ಪರಿಸರ ದಿನ:ಗಿಡಮರ ಬೆಳೆಸೋಣ-ಪ್ರಕೃತಿ ರಕ್ಷಿಸೋಣ

ಪರಿಸರ ದಿನ:ಗಿಡಮರ ಬೆಳೆಸೋಣ-ಪ್ರಕೃತಿ ರಕ್ಷಿಸೋಣ

ಜೂನ್ ಎಂದರೆ ಅದರಲ್ಲೊಂದು ವಿಶೇಷತೆ ಇದೆ. ಜೂನ್ ಎಂದಾಗ ನೆನಪಾಗುವುದು ಬೇಸಗೆ ರಜೆ ಮುಗಿಸಿ ಪುನಃ ಶಾಲೆಯತ್ತ ಮುಖ ಮಾಡಿರುವ ಶಾಲಾ ಮಕ್ಕಳು.. ಜೂನ್ ಎಂದರೆ ಮಳೆಗಾಲದ ಆರಂಭ.. ಬೇಸಗೆಯ ಬಿರು ಬಿಸಿಲಿಗೆ ಕಾದ ಕೆಂಡದಂತಾಗಿರುವ ಭೂಮಿಗೆ ವರ್ಷಧಾರೆಯ ಅಲಿಂಗನ, ಕಾದ ಭೂಮಿಗೆ ಮೊದಲ ಮಳೆ ಹನಿ ಬೀಳುತ್ತಿದ್ದಂತೆ ಘಮ್ಮೆನ್ನುವ ಮಣ್ಣಿನ ಪರಿಮಳ, ಮಳೆ ಹನಿಯ ಸಿಂಚನಕ್ಕೆ ಕಾಯುತ್ತಿದ್ದ ಗಿಡ ಮರಗಳು ಸಂತಸದಿಂದ ಬೀಸುವ ತಂಪಾದ ಗಾಳಿ .

ಇನ್ನು ಕರಾವಳಿಯಲ್ಲಿ ಬಿಟ್ಟು ಬಿಡದೇ ಒಂದೇ ಸಮನೆ ಧೋ ಎಂದು ಸುರಿಯುವ ಸೋನೆಯ ಅಬ್ಬರ, ಬಿಸಿಲಿಗೆ ಒಣಗಿದ ಜೀವರಾಶಿಗಳಿಗೆ ತರುಲತೆಗಳಿಗೆ ಸುರಿವ ಮಳೆ ಜೀವ ಸೆಲೆಯನ್ನು‌ ಉಕ್ಕಿಸಿದರೆ, ರೈತರ ಕೃಷಿಕರ ಮೊಗದಲ್ಲಿ ಸಮಾಧಾನದ ಸಂತೋಷ. ಜೂನ್ ಎಂದರೆ ಪ್ರಕೃತಿ ಮಾತೆ ಹಸಿರು ಸೀರೆಯನ್ನುಟ್ಟು ಸಂಭ್ರಮಿಸುವ ಸಮಯ. ಪರಿಸರವೆಲ್ಲವೂ ಹಸಿರನ್ನು ಹೊದ್ದು, ಮಲಗಿದಂತೆ ಗೋಚರಿಸಿದರೆ ಅದನ್ನು ನೋಡುವುದೇ ಒಂದು ಚೆಂದ. ಮಳೆ ಬರುವ ಕಾಲಕ್ಕೆ ಒಳಗ್ಯಾಕೆ ಕೂತೆವು ಇಳೆಯೊಡನೆ ಜಳಕ ಮಾಡೋಣ ಮೋಡಗಳ ಆಟ ಆಡೋಣ ಎಂಬ ಬೇಂದ್ರೆಯವರ ಹಾಡಿನಂತೆಸುರಿಯುವ ಮಳೆಗೆ ಅರಳಿದ ಕೊಡೆಯೊಂದಿಗೆ ಕಾಲಿನಿಂದ ಮಳೆ ನೀರನ್ನು ಚಿಮ್ಮುತ್ತಾ, ಸುರಿಯುವ ಮಳೆಯಲ್ಲಿ ಒದ್ದೆಯಾಗುತ್ತಾ ಸಾಗುವುದೇ ಒಂದು ಅದ್ಭುತ ಅನುಭವ.

