ಎಂದೂ ಮರೆಯದ ಹಾಡು

ತೆಲುಗು ಮೂಲ: ಪಸುನೂರಿ ರವೀಂದರ್, ಕನ್ನಡಕ್ಕೆ: ಎಂ.ಜಿ. ಶುಭಮಂಗಳ

ಎಂದೂ ಮರೆಯದ ಹಾಡು

“ಗುರುವೆ ನಿನ್ನಾಟ ಬಲ್ಲವರ್ಯಾರ್ಯಾರೋ, ಶಿವನೆ ನಿನ್ನಾಟ ಬಲ್ಲವರ್ಯಾರ್ಯಾರೋ..” ಎನ್ನುತ್ತ ಸೀನು ಹಾಡುತ್ತಿದ್ದರೆ ನೋಡಬೇಕು. ಹಳ್ಳಿ ಪಟ್ಟಣಗಳೆಲ್ಲ ಬರಿಗಾಲಿನಲ್ಲಿ ನಡೆದುಬರುತ್ತದೆ. ಚಿಕ್ಕಂದಿನ ಶಾಲಾ ದಿನಗಳಿಂದಲೇ ಸೀನು ಹಾಡುಗಾರ. ಅದಕ್ಕೇ ಸೀನುವಿನ ಹೆಸರು ‘ಸಿಂಗರ್ ಸೀನು’ಆಯಿತು. ಅವನು ಬೆಳೆದಂತೆ ಅವನ ಹಾಡುಗಳ ವಿಸ್ತಾರವೂ ಹರಡುತ್ತಾ ಹೋಯಿತು.

ಧ್ವಜಾರೋಹಣವಿರಲಿ, ಟೀ ಸ್ಟಾಲ್ ಹೋಟೆಲ್ ಪಾರ್ಟಿಯಿರಲಿ ಸೀನುವಿನ ಹಾಡುಗಳಿಲ್ಲದ ಸಂದರ್ಭವಿಲ್ಲ. ಊರಿನಲ್ಲಿ ಎಲ್ಲರೂ ಹಾಡುಗಳ ಸೀನು ಎಂದರೆ, ಯೂನಿವರ್ಸಿಟಿಯಲ್ಲಿ ಮಾತ್ರ ‘ಸಿಂಗರ್ ಸೀನು’ ಹೆಸರು ಖಾಯಂ ಆಯಿತು. ಇದರಿಂದಾಗಿ ಸೀನುವಿಗೆ ಸ್ವಲ್ಪ ಹೆಸರು, ಗೌರವ ಬೆಳೆದಿದೆ. ಹೀಗೆ ಬೇರೆಯವರ ಹಾಡುಗಳನ್ನು ಹೇಳುತ್ತಲೇ ಬೆಳೆದ ಸೀನು ತಾನೂ ಹಾಡು ಕಟ್ಟುವ ತಂತ್ರಗಳನ್ನು ಕೂಡಕಲಿತು ಸಣ್ಣರಚನಕಾರನಾದನು. ಅದು ಅವನಿಗೆ ಹುಟ್ಟಿನಿಂದಲೇ ಬಂದದ್ದೆಂದು ಕೆಲವರು, ಇಲ್ಲ ಅವರ ಅಪ್ಪ ಅಮ್ಮನಿಂದ ಬಂದಿತೆಂದು ಮತ್ತೆ ಕೆಲವರು ಎಂಬ ವಾದಗಳು ನಡೆಯುತ್ತಿದ್ದವು.

ಕೆಲವು ಹಾಡುಗಳು ಬರೆದ ನಂತರ ಅದೇಕೋ ಸೀನುವಿಗೆ ಇದ್ದಕ್ಕಿದ್ದಂತೆ ಅವರ ಅಪ್ಪನ ಮೇಲೆ ಹಾಡು ಕಟ್ಟಬೇಕೆನಿಸಿತು. ಮುಂದಕ್ಕೆ ನಡೆಯುವಾಗ ಹಿಂತಿರುಗಿ ನೋಡಿಕೊಳ್ಳುವಂತೆ ಈ ಕೋರಿಕೆ ಬಲವಾಗತೊಡಗಿ, ಹಾಡು ಬರೆಯಲು ಸಿದ್ಧನಾದನು. ವಾರದಿಂದಲೂ ಸೀನುವಿಗೆ ಅಪ್ಪನ ಹಾಡಿನದೇ ಧ್ಯಾನ. ಯೂನಿವರ್ಸಿಟಿ ಹಾಸ್ಟೆಲ್‍ ಕಬ್ಬಿಣದ ಮಂಚಕ್ಕೆ ಸೊಂಟ ಹಾಕಿ ಕಣ್ಣು ಮುಚ್ಚಿದನು. 

ಅಪ್ಪನನ್ನು ನೆನೆದುಕೊಳ್ಳುತ್ತಿದ್ದಾನೆ. ಅದೇನು ಹೊಸದಾಗಿ ಅಪ್ಪನನ್ನು ಗುರುತು ತಂದುಕೊಳ್ಳುವುದು? ಅಪ್ಪನನ್ನು ಯಾವ ಮಗನಾದರೂ ಮರೆಯುತ್ತಾನಾ? ಏನೋ?! ಏಕೆ ಮರೆಯುತ್ತಾನೆ. ತಂದೆ ತಾಯಿಯರನ್ನು ಅನಾಥರಾಗಿ ಮಾಡಿದ ಮಕ್ಕಳ ಭಾಗವತ ನಾವು ಎಷ್ಟು ಕೇಳುತ್ತಿಲ್ಲ!

ಸೀನು ಆ ಗುಂಪಿಗೆ ಸೇರಿದವನಲ್ಲ.ತಂದೆಯ ಜೀವನವನ್ನು ಹಾಡಿನಲ್ಲಿ ಮೂಡಿಸಲು ಧ್ಯಾನಿಸುತ್ತಿದ್ದಾನೆ. ಆದರೂ ಸೀನುವಿನದ್ದು ಹುಚ್ಚು ಆಲೋಚನೆಯಲ್ಲದಿದ್ದರೆ ಮತ್ತೇನು, ಯಾರಾದರೂ ಕವಿತೆ, ಹಾಡು, ಕಥೆ, ಕಾದಂಬರಿ ಯಾವುದಾದರೂ ಸರಿ ಅಮ್ಮಂದಿರ ಕುರಿತು ಬರೆಯುತ್ತಾರೆಯೇ ಹೊರತು, ಅಪ್ಪನ ಕುರಿತು ಬರೆಯುತ್ತಾರಾ? ನೂರಕ್ಕೆ ಒಬ್ಬರು ಬರೆಯಬಹುದು. ನಿಜ ಹೇಳಬೇಕೆಂದರೆ ಅಪ್ಪ ತೆರೆ ಹಿಂದಿರುವವನೇ ಹೊರತು, ಎಂದೂ ಬೆಳಕಿಗೆ ಬರದವನೇ. ಅದಕ್ಕೇ ಅಪ್ಪನ ಕುರಿತು ಬರೆಯಬೇಕೆಂದು ಸೀನು ಒಂದು ರೀತಿ ಹೆರಿಗೆಯ ನೋವು ಅನುಭವಿಸುತ್ತಿದ್ದಾನೆ. ಇದೇ ಅವನನ್ನು ಕಣ್ಣು ರೆಪ್ಪೆ ಮುಚ್ಚದಂತೆ ಮಾಡಿದೆ. ಯಾರೂ ಬರೆಯದಿದ್ದರೂ ಪರವಾಗಿಲ್ಲ. ಅಪ್ಪನ ಕುರಿತು ಬರೆಯಬೇಕಾದ್ದೇ ಎಂದು ಪಟ್ಟು ಹಿಡಿದು ಹಾಡಿನ ಮೇಲೆ ಮನಸ್ಸಿಟ್ಟನು. “ಹಾಡು ಬರೆಯುವುದು ಸರಿ! ಅದು ನನ್ನ ಅಪ್ಪನಿಗೆ ಅರ್ಪಿಸಬೇಕಾ? ಇಲ್ಲ ಎಲ್ಲ ಅಪ್ಪಂದಿರಿಗಾ” ಎಂಬ ಯೋಚನೆಗಿಳಿದನು. ಆದರೂ ಎಲ್ಲ ಅಪ್ಪಂದಿರಂತೆಯೇ ಅಲ್ಲವಾ ನನ್ನಪ್ಪ?! ಎಂದುಕೊಂಡನು. ಸ್ವಲ್ಪ ಹೊತ್ತಿಗೆ “ಊಹೂ ನನ್ನಪ್ಪ ಎಲ್ಲರ ಅಪ್ಪಂದಿರಂತಲ್ಲ. ಎಲ್ಲರಿಗಿಂತಲೂ ಹೆಚ್ಚು ನನ್ನಪ್ಪ”ಎಂದುಕೊಂಡನು ಗಟ್ಟಿಯಾಗಿ. 

