ರೊಲೆಕ್ಸ್ ಪ್ರಶಸ್ತಿ ಪಡೆಯಲು ಸುಳ್ಳು ದಾಖಲೆ ಆರೋಪ : ವಿವಾದದಲ್ಲಿ ಶಿವರಾಮ ಕಾರಂತರ ಮೊಮ್ಮಗಳು ಕೃತಿ

ರೊಲೆಕ್ಸ್ ಪ್ರಶಸ್ತಿ ಪಡೆಯಲು ಸುಳ್ಳು ದಾಖಲೆ ಆರೋಪ : ವಿವಾದದಲ್ಲಿ ಶಿವರಾಮ ಕಾರಂತರ ಮೊಮ್ಮಗಳು ಕೃತಿ

ಶಿವರಾಮ ಕಾರಂತರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದರೆ ಅವರ ಪುತ್ರ ಉಲ್ಲಾಸ ಕಾರಂತ್ ನಾಗರಹೊಳೆ ಅಭಯಾರಣ್ಯದಲ್ಲಿ ಹುಲಿಗಳಿಗೆ ರೇಡಿಯೋ ಕಾಲರ್ ಅಳವಡಿಸಿ ವಿವಾದಕ್ಕೆ ಒಳಗಾಗಿದ್ದರು. ಈಗ ಅವರ ಪುತ್ರಿ ರೊಲೆಕ್ಸ್ ಪ್ರಶಸ್ತಿ ವಿವಾದದಲ್ಲಿ ಸಿಲುಕಿದ್ದಾರೆ. ಈ ಕುರಿತು ಜಿ.ಆರ್.ಸತ್ಯಲಿಂಗರಾಜು ವರದಿ.  

ಜ್ಞಾನಪೀಠ ಪುರಸ್ಕೃತ ಕೆ.ಶಿವರಾಮ ಕಾರಂತರ ಕುಟುಂಬದ ಮತ್ತೊಂದು ಕುಡಿ ಕಾಡು ಮತ್ತು ಕಾಡಿಗೆ ಸಂಬಂಧಿಸಿದ ವಿವಾದಕ್ಕೆ ಸಿಲುಕಿದೆ.ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಕಾರಂತರ ಪುತ್ರ ಉಲ್ಲಾಸ್ ಕಾರಂತ ಕೂಡ ಹುಲಿಗಳ ಅಧ್ಯಯನದಲ್ಲಿ ತೊಡಗಿದ್ದವರು. ನಾಗರಹೊಳೆ ಆಸುಪಾಸಿನಲ್ಲಿ ಹುಲಿಗಳ ಚಲನವಲನ ಅರಿಯಲು ರೇಡಿಯೋ ಕಾಲರ್ ಅಳವಡಿಸಿದ್ದುದೇ, ಕೆಲ ಹುಲಿಗಳ ಸಾವಿಗೆ ಕಾರಣ ಎಂಬಿತ್ಯಾದಿ ಆರೋಪಗಳಿಗೆ ಇವರು ಸಿಕ್ಕಿಕೊಂಡು ಬಳಲಿದ್ದರು. ಈಗ ಇವರ ಪುತ್ರಿ ಕೃತಿ ಕಾರಂತ್ ಸುಳ್ಳು ದಾಖಲಾತಿಗಳನ್ನ ಕೊಟ್ಟು ವಿಶ್ವದ ಪ್ರತಿಷ್ಟಿತ ಪ್ರಶಸ್ತಿಯನ್ನೂ ಅದರ ಜತೆಗೆ ಭಾರೀ ಮೊತ್ತವನ್ನೂ ಪಡೆದುಕೊಂಡಿದ್ದಾರೆ ಎಂಬ ವಿವಾದಕ್ಕೆ ಒಳಗಾಗಿದ್ದಾರೆ.

