ಭೂಮಿಯೂ ಕಂಪನವೂ ನಾಶವೂ...

ಭೂಮಿ ಕೇವಲ ಕಂಪಿಸುವುದಿಲ್ಲ- ಇದು ಕುಣಿಯಲಿದೆ. ಕೇವಲ ಕಂಪಿಸಿದರೆ ಲಕ್ಷಾಂತರ ಜನ ಸಾಯುತ್ತಾರೆ. ಇನ್ನು ಮನಸ್ಸೋಯಿಚ್ಛೆ ಕುಣಿದುಬಿಟ್ಟರೆ ಈ ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವವೇ ಇರುವುದಿಲ್ಲ. ಆತ ಅಹಂಕಾರದಿಂದ ಕಟ್ಟಿದ ಜಗತ್ತು ಕೇವಲ ಧೂಳಾಗಿ ಮಾತ್ರ ಉಳಿಯಲಿದೆ. ಮುಂದಿನ ವರ್ಷಗಳಲ್ಲಿ ಇರುವ ಅತೀ ದೊಡ್ಡ ಭಯವೆಂದರೆ, ಅದು ಭಯಾನಕ ಭೂಕಂಪನದ್ದು!

ಭೂಮಿಯೂ ಕಂಪನವೂ ನಾಶವೂ...

ನಮ್ಮ ಭೂಮಿಗೆ ಭೂಕಂಪದ ಶಾಪ ಶತ-ಶತಮಾನಗಳಿಂದ ಇದೆ. ಭೂಮಿ ಪದೇ ಪದೇ ಕಂಪಿಸುವುದು ಮತ್ತು ಹೀಗೆ ಕಂಪಿಸುವ ಮೂಲಕ ನೂರಾರು, ಸಾವಿರಾರು, ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದೆ. ಮನುಷ್ಯ ಅಹಂಕಾರದಿಂದ ಕಟ್ಟಿದ ಜಗತ್ತನ್ನು ಸರ್ವನಾಶ ಮಾಡಿದೆ. ಈಗ ಮತ್ತೆ ಭೂಮಿ ಕಂಪಿಸುವ ಭಯ ಆರಂಭವಾಗಿದೆ. ಭೂಮಿ ಕೇವಲ ಕಂಪಿಸುವುದಿಲ್ಲ- ಇದು ಕುಣಿಯಲಿದೆ. ಕೇವಲ ಕಂಪಿಸಿದರೆ ಲಕ್ಷಾಂತರ ಜನ ಸಾಯುತ್ತಾರೆ. ಇನ್ನು ಮನಸ್ಸೋಯಿಚ್ಛೆ ಕುಣಿದುಬಿಟ್ಟರೆ ಈ ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವವೇ ಇರುವುದಿಲ್ಲ. ಆತ ಅಹಂಕಾರದಿಂದ ಕಟ್ಟಿದ ಜಗತ್ತು ಕೇವಲ ಧೂಳಾಗಿ ಮಾತ್ರ ಉಳಿಯಲಿದೆ. ಮುಂದಿನ ವರ್ಷಗಳಲ್ಲಿ ಇರುವ ಅತೀ ದೊಡ್ಡ ಭಯವೆಂದರೆ, ಅದು ಭಯಾನಕ ಭೂಕಂಪನದ್ದು!