ಅಪ್ಪನಿಲ್ಲದಿದ್ದರೆ ಸೀನುವಿಗೆ ಇಷ್ಟು ಅಭಿಮಾನಿಗಳಿರುತ್ತಿರಲಿಲ್ಲ, ಏಕೆಂದರೆ ಸೀನುವಿನ ಅಪ್ಪ ಕೂಡ ಹಾಡುಗಾರ. ಹಾಗೆಂದು ಆತ ಸಂಗೀತ ಕಲಿಸುವ ಗುರುವಲ್ಲ. ಹೇಳಬೇಕೆಂದರೆ, ಅಕ್ಷರ ಬಾರದ ಹೆಬ್ಬೆಟ್ಟಿನವನು. ಊರಿನ ಹೊರಗೆ ಕಳೆಯಬೇಕಾದ ದುಸ್ಥಿತಿ. ಆ ನೋವಿನಿಂದಲೇ ಜೀವನದ ಹಾಡುಗಳನ್ನು ಕಟ್ಟಿ ಹಾಡಿದ ಬೈರಾಗಿ. ಊರಿನಿಂದ ವಲಸೆ ಹೋಗುತ್ತ ಹೊತ್ತು ತಂದ ಆಸ್ತಿಯೆಂದರೆ ಹಾಡು. ಅದಕ್ಕೇ ಸೀನುವಿಗೆ ಕೂಡ ಹಾಡನ್ನು ಹಂಚಿದ್ದಾನೆ. ಇನ್ನು ಸೀನುವಿನ ಅಮ್ಮ ಕೂಡಾ ಹಾಡುಗಳ ಚಿಲುಮೆಯೇ. ಊರಿನಲ್ಲಿ ಹೋಳಿ ಹಬ್ಬದ ಮೊದಲು ಹಾಡುವ ಕಾಮನ ಹಾಡುಗಳ ಗುಂಪಿಗೆ ಸೀನುವಿನ ಅಮ್ಮನೇ ನಾಯಕಿ. ಆ ಹಾಡುಗಳಿಗೆ ಹುಣ್ಣಿಮೆಯ ಬೆಳದಿಂಗಳು ಮತ್ತಷ್ಟು ಬೇಗ ಬರುತ್ತಿತ್ತು. ಆ ಹಾಡುಗಳ ಹರಿವಿಗೆ ನೆನೆದು ತೊಪ್ಪೆಯಾಗುತ್ತಿದ್ದವನು ಪುಟ್ಟ ಸೀನು. ಅಮ್ಮನ ಸೆರಗು ಹಿಡಿದುಕೊಂಡು ಮನೆಮನೆ ತಿರುಗುತ್ತ ಸೂಕ್ಷ್ಮವಾಗಿ ಗಮನಿಸುತ್ತಿದ್ದನು. ಸೀನುವಿನ ತಾಯಿ ಆ ಮನೆಯವರ ಹೆಸರು ಹಾಡಿನೊಂದಿಗೆ ಬೆರೆಸಿ ಹಾಡುವ ರೀತಿ ಎಲ್ಲರಿಗೂ ಅತ್ಯಾಶ್ಚರ್ಯ ಉಂಟು ಮಾಡುತ್ತಿತ್ತು. 

ಹೀಗೆ ಇಬ್ಬರು ಗಾಯಕರಿಗೆ ಹುಟ್ಟಿದ ಸೀನು ಹಾಡುಗಾರನಲ್ಲದೆ ಮತ್ತೇನಾಗುತ್ತಾನೆ. ‘ಅಬ್ಬ! ನಿನ್ನ ಮಗನಿಗೆ ಕೂಡ ನಿನ್ನದೇ ಕಂಠ. ಅವನು ಹಾಡಿದರೆ ಕೇರಿಯೆಲ್ಲ ಪ್ರತಿಧ್ವನಿಸುತ್ತದೆ ಗೊತ್ತಾ’ ಎನ್ನುವ ಅಮ್ಮ, ಅಕ್ಕ ತಂಗಿಯರ ಮಾತುಗಳು ಸೀನುವಿನ ತಾಯಿಗೆ ಆ ಹೊತ್ತಿನ ಹೊಟ್ಟೆ ತುಂಬಿಸಿತು. ‘ಈರನ್ನ ನಿನ್ನ ಮಗ ನಿನ್ನಂತೆಯೇ ದೊಡ್ಡ ಹಾಡುಗಾರನಾಗುತ್ತಾನೆ’ಎಂದರೆ ಅವನ ಅಪ್ಪನಿಗೆ ಕೈ ಒಳಗೊಳಗೆ ಮೀಸೆ ಮೇಲೆ ಮಾಡಿಕೊಳ್ಳುವಂತೆ ಆಗುತ್ತಿತ್ತು. ಹೊರಗೆ ಮಾತ್ರ ಸುಮ್ಮನೆ ನಕ್ಕು ನಗದಂತೆ ಕಿರುನಗೆ, ಆ ತಂದೆಯ ಮೇಲೆ ಇಂದ್ರ ಧನಸ್ಸಾಗಿ ಹೊಮ್ಮುತ್ತಿತ್ತು. ಅಂತಹ ತಂದೆಯ ಮೇಲೆ ಹಾಡು ಬರೆಯಬೇಕೆಂದು ವಾರದಿಂದ ಯೋಚಿಸುತ್ತಿದ್ದರೆ, ಸೀನುವಿಗೆ ಒಳಗೊಳಗೆ ಮರುಕಳಿಸುತ್ತಿರುವ ನೆನಪುಗಳಿವು.

ಅಪ್ಪನನ್ನು ಕುರಿತು ಯೋಚಿಸುತ್ತಿದ್ದ ಸೀನುವಿಗೆ ಹಾಡಿಗಿಂತಲೂ ಪಟಪಟನೆ ಕಣ್ಣೀರು ಸುರಿಯುತ್ತಿದೆ. ಹೇಗೆ ಬದುಕಿದವನು ಅಪ್ಪ?! ನಾಲ್ಕು ಮಕ್ಕಳಿಗೆ ಊಟ ಹಾಕಲು ಕೆಲಸವಿಲ್ಲದವನು, ತಾತ ತಂದೆಯರ ಆಸ್ತಿ ಇಲ್ಲದವನು ಎಷ್ಟು ಕೆಲಸ ಮಾಡಬೇಕು? ಎಷ್ಟು ಕಷ್ಟ-ಕಾರ್ಪಣ್ಯಗಳು. ಕಾಣಿಸದ ಕಣ್ಣೀರೆಷ್ಟು. ಅವೆಲ್ಲವನ್ನು ಹೊರಗೆತೋರಗೊಡದೆ ಮುಚ್ಚಿಟ್ಟುಕೊಂಡ ಮೌನ ಸಮುದ್ರ ಅಪ್ಪ ಎಂದುಕೊಂಡನು. ಅದಕ್ಕೇ ಇರಬೇಕು ಕರೆದ ಕೂಡಲೇ ಓ ಎನ್ನುವಂತೆ ಕಣ್ಣೀರು ಒತ್ತರಿಸಿ ಬರುತ್ತಿದೆ. ಆದರೂ ಲಾವಾರಸವನ್ನು ಹೃದಯದಲ್ಲಿ ಮುಚ್ಚಿಟ್ಟ ಅಗ್ನಿ ಪರ್ವತದಂತೆ, ಈ ದುಃಖವನ್ನು ಮುಚ್ಚುಟ್ಟುಕೊಂಡುತಂದೆಯ ಮೇಲೆ ಒಂದು ಹಾಡು ಬರೆಯಬೇಕೆಂದು ಒದ್ದಾಡುತ್ತಿದ್ದಾನೆ. 

