುತ್ತಿದ್ದ ಮನೆಗಳಲ್ಲೇ ತಾನೂ ಕೆಲಸ ಮಾಡುತ್ತ ಹೊಟ್ಟೆ ಹೊರೆಯುತ್ತಿದ್ದಾಳೆ. 


ಮಗುವನ್ನು ಕೆಲಸಕ್ಕೆ ಕರೆದುಕೊಂಡು ಬರಬೇಡ ಎನ್ನುವ ಕೆಲವು ಮನೆಗಳು ಕೈ ತಪ್ಪಿದವು, ಮಗಳನ್ನು ಎಲ್ಲಿ ಬಿಡುವುದು. ಮಗು ಇದ್ದರೂ ಪರವಾಗಿಲ್ಲವೆಂಬ ಒಂದೆರಡು ಮನೆಗಳಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾಗಲೇ..ಅಗೋ, ಪಕ್ಕದ ಬೀದಿಯಲ್ಲಿರುವ ಪವನ್ ಪರಿಚಯವಾದದ್ದು.


ಅಡ್ಡರಸ್ತೆಯಲ್ಲಿ ಆತನ ವೆಲ್ಡಿಂಗ್ ಷಾಪ್ ಇದೆ. ಮದುವೆಯಾಗಿ ಮಕ್ಕಳಿದ್ದರೂ ಪ್ಯಾರಿಯ ಹಿಂದೆ ಬಿದ್ದನು. ಕೇಳಿದರೆ ‘ತನಗೆ ಹತ್ತನೇ ತರಗತಿಯಲ್ಲಿಯೇ ಒಬ್ಬ ಗರ್ಲ್ ಫ್ರೆಂಡ್ ಇದ್ದಳು. ಅವಳೆಂದರೆ ತನಗೆ ಪಂಚಪ್ರಾಣ, ಥೇಟ್ ಆ ಹುಡುಗಿಯಂತೆಯೇ ಇರುವುದರಿಂದ ಹಿಂದೆ ಬಿದ್ದಿದ್ದೇನೆಂದು’ ಹೇಳಿದನು. ಒಪ್ಪಿದರೆ ಆಸರೆಯಾಗಿರುವುದಾಗಿ ಹೇಳಿದನು.


ಇದಕ್ಕೆ ಮೊದಲು ಹಾಗೆ ಬಹಳ ಮಂದಿ ಕೇಳಿದರು.. ಅಷ್ಟೇಕೆ ಆ ಮಸೀದಿ ಕಟ್ಟಿಸಿದ ಮಹಾನುಭಾವನ ಕಣ್ಣೂ ಬಿದ್ದಿತ್ತು.. ಈಗ ಮಂಟಪದ ಗಲಾಟೆಗೆ ಕಾರಣನಾದ ಚಂಟಿ ಕೂಡ ಕೇಳಿದನು. ಅವರಿಗೆ ‘ಚಪ್ಪಲಿ’ ತೋರಿಸಿದಳು. ಆದರೆ ಪವನ್ ನಿಗೆ ಹಾಗೆ ತೋರಿಸಲಾರದೆ ಹೋದಳು. ತನ್ನ ಆರ್ಥಿಕ ಬಲಹೀನತೆಯೋ, ಮಾನಸಿಕ ಬಲಹೀನತೆಯೋ ಯಾವುದಾದರೇನು ಆತನೆಂದರೆ ಪ್ರೀತಿ ಬೆಳೆಯತೊಡಗಿತು. ಕೆಲವು ದಿನ ಹಿಂದೆ ಸುತ್ತಾಡಿಸಿದಳು. ನಂತರ ಒಪ್ಪಿಗೆಯಿತ್ತು, ಅವನ ವಶವಾದಳು. ಈಗ ತನ್ನ ಜೀವನ ತನ್ನದು. ತನಗ್ಯಾವ ಧರ್ಮವಿಲ್ಲ. ಹಸಿವೇ ಅವಳ ಧರ್ಮ. ಮಧ್ಯದಲ್ಲಿ ಇವರಿಗೇನು ಬಾಧೆ.