ಸುಮಾತ್ರಾದ ಟೋಬಾ ಎಂಬ ಸ್ಥಳ ವಿಜ್ಞಾನಿಗಳಿಗೆ ಭಯಾನಕ ಸ್ವಪ್ನಗಳನ್ನು ಮೂಡಿಸುವ ಸ್ಥಳ. 74,000 ವರ್ಷಗಳ ಹಿಂದೆ ಭಯಾನಕ ಭೂಕಂಪನವೊಂದು ಈ ಭೂಮಿಯ ಮೇಲೆ ಸಂಭವಿಸಿತ್ತು. ಆಗಿನ ಜಗತ್ತು ಇದರಿಂದ ತಲ್ಲಣಿಸಿ ಹೋಗಿತ್ತು. ಈ ಮಾಹಿತಿಯನ್ನು ಅರೆಬರೆ ತಿಳಿದುಕೊಂಡಿರುವ ವಿಜ್ಞಾನಿಗಳು ಅದೇ ಸ್ಥಳದಲ್ಲೀಗ ಭೂಮಿಯ ಸರ್ವನಾಶದ ಆರಂಭವನ್ನು ಗಮನಿಸಿದ್ದಾರೆ. 74,000 ವರ್ಷಗಳ ಹಿಂದೆ ಘಟಿಸಿದ್ದ ಭೂಕಂಪನ ಈಗ ಮತ್ತೆ ಮರಕಳಿಸಲಿದೆ. ವಿಜ್ಞಾನಿಗಳು ಈಗಾಗಲೇ ಟೋಬಾ ಎಂಬ ಸ್ಥಳದಲ್ಲಿ ಕುದಿಯುತ್ತಿರುವ ಭೂಮಿಯ ವಾತಾವರಣವನ್ನು ಅಳೆದಿದ್ದಾರೆ. ಇಂಡೋ-ಆಸ್ಟ್ರೇಲಿಯನ್ ಭೂಮಿಯ ಒಳಗಿನ ಪ್ಲೇಟ್‍ಗಳು ತೀವ್ರಗತಿಯಲ್ಲಿ ಜಾರುತ್ತಿವೆ. ಯುರೇಷಿಯನ್ ಭೂಮಿಯ ಪ್ಲೇಟುಗಳು ಇಂಡೋನೇಷಿಯಾದ ಭೂಮಿಯ ಮೇಲೆ ಸವಾರಿ ಮಾಡಲು ಆರಂಭಿಸಿವೆ. ಭೂಮಿ ಮೌನವಾಗಿದ್ದುಕೊಂಡೇ ಕುಸಿಯತೊಡಗಿದೆ. ಈ ಒಳ ಪದರಗಳ ಕುಸಿತ ಇಂಡೋ-ಆಸ್ಟ್ರೇಲಿಯನ್ ಭೂಮಿಯ ಪ್ಲೇಟುಗಳನ್ನು ಕೋಪೋದ್ರಿಕ್ತಗೊಳಿಸಿದೆ. ಈ ಭೂಮಿಯ ಕೋಪ ಭಯಾನಕ ಭೂಕಂಪನವಾಗಿ ಹೊರಹೊಮ್ಮಲಿದೆ. ಇದನ್ನು ಯಾರೋ ಕಾಲಜ್ಞಾನಿ ಹೇಳಿದ ಮಾತಲ್ಲ. ಜಗತ್ತಿನ ವಿಜ್ಞಾನಿಗಳು ಈ ವಿಷಯವನ್ನು ತೀರಾ ಗಂಭೀರವಾಗಿಯೇ ತೆಗೆದುಕೊಂಡಿದ್ದಾರೆ. ಇಲ್ಲಿನ ಭೂಮಿಯ ಪ್ಲೇಟುಗಳು ಪ್ರತೀ ವರ್ಷ 2.75 ಇಂಚುಗಳಷ್ಟು ಒತ್ತಡಕ್ಕೊಳಗಾಗುತ್ತಿವೆ. ಕಳೆದ 73,000 ವರ್ಷಗಳಲ್ಲಿ ಈ ಇಂಡೋ-ಆಸ್ಟ್ರೇಲಿಯನ್ ಪ್ಲೇಟುಗಳು 5 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿ ಜಾರಿರುವುದು ವಿಜ್ಞಾನಿಗಳ ಗಮನಕ್ಕೆ ಬಂದಿದೆ. 

ಈ ರೀತಿಯ ಭೂಮಿಯ ಜಾರುವಿಕೆ ಹಾಗೂ ಭೂಮಿಯ ಒಳಗಿನ ಕಾಣದಂತಿರುವ ಒತ್ತಡ ಮತ್ತೊಂದು ಭಯಾನಕ ಭೂಕಂಪನಕ್ಕೆ ನಾಂದಿಯಾಗಲಿದೆ. ಇಂಡೋ-ಆಸ್ಟ್ರೇಲಿಯನ್ ಪ್ಲೇಟ್ ಯುರೇಷಿಯನ್ ಪ್ಲೇಟ್‍ನೊಳಗೆ ಕಳೆದ 74,000 ವರ್ಷಗಳಲ್ಲಿ 3.1 ಮೈಲಿಯಷ್ಟು ಒಳಹೊಕ್ಕಿದೆ. ಇದು ಭೂಮಿಯನ್ನೇ ಅಲುಗಾಡಿಸುವಂತಹ ಭೂಕಂಪನಕ್ಕೆ ಸಾಕ್ಷಿಯಾಗಬಹುದು. ಭೂಮಿಯೊಳಗೆ ಲಾವಾರಸ ಗರ್ಭಕಟ್ಟಿ ನಿಂತಿದೆ. ಇದು ಯಾವಾಗ ಸಿಡಿಯಲಿದೆಯೋ? ಇದು ಸಿಡಿದಾಗ ಮಾತ್ರ ಮನುಷ್ಯ ಭೂಮಿಯಿಂದಲೇ ಕರಗಿ ಹೋಗುತ್ತಾನೆ. ಈಗಾಗಲೇ ಸುಮಾತ್ರಾದ ಟೋಬಾ ಭೂಮಿಯ ಮೇಲೆ 3000 ಕ್ಯೂಬಿಕ್ ಕಿ.