ಸೀನುವಿಗೆ ಹಾಡು ಬರೆಯುವುದು ಗೊತ್ತಿದೆ... ಹಾಡು ಬರೆಯಬೇಕೆಂದರೆ ರಾಗಬೇಕು. ಅದು ಭಾವಕ್ಕೆತಕ್ಕಂತೆ ಇರಬೇಕು. ಕೇಳುತ್ತಿರುವವರನ್ನು ತಲ್ಲೀನರಾಗುವಂತಹ ಪದಗಳು ಹೊಂದಬೇಕು. ಹಿಂದೆ ಎಲ್ಲ ಹೀಗಿತ್ತು. ಈಗ ಸೀನು ಬರೆಯುತ್ತಿರುವುದು ಜೀವನದ ಹಾಡು. ತನ್ನನ್ನು ಹೆತ್ತತಂದೆ ಜೀವನವನ್ನು ಹಾಡು ಬರೆಯುತ್ತಿದ್ದಾನಲ್ಲವಾ..ರಾಗ, ಭಾವ, ಪದ, ರಸ ಎಲ್ಲವೂ ಅದಷ್ಟಕ್ಕವೇ ಹೊಂದುತ್ತವೆಂಬ ವಿಶ್ವಾಸ ಸೀನುವಿನ ಮುಖದಲ್ಲಿ ಎದ್ದು ಕಾಣುತ್ತಿದೆ. ಅಪ್ಪನ ಕುರಿತು ಏನು ಹೇಳುವುದು? ಎಂದು ಮನಸಿನಲ್ಲಿ ಅಂದುಕೊಳ್ಳುತ್ತಿರುವಾಗಲೇ, ಹೆರಿಗೆಯ ನೋವಿನ ನಂತರ ಮಗು ಹುಟ್ಟಿದಂತೆ ಸೀನುವಿಗೆ ಅಪ್ಪನ ಹಾಡಿಗೆ ಪಲ್ಲವಿ ಹುಟ್ಟಿತು.

“ಎಲ್ಲವೂ ತಾನಾದನು ಆಶಾದೀಪದಂತೆ ಅಪ್ಪ

ಹೆಸರಿಲ್ಲದ ಶಿಲ್ಪಿಯಂತೆ ಕಡೆವರೆಗೆ ಜೀವಿಸಿದಾತ”ಎನ್ನುತ್ತ ಪಲ್ಲವಿ ಬರೆದನು.

ಹೌದು ಯಾವ ತಂದೆಯಾದರೂ.. ಹೆಸರಿಲ್ಲದ ಶಿಲ್ಪಿಯೇ. ಮಕ್ಕಳನ್ನು ಹೀಗೆ ಮೌಲಿಕ ಶಿಲ್ಪಿಗಳಾಗಿ ಕೆತ್ತಿದ ಹೆಸರಿಲ್ಲದ ಶಿಲ್ಪಿ. ಹೊಟ್ಟೆ ತುಂಬ ಉಣ್ಣದೆ, ಕಣ್ತುಂಬ ನಿದ್ರಿಸದೆ, ಎಷ್ಟೋ ಉಪವಾಸಗಳಿದ್ದು, ಜೀವನ ಮಾಡಿದ ಎಷ್ಟೋ ಗಾಯಗಳನ್ನು ನಿಶ್ಯಬ್ದವಾಗಿ ಹೊರುತ್ತಾನಲ್ಲ, ಅಂತಹ ತಂದೆ ಯಾವ ಮಕ್ಕಳ ಜೀವನಕ್ಕಾದರೂ ನಿಜಕ್ಕೂ ದೀಪವೇ. ಮಕ್ಕಳ ಆಶಾ ದೀಪವೇ. ಇದು ಅಪ್ಪನ ಹಾಡಿಗೆ ಸೀನು ಬರೆದ ಪಲ್ಲವಿ. ಮಕ್ಕಳಿಗೆ ಅಪ್ಪನೇ ಎಲ್ಲವೂ ಆಗುತ್ತಾನೆಂಬ ಹೃದಯ ತುಂಬಿದ ಸೀನುವಿನ ಪ್ರೀತಿಗೆ, ಭಾವನೆಗೆ ಒಂದುರೂಪ ನೀಡಿದರೆ, ಖಚಿತವಾಗಿ ಅದು ಅಪ್ಪನ ಹಾಡೇ ಆಗುತ್ತದೆ.

ಇನ್ನು ಚರಣಗಳು ಬರೆಯಬೇಕೆಂದುಕೊಂಡನು. ಸ್ವಲ್ಪ ಹೊತ್ತು ನಿಧಾನಿಸಿದನು. ಒಮ್ಮಿಂದೊಮ್ಮೆಗೇ ಬರೆದರೆ ಹಾಡು ಜಾಳಾಗುವುದೆಂದುಕೊಂಡನೇನೋ. ಎಷ್ಟು ಧ್ಯಾನಿಸಿದರೆ ಹಾಡು ಅಷ್ಟು ಸಹಜವಾಗಿ ಜೀವತುಂಬಿ ಬರುತ್ತದೆಂದು ಸೀನುವಿಗೆ ಅನುಭವ ಕಲಿಸಿದೆ. ಅದಕ್ಕೇ ಜೀವನದುದ್ದಕ್ಕೂ ಸತತ ಹೋರಾಟ ನಡೆಸಿದ ತನ್ನ ತಂದೆಯ ಜೀವನವನ್ನು ಹೃದಯದ ತುಂಬಾ ತುಂಬಿಕೊಳ್ಳುತ್ತಿದ್ದಾನೆ. ಅಪ್ಪನಿಗೆ ಕಷ್ಟ ಆರಂಭವಾದದ್ದು ಯಾವಾಗ? ಎಲ್ಲಿಗೆ ಸೇರಿದವು? ಇವು ಸೀನುವಿಗೆ ಮೂಡುತ್ತಿರುವ ಪ್ರಶ್ನೆಗಳು. ಯಾವ ತಂದೆಗಾದರೂ ಮಕ್ಕಳು ಹುಟ್ಟಿದ ನಂತರ ಕಷ್ಟಗಳು ಶುರುವಾಗುತ್ತವಾ? ಇಲ್ಲ ಅದಕ್ಕಿಂತ ಮೊದಲು ಕೂಡ ಹೆಚ್ಚೇನೂ ಸುಖ ಪಟ್ಟವನಲ್ಲ ಸೀನುವಿನ ತಂದೆ. ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡ ಮಕ್ಕಳ ಪರಿಸ್ಥಿತಿ ಹೇಗಿರುತ್ತದೆಂದು ಎಷ್ಟೋ ಬಾರಿ ಸೀನುವಿಗೆ ಹೇಳಿದ್ದಾನೆ. ಪ್ರತಿದಿನ ಸೀನುವಿಗೆ ತನ್ನ ಜೀವನಕಥೆಯನ್ನೇ ಹೇಳಿದ್ದಾನೆ ಅಪ್ಪ. ಆ ನೋವುಗಳನ್ನೇ ಮಣಿ ಹೊಲಿದಂತೆ ಒಂದೊಂದು ಸಂದರ್ಭವನ್ನು ಒಂದೊಂದು ಚರಣವಾಗಿ ಹೆಣೆಯಲು ಸಿದ್ಧನಾದನು. ಮೊದಲಿಗೆ ತಾಯಿಯೊಂದಿಗಿನ ಅನುಬಂಧದಿಂದ ಆರಂಭಿಸಿದನು.

