ಸ್ತ್ರೀ ಜನನಾಂಗದ ಊನಗೊಳಿಸುವಿಕೆಯನ್ನು ತ್ಯಜಿಸಿ;ಹೆಣ್ಣನ್ನು ರಕ್ಷಿಸಿ

ಸ್ತ್ರೀ ಜನನಾಂಗದ ಊನಗೊಳಿಸುವಿಕೆಯನ್ನು ತ್ಯಜಿಸಿ;ಹೆಣ್ಣನ್ನು ರಕ್ಷಿಸಿ

ವಿಶ್ವದ ಮನುಕುಲವನ್ನು ಸೃಷ್ಟಿಸಿದ ಹೆಣ್ಣು,   ಸಮಾಜದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ಸಾಮಾನ್ಯವಾದ ಸಂಗತಿಯಾಗಿದೆ. ಮಹಿಳೆಯರ ಸಬಲೀಕರಣಕ್ಕೆ ಹಲವು ದೇಶಗಳು ಅನೇಕ ಕ್ರಮ ತೆಗೆದುಕೊಂಡರು  ಸಹ ಇಂದು ಕೆಲವು ಅನಿಷ್ಟ ಪದ್ದತಿಯನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಇಂತಹ ಪದ್ದತಿಗಳಲ್ಲಿ ‘ಸ್ತ್ರೀಜನನಾಂಗದ ಊನಗೊಳಿಸುವ’ ಪದ್ದತಿಯು ಒಂದು. ಈ ಪದ್ದತಿಯನ್ನು ನಿರ್ಮೂಲನೆ   ಮಾಡುವ ಉದ್ದೇಶದಿಂದ ‘ವಿಶ್ವಸಂಸ್ಥೆ’ ಸ್ತ್ರೀಜನನಾಂಗದ ಊನಗೊಳಿಸುವಿಕೆಯ ದಿನವನ್ನು ಘೋಷಣೆ ಮಾಡಿದೆ.

 “ಸ್ತ್ರೀ ಜನನಾಂಗದ ಉನಗೊಳಿಸುವಿಕೆ” (Female genital mutilation): ವೈದ್ಯಕೀಯೇತರ ಕಾರಣಗಳಿಗಾಗಿ ಸ್ತ್ರೀ ಜನನಾಂಗವನ್ನು ಬದಲಾಯಿಸುವ ವಿಧಾನ. ಹುಡುಗಿಯರು ಅಥವಾ ಮಹಿಳೆಯರ ಸಮಗ್ರತೆಯ ಉಲ್ಲಂಘನೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಈ ಪದ್ದತಿಯನ್ನು ತಡೆಯುವ ಉದ್ದೇಶದಿಂದ ಸ್ತ್ರೀ ಜನನಾಂಗದ ಊನಗೊಳಿಸುವಿಕೆಯ ಅಂತರರಾಷ್ಟ್ರೀಯ ಶೂನ್ಯ ಸಹಿಷ್ಣುತೆ ದಿನ ಎಂದು ಪತ್ರಿ ವರ್ಷ ಫೆಬ್ರವರಿ 6  ರಂದು ಆಚರಿಸುತ್ತಾರೆ.

 ವಿಧಾನಕ್ಕೆ ಒಳಪಡುವ ಹುಡುಗಿಯರು ತೀವ್ರವಾದ ನೋವು, ಆಘಾತ, ರಕ್ತಸ್ರಾವ, ಸೋಂಕುಗಳು ಮತ್ತು ಮೂತ್ರ ವಿಸರ್ಜನೆಯಲ್ಲಿನ ತೊಂದರೆಗಳಂತಹ ತೊಂದರೆಗಳನ್ನು ಎದುರಿಸುತ್ತಾರೆ. ಜೊತೆಗೆ ಅವರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ದೀರ್ಘಕಾಲಿಕವಾಗಿ ಸಮಸ್ಯೆ ಎದುರಾಗುತ್ತದೆ.

 ಪ್ರಾಥಮಿಕವಾಗಿ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ 30 ದೇಶಗಳಲ್ಲಿ  ಪದ್ದತಿಯು ಕಂಡುಬಂದವು. ಕ್ರಮೇಣ  ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕ,ಪಶ್ಚಿಮ ಯುರೋಪ್, ಉತ್ತರ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್   ದೇಶಗಳಲ್ಲಿ ಸ್ತ್ರೀ ಜನನಾಂಗದ ಉನಗೊಳಿಸುವಿಕೆ ವಿಧಾನ ಆರಂಭವಾಯಿತು.