ಮೀ.ನಲ್ಲಿ ಅಪಾಯದ ಗಂಟೆಯನ್ನು ಮನುಷ್ಯಕಟ್ಟಿಬಿಟ್ಟಿದ್ದಾನೆ. ಒಂದು ಕಡೆ ಭಯಾನಕ ಭೂಕಂಪನವನ್ನು ವಿಜ್ಞಾನಿಗಳು ಆತಂಕದಿಂದಲೇ ಎದುರು ನೋಡುತ್ತಿದ್ದರೆ, ಇನ್ನೊಂದು ಕಡೆ ಸೌರವ್ಯೂಹದಲ್ಲಿನ ಬದಲಾವಣೆಯಿಂದ ಬದಲಾಗಲಿರುವ ವಾತಾವರಣ ಭಯ ಹುಟ್ಟಿಸಿದೆ. ಆಕಾಶದಿಂದಲೂ, ಭೂಮಿಯಿಂದಲೂ ಅಪಾಯ ಕಾದಿದೆ ಎಂಬುದು ಸತ್ಯವಾದರೆ... 

ಡೈನೋಸಾರಸ್‍ನಂತಹ ದೊಡ್ಡ ದೊಡ್ಡ ಪ್ರಾಣಿಗಳೇ ಭೂಮಿಯ ಕಂಪನದಿಂದ ಸಂಪೂರ್ಣ ನಾಶಹೊಂದಿದವು. ಆದರೆ, ಮನುಷ್ಯ ಡೈನೋಸಾರಸ್‍ನಂತಹ ಅತೀ ದೊಡ್ಡ ಪ್ರಾಣಿಯೇನಲ್ಲ. ಅಷ್ಟು ಶಕ್ತಿಯೂ ಮನುಷ್ಯನಲ್ಲಿಲ್ಲ. ಮನುಷ್ಯನಿಗಿಂತ ಸಾವಿರ ಪಟ್ಟು ಸಾಮಥ್ರ್ಯವಿದ್ದ ಡೈನೋಸಾರಸ್‍ಗಳೇ ಪುರಾಣದ ಕಥೆಯಂತೆ ನಾಶಹೊಂದಿದವು. ಇನ್ನೂ ಭೂಮಿ ಕಂಪಿಸಿದ ಮೇಲೆ ಮನುಷ್ಯನ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಬಹುದೇ? ಇತಿಹಾಸದಲ್ಲಿ ಭಯಾನಕವಾದ ಭೂಕಂಪನಗಳು ಸಂಭವಿಸಿವೆ. 1556ರ ಫೆಬ್ರವರಿ 14ರ ಬೆಳಗಿನ ಜಾವ ಚೈನಾದ ಮಧ್ಯಭಾಗದಲ್ಲಿ ಭೂಮಿ ಕೋಪಿಸಿಕೊಂಡಿತು. ಇದರಿಂದ ಕನಿಷ್ಠ 500 ಮೈಲಿಯಷ್ಟು ಮಾನವ ವಾಸದ ಪ್ರದೇಶ ತೊಂದರೆಗೊಳಗಾಯಿತು. ಈ ಭೂಕಂಪನದಿಂದ 8,30,000 ಜನ ನಿರ್ನಾಮವಾದರು. ಎಷ್ಟೋ ಜಾತಿಗಳು ಇಲ್ಲಿ ಮಣ್ಣುಪಾಲಾದವು. 1755ರ ನವೆಂಬರ್ 1ರಂದು ಪೋರ್ಚುಗಲ್‍ನ ಲಿಸ್ಬನ್‍ನಲ್ಲಿ ಮತ್ತೊಂದು ಭಯಾನಕ ಭೂಕಂಪ ಸಂಭವಿಸಿತು. ಈ ಭೂಕಂಪನದಿಂದ ಸಮುದ್ರದಲ್ಲಿ ಸುನಾಮಿಯ ಅಲೆ ಎದ್ದಿತು. ಲಿಸ್ಬನ್‍ನ ತುಂಬಾ ಬೆಂಕಿ ತನ್ನ ಕೆನ್ನಾಲಗೆ ಚಾಚಿತು. 3 ರಿಂದ 6 ನಿಮಿಷಗಳ ಕಾಲ ಭೂಮಿ ಕಂಪಿಸಿದ್ದಕ್ಕೆ ಲಿಸ್ಬನ್ ನಗರವೇ ಇಲ್ಲದಂತಾಯಿತು. 5 ದಿನಗಳ ಕಾಲ ಇಲ್ಲಿ ಬೆಂಕಿ ಹತ್ತಿ ಉರಿಯಿತು. ಕನಿಷ್ಠ 90,000 ಜನ ಪ್ರಾಣ ಕಳೆದುಕೊಂಡರು. 