“ಬಾಣಂತಿಯಾಗಿ ಅಮ್ಮ ಮಂಚದ ಮೇಲಿದ್ದರೆ ಒಲೆಯ ಬಳಿ ಅಪ್ಪ ಹೊಗೆಯೂದುವ ಉಸಿರಾಗುತ್ತಾನೆ ಕೈ ಬೆರಳು ಸುಟ್ಟರೂ ಮಾಸದ ಮಂದಹಾಸ ಅವನದು” ನಾಲ್ಕು ಪಾದಗಳ ಚರಣದಲ್ಲಿ ಹೀಗೆ ಮೂರು ಪಾದಗಳು ಹೊಂದಿಕೆಯಾದವು. ಇನ್ನು ನಾಲ್ಕನೇ ಪಾದ ಇದಕ್ಕೂ ಮಿಗಿಲಾದುದಾಗಿರಬೇಕೆಂದುಕೊಂಡನು. ಅದು ತನ್ನ ತಂದೆಯ ಕಷ್ಟಗಳೆಲ್ಲವನ್ನೂ ಹಿಡಿದಿಡುವಂತಿರಬೇಕೆಂದುಕೊಂಡನು. ಅಪ್ಪನ ಜೀವನವಿಡೀ ಗಾಯಗಳೇ ಆಗಿರುವಾಗ, ಅಡುಗೆ ಮಾಡುವಾಗ ಕೈ ಬೆರಳು ಸುಡುವುದೊಂದು ಲೆಕ್ಕವೇ. ಅದಕ್ಕೇ ಇರಬೇಕು, ಅಮ್ಮಂದಿರು ಅಡುಗೆ ಮಾಡದ ದಿನ, ಅಪ್ಪಂದಿರ ಅವಸ್ಥೆಯನ್ನು ನೋಡಬೇಕು. ಅಡುಗೆ ಮಾಡುವಾಗ ಕೈ ಸುಟ್ಟರೂ ಸರಿ ನೋವನ್ನು ಬಲವಂತವಾಗಿ ನುಂಗಿ, ಸಣ್ಣ ಕಿರುನಗೆ ನಗುತ್ತಿದ್ದನಂತೆ ಸೀನುವಿನ ತಂದೆ. ಅಮ್ಮ ಒಂಭತ್ತು ತಿಂಗಳು ಹೊತ್ತು ಹೆರುತ್ತಾಳೆ. ಇದಕ್ಕಿಂತಲೂ ಯಾರೂ ಹೆಚ್ಚಲ್ಲ. ಆದರೆ, ಸೀನು ಮಾತ್ರ ಇಂತಹ ಮಾತನ್ನು ಹೇಳಬೇಕೆಂದುಕೊಳ್ಳುತ್ತ, ಏನು ಹೇಳಬೇಕೆಂದು ಮನಸ್ಸನ್ನು ಜರಡಿ ಹಿಡಿಯುತ್ತಿದ್ದಾನೆ. ಅದು ಹೇಳಿದಾಗಲೇ ಹಾಡು ಸಾರ್ಥಕವಾಗುತ್ತದೆ.
ಏಕಾಗ್ರತೆಗಾಗಿ ಮತ್ತೆ ಕಣ್ಣು ಮುಚ್ಚಿ ಆಲೋಚಿಸ ತೊಡಗಿದನು. ಅಪ್ಪ ಮಾಡಿದ ತ್ಯಾಗಗಳು ಒಂದೊಂದೂ ಕಣ್ಣ ಮುಂದೆ ಕದಲುತ್ತಿವೆ.

ಸೀನು ಚಿಕ್ಕಂದಿನಲ್ಲಿ ಆಟೋದಲ್ಲಿ ಶಾಲೆಗೆ ಹೋಗುತ್ತಿದ್ದನು. ಅದನ್ನು ನೋಡಿ ಗೆಳೆಯರು ಸೀನು ಶ್ರೀಮಂತರ ಮಗನೆಂದು ಕೊಳ್ಳುತ್ತಿದ್ದರು. ಹೋಗುವಾಗ ಅಪ್ಪ ಮುತ್ತುಕೊಟ್ಟು ಆಟೋ ಸ್ಟಾರ್ಟ್ ಮಾಡಿ ಹೊರಟರೆ ಅವರು ನಿಮ್ಮ ಆಟೋಡ್ರೈವರಾ ಎಂದು ಕೇಳುತ್ತಿದ್ದರು. ಅದು ಸೀನುವಿಗೆ ಬಹಳ ನೋವುಂಟು ಮಾಡುತ್ತಿತ್ತು. ಒಂದು ದಿನ  ಶಾಲೆಯಿಂದ ಬಂದಕೂಡಲೇ ಈ ವಿಯವನ್ನು ಅಪ್ಪನಿಗೆ ಹೇಳಿದ ಸೀನು.. ಆ ಮರುದಿನವೇ ಆಟೋ ಮಾರಿ ಬಂದ ತಂದೆಯ ಕುರಿತು ಯಾವ ಮಗನಾದರೂ ಏನು ಹೇಳಬಲ್ಲ. ಹೌದು... “ಹೆರಿಗೆ ನೋವೇ ಇಲ್ಲ ತಂದೆಗೆ, ಜೀವನವಿಡೀ ಭೂದೇವಿಯಂತೆ ಹೊರೆಯ ನೋವೇ ಕಡೆವರೆಗೆ ”ಹಾಗೇ ಹಾಡಿನ ನಾಲ್ಕನೇ ಸಾಲು ಬರೆದನು. ಈ ಸಾಲು ಬರೆದ ನಂತರ ತಾಯಿಯನ್ನು ಕಡಿಮೆ ಮಾಡುತ್ತಿರುವೆನಾ ಎಂಬ ಸಂಶಯಕ್ಕೆ ಬಿದ್ದನು. ಅದೇನಿಲ್ಲ. ತಂದೆಯ ಕಷ್ಟಕ್ಕೂ ಸ್ವಲ್ಪ ಗುರುತು ಮೂಡಿಸಬೇಕೆಂಬ ಪಕ್ಷಪಾತ ಎಂದು ತನ್ನ ಮನಸ್ಸಿಗೆ ತಾನೇ ಸಮಾಧಾನ ಹೇಳಿಕೊಂಡನು.


“ಹೆಣ್ಣು ಕೂಸು ಹುಟ್ಟಿದೊಡೆ ಅಪ್ಪ ತನ್ನಮ್ಮನೆಂದುಕೊಳ್ಳುವನು 
ಮಗನ ತುಂಟ ಕೆಲಸದಲ್ಲಿ ಹೆತ್ತಪ್ಪನನ್ನು ನೆನಸುವನು 
ಮುದ್ದು ಮಾತುಗಳಿಂದ ಅಪ್ಪ ಪ್ರೀತಿಯ ಮಳೆಗೈವನು 
ರೆಕ್ಕೆ ಬಂದು ಹಾರಿದಾಗ ದಾರಿ ದಿಕ್ಕುಗಳ ಹುಡುಕುವನು”

ಎನ್ನುತ್ತ ಚರಣ ಮುಗಿಸಿದ ಸೀನು. ಹೆಣ್ಣುಮಕ್ಕಳನ್ನು ಎಲ್ಲ ತಂದೆಯರೂ ಒಂದೇ ರೀತಿ ನೋಡಿಕೊಳ್ಳುವರಾ? ಈ ಸಂಶಯ ಸೀನುವಿಗೆ ಕೂಡ ಬಂದಿತು. ಆದರೆ, ತನ್ನ ತಂದೆಯನ್ನು ನಾಯಕನಾಗಿ ಚಿತ್ರಿಸ ಹೊರಟ ಸೀನುವಿಗೆ ಎಲ್ಲರೂ ತನ್ನ ತಂದೆಯಂತಹವರೇ ಕಾಣುತ್ತಿದ್ದಾರೆ ಹೊರತು, ನೀಚ, ಪಾಪಿ ತಂದೆಯರಲ್ಲ. ಎಲ್ಲೋ ಕೆಲವರು ಹಾಗಿದ್ದಾರೆಂದು ಇಡೀ ಅಪ್ಪಂದಿರ ಲೋಕವನ್ನು ತಾನು ಹೇಗೆ ನಿಂದಿಸಬಲ್ಲನು? ಅದಕ್ಕೇ ಒಳ್ಳೆಯ ಅಪ್ಪಂದಿರ ಸಾವಿರ ಕಣ್ಣುಗಳ ಹುಡುಕಾಟದ ಕುರಿತು ಹೃದಯ ತುಂಬಿ ಈ ಚರಣವನ್ನು ಬರೆದನು.

