ಅಪರೂಪದ ವಕೀಲರಾದ ಲಿಲಿ ಥಾಮಸ್ ಕಣ್ಮರೆ

ಪ್ರಜಾಪ್ರತಿನಿಧಿ ಕಾಯ್ದೆಯ 8(4) ನೇ ಸೆಕ್ಷನ್ ಅನ್ನು ಸುಪ್ರೀಂ ಕೋರ್ಟ್ ತೆಗೆದುಹಾಕುವುದಕ್ಕೆ ಲಿಲಿ ಥಾಮಸ್ ಅವರ ಮನವಿಯೇ ಕಾರಣವಾಗಿತ್ತು

ಅಪರೂಪದ ವಕೀಲರಾದ ಲಿಲಿ ಥಾಮಸ್ ಕಣ್ಮರೆ

ಸುಪ್ರೀಂ ಕೋರ್ಟ್ ನ ಅತ್ಯಂತ ಹಿರಿಯ ವಕೀಲರಾದ ಲಿಲಿ ಥಾಮಸ್(91) ಇನ್ನಿಲ್ಲ ಎಂಬುದು ಸುದ್ದಿಯಾಗಿರುವುದೇ ಅವರ ವಯಸ್ಸಿನ ಕಾರಣದಿಂದಲ್ಲ. ಅವರು ಕೈಗೆತ್ತಿಕೊಂಡ ಪ್ರಕರಣಗಳು ಅವರನ್ನು ಇವತ್ತಿಗೂ ಜೀವಂತವಾಗಿರಿಸಿವೆ.

ಸುಪ್ರೀಂಕೋರ್ಟ್ ನಲ್ಲಿ ಅವರು ಅನೇಕ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ದಾಖಲಿಸಿದ್ದರು. ವಕೀಲರ ಕಾಯ್ದೆಯ ನಾಲ್ಕನೇ ಭಾಗದಲ್ಲಿ ಬರುವ ಸೆಕ್ಷನ್ 30 ರ ಪ್ರಕಾರ ಎಲ್ಲ ವಕೀಲರು ಸುಪ್ರೀಂ ಕೋರ್ಟ್ ಸೇರಿದಂತೆ ದೇಶಾದ್ಯಂತ ಇರುವ ಎಲ್ಲ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ನೀಡಿದ್ದು, ಈ ವಿಷಯದಲ್ಲಿ ವಕೀಲರ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು Live Law ಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ದ್ವಿಪತ್ನಿತ್ವವನ್ನು ಅಪರಾಧ ಎನ್ನುವ ಭಾರತೀಯ ದಂಡ ಸಂಹಿತೆಯ 494 ನೇ  ಸೆಕ್ಷನ್ ಅನ್ನು ಅವರು ಪ್ರಶ್ನಿಸಿದ್ದರು. 

ತಪ್ಪಿತಸ್ಥರೆಂದು ಸಾಬೀತಾದ ಜನಪ್ರತಿನಿಧಿಗಳು ಸಂಬಂಧಪಟ್ಟ ತೀರ್ಪನ್ನು ಪ್ರಶ್ನಸಿ ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅನರ್ಹರಾಗದೇ ತಮ್ಮ ಹುದ್ದೆಯಲ್ಲಿ ಮುಂದುವರಿಯುವುದಕ್ಕೆ ಅವಕಾಶ ನೀಡಿದ್ದ ಪ್ರಜಾಪ್ರತಿನಿಧಿ ಕಾಯ್ದೆಯ 8(4) ನೇ ಸೆಕ್ಷನ್ ಅನ್ನು ಸುಪ್ರೀಂ ಕೋರ್ಟ್ ತೆಗೆದುಹಾಕುವುದಕ್ಕೆ ಲಿಲಿ ಥಾಮಸ್ ಅವರ ಮನವಿಯೇ ಕಾರಣವಾಗಿತ್ತು. 2 ವರ್ಷ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಗೆ ಒಳಗಾದ ಜನಪ್ರತಿನಿಧಿಗಳು ತನ್ನಿಂದ ತಾನೇ ಅನರ್ಹರಾಗುವುದಕ್ಕೆ ಈ ಮಹತ್ವದ ತೀರ್ಪು ಕಾರಣವಾಗಿತ್ತು. ಈ ತೀರ್ಪನ್ನು ನಿರರ್ಥಕಗೊಳಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷಾಜ್ಞೆ ಸಿದ್ಧಪಡಿಸಿದಾಗ ಅದರ ವಿರುದ್ಧ ಲಿಲಿ ಥಾಮಸ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ವ್ಯಾಪಕ ಟೀಕೆಯ ನಂತರ ಸರ್ಕಾರ ಈ ವಿಶೇಷಾಜ್ಞೆಯನ್ನು ಹಿಂಪಡೆದಿತ್ತು. 

ಕೇರಳದ ಕೊಟ್ಟಾಯಂನಲ್ಲಿ ಜನಿಸಿದ ಲಿಲಿ ಥಾಮಸ್ ಬೆಳೆದಿದ್ದು ತಿರುವನಂತಪುರದಲ್ಲಿ. ಮದ್ರಾಸ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ನಂತರ1955 ರಲ್ಲಿ ಮದ್ರಾಸ್ ಹೈಕೋರ್ಟ್ ನಲ್ಲಿ ವಕೀಲಿ ವೃತ್ತಿ ಆರಂಭಿಸಿದರು. 1959 ರಲ್ಲಿ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಈ ಮೂಲಕ ಅವರು ಎಲ್.ಎಲ್.ಎಂ. ಪದವಿಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು. 1960 ರಲ್ಲಿ ಅವರ ಕಾರ್ಯಕ್ಷೇತ್ರ ಸುಪ್ರೀಂ ಕೋರ್ಟ್ ಗೆ ಸ್ಥಳಾಂತರಗೊಂಡಿತು. ಮಹಿಳಾ ವಕೀಲರಿಗೆ ಅವರು ಆದರ್ಶವಾಗಿದ್ದಾರೆ.