1906ರಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್‍ಫ್ರಾನ್ಸಿಸ್ಕೋ ನಗರದಲ್ಲಿ ಏಪ್ರಿಲ್ 18ರ ಬೆಳಗಿನ ಜಾವ ಪುಟ್ಟದೊಂದು ಭೂಕಂಪನವಾಯಿತು. ಈ ಭೂಕಂಪನದ ಅವಧಿ 1 ನಿಮಿಷ ಮಾತ್ರ. ಸ್ಯಾನ್‍ಫ್ರಾನ್ಸಿಸ್ಕೋ ಈ ಕಂಪನದಿಂದ ಸರ್ವನಾಶದ ಸ್ಥಿತಿಗೆ ಬಂದು ನಿಂತಿತು. ಭೂಕಂಪನದ ಕ್ಷಣಮಾತ್ರದಲ್ಲಿಯೇ ಬೆಂಕಿಯ ಭೂತ ತನ್ನ ಬಾಹುಗಳನ್ನು ಚಾಚಿತು. ಸ್ಯಾನ್‍ಫ್ರಾನ್ಸಿಸ್ಕೋ ನಗರದಿಂದ 4 ಕಿ.ಮೀ.ವ್ಯಾಪ್ತಿಯವರೆಗೆ ಸರ್ವನಾಶವೇ ಕಾಣುತ್ತಿತ್ತು. ಕನಿಷ್ಠ 500 ಜನ ಇದರಿಂದಾಗಿ ಸತ್ತರು. 

1960ರ ಮೇ 22ರಂದು ಚಿಲಿ ದೇಶದಲ್ಲಿ ಜಗತ್ತಿನ ಅತೀ ದೊಡ್ಡ ಭೂಕಂಪನವಾಯಿತು. ಇದನ್ನು ದಿ ಗ್ರೇಟ್ ಚಿಲಿಯನ್ ಅರ್ಥ್‍ಕ್ವೇಕ್ ಎಂದೇ ಕರೆಯಲಾಗುತ್ತದೆ. ಇಡೀ ಚಿಲಿ ದೇಶವೇ ಸರ್ವನಾಶವಾಯಿತು. ಇದು ಕರಾವಳಿಯ ತೀರದಲ್ಲೇ ಆಗಿದ್ದರಿಂದ ಅಲ್ಲಿನ ಸಮುದ್ರಕ್ಕೂ ಭೂಕಂಪನದ ಬಿಸಿ ತಟ್ಟಿತ್ತು. ಜಪಾನ್‍ನ ಐಲ್ಯಾಂಡ್‍ಗಳವರೆಗೆ ಭೂಕಂಪನದ ಬಿಸಿ ಬಿಸಿ ಭಯಾನಕ ಅಲೆಗಳು ಸರ್ವನಾಶದ ಮುನ್ನುಡಿ ಹೊತ್ತು ಸಾಗಿದವು. ಈ ಭೂಕಂಪದಿಂದ 2000 ಜನ ಮಣ್ಣುಪಾಲಾದರು. 1964ರಲ್ಲಿ ಅಲಾಸ್ಕದ ಪ್ರಿನ್ಸ್ ವಿಲಿಯಂ ಸೌಂಡ್‍ನಲ್ಲಿ ಮಾರ್ಚ್ 27ರ ಶುಭ ಶುಕ್ರವಾರದಂದು 4 ನಿಮಿಷಗಳ ಭೂಕಂಪನ ಇದ್ದಕ್ಕಿದ್ದ ಹಾಗೆಯೇ ಆರಂಭವಾಯಿತು. ಪಟ್ಟಣಗಳು, ನಗರಗಳು ಈ ಭೂಕಂಪನದಿಂದ ತತ್ತರಿಸಿಹೋದವು. ಈ ಭೂಕಂಪನವೂ ಸಹ ಸುನಾಮಿಯಂತಹ ಅಲೆಗಳನ್ನು ಸೃಷಿಸಿತ್ತು. ವಾಲ್ಡೆಸ್ ಎಂಬ ಇಡೀ ಪಟ್ಟಣವೊಂದು ಸರ್ವನಾಶವೇ ಆಗಿಹೋಯಿತು. ಈ ಸುನಾಮಿಯಂತಹ ಅಲೆಗಳು ಮುಂದುವರೆದು, ದಿ ಗ್ರೇಟ್ ಅಲಾಸ್ಕನ್ ಕಂಪನ ಸೃಷ್ಟಿಯಾಯಿತು. ಈ ಸಮುದ್ರ ಕಂಪನದಿಂದ ಬ್ರಿಟೀಷ್ ಕೊಲಂಬಿಯಾದ ಸಮುದ್ರ ತೀರ, ಯುನೈಟೆಡ್ ಸ್ಟೇಟ್ಸ್ ನ ಫೆಸಿಫಿಕ್ ಸಮುದ್ರ, ಲಾಸ್ ಎಂಜಲೀಸ್‍ನ ದಕ್ಷಿಣ ಪ್ರದೇಶ, ಹವಾಯ್ ದ್ವೀಪದ ಪಶ್ಚಿಮ ಭಾಗ ಸಾಕಷ್ಟು ತೊಂದರೆಗೊಳಗಾಯಿತು. 

