ನೆನಪಿನಂಗಳದಲ್ಲಿ: ಶಿಕ್ಷಣತಜ್ಞ,ವಿಚಾರವಾದಿ ಎಚ್ .ನರಸಿಂಹಯ್ಯ ನವರ ಜನ್ಮದಿನ

ನೆನಪಿನಂಗಳದಲ್ಲಿ: ಶಿಕ್ಷಣತಜ್ಞ,ವಿಚಾರವಾದಿ ಎಚ್ .ನರಸಿಂಹಯ್ಯ ನವರ ಜನ್ಮದಿನ

ಜೂನ್ 6.2020 ಕ್ಕೆ ಎಚ್ ಎನ್ ಜೀವಿಸಿದ್ದರೆ 100 ವಸಂತಗಳು ತುಂಬುತ್ತಿದ್ದವು . ಆದರೆ ಅವರು ತಮ್ಮ 85ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ತೀರಿಕೊಂಡರು. ಆದರೂ ಇಂದಿನ ರೋಗಗ್ರಸ್ತ. ಸಮಾಜಸೂಕ್ತ ಮಾರ್ಗದರ್ಶನವಿಲ್ಲದೆ ದಾರಿ ತಪ್ಪುತ್ತಿರುವ  ಈ ಸಮಯದಲ್ಲಿ ನೈತಿಕ, ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಸಾಮಾಜಿಕ ಉನ್ನತ ಮೌಲ್ಯಗಳಿಗೆ ಬದಲಾಗಿ ಧನದಾಹ ,ಅಧಿಕಾರದಾಹ ಸ್ವಾರ್ಥಚಿಂತನೆಗಳು ಎಲ್ಲೇ ಮೀರುತ್ತಿವೆ. ದ್ವೇಷ, ಹಿಂಸೆ ಬೀಜ ಬಿತ್ತಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಚ್. ಎನ್ ರವರಂತಹ ಮಹಾನ್ ವ್ಯಕ್ತಿಗಳ ತ್ಯಾಗ ಪ್ರಾಮಾಣಿಕ, ನಿಸ್ವಾರ್ಥತೆ ಮುಂತಾದ ಅವರ ಆಶಯಗಳು , ಕನಸುಗಳು ಇಂದಿಗೂ ಜೀವಂತವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ.

ಸುಪ್ರಸಿದ್ಧ ಶಿಕ್ಷಣ ತಜ್ಞ, ವಿಚಾರವಾದಿ, ಸ್ವಾತಂತ್ರ್ಯಹೋರಾಟಗಾರ ಮತ್ತು ಅಪ್ಪಟ ಗಾಂಧೀವಾದಿ. ಡಾ.ಎಚ್.ಎನ್. ಎಂದೇ ಚಿರಪರಿಚಿತರು. ಕೋಲಾರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ 1920 ಜೂನ್ 6 ರಂದು ಜನಿಸಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ.

ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ ಪ್ರೌಢಶಾಲಾ ಶಿಕ್ಷಣಕ್ಕೆಂದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಸೇರಿದರು (1935). 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರ ಪರಿಣಾಮವಾಗಿ ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡ ಜೈಲಿನಲ್ಲಿ ಒಟ್ಟು ಸುಮಾರು 9 ತಿಂಗಳ ಕಾರಾಗೃಹವಾಸ ಅನುಭವಿಸಿದರು. ಇದರಿಂದಾಗಿ ಎರಡು ವರ್ಷಗಳ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಭೌತಶಾಸ್ತ್ರದ ಬಿ.ಎಸ್ಸಿ ಆನರ್ಸ್ ಮತ್ತು ಎಂ.ಎಸ್ಸಿ. ಪದವಿಗಳನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಪಡೆದರು. 1946 ರಲ್ಲಿ ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಾಪಕರಾಗಿ ಸೇರಿ, ಪ್ರಾಧ್ಯಾಪಕರಾಗಿ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅನಂತರ ಅದೇ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ಅಮೆರಿಕದ ಓಹಿಯೊ ಸ್ವೇಟ್ ವಿಶ್ವವಿದ್ಯಾಲಯದಲ್ಲಿ ನ್ಯೂಕ್ಲಿಯರ್ ಫಿಸಿಕ್ಸ್‍ನಲ್ಲಿ ಡಾಕ್ಟರೇಟ್ ಪದವಿ ಗಳಿಸಿದ (1957-60) ಇವರು ಸದರನ್ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷಕಾಲ (1967-68) ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಕಗೊಂಡು ವಿಶ್ವವಿದ್ಯಾಲಯದ ಪುರೋಭಿವೃದ್ಧಿಗೆ ಶ್ರಮಿಸಿದ್ದಾರೆ (1972-77). 1975ರಿಂದ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷರಾಗಿದ್ದಾರೆ. ತಮ್ಮ ಜೀವನದ ಬಹುಭಾಗವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟ ಇವರು ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕಾರಣರಾಗಿದ್ದಾರೆ. ಗೌರೀಬಿದನೂರು ಮತ್ತು ಬಾಗೇಪಲ್ಲಿಯಲ್ಲಿ ನ್ಯಾಷನಲ್ ಕಾಲೇಜುಗಳು, ಹೊಸೂರು, ಯಲ್ದೂರು, ಮುಡಿಯನೂರು, ಸುಬ್ರಹ್ಮಣ್ಯಪುರಗಳಲ್ಲ್ನಿ ನ್ಯಾಷನಲ್ ಹೈಸ್ಕೂಲುಗಳ ಸ್ಥಾಪನೆಯಿಂದಾಗಿ ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ದೊರಕುವಂತೆ ಮಾಡಿದ್ದಾರೆ.

ಇವರಿಗೆ ವಿಜ್ಞಾನದಲ್ಲಿ ಅಚಲವಾದ ನಂಬಿಕೆ. ಶೂನ್ಯದಿಂದ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ ಮೌಢ್ಯದ ವಿರುದ್ಧ ಸತತ ಹೋರಾಟ ಅಗತ್ಯ. ಜನರ ಅಜ್ಞಾನವನ್ನು ಬಂಡವಾಳವನ್ನಾಗಿಸಿಕೊಂಡು ಶೋಷಣೆ ಮಾಡುವವರ ವಿರುದ್ಧ ಹೋರಾಟ ಮಾತ್ರವಲ್ಲ ಅಂಥವರ ಪೊಳ್ಳುತನವನ್ನು ಬಯಲಿಗೆಳೆಯಬೇಕು ಹಾಗೂ ಅವರ ಹಿಡಿತದಿಂದ ಮುಗ್ಧ ಜನತೆಯನ್ನು ರಕ್ಷಿಸಬೇಕೆಂದು ಇವರ ನಿಲವು. ಬೆಂಗಳೂರು ಸೈನ್ಸ್ ಫೋರಂ ಎಂಬುದು ವಿಜ್ಞಾನದ ಮಹತ್ವವನ್ನು ಪರಿಚಯಿಸಲೆಂದು ಹುಟ್ಟಿಕೊಂಡ ಇವರ ಮತ್ತೊಂದು ಸಂಸ್ಥೆ. ಎಚ್.ಎನ್. ಇದರ ಸಂಸ್ಥಾಪಕ ಅಧ್ಯಕ್ಷರು (1962ರಿಂದ). ಬುದ್ಧ, ಐನ್‍ಸ್ಟೈನ್, ಸ್ವಾಮಿ ವಿವೇಕಾನಂದ, ಮಹಾತ್ಮಾಗಾಂಧೀ, ನೆಹರು ಇವರ ತತ್ತ್ವಗಳಿಂದ ಪ್ರಭಾವಿತರಾಗಿರುವ ಇವರು ಕೆಲಕಾಲ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು (1995). ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತಕಲೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಬೆಂಗಳೂರಿನ ಲಲಿತಕಲಾಪರಿಷತ್ತನ್ನು ಸ್ಥಾಪಿಸಿದರಲ್ಲದೆ (1962) ಅದರ ಅಧ್ಯಕ್ಷರಾಗಿಯೂ ಮುಂದುವರಿದಿದ್ದಾರೆ.

