ನಾನು ಸತ್ತರೂ, ಮೋದಿ ಅವರ ಅಪ್ಪ-ಅಮ್ಮನ ಬಗ್ಗೆ ಮಾತಾಡುವುದಿಲ್ಲ: ರಾಹುಲ್‌ ಗಾಂಧಿ

ನಾನು ಸತ್ತರೂ, ಮೋದಿ ಅವರ ಅಪ್ಪ-ಅಮ್ಮನ ಬಗ್ಗೆ ಮಾತಾಡುವುದಿಲ್ಲ: ರಾಹುಲ್‌ ಗಾಂಧಿ

ಉಜ್ಜಯನ್‌: ಪ್ರಧಾನಿ ನರೇಂದ್ರ ಮೋದಿ, ತಮ್ಮ ಕುಟುಂಬದವರ ಮೇಲೆ ವೈಯಕ್ತಿಕ ಟೀಕೆ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್‌ ಗಾಂಧಿ “ಅವರು ದ್ವೇಷ ಸಾಧಿಸಿದರೆ ನಾನು ಅವರನ್ನು ಪ್ರೀತಿಯಿಂದ ಸೋಲಿಸುತ್ತೇನೆ” ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಉಜ್ಜಯನ್ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ರಾಹುಲ್ “ಮೋದಿ ಜೀ ದ್ವೇಷದಿಂದ ಮಾತನಾಡುತ್ತಾರೆ. ಅವರು  ನನ್ನ ತಂದೆ, ಅಜ್ಜಿ, ಅಜ್ಜನನ್ನು ಅವಮಾನಿಸಿದ್ದಾರೆ. ಆದರೆ ನಾನು ಅವರ ಕುಟುಂಬದ ವಿಚಾರವಾಗಿಯಾಗಲೀ ಅಥವಾ ಅವರ ಅಪ್ಪ-ಅಮ್ಮನ ವಿಚಾರವಾಗಿ ಎಂದಿಗೂ ಮಾತನಾಡುವುದಿಲ್ಲ. ಏಕೆಂದರೆ ನಾನು ಬಿಜೆಪಿ ಅಥವಾ ಆರ್‌ಎಸ್‌ಎಸ್‌ನಿಂದ ಬಂದವನಲ್ಲ, ನಾನು ಕಾಂಗ್ರೆಸ್‌ನವನು. ಅವರು ನನಗೆ ದ್ವೇಷವನ್ನೇ ನೀಡಿದರೂ ನಾನು ಮಾತ್ರ ಅವರಿಗೆ ಪ್ರೀತಿಯನ್ನೇ ನೀಡುತ್ತೇನೆ” ಎಂದು ರಾಹುಲ್‌ ಗಾಂಧಿ ಮೋದಿಗೆ ಟಾಂಗ್ ನೀಡಿದ್ದಾರೆ.

ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮಾತ್ರ ಬಾಕಿ ಇದ್ದರೂ ರಾಜಕೀಯ ಮುಖಂಡರುಗಳ ವಾದ, ವಿವಾದಗಳು ಮಾತ್ರ ದಿನಂಪ್ರತಿ ಹೆಚ್ಚುತ್ತಲೇ ಇದೆ. ಮೋದಿ, ದಿವಂಗತ ಪ್ರಧಾನಿ ರಾಜೀವ್‌ ಗಾಂಧಿಯವರಿಗೆ ʼಭ್ರಷ್ಟಾಚಾರಿ ನಂ 1ʼ ಎಂದು ಕರೆದರೆ ಅದಕ್ಕೆ ಪ್ರತಿಯಾಗಿ ರಾಹುಲ್‌ ಗಾಂಧಿ ʼಕರ್ಮ ನಿಮ್ಮನ್ನು ಹಿಂಬಾಲಿಸುತ್ತದೆʼ ಎಂದು ಹೇಳಿದ್ದರು. ರಾಹುಲ್‌ ಗಾಂಧಿಯವರ ತಂಗಿ ಪ್ರಿಯಾಂಕಾ ವಾದ್ರಾ ಪ್ರಧಾನಿಯನ್ನು ಮಹಾಭಾರತದ ದುರ್ಯೋಧನನಿಗೆ ಹೋಲಿಸಿ ಗೇಲಿ ಮಾಡಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೋದಿಗೆ ʼಸಂವಿಧಾನಿಕವಾಗಿ ಹೊಡೆಯಬೇಕುʼ ಎಂದು ಹೇಳಿಕೆಗಳನ್ನು ನೀಡಿದ್ದರು.