ಭೂ ಪರಿವರ್ತನೆ ತಂತ್ರಾಂಶದಲ್ಲೇ ದೋಷ : ಪ್ರಮುಖ ಅಂಶಗಳ ಪರಿಶೀಲನೆಗೆ ಇಲ್ಲ ಅವಕಾಶ

ಭೂ ಪರಿವರ್ತನೆ ತಂತ್ರಾಂಶದಲ್ಲೇ ದೋಷ : ಪ್ರಮುಖ ಅಂಶಗಳ ಪರಿಶೀಲನೆಗೆ ಇಲ್ಲ ಅವಕಾಶ

ಭೂಪರಿವರ್ತನೆ ಪ್ರಕರಣಗಳಲ್ಲಿ ಆಗುತ್ತಿದ್ದ ವಿಳಂಬ, ಅಧಿಕಾರಿಗಳ ಲಂಚಗುಳಿತನ ಮತ್ತು ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ರೂಪಿಸಿದ್ದ ತಂತ್ರಾಂಶಕ್ಕೆ ಭಾರೀ ಪ್ರಚಾರ ದೊರಕಿತ್ತು. ಆದರೀಗ ತಂತ್ರಾಂಶದಲ್ಲಿ ಹಲವು ದೋಷಗಳು ಕಂಡುಬಂದಿವೆ. ಪ್ರಮುಖ ಅಂಶಗಳನ್ನು ಪರಿಶೀಲಿಸಲು ತಂತ್ರಾಂಶದಲ್ಲಿ ಅವಕಾಶಗಳೇ ಇಲ್ಲದಂತಾಗಿರುವುದು ಹಲವು ಜಿಲ್ಲೆಗಳಲ್ಲಿ ಭೂಪರಿವರ್ತನೆ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಅಡಚಣೆ ಆಗಿವೆ. ಈ ಕುರಿತು ಜಿ.ಮಹಂತೇಶ್ ವಿಶೇಷ ವರದಿ.


ರಾಜ್ಯದ ನಗರ ಪ್ರದೇಶ ವ್ಯಾಪ್ತಿಯಲ್ಲಿನ ಭೂ ಪರಿವರ್ತನೆ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಕಂದಾಯ ಇಲಾಖೆ ಅಳವಡಿಸಿರುವ ತಂತ್ರಾಂಶದಲ್ಲಿ ಹಲವು ರೀತಿಯ ಲೋಪಗಳು ಕಂಡು ಬಂದಿವೆ. ಹಾಗೆಯೇ ಹಲವು ಅಂಶಗಳನ್ನು ಪರಿಶೀಲನೆ ನಡೆಸಲು ತಂತ್ರಾಂಶದಲ್ಲಿ ಅವಕಾಶಗಳೂ ಇಲ್ಲ. ತುಂಬಾ ಪ್ರಮುಖವಾಗಿ ಭೂ ಪರಿವರ್ತನೆಗೆ ಕೋರಿರುವ ಪ್ರದೇಶಗಳಲ್ಲಿ ಅಕ್ರಮವಾಗಿ  ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ಅದನ್ನು ಪರಿಶೀಲಿಸಲು ತಂತ್ರಾಂಶದಲ್ಲಿ ಅವಕಾಶಗಳೇ ಇಲ್ಲದಿರುವುದು ತಂತ್ರಾಂಶದ ಬಹು ದೊಡ್ಡ ಲೋಪವಾಗಿದೆ.


ತಂತ್ರಾಂಶದಲ್ಲಿನ ದೋಷ ಅಥವಾ ಲೋಪಗಳ ಕುರಿತು ಜಿಲ್ಲಾಧಿಕಾರಿಗಳು ಕಂದಾಯ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವಾಸ್ತವಾಂಶಗಳುಳ್ಳ ವರದಿ ಸಲ್ಲಿಸಿದ್ದಾರೆ. ವರದಿ ಸಲ್ಲಿಸಿ ಮೂರ್ನಾಲ್ಕು ತಿಂಗಳಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.


ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡುವ ಪ್ರಕರಣಗಳಲ್ಲಿ ಕಂದಾಯ ಇಲಾಖೆಯ ತಳಮಟ್ಟದಿಂದ ಉನ್ನತ ಹಂತದವರೆಗೂ ಲಂಚಗುಳಿತನ ಮಿತಿ ಮೀರಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ, ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ತಹಶೀಲ್ದಾರ್, ಜಿಲ್ಲಾಧಿಕಾರಿ, ಭೂ ದಾಖಲೆ ಮತ್ತು ಭೂ ಮಾಪನ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿತ್ತು. 


ಭೂಪರಿವರ್ತನೆ ಉದ್ದೇಶಕ್ಕೆ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳಿಗೆ ಅರ್ಜಿದಾರರು ನೀಡುತ್ತಿದ್ದ ಲಂಚದ ಮೊತ್ತವೇ ಕೋಟ್ಯಂತರ ರೂಪಾಯಿ ದಾಟುತ್ತಿತ್ತು. 