 ಪದ್ದತಿಯನ್ನು  ನಿರ್ಮೂಲನೆ ಮಾಡುವ ಉದ್ದೇಶದಿಂದ 2012ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಫೆಬ್ರವರಿ 6 ರಂದು ಸ್ತ್ರೀ ಜನನಾಂಗದ ಊನಗೊಳಿಸುವಿಕೆಯ ಅಂತರರಾಷ್ಟ್ರೀಯ ಶೂನ್ಯ ಸಹಿಷ್ಣುತೆಯ ದಿನವೆಂದು ಘೋಷಣೆ ಮಾಡಿತ್ತು. ಒಂದು ದಶಕದಲ್ಲಿ ಸ್ತ್ರೀ ಜನನಾಂಗದ ಊನಗೊಳಿಸುವಿಕೆಯನ್ನು ನಿರ್ಮೂಲನೆಯ ಅಭಿಯಾನವನ್ನು ಹಮ್ಮಿಕೊಂಡಿತ್ತು. 

 ಸ್ತ್ರೀ ಜನನಾಂಗದ ಊನಗೊಳಿಸುವಿಕೆಯ ನಿರ್ಮೂಲನೆಗೆ,  ಸಂಘಟಿತವಾಗಿ ಹಾಗೂ  ವ್ಯವಸ್ಥಿತವಾಗಿ ಪ್ರಯತ್ನಿಸಬೇಕು.  ಈ ಕಾರ್ಯದಲ್ಲಿ  ಇಡೀ ಸಮುದಾಯಗಳನ್ನು ತೊಡಗಿಸಿಕೊಳ್ಳಬೇಕು. ಮಾನವ ಹಕ್ಕುಗಳು, ಲಿಂಗ ಸಮಾನತೆ, ಲೈಂಗಿಕ ಶಿಕ್ಷಣಗಳ ಬಗ್ಗೆ  ಮಹಿಳೆಯರು ಅಥವಾ  ಹುಡುಗಿಯರಲ್ಲಿರುವ ಅಜ್ಞಾನವನ್ನು ತೊಲಗಿಸಬೇಕು.

2008 ರಿಂದ ಯುನಿಸೆಫ್ ಮತ್ತು ಯುಎನ್ಎಫ್ ಎ ಜಂಟಿಯಾಗಿ  ಸ್ತ್ರೀ ಜನನಾಂಗದ ಊನಗೊಳಿಸುವಿಕೆಯನ್ನು ನಿರ್ಮೂಲನೆ ಮಾಡುವ ಅತಿದೊಡ್ಡ ಕಾರ್ಯಕ್ಕೆ ನಾಂದಿಯಾಡಿತ್ತು. ಪ್ರಸ್ತುತ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ 17 ದೇಶಗಳ ಮೇಲೆ ಕೇಂದ್ರೀಕರಿಸಿದೆ. ಪ್ರಾದೇಶಿಕ ಮತ್ತು ಜಾಗತಿಕ ಉಪಕ್ರಮಗಳನ್ನು ಸಹ ಬೆಂಬಲಿಸುತ್ತದೆ. 2030 ರ ವೇಳೆಗೆ ತನ್ನ ಸಂಪೂರ್ಣ ನಿರ್ಮೂಲನೆ ಮಾಡುವ ಶ್ರಮಿಸುತ್ತದೆ.ಈ ಕಾರ್ಯದಲ್ಲಿ ಯುಎನ್‌ ಗಮನಾರ್ಹ ಸಾಧನೆಗಳನ್ನು ಮಾಡುತ್ತಿವೆ.

 3.3 ದಶಲಕ್ಷಕ್ಕೂ ಹೆಚ್ಚು ಬಾಲಕಿಯರು ಮತ್ತು ಮಹಿಳೆಯರು ಸ್ತ್ರೀ ಜನನಾಂಗದ ಊನಗೊಳಿಸುವಿಕೆ  ಪ್ರಕರಣಗಳಿಂದ ರಕ್ಷಿಸಿ ಆರೈಕೆಯನ್ನು ಮಾಡಲಾಗಿದೆ. 13 ದೇಶಗಳು ಸ್ತ್ರೀ ಜನನಾಂಗದ ಊನಗೊಳಿಸುವಿಕೆಯನ್ನು ನಿಷೇಧಿಸಲು ಕಾನೂನು ರೂಪಿಸಿವೆ. ಹೀಗೆ ಎಲ್ಲ ದೇಶವು ಕ್ರಮ ತೆಗೆದುಕೊಂಡರೆ ಮುಂದೊಂದು ದಿನ ಇಂತಹ ಪದ್ದತಿ ನಮ್ಮ ಜಗತ್ತಿನಲ್ಲಿ ಕಣ್ಮರೆ ಆಗುವುದಂತು ಖಂಡಿತ. ಜಗತ್ತು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಸಂಗತಿಯನ್ನು ಬಿಟ್ಟು  ಮೊದಲು ಮಹಿಳೆಯ ಸಮಸ್ಯೆಯ ಬಗ್ಗೆ ಆಲೋಚನೆ ಮಾಡಲಿ.