ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ದ್ಯುತಿ ಚಂದ್: ಐತಿಹಾಸಿಕ ಸಾಧನೆ

ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ದ್ಯುತಿ ಚಂದ್: ಐತಿಹಾಸಿಕ ಸಾಧನೆ

ಇಟಲಿ: ನಪೋಲಿಯಲ್ಲಿ ನಡೆಯುತ್ತಿರುವ 30ನೇ ಬೇಸಿಗೆ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾರತದ ಓಟಗಾರ್ತಿ ದ್ಯುತಿ ಚಂದ್ 100 ಮೀಟರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ದ್ಯುತಿ ಚಂದ್ ಪಾತ್ರವಾಗಿದ್ದಾರೆ.

ಮಂಗಳವಾರ ನಡೆದ ಫೈನಲ್‌ನಲ್ಲಿ ಅವರು 11.31 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಸ್ವಿಡ್ಜರ್‌ಲೆಂಡ್‌ನ ಅಜ್ಲಾ ಡೆಲ್ ಪೋಂಟ್ 11.33 ಸೆಕೆಂಡ್‌ಗಳಲ್ಲಿ ಗುರಿ ಸಾಧಿಸಿ ಬೆಳ್ಳಿ ಗೆದ್ದರು. ಸೆಮಿಫೈನಲ್‌ನಲ್ಲಿ ದ್ಯುತಿ 11.41 ಸೆಕೆಂಡ್‌ಗಳೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಹೀಟ್ಸ್‌ನಲ್ಲಿ 11.58 ಸೆಕೆಂಡ್‌ಗಳಲ್ಲಿ ಅವರು ಗುರಿ ತಲುಪಿದ್ದರು.

ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಭಾರತೀಯ ಓಟಗಾರ್ತಿಯೊಬ್ಬರು ಚಿನ್ನದ ಪದಕ ಗೆಲ್ಲುತ್ತಿರುವುದರ ಮೂಲಕ ಇತಿಹಾಸ ಬರೆದಿದ್ದಾರೆ. ಈ ಮೊದಲು ಜಾಗತಿಕ ಮಟ್ಟದ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾರತೀಯರು 100 ಮೀಟರ್ ಓಟದ ಫೈನಲ್‌ಗೆ ಅರ್ಹತೆ ಪಡೆದ ನಿದರ್ಶನ ಇಲ್ಲ.