ಹೀಗಾಗಿ ಈ ಎಲ್ಲ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಾರಿಗೊಳಿಸಿದ್ದ ಆನ್ಲೈನ್ ಆಧರಿತ ಭೂ ಪರಿವರ್ತನೆ ತಂತ್ರಾಂಶದಲ್ಲೇ ಲೋಪಗಳು ಕಂಡು ಬಂದಿರುವುದು ಭೂ ಪರಿವರ್ತನೆ ಕಾರ್ಯಕ್ಕೆ ಹಲವು ಜಿಲ್ಲೆಗಳಲ್ಲಿ ಹಿನ್ನೆಡೆಯಾಗಿದೆ.  ವಿಶೇಷವೆಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ತಂತ್ರಾಂಶ ಬಳಸಿ ಭೂಪರಿವರ್ತನೆ ಕಾರ್ಯವನ್ನು ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. 


ಈ ಬಗ್ಗೆ ಹಲವು ಜಿಲ್ಲಾಧಿಕಾರಿಗಳು ಕಂದಾಯ ಸಚಿವರು ಮತ್ತು ಇಲಾಖೆಯ ಸರ್ಕಾರ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರಗಳು 'ಡೆಕ್ಕನ್'ನ್ಯೂಸ್' ಗೆ ಲಭ್ಯವಾಗಿದೆ.

ಮೈಸೂರು ಜಿಲ್ಲಾಧಿಕಾರಿಗಳು ಬರೆದಿರುವ ಪತ್ರ

ಮೈಸೂರು ಜಿಲ್ಲೆಯಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ಕೈಗೊಳ್ಳುವಲ್ಲಿ ಅನುಷ್ಠಾನಗೊಂಡಿರುವ ತಂತ್ರಾಂಶದಲ್ಲಿ ಹಲವು ಅಂಶಗಳನ್ನು ಪರಿಶೀಲನೆ ನಡೆಸಲು ಅವಕಾಶಗಳಿಲ್ಲದಿರುವ ಸಂಗತಿ ಜಿಲ್ಲಾಧಿಕಾರಿ ಬರೆದಿರುವ ಪತ್ರದಿಂದ ಗೊತ್ತಾಗಿದೆ.


ಭೂಪರಿವರ್ತನೆ ಸಂಬಂಧ ಸಲ್ಲಿಕೆಯಾಗುವ ಪ್ರಮಾಣಪತ್ರವನ್ನು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಉದ್ದೇಶಿತ ಜಮೀನಿಗೆ ರಸ್ತೆ ಸಂಪರ್ಕ ಇದೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಪರಿಶೀಲಿಸಲು ತಂತ್ರಾಂಶದಲ್ಲಿ ಅವಕಾಶಗಳಿಲ್ಲ. ಅದೇ ರೀತಿ ಭೂಪರಿವರ್ತನೆ ಕೋರಿರುವ ಜಮೀನು ಯಾವುದೇ ಕೆರೆ ಕಟ್ಟೆ ನಾಲೆಗಳಿಗೆ ಹೊಂದಿಕೊಂಡಿರುವ ಬಗ್ಗೆ ಪ್ರಮಾಣೀಕರಿಸಬೇಕು. ಅಲ್ಲದೆ, ಇವುಗಳು ಹೊಂದಿಕೊಂಡಿದ್ದಲ್ಲಿ ಭೂಪರಿವರ್ತನೆ ಆದ ನಂತರ ಕಟ್ಟಡ ನಿರ್ಮಾಣ ಸಮಯದಲ್ಲಿ ಕಾಪು ವಲಯ(ಬಫರ್ ಝೋನ್) ಹೊರತುಪಡಿಸುವ ಕುರಿತು ಸಂಬಂಧಪಟ್ಟ ಇಲಾಖೆಗಳ ಮಾರ್ಗಸೂಚಿಗಳಿಗೆ ಬದ್ಧರಿರುವ ಬಗ್ಗೆ ಪ್ರಮಾಣಿಕರೀಸಬೇಕು. ಆದರೆ ಇದನ್ನು ಪರಿಶೀಲಿಸಲು ತಂತ್ರಾಂಶದಲ್ಲಿ ಅವಕಾಶಗಳಿಲ್ಲ.


ಈ ಪದ್ಧತಿ ಜಾರಿಗೊಂಡ ನಂತರ ಮೈಸೂರು ಜಿಲ್ಲೆಯಲ್ಲಿ ಈವರೆವಿಗೂ 459 ಅರ್ಜಿಗಳು ಆನ್ ಲೈನ್ ನಲ್ಲಿ ದಾಖಲಾಗಿವೆ. ಇದರಲ್ಲಿ 297 ಅರ್ಜಿಗಳಲ್ಲಿನ ಪ್ರಮಾಣಪತ್ರಗಳ ನೋಟರಿ ಆಗಿದೆ. 19 ಪ್ರಕರಣಗಳಲ್ಲಿ ಸರಿಯಾದ ವಿಳಾಸ ಹಾಗೂ ಸಾಕ್ಷಿದಾರರ ಸಹಿ ಮಾಡಿಸದೇ ಸಲ್ಲಿಕೆಯಾಗಿದ್ದರಿಂದ ಒಟ್ಟು 55 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಜಿಲ್ಲಾಧಿಕಾರಿ ಬರೆದಿರುವ ಪತ್ರದಿಂದ ಗೊತ್ತಾಗಿದೆ.