ಹೀಗೆ, ಜಗತ್ತಿನ ಭೂಕಂಪನಗಳ ಲೆಕ್ಕಾಚಾರಗಳು ಇತಿಹಾಸದ ತುಂಬಾ ಸಾಕಷ್ಟಿವೆ. 2004ರ ಡಿಸೆಂಬರ್ 26ರಂದು ಭಾರತದ ಸಮುದ್ರದಲ್ಲಿ ಮೂಡಿದ ಸುನಾಮಿ ಸಹ ಒಂದು ಭೂಕಂಪನದ ಕೂಸು. ಸಮುದ್ರದಲ್ಲಿ ಕಂಪಿಸಿದ ಭೂಮಿ ಸುನಾಮಿಯಾಗಿ ಮಾಡಿದ ಸರ್ವನಾಶವನ್ನು ನಾವೆಲ್ಲಾ ಕಣ್ಣಾರೇ ಕಂಡಿದ್ದೇವೆ. ಇದು ಸಮುದ್ರದೊಳಗಿನ 2ನೇ ಅತೀ ದೊಡ್ಡ ಭೂಕಂಪನವೆಂದೇ ಕುಖ್ಯಾತವಾಗಿದೆ. ಭಾರತದ ಸಮುದ್ರದಲ್ಲಿ ಉದ್ಭವವಾದ ಈ ಭೂಕಂಪನಾಧಾರಿತ ಸುನಾಮಿ ಕೇವಲ ಭಾರತದ ಕರಾವಳಿ ತೀರಗಳನ್ನು ಮಾತ್ರ ಸ್ಮಶಾನದಂತೆ ಪರಿವರ್ತಿಸಲಿಲ್ಲ; ಇಂಡೋನೇಷಿಯಾ, ಥಾಯ್ಲಾಂಡ್, ಶ್ರೀಲಂಕಾದ ಸಮುದ್ರದ ತೀರಗಳಲ್ಲಿಯೂ ಕನಿಷ್ಠ 70ರಿಂದ 100 ಅಡಿ ಎತ್ತರದ ಮಹಾ ಅಲೆಗಳನ್ನು ಸೃಷ್ಟಿಸಿ, ಸರ್ವನಾಶದ ಸುದ್ದಿಯನ್ನು ಬರೆಯಿತು. ಸಾವಿರಾರು ಪ್ರದೇಶಗಳಲ್ಲಿ ಸತ್ತವರನ್ನು ಹೂಳಲಾಯಿತು. ಈ ಸುನಾಮಿಯಿಂದಾಗಿ 1.75 ಲಕ್ಷದಿಂದ 2.50 ಲಕ್ಷದವರೆಗೆ ಜನರ ಜೀವ ಘನೀಕೃತವಾಯಿತು. ಇದು 21ನೇ ಶತಮಾನದ ಭಯಾನಕ ಭೂಕಂಪನಗಳಲ್ಲಿ ಒಂದು. 1 ನಿಮಿಷ ಸಮುದ್ರದಲ್ಲಿ ಭೂಮಿ ಕಂಪಿಸಿದ್ದಕ್ಕೆ ಇಷ್ಟೊಂದು ಅನಾಹುತವಾಯಿತು. ಇನ್ನೂ ಭಯಾನಕ ಭೂಕಂಪನವೇ ಆಗಿಬಿಟ್ಟರೆ...!