ಕೌಟುಂಬಿಕ ಸಾಮರಸ್ಯ ಬಿತ್ತುವ ಚಿತ್ರ ಆಯುಷ್ಮಾನ್ ಭವ

ಕೌಟುಂಬಿಕ ಸಾಮರಸ್ಯ ಬಿತ್ತುವ ಚಿತ್ರ ಆಯುಷ್ಮಾನ್ ಭವ

ಆಯುಷ್ಮಾನ್ ಭವ  ಚಿತ್ರವು ಕೌಟುಂಬಿಕ ಸಾಮರಸ್ಯ ಬಿತ್ತುವ  ಚಿತ್ರ. ಎಲ್ಲರೂ ಒಟ್ಟಾಗಿ ಸಂತೋಷದಿಂದಿರುವ  ತುಂಬು ಕುಟುಂಬದ ಕಥೆ.  ಆದರೆ ಆ ಕುಟುಂಬದಲ್ಲಿ ಹಿಂದೆ ನಡೆದ ಘಟನೆಯೊಂದು ಎಲ್ಲರ ನೆಮ್ಮದಿ ಹಾಳು ಮಾಡುತ್ತದೆ . ಆ ಘಟನೆಯ ಸುತ್ತಲೂ ಕಥೆ  ಹೆಣೆದಿದ್ದಾರೆ.  

ಆಯುಷ್ಮಾನ್ ಭವ  ಚಿತ್ರದಲ್ಲಿ ಮಾನಸಿಕ ಸಮಸ್ಯೆ ಇರುವ ಲಕ್ಷ್ಮಿಯ  ಪಾತ್ರದಲ್ಲಿ ರಚಿತಾ ರಾಮ್. ಶ್ರೀಮಂತ ಕುಟುಂಬದ  ವೈದ್ಯ ವೃತ್ತಿಯಲ್ಲಿರುವ ಕೃಷ್ಣನ  ಪಾತ್ರದಲ್ಲಿ  ಶಿವರಾಜ್ ಕುಮಾರ್ ನಟಿಸಿದ್ದಾರೆ. 

ಲಕ್ಷ್ಮಿಯು ತಂದೆ ತಾಯಿಯೊಡನೆ ಅಂತಾರಾಷ್ಟ್ರೀಯ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಲು  ರೈಲಿನಲ್ಲಿ ಪ್ರಯಾಣಿಸುವಾಗ ಅದೇ  ರೈಲಿನಲ್ಲಿ  ಕೃಷ್ಣ   ತಮ್ಮ ಆಸ್ಪತ್ರೆಗೆ ಬಂದ  ಆಪಾದನೆಯನ್ನು ನಿವಾರಿಸಲು. ಸತ್ಯಾಂಶಗಳನ್ನು ಕಂಡು ಹಿಡಿದು ಎಲ್ಲ ಸಾಕ್ಷ್ಯಗಳನ್ನು ಸಿಬಿಐ ಗೆ ಒಪ್ಪಿಸಲು ಹೊರಡುತ್ತಾನೆ. ಆಗ  ವಿಷಯ ತಿಳಿದು ಎದುರಾಳಿಗಳು ಕೃಷ್ಣನನ್ನು ಕೊಂದು ಸಾಕ್ಷ್ಯ ನಾಶ ಮಾಡಲು ಬರುತ್ತಾರೆ.  ಕೃಷ್ಣ ಮತ್ತು ಎದುರಾಳಿಗಳ  ನಡುವೆ ನಡೆದ ಹೊಡೆದಾಟದಲ್ಲಿ ಲಕ್ಷ್ಮಿಯ ತಂದೆ-ತಾಯಿ ಇರುವ ಬೋಗಿ ಬೆಂಕಿಗೆ ಆಹುತಿಯಾಗುತ್ತದೆ. ಆ ಘಟನೆಯನ್ನು  ಕಣ್ಣಾರೆ ಕಂಡ  ನಟಿ ಹುಚ್ಚಿಯಾಗಿ ಮಾನಸಿಕ ಸ್ಥೈರ್ಯ ಕಳೆದುಕೊಂಡು  ನಿರ್ಜೀವದಂತೆ ಬದುಕುತ್ತಾಳೆ. 