ಮಕ್ಕಳಿಗೆ ನೀರಲ್ಲಿ ಕಾಗದದ ದೋಣಿ ಮಾಡಿ ತೇಲಿ ಬಿಡುವ ಸಂಭ್ರಮವಾದರೆ, ಗೃಹಿಣಿಯರಿಗೆ ಹೂವಿನ, ಹಣ್ಣಿನ, ಅಲಂಕಾರಿಕ ಗಿಡಗಳನ್ನು ನೆಡುವ ಉತ್ಸಾಹ. ಜೂನ್ ಎಂದರೆ ಪರಿಸರ‌ ದಿನ, ಎಲ್ಲೆಲ್ಲೂ ವನಮಹೋತ್ಸವದ ಆಚರಣೆ. ಜೂನ್ 5 ಬಂತೆಂದರೆ ಎಲ್ಲರ ಬಾಯಲ್ಲೂ ಪರಿಸರ ಸಂರಕ್ಷಣೆಯ ಮಾತು, ಗಿಡ ನೆಡುವ ಸಡಗರ, ಪರಿಸರ ಉಳಿಸುವ ಪ್ರತಿಜ್ಞೆ. ಜೂನ್ ತಿಂಗಳು ಮುಗಿಯುತ್ತಿದ್ದಂತೆ ಆಡಿದ ಮಾತು, ಪರಿಸರದ ಬಗೆಗಿನ ಕಾಳಜಿ ಅಲ್ಲೇ ಮರೆತರೆ ಮತ್ತೆ ಅದೆಲ್ಲಾ ನೆನಪಾಗುವುದು ಇನ್ನೊಂದು ವರ್ಷದ ಜೂನ್ ಬಂದಾಗಲೇ.

ನಮಗೆ ಎಲ್ಲವನ್ನು ಕೇಳದೆ ಕೊಟ್ಟ ಪ್ರಕೃತಿಯನ್ನು ನಾವು ಸ್ವಾರ್ಥದಿಂದ ನಾಶ ಮಾಡುತ್ತಿದ್ದೇವೆ. ಕಾಡನ್ನು ಕಡಿದು ಕಾಂಕ್ರೀಟ್ ಕಟ್ಟಡ ಕಟ್ಟಿಸಿ ಪ್ರಕೃತಿಯ ಸಂತುಲನವನ್ನು ತಪ್ಪಿಸುತ್ತಿದ್ದೇವೆ. ಇದರಿಂದಾಗಿ ಮಳೆ ಕಡಿಮೆಯಾಗಿದೆ. ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ನಿರಂತರವಾಗಿ ನಡೆಯುತ್ತಿರುವ ಪರಿಸರ ನಾಶದಿಂದ ಅಂತರ್ಜಲ ಕುಸಿದಿದೆ. ಪ್ರತಿದಿನ ಉಸಿರಾಡುವ ಗಾಳಿ ವಿಷಕಾರಿಯಾಗಿದೆ. ಬಿರು ಬಿಸಿಲು, ಆಕಾಲಿಕ ಮಳೆ, ಆರೋಗ್ಯದ ಬಗ್ಗೆ ಭೀತಿ ಹುಟ್ಟಿಸುವ ಕಂಡು ಕೇಳರಿಯದ ರೋಗರುಜಿನಗಳು ನಮ್ಮ ಕಣ್ಣ ಮುಂದಿದೆ.