ವಿಶ್ವದ ಮೊಟ್ಟಮೊದಲ ಜಲನಿರೋಧಕ ಕೈಗಡಿಯಾರ ಎಂದೇ ಖ್ಯಾತವಾಗಿರುವ ರೊಲೆಕ್ಸ್ ರೂಪಿಸಿದವರು ರೊಲೆಕ್ಸ್ ಓಯಿಸ್ಟರ್. ಇವರ ನೆನಪಲ್ಲಿ 1976 ರಲ್ಲಿ ರೊಲೆಕ್ಸ್ ಪ್ರಶಸ್ತಿಯನ್ನ ಸ್ಥಾಪಿಸಲಾಗಿದ್ದು, ಇದನ್ನು ಭಾರತೀಯ ರುಪಾಯಿಯಲ್ಲಿ ಒಂದೂವರೆ ಕೋಟಿಗೆ ಸಮನಾಗಿ ಸ್ವಿಸ್ ಫ್ರಾಂಕ್ಸ್‍ನಲ್ಲಿ ಕೊಡಲಾಗುತ್ತೆ.

ಪರಿಸರ- ವನ್ಯ ಜೀವಿ ಮತ್ತಿತರೆ ಕ್ಷೇತ್ರದಲ್ಲಿನ ಮಹೋನ್ನತ ಸೇವೆ ಸಲ್ಲಿಸಿದವರಿಗೆ ಮತ್ತು ಸಂಘಗಳಿಗೆ ಕೊಡಲ್ಪಡುವ ಈ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿ, ಅಂತಿಮ ಘಟ್ಟಕ್ಕೆ ಬಂದ 10 ಮಂದಿಯ ಹೆಸರನ್ನ ಜಾಲತಾಣದಲ್ಲಿ ಪ್ರಕಟಿಸಿ, ಸಾರ್ವಜನಿಕರ ಮತವನ್ನೂ ಪಡೆಯುವಂಥದ್ದನ್ನ ಇತ್ತೀಚಿನ ವರ್ಷಗಳಿಂದ ಅಳವಡಿಸಿಕೊಂಡಿದೆ. ಪ್ರತೀ ಮೇ 6 ರಿಂದ ಜೂನ್ 12 ವರೆಗೆ ಮತ ಚಲಾಯಿಸಬಹುದು. ಅಂತಿಮ ವಿಜೇತರ ಪಟ್ಟಿಯನ್ನ ಜೂನ್ 14 ರಂದು  ಪ್ರಕಟಿಸಲಾಗುತ್ತೆ.

1978 ರಲ್ಲಿ ಆರಂಭವಾದ ರೋಲೆಕ್ಸ್ ಪ್ರಶಸ್ತಿಗೆ 34 ಸಾವಿರ ಅರ್ಜಿ ಸಲ್ಲಿಕೆಯಾಗಿ, ಇದುವರೆಗೆ 140 ಜನರಿಗೆ ಪ್ರಶಸ್ತಿ ಕೊಟ್ಟಿದೆ. 2019 ರ ಸಾಲಿನಲ್ಲಿ ಕೃತಿ ಕಾರಂತ್ ಕೂಡ ಇತರೆ ನಾಲ್ವರ ಜತೆ ಇದನ್ನ ಪಡೆದಿರುವುದರಿಂದ, ಒಂದೂವರೆ ಕೋಟಿ ಐವರಿಗೆ ಹಂಚಿಕೆಯಾಗಿದೆ.

ನಾಗರಹೊಳೆ, ಬಂಡೀಪುರದಾದ್ಯಂತ ಕಾಡಂಚಿನಲ್ಲಿ 600 ಗ್ರಾಮಗಳಲ್ಲಿ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷದ ಕುರಿತು ಅರಿವು ಮೂಡಿಸುವುದು, ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವುದರಲ್ಲಿ ತಾನು ಹಾಗು ತನ್ನ ಸಂಸ್ಥೆ ತೊಡಗಿಕೊಂಡಿದ್ದು, 13 702 ಅರ್ಜಿದಾರರಿಗೆ ನೆರವು ಕೊಡಿಸುವ ಕಾರ್ಯ ಮಾಡಿದ್ದೇನೆ ಎಂಬುದರ ದಾಖಲಾತಿಗಳನ್ನ ಸಲ್ಲಿಸಿದ್ದರು. ಆದರೆ ಇದೆಲ್ಲ ಸುಳ್ಳು ಮಾಹಿತಿ ಎಂದು ಆಗಿನಿಂದಲೇ ಅಪಸ್ವರಗಳಿದ್ದರೂ, ಪ್ರಶಸ್ತಿ ಬಂದೇ ಬಿಟ್ಟಿತ್ತು. 