ಪ್ಯಾರಿಗೆ ಅರ್ಥವಾಗದಿರುವುದೊಂದೇ. ಹೊಡೆದಾಡಿಕೊಂಡರೆ ಅವರವರು ಹೊಡೆದಾಡಿಕೊಳ್ಳಬೇಕು, ಬೈದಾಡಿಕೊಂಡರೆ ಅವರವರು ಬೈದುಕೊಳ್ಳಬೇಕು, ತಿವಿದುಕೊಂಡರೆ ಅವರವರೇ ತಿವಿದುಕೊಂಡು ಸಾಯಬೇಕು. ದರಿದ್ರ ತೊಲಗುತ್ತದೆ. ಇವರಿವರ ಗಲಾಟೆಗಳ ನಡುವೆ ತನ್ನ ಜೀವನದ ಕುರಿತು ಏಕೆ ಮಾತನಾಡಬೇಕು? ಮಾತಾಡಿದರೆ ಆಡಿಕೊಳ್ಳಲಿ.. ಅವನೇನೋ ಅಂದರೆ ಇವರಿಗೇಕೆ ಇಷ್ಟು ರೋಷ ಬರಬೇಕು. ಅಬ್ಬಾ.. ತಾನು ಅವರ ಧರ್ಮಕ್ಕೆ ಸೇರಿದವಳು ಎಂದಾ? ಹಾಗಾದರೆ ಅವರಿಗೆ ಧರ್ಮಾಭಿಮಾನವಿದೆಯೇ? ಇದ್ದರೆ ಮತ್ತೆ ‘ನಾನು ಜೀವನ ನಡೆಸುವುದು ಕಷ್ಟವಾಗಿದೆ. ಒಂದಿಷ್ಟು ಗಂಜಿ ಹಾಕಿ’ ಎಂದು ಕೇಳಿಕೊಂಡಾಗ ಯಾರೂ ಮುಂದೆ ಬರಲಿಲ್ಲವೇಕೆ? ಇದೆಲ್ಲ ದಗಲ್ಬಾಜಿ ಕೆಲಸ. ಕೆಲಸಕ್ಕೆ ಬಾರದ ವ್ಯವಹಾರ. ಅವರವರ ಹಿರಿಮೆಗೋಸ್ಕರ ನನ್ನ ಕೊಂಪೆಗೆ ಬೆಂಕಿ ಹಾಕುತ್ತಾರಾ? ಇದೆಲ್ಲಿಯ ನ್ಯಾಯ? ಬರಲಿ.. ಪವನ್ ಬರಲಿ. ಆತನೊಂದಿಗೆ ಮಾತನಾಡಿ ಒಂದು ನಿರ್ಧಾರ ತೆಗೆದುಕೊಂಡು ಇವರ ಸಮಾಚಾರವೇನೋ ನೋಡಿಕೊಳ್ಳುತ್ತೇನೆ.


ಆಕೆ ಕೋಪದಿಂದ ಕುದಿಯುತ್ತಿದ್ದಾಳೆ.


ಎಷ್ಟು ಹೊತ್ತಾದರೂ ಪವನ್ ಬರಲಿಲ್ಲ. ಟೈಂ ಎಷ್ಟಾಯಿತೋ ಗೊತ್ತಿಲ್ಲ. ಹೊರಗೆ ಯಾವ ಶಬ್ದವೂ ಇಲ್ಲ. ಆಕೆ ಯೋಚಿಸುತ್ತಲೇ ಇದ್ದಾಳೆ.


ಒಂದುವೇಳೆ ನಾನು ಹುಡುಗನಾಗಿದ್ದರೆ ಆ ಚಂಟಿ ಹಾಗೇ ಹೇಳುತ್ತಿದ್ದನಾ? ಇವರಿಗೆ ಹೀಗೇ ರೋಷ ಬರುತ್ತಿತ್ತಾ? ಇಷ್ಟಕ್ಕೂ ಹೆಂಗಸರನ್ನು ಸರಿಯಾಗಿಟ್ಟುಕೊಳ್ಳುವುದೆಂದರೇನು? ಅವರೇನಾದರೂ ವಸ್ತುಗಳಾ? ನಾಳೆ ಎದುರು ಗುಂಪಿನಲ್ಲಿ ಹುಡುಗಿ ಇಂತಹ ಕೆಲಸ ಮಾಡಿದರೆ ಆ ಗುಂಪು ಕೂಡ ಆ ಹುಡುಗಿಯನ್ನು ಹೀಗೇ ಗೋಳು ಹುಯ್ದುಕೊಳ್ಳುತ್ತದೆಯಲ್ಲವಾ. ಹೆಣ್ಣುಮಕ್ಕಳಿಗೆ ಕಣ್ಣೀರು ಹಾಕಿಸುವುದರಲ್ಲಿ ಈ ಗುಂಪುಗಳೆಲ್ಲ ಒಂದೇ. ಈ ಗುಂಪುಗಳ ತುಂಬಾ ಗಬ್ಬು ನಾರುತ್ತಿದೆ.