ಇನ್ನು ವಿದ್ಯಾಭ್ಯಾಸಕ್ಕಾಗಿ ಕರಗಿ ಹೋದ ಅಪ್ಪಂದಿರ ವ್ಯಥೆಯನ್ನು ಒಂದು ಚರಣವಾಗಿ ಬರೆಯಲು ಸಿದ್ಧನಾದನು. ಸೀನುವಿನ ತಂದೆ ಮಾತ್ರವಲ್ಲ, ಯಾವ ತಂದೆಯಾದರೂ ತನ್ನ ಮಕ್ಕಳ ಓದಿಗಾಗಿ ಎಷ್ಟು ತಲ್ಲಣಿಸುವರೋ ಅಲ್ಲವಾ !


“ತಾನುತಿದ್ದದಅಕ್ಷರತನ್ನ ಮಕ್ಕಳು ಕಲಿಯಬೇಕೆನ್ನುವನು
ಶಕ್ತಿಗೆ ಮೀರಿದ ಮೆಟ್ಟಿಲುಗಳನ್ನು ಒದ್ದಾಡುತ ಹತ್ತಿಸುವನು
ಅವರ ವಿದ್ಯೆಭವಿಷ್ಯತ್ತುಗಳೆ ಲೋಕವಾಗಿ ತನ್ನನೆಂದೋ ಮರೆಯುವನು

ತನ್ನ ಕಷ್ಟಗಳಲಿ ಎಳ್ಳಷ್ಟು ಕೂಡ ತನ್ನ ಕುಡಿಗಳಿಗೆ ತಟ್ಟಬಾರದೆಂದುಕೊಳುವ” ಈ ಚರಣದಲ್ಲಿ ಸೀನು ತಂದೆಯ ತ್ಯಾಗವನ್ನು ಹಿಡಿದಿಟ್ಟನು. ಹೌದು. ಪ್ರತಿ ತಂದೆ ತನ್ನ ಕಷ್ಟ ಮಕ್ಕಳು ಪಡಬಾರದೆಂದುಕೊಳ್ಳುತ್ತಾನೆ. ಆ ತ್ಯಾಗವನ್ನು ನೆನಪಿಸದಿದ್ದರೆ ಅಪ್ಪನ ಹಾಡಿಗೆ ಅರ್ಥವೆಲ್ಲಿದೆ ಎಂದುಕೊಂಡನು. ಬಹಳಷ್ಟು ಅಪ್ಪಂದಿರು ತಾವು ಓದದಿದ್ದರೂ, ತಮ್ಮ ಮಕ್ಕಳು ಮಾತ್ರ ದೊಡ್ಡ ಓದು ಓದಬೇಕೆಂದುಕೊಳ್ಳುತ್ತಾರೆ. ಓದಿಕೊಂಡರೆ ಮಕ್ಕಳು ಚೆನ್ನಾಗಿರುತ್ತಾರೆಂಬ ನಂಬಿಕೆ.ಇದು ಓದದ ಹಾಗೂ ಓದಿರುವ ಅಪ್ಪಂದಿರೆಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇದನ್ನೇ ಸೀನು ನೆನಪಿಸಿದ್ದಾನೆ.

ಹೀಗೆ ಮಾನವ ಜೀವನದಲ್ಲಿ ಅಪ್ಪ ಎಂಬ ಪಾತ್ರ ಮಾಡುವ ಕಾಯಕ, ತ್ಯಾಗಗಳ ಕುರಿತು ಚರಣಗಳು ಒಂದರ ಹಿಂದೆಒಂದು ಬಂದು ಸೇರಿ ಹಾಡು ಪೂರ್ತಿಯಾಯಿತು. ನಿಜಕ್ಕೆ ಇದು ಪರಿಪೂರ್ಣವಾಯಿತಾ? ಸೀನು ಇನ್ನು ಸಾಕೆಂದುಕೊಂಡನು? ಯಾವ ಭಾಷೆಯಲ್ಲಾದರೂ ಅಪ್ಪನ ಕುರಿತು ಬರೆಯಲು ಒಂದೇ ಒಂದು ಹಾಡು ಎಂದಿಗೂ ಸಾಲುವುದಿಲ್ಲ.ಆದರೂ ಎಲ್ಲೋ ಒಂದು ಕಡೆ ನಿಲ್ಲಿಸಬೇಕಲ್ಲವೇ. ಅದಕ್ಕೇ ನಿಲ್ಲಿಸಿದನು. ಹೀಗೆ ಅಪ್ಪನ ಹಾಡು ಬರೆದು, ಹೊಸದೊಂದು ರಾಗದಲ್ಲಿ ಹಾಡುತ್ತಾ..ಅಪ್ಪನನ್ನು ನೆನೆಸಿಕೊಳ್ಳುತ್ತಲೇ ಇದ್ದಾನೆ.

ಈ ಹಾಡನ್ನು ಮೊದಲಿಗೆ ಸ್ನೇಹಿತರಿಗೆ ಕೇಳಿಸಬೇಕೆಂದುಕೊಂಡನು. ಏಕೆಂದರೆ ಅವರು ಕೂಡ ಸೀನುವಿನಂತೆ ಕ್ರಿಯಾಶೀಲರು. ಅವರಲ್ಲಿ ಬರಹಗಾರ, ನಟ, ಪತ್ರಕರ್ತ ಎಲ್ಲರೂ ಇದ್ದರು.  ಹಾಡಿನ ಸಾಹಿತ್ಯದ ಮೌಲ್ಯ ಅರಿತವರು ಹಾಗೂ ಸೀನುವಿನಂತೆಯೇ ಗಾಯಕರು. ಒಂದು ಸಂಜೆ ಸೀನು ಬರೆದ ಅಪ್ಪನ ಹಾಡಿಗೆ ಹಾಸ್ಟೆಲ್‍ ರೂಮ್ ವೇದಿಕೆಯಾಯಿತು.