ಈಗ ಅರಣ್ಯ ಇಲಾಖೆಯ ಮುಖ್ಯ ಅಧಿಕಾರಿಗಳೇ ಸಿಡಿದೆದ್ದಿದ್ದು, ಕೃತಿ ಕಾರಂತ್ ಇಂಥ ಯಾವುದೇ ನೆರವಿನ ಕೆಲಸ ಮಾಡುತ್ತಲೇ ಇಲ್ಲ. ಸಂತ್ರಸ್ತರನ್ನ ಗುರುತಿಸುವುದು, ಅವರಿಗೆ ಪರಿಹಾರ ಕೊಡಿಸುವುದನ್ನ ನಮ್ಮ ಸಿಬ್ಬಂದಿಯೇ ಮಾಢುತ್ತಿದ್ದಾರೆ ಹೊರತು, ಬೇರೆಯವರಲ್ಲ ಎಂದು ಜಾಲತಾಣದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.  ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಡ ಕೃತಿ ಕಾರಂತರ ಮುಖವನ್ನೇ ನೋಡಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಶಿವರಾಮ ಕಾರಂತರ ಮೊಮ್ಮಗಳು ಪ್ರಶಸ್ತಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.

ಮೂರು ದಶಕ ಹಿಂದಕ್ಕೆ

ಅಂದಹಾಗೆ, ರೋಲೆಕ್ಸ್ ಕೈಗಡಿಯಾರಕ್ಕೂ ಇದರ ಜನಕನ ನೆನಪಿನ  ಪ್ರಶಸ್ತಿಗೂ ಸಂಬಂಧಿಸಿದ ವಿವಾದಗಳಿಗೂ ಮೂರು ದಶಕಗಳ ನೆಂಟಿನ ಕೊಂಡಿಯಿರುವುದು ವಿಶೇಷವಾದುದು.

ಆರ್.ಗುಂಡೂರಾವ್ 1980 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ಆಹಾರ ಖಾತೆ ಸಚಿವರಾಗಿದ್ದ ಸಿ.ಎಂ.ಇಬ್ರಾಹಿಂ ಚಿನ್ನದ ರೊಲೆಕ್ಸ್ ವಾಚನ್ನ ಅರಬ್‍ನ ಶೇಖ್ ಕೊಟ್ಟಿದ್ದೆಂದೂ, ಇದು ಬರೀ ಸಮಯ ತೋರಿಸುವುದಲ್ಲ ಕೊಲ್ಲಿ ರಾಷ್ಟ್ರಗಳಿಗೆ ಹೋಗಲು ಒಂದು ರೀತಿಯ ವೀಸಾ ಇದ್ದಂತೆ ಎಂದೂ ಕೊಚ್ಚಿಕೊಂಡಿದ್ದರು. ಆಗ ವಿಪಕ್ಷಗಳವರು ಅರಬ್‍ನ ಗುಪ್ತಚರ ಏಜೆಂಟ್ ಎಂದು ತರಾಟೆಗೆ ತೆಗೆದುಕೊಂಡಾಗ, ಇಬ್ರಾಹಿಂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆ ಪ್ರಸಂಗ ದೊಡ್ಡ ವಿವಾದವಾಗಿತ್ತು. ಈಗ ಅದೇ ವಾಚಿನ ಪ್ರಶಸ್ತಿ ವಿವಾದ ಮತ್ತೆ ನಮ್ಮ ರಾಜ್ಯಕ್ಕೇ ಅರಸಿಕೊಂಡು ಬಂದಿದೆ. ಇದಕ್ಕೀಗ ಸಿಲುಕಿರುವುದು ಶಿವರಾಮ ಕಾರಂತರ ಮೊಮ್ಮಗಳು ಎಂಬುದು ಖೇದನೀಯವೂ ಹೌದು.