ಸಂದಿಯಲ್ಲಿ ಮನುಷ್ಯ ನಡೆದುಬರುತ್ತಿರುವ ಸದ್ದಾಗಿದ್ದರಿಂದ ಆಕೆ ತನ್ನ ಆಲೋಚನೆಗಳಿಂದ ಹೊರಬಂದಳು. ಕ್ಷಣಮಾತ್ರಕ್ಕೆ ಬಾಗಿಲು ತಳ್ಳಿಕೊಂಡು ಒಳಗೆ ಬಂದುಬಿಟ್ಟನು ಪವನ್. ಕೂಡಲೇ ಹೋಗಿ ಗಟ್ಟಿಯಾಗಿ ತಬ್ಬಿಕೊಂಡಳು ಪ್ಯಾರಿ. ಎಲ್ಲಿತ್ತೋ, ಕಣ್ಣೀರು ಧಾರೆಯಾಗಿ ಹರಿಯುತ್ತಿದೆ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಆತನ ಕೈಯಲ್ಲಿ ಮೊಬೈಲ್ ಟಾರ್ಚ್ ಲೈಟ್ ಬೆಳಗುತ್ತಿದೆ. ಸ್ವಲ್ಪಹೊತ್ತು ಅತ್ತು ಸಮಾಧಾನವಾಗಲಿ ಎಂದು ಸುಮ್ಮನಿದ್ದು, ನಂತರ ಆಕೆಯ ಕಣ್ಣಲ್ಲಿ ಕಣ್ಣಿಟ್ಟು  ಹೇಳಿದನು.


“ನೀನು ಇನ್ನು ಇಲ್ಲಿ ಒಂದು ನಿಮಿಷ ಕೂಡ ಇರಬೇಡ ಪ್ಯಾರಿ. ಬೆಳಗಾಗುವುದರೊಳಗೆ ಸಾಮಾನುಗಳನ್ನು ಗಂಟುಮೂಟೆ ಕಟ್ಟಿಕೊಂಡು ಹೊರಟುಬಿಡು.”


ಆಕೆ ಆಶ್ಚರ್ಯದಿಂದ ಆತನತ್ತ ನೋಡಿದಳು. 


“ನಾನೇಕೆ ಹೋಗಬೇಕು?” ಆ ಮಾತಿಗೆ ಆತನಿಗೆ ಗಾಬರಿಯಾಯಿತು. ನಂತರ  ಕಿರಿಕಿರಿಯಾಗಿ,  


“ನೀನೇಲ್ಲೋ ಹುಚ್ಚಿಯ ತರಹ ಆಡುತ್ತಿದ್ದೀಯ. ನೀನೇನು ಚಿಕ್ಕವಳಾ? ಏಕೆ ಹೋಗಬೇಕೆಂದು ನಿನಗೆ ಗೊತ್ತಿಲ್ಲವಾ” ಕೂಗಾಡಿದನು.  


ನಂತರ ನಿಧಾನವಾಗಿ ಸಮಾಧಾನಪಡಿಸುತ್ತಿರುವಂತೆ “ನೀನು ಒಂದು ಮಾತು ನೆನಪಿಟ್ಟುಕೋ ಪ್ಯಾರಿ, ನೀನು ಎಲ್ಲಿದ್ದರೂ ನಾನು ಬರುತ್ತೇನೆ. ನೀನು ನನಗೆ ಬೇಕಷ್ಟೆ. ನಿನ್ನನ್ನು ಬಿಡುವ ಮಾತೇ ಇಲ್ಲ. ನಿನಗೆ ಬೇಕಾದ್ದೆಲ್ಲ ತಂದುಕೊಡುತ್ತೇನೆ. ನಿನ್ನನ್ನು ಇಲ್ಲಿಂದ ಹೋಗು ಎನ್ನುತ್ತಿದ್ದೇನೆಂದರೆ ನನ್ನಿಂದ ದೂರ ಹೋಗು ಎಂದಲ್ಲ..”
ಆಕೆ ಕಣ್ಣೊರೆಸಿಕೊಳ್ಳುತ್ತ ಧೃಡವಾಗಿ ಹೇಳಿದಳು.


