ಅಪ್ಪ ಚುನಾವಣೆಗೆ ನಿಂತಿದ್ದಾನೆ..!

ಅಪ್ಪ ಚುನಾವಣೆಗೆ ನಿಂತಿದ್ದಾನೆ..!

 

ಅಪ್ಪ ಸೇದುವ ಬೀಡಿಗಷ್ಟೆ 

ಬೆಂಕಿ ಹಚ್ಚುತ್ತಿರಲಿಲ್ಲ

ಹಚ್ಚಿದ ಬೀಡಿಯನ್ನು ಆಗಾಗ

ಅವ್ವನೆದೆಗೂಡಿಗೂ ಚುಚ್ಚುತ್ತಿದ್ದ

ಸುಟ್ಟುಕೊಂಡೆ ಬಾಳು ಕಟ್ಟಿಕೊಂಡಳು.

 

ಚಂದುಳ್ಳ ಚೆಲುವಿಯೊಂದಿಗೆ

ಅಪ್ಪ ಚಕ್ಕಂದವಾಡುತ್ತಿದ್ದರೆ.. 

ಅವ್ವ ಸಿಟ್ಟನ್ನೆಲ್ಲಾ ಸುಟ್ಟು

ತಟ್ಟುವ ರೊಟ್ಟಿಯೊಡನೆ 

ಬೇಯುತ್ತಿದ್ದಳು ಬೆಗುದಿಯಲಿ

 

ಅಪ್ಪನ ನಾಟಕದಲಿ

ಅವ್ವನಾಟ ನಡೆಯಲೇ ಇಲ್ಲ

ಬಿಟ್ಟ ಬಿರುಕಿಗೆ ಅವ್ವ

ಮಣ್ಣು ಮೆತ್ತಿ ಬಣ್ಣ ಬಳಿದಳು

ಒಡಲೊಳಗಿನ ನೋವುಗಳನು

ಹಡೆಯದೆ ಹೊತ್ತು ನಡೆದಳು

 

ಅಪ್ಪನ ದುರಾಡಳಿತದಲ್ಲಿ 

ನನ್ನ ಪ್ರತಿರೋಧವೂ ಗೌಣ

ಅವ್ವನೂ ಅದೇಕೊ ಮೌನ

ದೈವದ ತಕ್ಕಡಿಯೂ ಸಹ

ಅಪ್ಪನ ಪರವೇ ತೂಗುತ್ತಿತ್ತು

 

ಅವ್ವನ ತಲ್ಲಣಗಳು

ದೈವದ ದ್ವಂದ್ವಗಳು

ನನ್ನೊಳಗೆ ತಳಮಳಗೊಂಡು

ತಾಳತಪ್ಪಿಸಿ ಬೀದಿಗೆ ತಳ್ಳಿದವು

 

ಹಾದಿಹೋಕರು ನೋಡಿಯೂ 

ನೋಡದವರಂತೆ ನಡೆಯುತ್ತಿದ್ದಾರೆ

ಬೀದಿಗೆ ಬಿದ್ದವನಿಗೆ 

ಬದುಕು ಅದೇಕೊ ಅರ್ಥವಾಗುತ್ತಿಲ್ಲ

 

ಗೆಳೆಯರೆ…

ಅಪ್ಪ ಮತ್ತೆ ಚುನಾವಣೆಗೆ ನಿಂತಿದ್ದಾನೆ

ಈ ಸಾರಿ ಗೆಲುವು ನಿಮ್ಮದಾಗಿರಲಿ..

 

-ಕೆ.ಬಿ.ವೀರಲಿಂಗನಗೌಡ