ತೆರೆದಮನ ಮತ್ತು ಹೋರಾಟದ ಹಾದಿಯಲ್ಲಿ ಇವು ಇವರ ಪ್ರಮುಖ ಬರಹಗಳು. ಇವಲ್ಲದೆ ಅನೇಕ ವಿಚಾರಪೂರಿತ ಹಾಗೂ ಹಾಸ್ಯಭರಿತ ಬಿಡಿಲೇಖನಗಳು ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಪ್ರಕಟಗೊಂಡಿವೆ. `ತೆರೆದಮನ ವಿಚಾರ, ನೆನಪುಗಳ ಹಾಗೂ ಲಲಿತ ಪ್ರಬಂಧಗಳ ಸಂಕಲನವಾಗಿದ್ದು ಕನ್ನಡ ವಿಚಾರ ಸಾಹಿತ್ಯಕ್ಕೆ ಗಮನಾರ್ಹ ಕೊಡುಗೆಯಾಗಿದೆ. ಇದನ್ನು ವಿಚಾರವಾದಿಗಳ ಬೈಬಲ್ ಎಂದೂ ಕರೆಯಲಾಗಿದೆ. `ಹೋರಾಟದ ಹಾದಿಯಲ್ಲಿ ಇವರ ಆತ್ಮಕಥೆ.

ಇವರು ಕರ್ನಾಟಕ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿದ್ದರು (1980-86). ಇವರಿಗೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ. ಪದ್ಮಭೂಷಣ (1984), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1968), ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ನೀಡಿದ ತಾಮ್ರಪತ್ರ (1973), ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (1988), ದೇವರಾಜ್ ಅರಸು ಪ್ರಶಸ್ತಿ (1994), ಅಮೆರಿಕದಲ್ಲಿ ಇರುವ ಪ್ರಕೃತ್ಯತೀತ ಘಟನೆಗಳ ಸಮಿತಿಯ ಫೆಲೋ (ಕಮಿಟಿ ಫಾರ್ ದಿ ಸೈಂಟಿಫಿಕ್ ಇನ್ವೆಸ್ಟಿಗೇಶನ್ ಕ್ಲೈಮ್ಸ್ ಆಫ್ ದಿ ಪಾರಾನಾರ್ಮಲ್) ಇವು ಮುಖ್ಯವಾದವು. 2004ರ ದಸರಾ ಮಹೋತ್ಸವದ ಉದ್ಘಾಟನೆ ಮಾಡುವ ಗೌರವಕ್ಕೆ ಶ್ರೀಯುತರು ಪಾತ್ರರಾಗಿದ್ದಾರೆ.

ಈ ದಿನ ಇವರು ಹುಟ್ಟಿ 100 ವರ್ಷಗಳಾಗುವ ಸಂದರ್ಭದಲ್ಲಿ ಸರ್ಕಾರ ಇವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನಕ್ಕಾಗಿ ಅವರ ಹುಟ್ಟೂರಾದ ಹೊಸೂರಿನ ಬಳಿ ಗಾಂಧಿ-ಎಚ್ ಎನ್ ಸೋಸಿಯಲ್ ,”ಕಲ್ಚರಲ್ ರೀಸರ್ಚ್ “ ಸಂಸ್ಥೆ ಸ್ಥಾಪಿಸಲು 9 ಎಕರೆ ಜಮೀನನ್ನು ನೀಡಬೇಕೆಂದು ಹೊಸೂರಿನ ಜನತೆ ಸರ್ಕಾರಕ್ಕೆ ಆಗ್ರಹಿಸುವುದರ ಜೊತೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ “ಎಚ್ ನರಸಿಂಹಯ್ಯ ವಿಶ್ವವಿದ್ಯಾನಿಲಯ” ಎಂದು ನಾಮಕರಣ ಮಾಡಬೇಕೆಂದು ಅವರ ಅಭಿಮಾನಿಗಳ ಆಗ್ರಹವಾಗಿರುತ್ತದೆ.