“ನಾನು ಎಲ್ಲಿಗೂ ಹೋಗುವುದಿಲ್ಲ. ಇಲ್ಲೇ ಇರುತ್ತೇನೆ. ಈ ಮನೆ ಮೇಲೆ ಯಾರು ಬರುತ್ತಾರೋ ಧೈರ್ಯವಿದ್ದರೆ ಬರಲು ಹೇಳು. ಬಂದಾಗ ತಕ್ಕ ಶಾಸ್ತಿ ಮಾಡ್ತೀನಿ. ನಾನೇನು ಹತ್ತಾರು ಜನರ ಬಳಿ ಮಲಗುತ್ತಿಲ್ಲ. ನನಗೂ ಜೀವನ ಇದೆ. ಮರ್ಯಾದೆ ಇದೆ. ನನಗೆ ಇಷ್ಟ ಇರುವ ವ್ಯಕ್ತಿಯ ಬಳಿ ನಾನು ಹೋಗುತ್ತಿದ್ದೇನೆ. ಅಷ್ಟೆ. ನನಗೆ ಗೊತ್ತಿಲ್ಲವಾ ಈ ಮಾತನಾಡುವವರೆಲ್ಲ ಎಂತಹವರು ಅಂತ. ನಾನು ನಿನಗೆ ಹೇಳುವುದಿಷ್ಟೆ. ನೀನು ನನ್ನ ಜೊತೆ ಆಸರೆಯಾಗಿರುವುದಾದರೆ ಇರು, ಇಲ್ಲದಿದ್ದರೆ ಬೇಡ. ಇಲ್ಲಿಂದ ಹೋಗು ಎಂದು ಮಾತ್ರ ಹೇಳಬೇಡ.”
ಆಕೆ ಹಾಗೆ ಎದುರು ತಿರುಗುತ್ತಾಳೆಂದು ಆತ ಊಹಿಸಿರಲಿಲ್ಲ.


“ಸುಮ್ಮನೆ ದೊಡ್ಡ ರಂಪಾಟವಾಗುತ್ತದೆ ಪ್ಯಾರಿ. ಮೊದಲೇ ಅವರು ಎರಡು ಗುಂಪುಗಳವರು. ಇದರ ಹಿಂದೆ ರಾಜಕೀಯವೂ ಇದ್ದಂತಿದೆ. ನಾವು ಹಾಳಾಗಿಬಿಡುತ್ತೇವೆ. ನಾಲ್ಕಾರು ಮಂದಿಯ ನಾಲಿಗೆಗೆ ಬೀಳುತ್ತೇವೆ.”
“ನಾಲ್ಕಾರು ಜನರ ಬಾಯಿಗೆ ಬೀಳುವುದೆಂದರೆ ನನಗೇನು ಇಷ್ಟವಾ. ಗುಟ್ಟಾಗಿ ನನ್ನ ಜೀವನ ನಾನು ನಡೆಸುತ್ತಿದ್ದರೆ ಬಂದು ಕೆದಕುತ್ತಿರುವವರು ಯಾರು? ಇದು ನನ್ನ ಅಮ್ಮನ ನೆನಪಾಗಿ ಇರುವ ಮನೆ. ನಾನು ಇಲ್ಲೇ ಹುಟ್ಟಿದೆ, ಈ ಬೀದಿಯಲ್ಲೇ ಬೆಳೆದವಳು, ಇಲ್ಲೇ ಸಾಯುತ್ತೇನೆ. ಯಾರೋ ಏನೋ ಅಂದುಕೊಳ್ಳುವರೆಂಬುದಲ್ಲ ನನ್ನ ನೋವು. ನನ್ನ ಬಾಧೆ ಈ ಮನೆಯ ಕುರಿತು, ಈ ಜೀವನದ ಕುರಿತು-ನನಗೂ ಸ್ವಲ್ಪ ಮರ್ಯಾದೆ ಇದೆ.”


ಆತನಿಗೆ ಕಿರಿಕಿರಿಯಾಗುತ್ತಿದೆ.  


“ನೀನು ಇಲ್ಲೇ ಇದ್ದರೆ ನನಗೆ ಬರುವುದು ಕಷ್ಟವಾಗುತ್ತದೆ. ಈಗಾಗಲೇ ಆ ಗುಂಪೆಲ್ಲ ನಾನೆಲ್ಲಿ ಕಾಣಿಸುತ್ತೀನಾ? ಚೆನ್ನಾಗಿ ಚಚ್ಚೋಣ? ಎಂದು ನೋಡುತ್ತಿದೆ. ಈಗಾಗಲೇ ಒಮ್ಮೆ ಮರ್ಯಾದೆಯಾಗಿ ಹೇಳಿದ್ದಾರೆ. ಇನ್ನೂ ನಾನು ನಿನ್ನ ಬಳಿ ಬಂದು ಹೋದರೆ ಹಿಡಿದುಕೊಂಡು ಹೊಡೆಯುತ್ತಾರೆ. ನಾನು ನಿನ್ನ ಬಳಿ ಮತ್ತೆ ಮತ್ತೆ ಬರಬೇಕೆಂದರೆ ನೀನು ಇಲ್ಲಿ ಇರಬಾರದು ಪ್ಯಾರಿ.”