ಸೀನು ಹಾಡುತ್ತಿರುವಷ್ಟು ಹೊತ್ತು ಕಿವಿಗೊಟ್ಟು ಆಲಿಸುತ್ತಿದ್ದಾರೆ... ಹಾಡು ಮುಗಿದ ನಂತರ ಕ್ಷಣಕಾಲ ಒಂದು ರೀತಿಯ ಮೌನ ಆವರಿಸಿತು. ಆ ಮೌನಕ್ಕೆ ವಿರಾಮ ನೀಡಿ ಒಬ್ಬೊಬ್ಬರೂ ಚಪ್ಪಾಳೆಯ ಸುರಿಮಳೆ ಗೈಯ್ಯುತ್ತಿದ್ದಾರೆ. ನಿಜಕ್ಕೂ ಅಪ್ಪನನ್ನು ಅರಿತುಕೊಳ್ಳುವ ಹಾಡು ಕಣೋ, ಬಹಳ ಚೆನ್ನಾಗಿ ಬರೆದಿದ್ದೀಯ. ಅವರಲ್ಲಿ ಅಪ್ಪ ಇಲ್ಲದ ಸ್ನೇಹಿತ ಹೆಚ್ಚು ಗದ್ಗದಿತನಾದನು. ಸುರಿಯುತ್ತಿರುವ ಕಣ್ಣೀರು ಒರೆಸಿಕೊಳ್ಳುತ್ತ ‘ಅದ್ಭುತ’ಎಂದನು. ಹಾಗೆ ಮೊದಲಾದ ‘ಅಪ್ಪನ ಹಾಡು’ ವಾರದಲ್ಲೇ ಯೂನಿವರ್ಸಿಟಿ ಹಾಸ್ಟೆಲ್‍ನ ಎಲ್ಲ ಕೋಣೆಗಳಲ್ಲಿಯೂ ಮೊಳಗತೊಡಗಿತು. ಕೇಳಿದವರೆಲ್ಲರೂ ಹಾಡು ಬಹಳ ಚೆನ್ನಾಗಿದೆ. ಯಾರು ಬರೆದಿರೋದು. “ಓಹ್ ನೀನೇನಾ! ತುಂಬಾ ಚೆನ್ನಾಗಿದೆಯಣ್ಣ. ನಮ್ಮ ಅಪ್ಪನ ನೆನಪಾಯಿತು”ಎಂದು ಹಿರಿಯ, ಕಿರಿಯ ಸ್ನೇಹಿತರೆಲ್ಲರೂ ಅಭಿನಂದಿಸಿದರು. 

ಇನ್ನು ಈ ಹಾಡು ಯಾರಿಗಾಗಿ ಬರೆದೆನೋ ಅವರ ಹೃದಯಕ್ಕೆ ಸೇರಿಸಬೇಕೆಂದುಕೊಂಡನು. ಎಲ್ಲರ ನಾಲಿಗೆಯಲ್ಲೂ ಹಾಡು ಹರಿದಾಡುತ್ತಿದೆ. ಕೆಲವು ಹಾಡುಗಳೇ ಹಾಗೆ..ರಾಗ ಸರಳವಾಗಿರುವುದಕ್ಕೋ, ಮಧುರವಾಗಿ ಕೇಳಿಸುವುದಕ್ಕೋ ಏನೋ ಒಮ್ಮೆ ಕೇಳುತ್ತಿದ್ದಂತೆ ಮನಸ್ಸಿನಲ್ಲಿ ಅಚ್ಚಾಗಿ ಎಲ್ಲರನ್ನೂ ಕಾಡುತ್ತದೆ. ಅಪ್ಪನಿಗೆ ಕೇಳಿಸಿದಾಗಲೇ ಈ ಹಾಡಿಗೆ ಸಾರ್ಥಕತೆಯೆಂದುಕೊಂಡನು ಸೀನು. ಹಾಡುಗಳ ಮೇಲೆ ಹಿಡಿತವಿರುವ ಜಾನಪದ ಕಲೆಗಾರನಾದ ಅಪ್ಪನಿಗೆ ಇಷ್ಟವಾಗುತ್ತದೋ ಇಲ್ಲವೋ ಎಂದು ಆತಂಕ. ಅಪ್ಪನಿಗೆ ಇಷ್ಟವಾಗದಿದ್ದರೆ ಮತ್ತೆ ಬದಲಾಯಿಸೋಣ ಎಂದುಕೊಂಡನು.

ಆದರೆ ಈಗ ಅಮ್ಮ ಸುಮ್ಮನಿರುತ್ತಾಳಾ? ಹಿಂದೆ ಒಮ್ಮೆ ‘ಅಪ್ಪಂದಿರ ಕವಿತೆ’ ಸಂಕಲನ ಸ್ಪರ್ಧೆಗಾಗಿ ಒಂದು ಕವಿತೆ ಬರೆದು ಅದು ಪುಸ್ತಕದಲ್ಲಿ ಪ್ರಕಟಣೆಯಾದಾಗ..ಅಮ್ಮ, ಅಪ್ಪ, ಚಿಕ್ಕಪ್ಪ, ಚಿಕ್ಕಮ್ಮ, ಅಜ್ಜಿ, ತಾತ, ಅತ್ತೆ ಎಲ್ಲರನ್ನೂ ಕೂರಿಸಿ ಓದಿದಾಗ, ಅಪ್ಪನ ಮುಖ ಸಾವಿರ ವ್ಯಾಟ್ ಬಲ್ಬ್ನಂತೆ ಹೊಳೆದರೆ, ಅಮ್ಮನ ಮುಖದಲ್ಲಿ ಮಾತ್ರ ಕರೆಂಟು ಹೋದಂತಾಯಿತು.

“ಯಾಕಮ್ಮ ಹಾಗೆ ಮುಖ ಸಪ್ಪಗೆ ಮಾಡಿದೆ?” ಕೇಳಿದನು ಸೀನು..

“ನಿಮ್ಮಅಪ್ಪನ ಕುರಿತು ಚೆನ್ನಾಗಿಯೇ ಬರೆದಿದ್ದೀಯಾಗಲಿ, ನಾನೇನು ಮಾಡಲಿಲ್ಲವೇನೋ.. ನನ್ನ ಕುರಿತು ಒಂದು ಅಕ್ಷರವೂ ಇಲ್ಲ”ಎಂದು ನಿಷ್ಟುರವಾಗಿ ಹೇಳಿದಳು. ಅಂತಹ ಅಮ್ಮ ಇಂದು? ಸುಮ್ಮನಿರುತ್ತಾಳಾ ಅಥವಾ ಅಪ್ಪನ ಪಕ್ಷಪಾತಿ ಎಂದು ಹೇಳುತ್ತಾಳಾ? ಹೇಗಾದರಾಗಲಿ ಮೊದಲು ಅಮ್ಮನ ಮನ ಒಲಿಸಬೇಕು.

ಅಪ್ಪನಿಗೋಸ್ಕರ ಒಮ್ಮೆ ಕೇಳಮ್ಮ. ಅವನಿಗೆ ವಯಸ್ಸಾಗುತ್ತಿದೆ, ಆರೋಗ್ಯವೂ ಸರಿಯಿಲ್ಲ. ಅವನಿಗೆ ಸ್ವಲ್ಪವಾದರೂ ಸಂತೋಷಪಡಿಸುವ ಜವಾಬ್ದಾರಿ ನನಗಿರುತ್ತದಲ್ಲವಾ ಎಂದು ಹೇಳಬೇಕೆಂದುಕೊಂಡನು.ಇಷ್ಟು ಹೊತ್ತಿಗಾಗಲೇ ಒಂದು ಉದ್ಯೋಗ ಸಿಕ್ಕಿದ್ದರೆ, ಹೆತ್ತವರನ್ನು ಮತ್ತಷ್ಟು ಚೆನ್ನಾಗಿ ನೋಡಿಕೊಳ್ಳುವಂತಹವನೇ, ಏನು ಮಾಡುವುದು, ಇದು ಮೊದಲ ತಲೆಮಾರಿನ ಕಷ್ಟದ ಕಥೆಗಳು. ಅದಕ್ಕೇ ಹೀಗಾದರೂ ಅಪ್ಪನನ್ನು ಖುಷಿಪಡಿಸ ಬಯಸಿದನು. ಇಲ್ಲದಿದ್ದರೆ ಜೀವನವಿಡೀ ಅಪ್ಪನಿಗೆ ಏನೂ ಮಾಡಲಿಲ್ಲವೆಂಬ ಕೊರಗು ಶಾಶ್ವತವಾಗಿ ಉಳಿದುಬಿಡುತ್ತದೆಂಬ ಭಯ. ಅದಕ್ಕೇ ಮನಸ್ಸು ಸೀನುವನ್ನು ಒತ್ತಡ ಪಡಿಸುತ್ತಿದೆ.