3 ವರ್ಷದ ಬಳಿಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಲಕ್ಷ್ಮಿಯನ್ನು ನೋಡಿದ ಕೃಷ್ಣನಿಗೆ ತನ್ನಿಂದಾಗಿಯೇ ಲಕ್ಷ್ಮಿಗೆ ಈ ಸ್ಥಿತಿ ಬಂದಿದೆ ಎಂಬ ಪಾಪಪ್ರಜ್ಞೆ ಕಾಡತೊಡಗುತ್ತದೆ  ಅವಳನ್ನು ಹೇಗಾದರೂ  ಮಾಡಿ  ಗುಣಪಡಿಸಲೇಬೇಕೆಂದು  ಮುಂದಾಗುತ್ತಾನೆ. ಲಕ್ಷ್ಮಿಯ ಮನೆಯ ಕೆಲಸದವನಾಗಿ ಬಂದು ಅವಳನ್ನು ಗುಣ ಪಡಿಸುವುದೇ ಕಥೆಯ ಸಾರಾಂಶವಾಗಿದೆ.   

ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ಹಿರಿಯ ನಟ ಅನಂತನಾಗ್  ಒಂದು ಕುಟುಂಬವನ್ನು ಜೇನಿನ ಗೂಡಿನಂತೆ ಪೋಷಿಸಿಕೊಂಡು  ಒಂದಾಗಿ ಬದುಕುವ  ಸಿನಿಮಾ  ನಿಜಕ್ಕೂ ಪ್ರೇಕ್ಷಕರಿಗೆ  ಇಷ್ಟವಾಗುತ್ತದೆ. 

ರಮೇಶ್ ಭಟ್, ಸುಹಾಸಿನಿ, ಅವಿನಾಶ್, ರಂಗಾಯಣ ರಘು, ಸಾಧು ಕೋಕಿಲ ಸೇರಿದಂತೆ ಅನೇಕ ಪೋಷಕ ನಟ ನಟಿಯರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಚಿತ್ರವು ಮೊದಲು ಒಂದು 20 ನಿಮಿಷ ಹ್ಯಾಪಿ ಫ್ಯಾಮಿಲಿಯಲ್ಲಿನ ಸಂತೋಷದ ಕ್ಷಣಗಳನ್ನು ನೋಡಿದರೆ ಒಂದು ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಎಂದುಕೊಳ್ಳುತ್ತೇವೆ.  ಆದರೆ ಮಧ್ಯರಾತ್ರಿ ದೃಶ್ಯಗಳನ್ನು ನೋಡಿದರೆ ಇದು ಯಾವುದೊ  ಹಾರರ್  ಫಿಲ್ಮ್  ಎಂಬ  ಭಯ ಮತ್ತು ಕುತೂಹಲ ಎರಡು ಒಟ್ಟೊಟ್ಟಿಗೆ  ಮೂಡುತ್ತದೆ.  ಈ ಕುತೂಹಲವೇ ಸಿನಿಮಾದ ಮುಖ್ಯ ಅಂಶವಾಗಿ ಪ್ರೇಕ್ಷಕರ  ಗಮನ ಸೆಳೆಯುತ್ತದೆ.  

ಲಕ್ಷ್ಮಿಯ ಮಾನಸಿಕ ಆರೋಗ್ಯವನ್ನು ಸರಿಪಡಿಸುವ ಸುತ್ತಲೂ ಹೆಣೆದ ಕಥೆಗೆ ಸಂಗೀತವೇ ಔಷಧಿಯಾಗಿದೆ. ಸಂಗೀತದ ಸ್ವರಗಳಲ್ಲಿ ಜೀವನದ ಉತ್ಸಾಹ ಕಾಣುವ ಲಕ್ಷ್ಮಿ ಗುಡುಗು, ಮಿಂಚು, ಕಿಟಕಿಯ ಶಬ್ದ, ಬೀಸುವ ಗಾಳಿಯಲ್ಲಿ ಸಂಗೀತದ ಸ್ವರಗಳನ್ನು ಆಲಿಸುತ್ತಾಳೆ.  ಮನೆಯವರು ನೆನೆಪಿಲ್ಲದೆ ಹೋದರೂ ಸಂಗೀತದ ಸ್ವರಗಳನ್ನು ಮಾತ್ರ ಮರೆಯದೆ ಕೃಷ್ಣನ ಹಾಡಿಗೆ ಮೈ ಮರೆಯುತ್ತಾಳೆ. ಹಾಡು ಮನುಷ್ಯನ ನೋವುಗಳನ್ನು ದೂರ ಮಾಡಿ ಹೊಸ ಜೀವನ ಚೈತನ್ಯ ಮೂಡಿಸುತ್ತದೆ. ಸಂತೋಷದಿಂದ ಇರುವಂತೆ ಮಾಡುತ್ತದೆ.