ಹೆಚ್ಚೇನೂ ಬೇಡ, ಸುಮ್ಮನೆ ಹೀಗೆ ಒಮ್ಮೆ ಕಳೆದ ವರ್ಷದತ್ತ ಕಣ್ಣಾಡಿಸಿ. ಬೇಸಗೆಯ ಬಿರು ಬಿಸಿಲು ಯಾವ ರೀತಿ ನಮ್ಮನ್ನು ಕಾಡಿತೆಂದರೆ ದೇವಾಲಯದಲ್ಲಿ ದೇವರಿಗೆ ಅಭಿಷೇಕಕ್ಕೆ ನೀರಿಲ್ಲದ ಪರಿಸ್ಥಿತಿ. ಆಮೇಲೆ ಸುರಿದ ಮಳೆ ಪ್ರವಾಹೋಪಾದಿಯಲ್ಲಿ ಬಂದು ಊರು ಕೇರಿಗಳನ್ನು ಮುಳುಗಿಸಿತು. ಅದೆಷ್ಟೋ ಜನ ಮನೆ ಮಠ ಕಳೆದುಕೊಂಡು ನಿರ್ಗತಿಕರಾದರು. ಮಳೆಯ ಹನಿಯ ಸುಂದರ ನೆನಪುಗಳನ್ನು ಮಾತ್ರ ಕಂಡಿದ್ದ ನಮಗೆ ಮಳೆ ಹನಿಯಲ್ಲಿ ಅಡಗಿದ್ದ ಭೀಕರತೆಯ ಅನುಭವ ಮಾಡಿಸಿತು. ಈ ವರ್ಷ ಕೊರೊನಾ ಎಂಬ ಭೀಕರ ಸಾಂಕ್ರಾಮಿಕ ರೋಗ ವಿಶ್ವವನ್ನೇ ಹೈರಾಣಾಗಿಸಿದೆ. ದೂರದ ಯಾವುದೋ ದೇಶದಲ್ಲಿ ಕೇಳುತ್ತಿದ್ದ ಆತಂಕಕಾರಿ ವರ್ತಮಾನಗಳು ಇಂದು ನಮ್ಮ ಕಣ್ಣ ಮುಂದೆಯೇ ನಡೆಯುವಂತಾಗಿದೆ.ಮನೆಯಿಂದ ಹೊರ ಬರದಂತ ಸ್ಥಿತಿ ನಿರ್ಮಾಣವಾಗಿದೆ.

ಈ ಸಮಯದಲ್ಲಿ ನಮಗೆ ನಾವೇ ಕೇಳಬೇಕಾದ ಪ್ರಶ್ನೆ ಇದಕ್ಕೆಲ್ಲ ಕಾರಣ ಯಾರು? ಇದಕ್ಕಾಗಿ ಯಾರನ್ನೋ ದೂರುವ ಬದಲು ನಾವು ನಡೆದು ಬಂದ ದಾರಿಯ ಕಡೆ ಒಮ್ಮೆ ಕಣ್ಣು ತಿರುಗಿಸಬೇಕು. ಪರಿಸರವೆಂದರೆ ಬರೀ ನಾವು ‌ಮಾತ್ರ ಅಲ್ಲ. ಕಾಡು, ಪ್ರಾಣಿ, ಹಕ್ಕಿ, ಗಾಳಿ, ಗಿಡ, ಮರ, ನೀರು, ಕಲ್ಲು , ಬೆಳಕು‌ ಹೀಗೆ ಎಲ್ಲವನ್ನೂ ಒಳಗೊಂಡಿದೆ. ಪರಿಸರ ನಾಶ ಮಾಡುವ ಹಕ್ಕು ನಮಗಿಲ್ಲ, ನಮ್ಮಂತೆ ಗಿಡ ಮರ ಪಕ್ಷಿ‌ ಪ್ರಾಣಿಗಳಿಗೆ ಇಲ್ಲಿ ಬದುಕುವ ಹಕ್ಕಿದೆ.
ಪ್ರಕೃತಿ ಮಾತೆ ಮುನಿಸಿಕೊಂಡರೆ ಅದು ವಿನಾಶದ ಸೂಚನೆ. ಈಗಾಗಲೇ ಆಕೆ ತನ್ನ ಕೋಪವನ್ನು

ತೋರ್ಪಡಿಸಿದ್ದಾಳೆ. ಆಕೆಯ ಕೋಪ ಇನ್ನಷ್ಟು ವಿಕೋಪಕ್ಕೆ ತಿರುಗುವ ಮೊದಲು ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಪರಿಸರವನ್ನು ಉಳಿಸಬೇಕಾಗಿದೆ. ಗಿಡಮರ ಬೆಳೆಸೋಣ, ಪ್ರಕೃತಿ ರಕ್ಷಿಸೋಣ, ಮನುಕುಲ ಉಳಿಸೋಣ