ಅಪ್ಪನಿಗೆ ಹಾಡು ಕೇಳಿಸಲು ನಾಳೆಯೇ ಹೊರಡುತ್ತೇನೆ..ಅಪ್ಪ ಮತ್ತೊಮ್ಮೆ ಒಳಗೊಳಗೆ ಮೀಸೆ ಮೇಲೆ ಮಾಡುವುದನ್ನು ನೋಡಬೇಕು. ಇದೇ ನನ್ನ ಮುಂದಿರುವ ಏಕೈಕ ಗುರಿ. ಹಾಡು ಬರೆದ ಕಾಗದವನ್ನು ಭದ್ರವಾಗಿ ಪರ್ಸ್‍ನಲ್ಲಿಟ್ಟುಕೊಂಡು ಬೆಳಿಗ್ಗೆ ಊರಿಗೆ ಹೊರಡುತ್ತೇನೆ, ಅಪ್ಪ ಹಾಡು ಕೇಳಿ ಏನೆಂದನೆಂದು ನಿಮಗೆ ಹೇಳುತ್ತೇನೆ ಎಂದು ಸ್ನೇಹಿತರಿಗೆ ಹೇಳಿದನು. ಆದರೆ ಆ ರಾತ್ರಿಯೇ ಈ ಪ್ರತ್ಯೇಕ ಹಾಡಿಗೆ ಸಾರ್ಥಕತೆ ಮೂಡದ ಫೋನ್ ಬಂದಿತು.ಆಟೋ ಓಡಿಸಿ, ಬೇರೆ ಬೇರೆ ಕೆಲಸಗಳನ್ನು ಮಾಡಿ ಓದಿಸಿದ ತಂದೆ, ಏನೋ ಅರ್ಜೆಂಟ್ ಕೆಲಸವಿರುವಂತೆ ಅರ್ಧಕ್ಕೇ ಹೊರಟುಬಿಟ್ಟರೆ ಯಾವ ಮಗನು ಮಾತ್ರ ತಡೆದುಕೊಳ್ಳುತ್ತಾನೆ.

ಆ ಫೋನ್ ಬಂದಾಗಿನಿಂದ ಸೀನುವಿನ ಮನಸ್ಸು ವಿಲವಿಲನೆ ಒದ್ದಾಡುತ್ತಿದೆ. ನಾಳೆಯಿಂದ ಯಾರನ್ನು ಅಪ್ಪ ಎಂದು ಕರೆಯಲಿ, ಮೊಸರನ್ನದಲ್ಲಿ ಪ್ರೀತಿಯನ್ನು ಬೆರೆಸಿ ತಿನಿಸಿದ ಅಪ್ಪನಿಗೆ, ಮಗ ಒಂದು ತುತ್ತಾದರೂ ಇಡದಿರುವುದೇನಾ ಜೀವನವೆಂದರೆ ಎಂದುಕೊಂಡನು ಸೀನು.

ಅಪ್ಪ ಎತ್ತಾಡಿಸಿದ ಪ್ರೀತಿಯ ಕ್ಷಣಗಳು ನೆನಪಾಗುತ್ತಿವೆ.

ಹಾಸ್ಟೆಲ್‍ನಿಂದ ಮನೆಗೆ ಹೋದಾಗ‘ಏನೇ ದೊಡ್ಡವನು ಬಂದಿದ್ದಾನೆ, ಊಟ ಬಡಿಸು’ಎಂದು ಆತುರ ಮಾಡುವುದು. ಸಣ್ಣ ಸಣ್ಣ ಗೆಲುವು ಹೇಳಿದಾಗ ಖುಷಿಯಲ್ಲಿ ತೇಲಾಡುವುದು. ‘ಮೊದಲು ಅನ್ನತಿನ್ನಪ್ಪಾ ’ಎಂದು ಅವರ ಅಪ್ಪನನ್ನು ತನ್ನಲ್ಲಿ ಕಂಡ ಸಂದರ್ಭಗಳು. ಅಂತಹ ತಂದೆ ಇಲ್ಲವೆಂದು ನೆನೆಸಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಲೇ ಊರು ಸೇರಿದನು.

ನಿಸ್ತೇಜವಾಗಿ ಮಲಗಿದ್ದ ತಂದೆಯ ಎದೆ ಮೇಲೆ ತಲೆಯಿಟ್ಟು ಗೋಳಾಡುತ್ತಿದ್ದ ಸೀನುವನ್ನು, ನೆಂಟರು “ಹೆಣ್ಣು ಮಕ್ಕಳಂತೆ ಅಳುವುದೇಕೋ. ಹೋದವನು ತಿರುಗಿ ಬರುತ್ತಾನಾ” ಎಂದರು. ಸೀನು ಪರ್ಸ್‍ನಲ್ಲಿ ಹಾಡು ಮೌನವಾಗಿರೋದಿಸುತ್ತಿದೆ. ಆ ಹಾಡು ನೆನಪಿಗೆ ಬಂದರೆ ಸೀನುವಿಗೆ ದುಃಖ ಕಟ್ಟೆಯೊಡೆಯುತ್ತಿದೆ. ಏನು ಜೀವನ? ಕನಸುಗಳು ಕರಗಿ ಹೋಗುತ್ತಿವೆ. ನನ್ನನ್ನು ಎತ್ತರದ ಸ್ಥಾನದಲ್ಲಿ ನೋಡಬೇಕೆಂದುಕೊಂಡ ಅಪ್ಪನ ಬಯಕೆ ಈಡೇರಲಿಲ್ಲ. ಊಹಿಸದಿರುವುದು ನಡೆಯುವುದೇನಾ ಜೀವನ. ಒಳಗೇ ಅಗ್ನಿಪರ್ವತ ಸಿಡಿಯುತ್ತಿದೆ.

ಊರಿಡೀ ಅವರ ಮನೆ ಮುಂದಿದೆ.

“ಯಾರ ಜೀವನವಾದರೂ ಇಷ್ಟೆ. ಬದುಕಿದಷ್ಟು ದಿನ ಮಾತ್ರ ನಿನ್ನ ಹುಡುಕಾಟ. ಒಮ್ಮೆ ನಿನ್ನ ಪ್ರಯಾಣ ನಿಂತರೆ, ಇನ್ನು ಮಣ್ಣಿನಲ್ಲೇ ನಿನ್ನ ಚರಿತ್ರೆ” ಎಂದು ಮಾದಿಗ ತಮಟೆ.. ಮನುಷ್ಯನ ಜೀವನ ತತ್ವವನ್ನು ಬೋಧಿಸುತ್ತಿದೆ.

ಸೀನುವಿನ ತಂದೆಗೆ ಕೊನೆ ಸ್ನಾನ ಮಾಡಿಸಿದರು. ಈಗಲಾದರೂ ಅಪ್ಪನಿಗಾಗಿ ಬರೆದ ಹಾಡು ಹಾಡಿದ್ದರೆ ಚೆನ್ನಾಗಿತ್ತು ಎಂದುಕೊಂಡನು ಸೀನು. ಏಕೆಂದರೆ ಸೀನು ಚಿಕ್ಕವನಿದ್ದಾಗ, ಅಮ್ಮ ಕೆಲಸದಲ್ಲಿ ಸುಸ್ತಾಗಿದ್ದರೆ ಅಪ್ಪನೇ ಹಾಡು ಹೇಳುತ್ತ ಸ್ನಾನ ಮಾಡಿಸುತ್ತಿದ್ದನಂತೆ. ಅವನಿಗೆ ಈಗ ಆ ಹಾಡು ನೆನಪಾಗುತ್ತಿದೆ. ಈಗ ನಾನು ಅಪ್ಪನಿಗಾಗಿ ಹಾಡಲಾರೆನಾ ಎಂದು ಯೋಚಿಸಿದನು. ಈ ದುಃಖದಲ್ಲಿ ಸೀನುವಿಗೆ ಗಂಟಲು ಹೊರಡುತ್ತಿಲ್ಲ.