ಮಾನಸಿಕ ಸಮಸ್ಯೆ ಇರುವ ಪಾತ್ರದಲ್ಲಿ ರಚಿತಾರಾಮ್  ಅಭಿನಯ ಒಂದು ಮಟ್ಟಕ್ಕೆ ಓಕೆ ಅಂತ ಅನ್ನಿಸಿದರು ಇನ್ನೂ ಚೆನ್ನಾಗಿ ಮಾಡಬಹುದಿತ್ತೇನೊ ಎಂದೂ ಅನ್ನಿಸುತ್ತದೆ.  ಹಿಂದಿಯ ಬರ್ಫಿ ಸಿನಿಮಾದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರ ನಟನೆ ನೋಡಿದರೆ ನಿಜಕ್ಕೂ ಅವರು ಆ ಪಾತ್ರದಲ್ಲಿ ಕಳೆದು ಹೋಗಿದ್ದು ಗೊತ್ತಾಗುತ್ತೆ. ಕನ್ನಡದಲ್ಲೂ ಅಂತಹ ಹೊಸ ಹೊಸ ಪ್ರಯೋಗಗಳನ್ನು  ನೋಡಲು  ಪ್ರೇಕ್ಷಕರು ಇಷ್ಟ  ಪಡುತ್ತಾರೆ. 

ಆಯುಷ್ಮಾನ್ ಭವ ಚಿತ್ರದಲ್ಲಿ ಮೂಡಿ ಬಂದ ಎಲ್ಲ ಹಾಡುಗಳು ಅದ್ಬುತವಾಗಿದೆ. ಇದು ಗುರು ಕಿರಣ್  ಸಂಗೀತ ನಿರ್ದೆಶನದ  ನೂರನೇ  ಚಿತ್ರ ಕೂಡ ಹೌದು.  ಸರ ಸರ ದುಮುಕೊ ನೀರಿಗೆ ಗರಿ ಗದರುತಾ ಹಾರೊ ಹಕ್ಕಿಗೆ ಬಿರು ಬಿಸಿಲಲ್ಲಿ ಬೇಯೊ ಬಾನಿಗೆ ಇರದ ಭಯಾ  ನಿನಗೇಕೆ.... ಹಾಡನ್ನು ಡಾ. ನಾಗೇಂದ್ರೆ ಪ್ರಸಾದ್ ಬರೆದಿದ್ದಾರೆ. ವಿಜಯ ಪ್ರಕಾಶ್ ಧ್ವನಿಯಲ್ಲಿ  ಸ್ವಾರಸ್ಯಕರವಾಗಿ ಮೂಡಿ ಬಂದಿದೆ.. ಕಾಡಿನಲ್ಲಿ ಚಿತ್ರಿಸಿದ ದೃಶ್ಯಗಳು ಹಾಗೂ ಹಾಡು ರೋಮಾಂಚನಗೊಳಿಸುತ್ತದೆ. ಅದರಲ್ಲೂ ಹುಲಿಯೊಂದಿಗಿನ ಸೆಣಸಾಟ ಹುಲಿಯನ್ನು ಗಾಯಗೊಳಿಸುವುದು ಸ್ವಲ್ಪ ಅತಿಯಾಗಿ ಕಂಡರೂ ಸಿನಿಮಾದ ಹಾಡು ಹೊಸ ಅನುಭವವನ್ನು ನೀಡುತ್ತದೆ.

ಈ ಚಿತ್ರವು ಹಾಸ್ಯ ನಟ ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದು ಪಿ. ವಾಸು ನಿರ್ದೇಶನ ಮಾಡಿದ್ದಾರೆ.