“ನಾನಿರುವಾಗಿ ನಿನ್ನ ತಂಟೆಗೆ ಯಾರು ಬರುತ್ತಾರೋ ನೋಡೋಣ ಬಾ ಅನ್ನು. ನನ್ನ ಮೇಲೆ ಆ ಗುಂಪಿನವರ ದೊಡ್ಡಸ್ತಿಕೆಯೇನು? ನಾನು ಅವರ ಧರ್ಮಕ್ಕೆ ಸೇರಿದವಳಿರಬಹುದು ಹೊರತು ಅವರಿಗೆ ಸೇರಿದವಳಲ್ಲ. ಹೆದರಿದರೆ ಏನೋ ಜಾಸ್ತಿ ಹೆದರಿಸಲು ಬರ್ತಾಯಿದಾರೆ. ನೀನು ಕೂಡ ಸ್ವಲ್ಪ ಹೊಡೆಯುವುದನ್ನು ಕಲಿತುಕೊಳ್ಳಬೇಕು.”


ಆತ ಸ್ವಲ್ಪ ಹೊತ್ತು ಮೌನವಾಗಿದ್ದು ನಂತರ “ನನಗೆ ಇನ್ನೊಂದು ಕುಟುಂಬ.. ಮಕ್ಕಳು ಇದ್ದಾರೆ,” ನಿಸ್ಸಹಾಯಕನಾಗಿ ಹೇಳಿದನು.


“ಓಹೋ, ಆದರೆ ನನಗೇನಾ ಮತ್ತೆ ಯಾರೂ ಇಲ್ಲದಿರುವುದು. ಹಾಗಾದರೆ ಇಷ್ಟು ಭಯ ಇರುವ ಗಂಡಸು ಇಲ್ಲಿಗೇಕೆ ಬರುತ್ತಿದ್ದೀಯ. ಹೋಗು.. ಬರಬೇಡ. ನಿನ್ನಂತಹ ಅತ್ತಿ ಹಣ್ಣಿನ ತರಹದ ಮನುಷ್ಯ ಇಲ್ಲಿಗೆ ಬರಕೂಡದು. ಹೋಗು.. ನಿನ್ನ ದಾರಿ ನೀನು ಹಿಡಿ..”


ಆತನನ್ನು ಹೊರಗೆ ತಳ್ಳಿ ಧೊಪ್ಪೆಂದು ಬಾಗಿಲು ಮುಚ್ಚಿದಳು.


ಆತನು ಕಕ್ಕಾಬಿಕ್ಕಿಯಾದಂತಿದ್ದಾನೆ. ಅತ್ತಕಡೆಯಿಂದ ಯಾವ ಸಪ್ಪಳವೂ ಇಲ್ಲ.   ಹಾಗೆಂದು ಆತ ಅಲ್ಲಿಂದ ಕದಲಿದಂತೆಯೂ ಇಲ್ಲ. ಕದಲಿದರೆ ಆತನ ಹೆಜ್ಜೆಗಳ ಶಬ್ದ ಆಕೆಗೆ ಸ್ಪಷ್ಟವಾಗಿ ಕೇಳಿಸುತ್ತದೆ.


ಆಕೆ ಬಾಗಿಲಿಗೆ ಒರಗಿಕೊಂಡೇ ಕುಸಿದುಬಿದ್ದಳು. ಆತನೇನೋ ಬಾಗಿಲ ಹೊರಗೆ. ಅಂತಹ ದುಃಖದಲ್ಲಿಯೂ ಆಕೆ ಮತ್ತೆ ಆತ ಬಾಗಿಲು ಬಡಿಯುವ ಶಬ್ದಕ್ಕಾಗಿ ಎದುರುನೋಡುತ್ತಿದ್ದಾಳೆ.


(ತೆಲುಗು ಮೂಲ: ವೇಂಪಲ್ಲಿ ಷರೀಫ್,)

(ಕನ್ನಡಕ್ಕೆ: ಎಂ.ಜಿ. ಶುಭಮಂಗಳ)