ಇದ್ದಕ್ಕಿದ್ದಂತೆ ತನ್ನ ಪರ್ಸ್‍ ತೆಗೆದು ಅದರಲ್ಲಿದ್ದ ಹಾಡಿನ ಕಾಗದವನ್ನು ಮನೆಯ ಅಟ್ಟಕ್ಕೆಸೆದನು. ಅಪ್ಪನೇ ಇಲ್ಲದಿರುವಾಗ ಈ ಹಾಡು ಮಾತ್ರ ಏಕೆ? ಎಂದುಕೊಂಡನೇನೋ. ಆ ಹಾಡು ತನ್ನ ಬಳಿಯಿದ್ದರೆ ತಡೆಯಲಾಗುತ್ತಿಲ್ಲ. ಏಕೋ? ಜೀವನದಲ್ಲಿಎಲ್ಲದಕ್ಕೂ ಉತ್ತರವಿರುವುದಿಲ್ಲ.

ಶವಪೆಟ್ಟಿಗೆಯಲ್ಲಿ ಸೀನುವಿನ ತಂದೆ ಚಿರನಿದ್ರೆಗೆ ಜಾರಿದ್ದಾನೆ. ಶವಪೆಟ್ಟಿಗೆಯ ಬಾಕ್ಸ್ ಮುಚ್ಚುತ್ತಿದ್ದಾರೆ. ಹಾಡಿನಕಾಗದ ಮನೆಯ ಅಟ್ಟದಲ್ಲಿದ್ದರೂ ಹಾಡು ಮನದಲ್ಲಿ ಮೂಡುತ್ತ ಆಲಾಪಿಸುತ್ತ ಸೀನುವಿನ ಕಿವಿಗೆ ಅಪ್ಪಳಿಸುತ್ತಿದೆ. ಆದರೆ ಅಲ್ಲಿರುವವರಾರಿಗೂ ಕೇಳಿಸುತ್ತಿಲ್ಲ.

ನಾಲ್ಕಾರು ಮಂದಿಗಾಗಿ ಹಾಡಿದ ಸೀನುವಿನ ತಂದೆಯ ನಿರ್ಜೀವ ದೇಹವನ್ನು, ನಾಲ್ಕು ಭುಜಗಳು ಹೊತ್ತವು. ಆ ಸಾವಿಗೆ ಬಂದ ಜನರನ್ನು ನೋಡಿ ಸೀನುವಿಗೆ ಆಶ್ಚರ್ಯವಾಯಿತು. ಅಪ್ಪ ಇಷ್ಟು ದಿನ ಹಾಡಿದ ಹಾಡುಗಳು ಎಷ್ಟು ಮನಸುಗಳನ್ನು ಹಿಡಿದಿಟ್ಟಿದೆ. ಈಗ ಆತನ ಆತ್ಮ ಶಾಂತಿಗಾಗಿ ಏನೇನೋ ಕ್ರೈಸ್ತ ಗೀತೆಗಳು ಹಾಡುತ್ತಿದ್ದಾರೆ. ಅತ್ತು ಅತ್ತು ಸೀನುವಿನ ಗಂಟಲು ಮೂಕವಾಯಿತು. ಹೇಗೆ ನಡೆದನೋ ಗೊತ್ತಿಲ್ಲ. ಯಾರು ನಡೆಸಿದರೋ ಗೊತ್ತಿಲ್ಲದಂತೆ ಸ್ಮಶಾನ ಸಮೀಪಿಸಿತು.

ಕೊನೆ ಬಾರಿ ನೋಡುತ್ತ..‘ಏನಪ್ಪ ಹೀಗೆ ಮಾಡಿದೆ. ಇನ್ನು ನಮಗ್ಯಾರು ದಿಕ್ಕು’ ಎಂದು ಮನಸ್ಸಿನಲ್ಲಿಯೇ ಅಳುತ್ತ ಕೇಳಿದನು. ಅಪ್ಪನ ಉಸಿರಿಲ್ಲ. ಸೀನುವಿನ ತಂದೆಯಂತೆಯೇ ಸೂರ್ಯ ಅಸ್ತಮಿಸುತ್ತಿದ್ದಾನೆ. ಊರುಗಳಿಂದ ಬಂದವರು..‘ನಾವು ದೂರ ಹೋಗಬೇಕು, ಬೇಗ ಮುಗಿಸಿ’ ಎಂದರು. ಸಮಾಧಿಯೊಳಗೆ ಅಪ್ಪನ ದೇಹವಿದ್ದ ಶವಪೆಟ್ಟಿಗೆಯನ್ನು ಇಳಿಸುತ್ತಿದ್ದಾರೆ. ವಾತಾವರಣವೆಲ್ಲ ಅಳುಮಯವಾಗಿದೆ. ಸೀನು ಅಳುತ್ತಲೇ ಇದ್ದಾನೆ. ಒಮ್ಮೆಗೇ ಸೀನು ಸ್ನೇಹಿತರಲ್ಲಿ ಯಾರಿಗೆ ಆ ಆಲೋಚನೆ ಬಂದಿತೋ, ಅಳು ನಿಲ್ಲಿಸುವಂತೆ ಎಲ್ಲರನ್ನೂ ಕೇಳಿಕೊಂಡು, ನಿಶ್ಯಬ್ದದಲ್ಲಿ ಸಾಮೂಹಿಕವಾಗಿ ಹಾಡಲಾರಂಭಿಸಿದರು. ಅದೇ ಹಾಡು, ಸೀನುವನ್ನು ಹಿಂಬಾಲಿಸುತ್ತಿದ್ದ ಹಾಡು.

ಯಾರಿಗಾಗಿ ಬರೆದಿರುವನೋ ಅದೇ ಹಾಡು. ಸೀನುವಿನ ಹೃದಯಾಂತರಾಳದಲ್ಲಿ ಮೂಡಿಗಂಟಲಲ್ಲಿ ಒದ್ದಾಡುತ್ತಿರುವ ಹಾಡು. ಸ್ನೇಹಿತರ ಕಂಠದಲ್ಲಿ ವೃಂದ ಗಾನವಾಗಿ, ಅಪ್ಪನಿಗೆ ಸಾರ್ಥಕ ಅರ್ಪಣೆಯಾಗಿ.. ಸ್ಮಶಾನವಿಡೀ ವ್ಯಾಪಿಸಿತು. ಆ ಹಾಡಿಗೆ ದುಃಖ ಕಟ್ಟೆಯೊಡೆದು ಸೀನು ಧ್ವನಿಗೂಡಿಸಿದನು. ಆ ಹಾಡು ಕೇಳುತ್ತಿದ್ದ ಸೀನುವಿನ ತಾಯಿಯ ಕಣ್ಣಲ್ಲಿ ಇಂಗಿ ಹೋದ ಕಣ್ಣೀರ ಚಿಲುಮೆ ಒಮ್ಮೆಗೇ ಊರಿ, ಪಟಪಟನೆ ಸುರಿದು ಸೀನುವಿನ ತಂದೆಯ ಶವಪೆಟ್ಟಿಗೆಯ ಮೇಲೆ ಬೀಳುತ್ತಿದೆ. ಹಾಡು ಅಮ್ಮನ ಕಣ್ಣೀರಾಗಿ ಸೀನು ಬಯಸಿದಂತೆ ಅಪ್ಪನನ್ನು ಸೇರಿತು. ಹಾಡಿನಲ್ಲಿ ಈಗ ಅಪ್ಪನ ಹೆಸರು ಸೇರಿತು.
ಈ ಹಾಡುಇರುವವರೆಗೂ ಅಪ್ಪ ಕೂಡ ಬದುಕಿರುತ್ತಾನೆ. ಸೀನುವಿನೊಟ್ಟಿಗೇ ಇರುತ್ತಾನೆ.