ನಗರ ಪ್ರದೇಶ ವ್ಯಾಪ್ತಿಯಲ್ಲಿ ಜಮೀನನ್ನು ಕೃಷಿಯಿಂದ ಬೇರೆ ಉದ್ದೇಶಕ್ಕೆ ಬಳಸಲು ಆನ್ ಲೈನ್ ಮೂಲಕ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ 10 ದಿನಗಳಲ್ಲಿ ಅವರ ಮನವಿ ವಿಲೇವಾರಿಗೊಳ್ಳಲಿದೆ. ಹಾಗೆಯೇ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲೇ ಸ್ಥಳೀಯ ನಗರ ಯೋಜನಾ ಇಲಾಖೆಗೂ ರವಾನೆ ಆಗಲಿದೆ. 


ನಿಗಧಿತ ಅವಧಿಯಲ್ಲಿ ಜಿಲ್ಲಾಧಿಕಾರಿಗಳು ಅರ್ಜಿ ಪರಿಶೀಲಿಸಿ ಸಮರ್ಪಕವಾಗಿದ್ದರೆ, ಸರ್ಕಾರಕ್ಕೆ ನಿಗದಿಪಡಿಸಿದ ಹಣ ಪಾವತಿಸಿದರೆ, ಭೂ ಪರಿವರ್ತನೆಗೊಂಡು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿಯೊಂದಿಗೆ ಪರಿವರ್ತನಾ ಪತ್ರ ಅರ್ಜಿದಾರರ ಮನೆ ಬಾಗಿಲಿಗೆ ಬರುವ ಪದ್ಧತಿಯನ್ನು ಜಾರಿಗೊಳಿಸಿತ್ತು. 


ಈ ಮೊದಲು ಅರ್ಜಿದಾರರು 10-15 ನಮೂನೆಯ ಅರ್ಜಿಗಳನ್ನು ಸಲ್ಲಿಸಬೇಕಿತ್ತು. ಇದೀಗ ಸಂಬಂಧಪಟ್ಟ ಜಮೀನಿನ ಸರ್ವೆ ನಂಬರ್ ಹಾಗೂ ಅಗತ್ಯ ವಿವರಗಳನ್ನು ಒಳಗೊಂಡ ಪ್ರಮಾಣಪತ್ರದ ಮನವಿ ಸಲ್ಲಿಸಿದರೆ ಸಾಕು. ಕಂದಾಯ ಭೂಮಿ ಸಾಗುವಳಿ ಮಾಡುತ್ತಿರುವ ಹಿಡುವಳಿದಾರರು ಹಕ್ಕುಪತ್ರ ಪಡೆದುಕೊಳ್ಳಲು ಸರ್ಕಾರ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿತ್ತು.


ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿ ಆಗಿ ಪರಿವರ್ತಿಸಲು 15ರಿಂದ 20 ಬಗೆಯ ನಾನಾ ದಾಖಲೆಗಳನ್ನು ಸಾರ್ವಜನಿಕರು ಕಂದಾಯ ಇಲಾಖೆಗೆ ಸಲ್ಲಿಸಬೇಕಿತ್ತು. ಇದರಿಂದ ಜನರು ತಿಂಗಳುಗಟ್ಟಲೆ ವಿವಿಧ ಇಲಾಖೆಗಳಿಗೆ ಅಲೆಯಬೇಕಾದ ಸ್ಥಿತಿ ಇತ್ತು. ಆದರೆ ಹೊಸ ನಿಯಮದ ಅನುಸಾರ ಸಂಬಂಧಪಟ್ಟ ಜಮೀನಿನ ಪಹಣಿ, 200 ರೂ. ಛಾಪಾ ಕಾಗದದ ಮೇಲೆ ಪ್ರಮಾಣಪತ್ರ, ಪರಿವರ್ತನೆ ದೃಢೀಕರಣ ಪತ್ರ ಹಾಗೂ ಭೂಮಿಗೆ ಒಬ್ಬರಿಗಿಂತ ಹೆಚ್ಚು ಸಂಖ್ಯೆಯ ಮಾಲೀಕರಿದ್ದರೆ ಅಂಥವರು ಮಾತ್ರ ನಮೂನೆ 11ಇ ಅರ್ಜಿ ಜತೆಗೆ ನಿಗದಿತ ಶುಲ್ಕ ಪಾವತಿಸಿ ಆನ್‌ಲೈನ್ ಮೂಲಕ ಅಪ್ಲೋಡ್ ಮಾಡಿದರೆ 60 ದಿನಗಳಲ್ಲಿ ಭೂ ಪರಿವರ್ತನೆ ಆಗುತ್ತದೆ. ಈ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳೇ ಮಾಡುತ್ತಾರೆ,